Sunday, June 19, 2011

ಹಲಸಿನ ರುಚಿಯ ಹಲವು ಬಗೆ

ಹಲಸಿನ ಕಾಲ ಆರಂಭವಾಯಿತೆಂದರೆ ಗುಜ್ಜೆ ಪಲ್ಯ, ಹುಳಿ ದಿನನಿತ್ಯದ ಅಡುಗೆಯಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಹಣ್ಣಾಗತೊಡಗಿದರೆ  ಹಣ್ಣಿನ ದೋಸೆ, ಇಡ್ಲಿ, ಮುಳ್ಕ, ಪಾಯಸ ಮಾಮೂಲಿ. ಬೆಂಗಳೂರಿನ ರಿಲಯನ್ಸ್ ಫ್ರೆಷ್ನಲ್ಲಿ ಗುಜ್ಜೆ ನೋಡಿದಾಗ ನಮ್ಮ ಮನೆಯಲ್ಲಿ ಹಿಂದೆ ಸವಿದಿದ್ದ ಮೇಲೆ ತಿಳಿಸಿದ ಅಡುಗೆಯ ನೆನಪಾದರೂ, ಅದರ ಸಿಪ್ಪೆ ಸುಲಿದು ಕತ್ತರಿಸುವ ತ್ರಾಸ ಬೇಡವೆಂದು ಸುಮ್ಮನಾದೆ.

ಹಿಂದೆ ಬೇಸಿಗೆ ರಜೆಯಲ್ಲಿ ಕಳಸದ ದೊಡ್ಡಮ್ಮನ ಮನೆಗೆ ಹೋದರೆ ರಾಶಿ ರಾಶಿ ಹಲಸಿನ ಕಾಯಿ, ಹಣ್ಣು. ಹಲಸಿನ ಕಾಯಿಯನ್ನು ದೊಡ್ಡ ದೊಡ್ಡ ಕಡಾಯಿಯಲ್ಲಿ ಬೇಯಿಸಿ, ಉಪ್ಪು ಹುಳಿ ಖಾರ ಹಾಕಿಕೊಟ್ಟರೆ ಒರಳಲ್ಲಿ ಗುದ್ದಿ ಹಪ್ಪಳಕ್ಕೆ ಅಣಿಮಾಡುವುದು ನಮ್ಮ ಬಾಲ್ಯದ ಆಟದಲ್ಲೊಂದು. ಹಲಸಿನ ಹಣ್ಣು ಪಂಥ ಕಟ್ಟಿ  ಹೊಟ್ಟೆ ಬಿರಿಯುವಂತೆ ತಿಂದರೂ ಅಕ್ಷಯವಾದ ಹಣ್ಣುಗಳು ಕೊನೆಗೆ ಸೇರುವುದು ದನಗಳ ಹೊಟ್ಟೆಗೆ. ಇನ್ನೆಷ್ಟೋ ಹಣ್ಣುಗಳು ತೋಟದಲ್ಲಿಯೇ ಬಿದ್ದು ಕೊಳೆತು ಹೋಗುವುದೂ ಉಂಟು. ಇವೆಲ್ಲಾ ಬಕ್ಕೆಯ ವಿಷಯವಾದರೆ ಇಂಬವನ್ನಂತೂ ಕೇಳುವವರೇ ಇರಲಿಲ್ಲ.

ಕೆಲವೆಡೆ ಪರಿಸ್ಥಿತಿ ಬದಲಾಗಿದೆಯಾದರೂ ಹಲಸು ಬಡವರ ಆಹಾರವಾಗಿಯೇ ಹೆಚ್ಚಿನ ಪ್ರಚಾರ ಪಡೆಯದೇ ತೋಟದಲ್ಲೇ ಕೊಳೆಯುವ ಸ್ಥಿತಿ ಇಂದೂ ಮುಂದುವರೆದಿದೆ. ಜನರಿಗೆ ಹಲಸಿನ ವೈವಿಧ್ಯಮಯ ತಿನಿಸು, ರೈತರಿಗೆ ಮೌಲ್ಯವರ್ಧನೆಯನ್ನು ತಿಳಿಸುವ ಸಲುವಾಗಿಯೇ ಕದಂಬ ಸಂಸ್ಥೆಯು ಶಿರಸಿಯಲ್ಲಿ ಇದೇ ತಿಂಗಳ ೧೧, ೧೨ರಂದು ಹಲಸು ಮೇಳವನ್ನು ಆಯೋಜಿಸಿತ್ತು. ಒಂದೇ ಕಡೆ ದೊರಕಬಹುದಾದ ಹಲಸಿನ ವಿವಿಧತೆಯನ್ನು ನೋಡುವ ಸಲುವಾಗಿ ನನ್ನ ಸವಾರಿಯೂ ಅತ್ತ ಕಡೆ ಧಾವಿಸಿತು.

೧೦ರ ರಾತ್ರಿ ಬೆಂಗಳೂರಿನಿಂದ ಹೊರಟ ಬಸ್ಸು ಶನಿವಾರ ಬೆಳಿಗ್ಗೆ ೬ಗಂಟೆಗೆಲ್ಲಾ ಶಿರಸಿ ತಲುಪಿಸಿತ್ತು. ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆಗೆ ಹಲಸಿನ ಖಾದ್ಯಗಳ ನೆನಪು ಸಂಗಾತಿಯಾಗಿತ್ತು. ಮೊದಲು ತಲುಪಿದ್ದೇ ಮೇಳ ನಡೆಯುವ ರಾಘವೇಂದ್ರ ಕಲ್ಯಾಣ ಮಂಟಪಕ್ಕೆ. ಸಂಜೆ ೪ ಗಂಟೆಗೆ ಉದ್ಘಾಟಿಸಲ್ಪಡುವ ಮೇಳಕ್ಕೆ ಅಷ್ಟು ಮುಂಚೆ ಯಾರು ಬಂದಿರುತ್ತಾರೆ ಎಂದುಕೊಂಡರೂ ಆಗಲೇ ಛತ್ರವನ್ನು ಶುಚಿಗೊಳಿಸುವವರು, ಮೇಳದಲ್ಲಿ ಭಾಗವಹಿಸಲಿರುವ ರಾಜ್ಯದ ನಾನಾ ಭಾಗದವರು ನೆರೆದಿದ್ದರು. ಅಡುಗೆ ಮನೆಯ ಹೊರಗೆ ಇರಿಸಲಾಗಿದ್ದ ಹಲಸಿನ ರಾಶಿಯಂತೂ, ಮುಂದೆ ತಿನ್ನಲು ಸಿಗಬಹುದಾದ ಖಾದ್ಯಗಳ ಬಗ್ಗೆ ಯೋಚಿಸುವಂತೆ ಮಾಡಿತು. ಬೆಳಗ್ಗಿನ ಕಾರ್ಯಕ್ರಮ ಮುಗಿಸುವ ಸಲುವಾಗಿ ನಾನು ಹೊಟೆಲೊಂದರ ಕಡೆ ಹೆಜ್ಜೆ ಹಾಕಿದೆ.

೯ ಗಂಟೆಯ ಸಮಯಕ್ಕೆ ತಿಂಡಿ ಸ್ನಾನಾದಿಗಳನ್ನು ಮುಗಿಸಿ, ನಗರ ಪರಿಭ್ರಮಣೆ ಮುಗಿಸಿ, ಮತ್ತೆ ಮೇಳದ ಸ್ಥಳಕ್ಕೆ ಹಾಜರ್. ಆಗಲೇ ಹಲಸನ್ನು ಕಡಿಯುವವರ ಗುಂಪು, ಸೊಳೆ ಬಿಡಿಸುವವರ ಗುಂಪು, ಬೀಜ ಬಿಡಿಸುವವರ ಗುಂಪು, ಅಡುಗೆ ತಯಾರಿಸುವವರ ಗುಂಪು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಸ್ವಾಭಾವಿಕವಾಗಿಯೇ ನನ್ನ ಒಲವು ಸೊಳೆ ಬಿಡಿಸುವವರ ಕಡೆ ಹರಿದು ಅವರ ಚಿತ್ರ ತೆಗೆಯಲಾರಂಭಿಸಿದೆ. ಚಿತ್ರ ತೆಗೆದಿದ್ದಕ್ಕೆ ಪ್ರತಿಫಲವಾಗಿ ಕೆಲವು ಸೊಳೆಗಳು ನನ್ನ ಹೊಟ್ಟೆಯ ಪಾಲಾದವು.
ಬೀಜ ಸುಲಿಯುತ್ತಿರುವವರು ಕೇರಳದವರೆಂದೂ, ಸುಲಿಯುತ್ತಿರುವುದು ಪಾಯಸಕ್ಕೆಂದೂ ತಿಳಿಯಿತು. ಈ ತಿಳಿವನ್ನು ಪಡೆಯುವಲ್ಲಿ ಕೆಲವು ದುರ್ದೈವಿ ಬೀಜಗಳು ಪಾಯಸದ ಕಡಾಯಿಯ ಬದಲು ನನ್ನ ಉದರ ಗುಹೆ ಹೊಕ್ಕವು. ಅಡುಗೆ ಮನೆಯಲ್ಲಿ ಇಡ್ಲಿಗೆ ಹಿಟ್ಟನ್ನು ರುಬ್ಬುತ್ತಿದ್ದರಾದರೂ ಅವ್ಯಾವುದೂ ಈಗಲೇ ತಿನ್ನಲು ಬರುವುದಿಲ್ಲವೆಂದು ಅರಿತು ಹೊರ ನಡೆಯಬೇಕಾಯಿತು.


From ಹಲಸಿನ ರಾಶಿ- Sirsi Halasu Mela


ಸ್ವಲ್ಪ ಬದಲಾವಣೆ ಇರಲೆಂದು, ಅದಕ್ಕಿಂತಲೂ ಮುಖ್ಯವಾಗಿ ತಿಂದಿದ್ದು ಅರಗಲೆಂದು ಪಕ್ಕದಲ್ಲಿಯೇ ಇರುವ ಕೃಷಿ ಕೇಂದ್ರದ ಕಡೆಗೆ ಹೊರಟೆ. ಕೇಂದ್ರದಲ್ಲಿ ಮಹಿಳಾ ಕಾರ್ಮಿಕರೊಬ್ಬರು ಎದುರಾದರು. "ಇವತ್ತು ರಜೆ, ಏನಾಗ್ಬೇಕಿತ್ತು", ಎಂದು ಪ್ರಶ್ನಿಸಿದರು. ಉತ್ತರವಾಗಿ, "ಏನೂ ಇಲ್ಲ ಸುಮ್ನೆ ಬಂದೆ.. ಕಂಡ್ಕಂಡ್ ಹೋಗ್ವಾ ಅಂತ" ಅಂದೆ. "ಏನು ಗಿಡ ಇದೆ ಇಲ್ಲಿ, ಅಪ್ಪೆ ಗಿಡ ಸಿಗುತ್ತಾ..", ನನ್ನ ಪ್ರಶ್ನೆಗೆ ಅಕೆ, "ಸಧ್ಯಕ್ಕೆ ಇಲ್ಲಿ ಕ್ರೋಟಾನ್ ಗಿಡ ಇದೆ, ಇವತ್ತು ಕೊಡಲಾಗುವುದಿಲ್ಲ... ಸೋಮವಾರ ಬನ್ನಿ" ಎಂದು ನನ್ನ ಸಾಗಹಾಕಿದರು. ತಿಂದದ್ದು ಅರಗಿಸಿಕೊಳ್ಳುವ ನನ್ನ ಯತ್ನ ವಿಫಲವಾದರೂ ಪಕ್ಕದ ಅಂಗಡಿಯಲ್ಲಿದ್ದ ಬೀಡ ಇದಕ್ಕೆ ಸಹಾಯ ಮಾಡಿತು.

ಮತ್ತೆ ಮೇಳ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ. ಹಲಸಿನ ಉತ್ಪನ್ನ ಮಾರಾಟಗಾರರ ಮಳಿಗೆ ಅದಾಗಲೇ ಆರಂಭಗೊಂಡಿತ್ತು. ಹೀಪನಳ್ಳಿಯ ಎಸ್.ವಿ. ಹೆಗಡೆಯವರು, "ಅನ್ನಪೂರ್ಣ ಹೋಂ ಪ್ರಾಡಕ್ಟ್ಸ್"  ಹೆಸರಿನಲ್ಲಿ ಕಳೆದ ೮ ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ ಮಾಡಿ ಸ್ಥಳೀಯ ಮಾರುಕಟ್ಟೆ ಕಂಡುಕೊಂಡಿದ್ದಾರೆ. ವರ್ಷದಲ್ಲಿ ೩ ತಿಂಗಳು, ದಿನವೊಂದಕ್ಕೆ ಸರಾಸರಿ ೨೦-೨೫ ಹಲಸಿನ ಕಾಯಿಯನ್ನು ಚಿಪ್ಸು, ಸೊಳೆ ಉಂಡೆ ಕಾಳು, ಹಪ್ಪಳ ಅಲ್ಲದೇ ಸೊಳೆಯನ್ನು ಒಣಗಿಸಿಯೂ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳ ನೆರವಿಲ್ಲದೇ ನೇರ ಮಾರಾಟ. ಕೊಂಡ ಖಾರದ ಚಿಪ್ಸು ರುಚಿಯಾಗಿತ್ತು. ಆಸಕ್ತರು ಫೋನ್ ಮೂಲಕ (08384-224001) ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಹಲಸಿನ ಬೀಜದ ಖಿಚಡಿಯ ಹೊರತಾಗಿ ಪಕ್ಕದ ಇನ್ನೊಂದು ಮಳಿಗೆಯಲ್ಲಿಯೂ ಇದೇ ಉತ್ಪನ್ನಗಳಿದ್ದವು. ಬೀಜವನ್ನು ಉಪ್ಪಿನೊಂದಿಗೆ ಬೇಯಿಸಿ, ಚೂರಿ ಮೆಣಸಿನೊಂದಿಗೆ ನುರಿದು, ಲಿಂಬೇ ಹಣ್ಣು ಹಾಕಿದರೆ ಖಿಚಡಿ ರೆಡಿ. ಅಂಗೈ ತುಂಬಾ ತುಂಬಿದ ಖಿಚಡಿ ಸವಿಯುತ್ತಾ ಮುಂದಿನ ಮಳಿಗೆಯತ್ತ ಹೊರಟೆ.


From ಎಸ್.ವಿ. ಹೆಗಡೆ - Sirsi Halasu Mela


ಕೇರಳದ ಸುನೀಶ್ ನಮ್ಮಲ್ಲಿ ತೆರೆವಿದ್ದ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ತಂದಿದ್ದರು. ಹಣ್ಣಿನ ಚಾಕಲೇಟ್, ಹಣ್ಣಿನ ಬರ್ಫಿ, ಬೀಜದ ಚಟ್ನಿ ಪುಡಿ, ಬೀಜದ ಹಿಟ್ಟು, ಒಣಗಿಸಿದ ಹಣ್ಣು, ಒಣಗಿಸಿದ ಗುಜ್ಜೆ, ಸುಟ್ಟ ಬೀಜ ಇವುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯತ್ನ ನೂತನ. ಚಾಕಲೇಟು ಕೊಂಡು ತಿಂದರೂ ನನಗೆ ಅದರ ರುಚಿ ಹಿಡಿಸಲಿಲ್ಲ.  ಬೆಂಗಳೂರಿನಲ್ಲೂ ಹಲಸಿನ ಉತ್ಪನ್ನದ ಪರಿಚಯಕ್ಕೆ ಆಗಾಗ ಭೇಟಿ ನೀಡುತ್ತಾರೆ. IT campusಗಳಲ್ಲಿ ಹಲಸನ್ನು ಪರಿಚಯಿಸುವ ಕನಸು ಅವರದ್ದು. ಆಸಕ್ತರು email ಮುಖಾಂತರ (cdsuneesh[at]gmail.com) ಸಂಪರ್ಕಿಸಬಹುದು.


From ಸುನೀಶ್- Sirsi Halasu Mela


ದೊಡ್ನಳ್ಳಿಯ ಅನಂತ ಲಕ್ಷ್ಮಣ ಹೆಗಡೆ ತಮ್ಮ ತೋಟದ ಹಲಸಿನ ಹಲವು ಮಾದರಿಯನ್ನು ಡಬ್ಬಿಯಲ್ಲಿ ತುಂಬಿಸಿ ಮಾರಾಟಕ್ಕಿಟ್ಟಿದ್ದರು. ಸಂಪಿಗೆ ಎಸಳಿನ ಬಣ್ಣದ ಚಂದ್ರ ಬಕ್ಕೆ ಇವುಗಳ ನಡುವೆ ಎದ್ದು ಕಾಣಿಸುತ್ತಿತ್ತು. ಹಲಸಿನ ಹಣ್ಣಿನ ರುಚಿಯಾದ ಜ್ಯಾಮ್ ಇಲ್ಲಿ ಕಾಣಸಿಕ್ಕಿದ ಇನ್ನೊಂದು ಮೌಲ್ಯವರ್ಧಿತ ಉತ್ಪಾದನೆ. ಬ್ರೆಡ್ಡು, ದೋಸೆ, ಚಪಾತಿ ಜೊತೆ ಇವನ್ನು ತಿನ್ನಬಹುದಾದರೂ ಹಾಗೆಯೇ ತಿನ್ನಲೂಬಹುದು ಎಂದು ನನ್ನ ನಾಲಗೆ ತಿಳಿಸಿದೆ.


From ಅನಂತ ಲಕ್ಷ್ಮಣ ಹೆಗಡೆ-Sirsi Halasu Mela


ಹಲವು ವರ್ಷಗಳ ನಂತರ ನಮ್ಮ ಕುಟುಂಬದವರೊಬ್ಬರ ದರ್ಶನ ಈ ಮೇಳದಲ್ಲಿ ಲಭಿಸಿತು. ಅವರೂ ಬೆಂಗಳೂರಿನಿಂದ ಮೇಳದ ಸಲುವಾಗಿಯೇ ಪತಿಯೊಡನೆ (ಸಿದ್ಧಾರ್ಥ) ಬಂದಿದ್ದರು. "ನಾ ಇವ್ರಿಗೊಬ್ರಿಗೇ ಹಲ್ಸಿನ್ ಹುಚ್ ಅಂದ್ಕಂಡಿದ್ದೆ", ನನ್ನ ಉದ್ದೇಶ ತಿಳಿದ ಮೇಲೆ ಆಕೆಯ ಉದ್ಗಾರ. ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೆಬ್ರಿಯ ಬಳಿಯ ತಮ್ಮ ತೋಟದಲ್ಲಿ ಹಲಸಿನ ವಿವಿಧ ತಳಿ ಬೆಳೆಸುವ ಹಂಬಲ ಸಿದ್ಧಾರ್ಥರದ್ದು. ಕೇರಳ, ತಮಿಳುನಾಡೂ ಸೇರಿದಂತೆ ರಾಜ್ಯದ ಹಲವೆಡೆ ಸುತ್ತಾಡಿ ಇದುವರೆಗೆ ೮೦ ಸಸಿಗಳನ್ನು ತಮ್ಮ ತೋಟದಲ್ಲಿ ನಾಟಿ ಮಾಡಿಸಿದ್ದಾರೆ. ಇಲ್ಲಿಯೂ ಗಿಡ ಸಂಗ್ರಹಿಸುವ ಆಸೆಯಿಂದ ಬಂದಿದ್ದರು. ತಳಿಯ ಹೆಸರು ಗೊತ್ತಿಲ್ಲವಾದರೂ ಇಬ್ಬರೂ ಸೇರಿ ಕಸಿ ಮಾಡಿದ ಕೆಲವು ಸಸಿಗಳನ್ನು ಕೊಂಡೆವು. "ಗಿಡದ ಜೊತೆ ಹಣ್ಣಿನ ಮಾದರಿ ಇರಿಸಿದರೆ ಕೊಳ್ಳಲು ಅನುಕೂಲ. ಹೆಗಡೆಯವರ ಮನೆಯ ಬಕ್ಕೆ ಅಂತ ಹೇಳಿದ್ರೆ ನಮಗೆ ಹೇಗೆ ತಿಳಿಯುತ್ತೆ?  ", ಮಾರಾಟದಲ್ಲಿ ಸಸಿಯನ್ನು ಮಾತ್ರ ಇರಿಸಿದ್ದನ್ನು ಕಂಡು ಸಿದ್ಧಾರ್ಥರ ಪ್ರತಿಕ್ರಿಯೆ. ತಳಿಯಲ್ಲೂ ವೈವಿಧ್ಯತೆ ಇರದಿದ್ದನ್ನು ನೋಡಿ ಆ ಬಗ್ಗೆ ಪ್ರಶ್ನಿಸಿದಾಗ, "ಕಾರ್ಯಕ್ರಮ ಸಂಜೆ ಆರಂಭ, ದಕ್ಷಿಣ ಕನ್ನಡದಿಂದ ಕೆಲವು ತಳಿ ಬರಲಿಕ್ಕಿದೆ" ಎಂಬ ಉತ್ತರದಿಂದ ನಿರಾಶರಾದರು. "ತಮ್ಮ ಊರು ದಕ್ಷಿಣ ಕನ್ನಡಕ್ಕೆ ಬಹಳ ಹತ್ತಿರ, ಅಲ್ಲಿಂದಲೇ ಗಿಡ ಬರುವುದಾದರೆ  ಇಷ್ಟು ದೂರದಿಂದ ತೆಗೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಮೌಲ್ಯ ವರ್ಧನೆಯ ಜೊತೆಗೆ ಹಣ್ಣಿಗೂ, ನಾಟಕ್ಕೂ ಒದಗುವ ತಳಿಯನ್ನು ಗುರುತಿಸಿ ಬೆಳೆಸುವುದೂ ಮುಖ್ಯ." ತಮ್ಮ ಅಭಿಪ್ರಾಯ ತಿಳಿಸಿದರು.


From ಹಲಸಿನ ಸಸಿಗಳು - Sirsi Halasu Mela


ಆಗಲೇ ಹಲಸಿನ ಅಡುಗೆಯ ಸ್ಪರ್ಧೆಗೆ ಭಾಗವಹಿಸುವವರು ಬಗೆ ಬಗೆಯ ತಿನಿಸುಗಳನ್ನು ಜೋಡಿಸುತ್ತಿದ್ದರು. ಹಣ್ಣಿನ ಪಾಯಸ,  ಶ್ಯಾವಿಗೆ, ಪಡ್ಡು, ಜಾಮೂನು, ಖರ್ಜಿಕಾಯಿ, ಸಜ್ಜಪ್ಪ, ಜ್ಯಾಮ್, ರೊಟ್ಟಿ, ಕಡಬು, ಹಪ್ಪಳ, ಕೇಸರಿ ಬಾತು, ಕೇಕ್, ಹಾಲುಬಾಯಿ, ಕಾಯಿಯ ಬೊಂಡ, ಸೂಪು, ಖಾರದ ಹೋಳಿಗೆ, ಚಿಪ್ಸು, ಪಲ್ಯ, ಹುಳಿ ಗೊಜ್ಜು, ಖಾರ ಶೇವ್, ಸೋಂಟೆ, ಎರವು ಹಾಗೂ ಬೀಜದ ಚಕ್ಕುಲಿ, ಚಟ್ನಿಪುಡಿ, ಕೋಡುಬಳೆ, ಪಚ್ಚಡಿ, ಕಟ್ಲೆಟ್, ಪಾಯಸ, ಪಕೋಡ, ಉಂಡ್ಲೇ ಕಾಳು ಇನ್ನೂ ಅನೇಕ ಬಗೆಯ ತಿಂಡಿಗಳು
ತೀರ್ಪುಗಾರರ ನಿರ್ಣಯಕ್ಕೆ ಕಾದಿದ್ದವು. ಇವನ್ನೆಲ್ಲಾ ನೋಡಿ ತೀರ್ಪುಗಾರರ ಮೇಲೆ ಸಹಜವಾಗಿಯೇ ಅಸೂಯೆ ಮೂಡಿತು.


From ಹಲಸಿನ ಜಾಮೂನು - Sirsi Halasu Mela


ಆಗಲೇ ಸಮಯ ೧ ಆಗಿತ್ತು. ಮಧ್ಯಾಹ್ನ ಹಲಸಿನ ವಿಶೇಷ ಭೋಜನ ಪ್ರಮುಖ ಆಕರ್ಷಣೆಯಾಗಿತ್ತು. ಸುಮ್ಮನೇ ಊಟಕ್ಕೆ ಕಾಯುತ್ತಾ ಸಮಯ ವ್ಯರ್ಥಮಾಡುವ ಬದಲು ಮಾರಾಟಕ್ಕಿಟ್ಟಿದ್ದ ಹಲಸಿನ ಹಣ್ಣಿನ ಐಸ್-ಕ್ರೀಮ್ ಕಬಳಿಸಿದ್ದಾಯ್ತು. ಬಡಿಸುವವರಿಗೆ ಸಿದ್ಧಾರ್ಥ್ ಹುರಿದುಂಬಿಸಿ ೧:೩೦ರ ಸಮಯಕ್ಕೆ ಊಟ ಹಾಕಿಸುವಲ್ಲಿ ಸಫಲರಾದರು. ಹಲಸಿನ ಇಡ್ಲಿ, ಪಲ್ಯ, ಹುಳಿ, ಮಜ್ಜಿಗೆ ಹುಳಿ, ಅಪ್ಪೇ ಹುಳಿಯೊಂದಿಗೆ ಬೆರೆಸಿದ್ದ ಹಲಸಿನ ಸೊಳೆ, ಹಲಸಿನ ಪಾಯಸ ಊಟದ ಆಕರ್ಷಣೆಯಾಗಿತ್ತು. ಅಡಿಕೆಹಾಳೆಯಲ್ಲಿ ಎಲ್ಲಾ ಅಡುಗೆಯನ್ನು ತೃಪ್ತಿಯಿಂದ ಸವಿದು, ಕೊಂಡ ಗಿಡಗಳನ್ನು ಸಿದ್ಧಾರ್ಥರ ಕಾರಿಗೇರಿಸಿ ಊರಿನ ಕಡೆ ಹೊರಟೆವು. ಸಮಯದ ಅಭಾವವಿದ್ದಿದ್ದರಿಂದ ಸಂಜೆಯವರೆಗೂ ಇದ್ದು ಫಡ್ರೆಯವರ ಮಾತನ್ನು ಕೇಳಲು ಅವಕಾಶ ಸಿಗಲಿಲ್ಲ.

ರಾತ್ರಿ ೯ ಗಂಟೆಗೆ ನಮ್ಮೂರು ತಲುಪಿ ಮನೆಗೆ ಹೋದಾಗ, ಹೇಳದೇ ಬಂದಿದ್ದಕ್ಕೆ ಮನೆಯವರಲ್ಲಿ ಸಂತೋಷ, ಆಶ್ಚರ್ಯ. "ಅನ್ನ ಖಾಲಿ ಮಾರಾಯ, ಹಲ್ಸಿನ್ ಇಡ್ಲಿ ಇತ್ ತಿಂತ್ಯಾ" ಎಂಬ ಅಮ್ಮನ ಪ್ರಶ್ನೆಗೆ ಮುಗುಳ್ನಕ್ಕೆ.

ಇನ್ನಷ್ಟು ಚಿತ್ರಗಳು: Sirsi Halasu Mela

Thursday, June 16, 2011

ಮನೆಗೊಂದು ಸೈಕಲ್

DSC_2796

ಶಿರಸಿಯಲ್ಲಿ ಕಾಣಿಸಿದ ಮುದ ನೀಡಿದ ನೋಟ, ಹೆಚ್ಚಿನವರ ಮನೆಯ ಮುಂದೂ ಒಂದೊಂದು ಸೈಕಲ್

Friday, June 10, 2011

ಹಲಸು ಮೇಳ - ಶಿರಸಿ


ಸ್ಥಳ: ಶ್ರೀ ರಾಘವೇಂದ್ರ ಕಲ್ಯಾಣ ಮಂಟಪ, ಶಿರಸಿ
ದಿನಾಂಕ: ಜೂನ್ 11, 12
ಉದ್ಘಾಟನೆ: 11ರಂದು ಸಂಜೆ 4-00 ಗಂಟೆಗೆ.
ಆಯೋಜಕರು: ಕದಂಬ ಮಾರ್ಕೆಟಿಂಗ್ ಸಹಕಾರಿ


ಹೆಚ್ಚಿನ ವಿವರ: ಪ್ರಜಾವಾಣಿಯಲ್ಲಿ

Monday, June 06, 2011

ಬೆಂಗಳೂರಿನ ಕೆಂಪಕ್ಕಿ ಸಂತೆ


ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಗೆ ನಾನಾ ಅನಾರೋಗ್ಯದ ನೆಪವೊಡ್ಡಿ ಅನ್ನ ತ್ಯಜಿಸುತ್ತಿರುವ ಸಮಯದಲ್ಲಿ ಅನ್ನದ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಒಂದು ಯತ್ನ. 

DSC_2569

ಡಯಾಬಿಟೀಸಿಗೆ ಯಾವ ಅಕ್ಕಿ ತಿನ್ನಬೇಕು?”, ಮೇಳದಲ್ಲಿನ ಮಳಿಗೆಗಳಿಗೆ ಭೇಟಿಯಿಡುತ್ತಿದ್ದ ಗ್ರಾಹಕರ ಮುಖ್ಯ ಪ್ರಶ್ನೆಯಾಗಿತ್ತು. ಡಯಾಬಿಟೀಸಿಗೆ ಪಥ್ಯದ ನೆಪದಲ್ಲಿ ಡಾಕ್ಟರು, ಡಯಟೀಶಿಯನ್ಸ್ ಬಿಳಿಯಕ್ಕಿಯನ್ನು ನಿಷೇಧಿಸಿರುತ್ತಾರೆ. ಅನ್ನ ತಿನ್ನದೇ ಇದ್ದ ಹಲವು ದಿನಗಳ ಹಪಹಪಿ ಗ್ರಾಹಕರ ಮಾತಿನಲ್ಲಿತ್ತು. ಕೆಂಪಕ್ಕಿ ಯಾವುದಾದರೂ ತಿನ್ನಬಹುದುಎಂಬ ಉತ್ತರಕ್ಕೆ ಪ್ರತಿಕ್ರಿಸುವಾಗ ಗ್ರಾಹಕರು ಎಷ್ಟು ದಿನ ತಿಂದರೆ ವಾಸಿಯಾಗುತ್ತದೆ?ಎಂಬ ಮತ್ತೊಂದು ಪ್ರಶ್ನೆ.

ಇಷ್ಟಕ್ಕೂ ಕೆಂಪಕ್ಕಿ ಎಂದರೆ ಏನು ಎಂಬುದನ್ನು ಮೊದಲು ತಿಳಿದಿಕೊಳ್ಳುವುದೊಳಿತು. ಭತ್ತದ ಹೊರಗಿನ ಹೊಟ್ಟು ತೆಗೆದಾಗ ಉಳಿಯುವುದೇ ಕೆಂಪಕ್ಕಿ. ಬಿಳಿಯಕ್ಕಿಗಿಂತ ಸ್ವಲ್ಪ ನಿಧಾನಕ್ಕೆ ಬೇಯುವ ಇದು ಅನ್ನ ಮಾಡಿದಾಗ ದಪ್ಪ ದಪ್ಪಗೆ ಸ್ವಲ್ಪ ಅಂಟು ಅಂಟಾಗಿರುತ್ತದೆ. ಹಾಗೆಯೇ ಬಿಳಿ ಅಕ್ಕಿಯೂ ಇದೇ ಭತ್ತದಿಂದ ತಯಾರಿಸಲ್ಪಡುತ್ತದೆಯಾದರೂ ಭತ್ತದ ಹೊಟ್ಟಿನ ಜೊತೆಗೆ ಅಕ್ಕಿಯ ಹೊರಪದರವನ್ನೂ ಪಾಲೀಷ್ ಮಾಡಿ ತೆಗೆಯಲಾಗುತ್ತದೆ.

ಹಾಗಾದರೆ ಕೆಂಪಕ್ಕಿ, ಬಿಳಿಯಕ್ಕಿಯ ಮೂಲ ಒಂದೇ ಎಂದಾಯ್ತು. ಎರಡರಲ್ಲೂ ದೇಹಕ್ಕೆ ಅಗತ್ಯವಾದ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಪ್ರೋಟೀನ್ ಇರುತ್ತದೆ. ಆದರೆ ಪಾಲಿಷ್ ಮಾಡುವುದರಿಂದ ಹೊರ ಪದರದಲ್ಲಿರುವ ವಿಟಮಿನ್, ಖನಿಜಾಂಶ, ನಾರಿನಾಂಶ ಬಿಳಿಯಕ್ಕಿಯಲ್ಲಿ ಅಲಭ್ಯವಾಗುತ್ತದೆ. ಈ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಬಿಳಿಯಕ್ಕಿಗೆ ಕೆಲವು ವಿಟಮಿನ್, ಖನಿಜಾಂಶಗಳನ್ನು ಕೃತಕವಾಗಿ ಸೇರಿಸಿ ಅಕ್ಕಿಯ ಮೌಲ್ಯವರ್ಧನೆ ಮಾಡಲಾಗುತ್ತದೆ. ಇಷ್ಟೆಲ್ಲಾ ಸೇರಿಸಿದರೂ ಅಕ್ಕಿಯನ್ನು ತೊಳೆದು ನಂತರ ಬಳಸುವುದರಿಂದ ಹೆಚ್ಚಿನ ಪೋಷಕಾಂಶಗಳು ನಷ್ಟವಾಗುವ ಸಂಭವವೇ ಹೆಚ್ಚು. ಅಲ್ಲದೇ ಕೆಂಪಕ್ಕಿಯಲ್ಲಿ ಲಭ್ಯವಿರುವ ಖನಿಜಾಂಶವಾದ ಮೆಗ್ನೇಶಿಯಂ, LDL Cholesterol ಕಡಿಮೆ ಮಾಡುವ ಗುಣವುಳ್ಳ ಹೊಟ್ಟಿನ ಎಣ್ಣೆ, ನಾರಿನಂಶ ಬಿಳಿಯಕ್ಕಿಯಲ್ಲಿ ಅಲಭ್ಯ. ಆರೋಗ್ಯಕ್ಕೆ ಒಳ್ಳೆಯದೆಂದು ಇದೇ ಹೊಟ್ಟಿನ ಎಣ್ಣೆಯನ್ನೇ ಮತ್ತೆ ದುಡ್ಡು ಕೊಟ್ಟು ತರುತ್ತೇವೆ. ಇಲ್ಲಿ ಲಾಭವಾಗಿದ್ದು ಉತ್ಪಾದಕರಿಗೂ ಅಲ್ಲ, ಗ್ರಾಹಕರಿಗೂ ಅಲ್ಲ – ಮಧ್ಯವರ್ತಿಗಳಿಗೆ.

DSC_2580

ಈ ಮೊದಲೇ ಉಲ್ಲೇಖಿಸಿದ ಪ್ರಶ್ನೆಗೆ ಮಾಹಿತಿದಾರರು ಉತ್ತರಿಸುತ್ತಾ, ಕೆಂಪಕ್ಕಿಯನ್ನು ಮಾತ್ರೆಯಂತೆ ಸೇವಿಸುವುದಲ್ಲ, ಅದರ ಬದಲಾಗಿ ಕೆಂಪಕ್ಕಿ ಸೇವಿಸಿದರೆ ಮಾತ್ರೆಯ ಅಗತ್ಯವಿಲ್ಲ. ಇದು ಜೀವನ ಶೈಲಿಯ ಪರಿವರ್ತನೆ. ಅಳವಡಿಸಿಕೊಂಡರೆ ನಮ್ಮ ಮುಂದಿನ ಪೀಳಿಗೆಯ ಆಹಾರ ಪದ್ಧತಿಯಾದರೂ ಆರೋಗ್ಯಪೂರ್ಣವಾಗಿ, ಕಾಯಿಲೆ ಮುಕ್ತವಾಗಿರಬಹುದು.       
ಸುಮಾರು ೫೦ರಷ್ಟು ದೇಶೀ, ವಿದೇಶೀ ಅಕ್ಕಿಯ ತಳಿಗಳ ನಮೂನೆ ಪ್ರದರ್ಶನಕ್ಕಿರಿಸಲಾಗಿತ್ತು. ಸರ್ಪ ಸುತ್ತಿಗೆ ಕರಿ ಭತ್ತ, ಬಾಣಂತಿಯರಿಗೆ ಕರಿಗಜವಲಿ, ಮೂಲ ವ್ಯಾಧಿ ಮತ್ತು ನಿಶ್ಯಕ್ತಿಗೆ ಕೇರಳದ ನವರ, ಪಾಯಸಕ್ಕೆ ಬರ್ಮಾ ಕಪ್ಪು ಅಕ್ಕಿ, ಫಲಾವಿಗೆ ಗಂಧಸಾಲೆ ಹೀಗೆ ಬೇರೆ ಬೇರೆ ಕಾಯಿಲೆಗೆ ಬೇರೆ ಬೇರೆ ಭತ್ತ. ಅಲ್ಲದೇ ಒಂದೊಂದು ಅಡುಗೆಗೆ ಒಂದೊಂದು ಭತ್ತ. ಅದರಲ್ಲೂ ಕರಿ ಭತ್ತ ಉತ್ತರ ಕನ್ನಡ ಜಿಲ್ಲೆಯ ನೆರೆಯ ನೀರಿನಲ್ಲೂ ಬೆಳೆಯುವಂಥದ್ದು.

ತಮ್ಮ ಬಾಲ್ಯದಲ್ಲಿ ಹಳ್ಳಿಯಲ್ಲಿ ಉಂಡು ಬೆಳೆದ ಭತ್ತವನ್ನು ನೋಡುವ ಸಲುವಾಗಿಯೇ ಹಿರಿಯರನೇಕರು ಬಂದಿದ್ದರೆ, ಇನ್ನು ಕೆಲವರು ಪರಿಚಯಿಸಿಕೊಂಡು ಕೊಳ್ಳುವ ಉತ್ಸಾಹದಲ್ಲಿದ್ದರು, ಕೆಲವು ಹವ್ಯಾಸೀ ರೈತರು ಭತ್ತ ಬೆಳೆದವರ ಅನುಭವ ತಿಳಿದುಕೊಳ್ಳುತ್ತಿದ್ದರು. ಯಾದಗಿರಿ ಜಿಲ್ಲೆಯ ದೇವೇಂದ್ರಪ್ಪ ಭೋಯಿ, ಈ ತಳಿಯ ಹುಲ್ಲು ಎತ್ತರಕ್ಕೆ ಬೆಳೆಯುತ್ತದೆ. ರಾಸಾಯನಿಕ ಉಪಯೋಗಿಸಿದರೆ ಹುಲ್ಲು ಸೊಕ್ಕಿ ಬೆಳೆದು ಫಸಲು ಬಂದ ಕೂಡಲೇ ಗಿಡ ಬಾಗಿ ಫಸಲು ನಷ್ಟವಾಗುವುದು. ದೇಶೀ ಪದ್ಧತಿಯಲ್ಲಿ ಬೆಳೆಯುವುದರಿಂದ ಫಸಲು ಕಡಿಮೆ. ಆದರೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ”, ನವರ ಬೆಳೆದ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಒಂದು ದಿನದಲ್ಲೆಲ್ಲಾ ತಾವು ಮಾರಾಟಕ್ಕೆಂದು ತಂದ ಅಕ್ಕಿ ಖಾಲಿಯಾಗಿದ್ದಕ್ಕೆ ಕಾರಣ ವಿವರಿಸುತ್ತಿದ್ದರು.

ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿ ಪ್ರಾತ್ಯಕ್ಷಿಕವಾಗಿ ತೋರಿಸಲಾಗಿತ್ತು. ಕೆಂಪಕ್ಕಿಯನ್ನು ಬಳಸಿ ಅಕ್ಕಿಯುಂಡೆ, ಅಕ್ಕಿ ರೊಟ್ಟಿ, ಮೊಸರನ್ನ ಮಾಡಿ ಮಾರಾಟಕ್ಕಿರಿಸಲಾಗಿತ್ತು. ಅಕ್ಕಿಯುಂಡೆಯಂತೂ ವಿಶಿಷ್ಟ ಪರಿಮಳದೊಂದಿಗೆ ಹುಚ್ಚೆಳ್ಳು ಚಟ್ನಿಯೊಂದಿಗೆ ರುಚಿಕರವಾಗಿತ್ತು.

ಇವೆಲ್ಲಾ ಒಂದೇ ಸೂರಿನಡಿ ಕಾಣಸಿಕ್ಕಿದ್ದು ಸಹಜ ಸಮೃದ್ಧ ಬೆಂಗಳೂರಿನ ಗಾಂಧಿ ಭವನದಲ್ಲಿ ಮೇ 14, 15ರಂದು  ಆಯೋಜಿಸಿದ್ದ ಕೆಂಪಕ್ಕಿ ಸಂತೆಯಲ್ಲಿ. ಎರಡು ದಿನ ನಡೆದ ಈ ಮೇಳದಲ್ಲಿ ಅನ್ನ ತಿನ್ನಿ(ಲೇ:  ಡಾ. ಸತ್ಯನಾರಾಯಣ ಭಟ್, ಡಾ.ಪ್ರೇಮಾ  - 25 ರೂಪಾಯಿ( ಎಂಬ ಪುಸ್ತಕವನ್ನೂ ಬಿಡುಗಡೆಗೊಳಿಸಲಾಯ್ತು. ಆಗಮಿಸಿದ್ದ ಗಣ್ಯರು ಅನ್ನದ ಮಹತ್ವದ ಬಗ್ಗೆ ಉಪನ್ಯಾಸವನ್ನೂ ಕೊಟ್ಟರು.

Friday, June 03, 2011

ರೆಕ್ಕೆ ಮುರಿದ ಹಕ್ಕಿಗೆ ರೇಖಿ ಚಿಕಿತ್ಸೆ

ಭಾನುವಾರದ ಬೆಳಿಗ್ಗಿನ ಜಾವ, ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ...  ಎದುರು ಮನೆಯ ಚಿಕ್ಕಪ್ಪನ ಮಗ ಬಂದು, "ಪಾಲಣ್ಣ, ಪಾಲಣ್ಣ ಬೇಗ ಬಾ.. ತೋಟದಲ್ಲಿ ಒಂದು ಹಕ್ಕಿ... ಹಾರುಕಾತ್ತಿಲ್ಲ ಅದ್ಕೆ.. ಇರ್ವೆ ಮುತ್ತಿತ್ " ಎಂದು ಕರೆದಾಗ ಒಂದು ರೀತಿಯ ಕಿರಿಕಿರಿಯಾಯ್ತು. ಕರುಣೆ, ಮಮಕಾರ ಪ್ರಾಣಿ ಪ್ರಪಂಚದಲ್ಲಿಲ್ಲ. ಅವು ಸಹಜವಾಗಿ ಜೀವಿಸುವಂಥದ್ದು. ಯಾವುದು ಸಬಲವೋ ಅದು ಬದುಕುತ್ತದೆ.. ಎಂಬೆಲ್ಲಾ ಆಲೋಚನೆ ಹೊಳೆದು ತಮ್ಮನಿಗೆ ವಿವರಿಸ ಹೊರಟರೆ, "ಏ ಎಂಥದಾ ನೀನು, ಪಾಪ ಅದು" ಎಂದು ನನ್ನ ಕೈ ಹಿಡಿದು ಎಳೆದುಕೊಂಡೇ ಹೊರಟ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)