Friday, September 12, 2008

ಪತ್ರಗಳು


"ಮೈಲ್" ಎಂದಾಕ್ಷಣ ನಮ್ಮ ನೆನಪಿಗೆ ಬರುವುದು "ಇ-ಮೈಲ್", ನನ್ನಂತೆಯೆ ಸ್ವಲ್ಪ ಹಳೆಯ ಕಾಲದವರಾದರೆ "ಆ-ಮೈಲ್" ಕೂಡಾ ನೆನಪಿಗೆ ಬರಬಹುದು! ನಾನು ಈಗ ಹೇಳ ಹೊರಟಿರುವುದು ಅದೇ "ಆ-ಮೈಲ್" ಬಗ್ಗೆ. ಅಚ್ಚ ಕನ್ನಡದಲ್ಲಿ ಪತ್ರಗಳು ಎಂದರೆ ನಿಮಗೆ ನಾನು ಹೇಳ ಹೊರಟಿರುವ ಆ-ಮೈಲ್ನ ಸುಳಿವು ಸಿಗಬಹುದು.
ತಿಳಿ ನೀಲಿ ಬಣ್ಣದ "ಅಂತರ್ದೇಶೀಯ ಪತ್ರ", ಹಳದಿ ಬಣ್ಣದ "ಪೋಸ್ಟ್ ಕಾರ್ಡ್", ಕಾವಿ ಬಣ್ಣದ್ದೋ, ಖಾಕಿ ಬಣ್ಣದ್ದೋ, ಇಲ್ಲ ಹಲವು ವರ್ಣ ಸಂಯೋಜನೆಗಳ "ಪೋಸ್ಟ್ ಕವರ್"ಎಂಬಿತ್ಯಾದಿ ಹಲವು ಬಗೆಯ ವೈವಿಧ್ಯತೆಯಿಂದ ಕೂಡಿದ ಸಂದೇಶವಾಹಕಗಳು. ಈ ಮೇಲೆ ಹೇಳಿದ ಬರೀ ಪತ್ರಗಳಿಗೆ ಸಂದೇಶವಾಹಕಗಳು ಎಂದು ಕರೆದದ್ದನ್ನು ನೀವು ಆಕ್ಷೇಪಿಸಬಹುದೋ ಎನೋ, ಪತ್ರಕ್ಕೆ ಕಾಲುಂಟೆ, ರೆಕ್ಕೆ ಉಂಟೆ ಎಂದು ಪ್ರಶ್ನೆಗಳನ್ನು ಕೇಳಿ ನನ್ನನ್ನು ಪೇಚಿಗೆ ಸಿಲುಕಿಸಬಹುದು.ಆದರೆ ಈ ಹಲವು ಬಗೆಯ ಪತ್ರಗಳೊಂದಿಗೆ ಅವನ್ನು ವಿವಿಧೆಡೆಗೆ ಸಾಗಿಸುವ ಅಂಚೆಯವರನ್ನೂ ಸೇರಿಸಿ, ಈ ಶಬ್ದ ಪ್ರಯೋಗಿಸಿದ್ದಾದರೆ ನೀವು ಆಕ್ಷೇಪಿಸಲಾರಿರಿ.

ಅಂತರ್ದೇಶೀಯ ಪತ್ರ ತಿಳಿ ನೀಲಿ ಬಣ್ಣದ, ಎರಡು ಪುಟಗಳಷ್ಟು ವಿಸ್ತಾರವಾಗಿರುವ, ಬಲ ಮೇಲು ತುದಿಯಲ್ಲಿ ಮುಖಬೆಲೆಯೊಂದಿಗೆ ಭಾರತ ಸರಕಾರದ ಮೊಹರುಳ್ಳ ಪತ್ರದ ಒಂದು ಮಾದರಿ. ಎರಡು ಪುಟಗಳಲ್ಲಿ ಅರ್ಧ ಪುಟವನ್ನು "ಗೆ" ಹಾಗೂ "ಇಂದ" ಬರೆಯಲು ಅನುಕೂಲವಾಗುವಂತೆ ತಯಾರಿಸಲಾಗಿರುತ್ತದೆ. ಇಲ್ಲಿ "ಗೆ" ಎಂದರೆ ನಾವು ಯಾರಿಗೆ ಪತ್ರ ಕಳುಹಿಸಲು ನಿರ್ಧರಿಸಿದ್ದೇವೆಯೋ ಅವರ ವಿಳಾಸ ಹಾಗೂ "ಇಂದ" ಎನ್ನುವುದು ನಮ್ಮ ವಿಳಾಸ ಎಂಬುದನ್ನು ಗಮನದಲ್ಲಿರಿಸಬೇಕು. ಅಂದರೆ ಸುಮಾರು ಒಂದುವರೆ ಪುಟಗಳಷ್ಟು ವಿಸ್ತಾರವಾದ ಹಾಳೆಯಲ್ಲಿ ನಿಮಗನ್ನಿಸಿದ್ದನ್ನು ಬರೆಯಬಹುದಾಗಿದೆ. ಸುಮಾರು ಒಂದುವರೆ ಎಂದು ಹೇಳಲು ಕಾರಣ ಇದೆ, ಈ ಪತ್ರದ ಬಲ ಹಾಗೂ ಕೆಳಗಡೆಯಲ್ಲಿ ಒಂದು ಸೆ.ಮಿ.ನಷ್ಟು ವಿಸ್ತರಣೆ ಇದ್ದು, ಪತ್ರ ಬರೆದ ನಂತರ ಅಂಟು ಹಾಕಿ, ನಿಮ್ಮ ಬರಹವನ್ನು ಯಾರೂ ನೋಡದಂತೆ ಮಾಡುವ ವ್ಯವಸ್ಥೆ ಇದೆ. ನೀವು ಜಾಣರಾದಲ್ಲಿ ಅದರಲ್ಲಿಯೂ ಕೂಡ ನಿಮ್ಮ ಬರಹವನ್ನು ತುರುಕಬಹುದು. ಇದರ ಬೆಲೆ ನಾನು ಶಾಲೆಗೆ ಹೋಗುವ ವೇಳೆಯಲ್ಲಿ ೭೫ ಪೈಸೆ ಇದ್ದು, ಕಾಲೇಜು ಬಿಟ್ಟು ಪತ್ರ ಬರೆಯುವುದನ್ನೂ ಬಿಡುವ ವೇಳೆಯಲ್ಲಿ ೨ ರೂಪಾಯಿಗಳಾಗಿತ್ತು. ನಿಮಗೆ ಇ-ಮೈಲ್ ಮಾಡಲು ತಿಳಿಯದೇ ಇದ್ದು, ನಿಮ್ಮ ಮಕ್ಕಳೋ ಮರಿ ಮಕ್ಕಳೋ ಅಪಹಾಸ್ಯ ಮಾಡಿದಾಗ, ಹೊಸದಾಗಿ ತಂದಿರುವ ಅಂತರ್ದೇಶೀಯ ಪತ್ರ ಅವರ ಕೈಗಿತ್ತು, ಮಡಿಸಿ ಅಂಟು ಹಾಕಲು ಹೇಳಿ, ಅವರನ್ನು ಪೇಚಿಗೆ ಸಿಲುಕಿಸಿ ನಿಮ್ಮ ಸೇಡನ್ನು ತೀರಿಸಿಕೊಳ್ಳಬಹುದು. ಈ ಪತ್ರವನ್ನು ಮಡಿಸುವುದೂ ಒಂದು ವಿದ್ಯೆ, ಸುಮ್ಮನೆ ಕಂಪ್ಯೂಟರಿನ ಕೀ-ಪ್ಯಾಡ್ ಮೇಲೋ, ಮೌಸ್ನ ಮೇಲೋ ಕೈಯಾಡಿಸಿದಷ್ಟು ಸುಲಭವಾಗಿ ಇದು ಕರಗತವಾಗಲಾರದು.

ಪೋಸ್ಟ್ ಕಾರ್ಡ್ನ್ನ ಬಡವರ ಸಂದೇಶವಾಹಕ ಎಂದರೆ ತಪ್ಪಾಗಲಾರದು. ಚುಟುಕಾದ ಸಂದೇಶವನ್ನು ಕಡಿಮೆ ವೆಚ್ಚದಲ್ಲಿ ತಲುಪಿಸುವ ಸೌಲಭ್ಯ, ನನಗೆ ತಿಳಿದಂತೆ ೧೫ ಪೈಸೆ ಇದ್ದ ಇದರ ಬೆಲೆ ಮುಂದೆ ೨೫ ಪೈಸೆಯಾಗಿತ್ತು. ಇನ್ನು ಇದರ ಗುಣ ಲಕ್ಷಣದ ಬಗ್ಗೆ ತಿಳಿದುಕೊಳ್ಳೋಣ, ಸಾಧಾರಣವಾಗಿ ತಿಳಿ ಹಳದಿ ಬಣ್ಣದ, ೪/೬ ಅಳತೆಯ, ರಟ್ಟಿನಷ್ಟು ಅಲ್ಲದಿದ್ದರೂ ಸ್ವಲ್ಪ ಗಡುಸಾದ ಪತ್ರದ ಇನ್ನೊಂದು ಮಾದರಿ. ಇದರ ಒಂದು ಮುಖವನ್ನು ಸರಿಯಾದ ಎರಡು ಭಾಗಗಳಾಗಿ ವಿಂಗಡಿಸಿ, ಬಲ ಭಾಗದಲ್ಲಿ ಅಂತರ್ದೇಶೀಯ ಪತ್ರದಂತೆ ಮುಖಬೆಲೆ ಹಾಗೂ "ಗೆ" ಬರೆಯಲು ಅವಕಾಶವಿದ್ದರೆ, ಎಡ ಭಾಗದ ಖಾಲಿ ಜಾಗವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ "ಇಂದ" ಬರೆಯಲೋ ಅಥವಾ ಸಂದೇಶ ಬರೆಯಲೋ ಉಪಯೋಗಿಸಬಹುದು. ನೀವು ಯಾರಿಗಾದರೂ ಆಗಿಂದಾಗ್ಗೆ ಪತ್ರ ಬರೆಯುವವರಾಗಿದ್ದು, ನಿಮ್ಮ ಕೈ ಬರಹದಿಂದಲೇ ನಿಮ್ಮನ್ನು ಗುರುತಿಸಬಹುದಾದ ಸಂದರ್ಭ ಇರುವುದರಿಂದ, "ಇಂದ" ಬರೆಯುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಆದುದರಿಂದ ಪೋಸ್ಟ್ ಕಾರ್ಡ್ನ್ನ ಚುಟುಕಾದ ಸಂದೇಶ ಕಳುಹಿಸಲೋ, ಬಾನುಲಿ, ಟಿ.ವಿ. ಮುಂತಾದ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುರಭಿಯಂತಹ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಲೋ ಬಳಸಬಹುದು. ಪೋಸ್ಟ್ ಕಾರ್ಡ್ನ್ನ ಕಡಿಮೆ ಬೆಲೆಗೆ ಒದಗಿಸಿ ಕೈ ಸುಟ್ಟುಕೊಂಡ ಸರಕಾರ ಪ್ರಶ್ನೋತ್ತರ ಕಳುಹಿಸುವ ಕಾರ್ಡ್ನು ಬೆರೆಯೇ ಆಗಿ ವಿಂಗಡಿಸಿ ಅದರ ಬೆಲೆಯನ್ನು ಏರಿಸಿದ್ದಾರೆ.ಇದರ ಒಂದು ಅನಾನುಕೂಲ ಏನೆಂದರೆ ಅಂತರ್ದೇಶೀಯ ಪತ್ರ ಮತ್ತು ಪೋಸ್ಟ್ ಕವರ್ನಲ್ಲಿಯಂತೆ ಗೌಪ್ಯ ವಿಷಯವನ್ನು ಕಳುಹಿಸಲು ಸಾಧ್ಯವಿಲ್ಲದಿರುವುದು. ಇನ್ನು ಅಂತರ್ದೇಶೀಯ ಪತ್ರ ಹಾಗೂ ಪೊಸ್ಟ್ ಕಾರ್ಡ್ಗಳಲ್ಲಿನ ಒಂದು ಸಾಮ್ಯತೆ ತಿಳಿಸಿ ಮುಂದಿನ ವಿಷಯಕ್ಕೆ ಹೋಗಬಹುದು. ಕೆಲವೊಮ್ಮೆ ಸರಕಾರದ ಸಂದೇಶ ಜನರಿಗೆ ಸುಲಭವಾಗಿ ತಲುಪುವ ಉದ್ದೇಶದಿಂದ, "ಸಾಕ್ಷರತೆ", "ಕುಟುಂಬ ಕಲ್ಯಾಣ" ಮೊದಲಾದ ವಿಷಯಕ್ಕೆ ಸಂಬಂಧಿಸಿದ ಮುದ್ರಿತ ಬರಹವನ್ನೂ ಇವುಗಳಲ್ಲಿ ಕಾಣಬಹುದು.

ಇನ್ನುಳಿದದ್ದು ಪೋಸ್ಟ್ ಕವರ್, ಇದಕ್ಕೆ ಕನ್ನಡದಲ್ಲಿ ಲಕೋಟೆ ಎಂದರೆ ತಪ್ಪಾಗಲಾರದು. ಕತೆ, ಕವನ ಮೊದಲಾದ ಬರಹವನ್ನು ಸಂಪಾದಕರಿಗೆ ಕಳುಹಿಸುವ ಸಲುವಾಗಿಯೋ, ಮದುವೆಯ ಸಂದರ್ಭದಲ್ಲಿ ಹುಡುಗ ಹುಡುಗಿಯ ಜಾತಕ ವಿನಿಮಯ ಮಾಡಿಕೊಳ್ಳಲೋ, ಒಟ್ಟಿನಲ್ಲಿ ಅಂತರ್ದೇಶೀಯ ಪತ್ರ ಹಾಗೂ ಪೋಸ್ಟ್ ಕಾರ್ಡ್ನಲ್ಲಿ ನಿಮ್ಮ ಸಂದೇಶ ಹಿಡಿಸಲಾರದ ಪಕ್ಷದಲ್ಲಿ ಅಥವಾ ಕೆಲವು ದಾಖಲೆಗಳನ್ನು ನಿಮ್ಮ ಸಂದೇಶದೊಂದಿಗೆ ಕಳುಹಿಸಬೇಕಾದ ಸಂದರ್ಭದಲ್ಲಿ ಇದನ್ನು ಬಳಸಬಹುದು. ಸರಕಾರಿ ಮುದ್ರಿತ ಲಕೋಟೆ ೪/೬ ಅಳತೆಯಲ್ಲಿದ್ದು ನಿಮ್ಮ ವ್ಯವಹಾರಕ್ಕೆ ಅದು ಅನಾನುಕೂಲವಾಗಿ ತೋರಿದ ಪಕ್ಷದಲ್ಲಿ, ಖಾಸಗಿ ಲಕೋಟೆ ಕೊಂಡು ಅದಕ್ಕೆ ಅಂಚೆ ಚೀಟಿ ಅಂಟಿಸುವ ಅನುಕೂಲತೆ ಇದೆ. ಸರಕಾರಿ ಲಕೋಟೆಯಲ್ಲಿ ಮುಖಬೆಲೆ ಬಲ ಮೇಲ್ತುದಿಯಲ್ಲಿ ಇದ್ದರೆ, ಖಾಸಗಿ ಲಕೋಟೆಗೆ ಅದೇ ಜಾಗದಲ್ಲಿ ಅಂಚೆ ಚೀಟಿ ಅಂಟಿಸಬಹುದು. ಅಂಚೆ ಚೀಟಿಯ ಕೆಳಗೆ "ಗೆ" ಹಾಗೂ ಎಡ ಕೆಳ ತುದಿಯಲ್ಲಿ "ಇಂದ" ಬರೆಯಬಹುದು.

ಲಕೋಟೆಯ ಇನ್ನೊಂದು ವರ್ಗದಡಿ "ಆಮಂತ್ರಣ ಪತ್ರ" ಹಾಗೂ "ಶುಭಾಷಯ ಪತ್ರ" ಸೇರಿಸಬಹುದು. ದೂರದ ಬಂಧು ಮಿತ್ರರಿಗೆ ವಿಶೇಷ ಕಾರ್ಯಕ್ರಮಗಳಿಗೆ ಆಮಂತ್ರಿಸುವುದೋ, ಹಬ್ಬ ಹರಿದಿನಗಳಂದು ಶುಭಾಶಯ ತಿಳಿಸುವುದೋ,ಇದರ ಉಪಯೋಗ.ಎರಡೂ ಬಗೆಯ ಪತ್ರಗಳು ಸರಕಾರೀ ಲಕೋಟೆಯ ಬದಲು ಪ್ರತ್ಯೇಕವಾದ ಲಕೋಟೆ ಬಳಸುವುದರಿಂದ ಅಂಚೆ ಚೀಟಿಯನ್ನು ಮೇಲೆ ಹೇಳಿದಂತೆ ಲಗತ್ತಿಸಬೇಕು. ಇದಕ್ಕೆ ಅಂಟನ್ನು ಅಂಟಿಸದೆ ಲಕೋಟೆಯ ಮೆಲ್ತುದಿಯ ಮಧ್ಯ ಭಾಗದಲ್ಲಿ "ತೆರದ ಅಂಚೆ" ಎಂದು ನಮೂದಿಸಿದರೆ ಸಾಧಾರಣ ಬೆಲೆ, ಇಲ್ಲವಾದಲ್ಲಿ ಅದರ ಬೆಲೆ ಕಟ್ಟುವ ನಿರ್ಧಾರ ಅಂಚೆ ಕಛೇರಿಗೆ ಬಿಟ್ಟಿದ್ದು. ಲಕೋಟೆಯ ಬೆಲೆ ನನಗೆ ತಿಳಿವು ಬಂದಾಗ ೧ ರೂಪಾಯಿ ಇದ್ದು, ನಾನು ಇ-ಮೈಲ್ನಿಂದ ಶುಭಾಷಯ ಪತ್ರ ಕಳುಹಿಸಲು ಕಲಿತ ವೇಳೆಗೆ ೫ ರೂಪಾಯಿಯಾಗಿತ್ತು. ಇನ್ನು "ತೆರೆದ ಅಂಚೆಯ" ಸ್ಠಾನದಲ್ಲಿ "ರಿಜಿಸ್ಟರ್ಡ್ ಪೊಸ್ಟ್" ಮತ್ತು "ಸ್ಪೀಡ್ ಪೋಸ್ಟ್" ಎಂಬ ವಿಶೇಷಣವನ್ನೂ ಕೆಲವೊಮ್ಮೆ ನೋಡಬಹುದು. "ರಿಜಿಸ್ಟರ್ಡ್ ಪೊಸ್ಟ್" ಎಂದರೆ "ಗೆ"ಗೆ ಕಳುಹಿಸಿದ ಪತ್ರವನ್ನು ಅವನ ಕೈಗೇ ಒಪ್ಪಿಸಿ ಅವನಿಂದ ಮರುಪತ್ರ ಪಡೆಯುವ ವ್ಯವಸ್ಥೆ. ಇದೇ ವ್ಯವಸ್ಥೆ "ಸ್ಪೀಡ್ ಪೋಸ್ಟ್"ನಲ್ಲೂ ಇದೆಯಾದರೂ ಇದು ಉಳಿದ ಪತ್ರಗಳಿಗಿಂತ ತ್ವರಿತವಾಗಿ ಎಂದರೆ, ಸಾಮಾನ್ಯ ಪತ್ರ ತಲುಪಲು ಸುಮಾರು ೭ ದಿನ ತೆಗೆದುಕೊಂಡರೆ ಅದೇ ಪತ್ರ "ಸ್ಪೀಡ್ ಪೋಸ್ಟ್" ಮೂಲಕ ಒಂದೇ ವಾರದಲ್ಲಿ ತಲುಪಬಲ್ಲದು! ಇವೆರಡೂ ಮೌಲ್ಯವರ್ಧಿತ ಸೇವೆಗಳಾದುದರಿಂದ, ಪತ್ರದ ತೂಕ ಹಾಗೂ ದೂರವನ್ನವಲಂಬಭಿಸಿ ಬೆಲೆ ನಿರ್ಧರಿಸಲಾಗುತ್ತದೆ.

ಮೇಲೆ ತಿಳಿಸಿದ ಎಲ್ಲಾ ಬಗೆಯ ಪತ್ರಗಳನ್ನೂ (ರಿಜಿಸ್ಟರ್ಡ್ ಪೊಸ್ಟ್, ಸ್ಪೀಡ್ ಪೋಸ್ಟ್ ಹೊರತಾಗಿ) ಅಂಚೆ ಪೆಟ್ಟಿಗೆ ಎಂಬ ಕೆಂಪು ಬಣ್ಣದ, ಕಪ್ಪು ಟೊಪ್ಪಿಯ ಡಬ್ಬದೊಳಗೆ ಹಾಕುವುದು ನಮ್ಮ ಕರ್ತವ್ಯ ಎಂದೂ, ಅದನ್ನು ಸರಿಯಾದ "ಗೆ"ಗೆ ಕಳುಹಿಸುವುದು ಅಂಚೆಕಛೇರಿಯವರ ಕೆಲಸವೆಂದೂ ತಿಳಿದುಕೊಂಡರೆ ಸಾಕು. ಬರೀ ಇಷ್ಟೇ ಅಲ್ಲದೆ "ಮನಿ ಆರ್ಡರ್", "ವಿ.ಪಿ.ಪಿ" ಹಾಗೂ "ಟೆಲಿಗ್ರಾಂ" ಕೂಡ ಅಂಚೆಯವರು ಒದಗಿಸುವ ಇತರ ಬಗೆಯ ಪತ್ರದ ಮಾದರಿಯ ಸಾಲಿಗೆ ಸೇರಿಸಬಹುದಾಗಿದೆ. ಮೊದಲೆರಡನ್ನು ಹಣ ಕಳುಹಿಸಲೂ, ಕೊನೆಯದ್ದನ್ನು ತುರ್ತು ಸಂದೇಶ ಕಳುಹಿಸಲು ಉಪಯೋಗಿಸುತ್ತಿದ್ದರೆಂದು ಹಿರಿಯರಿಂದ ಕೇಳಿ ತಿಳಿದ ನೆನಪು.

ಕೆಲವೊಮ್ಮೆ ಯಾರಾದರೂ ನನ್ನ ಬಳಿ ಯಾವುದಾದರೂ ವಿಷಯ ಹಂಚಿಕೊಳ್ಳುತ್ತಿದ್ದರೆ, ಕೊನೇಯಲ್ಲಿ ಇವನು ಇದನ್ನೆಲ್ಲಾ ನನಗೆ ಏಕೆ ಹೇಳುತ್ತಿದ್ದಾನೆ ಎಂಬ ಪ್ರಶ್ನೆ ಮೂಡುತ್ತದೆ. ಅಂತೆಯೇ ಈ ಮೇಲಿನ ಬರಹ ಓದಿ ನಿಮಗೆ ಹಾಗೆಯೇ ಅನಿಸಿರಬಹುದು. ಆದರೆ ನಾನು ಇಷ್ಟೆಲ್ಲಾ ಬರೆಯಲು ಕಾರಣವಿಲ್ಲದಿಲ್ಲ! ಕೋಟದಿಂದ ಚಿಕ್ಕಮಗಳೂರಿಗೂ, ಚಿಕ್ಕಮಗಳೂರಿನಿಂದ ಬೆಂಗಳೂರಿಗೂ, ಬೆಂಗಳೂರಿನಿಂದ ಮೈಸೂರಿಗೂ, ಮೈಸೂರಿನಿಂದ ಮತ್ತೆ ಬೆಂಗಳೂರಿಗೆ ನನ್ನ ಜೊತೆ ಪ್ರಯಾಣಿಸಿದ ನನ್ನ ಹಳೇಯ "ಸೂಟ್ ಕೇಸ್" ಇದಕ್ಕೆಲ್ಲಾ ಕಾರಣ. ನಿನ್ನೆ ಒಂದು ರೀತಿಯ ಕುತೂಹಲ ಹುಟ್ಟಿ ಅದನ್ನು ತೆಗೆದು ನೋಡಿದಾಗ ಸುಮಾರು ನೂರಕ್ಕೂ ಮಿಕ್ಕ, ನನ್ನ ೧೦ ವರ್ಷಗಳ ಇದೇ ಪತ್ರಗಳ ಸಂಗ್ರಹ. ಇದನ್ನು ಓದುತ್ತ ನನ್ನ ವಿದ್ಯಾರ್ಥಿ ಜೀವನ, ಕಾಲೇಜು ಜೀವನ, ಕೆಲಸಕ್ಕೆ ಸೇರಿದ್ದ ಆರಂಭದ ದಿನಗಳು ಮತ್ತೆ ನೆನಪಿಗೆ ಬಂದವು. ಅಂಚೆ ಕಛೇರಿ ಈ ಪತ್ರಗಳ ಸೌಲಭ್ಯವನ್ನು ಕೊನೆಗಾಣಿಸುವುದರೊಳಗಾಗಿ ನನಗೆ ಪತ್ರ ಕಳುಹಿಸುತ್ತಿದ್ದ ಕೆಲವರಿಗಾದರೂ ಮತ್ತೆ ಪತ್ರ ಕಳುಹಿಸಬೇಕೆಂಬ ಆಸೆಯಾಗುತ್ತಿದೆ, ಅದಕ್ಕೇ ಇಂದಿನಿಂದಲೇ ಅವರಿಗೆಲ್ಲಾ ಕರೆ ಮಾಡಿ ವಿಳಾಸ ತಿಳಿದುಕೊಳ್ಳುತ್ತಿದ್ದೇನೆ. ಇದನ್ನು ನನ್ನ ಹುಚ್ಚುತನ ಎಂದು ನೀವು ನಕ್ಕರೂ ಚಿಂತೆಯಿಲ್ಲ, ನನ್ನ ಹುಚ್ಚುತನದಿಂದ ಇತರರಿಗೆ ಕೆಡುಕಾಗದೆ ಇದ್ದರಾಯಿತು.

Monday, September 08, 2008

ವಾರಾಂತ್ಯ ಹೇಗಿತ್ತು?

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್ದೆ, ಫಿಲ್ಮ್ಗೆ ಹೋಗಿದ್ದೆ, ಅಥವಾ ಆ ಹೋಟೆಲ್ ಈ ರೆಸಾರ್ಟ್ಗೆ ಹೋಗಿದ್ದೆ ಮುಂತಾದ ವಿವರವಾದ ಉತ್ತರ ನಿರೀಕ್ಷಿಸಬಹುದು. ಕೆಲವರಿಗೆ ಈ ಪ್ರಶ್ನೆ ಅತ್ಯಂತ ಕಠಿಣದ್ದಾಗಿ ಕಾಣಿಸಬಹುದು, ಅಥವಾ ಇತರರ ಉತ್ತರ ಕೇಳಿ ತಾವು ಮಾಡಿದ್ದನ್ನು ಹೇಳಲು ಸಂಕೋಚವೂ ಆಗಬಹುದು. ಸಂಕೋಚ ಪಡುವಂತಹ ಕೆಟ್ಟ ಕೆಲಸ ಏನೂ ಮಾಡದಿದ್ದರೂ, ಅವರ ವಾರಾಂತ್ಯ ಎಂದಿನ ದಿನಕ್ಕಿಂತ ಭಿನ್ನವಾಗಿಲ್ಲದಿರುವುದೇ ಈ ಸಂಕೋಚಕ್ಕೆ ಕಾರಣ. ನಾನೂ ಈ ಕೊನೆಯ ವರ್ಗಕ್ಕೆ ಸೇರಿದವನಾದ್ದರಿಂದ, ನನಗೆ ಈ ಪ್ರಶ್ನೆ ಎದುರಾದಾಗಲೆಲ್ಲ ಒಂದು ಬಗೆಯ ಮುಜುಗರ. ಆದ್ದರಿಂದಲೇ ನನ್ನ ವೈವಿಧ್ಯಪೂರ್ಣವಲ್ಲದ ವಾರಾಂತ್ಯದ ಚುಟುಕು ಪರಿಚಯ ಈ ಬರಹದ ಮೂಲಕ ಮಾಡಿಕೊಟ್ಟು, ನನಗೆ ಈ ಪ್ರಶ್ನೆ ಕೇಳುವವರಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ಈ ಬರಹದ ಕಡೆಗೆ ಬೊಟ್ಟು ಮಾಡಿ ನನ್ನ ಸಮಯದ ಸದುಪಯೋಗ ಪಡಿಸಿಕೊಳ್ಳುವ ದುರಾಲೋಚನೆ.

ನನಗೆ ಮೊದಲಿನಿಂದ ಬೆಳಿಗ್ಗೆ ಬೇಗ ಏಳುವ ದುರಭ್ಯಾಸ. ಹಾಗಂತ ೪, ೫ ಗಂಟೆಗೆಲ್ಲ ಏಳುತ್ತೇನೆ ಎಂದು ತಪ್ಪು ತಿಳಿಯಬೇಡಿ. ನನ್ನ ಬೇಗ ಎಂದರೆ ಬೆಂಗಳೂರಿನ ಸೂರ್ಯ ವಂಶದವರಿಗೆ ಹೋಲಿಸಿದರೆ. ಸಾಮನ್ಯವಾಗಿ ಇವರು ಗಡಿಯಾರ ೧೧, ೧೨ ಗಂಟೆ ತೋರಿಸುತ್ತಿದ್ದು, ಸೂರ್ಯ ನಡು ನೆತ್ತಿಯ ಮೇಲೆ ಬಂದಾಗಲಷ್ಟೇ ಮುಸುಕು ತೆಗೆಯುವ ಪ್ರಯತ್ನ ಮಾಡುತ್ತಾರೆ. ಹಾಗಂತ ಅದು ತಪ್ಪು ಅಂತ ನನ್ನ ಭಾವನೆಯಲ್ಲ, ವಾರದ ಉಳಿದ ದಿನಗಳಲ್ಲಿ ಬೆಳಿಗ್ಗೆ ಬೇಗ ಎದ್ದು ಆಫೀಸಿಗೆ ಹೋಗಿ ಮಧ್ಯರಾತ್ರಿಯವರೆಗೂ ದುಡಿಯುವ ಇವರಿಗೆ ವಾರದಲ್ಲಿ ಎರಡು ದಿನ ರಿಯಾಯಿತಿ ಕೊಡುವುದು ತಪ್ಪಲ್ಲವೇನೋ. ನಾನು ಮಾತ್ರ ಲೆಕ್ಕಾಚಾರಕ್ಕೆ ಸರಿಯಾಗಿ ದಿನಕ್ಕೆ ೮ ಗಂಟೆ ಕೆಲಸ ಮಾಡುತ್ತೇನೆ ಎಂದು ಇತರರೂ ನನ್ನಂತೆಯೇ ಶುದ್ಧ ಸೋಮಾರಿಗಳು ಎಂದು ಭಾವಿಸುವುದು ತಪ್ಪು. ಹೋಗಲಿ ಬಿಡಿ ವಿಷಯ ಎಲ್ಲೆಲ್ಲಿಗೋ ಹೋಯಿತು, ನನ್ನ ಬೇಗ ಎಂದರೆ ಸುಮಾರು ೬ ಗಂಟೆ, ನಾನು ಪ್ರತಿನಿತ್ಯ ಏಳುವ ಸಮಯ.

ಶೌಚಾದಿಗಳೆಲ್ಲ ಮುಗಿದ ನಂತರ ನನ್ನ ಮೊದಲ ಕೆಲಸ ಎಂದರೆ ಮನೆಯ ಪಕ್ಕದಲ್ಲೇ ಇರುವ ವಿವೇಕಾನಂದ ಪಾರ್ಕ್ನಲ್ಲಿ ಕೆಲವು ಸುತ್ತು ಹೊಡೆಯುವುದು. ಕೇವಲ ಒಲಂಪಿಕ್ಸ್ ಮುಂತಾದ ಕ್ರೀಡೆಯನ್ನು ನೋಡಿ ಕೆಲವು ದಿನ ಹುರುಪುಗೊಂಡು ನನ್ನ ಕಾಲುಗಳು ಓಡುವುದಾದರೂ ಸಾಮಾನ್ಯವಾಗಿ ಅದು ವಿರಾಮದಲ್ಲಿ ನಡೆಯುವುದೇ ಜಾಸ್ತಿ. ವಾರಾಂತ್ಯ ಎಂದು ದಿನನಿತ್ಯ ನೋಡುವ ಹಕ್ಕಿಗಳಲ್ಲೋ, ಮುಂಜಾನೆಯ ಅರುಣೋದಯದ ಗುಲಾಬಿ ವರ್ಣದಲ್ಲೋ , ಪಾರ್ಕಿನಲ್ಲಿ ಆಡುವ ಮಕ್ಕಳಲ್ಲೋ, ಅಸಹಜವಾಗಿ ನಗುವ ವಯೋವೃದ್ಧರ ಗುಂಪಿನಲ್ಲೋ, ಗುಡಾಣದ ಹೊಟ್ಟೆ ಕರಗಿಸುವ ಸಲುವಾಗಿ ವ್ಯಾಯಾಮ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಡುವಯಸ್ಕರಲ್ಲೋ ಯಾವುದೇ ಬಗೆಯ ವ್ಯತ್ಯಯ ನಿಮಗೆ ಕಾಣಿಸುವುದು ತೀರ ದುರ್ಲಭ.

ಹೀಗೆಯೇ ಸುಮಾರು ೩೦ ನಿಮಿಷ ಸಮಯ ಕೊಂದು ವೃತ್ತ ಪತ್ರಿಕೆ, ಹಾಲಿನೊಂದಿಗೆ ಮನೆಗೆ ಬಂದರೆ ಬಿಸಿಯಾದ ಚಹಾದೊಂದಿಗೆ ವರ್ತಮಾನ ತಿಳಿದುಕೊಳ್ಳುವ ಆತುರವಾಗುತ್ತದೆ. ನನಗೆ ಮೊದಲಿನಿಂದ ಎರಡೆರಡು ಕೆಲಸ ಒಟ್ಟಿಗೆ ಮಾಡಿ ಅಭ್ಯಾಸವಿಲ್ಲದ್ದರಿಂದ, ಮೊದಲು ತಂದ ಹಾಲನ್ನು ಕಾಯಿಸಿ ಚಹಾ ಮಾಡಿ ನಂತರ ಚಹಾದ ಗುಟುಕಿನೊಂದಿಗೆ ಪತ್ರಿಕೆಯ ಸಮಾಚಾರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮಗೆ ಆಶ್ಚರ್ಯವಾದರೂ ಆಗಬಹುದು, ಎರಡೆರಡು ಕೆಲಸ ಒಟ್ಟಿಗೆ ಮಾಡದ ಇವನು ಚಹಾ ಕುಡಿಯುತ್ತ ಹೇಗೆ ಪತ್ರಿಕೆ ಓದುತ್ತಾನೆ ಎಂದು. ಚಹಾ ಕುಡಿಯುವುದೊಂದು ಕೆಲಸವಲ್ಲ ಎನ್ನುವ ಉತ್ತರ ನಿಮಗೆ ಸಮಾಧಾನ ತಂದರೂ ಎಲ್ಲರಿಗೂ ತರುವುದಿಲ್ಲ. ಅದಕ್ಕೆಂದೇ ಹಿಂದೆ ಎಲ್ಲೋ ಝೆನ್ ಕತೆಗಳಲ್ಲಿ ಓದಿದ್ದ ಚಹಾ ಕುಡಿಯುತ್ತ ಪತ್ರಿಕೆ ಓದುವುದು ನನ್ನ ಒಂದು ಕೆಲಸ ಎಂದು ಹೇಳಿ ಸಮಾಧಾನ ಪಡಿಸುತ್ತೇನೆ.

ಇಷ್ಟು ಹೊತ್ತಿಗೆ ಹಸಿವಿನ ಕೂಗು ಪ್ರಭಲವಾಗಿ ಮೆದುಳು ಪತ್ರಿಕೆಯ ವಿಷಯವನ್ನು ಇನ್ನು ಗ್ರಹಿಸಲಾರೆ ಎಂದು ಸಂಪು ಹೂಡುತ್ತದೆ. ಬೆಳಿಗ್ಗಿನ ತಿಂಡಿ ಮಾಡುವುದು ದೊಡ್ಡ ಕೆಲಸ ಅಲ್ಲದಿದ್ದರೂ ಯಾವ ತಿಂಡಿ ಮಾಡುವುದು ಎಂದು ನಿರ್ಣಯಿಸುವುದು ಮಾತ್ರ ತುಂಬಾ ಕಠಿಣದ ಕೆಲಸ. ಅಡುಗೆ ಮನೆಯಲ್ಲಿ ಇದೆಯೆಂದು ಭ್ರಮಿಸಿದ ಸಾಮಾನನ್ನು ನೆನಪಿಸಿಕೊಂಡು, ಪುನರಾವರ್ತನೆ ಆಗದಂತೆ ಇತ್ತೀಚಿನ ದಿನಗಳಲ್ಲಿ ಮಾಡಿದ ತಿಂಡಿಯನ್ನು ನೆನಪಿಸಿಕೊಂಡು, ನಾಲಗೆ ಚಪಲವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಣಯಿಸಬೇಕಾಗುತ್ತದೆ. ಅಂತೂ ಕಷ್ಟ ಪಟ್ಟು ಅಕ್ಕಿ ರೊಟ್ಟಿ ಜೊತೆಗೆ ಕಾಯಿ ಚಟ್ನಿ ಮಾಡಬೇಕು ಅಂತ ನಿರ್ಧಾರ ಮಾಡಿದೆ ಅಂದುಕೊಳ್ಳಿ, ಚಟ್ನಿಗೆ ಒಗ್ಗರಣೆ ಹಾಕುವ ಸಮಯದಲ್ಲಷ್ಟೇ ಹಿಂದಿನ ದಿನ ಖಾಲಿಯಾದ ಸಾಸಿವೆಯ ನೆನಪು ಬರುತ್ತದೆ. ಬಾಯ ಚಪಲ ಹಸಿವನ್ನು ಹಿಂದಿಕ್ಕಿ, ಕಾಲು ಹತ್ತಿರದ ಅಂಗಡಿಯ ಹಾದಿ ಹಿಡಿಯುತ್ತದೆ.

ಹೆತ್ತವರಿಗೆ ಹೆಗ್ಗಣ ಮುದ್ದಂತೆ, ಹಾಗೆಯೇ ನಾನು ಮಾಡಿದ ಅರೆಬೆಂದ, ಇಲ್ಲವೇ ಕರಟಿ ಹೋದ ರೊಟ್ಟಿ ನನಗೆ ಆಪ್ಯಾಯಮಾನವಾಗಿ ತೋರಿ ಒಮ್ಮೊಮ್ಮೆ ನನ್ನನ್ನು ನಾನು ನಳ ಮಹಾರಾಜನಿಗೆ ಹೋಲಿಸುವುದಿದೆ! ನನ್ನ ಸ್ನೇಹಿತರೋ ಬಂಧುಗಳೋ ನಮ್ಮ ಮನೆಗೆ ಬಂದು ನಾನು ಮಾಡಿದ ನಳ ಪಾಕವನ್ನು ಬಹಳ ಕಷ್ಟದಿಂದ ಗಂಟಲೊಳಗೆ ತುರುಕುವಾಗ ಅವರ ಮುಖದಲ್ಲಿನ ಸಂಕಟದಿಂದಷ್ಟೇ ನನಗೆ ತಿಳಿಯುವುದು ನನ್ನ ಪಾಕದ ಗುಣಮಟ್ಟ!

ಇವೆಲ್ಲ ದಿನನಿತ್ಯದ ಕೆಲಸವಾದರೆ ವಾರಾಂತ್ಯಕ್ಕೆ ಮೀಸಲಾದ ಕೆಲಸ ಕಾದಿರುತ್ತದೆ. ಶನಿವಾರ ಬೆಳಿಗ್ಗೆ ನಮ್ಮ ಮನೆ ಶುಚಿಗೊಳಿಸುವ ದಿವಸ. ವಾರಕ್ಕೊಮ್ಮೆಯಾದರೂ ಮನೆಯನ್ನು ಶುಚಿಗೊಳಿಸುವುದರಿಂದ ಇತರ ಅವಿವಾಹಿತರಿಗಿಂತ ನಾನೇ ಮೇಲು ಎಂದು ಗರ್ವದಿಂದ ಹೇಳಬಹುದು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ಹುಡುಗಿಯರೂ ಕೂಡ ಪಿ.ಜಿ. ಎಂದು ಹಣ ಕೊಟ್ಟು ಅತಿಥಿಗಳಾಗಿ ಈ ಜವಾಬ್ದಾರಿಯಿಂದ ಪಾರಾಗುತ್ತಿದ್ದಾರೆ. ಅವರ ಗಂಡಂದಿರ ಬಗ್ಗೆ ಒಮ್ಮೊಮ್ಮೆ ಅನುಕಂಪವೂ ಮೂಡುತ್ತದೆ.

ಮೊದಲಿನ ಕೆಲಸ ಗುಡಿಸುವುದು, ಒಂದು ವಾರದಿಂದ ಮನೆಯೊಳಗೆ ನುಗ್ಗಿರಬಹುದಾದ ಧೂಳು, ಮಣ್ಣು, ಉದುರಿ ಹೋದ ತಲೆಕೂದಲು, ತರಕಾರಿ ಸಿಪ್ಪೆ, ಮೂಲೆಯಲ್ಲಿ ಬೆಳೆದಿರಬಹುದಾದ ಜೇಡರ ಬಲೆ, ಪ್ಲಾಸ್ಟಿಕ್, ಮನೆಯಲ್ಲಿ ನನ್ನೊಂದಿಗೆ ವಾಸಿಸುತ್ತಿರುವ ಜಿರಳೆ ಹಾಗೂ ಇತರ ಜೀವಿಗಳ ಮೃತ ಶರೀರ, ಒಂದೇ ಎರಡೇ ಹಲವು ಬಗೆಯ ವೈವಿಧ್ಯಗಳನ್ನು ನೀವು ಇಲ್ಲಿ ಕಾಣಬಹುದು.

ಹೀಗೆ ಕೆಲವೊಮ್ಮೆ ಗುಡಿಸುವಾಗ ಹಲವು ತಿಂಗಳಿಂದ ಸಂಗ್ರಹಿಸಿದ್ದ ಹಾಲಿನ ಪ್ಲಾಸ್ಟಿಕ್ ಅಟ್ಟದ ಮೇಲೆ ಅಸ್ತವ್ಯಸ್ತವಾಗಿ ಹರಡಿ, ಅದರಿಂದ ಹೊರಡುತ್ತಿದ್ದ ಗಂಧಕ್ಕೆ ನುಸಿ ಮುತ್ತಿ ಗುಂಯಿಕಾರ ಮಾಡುವ ದನಿಯೋ, ಅಥವಾ ಪ್ರತಿನಿತ್ಯ ಸಂಗ್ರಹಿಸಿ ಚಿಕ್ಕ ಗುಡ್ದದೆತ್ತರಕ್ಕೆ ಬೆಳೆದ ಪತ್ರಿಕೆಯ ರಾಶಿಯನ್ನೋ ನೋಡಿದಾಗ ಮತ್ತೆ ೧ ಗಂಟೆಯ ಕಾಲ ಹರಣ ಮಾಡುವ ಮನಸ್ಸಾಗುತ್ತದೆ. ಇದನ್ನೆಲ್ಲಾ ಸರಿಯಾಗಿ ಜೋಡಿಸಿ ಹತ್ತಿರದಲ್ಲಿರುವ ಗುಜರಿಗೆ ಕೊಟ್ಟರೆ ಬರುವ ಹಣ ಸುಮಾರು ೩೦ ರಿಂದ ೪೦ ರೂಪಾಯಿ. ಅದರಿಂದ ಬರುವ ಹಣ ಅಲ್ಪವಾದರೂ ಪ್ಲಾಸ್ಟಿಕ್ ಮರು ಬಳಕೆಗೆ ನನ್ನದೂ ಒಂದು ಕೊಡುಗೆಯಿರಲಿ ಎಂಬ ಒಂದು ಆಸೆ!
ಇನ್ನು ಮುಂದಿನ ಕೆಲಸ ಫಿನೈಲ್, ನೀರನ್ನು ಬಳಸಿ ನೆಲ ಒರೆಸುವುದು. ಗುಡಿಸಲು ಬಾರದ ಧೂಳಿನ ಚಿಕ್ಕ ಕಣಗಳು ಇದರಿಂದ ತೊಲಗುತ್ತದೆ. ಆದರೆ ಅಡುಗೆ ಮನೆಗೆ ಹೋದಾಗ ಮಾತ್ರ ಇತರ ಬಗೆಯ ಕೊಳೆ ಕಾಣಿಸಬಹುದು. ಕಳೆದ ಒಂದು ವಾರದ ಸಾಧನೆಯೋ ಎಂಬಂತೆ ಒಲೆ, ಮಿಕ್ಸರ್ಗಳಲ್ಲಿ ಹಿಡಿದ ಅಡುಗೆಯ ಮಾದರಿಗಳೆಲ್ಲವೂ ಇಲ್ಲಿ ದೊರಕುತ್ತದೆ.

ಇಷ್ಟೆಲ್ಲಾ ಮುಗಿಯಬೇಕಾದರೆ ಗಂಟೆ ೧೨ ಹೊಡೆದು ಹೊಟ್ಟೆ ಮತ್ತೆ ತಾಳ ಹಾಕಲು ಆರಂಭಿಸಿರುತ್ತದೆ. ಕೊಳೆಯಾದ ಮೈಯನ್ನು ನೀರಿಗೊಡ್ಡಿ ಸ್ನಾನ ಮುಗಿಸಿಕೊಂಡು ಬಂದರೆ ಮತ್ತೆ ಅಡುಗೆಯ ಚಿಂತೆ ಹುಟ್ಟುತ್ತದೆ. ತಿಂಡಿ ಮಾಡುವಾಗಿನ ಸಮಸ್ಯೆಗಳು ಇಲ್ಲಿಯೂ ಕಾಣಿಸುತ್ತದೆ. ಅಂತೂ ಯಾವುದೋ ಅಡುಗೆ, ಅನ್ನ ಮಾಡಿ ಹೊಟ್ಟೆಯನ್ನು ತೃಪ್ತಿ ಪಡಿಸಿದ ನಂತರ, ಮೆದುಳಿನ ಹಸಿವನ್ನು ತೃಪ್ತಿ ಪಡಿಸುವ ಚಪಲದಿಂದ ಚಾಪೆಯನ್ನು ಹಾಸಿ ಒಂದು ಪುಸ್ತಕ ಹಿಡಿದುಕೊಳ್ಳುವುದರೊಳಗಾಗಿ ಮಂದವಾದ ನಿದ್ರೆ ಓದುವ ಹಸಿವನ್ನು ಮೂಲೆಗೊತ್ತುತ್ತದೆ.

ಎದ್ದ ನಂತರ ಮತ್ತೆ ಚಹವನ್ನು ಕುಡಿದು, ಓದಬೇಕೆಂದಿದ್ದ ಪುಸ್ತಕ ಹಿಡಿದರೋ, ಸ್ನೇಹಿತರ ಭೇಟಿಗೋ ಹೋದರೆ ಅಲ್ಲಿಗೆ ದಿನ ಮುಗಿದಿರುತ್ತದೆ. ಅಪರಾನ್ಹವೇ ಮಾಡಿದ ಭೋಜನ ಉಂಡು ಮಲಗಿದರೆ, ವಾರಾಂತ್ಯದ ಎರಡನೇ ದಿನ ಮತ್ತೆ ಇದರ ಪುನರಾವರ್ತನೆ. ಇಲ್ಲಿ ಮನೆ ಶುಚಿಗೊಳಿಸುವ ಕೆಲಸದ ಬದಲು ಬಟ್ಟೆ ಒಗೆಯುವ, ಇಸ್ತ್ರಿ ಹಾಕುವ ಕೆಲಸ ಬಿಟ್ಟರೆ ಉಳಿದೆಲ್ಲ ಹಿಂದಿನ ದಿನದ ಪುನರಾವರ್ತನೆ.

ಇದೆಲ್ಲ ಓದಿದ ನಂತರ ಈ ಮನುಷ್ಯ ಎಂತಹ ಅರಸಿಕ ಎಂಬ ಭಾವನೆ ನಿಮಗೆ ಬರಬಹುದು. ಆದರೆ ಅದಕ್ಕೆ ನಾನು ಹೊಣೆಯಲ್ಲ! ನಾನು ವಾರಾಂತ್ಯದಲ್ಲಿ ಏನು ಮಾಡುತ್ತೀನೋ ಅದನ್ನು ಪ್ರಾಮಾಣಿಕವಾಗಿ ಬರೆದಿದ್ದೇನೆ. ಅಲ್ಲದೆ ಇದರಲ್ಲಿ ಒಮ್ಮೊಮ್ಮೆ ಕೆಲವು ಬದಲಾವಣೆ ಆಗುವುದೂ ಉಂಟು. ನಮ್ಮ ಮನೆಯ ಗ್ಯಾಸ್ ಖಾಲಿಯಾದಾಗ ಹೋಟೆಲ್ಗೂ, ಓದಲು ಏನೂ ಇಲ್ಲದಿದ್ದಾಗ ಚಲನಚಿತ್ರಕ್ಕೂ, ವಾರಾಂತ್ಯದ ಜೊತೆ ಬೇರೆ ರಜೆ ಬಂದರೆ ತಿರುಗಾಟಕ್ಕೂ ಹೋಗುವುದಿದೆ. ಆದರೆ ಇವೆಲ್ಲ ಕ್ರಮವಾಗಿ ವರ್ಷಕ್ಕೆ ೨, ೧, ೧೦ ಒಟ್ಟಿಗೆ ೧೩ ಬಾರಿ ಆಗುವುದರಿಂದ ನನಗೆ "ವಾರಾಂತ್ಯ ಹೇಗಿತ್ತು?" ಎಂಬ ಪ್ರಶ್ನೆ ಎದುರಾದಾಗಲೆಲ್ಲ ಮುಜುಗರವಾಗುತ್ತದೆ... ನಿಮಗೆ?

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)