Saturday, November 29, 2008

Aperture ಮತ್ತು Depth of Field

Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾದ ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಅಧಿಕವಾಗಿರುತ್ತದೆ. ಬೆಳಕಿಂಡಿಯನ್ನು ಛಾಯಾಗ್ರಹಣದಲ್ಲಿ f/2.8, f/4, f/5.2, f/8 ಎಂದು 'f-stops'ಎಂಬ ಮಾನ ದಂಡದಿಂದ ಅಳೆಯುತ್ತಾರೆ. ಇಲ್ಲಿ 'f-stops'ನ ಬೆಲೆ ಜಾಸ್ತಿಯಾದಂತೆ ಬೆಳಕಿಂಡಿಯ ಗಾತ್ರ ಕಿರಿದಾಗುತ್ತದೆ ಮತ್ತು ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ f/8 ಗಿಂತ f/2.8ನ ಬೆಳಕಿಂಡಿ ದೊಡ್ಡದು.ಆದರೆ ಈ ಬೆಳಕಿಂಡಿ ಕೇವಲ ಬೆಳಕನ್ನು ನಿಯಂತ್ರಿಸುವುದೂ ಅಲ್ಲದೇ "Depth of Field"ನ ಮೇಲೂ ತನ್ನ ಪರಿಣಾಮ ಬೀರುತ್ತದೆ. ಪಕ್ಕದ ಚಿತ್ರದಲ್ಲಿ ಮರದೆಲೆಯ ಚಿಗುರು ಸ್ಪುಟವಾಗಿ ಕಾಣಿಸಿ ಹಿಂದಿನ ಗುಡ್ಡವು ಅಸ್ಪಷ್ಟವಾಗಿದೆ. ಅಂದರೆ ಈ ಚಿತ್ರದಲ್ಲಿ "Depth of Field"ಕಡಿಮೆಯಿದೆ. ಇಲ್ಲಿ ಚಿಗುರು ನನ್ನ ಪ್ರಧಾನ ವಿಷಯವಾಗಿದ್ದು, ಚಿತ್ರ ನೋಡುವವರ ಗಮನ ಹಿನ್ನೆಲೆಗೆ ಸರಿಯುವುದನ್ನು ತಡೆಯಲು ಅದನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5. ಅಂದರೆ ಬೆಳಕಿಂಡಿ ಹೆಚ್ಚಾದಂತೆಲ್ಲಾ "Depth of Field" ಕಡಿಮೆಯಾಗುತ್ತದೆ. ಇದೇ ಚಿತ್ರವನ್ನು f/8 ನಿಂದ ತೆಗೆದಿದ್ದರೆ "Depth of Field" ಜಾಸ್ತಿಯಾಗಿ ಗುಡ್ಡವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಈ ಮೇಲಿನ ಎರಡು ಚಿತ್ರಗಳಲ್ಲಿ ಮಿಡತೆ ನನ್ನ ವಿಷಯ. ಆದರೆ ಸೂಕ್ಷವಾಗಿ ಗಮನಿಸಿದಾಗ ಇವೆರಡರ ನಡುವಿನ "Depth of Field" ವ್ಯತ್ಯಾಸ ತಿಳಿಯುತ್ತದೆ. ಮೊದಲ ಚಿತ್ರದಲ್ಲಿ ಕಣ್ಣು, ಮುಖ ಮಾತ್ರ ಸ್ಪುಟವಾಗಿದ್ದರೆ, ಎರಡನೆಯದರಲ್ಲಿ ಕಣ್ಣು, ಕಾಲು, ರೆಕ್ಕೆ ಎಲ್ಲವೂ ಸ್ಪುಟವಾಗಿದೆ. ಮೊದಲ ಚಿತ್ರಕ್ಕೆ f/3.5 ಹಾಗೂ ಎರಡನೆಯದ್ದಕ್ಕೆ f/8 ಬಳಸಿದ್ದರಿಂದ ಈ ವ್ಯತ್ಯಾಸ.ಸಾಮಾನ್ಯವಾಗಿ "landscape"ನಲ್ಲಿ
ಮುನ್ನೆಲೆ, ನಡುನೆಲೆ('middle ground'ಗೆ ಪರ್ಯಾಯವಾಗಿ), ಹಿನ್ನೆಲೆ ಎಲ್ಲವೂ ಸ್ಪುಟವಾಗಿರಬೇಕಾದ್ದರಿಂದ ಕಡಿಮೆ ಬೆಳಕಿಂಡಿಯನ್ನು ಉಪಯೋಗಿಸಬಹುದು. ಕೆಳಕಿನ ಚಿತ್ರದಲ್ಲಿ ಮುನ್ನೆಲೆಯ ಮಂಟಪ, ನಡುನೆಲೆಯ ಹುಲು ಮಾನವರು, ಹಿನ್ನೆಲೆಯ ಬೆಟ್ಟ ಎಲ್ಲವೂ ಸ್ಪುಟವಾಗಿ ಕಾಣಿಸಲು f/8 ಬಳಸಿದ್ದೇನೆ.portrait ಮತ್ತು Macro ದಲ್ಲಿ ಕೇವಲ ವಿಷಯಕ್ಕೆ ಮಹತ್ವ ಕೊಡುವುದರಿಂದ ಹೆಚ್ಚಿನ ಬೆಳಕಿಂಡಿಯನ್ನು ಉಪಯೋಗಿಸಿ ಉಳಿದದ್ದನ್ನು ಅಸ್ಪಷ್ಟವಾಗಿಸಬಹುದು. ಈ ಕೆಳಗಿನ ಚಿತ್ರದಲ್ಲಿ ಹಿನ್ನೆಲೆಯನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5


ನನ್ನ ಮೃದಂಗಾಭ್ಯಾಸ

ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವಳಲ್ಲ. ಆದ್ದರಿಂದ ಸಂಗೀತದ ಗಂಧ ಗಾಳಿ ಇಲ್ಲದೇ ಇದ್ದರೂ, ಮನೆಯಲ್ಲಿ ಅಪ್ಪ ಹಾಕುತ್ತಿದ್ದ ಕಾಳಿಂಗರಾಯರದ್ದೊ, ಅಶ್ವಥ್ಥರದ್ದೋ, ರಫಿಯದ್ದೋ ಗಾನ ಸುಧೆಯಲ್ಲಿ ತೇಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಬ್ಬನೇ ಹಾಡಿಕೊಂಡು ಚಪಲ ತೀರಿಸಿಕೊಂಡದ್ದು ಇದೆ. ಅಲ್ಲದೆ ಚಿಕ್ಕಂದಿನಲ್ಲಿ ಊರಲ್ಲಾಗುತ್ತಿದ್ದ ಬಯಲಾಟದ ಚಂಡೆ, ಮದ್ದಳೆ, ಭಾಗವತಿಗೆ ಕೇಳಿ ಮನೆಯಲ್ಲಿರುವ ಪಾತ್ರೆ, ಡಬ್ಬಿ ಸೌಟು ಹಿಡಿದುಕೊಂಡು ಅವರನ್ನು ಅನುಸರಿಸ ಹೋಗಿ ಅಮ್ಮನಿಂದ ಬೈಸಿಕೊಂಡದ್ದಿದೆ.ಇಂಜಿನಿಯರ್ಗೆಂದು ಊರನ್ನು ಬಿಟ್ಟು, ಸ್ವತಂತ್ರವಾದ ನನ್ನ ಮನಸ್ಸಿಗೆ ಸಂಗೀತ ಕಲಿಯಬೇಕೆಂಬ ಹಂಬಲ ಒಂದು ಮೂಲೆಯಲ್ಲಿ ಮೊಳೆತಿತ್ತು.ಹುಟ್ಟಿನಿಂದಲೇ ಆಲಸಿಯಾದ ನಾನು ಯಾವ ಬಗೆಯ ಸಂಗೀತ, ಯಾವ ಗುರುಗಳಲ್ಲಿ ಕಲಿಯಬೇಕು ಎಂಬ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೇ ಸುಖವಾಗಿದ್ದೆ. ಹಂಬಲ ಜಾಸ್ತಿಯಾದಾಗ ಗುರುಗಳು ತಾನಾಗಿಯೇ ಒಲಿಯುತ್ತಾರೆ ಎಂಬ ಮಾತು ನನ್ನ ಜೀವನದಲ್ಲಿ ದಿಟವಾಯ್ತು. ನನ್ನ ವಿದ್ಯಾರ್ಥಿ ನಿಲಯದವನೇ ಆದ ರಾಮಮೂರ್ತಿ ತಬಲಾ ಕಲಿಯುವ ತನ್ನ ಹಂಬಲವನ್ನು ವ್ಯಕ್ತಪಡಿಸಿ, ಗುರುಗಳನ್ನೂ ಹುಡುಕಿರುವುದಾಗಿ ತಿಳಿಸಿದ. ತಬಲಾ ಆದರೆ ತಬಲಾ, ಎನೋ ಒಂದು ಕಲಿತರಾಯಿತು ಎಂದು ನಿರ್ಧರಿಸಿ ನಾನೂ ಅವನ ಜೊತೆ ಸೇರಿದೆ.ನಮ್ಮ ಗುರುಗಳು ಎಂದರೆ ಸಂಗೀತದ ಮಹಾ ವಿದ್ವಾಂಸರು ಎಂದು ಭಾವಿಸಬೇಡಿ, ಅವರು ನಾವು ಕಲಿಯುತ್ತಿದ್ದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಬಿಡುವಿನ ವೇಳೆಯಲ್ಲಿ ಊರಲ್ಲಿ ಕೆಲವೊಮ್ಮೆ ನಡೆಯುವ ಭಾವಗೀತೆ, ಸುಗಮ ಸಂಗೀತಗಳಂತಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದರು. ಒಳ್ಳೆಯ ದಿನವೊಂದನ್ನು ಗೊತ್ತು ಮಾಡಿ, ಶಾರದಾ ಮಂದಿರಕ್ಕೆ ತೆರಳಿ, ಆಕೆಯ ಆಶೀರ್ವಾದ ಪಡೆದು, ಬರಿಗೈಯಲ್ಲಿ ಗುರುಗಳ ಮನೆಗೆ ಹೋದೆವು. ನಮ್ಮನ್ನು ಕಂಡು ಮೊದಲು ಹೇಳಿಕೊಡಲು ಒಲ್ಲೆ ಎಂದರೂ, ರಾಮಮೂರ್ತಿ ಪರಿಪರಿಯಾಗಿ ಕಾಡಿದ್ದರಿಂದ ಕೊನೆಗೆ ಒಪ್ಪಿಕೊಂಡರು. ವಾರಕ್ಕೆ ೨ ತರಗತಿ ಮಂಗಳವಾರ ಹಾಗೂ ಗುರುವಾರದಂದು, ತಿಂಗಳಿಗೆ ೭೫ರೂ ಶಿಕ್ಷಣಶುಲ್ಕ.ಶುಲ್ಕವನ್ನು ಕಲಿಕೆಯಲ್ಲಿ ನಮಗೆ ಶ್ರದ್ಧೆ ಇರಲಿ ಎಂದು ತೆಗೆದುಕೊಳ್ಳುತ್ತಿದ್ದರಲ್ಲದೇ ಅದರಿಂದ ತಮ್ಮ ಜೀವನ ಸಾಗಿಸುವ ಆವಶ್ಯಕತೆ ಅವರಿಗೆ ಇರಲಿಲ್ಲ.ಅಂದಿನಿಂದಲೇ ನಮ್ಮ ಶಿಕ್ಷಣ ಆರಂಭವಾಯಿತು; ಮೊದಲಿಗೆ ಸಂಗೀತದ ಪರಿಚಯ. ನಾವು ತಿಳಿದಂತೆ ನಮ್ಮ ಗುರುಗಳು ತಬಲಾ ವಾದಕರಾಗಿರದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದಕರಾಗಿದ್ದರು. ತಾಳಗಳ ಬಗ್ಗೆ ವಿವರಿಸುತ್ತಾ ಆದಿ ತಾಳದಿಂದ ನಮ್ಮ ಪಾಠವನ್ನು ಆರಂಭಿಸಿದರು. ನಮ್ಮ ಮೊದಲ ಪಾಠವಾದ ತ, ದಿ, ತೊಂ, ನಂ ಇವನ್ನು ಬರೆಸಿ ಕಂಠಪಾಠ ಮಾಡಿಸಿ, ಕೈಯಲ್ಲಿ ತಾಳ ಹಾಕಿ, ಅಭ್ಯಾಸ ಮಾಡಿಸಿದರು. ಕಾಲೇಜಿಗೆ ಹೋಗುವಂತೆಯೇ ಎರಡು ಹಾಳೆ ಮತ್ತೊಂದು ಪೆನ್ನು ತೆಗೆದುಕೊಂಡು ಹೋಗಿದ್ದ ನನಗೆ ಗುರುಗಳು, ತಮ್ಮ ೨೫ ವರ್ಷಗಳಿಗಿಂತಲೂ ಹಳೇಯದಾದ ಪುಸ್ತಕಗಳನ್ನು ತೋರಿಸುತ್ತಾ, ಮುಂದಿನ ಬಾರಿ ಬರುವಾಗ ಹೊಸದೊಂದು ಪುಸ್ತಕ ಕೊಂಡು ಈ ಅಭ್ಯಾಸಕ್ಕೆ ಮೀಸಲಾಗಿರಿಸಿ ಜೋಪಾನವಾಗಿ ಇರಿಸಿ ಕೊಳ್ಳಬೇಕೆಂದು ಹೇಳಿದರು . ಎದುರು ಗಡೆ ಇಟ್ಟ ಮೃದಂಗದಲ್ಲಿ ಎಂದಿಗೆ ನನ್ನ ಕೈಚಳಕ ತೋರಿಸುವೆನೋ ಎಂದು ಕಾತರನಾಗಿದ್ದೆ. ಜನಾರಣ್ಯದಲ್ಲಿ ಬಾಯಿಬಿಡದ ಸಂಕೋಚ ಸ್ವಭಾವದ ನನ್ನ್ನ ಬಾಯಿಯಿಂದ ಪಾಠವನ್ನು ಹೊರಡಿಸಲು ಗುರುಗಳು ಹರಸಾಹಸ ಪಟ್ಟರು. ನಂತರ ಮೃದಂಗ ತಮ್ಮ ಕೈಗಿತ್ತುಕೊಂಡು ತ,ದಿ,ತೊಂ, ನಂ ಎಲ್ಲಿ ಹೊಡೆಯಬೇಕು ಎಂದು ತೋರಿಸಿಕೊಟ್ಟರು. ಮೃದಂಗ ನನ್ನ ಕೈಗೆ ಬಂದ ನಂತರ ಒಂದು ಬಗೆಯ ಅಳುಕು, ಗಟ್ಟಿಯಾಗಿ ಹೊಡೆದರೆ ಎಲ್ಲಿ ಅದರ ಚರ್ಮ ಹರಿದು ಹೋಗುವುದೋ ಎಂಬ ಭೀತಿ, ಆದ್ದರಿಂದ ತುಂಟ ಮಕ್ಕಳ ಕೆನ್ನೆಯನ್ನು ಪ್ರೀತಿಯಿಂದ ನೇವರಿಸುವಂತೆ ಅದರ ಮೇಲೆ ಕೈ ಆಡಿಸಿದೆ. ಗುರುಗಳು ಕೈಯೂರಿ ನುಡಿಸಬೇಕು, ನಾದ ಹೊಮ್ಮಬೇಕು ಎಂದು ಇನ್ನೊಮ್ಮೆ ತೋರಿಸಿಕೊಟ್ಟರು. ಒಡೆದು ಹೋಗಲಾರದು ಎಂಬ ಭರವಸೆಯ ಮೇರೆಗೆ ಗಟ್ಟಿಯಾಗಿ ಎಡಗಡೆಗೆ ತ ಎಂದು ಪ್ರಹಾರ ಮಾಡಿದರೆ ನಾದದ ಜೊತೆ ಮೃದಂಗ ಬಲಕ್ಕೆ ವಾಲಿತು. ದಿ, ನಂ ಗಳನ್ನು ಬಲಗಡೆ ಹೊಡೆದು ಸ್ವಲ್ಪ ಮಟ್ಟಿಗೆ ಅದನ್ನು ಯಥಾ ಸ್ಥಾನಕ್ಕೆ ಕೂರಿಸುತ್ತಿದ್ದೆನಾದರೂ ನನ್ನ ತ, ತೊಂ ಪ್ರಹಾರ ಅದಕ್ಕಿಂತ ಬಲವಾಗಿ, ಟೈಪ್ ರೈಟರ್ನಂತೆ ಮೃದಂಗ ಬಲಗಡೆ ಸರಿಯುತ್ತಿತ್ತು. ಆಗಾಗ ಅದನ್ನು ಮೊದಲಿನ ಸ್ಥಳಕ್ಕೆ ಸರಿಸುತ್ತಾ, ತಾಳ ತಪ್ಪುತ್ತಾ ಇದ್ದ ನನ್ನ ಅವಸ್ಥೆ ನೋಡಲಾರದೆ ಮೃದಂಗ ಹಿಡಿದುಕೊಳ್ಳಬೇಕಾದರೆ ಮಡಿಸಿದ ಎಡ ಮಂಡಿಯ ಒತ್ತಡ ಅದರ ಮೇಲೆ ಹೇರಬೇಕಾಗಿ ಸೂಚಿಸಿದರು. ಮೊದಲ ದಿನ ನಾನು ತಿಳಿದ ವಿಷಯ ಬಹಳವಾಗಿತ್ತು ಭಾರತದ ಸಂಗೀತ ಪ್ರಭೇದ, ರಾಗ, ತಾಳಗಳ ಕಿರುಪರಿಚಯ, ತದಿತೊಂನಂ, ಮೃದಂಗ ಹಿಡಿದುಕೊಳ್ಳುವುದು.ಮುಂದಿನ ತರಗತಿಯಲ್ಲಿ ಕಾಲಗಳ ಪರಿಚಯ ಮಾಡಿಕೊಟ್ಟು ಎರಡನೇ, ಮೂರನೇ ಕಾಲದಲ್ಲಿ ಹಿಂದಿನ ದಿನದ ಪಾಠವನ್ನು ನುಡಿಸುವುದು ಹೇಗೆ ಎಂದು ಕಲಿಸಿಕೊಟ್ಟರು. ಗುರುಗಳ ಪಾಠವೇನೋ ಸಾಗುತ್ತಿತ್ತು, ಆದರೆ ಆಭ್ಯಾಸ ಮಾಡಲು ಮೃದಂಗ ನಮ್ಮ ಬಳಿ ಇರಲಿಲ್ಲ. ಸುಮಾರು ೧,೫೦೦ಕ್ಕೆ ಹೊಸದು ಸಿಗುತ್ತಿತ್ತಾದರೂ ನಮ್ಮಿಬ್ಬರ ಬಳಿ ಅಷ್ಟು ಹಣವಿರಲಿಲ್ಲ, ಮನೆಯವರಿಂದ ಕೇಳಿ ತರಿಸಿಕೊಳ್ಳೋಣ ಎಂದರೆ, ನಾವು ಕಲಿಯುತ್ತಿರುವುದನ್ನು ಅವರಿಗೆ ತಿಳಿಸದೆ, ಕಲಿತ ಮೇಲೆ ನಮ್ಮ ಕೈಚಳಕ ಒಮ್ಮೆಲೇ ತೋರಿಸಿ ಅವರನ್ನು ಚಕಿತಗೊಳಿಸಬೇಕೆಂಬ ಹಂಬಲ. ಕೊನೇಗೆ ನಮ್ಮ ವಿದ್ಯಾರ್ಥಿನಿಲಯದ ಮೇಜಿನಲ್ಲೇ ಮೃದಂಗದಲ್ಲಿರುವಂತೆ ವೃತ್ತ ಬರೆದು ನಮ್ಮ ಅಭ್ಯಾಸ ಆರಂಭಿಸಿದೆವು. ಮೊದಲು ಒಬ್ಬ ತಾಳ ಹಾಕುವುದು, ಇನ್ನೊಬ್ಬ ಮೇಜಿನ ಮೇಲೆ ಬಡಿಯುವುದು, ಪುಣ್ಯಕ್ಕೆ ನಮ್ಮ ಮಿತ್ರರಾರೂ ಇದಕ್ಕೆ ಆಕ್ಷೇಪ ಎತ್ತಲಿಲ್ಲ. ಹೀಗೆ ನಮ್ಮ ಅಭ್ಯಾಸ ಸಾಗುತ್ತಿರಬೇಕಾದರೆ ನಮ್ಮ ಗುರುಗಳ ಮಿತ್ರರೊಬ್ಬರು ತಮ್ಮ ಮಗ ಕಲಿತು ಬಿಟ್ಟ ಮೃದಂಗವನ್ನು ಅಭ್ಯಾಸ ಮಾಡಲು ತೆಗೆದುಕೊಂಡು ಹೋಗಬಹುದಾಗಿ ತಿಳಿಸಿದರು.ವಿದ್ಯಾರ್ಥಿನಿಲಯದ ಉಪ್ಪರಿಗೆಯ ಖಾಲಿ ಕೋಣೆಯಲ್ಲಿ ನಮ್ಮ ಅಭ್ಯಾಸ ತರಗತಿಯನ್ನು ಆರಂಭಿಸಿದೆವು. ಮೃದಂಗ ಸಿಕ್ಕಿದ ಮಾರನೆಯ ದಿನದಿಂದ ಕೆಲವು ತಿಂಗಳುಗಳವರೆಗೆ ಎಡಬಿಡದೆ ನಮ್ಮ ಅಭ್ಯಾಸದಲ್ಲಿ ತೊಡಗಿಕೊಂಡೆವು. ನಾವು ಮೂರನೇ ಕಾಲದವರೆಗೂ ನುಡಿಸುವುದನ್ನು ಕಲಿಯುವುದು ಪದ್ಧತಿಯಾದರೂ, ನಮಗೆ ಬೇಸರ ಬರಬಾರದೆಂದು ಗುರುಗಳು ನಾವು ಮೂರನೇ ಕಾಲದಲ್ಲಿ ನುಡಿಸಿ ತೋರಿಸುವುದರೊಳಗಾಗಿ ಮುಂದಿನ ಪಾಠವನ್ನು ಹೇಳಿ ಕೊಡುತ್ತಿದ್ದರು. ಮುಂದೆ ಕಲಿತ ತಕಿಟಕಿಟತಕ, ತಕಿಟಕಿಟತಕ ಕಿಟತಕತಾಕಿಟತಕ ತರಿಕಿಟತಕ ಮೊದಲಾದ ಪಾಠಗಳು ತುಂಬಾ ಸಂತೋಷ ಕೊಟ್ಟವು. ಅದಾಗಲೇ ಸಂಗೀತಾಭ್ಯಾಸದ ಗುಂಪಿಗೆ ಸೇರಿದ್ದ ನಾವು ಅಲ್ಲಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೂ ಹೋಗತೊಡಗಿದೆವು. ನಮಗೀಗಾಗಲೇ ತಿಳಿದಿದ್ದ ಆದಿತಾಳದ ಹಾಡು ಹಾಡತೊಡಗಿದರಂತೂ ಮೈಯೆಲ್ಲಾ ಕಿವಿಯಾಗಿಸಿ ಮನದಲ್ಲೇ ತಾಳ ಹಾಕ ತೊಡಗಿದ್ದೆವು.ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಬೇಕಾದರೆ ಸೆಮಿಸ್ಟರ್ನ ಕೊನೆ ಬಂದು ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡಿವು ದೊರಕಿತ್ತು. ಪರೀಕ್ಷೆ ಮುಗಿಸಿ, ಊರಿಗೆ ತೆರಳಿ ರಜಾ ದಿನಗಳಲ್ಲಿ ಮೃದಂಗವನ್ನು ಸಂಪೂರ್ಣವಾಗಿ ಮರೆತು, ಮತ್ತೆ ಕಾಲೇಜಿಗೆ ಬಂದು ಹಳೇಯ ಪಾಠಗಳನ್ನು ಅಭ್ಯಸಿಸಿ ಒಂದು ತಿಂಗಳ ನಂತರ ಗುರುಗಳ ಬಳಿಗೆ ಮರಳಿದೆವು. ೪ ತಿಂಗಳ ಒಡನಾಟದಿಂದ ಗುರುಗಳು ನಮಗೆ ಆಪ್ತರಾಗಿದ್ದರು, ಮನೆಗೆ ಹೋದೊಡನೆ ಕಾಫಿ, ಅವಲಕ್ಕಿ ಅಥವಾ ಏನಾದರೂ ಕುರುಕುಲು ತಿಂಡಿ ಲಭಿಸುತ್ತಿತ್ತು. ಕಾಫಿ ಹೀರುತ್ತಾ ಸುಮಾರು ಅರ್ಧಗಂಟೆ ಕಳೆದ ನಂತರವಷ್ಟೆ ನಮ್ಮ ಪಾಠ ಆರಂಭವಾಗುತ್ತಿತ್ತು. ಅವರು ಹೇಳಿ ಕೊಡುತ್ತಿದ್ದ ಅ, ಆ, ಇ, ಈ ಕಲಿಯುತ್ತಿದ್ದೆನಾದರೂ ಇವನ್ನೆಲ್ಲಾ ಸೇರಿಸಿ ನನ್ನದೇ ವಾಕ್ಯ ರಚನೆಯ ಕಲೆ ನನಗೆ ಸಿದ್ಧಿಸುತ್ತಲೇ ಇರಲಿಲ್ಲ.ಹೀಗೆ ವರ್ಷದಲ್ಲಿ ಸುಮಾರು ೭ ತಿಂಗಳು ಪಾಠ ಹೇಳಿಸಿಕೊಳ್ಳುವ ಅವಕಾಶ ಸಿಗುತ್ತಿತ್ತಾದರೂ ನನಗೆ ಕಲಿಕೆಯಲ್ಲಿ ಕ್ರಮೇಣ ಆಸಕ್ತಿ ಕುಂದ ತೊಡಗಿತು. ಅದೇ ನೀರಸ ಅಭ್ಯಾಸ, ಒಂದು ಸ್ವಂತಿಕೆಯಿಲ್ಲ, ಒಂದು ಭಾವನೆಯಿಲ್ಲ, ಶಾಲೆಯಲ್ಲಿನ ಡ್ರಿಲ್ನಂತೆ. ಆದರೂ ರಾಮಮೂರ್ತಿಗಾಗಿ ಅವನೊಡನೆ ಪಾಠ ಹೇಳಿಸಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಲು ನಮ್ಮ ಕಾಲೇಜಿನ ಕೊನೇಯ ವಾರ್ಷಿಕೋತ್ಸವ ಕಾಲಿಟ್ಟಿತು. ಪ್ರತೀ ವರ್ಷ ವಿಧ್ಯಾರ್ಥಿನಿಲಯದ ಹುಡುಗರು ನಮ್ಮಿಬ್ಬರಿಂದ ಒಂದು ಕಾರ್ಯಕ್ರಮವನ್ನು ನಿರೀಕ್ಷಿಸುತ್ತಿದ್ದರು. ನಾವು ಮುಂದಿನವರ್ಷ ಎಂದು ತಳ್ಳಿ ಹಾಕಿ, ಕೊನೇಯ ವರ್ಷದಲ್ಲೂ ಏನು ಮಾಡಬೇಕೆಂದು ತೋಚದೆ ನಮ್ಮ ಹುಡುಗರ ಉತ್ಸಾಹಕ್ಕೆ ತಣ್ಣೀರೆರೆಚಿದೆವು.ಕೊನೇಯ ಪರೀಕ್ಷೆಯನ್ನು ಮುಗಿಸಿ ಗುರುಗಳಿಗೆ ಕಾಣಿಕೆಯೊಪ್ಪಿಸಿ, ಮೃದಂಗವನ್ನು ಅವರ ಮಿತ್ರರಿಗೆ ಮರಳಿಸಿ ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡುವು ಕೊಟ್ಟೆವು. ಮರಳುವಾಗ ಬಿಡುವಿನ ಸಮಯವನ್ನು ಮೃದಂಗ ಕಲಿಕೆಗೆ ಮೀಸಲಾಗಿಡಿ, ನೀವು ಚೆನ್ನಾಗಿಯೇ ಕಲಿಯುತ್ತಿದ್ದೀರಿ ಎಂದು ಗುರುಗಳು ಹರಸಿದರು. ಬೆಂಗಳೂರಿಗೆ ಬಂದು ಹೊಟ್ಟೇಪಾಡಿನ ಚಿಂತೆಯಲ್ಲಿ ಮೃದಂಗ ಕಲಿಕೆಯ ಯೋಚನೆ ನನ್ನಿಂದ ದೂರ ಉಳಿದು ಬಿಟ್ಟಿತು. ರಾಮಮೂರ್ತಿ ಮಾತ್ರ ಹೊಸ ಗುರುಗಳನ್ನು ಕಂಡು, ಹೊಸ ಮೃದಂಗ ಕೊಂಡು ಮತ್ತೆ ಅಭ್ಯಾಸ ಆರಂಭಿಸಿರುವುದಾಗಿ ಹಿಂದೊಮ್ಮೆ ಸಿಕ್ಕಾಗ ಹೇಳಿದ್ದ. ಆದಿ ತಾಳದಿಂದ ಆರಂಭವಾದ ನನ್ನ ಕಲಿಕೆ ಮಾತ್ರ ಆದಿಯಲ್ಲೇ ಕೊನೆಗೊಂಡಿತು.

Saturday, November 22, 2008

ಛಾಯಾಗ್ರಹಣದಲ್ಲಿ "Shutter Speed" ನ ಪಾತ್ರ

ಕ್ಯಾಮರಾದ ಸೆನ್ಸರ್ ಎಷ್ಟು ಸಮಯ ನೀವು ತೆಗೆಯುವ ಚಿತ್ರವನ್ನು ನೋಡುತ್ತದೆಯೋ ಆ ಕಾಲಾವಧಿಯೇ "Shutter Speed". ಇದನ್ನು ಸಾಮಾನ್ಯವಾಗಿ ೧/೧೦೦೦, ೧/೨೦೦, ೧/೬೦ ಮುಂತಾದ ಕ್ಷಣದ ಭಾಗದಲ್ಲಿ ಅಳೆಯುತ್ತಾರೆ. ಇಲ್ಲಿ ಭಾಜಕ ಕ್ಷಣದ ಭಾಗವನ್ನೂ, ಭಾಜ್ಯ ಕ್ಷಣವನ್ನೂ ಸೂಚಿಸುತ್ತದೆ. ಆದ್ದರಿಂದ ಭಾಜಕ ಹೆಚ್ಚಾದಂತೆಲ್ಲಾ "Shutter Speed" ಜಾಸ್ತಿಯಾಗುತ್ತದೆ ಮತ್ತು ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕನ್ನು ಪಡೆಯುತ್ತದೆ. "Shutter Speed" ೧/೬೦ ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಸಾಮಾನ್ಯವಾಗಿ ತೆಗೆದ ಚಿತ್ರದಲ್ಲಿ ಅಸ್ಪಷ್ಟತೆ ಇರುವುದರಿಂದ, ಇಂತಹ ಸಂದರ್ಭದಲ್ಲಿ ಟ್ರೈಪೋಡ್ ನ ನೆರವು ಅಗತ್ಯವಿರುತ್ತದೆ.ನೀವು ತೆಗೆಯ ಹೊರಟ ಚಿತ್ರಕ್ಕೆ ಯಾವ "Shutter Speed" ಎಂದು ಅದರ ಚಲನೆಯನ್ನು ಗಮನಿಸಿ ನಿರ್ಧರಿಸಬಹುದು. ವೇಗವಾಗಿ ಚಲಿಸುವ ವಾಹನ, ಹರಿಯುವ ನೀರು, ಉಯ್ಯಾಲೆಯಲ್ಲಿ ಆಡುತ್ತಿರುವ ಮಕ್ಕಳು ಮುಂತಾದ ಚಲಿಸುವ ವಿಷಯವಾಗಿದ್ದಲ್ಲಿ, ಹೆಚ್ಚಿನ "Shutter Speed" ಬಳಸಿ, ಆ ಚಲನೆಯನ್ನು ನಿಮ್ಮ ಚಿತ್ರದಲ್ಲಿ ಸ್ತಬ್ಧಗೊಳಿಸಬಹುದು. ಗುಡ್ಡ, ಬೆಟ್ಟ, ಮರ ಮುಂತಾದ ಚಲಿಸದ ವಿಷಯವಾಗಿದ್ದಲ್ಲಿ ಇದನ್ನು ಕಡಿಮೆಮಾಡಬಹುದು. ಕೆಳಗಿನ ಚಿತ್ರದಲ್ಲಿ ಜೇನಿನ ಚಲನೆಯನ್ನು ಸ್ತಬ್ಧಗೊಳಿಸಲು ನಾನು ಉಪಯೋಗಿಸಿದ "Shutter Speed" ೧/೫೦೦.
ಮೇಲೆ ತಿಳಿಸಿದಂತೆ ಚಲಿಸುವ ವಸ್ತುಗಳನ್ನು ಸ್ತಬ್ಧಗೊಳಿಸಲು ಹೆಚ್ಚಿನ "Shutter Speed" ಅಗತ್ಯ ಇದೆಯಾದರೂ ಕೆಲವೊಂದು ಸಂದರ್ಭದಲ್ಲಿ, ಕಡಿಮೆ "Shutter Speed" ಉಪಯೋಗಿಸಿ ಚಲನೆಯ ಪರಿಣಾಮವನ್ನು ನಿಮ್ಮ ಚಿತ್ರದಲ್ಲಿ ಸೆರೆಹಿಡಿಯಬಹುದು.
ಈ ಕೆಳಗಿನ ಎರಡು ಚಿತ್ರ ಅದಕ್ಕೆ ಉದಾಹರಣೆ.
ಇಲ್ಲಿ ಸೈಕಲ್ ಸವಾರನನ್ನು ನನ್ನ ವಿಷಯವನ್ನಾಗಿಸಿಕೊಂಡು, ಚಲನೆಯನ್ನು ನನ್ನ ಚಿತ್ರದಲ್ಲಿ ಸೆರೆಹಿಡಿಯಲು ಕಡಿಮೆ "Shutter Speed" (೧/೧೫) ಬಳಸಿದ್ದೇನೆ. ಇಲ್ಲಿ ಸವಾರ ಸ್ಪಷ್ಟವಾಗಿದ್ದು, ಹಿನ್ನೆಲೆ ಅಸ್ಪಷ್ಟವಾಗಿದ್ದು ಚಲನೆಯನ್ನು ಬಿಂಬಿಸುತ್ತಿದೆ (panning).

ಈ ಚಿತ್ರದಲ್ಲಿ ಬೆಂಕಿಯ ಜಾಡನ್ನು ಚಿತ್ರಿಸಲು ನಾನು ಬಳಸಿದ್ದು ೧೫ ಕ್ಷಣಗಳಷ್ಟು ದೀರ್ಘವಾದ "Shutter Speed".ಹಾಗಾಗಿ ಛಾಯಾಗ್ರಹಣದಲ್ಲಿ "Shutter Speed" ನ್ನು ಬೆಳಕು ಹಾಗು ಚಲನೆಯನ್ನು ನಿಯಂತ್ರಿಸಲು ಉಪಯೋಗಿಸಬಹುದು.

Friday, November 07, 2008

ದೀಪಾವಳಿ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಇಂದು ದೀಪಾವಳಿಯಾದ್ದರಿಂದ, ಹಿಂದಿನ ರಾತ್ರಿಯಿಂದ ಮುಂಜಾನೆ ೪ ಗಂಟೆಯವರೆಗೂ ತಮ್ಮ ಆಪ್ತರ ಮನೆಯಾದ ಸೋಲಂಕಿಯವರ ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತಾ ನಿಂತಿದ್ದಳು. ಸುಕ್ಕು ಮುಖ, ನೆರೆತ ಉದ್ದನೆಯ ಕೂದಲು,ಇತಿಹಾಸದ ಕುರುಹೋ ಎಂಬಂತೆ ನಕ್ಕರೆ ಮಾತ್ರ ಕಾಣಿಸುವ ಮುಂದಿನ ಎರಡು ಹಲ್ಲುಗಳು, ಮಂದವಾದ ದೃಷ್ಟಿ, ಸುಮಾರು ೭೫ರ ಆಸುಪಾಸಿನ ಆಕೆಯನ್ನು ೪ ಗಂಟೆಯ ಜಾವಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಮನಸ್ಸು ಬಾರದಿದ್ದರೂ ಆಕೆಯ ಹಟಕ್ಕೆ ಸೋಲಂಕಿಯವರ ಮನೆಯಾಕೆ ಸೋಲಬೇಕಾಗಿತ್ತು.ವೃತ್ತಿಯಿಂದ ಹೂವಾಡಿಗಳಾದ ಆಕೆಗೆ,ದಿನ ನಿತ್ಯ ಒದಗಿಸುವ ಹೂವಲ್ಲದೆ, ಹಬ್ಬದ ದಿನವಾದ ಇಂದು ಇನ್ನೂ ಹೆಚ್ಚಿನ ಬೇಡಿಕೆ ಇದ್ದುದರಿಂದ ಸೋಲಂಕಿಯವರ ಮನೆಯಲ್ಲಿ ಉಳಿಯದೆ, ಬೆಳಿಗ್ಗೆ ಬೇಗ ಏಳುವ ಉದ್ದೇಶದಿಂದ ಮನೆಗೆ ಬಂದಿದ್ದಳು. ಜನರ ಚಟುವಟಿಕೆಯಿಲ್ಲದ ಬೀದಿಯಲ್ಲಿ ಒಬ್ಬಳೇ, ದಾರಿಯಲ್ಲಿ ಬಿದ್ದಿದ್ದ ಮಾಟ ಮಾಡಿಸಿದ ನಿಂಬೆ ಹಣ್ಣನ್ನು ತುಳಿಯದೆ ಎಚ್ಚರಿಕೆಯಿಂದ ಕಾಲಿಡುತ್ತಾ ತನ್ನ ಇಷ್ಟ ದೇವತೆಯಾದ ಹನುಮನ ಜಪ ಮಾಡುತ್ತಾ ಮನೆಗೆ ತೆರಳಿ ಆಗ ತಾನೆ ನಿದ್ರಿಸಿದ್ದಳು.ನಿದ್ರಾ ಹೀನತೆಯಿಂದ ಕೆಂಪಾದ ಕಣ್ಣುಗಳು ಬಳಲಿ ಉಬ್ಬಿದ್ದವು.ಬಿಳಿಯ ಮಾಸಲು ಬಣ್ಣದ ರವಿಕೆಯ ಮೇಲೆ ಅದೇ ಬಣ್ಣದ ಸೀರೆಯನ್ನು ಗುಜರಾತಿ ಹೆಂಗಸರು ಸೀರೆ ಉಡುವ ಮಾದರಿಯಲ್ಲಿ, ಸೆರಗನ್ನು ಬಲಗಡೆಯಿಂದ ಹೊದ್ದು, ಮನೆಯ ಕದವಿಕ್ಕಿ ಮಾರುಕಟ್ಟೆಯ ಕಡೆಗೆ ಸಾಗಿದಳು.ದಿಯು ಗುಜರಾತಿನ ಸಮೀಪದ ಒಂದು ಪುಟ್ಟ ದ್ವೀಪ. ಭಾರತದ ಕೇಂದ್ರಾಡಳಿತಕ್ಕೆ ಒಳ ಪಡುವ ಮುಂಚೆ ಅಂದರೆ ೧೯೬೧ರ ವರೆಗೂ ಪೋರ್ಚುಗೀಸರ ವಸಾಹತಾಗಿದ್ದ ಇಲ್ಲಿನ ಜನ ಜೀವನದ ಮೇಲೆ ಅವರ ಪ್ರಭಾವ ಅಧಿಕ.ಮೇಲ್ನೋಟಕ್ಕೆ ಗುಜರಾತಿಗಳಂತೆ ಕಂಡು ಬಂದರೂ ಇವರ ಆಚರಣೆ, ಸಂಪ್ರದಾಯ, ಆಹಾರ ಪದ್ಧತಿ ಗುಜರಾತಿಗಳಿಗಿಂತ ಕೊಂಚ ಭಿನ್ನ. ಸುಮಾರು ೪೦,೦೦೦ದಷ್ಟು ಜನ ಸಂಖ್ಯೆಯಿರುವ ಈ ದ್ವೀಪದ ಜನರ ಉದ್ಯೋಗ ಅಲ್ಲಿನ ಜನರ ಜೀವನಾವಶ್ಯಕತೆಯಾದ ಶಿಕ್ಷಣ, ಚಿಲ್ಲರೆ ವ್ಯಾಪಾರದ ಮೇಲೆ ಅವಲಂಭಿಸಿದೆ. ಮೀನುಗಾರಿಕೆ, ವ್ಯವಸಾಯದಿಂದೊದಗುವ ನೆಲಗಡಲೆ, ಕಬ್ಬು, ಹತ್ತಿ, ಅಲ್ಲದೆ ಪ್ರವಾಸೋದ್ಯಮದಿಂದ ಬರುವ ಹಣ ಮಾತ್ರ ಇಲ್ಲಿಯ ಆದಾಯ. ನೆರೆಯ ಗುಜರಾತಿನಲ್ಲಿ ಮದ್ಯಪಾನ ನಿಷಿದ್ಧವಾದ್ದರಿಂದ ಜನರು ಮೋಜಿಗಾಗಿ ಬಿಡುವಿನ ವೇಳೆಯಲ್ಲಿ ಇಲ್ಲಿ ಸಮಯ ಕಳೆಯುವುದುಂಟು. ಅಲ್ಲದೆ ಐತಿಹಾಸಿಕ ಪ್ರಾಮುಖ್ಯತೆ ಪಡೆದ ಇಲ್ಲಿಯ ಕೋಟೆಗಳನ್ನು, ಚರ್ಚ್, ಮ್ಯೂಸಿಯಂ, ನಿಸರ್ಗ ನಿರ್ಮಿತ ಗುಹೆಗಳನ್ನು, ಬಂಡೆಗಳಿಂದ ಅಲಂಕೃತವಾದ ಸಮುದ್ರ ತೀರವನ್ನು ನೋಡಲು ಜನರು ದೇಶದ ವಿವಿಧೆಡೆಗಳಿಂದಲೂ ಬರುವುದುಂಟು. ಕೇವಲ ಪದವಿ ಪೂರ್ವ ಶಿಕ್ಷಣಕ್ಕೆ ಇಲ್ಲಿಯ ವಿದ್ಯಾಭ್ಯಾಸ ಸೀಮಿತವಾದ್ದರಿಂದ ಅನುಕೂಲವಂತರು ತಮ್ಮ ಮಕ್ಕಳನ್ನು ಮುಂದಿನ ವ್ಯಾಸಂಗಕ್ಕಾಗಿ ನೆರೆ ರಾಜ್ಯವಾದ ಗುಜರಾತಿಗೋ,ಮಹಾರಾಷ್ಟ್ರಕ್ಕೋ, ಗೋವೆಗೋ ಕಳುಹಿಸುವುದು ರೂಢಿ. ಅಲ್ಲಿ ಕಲಿತು ತಮ್ಮ ಸೇವೆಯನ್ನು ದೇಶದ ಇತರ ರಾಜ್ಯಗಳಲ್ಲಿ , ವಿದೇಶಗಳಲ್ಲಿ ಸಲ್ಲಿಸುತ್ತಿರುವ ಇವರು ಊರಿನ ಮುಖ ನೋಡುವುದು ಮದುವೆಗೋ ಇಲ್ಲವೇ ಇತರ ಹಬ್ಬ ಹರಿದಿನಗಳಂದು. ಹಿರಿಯ ತಲೆಮಾರಿನವರು ಪೋರ್ಚುಗೀಸರ ಪ್ರಜೆಗಳಾದ್ದರಿಂದ ಇವರಿಗೆ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದ್ದರಿಂದ ಕಲಿಯದ ಜನರೂ ಕೂಡ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಂಡು, ವಿದೇಶದಲ್ಲಿ ಅದರಲ್ಲಿಯೂ ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿರುವುದು ಸಾಮಾನ್ಯ.ಪೋರ್ಚುಗೀಸರ ರಾಜ್ಯಾಡಳಿತದಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಕಾಂತಾ ಮದುವೆಯಾದದ್ದು ಹೂವು ಮಾರಿ ಜೀವನ ಸಾಗಿಸುವುದು ಕುಲಕಸುಬಾದ ತನ್ನ ಅಂತಸ್ತಿನ ಯುವಕನೊಬ್ಬನನ್ನು. ಮದುವೆಯಾಗಿ ಚೊಚ್ಚಲ ಗಂಡುಮಗುವನ್ನು ಹೆತ್ತು, ತಮ್ಮ ಬಾಳ ಬೆಳಗಿಸಿದ ಮಗುವಿಗೆ ರೋಶನ್ ಎಂದು ನಾಮಕರಣ ಮಾಡಿ, ತೃಪ್ತ ಜೀವನ ನಡೆಸುತ್ತಿರಬೇಕಾದರೆ ಆಕೆಯ ಗಂಡ ಅದ್ಯಾವುದೋ ಕಾಯಿಲೆಗೆ ತುತ್ತಾಗಿ ತೀರಿಕೊಂಡ. ಗಂಡನ ಮನೆ, ತವರಿನ ಮನೆ ಎರಡು ಕಡೆಯಿಂದಲೂ ತಕ್ಕಷ್ಟು ಅನುಕೂಲವಿಲ್ಲವಾದ್ದರಿಂದ ಆಕೆ ತನ್ನ ಹಾಗು ೩ ವರ್ಷದ ತನ್ನ ಮಗುವಿನ ಜವಾಬ್ದಾರಿಯನ್ನು ತಾನೇ ಹೊರಬೇಕಾಯಿತು. ಚಿಕ್ಕಂದಿನಿಂದಲೂ ತಮ್ಮ ಮಕ್ಕಳೊಂದಿಗೆ ಆಡಿ ಬೆಳೆದಿದ್ದ ಹುಡುಗಿಯ ಪರಿಸ್ಥಿತಿಗೆ ನೊಂದು, ಸೋಲಂಕಿ ಮನೆತನದ ಹಿರಿಯರೊಬ್ಬರು ಇವಳ ಕಷ್ಟಕ್ಕೆ ನೆರವಾಗಿ ನಿಂತು, ಆಕೆಗೆ ಉಳಿದುಕೊಳ್ಳಲು ತಮ್ಮದೊಂದು ಹಳೇಯ ಮನೆಯನ್ನು ಒದಗಿಸಿಕೊಟ್ಟು,ಹೊಸ ಜೀವನದ ಆರಂಭಕ್ಕೆ ಅನುಕೂಲವಾಗಲೆಂದು ಸ್ವಲ್ಪ ಹಣವನ್ನೂ ಕೈಯಲ್ಲಿರಿಸಿ ಹರಸಿದರು. ತಮ್ಮ ಹಳೇಯ ಗಿರಾಕಿಗಳನ್ನೊಪ್ಪಿಸಿ ಗಂಡನ ಕುಲ ಕಸುಬಾದ ಹೂವಿನ ವ್ಯಾಪರವನ್ನು ಮತ್ತೆ ಕೈಗೆತ್ತಿಕೊಂಡಳು. ಬೆಳಿಗ್ಗೆ ಎದ್ದು, ಮಾರುಕಟ್ಟೆಗೆ ತೆರಳಿ ಹೂವು ಕೊಂಡು, ಅದನ್ನು ಪೋಣಿಸಿ, ಮೊದಲು ತನ್ನ ಇಷ್ಟದೇವರಾದ ಹನುಮನ ಗುಡಿಗೆ ಒಂದಿಷ್ಟು ಅರ್ಪಿಸಿ, ಉಳಿದದ್ದನ್ನು ತನ್ನ ಮಗುವನ್ನು ಹೊತ್ತು ಗಿರಾಕಿಗಳ ಮನೆಗೆ ತೆರಳಿ ಅವರ ಮನೆಗೆ ಒಪ್ಪಿಸುವುದು ಆಕೆಯ ನಿತ್ಯದ ಕಸುಬಾಯಿತು. ಮನೆಗೆ ಮರಳಿ ಉಪಹಾರ, ಭೋಜನ ಮುಗಿಸಿ ಸೋಲಂಕಿಯವರ ಋಣ ತೀರಿಸುವ ಸಲುವಾಗಿ ಅವರ ಮನೆಗೆ ಭೇಟಿ ಕೊಟ್ಟು, ಮನೆಯವರ ಚಿಲ್ಲರೆ ಕೆಲಸವನ್ನು ಮಾಡುತ್ತಿದ್ದಳು. ಮಗ ಬೆಳೆದು ಶಾಲೆಗೆ ಹೋಗುವ ಹಂತ ತಲುಪಿದ ಮೇಲೆ ಆತನನ್ನು ಊರಿನ ಸರ್ಕಾರಿ ಶಾಲೆಯಲ್ಲಿ ದಾಖಲಿಸಿದಳು. ದಿನ ಕಳೆದಂತೆ ಮಗನ ಅವಶ್ಯಕತೆ ಬೆಳೆದದ್ದರಿಂದ ಆಕೆ ಊರಿನ ಕೆಲವು ಇನ್ನಿತರ ಮನೆಯಲ್ಲಿಯೂ ಕೆಲಸ ಮಾಡಬೇಕಾಗಿ ಬಂತು.ಬೆಳೆದಂತೆ ಮಗನಿಗೆ ತನ್ನ ಹಾಗೂ ತನ್ನ ಸುತ್ತಮುತ್ತಲಿನ ಜನರ ಅಂತಸ್ತಿನ ಅರಿವಾಗತೊಡಗಿತು. ಉತ್ತಮ ಪೋಷಾಕು, ಆಭರಣ ತೊಟ್ಟು ಅನುಕೂಲವಂತರ ಮಕ್ಕಳು, ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿದ್ದ ಆಂಗ್ಲ ಮಾಧ್ಯಮದ ಶಾಲೆಗೆ ಹೋಗುತ್ತಿದ್ದರೆ ಈತ ಕಡಿಮೆ ಬೆಲೆಯ ಸರ್ಕಾರಿ ಶಾಲೆಗೆ ತೃಪ್ತಿ ಪಡಬೇಕಾಗಿತ್ತು. ಬಿಡುವಿನ ವೇಳೆಯಲ್ಲಿ ಅವನ ಒತ್ತಿನ ಹುಡುಗರು ತಮ್ಮ ಗೆಳತಿಯರೊಂದಿಗೆ ಕೋಟೆಯಲ್ಲಿ ಕುಳಿತು ಸರಸ ಸಲ್ಲಾಪ ಮಾಡುತ್ತಿದ್ದರೆ ಇವನು ಅಮ್ಮನೊಂದಿಗೆ ಹೂ ಮಾರುತ್ತಾ ಇತರರ ಮನೆಗಳಿಗೆ ಸಂಚರಿಸುತ್ತಿದ್ದನು. ಅವನ ಮನದಲ್ಲೂ ಕೂಡ ಇತರರಂತೆ ಗೆಳತಿಯರೊಂದಿಗೆ ಕುಳಿತು ಸಲ್ಲಾಪಿಸಬೇಕೆಂಬ ಆಸೆಯಿದ್ದರೂ ಕೂಡ ಅದಕ್ಕೆ ತಕ್ಕ ಅನುಕೂಲತೆಯಾಗಲಿ, ರೂಪವಾಗಲೀ ಆತನಲ್ಲಿ ಇರಲಿಲ್ಲ. ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ ಹುಡುಗನಿಗೆ ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ ಓದಿನ ಮೇಲೆ ಬೇಸರ ಬಂದು ಶಾಲೆಗೆ ಇತಿಶ್ರೀ ಹಾಡಿದ. ಮುಂದೆ ಏನು ಎಂಬ ಚಿಂತೆಯಿಲ್ಲದೆ ಹೂ ಮಾರುವ ಕೆಲಸವದ ಜವಾಬ್ದಾರಿಯನ್ನು ಸಂಪೂರ್ಣವಹಿಸಿಕೊಂಡ. ಇತ್ತ ತಾಯಿಗೂ ಕೂಡ ಇದರಿಂದ ಅನುಕೂಲವಾದ್ದರಿಂದ ಆಕೆ ಮಗನ ನಡವಳಿಕೆಗೆ ಆಕ್ಷೇಪವೇನೂ ಎತ್ತಲಿಲ್ಲ. ಹೀಗೆ ಸುಮಾರು ಒಂದೆರಡು ವರ್ಷ ಅವರ ಬಾಳು ಅನುಕೂಲವಾಗಿರದಿದ್ದರೂ, ಒಬ್ಬರಿಗೊಬ್ಬರು ಆಸರೆಯಂತೆ ತಮ್ಮ ಕಷ್ಟ ಮರೆತು ತೃಪ್ತಿಯಿಂದಲೇ ಬಾಳ್ವೆ ನಡೆಸುತ್ತಿದ್ದರು.ದಿಯು ಭಾರತದ ಪಾಲಾದ ಮೇಲೆ ಅಲ್ಲಿ ನೆಲೆಸಿದ್ದ ಪೋರ್ಚುಗೀಸರು ಒಬ್ಬೊಬ್ಬರಾಗಿ ತಮ್ಮ ದೇಶಕ್ಕೆ ಮರಳಲಾರಂಭಿಸಿದರು. ಅದುವರೆಗೂ ಅವರ ಜೊತೆಯಲ್ಲಿ ಕೆಲಸಕ್ಕಿದ್ದ ಸ್ಥಳೀಯ ಜನರು ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಯೋಚಿಸಲಾರಂಭಿಸಿದ್ದರು. ಪೋರ್ಚುಗೀಸರು ಮರಳುವಾಗ ನಿಷ್ಟರೆನಿಸಿದ ತಮ್ಮಕೆಲವು ಸೇವಕರನ್ನು ತಮ್ಮ ಖರ್ಚಿನಲ್ಲೇ ತಮ್ಮ ದೇಶಕ್ಕೆ ಕೊಂಡೊಯ್ದದ್ದರಿಂದ ಇತರರಲ್ಲಿಯೂ ವಿದೇಶದಲ್ಲಿ ದುಡಿಯುವ ಆಸೆ ಮೊಳೆಯತೊಡಗಿತು. ಹೀಗೆ ಒಬ್ಬೊಬ್ಬರಾಗಿ ಪೋರ್ಚುಗೀಸ್ ಪಾಸ್ ಪೋರ್ಟಿನ ಸಹಾಯದಿಂದ ಪೋರ್ಚುಗಲ್ಗೋ, ಇಂಗ್ಲೆಂಡೋ, ಆಫ್ರಿಕಾಕ್ಕೋ ತೆರಳಿ, ದಿಯುವಿನಲ್ಲಿ ಕೇವಲ ವೃದ್ಧರು ಬಿಟ್ಟರೆ ಮಕ್ಕಳು ಉಳಿಯುವಂತಾಯಿತು. ಊರಿನಲ್ಲಿ ಇಷ್ಟೆಲ್ಲಾ ಕಾರುಬಾರು ನಡೆಯುತ್ತಿರಬೇಕಾದರೆ ರೋಶನ್ ಕೂಡ ವಿದೇಶಕ್ಕೆ ಹೋಗುವ ಕನಸು ಕಾಣತೊಡಗಿದ್ದ. ಪೋರ್ಚುಗಲ್ ಬಾರದಿದ್ದರೂ, ತರಗತಿಯಲ್ಲಿ ಕಲಿತ ಅಲ್ಪ ಸ್ವಲ್ಪ ಇಂಗ್ಲೀಷಿನ ಸಹಾಯದಿಂದ ಇಂಗ್ಲೆಂಡಿಗೆ ಹೋಗಬಹುದೆಂಬ ಆಸೆ ಪ್ರಭಲವಾಗುತ್ತಾ ಬಂದಿತು. ತನ್ನ ಹಂಬಲವನ್ನು ತಾಯಿಯ ಮುಂದಿಟ್ಟರೆ ಆಕೆಯಿಂದ ಪ್ರೋತ್ಸಾಹವಾಗಲೀ, ನಿರಾಕರಣೆಯಾಗಲೀ ಕಂಡು ಬರಲಿಲ್ಲ. ಆಕೆಯ ಮೌನವನ್ನು ಸಮ್ಮತಿಯೆಂದು ಬಗೆದು ರೋಶನ್ ಸೋಲಂಕಿಯವರ ಮನೆಯವರಿಗೆ ತಿಳಿಸುವ ಸಲುವಾಗಿ ಅವರ ಮನೆಯತ್ತ ಪಾದ ಬೆಳೆಸಿದ. ತಮ್ಮ ಹಿತೈಷಿಯೂ ಅಲ್ಲದೆ ಅವನ ಈ ಪ್ರಯಾಣಕ್ಕೆ ಅವರ ನೆರವಿನ ಅಗತ್ಯವಿದ್ದುದರಿಂದ ಅವರ ಸಲಹೆ ಅವನಿಗೆ ಅಗತ್ಯವಿತ್ತು. ಮನೆಯ ಯಜಮಾನರಲ್ಲಿ ತನ್ನ ಹಂಬಲ ತಿಳಿಸಿದಾಗ, ಅವರು ಅವನ ವಿಚಾರವನ್ನು ಪ್ರೋತ್ಸಾಹಿಸಿದ್ದೂ ಅಲ್ಲದೆ, ಅವನಿಗೆ ಹಣವನ್ನು ಸಾಲವಾಗಿ ಕೊಡುವ ಭರವಸೆಯನ್ನೂ ಇತ್ತರು. ಸೋಲಂಕಿಯವರು ಇಂಗ್ಲೆಂಡಿನಲ್ಲಿ ತಮಗೆ ಪರಿಚಯವಿರುವವರನ್ನು ಸಂಪರ್ಕಿಸಿ, ಅಲ್ಲಿನ ಪ್ರಮುಖ ಹೋಟೆಲ್ ಒಂದರ ಪಾರಿಚಾರಕ ಕೆಲಸವನ್ನು ಇವನಿಗಾಗಿ ಕಾಯ್ದಿರಿಸಿದರು. ಮುಂಬೈನಲ್ಲಿ ಪಾಸ್ ಪೋರ್ಟ್ ಅರ್ಜಿ ಹಾಕಿ, ಒಂದು ತಿಂಗಳಲ್ಲೆಲ್ಲಾ ಅದು ಮಂಜೂರಾಗಿ, ಮುಂದಿನ ತಿಂಗಳಲ್ಲಿ ಇಂಗ್ಲೆಂಡಿಗೆ ತೆರಳುವ ನಿರ್ಧಾರ ಕೈಗೊಂಡ.ಕಾಂತಾಳಿಗೆ ಮಗನ ನಿರ್ಗಮನ ಸಂತೋಷ ತರುವಂತದ್ದಲ್ಲವಾದರೂ, ಅವನ ಭವಿಷ್ಯಕ್ಕೆ ತಣ್ಣೀರೆರಚಬಾರದೆಂದು ಮೌನವಹಿಸಿದ್ದಳು. ತಮ್ಮ ಹಿತೈಷಿಗಳ ಅಭಿಪ್ರಾಯದಿಂದ ಮನಸ್ಸು ನಿರಮ್ಮಳವಾದರೂ ಮುಂದೊದಗಬಹುದಾದ ಒಂಟಿತನವನ್ನು ನೆನೆದು ದುಃಖದಿಂದಲೇ ಮಗನನ್ನು ಬೀಳ್ಕೊಟ್ಟಿದ್ದಳು. ಮಗನ ನಿರ್ಗಮನದಿಂದ ಆಕೆಯ ದೈನಂದಿನ ಆವಶ್ಯಕತೆ ಕಡಿಮೆಯಾದ್ದರಿಂದ, ದೈಹಿಕ ಅನಾನುಕೂಲತೆಯಿಂದ ಮಾಡುವ ಕೆಲಸ ಕಡಿಮೆ ಮಾಡಿಕೊಂಡಿದ್ದರೂ, ಹೂವು ಮಾರುವ ಕೆಲಸ ಹಾಗೂ ಸೋಲಂಕಿಯವರ ಮನೆಯಲ್ಲಿ ದುಡಿಯುವುದನ್ನು ಬಿಡಲಿಲ್ಲ. ಯಜಮಾನರ ಮನೆಯಲ್ಲಿ ದೊರೆಯುವ ಹೆಂಗಸರ ಸಹವಾಸ,ಅಲ್ಲಿಯ ಮಕ್ಕಳ ಚಾಕರಿ ಆಕೆಯ ಒಂಟಿ ಜೀವನಕ್ಕೆ ಆವಶ್ಯವಾಗಿದ್ದಿತು.ರೋಶನ್ ದಿಯುವನ್ನು ಬಿಟ್ಟು ಸುಮಾರು ಎರಡು ವರ್ಷಗಳಾಗಿತ್ತು. ಮೊದಲೆರಡು ವರ್ಷಗಳಲ್ಲಿ ಕಷ್ಟಪಟ್ಟು ಸಾಲ ತೀರಿಸಿ, ತಾಯಿಗಾಗಿ ಪ್ರತೀ ತಿಂಗಳೂ ಒಂದಿಷ್ಟು ಹಣ ಹಾಗೂ ಯೋಗಕ್ಷೇಮದ ಬಗ್ಗೆ ನಾಲ್ಕು ಸಾಲಿನ ಪತ್ರವನ್ನು ಕಳುಹಿಸುತ್ತಿದ್ದ. ಕಾಂತಾಳಿಗೆ ಹಣದ ಆವಶ್ಯಕತೆ ಇರದಿದ್ದುದರಿಂದ ಮಗನ ಹಣವನ್ನು ಮುಂದೆ ಬೇಕಾಗಬಹುದೆಂಬ ಉದ್ದೇಶದಿಂದ ಕೂಡಿಡುತ್ತಿದ್ದಳು. ಸ್ವೇಚ್ಛೆಯ ಪರಿಸರ, ಕೈಯಲ್ಲಿ ಕಾಸು ರೋಶನ್ ಮನದಲ್ಲಿದ್ದ ಅಭಾವ ವೈರಾಗ್ಯವನ್ನು ತೊಲಗಿಸಿತು. ಹಿಂದೆ ತನಗೆ ಅಲಭ್ಯವಾಗಿದ್ದ ಕುಡಿತ, ಹುಡುಗಿಯರ ಸಹವಾಸ ಆತನಿಗೆ ಇಲ್ಲಿ ಅನಾಯಾಸವಾಗಿ ಲಭಿಸುತ್ತಿತ್ತು. ದಿನ ಕಳೆದಂತೆ ಅವನ ಆವಶ್ಯಕತೆ, ಸ್ವೇಚ್ಛೆ ಹೆಚ್ಚಿ, ಕೊಟಡಿ ಶುಚಿಗೊಳಿಸುವಾಗ ಪುಡಿಗಾಸನ್ನೂ, ಹೋಟೆಲಿನಲ್ಲಿ ಮದ್ಯವನ್ನೂ ಕದಿಯುವ ಹವ್ಯಾಸ ಬೆಳೆಸಿಕೊಂಡ. ಇವನ ನಡವಳಿಕೆಗೆ ಬೇಸತ್ತು ಅಲ್ಲಿನ ಮೇಲಧಿಕಾರಿಗಳು ಆತನನ್ನು ಕೆಲಸದಿಂದ ಬಿಡಿಸಿದರು. ಮುಂದೆ ತನ್ನ ಒಬ್ಬ ಮಿತ್ರರ ಸಹಾಯದಿಂದ ವಿಮಾನ ನಿಲ್ದಾಣವನ್ನು ಶುಚಿಗೊಳಿಸುವ ಕೆಲಸಕ್ಕೆ ಸೇರಿಕೊಂಡ. ಭಾರತದ ಕೆಲಸಗಾರರು ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದುದರಿಂದ, ಕೆಲಸ ದೊರಕಿಸಿಕೊಳ್ಳುವುದು ಈತನಿಗೆ ಕಷ್ಟವಾಗಲಿಲ್ಲ. ಮಗನ ನಡವಳಿಕೆಯನ್ನು ಊರಿನ ಜನರ ಬಂಧು ಮಿತ್ರರ ನೆರವಿನಿಂದ ಅರಿತ ಕಾಂತಾ ಬೆನ್, ಮನನೊಂದು ಮಗನನ್ನು ಸರಿಯಾದ ದಾರಿಗೆ ತರಲು ಆತನಿಗೆ ಮದುವೆಯ ಆವಶ್ಯಕತೆಯನ್ನು ನೆನೆದು, ಅವರಿವರನ್ನು ಕಾಡಿ ತನ್ನ ಮಗನಿಗೆ ವಧುವನ್ನು ನಿಷ್ಚಯ ಮಾಡಿದಳು. ಮಗನಿಗೆ ಕಾಗದವನ್ನು ಬರೆಯಿಸಿ, ಮುಂದಿನ ದೀಪಾವಳಿಗೆ ಊರಿಗೆ ಬರಬೇಕೆಂದೂ, ತಾನು ಆತನಿಗಾಗಿ ಹುಡುಗಿಯನ್ನು ಗೊತ್ತುಮಾಡಿರುವುದಾಗಿಯೂ ಪತ್ರ ಬರೆಸಿದಳು. ಆತನಿಗೂ ತನ್ನವರು ಒಬ್ಬರು ಬೇಕೆನಿಸಿದ್ದರಿಂದ, ತಾಯಿಯ ಮಾತಿಗೆ ಸಮ್ಮತಿಯಿತ್ತು ಮರುಪತ್ರ ಬರೆದು ಮುಂದಿನ ದೀಪಾವಳಿಗೆ ಊರಿಗೆ ಬರುವುದಾಗಿ ತಿಳಿಸಿದ.ಮಗನ ಆಗಮನದಿಂದ ಕಾಂತಾಳ ಜೀವನದಲ್ಲಿ ಹೊಸ ಹುರುಪು ಹುಟ್ಟಿತ್ತು. ಮದುವೆ ದೀಪಾವಳಿಗೆ ೧೫ದಿನ ಮುಂಚಿತವಾಗಿ ಗೊತ್ತುಮಾಡಿದ್ದರು. ಸೋಲಂಕಿಯವರ ಅಪ್ಪಣೆ ಪಡೆದು ಮನೆಗೆ ಸುಣ್ಣ, ಬಣ್ಣ ಬಳಿದು ಅಂದಗೊಳಿಸಿದರು. ಆಭರಣಗಳು ಕಾಂತಾಳದ್ದೇ ಇದ್ದುವಾದ್ದರಿಂದ ಬಟ್ಟೆ ಬರೆ, ಉಡುಗೊರೆಗಳನ್ನು ಕೊಂಡು ಮದುವೆಯನ್ನು ಅದ್ಧೂರಿಯಲ್ಲದಿದ್ದರೂ ಸಾಂಗವಾಗಿ ನೆರವೇರಿಸಿದರು. ಮುಂದಿನ ಕೆಲವು ದಿನಗಳಲ್ಲಿ ನವ ದಂಪತಿಗಳು ತಮ್ಮ ಪರಿಚಿತರ ಮನೆಗೆ ತೆರಳಿ, ಉಡುಗೊರೆ, ಹಿರಿಯರ ಆಶೀರ್ವಾದ ಪಡೆಯುವುದರಲ್ಲಿ ಕಳೆದರು. ದೀಪಾವಳಿಯ ಹಿಂದಿನ ರಾತ್ರಿ ಅತ್ತೆ, ಸೊಸೆ ಸೇರಿ ವಿವಿಧ ಭಕ್ಷ್ಯಗಳನ್ನು ತಯಾರಿಸಿದರು. ಮೊದಲ ದಿನ ಆಭರಣದ ಅಂಗಡಿಗೆ ತೆರಳಿ ಶಾಸ್ತ್ರಕ್ಕೆ ಹೊಸ ಆಭರಣ ಕೊಂಡು, ಸಂಪತ್ತಿನ ಅಧಿ ದೇವತೆಯಾದ ಲಕ್ಷಿಗೆ ಪೂಜೆ ಸಲ್ಲಿಸಿದರು. ಮನೆಯ ಮುಂದೆ ರಂಗೋಲಿಯ ಚಿತ್ತಾರಗಳನ್ನು ಬಿಡಿಸಿ, ಬಣ್ಣ ತುಂಬಿ, ಮುಸ್ಸಂಜೆಯಾಗುತ್ತಿದಂತೆಯೆ ಹಣತಿಗೆಯ ದೀಪದಿಂದ ಮನೆಯನ್ನೆಲ್ಲಾ ಅಲಂಕರಿಸಿದರು. ಎರಡನೆಯ ದಿನದಂದು, ಹೆಂಗಸರು ತಲೆ ಸ್ನಾನ ಮುಗಿಸಿ ಊರ ಮುಂಬಾಗಿಲಿನಲ್ಲಿರುವ ಹನುಮಂತನ ಗುಡಿಗೆ ತೆರಳಿದರು. ಹನುಮಂತನಿಗೆ ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ, ಮನೆಯಿಂದ ತಂದಿದ್ದ ಚೂರಿಯನ್ನು ದೀಪಕ್ಕೆ ಹಿಡಿದು ಮಸಿ ಸಂಗ್ರಹಿಸಿ, ಕೆಟ್ಟ ದೃಷ್ಟಿಯಿಂದ ರಕ್ಷಣೆಗಾಗಿ ಅದನ್ನುಕಾಡಿಗೆಯಂತೆ ಕಣ್ಣಿಗೆ ಲೇಪಿಸಿಕೊಂಡರು. ಮೂರನೇ ದಿನದಂದು ಗಣೇಶನ ಹಾಗೂ ಲಕ್ಶ್ಮಿಯ ಪೂಜೆ ನೆರವೇರಿಸಿದರು. ನಾಲ್ಕನೆಯ ದಿನ ಗುಜರಾತಿಗಳಿಗೆ ಹೊಸವರ್ಷವಾದ್ದರಿಂದ ಹೊಸ ಉಡುಪು, ಆಭರಣಗಳನ್ನು ಧರಿಸಿ ಬಂಧು ಬಾಂಧವರೊಂಡಗೂಡಿ ಉಡುಗೊರೆಯನ್ನು ಹಂಚಿಕೊಂಡರು. ಕೊನೇಯ ದಿನ ನವ ವಧು ಪತಿಯೊಡನೆ ತವರಿಗೆ ತೆರಳಿ, ತನ್ನ ಸಹೋದರರಿಗೆ ಆರತಿ ಬೆಳಗಿ, ತಿಲಕವಿಟ್ಟು, ಅವರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ತಿಸಿ, ಊಡುಗೊರೆಗಳೊಂದಿಗೆ ತಿರುಗಿ ಮನೆ ಸೇರಿದರು. ತನ್ನವರ ಒಡನಾಟದಲ್ಲಿ ಕಾಂತಾಳಿಗೆ ದಿನಗಳು ಉರುಳಿದ್ದರ ಪರಿವೆಯೇ ಆಗಲಿಲ್ಲ, ತನ್ನ ಮದುವೆಯ ಕಾಲದಲ್ಲೂ ಸಂಭ್ರಮಿಸದಂತಹ ದೀಪಾವಳಿ ಅವಳ ಪಾಲಿಗೆ ಇದಾಗಿತ್ತು.ತನ್ನ ಹೊಸ ಸಂಗಾತಿಯೊಡನೆ ರೋಶನ್ ಮತ್ತೆ ಇಂಗ್ಲೆಂಡಿಗೆ ಹೊರಟು ನಿಂತ. ಭಾರವಾದ ಹೃದಯದಿಂದ ಕಾಂತಾ ಬೆನ್ ತನ್ನ ಮಗ, ಸೊಸೆಯನ್ನು ಬೀಳ್ಕೊಟ್ಟು ಮತ್ತೆ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಳು.ಅದೇ ಆಕೆಯ ಮನದಲ್ಲುಳಿದ ಕೊನೇಯ ದೀಪಾವಳಿಯಾಗಿತ್ತು. ಅತ್ತ ಹಣದ ನೆಪವೊಡ್ಡಿ ಮಗ ಮತ್ತೆ ಊರಿಗೆ ಹಿಂದಿರುಗಲಿಲ್ಲ, ಇತ್ತ ಇಳಿ ವಯಸ್ಸಿನಲ್ಲಿ ಆಕೆಗೆ ಇಂಗ್ಲೆಂಡಿಗೆ ಹೋಗಬೇಕೆಂಬ ಹಂಬಲವೂ ಇರಲಿಲ್ಲ. ಪತ್ರದಿಂದ ಮೊಮ್ಮಗನ ಸುದ್ದಿ ಕೇಳಿ ತಿಳಿದು, ಹರಸಿ, ಆತನನ್ನು ಎಂದು ನೋಡುವೆನೋ ಎಂದು ಕಾತುರಳಾಗಿದ್ದಳು. ಎಂದಿನಂತೆ ಮಾರುಕಟ್ಟೆಯಲ್ಲಿ ಹೂವಿನ ಖರೀದಿಗೆ ತೊಡಗಿದ್ದ ಕಾಂತಾ, ತನ್ನ ಮೊಮ್ಮಗನ ವಯಸ್ಸನ್ನೆಣಿಸುತ್ತಿದ್ದಳು, ಆತನ ಮದುವೆಯ ನೆಪದಿಂದ ಲಭಿಸುವ ಕೊನೇಯ ದೀಪಾವಳಿಯನ್ನು ನೋಡುವ ಹಂಬಲದಿಂದ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)