Wednesday, January 14, 2009

ಸಂವಾದ

ಯಾವುದೋ ತಿರುಗಾಟದ ದೆಸೆಯಿಂದ ನಾನು, ನನ್ನ ಗೆಳೆಯರು ಶಿರಸಿಗೆ ಹೋಗಿದ್ದೆವು. ನಮ್ಮ ತಿರುಗಾಟ ಮುಗಿಸಿಕೊಂಡು ವಿ.ಅರ್.ಎಲ್.ನಲ್ಲಿ ಟಿಕೇಟು ಕಾದಿರಿಸಿ ಬಸ್ಸಿಗೆ ಕಾಯುತ್ತಾ ಕುಳಿತಿದ್ದೆವು. ಮಾಡುವುದಕ್ಕೇನೂ ಕೆಲಸವಿಲ್ಲದ್ದರಿಂದ ಎಂಟೂ ಮೂವತ್ತಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದೆವು. ಬಸ್ಸೋ ಎಂಟೂ ಮುಕ್ಕಾಲಿಗೆ ಬರಬೇಕಾಗಿದ್ದು ಒಂಭತ್ತೂ ಕಾಲಾದರೂ ಬಂದಿರಲಿಲ್ಲ. ಗಡಿಬಿಡಿಯ ಜನ, ವಾಹನದ ಗದ್ದಲದ ನಡುವೆ ಬೆಂಗಳೂರಿನಲ್ಲಿ ಈ ರೀತಿ ಹೊತ್ತು ಗೊತ್ತಿಲ್ಲದೆ ಕಾಯುತ್ತಾ ಕೂತಿರುವುದು ಅಸಹನೀಯ. ಆದರೆ ಶಿರಸಿಯಲ್ಲಿ ಗದ್ದಲ ಕಡಿಮೆ, ಹೊರಗಡೆ ಹದವಾಗಿ ಮಳೆ ಬೀಳುತ್ತಿತ್ತು, ಅದೂ ಅಲ್ಲದೇ ಸಾವಧಾನವಾಗಿ, ಜಗತ್ತಿನ ಚಿಂತೆ ಮರೆತಂತೆ ಹರಟುತ್ತಿರುವ ಜನರು. ಒಮ್ಮೆ ಒಂದು ಗುಂಪಿನ ಕಡೆ ಮತ್ತೊಮ್ಮೆ ಮಗದೊಂದು ಗುಂಪಿನ ಕಡೆ , ನಮ್ಮ ಗಮನ ಬದಲಿಸುತ್ತಾ, ಅವರ ಮಾತನ್ನು ಆಲಿಸುತ್ತಾ ಸಮಯ ಹೋಗಿದ್ದೇ ಗೊತ್ತಾಗಿರಲಿಲ್ಲ.

ಭಾರ ಹೊರಲಾರೆ ಎಂಬಂತೆ, ಸೈಲೆಂಸರಿನ ತುದಿ ತುಂಡರಿಸಿಕೊಂಡು, ಕರ್ಕಶವಾಗಿ ದನಿ ಮಾಡಿಕೊಂಡು ಬಂದ ಆಟೋ ಒಂದು ಬೆಳ್ಳಗಿನ,ಧಡೂತಿ ದೇಹದ ಸುಮಾರು ನಡುವಯಸ್ಸಿನ ಮಹಿಳೆಯೊಬ್ಬರನ್ನು ಹೊತ್ತು ತಂದಿತು. ತಮ್ಮ ಭಾರವಾದ ಚೀಲವನ್ನು ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಬಗಲಲ್ಲಿ ಕಂದು ಬಣ್ಣದ ಚರ್ಮದ ಜಂಭದ ಚೀಲ ನೇತು ಹಾಕಿಕೊಂಡು , ಮಳೆಯನ್ನು ಶಪಿಸುತ್ತಾ, ಹೊರಲಾರದ ಹೊರೆ ಹೊತ್ತು ಏದುಸಿರು ಬಿಡುತ್ತಾ, ಉರಿ ಮುಖ ಮಾಡಿಕೊಂಡು ನಮ್ಮ ಎದುರಿನ ಒಂದು ಕುರ್ಚಿಯಲ್ಲಿ ಮಂಡಿಸಿದರು. ಆಕೆಯ ಕಣ್ಣುಗಳು, ಮಾತಿಗೆ ಯಾರಾದರೂ ಸಿಗಬಹುದೆಂಬ ಚಪಲದಿಂದ ಸುತ್ತ ಮುತ್ತ ಹುಡುಕತೊಡಗಿತ್ತು. ನಮ್ಮ ಕಡೆ ನೋಡಿ, ನಮ್ಮ ಗಮನ ಅವರೆಡೆ ಇದೆ ಎಂದು ಖಚಿತ ಪಡಿಸಿಕೊಂಡರಾದರೂ, ನೀಟಾಗಿ ತುರುಬು ಕಟ್ಟಿಕೊಂಡು, ಇಣುಕುತ್ತಿರುವ ಬೆಳ್ಕೂದಲಿಗೆ ಮದರಂಗಿ ಹಚ್ಚಿ ರಂಗಾಗಿಸಿ, ಮುಖಾರವಿಂದಕ್ಕೆ ಪೌಡರ್ ಹಚ್ಚಿ, ತುಟಿಗೆ ದಪ್ಪಗಿನ ಕೆಂಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡು, ಉದ್ಯಾನವನದಲ್ಲಿ ಅಡ್ಡಾ ದಿಡ್ಡಿಯಾಗಿ ಬೆಳೆದ ಗಿಡವನ್ನು ಕತ್ತರಿಸಿ ಕೃತಕ ಶೇಪು ಬರಲು ಮಾಡಿದ ಕಟಾವಿನಂತೆ ಐ ಬ್ರೋ ಶೇಪ್ ಮಾಡಿಸಿಕೊಂಡು, ಐ ಲೈನರ್ ಬಳಸಿ ಕಣ್ಣಳತೆ ಹಿಗ್ಗಿಸಿಕೊಂಡು, ಕಿವಿ ಜಗ್ಗುವಂತಹ ಕರ್ಣಾಭರಣ ಹಾಕಿಕೊಂಡು, ತಿಳಿ ಗುಲಾಬಿ ಬಣ್ಣದ ಸೀರೆ ಮತ್ತದೇ ಬಣ್ಣದ ತೋಳ್ರಹಿತ ಕುಪ್ಪಸ ತೊಟ್ಟು, ಹೈ ಹೀಲ್ಡ್ ಮೆಟ್ಟು ಮೆಟ್ಟಿಕೊಂಡಾಕೆಗೆ ಮಳೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡು ಮೇಡು ಅಲೆದು, ಬಟ್ಟೆಗೆ ಕೆಸರು ಮೆತ್ತಿಸಿಕೊಂಡು, ಇಂಬಳ ಕಡಿದ ಜಾಗದಲ್ಲಿ ಕೆರೆದುಕೊಳ್ಳುತ್ತಾ ಕುಳಿತ ನಮ್ಮ ಜೊತೆ ಮಾತನಾಡುವುದು ಗೌರವಕ್ಕೆ ಕಡಿಮೆಯಾಗಿ ಕಂಡಿರಬೇಕು.

ಸ್ವಲ್ಪ ಹೊತ್ತಿನಲ್ಲಿಯೇ ಬಂದ ಇನ್ನೊಂದು ಆಟೋ ದಂಪತಿಗಳಿಬ್ಬರನ್ನು ಹೊತ್ತು ತಂದಿತು. ಜೊತೆಗಿದ್ದ ಯುವಕ "ಅವ್ನು ನಾಳೆ ಬಸ್ ಸ್ಟ್ಯಾಂಡಿಗೆ ಬಂದು ಕರೆದುಕೊಂಡು ಹೋಗ್ತಾನೆ ಅಂದಿದ್ದ, ಯಾವ್ದಕ್ಕೂ ಬೆಂಗಳೂರು ಹತ್ರ ಬಂದಂಗೆ ಒಂದು ಕಾಲ್ ಮಾಡಿ ಅವ್ನಿಗೆ" ಅಂತ ಹೇಳಿ ಎರಡು ಮೂಟೆ, ಮತ್ತೊಂದು ಕೈಚೀಲ ಇಳಿಸಿಕೊಟ್ಟು ಯಾರನ್ನೋ ಮಾತನಾಡಿಸುವ ನೆಪದಿಂದ ಹೊರನೆಡೆದ. ದಂಪತಿಗಳು ಮಹಿಳಾ ಮಣಿಯ ಪಕ್ಕದಲ್ಲಿಯ ಆಸನದಲ್ಲಿ ಕುಂತರು. ಮಹಿಳಾ ಮಣಿಯ ಮುಖದಲ್ಲೀಗ ಒಂದು ರೀತಿಯ ಸಂತೋಷ. ಅವರ ಕಡೆಗೆ ತಿರುಗಿ ಮಾತಿಗೆ ಆರಂಭಿಸಿದರು.

ಮಮ: ಮೊದಲನೇ ಸಲ ಬೆಂಗಳೂರಿಗೆ ಹೋಗ್ತಾ ಇದೀರಾ?
ದಂಪ: ಇಲ್ಲಾ, ನಾನು ಒಂದು ನಾಲ್ಕು ವರ್ಷದ ಹಿಂದೆ ನಮ್ಮಣ್ಣನ ಮಗನ ಮದುವೆಗೆ ಬಂದಿದ್ದೆ. ಮನೇ ನೋಡ್ಕೊಳ್ಳೋಕೆ ಕಷ್ಟ ಅಂತ ಇವ್ಳಿಗೆ ಬರ್ಲಿಕ್ಕಾಗ್ಲಿಲ್ಲ. ಇವ್ಳು ಮೊದಲನೇ ಸಲ ಬರ್ತಾ ಇರೋದು.
ಮಮ: ಬೆಂಗಳೂರಲ್ಲಿ ಎಲ್ಲಿ?
ದಂಪ: ಇಂದಿರಾ ನಗರ
ಮಮ: ಮೆಜೆಸ್ಟಿಕ್ನಲ್ಲಿ ಇಳ್ದು ಒಂದು ಆಟೋ ಹತ್ಕೊಂಡ್ ಹೋದ್ರೆ ಆಯ್ತು
ದಂಪ: ಇಲ್ಲ ನಮ್ಮ ಮಗ ಬರ್ತೀನಿ ಅಂದಿದ್ದ, ಅವ್ನು ಕರ್ಕೊಂಡು ಹೋಗ್ತಾನೆ
ಮಮ: ಹೌದು, ಬೆಂಗಳೂರು ನಾಲ್ಕು ವರ್ಷದ ಹಿಂದೆ ಇದ್ದಂಗೆ ಈಗ ಇಲ್ಲ. ಎಷ್ಟು ಜನ, ವಾಹನ, ದೊಡ್ಡ ದೊಡ್ಡ ಕಟ್ಟಡ, ಅಲ್ಲಿ ತಿರುಗಾಡಬೇಕಿದ್ರೆ ಎಷ್ಟು ಚುರುಕುತನ ಇದ್ರೂ ಸಾಲ್ದು. ನಾನು ಮಾತ್ರ ಬೆಂಗಳೂರಿನಲ್ಲಿ ಎಲ್ಲಿಗೆ ಬೇಕಾದ್ರೂ ಒಬ್ಳೇ ಓಡಾಡ್ತೀನಿ.
ದಂಪ: ಸುಮ್ನೆ ಮಾತನ್ನ ಆಲಿಸ್ತ, ತಲೆ ಅಲ್ಲಾಡಿಸ್ತಾ
ಮಮ: ನನಗೂ ಬೆಂಗಳೂರಲ್ಲಿ ಸ್ನೇಹಿತರು ಜಾಸ್ತಿ, ಏನಾದ್ರೂ ಒಂದು ಫಂಕ್ಶನ್ ಇರುತ್ತೆ, ನಮ್ಮವ್ರಿಗೆ ಬಿಡುವಾಗೋದೇ ಇಲ್ಲ, ಅದಕ್ಕೆ ನಾನು ಒಬ್ಳೇ ತಿರುಗೋದೇ ಜಾಸ್ತಿ. ಆಟೋದವ್ರೂ ಅಷ್ಟೆ ನಿಮ್ಮಂತವರೆಲ್ಲಾ ಹತ್ತಿದ್ರೆ ಬಾಯಿಗೆ ಬಂದ ರೇಟು ಹೇಳ್ತಾರೆ.
ದಂಪ: ಅದ್ಸರಿ ನಿಮ್ಮ ಊರು ಶಿರಸೀನೇನಾ?
ಮಮ: ಇಲ್ಲ, ನಮ್ಮವರ ಊರಿದು, ನಂದು ಯಲ್ಲಾಪುರ. ರಜಾ ಇತ್ತಲ್ಲ, ನಮ್ಮವ್ರ ತಮ್ಮ ಇಲ್ಲಿದಾರೆ ನೋಡ್ಕೊಂಡು ಹೋಗಾಣಾ ಅಂತ ಬಂದೆ. ಅದೂ ಅಲ್ಲದೇ ನಮ್ಮ ಆಸ್ತಿ ಇನ್ನೂ ಪಾಲಾಗಿಲ್ಲ, ಸ್ವಲ್ಪ ಏಲಕ್ಕಿ, ಕಾಳು ಮೆಣಸು ಬೇಕಾಗಿತ್ತು. ನನಗೆ ಈ ತೋಟ, ಹಳ್ಳಿ ಅಂದ್ರೆ ಅಲರ್ಜಿ, ಅದಕ್ಕೆ ಆಸ್ತಿ ಪಾಲದ ಮೇಲೆ ಎಲ್ಲಾ ಮಾರಿ ಬೆಂಗಳೂರಿನಲ್ಲಿ ಇರೋಣಾ ಅಂತ.
ಮಮ: ಈಗ ಹೋಗ್ತಾ ಇರೋದು ಯಾರ ಮನೆಗೆ? ಏನಾದ್ರೂ ವಿಶೇಷ?
ದಂಪ: ನಮ್ಮ ಮಗ ಜರ್ಮನಿಗೆ ಹೋಗ್ತಾ ಇದಾನೆ, ಅದಕ್ಕೆ ಹೋಗೋಕೆ ಮೊದ್ಲು ಅವನನ್ನ ನೋಡಿ ಬರೋಣಾ ಅಂತಾ.
ಮಮ: ಮೊದಲ್ನೇ ಸಲ ಹೋಗ್ತಾ ಇರೋದಾ?
ದಂಪ: ಹೂಂ
ಮಮ: ನನ್ನ ಮಗಾ ಇರೋದೇ ಅಮೇರಿಕಾದಲ್ಲಿ, ಅವ್ನು ಇಲ್ಲಿಗೆ ಬರ್ದೆ ೪-೫ ವರ್ಷ ಆಯ್ತು.
ದಂಪ: ಹೌದಾ, ಒಬ್ರೇ ಮಗನಾ ನಿಮ್ಗೆ?
ಮಮ: ಇಲ್ಲಾ, ಮಗ್ಳೊಬ್ಳಿದಾಳೆ, ಇಂಜಿನಿಯರ್ರು. ಅವ್ಳೂ ವರ್ಷದಲ್ಲಿ ೮ ತಿಂಗ್ಳು ಅಮೇರಿಕಾದಲ್ಲೇ ಇರೋದು.
ದಂಪ: ಪಾಪ, ಹೆಣ್ಹುಡುಗಿಗೆ ಕಷ್ಟಾ ಅಲ್ವ, ಹೀಗೆಲ್ಲಾ ದೂರ ಇರೋದು.
ಮಮ: ಹಾಗೇನಿಲ್ಲ, ಅವ್ಳಿಗೆ ಅಮೇರಿಕಾನೆ ಸರಿಹೋಗುತ್ತ್ತೆ, ನಮ್ಮ ಇಂಡಿಯಾದ ವೆದರ್ರು ಅವ್ಳಿಗೆ ಹಿಡಿಸೋದೇ ಇಲ್ಲ.
ದಂಪ: ಊಟಕ್ಕೆಲ್ಲಾ ಏನು ಮಾಡ್ತಾಳೆ, ಅಡ್ಗೆ ಅವ್ಳೇ ಮಾಡ್ಕೊತಾಳ?
ಮಮ: (ಹೆಮ್ಮೆಯಿಂದ)ಅಡ್ಗೆನಾ? ಅವ್ಳಿಗೆ ಅನ್ನಾ ಕೂಡ ಮಾಡೋಕೆ ಬರೋಲ್ಲ, ಏನಿದ್ರೂ ಹೊರ್ಗಡೆ ರೆಸ್ಟೋರೆಂಟಲ್ಲಿ ತಿನ್ಕೋತಾಳೆ.
ದಂಪ: (ತಾವು ತಂದ ಅಕ್ಕಿ, ಇತರ ಸಾಮಾನಿನ ಕಡೆ ನೋಡುತ್ತಾ) ನಮ್ಮ ಮಗ ಅಡ್ಗೆ ಅವ್ನೇ ಮಾಡ್ಕೋತಾನೆ
ಮಮ: ನನ್ನ ಮಗಳಿಗೆ ಅನ್ನ ಹುಳಿ ಎಲ್ಲ ಹಿಡಿಸೋದೇ ಇಲ್ಲ, ಅವ್ಳು ಏನಿದ್ರೂ ಪಿಜ್ಜಾ, ಬರ್ಗರ್ ತಿಂದ್ಕೊಂಡೇ ಇರೋದು.

ಹೀಗೆ ಆ ಮಹಿಳಾಮಣಿಯ ವಾಕ್ಸರಣಿ ಮುಂದುವರಿಯುತ್ತಿರಬೇಕಾದರೆ, ಹೊರಗೆ ಹೋಗಿದ್ದ ಯುವಕ ಮತ್ತೆ ಬಂದು ಇವರ ಮಾತಿನ ಸರಣಿ ಸಧ್ಯಕ್ಕೆ ಕೊನೆಗೊಂಡಿತು. ಪುಕ್ಸಟೆಯಾಗಿ ಸಿಗುತ್ತಿದ್ದ ಮನೋರಂಜನೆ ಹಾಳಾಯ್ತಲ್ಲ ಅಂತ ನಮಗೂ ಇದರಿಂದ ರಸಭಂಗವಾಯ್ತು. ಮುಂದೆ ನಮ್ಮ ಮಾತಿನ ಸರಣಿ ಹೀಗೆ ತೊಡಗಿತ್ತು.

ನಾನು: ಮಗಾ, ನಾಳೆಯಿಂದ ಮತ್ತದೇ ಬೆಂಗ್ಳೂರು, ಆಫೀಸು, ಈ ಊರು ಬಿಟ್ಟ್ ಹೋಪುಕೆ ಬೋರಾತ್
ಸ್ನೇ೧: ಹೌದ್, ೪ ದಿನಾ ಲಾಯ್ಕಾಯ್ತ್, ನಾಳೆಯಿಂದ ಮತ್ತೆ ಕಂಡಾಪಟಿ ಜನ, ಹೊಗಿ, ಕೆಲವ್ರಿಗೆಲ್ಲ ಬೆಂಗ್ಳೂರು ಅದೆಂತಾ ಹಿತ್ವೋ!
(ಮಮ ಮತ್ತು ದಂಪ ರ ಗಮನ ಈಗ ನಮ್ಮ ಕಡೆ, ನಾವು ಮಾತ್ರ ಅವರನ್ನು ನೋಡಿಲ್ಲವೆಂಬಂತೆ, ನಮ್ಮ ಮಾತು ಮುಂದುವರಿಸಿದೆವು)
ಸ್ನೇ೩: ಈ ಉತ್ತರ ಕನ್ನಡದಲ್ಲಿ ತೋಟದ ಮನಿ ಹೆಣ್ಣನ್ನ ಮದಿ ಆಯ್ಕ್ ಕಾಣ್, ಬೆಂಗ್ಳೂರಲ್ ರಜಿ ಸಿಕ್ಕಿರ್ ಕೂಡ್ಲೆ ನಾಲ್ಕ್ ದಿನ ಬಂದಾಯ್ಕಂಡ್ರೆ ಹಿತಾ ಆತ್.
ಸ್ನೇ೧: ಚಿಕ್ಕಮಗಳೂರು, ಶಿವಮೊಗ್ಗದ್ ಹುಡ್ಗಿಯಾದ್ರೂ ಅಡ್ಡಿಲ್ಲ, ನಂಬದಿ ಹೆಣ್ಣಾರೂ ಅಡ್ಡಿಲ್ಲ ಆದ್ರೆ ಊರಿಂದ್ ದೂರ ಇರ್ಕ್.
ಸ್ನೇ೨: ಹಾಂಗೇನಿಲ್ದಾ ಒಂದೇ ಕಡಿ ಕೂಕಂಡಿದ್ರೆ ಬೋರಾತ್, ಅದ್ಕೆ ತಿರ್ಗ್ತಾ ಇರ್ಕ್.
ನಾನು: ಚಾನ್ಸ್ ಮಾರೆ, ನೀ ನಾಡಿದ್ದ್, ಫಿನ್ಲ್ಯಾಂಡಿಗೆ ಹೊರ್ಟ್ಯಲ್ದ.
ಸ್ನೇ೨: ಚಾನ್ಸ್ ಎಂತದ, ನಾನೇನ್ ತಿರ್ಗುಕ್ ಹೋಪುದೇನ್ ಅಲ್ಲಿಗೆ. ಮನಿ ಬಿಟ್ರೆ ಆಫೀಸು, ಆಫೀಸ್ ಬಿಟ್ರೆ ಮನಿ. ಅಲ್ಲಿ ಕೆಲ್ಸವೂ ಹಾಂಗೆ ಇರತ್ ಸಮಾ ಕೆಲ್ಸ ಮಾಡ್ಸ್ತೋ.
ನಾನು: ಆದ್ರು ಯೂರೋ ಬೆಲೆ ಡಾಲರಿಗಿಂತ್ ಜಾಸ್ತಿ ಅಲ್ದನಾ, ಬರೀ ದುಡ್ಡೇ ಮಾಡ್ದೆ
ಸ್ನೇ೨: ದುಡ್ಡೂ ಸಾಕ್, ಅಲ್ಲ್ ಒದ್ದಾಡುದೂ ಸಾಕ್, ವೀಕೆಂಡ್ ಬಂದ್ರೆ ಎಂತ ಮಾಡುದ್ ಅಂತ ಗೊತ್ತಾತ್ತಿಲ್ಲ. ಬಟ್ಟೆ ಒಗುಕೆ ವಾಶಿಂಗ್ ಮಿಶೀನ್ ಇತ್ತ್, ಮನೆ ಗುಡ್ಸಿ ಒರ್ಸುಕ್ ಜನ ಬತ್ತೊ, ಅಡ್ಗೆ ಮಾಡ್ಕಂಡ್ ತಿಂಬುಕೆ ಎಷ್ಟ್ ಹೊತ್ತ್ ತಗಂತ್?
ನಾನು: ಎಂತ ಕೆಲ್ಸ್ವೂ ಇಲ್ಲ ಆರಾಮ್ ಅಲ್ದ ಹಂಗಾರೆ
ಸ್ನೇ೨: ಹಪ್ಪೆಲಾ, ನೀವು ಮಾತ್ರ ಶನಿವಾರ ಭಾನುವಾರ ತಿರ್ಗಾಡ್ತ ಆಯ್ಕಣಿ, ನಾನಲ್ ಒಬ್ನೆ ಗುಮ್ಮನ್ ಕಣೆಗ್ ಕೂಕಂಡಿರ್ತೆ.
ಸ್ನೇ೩: ಅಡ್ಗೆ ನೀನೆ ಮಾಡ್ಕಂತ್ಯಾ, ಅಡ್ಡಿಲ್ಲ ಮಾರೆ.
ಸ್ನೇ೨: ಅಡ್ಗೆ ಮಾಡ್ಕಂಬುಕೆ ಎಂತಾಯ್ಕ್, ಕುಕ್ಕರಂಗೆ ಬೇಳೆ, ತರ್ಕಾರಿ ಇಟ್ರೆ ಅದ್ರಷ್ಟಕ್ ಬೇಯತ್, ಒಂಚೂರ್ ಕಾಯ್ತುರ್ದ್, ಜೀರ್ಗಿ, ಕೊತ್ತುಂಬ್ರಿ, ಮೆಂತಿ, ಒಣಮೆಣಸು ಹುರ್ದ್ ಮಸಾಲಿ ಮಾಡಿ ಒಟ್ಟಿಗ್ ಕುದುಕ್ ಇಟ್ರಾಯ್ತ್. ಆ ಬ್ರೆಡ್ ತುಂಡ್, ತರಕಾರಿ ಚೂರ್ ತಿಂಬುಕೆ ನಂಗಂತೂ ಆತ್ತಿಲ್ಲ.
ಸ್ನೇ೩: ಒಂದ್ ವಿಷ್ಯ ಗೊತಿತಾ ನಿಂಗೆ, ಈಗಿನ ಕಾಲದಲ್ಲ ಹೆಣ್ ಮಕ್ಳಿಗೆ ಅಡ್ಗೆ ಮಾಡುಕ್ ಬತ್ತಿಲ್ಯ. ಹೇಳಿದ್ರೆ ಸ್ತ್ರೀ ಸ್ವಾತಂತ್ರ್ಯ, ಹೊರ್ಗಡಿ ಕೆಲ್ಸಕ್ ಹೋತೆ ಅಂತೊ. ಕಡಿಗ್ ಅಂಥಾದ್ದೆ ಒಂದ್ ಹೆಣ್ ಸಿಕ್ಕುದಿಲ್ಲ ಅಂದ್ ಕಂಡ್ ಏನ್ ಗ್ಯಾರೆಂಟಿ. ಯಾವ್ದುಕ್ಕೂ ಅಡ್ಗೆ ಕಲ್ತ್ಕಂಡ್ ಇಪ್ಪುದ್ ಒಳ್ಳೇದ್.
ಮಮ: ಮೌನ
ದಂಪ: ತುಟಿಯಂಚಲ್ಲಿ ಕಿರುನಗೆ

ಇಷ್ಟರಲ್ಲಿ ಬಸ್ ಬಂದಿದ್ದರಿಂದ ಮಾತು ಮುಗಿಸಿ, ಬಸ್ ಏರಿ ಮಲಗಿದೆವು. ನಮ್ಮ ಬಸ್ಸೆ ಹತ್ತಿದ ಮಮ, ಪಕ್ಕದ ಸೀಟಿನಲ್ಲಿ ಯಾರೂ ಇರದದ್ದನ್ನು ಕಂಡು ಬೇಸರ ಮುಖ ಮಾಡಿಕೊಂಡು ಗೊಣಗುತ್ತಾ ಮಲಗಿಕೊಂಡದ್ದರಿಂದ, ನಮ್ಮ ನಿದ್ದೆಗೆ ಭಂಗ ಬರಲಿಲ್ಲ.

20 comments:

  1. ಚೆನ್ನಾಗಿದೆ-ಕುಂದಾಪುರ ಕನ್ನಡದ ಸಂಭಾಷಣೆ.

    ReplyDelete
  2. ಅಶೋಕ್,
    ಕುಂದಾಪ್ರ ಕನ್ನಡ ಅರ್ಥ ಮಾಡ್ಕಂಡಿದ್ದಕ್ಕೆ ಧನ್ಯವಾದ
    --
    ಪಾಲ

    ReplyDelete
  3. ಪಾಲಚಂದ್ರ...
    ನಾನ್ ನಿಮ್ಮ್ ಅಭಿಮಾನಿಯದೆ ಕಾಣಿ...
    ಚಂದಕೆ ಬರ್ದೀರಿ..

    ವಾವ್..
    ಸೊಗಸಾಗಿ ಬರೆದಿದ್ದೀರಿ..
    ಢಾಂಬಿಕತನಕ್ಕೆ ತಕ್ಕ ಉತ್ತರ ಕೊಟ್ಟಿದ್ದೀರಿ...

    ಪುಕ್ಕಟೆ ಸಿರ್ಸಿ ಬಸ್ ಸ್ಟ್ಯಾಂಡ್ ಗೆ ಕರೆದೊಯ್ದು ....
    ಮನರಂಜನೆ ಕೊಟ್ಟಿದ್ದಕ್ಕೆ..
    ಧನ್ಯವಾದಗಳು...

    ReplyDelete
  4. ಪಾಲ,
    ಬರಹ ತುಂಬಾ ಚೆನ್ನಾಗಿದೆ..
    "ಯಾವ್ದುಕ್ಕೂ ಅಡ್ಗೆ ಕಲ್ತ್ಕಂಡ್ ಇಪ್ಪುದ್ ಒಳ್ಳೇದ್.." ನನ್ನ ಜೀವನದಲ್ಲಿ ಕಲಿತ ಪಾಠಗಳಲ್ಲಿ ಇದೂ ಒಂದು..

    ReplyDelete
  5. ಪ್ರಕಾಶ್,
    ನಿಮ್ಮೀ ಅಭಿಮಾನಕ್ಕೆ ನನ್ನ ಧನ್ಯವಾದ.
    ಉತ್ರ ಕನ್ನಡೋರಲ್ಲಾ ನೀವು, ತುಂಬ ಲಾಯ್ಕಿತ್ ನಿಮ್ಮೂರ್
    --
    ಪಾಲ

    ReplyDelete
  6. ಬಾಲ,
    >>"ಯಾವ್ದುಕ್ಕೂ ಅಡ್ಗೆ ಕಲ್ತ್ಕಂಡ್ ಇಪ್ಪುದ್ ಒಳ್ಳೇದ್.." ನನ್ನ ಜೀವನದಲ್ಲಿ ಕಲಿತ ಪಾಠಗಳಲ್ಲಿ ಇದೂ ಒಂದು.
    :) :)
    ಮೆಚ್ಚುಗೆಗೆ ವಂದನೆಗಳು, ಅಂದ ಹಾಗೇ ನಿಮ್ಮೂರು?

    --
    ಪಾಲ

    ReplyDelete
  7. story eno super agidee...... isthu thalme innu ideya maraya...........

    ReplyDelete
  8. ಪ್ರಸಾದ್,
    ಅಭಿಪ್ರಾಯಕ್ಕೆ ಧನ್ಯವಾದ, ಪುರುಸೊತ್ತ್ ಇದ್ರೆ ತಾಳ್ಮೆ ಇರತ್ತೆ.. ಏನಂತಿ?
    --
    ಪಾಲ

    ReplyDelete
  9. Pala...
    Story chennagidhe..Neevu yaavaga madhuve aagtheeri? Olle aduge baruva hennu sigodhu kashta..:-)

    ReplyDelete
  10. ದೀಪು,
    ಪ್ರತಿಕ್ರಿಯೆಗೆ ಧನ್ಯವಾದ. ನೀವೆ ಹೇಳಿದ್ರಲ್ಲ, "ಒಳ್ಳೆ ಆಡ್ಗೆ ಬರೋ ಹೆಣ್ಣು ಸಿಗೋದು ಕಷ್ಟಾ" ಅಂತ, ಅದ್ಕೆ ಮದ್ವೆ ಅಡ್ಗೆ ಎಲ್ಲಾ ಕಲ್ತ ಮೇಲೆ :)
    --
    ಪಾಲ

    ReplyDelete
  11. ಪಾಲಚಂದ್ರ,

    ನಾನು ಇದನ್ನು ಬಿಡುವಾಗದ ಕಾರಣ ಓದಿರಲಿಲ್ಲ...
    ನಿಮಗೆ ಫೋಟೊಗ್ರಫಿಯಲ್ಲಿ ಮಾತ್ರ ಹೆಚ್ಚು ಆಸಕ್ತಿ ಇದೆ ಅಂದುಕೊಂಡಿದ್ದೆ....ನನಗನ್ನಿಸುತ್ತೆ. ನೀವು ನಿಜಕ್ಕೂ ಒಳ್ಳೆ ಬರಹಗಾರರು..ಕಣ್ಣಿಗೆ ಕಾಣುವ ಇಂಥ ಚಿತ್ರಗಳನ್ನು ಬರವಣಿಗೆಯಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.....ಬರವಣಿಗೆಯನ್ನು ಮುಂದುವರಿಸಿ....ಮತ್ತು ಈ ರೀತಿಯ ಒಳದೃಷ್ಟಿಯ ವೀಕ್ಷಣೆ ಮತ್ತು ಕುತೂಹಲವನ್ನು ಇನ್ನಷ್ಟು ಬೆಳೆಸಿಕೊಳ್ಳಿ...ಇಂಥ ಅಸಂಭದ್ದಗಳೇ ಎಲ್ಲರಿಗೂ ಇಷ್ಟವಾಗುವುದು...ನನಗಂತೂ ತುಂಬಾ ಇಷ್ಟವಾಯಿತು......

    ReplyDelete
  12. ಶಿವು,
    ಪ್ರತಿಕ್ರಿಯೆಗೆ ಹಾಗೂ ನಿಮ್ಮ ಸಲಹೆಗಳಿಗೆ ಧನ್ಯವಾದ.
    --
    ಪಾಲ

    ReplyDelete
  13. tumba tumba chennagide.....
    adarallu mama hagu dampathigala savvada tumba chennagide....

    ReplyDelete
  14. ಹರ್ಷಾ,
    ಹೂ, ಸಕ್ಕತ್ತಾಗೇ ಮಾತಾಡ್ತಿದ್ರು ಆ ಮಮ, ನಮಗಂತೂ ನಗು ತಡಿಯೋಕೇ ಆಗ್ತಿರ್ಲಿಲ್ಲ :)
    --
    ಪಾಲ

    ReplyDelete
  15. valle layak att maraya neen bardiddu oodukke...
    chanda bardidde...

    ReplyDelete
  16. ಅನಾಮಧೇಯ,
    ನಿಮ್ಮ ನಾಮಧೇಯ ತಿಳಿಸಿದ್ದರೆ ಚೆನ್ನಾಗಿತ್ತು. ಇರ್ಲಿ ನಿನ್ನ ಪ್ರತಿಕ್ರಿಯೆಗೆ ವಂದನೆಗಳು
    --
    ಪಾಲ

    ReplyDelete
  17. ಚೆನ್ನಾಗಿದೆ ಸಂಭಾಷಣೆ.

    ReplyDelete
  18. ಸಂದೀಪ್,
    ಸಂಭಾಷಣೆ ಮೆಚ್ಚಿದ್ದಕ್ಕೆ, ವಂದನೆಗಳು
    --
    ಪಾಲ

    ReplyDelete
  19. nimma ee baraha mast iitu kaani..:-).

    ReplyDelete
  20. ಕಾಂತಿ,
    ಥ್ಯಾಂಕ್ಸ್ ಮಾರ್ರೇ :)

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)