Wednesday, October 22, 2008

ಪಿತೃ ವಾತ್ಸಲ್ಯ

ನವರಾತ್ರಿಯ ಒಂದು ರಜಾ ದಿನ, ಪ್ರಥಮ ಪಿ.ಯು. ಓದುತ್ತಿದ್ದ ನಾನು, ಅಮ್ಮ ಮಾಡಿಕೊಟ್ಟ ಕಾಫಿ ಹೀರುತ್ತಾ, ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದ ಸೂರ್ಯಾಸ್ತಮಾನವನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ ನೋಡುತ್ತಿದ್ದೆ. ಸಮಯ ಕಳೆದಂತೆ, ಪಡುವಣದಿಂದ ಮುಗಿಲೆದ್ದು, ವಿವಿಧಾಕೃತಿಯನ್ನು ತಳೆದು, ಬಣ್ಣ ಬಳಿದುಕೊಂಡ ಆಗಸ ಆಕರ್ಷಕವಾಗಿ ಕಾಣಿಸತೊಡಗಿತು. ಮಧ್ಯಾಹ್ನದಿಂದ ಒಂದೇ ಸಮನೆ ಓದುತ್ತಿದ್ದ ನನಗೆ, ಮನದ ವಿಶ್ರಾಂತಿಗಾಗಿ ಬದಲಾವಣೆಯ ಅಗತ್ಯ ತೋರಿದ್ದರಿಂದ, ಅಮ್ಮನಿಗೆ ತಿಳಿಸಿ, ನನ್ನ ಸೈಕಲ್ ಏರಿ, ಮನೆಯಿಂದ ೧ ಕಿ.ಮೀ. ದೂರವಿರುವ ಕಡಲಿನ ಕಡೆಗೆ ತೆರಳಿದೆನು. ಹೊರಡುವಾಗ ಸೂರ್ಯ ಮುಳುಗಿದ ಕೆಲವು ಗಳಿಗೆಯಲ್ಲಿ ಮನೆ ಸೇರುತ್ತೇನೆ ಎಂದೂ, ನೀರಿಗಿಳಿಯುವುದಿಲ್ಲ ಎಂದು ಮನೆಯವರಿಗೆ ಭರವಸೆಯಿತ್ತು ಬಂದಿದ್ದೆ.ದಾರಿಯ ಇಕ್ಕೆಲಗಳಲ್ಲಿ ಕೊಯ್ಲಿಗೆ ಸಿದ್ಧವಾಗಿ ನಿಂತಿರುವ, ತೆನೆ ತುಂಬಿ, ಸುಳಿದಾಡುವ ಗಾಳಿಗೆ ತೆಲೆದೂಗುವ ಭತ್ತದ ಗದ್ದೆ, ಮಧ್ಯದಲ್ಲಿ ಅಲ್ಲಲ್ಲಿ ಎತ್ತರವಾಗಿ ತಲೆಯೆತ್ತಿ ನಿಂತ ತಾಳೆ ಮರಗಳು, ಅದರ ಗರಿಗಳಿಗೆ ಜೋತು ಬಿದ್ದಂತೆ ಕಟ್ಟಿದ ಗೀಜಗನ ಗೂಡು, ದಾರಿಯಲ್ಲಿ ಕಡಲಿನ ಹಿನ್ನೀರಿಗೆ ಹಾಕಿದ ಪುಟ್ಟ ಸೇತುವೆ, ಅದರ ಮಗ್ಗುಲಲ್ಲಿರುವ ಮೀನಿನ ಕಾರ್ಖಾನೆ, ಮುಂದೆ ಸಿಗುವ ಹೊಯಿಗೆಯ ಬೆಟ್ಟು, ಅದರ ನೆತ್ತಿಯಲ್ಲೊಂದು ಬೊಬ್ಬರ್ಯನ ಗುಡಿ, ಸುತ್ತ ಗಾಳಿ ಮರ, ಪಕ್ಕದಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಆಡುತ್ತಿರುವ ಹುಡುಗರ ತಂಡ, ಚಿಕ್ಕ ಪುಟ್ಟ ಅಂಗಡಿಗಳು, ಮೀನು ಸಂರಕ್ಷಣೆಗಾಗಿ ತಯಾರಿಸುವ ಮಂಜುಗಡ್ಡೆ ಕಾರ್ಖಾನೆ, ಬಂಡೆಯಂತಹ ಮಂಜುಗಡ್ಡೆಯನ್ನು ದೊಡ್ಡ ದೊಡ್ಡ ಸುತ್ತಿಗೆಯಲ್ಲಿ ಪುಡಿ ಮಾಡಿ ಮೀನಿನ ಲಾರಿಯಲ್ಲಿ ತುಂಬಿಸುವ ಮೊಗವೀರರು, ಕಳ್ಳಿನಂಗಡಿ, ಪುಡಿ ಮೀನು ಮಾರುವ ಬೆಸ್ತರ ಹೆಂಗಸರು, ಅವರು ಬಿಸಾಕಬಹುದಾದಂತಹ ಹಾಳಾದ ಮೀನಿಗಾಗಿ ಆಸೆಯಿಂದ ನೋಡುತ್ತಿರುವ ನಾಯಿಗಳು, ಬೆಕ್ಕುಗಳು, ಆಗ್ಗೆ ಸುಮಾರು ೧೦ ವರ್ಷದಿಂದಲೂ ನೋಡುತ್ತಿರುವುದು ಇದೇ ಸನ್ನಿವೇಷದ ಪುನರಾವರ್ತೆನೆಯಾದರೂ, ಆ ದಾರಿಯಲ್ಲಿ ಸಾಗುವುದು ಇಂದಿಗೂ ಕೂಡ ನನಗೆ ಪ್ರಿಯವಾಗಿದೆ.ಕಡಲು ಸಮೀಪಿಸುತ್ತಿದ್ದಂತೆ ದಂಡೆಯಲ್ಲಿ ವಿಶಾಲವಾಗಿ ಹರಡಿದ ತೆಂಗಿನ ತೋಪು, ಶುಭ್ರವಾದ ಬಿಳಿ ಬಣ್ಣದ ಹೊಯಿಗೆ ರಾಶಿ,ಸ್ವಾಗತಿಸುತ್ತಿತ್ತು.ಕಡಲಿನಲ್ಲಿ ಬಹು ದೂರ ಸಾಗಿ, ಮೀನಿನ ಹೊರೆ ಹೊತ್ತುಕೊಂಡು ಮರಳಿದ್ದ ಮರದ ದೋಣಿಗಳು, ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಕಡಲ ಹಕ್ಕಿಗಳು ತೆರೆಯ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿ, ಏಡಿಗಳನ್ನು ಹಿಡಿಯುವ ಕಾರ್ಯದಲ್ಲಿ ಮಗ್ನವಾಗಿತ್ತು. ಸೈಕಲ್ಲಿನಿಂದ ಇಳಿದು ಹೊಯಿಗೆಯಲ್ಲಿ ನಡೆಯುತ್ತಾ, ನನ್ನ ಆಗಮನದಿಂದ ಬೆದರಿದ ಏಡಿಗಳನ್ನು ಅವುಗಳ ಗೂಡಿಗೆ ಓಡಿಸುತ್ತಾ ಮುಂದುವರೆಯುತ್ತಿದ್ದೆ. ನಶೆಯೇರಿಸಿಕೊಂಡು ದಾರಿಯಲ್ಲಿ ತಿರುಗುತ್ತಿರುವವರನ್ನು ಮಾತನಾಡಿಸುತ್ತಾ, ಅವರು ವಿರಳವಾಗತೊಡಗಿದ ನಂತರ ನಡಿಗೆಯನ್ನು ನಿಲ್ಲಿಸಿ ಮರಳಿನ ಮೇಲೆ ಮಲಗಿ ಆಗಸದ ಸವಿಯನ್ನು ಸವಿಯತೊಡಗಿದೆ.ನನಗೆ ಸೂರ್ಯಾಸ್ತಮಾನಕ್ಕಿಂತಲೂ, ಅದರ ನಂತರ ಮುಗಿಲಿನಲ್ಲಾಗುವ ಕಲಾಕೃತಿಯನ್ನು ನೋಡುವುದು ಹೆಚ್ಚು ಪ್ರಿಯ. ಸೂರ್ಯಾಸ್ತಮಾನದಲ್ಲಿ ಕೇವಲ ಹಳದಿ, ಕಿತ್ತಳೆ ವರ್ಣಸಂಯೋಜನೆಯಿದ್ದರೆ, ಅದರ ನಂತರದ ಬಣ್ಣಗಳಾದರೋ ಹಲವು ಬಗೆಯದು, ಅದು ರಚಿಸುವ ಕಲಾಕೃತಿ ಪ್ರತಿ ದಿನವೂ ವಿನೂತನ.ಕತ್ತಲಾಗತೊಡಗಿದ್ದರಿಂದ ಮರಳುವ ನಿರ್ಧಾರ ಮಾಡಿದೆ. ಮತ್ತೆ ಸೈಕಲ್ ಹತ್ತಿ, ದಾರಿದೀಪವಿಲ್ಲದ, ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನಕ್ಕೆ ಸಾಗುತ್ತಿರಬೇಕಾದರೆ, ನನ್ನ ಸ್ನೇಹಿತನ ಬಳಿಯಿರುವ ಪುಸ್ತಕದ ನೆನಪಾಯಿತು. ನಾನು ಹಲವು ದಿನಗಳಿಂದ ಓದಬೇಕೆಂದಿದ್ದ ಪುಸ್ತಕವನ್ನು ಅವನು ಓದಿ ಮುಗಿಸಿದ್ದರಿಂದ, ಅದನ್ನು ಎರವಲು ತಂದು ಓದಬೇಕೆಂದಿದ್ದೆ. ೧೦ ನಿಮಿಷದ ಕೆಲಸ ಎಂದು ಬಗೆದು ಮನೆಯಕಡೆ ಹೋಗದೆ ಸ್ನೇಹಿತನ ಮನೆಯ ಕಡೆ ಸಾಗಿದೆನು. ಕುಶಲೋಪರಿಯನಂತರ ಪುಸ್ತಕವನ್ನು ಕೊಂಡು ಮನೆಗೆ ಮರಳಬೇಕೆಂದಿರುವಾಗ, ಸ್ನೇಹಿತನ ಅಜ್ಜಿ "ನವರಾತ್ರಿ ಪೂಜೆಯ ಊಟ ಮಾಡಿ ಹೋಗು" ಎಂದರುಹಿದರು. ಬಳಕೆಯ ಮನೆಯಾದ್ದರಿಂದ ಹಾಗೂ ಭೋಜನ ಪ್ರಿಯನಾದ್ದರಿಂದ, ಅವರ ಮಾತಿಗೆ ಒಪ್ಪಿ, ಸ್ನೇಹಿತನೊಂದಿಗೆ ಹರಟೆ ಕೊಚ್ಚುತ್ತಾ ಕುಳಿತೆ. ಪುರೋಹಿತರ ಮನೆಯಾದ್ದರಿಂದ ಪೂಜೆ ಸಾವಕಾಶವಾಗಿಯೇ ಸಾಗಿತು. ೮:೩೦ರ ಸಮಯಕ್ಕೆ ಊಟದ ಕರೆ ಬಂದದ್ದರಿಂದ ಕೈ ಕಾಲು ತೊಳೆದು, ಬಾಳೆ ಎಲೆಯ ಮುಂದೆ ಕುಳಿತೆನು. ಕೋಸುಂಬರಿ, ಚಟ್ನಿ, ಮೂರ್ನಾಲ್ಕು ಬಗೆಯ ಪಲ್ಯ, ಚಿತ್ರಾನ್ನ, ಅನ್ನ, ಅದರ ಮೇಲೊಂದಿಷ್ಟು ತುಪ್ಪ, ಕೊನೇಯದಾಗಿ ತೊವ್ವೆ ಬಡಿಸಿದ ಮೇಲೆ "ಹರಹರ ಮಹದೇವ" ಎಂಬ ಘೋಷಣೆಯೊಂದಿಗೆ ನಮ್ಮ ಊಟ ಆರಂಭವಾಯಿತು. ಪದ್ಧತಿಯಂತೆ ಸುತ್ತು ಕಟ್ಟಿ, ಬಡಿಸಿದ ಪದಾರ್ಥಗಳನ್ನು ಒಂದೊಂದಾಗಿ ಭುಂಜಿಸುತ್ತಿದ್ದಂತೆ, ಒಂದರ ಹಿಂದೊಂದರಂತೆ, ಸಾರು,ಹಪ್ಪಳ, ಸಂಡಿಗೆ, ಸೌತೇಕಾಯಿ ಹುಳಿ, ಅನಾನಾಸಿನ ಮುದ್ದು ಹುಳಿ, ಬದನೇಕಾಯಿ ಕಾಯಿ ಹುಳಿ, ಅಲಸಂಡೆಯ ಮಜ್ಜಿಗೆ ಹುಳಿ,ವಿವಿಧ ಬಗೆಯ ಭಕ್ಷ್ಯಗಳು, ಬೆಲ್ಲದ ಪಾಯಸ, ಹಣ್ಣಿನ ರಸಾಯನಗಳನ್ನು ಸವಿದು, ಮಜ್ಜಿಗೆಗಾಗಿ ಅನ್ನ ಹಾಕಿಸಿಕೊಂಡು ಕಟ್ಟೆ ಕಟ್ಟುತ್ತಿರಬೇಕಾದರೆ ಅವರ ಮನೆಯ ದೂರವಾಣಿ ರಿಂಗಿಸಲಾರಂಭಿಸಿತು. ಸ್ನೇಹಿತ ಕರೆಯನ್ನು ಸ್ವೀಕರಿಸಿ "ಹೌದು ಇಲ್ಲೇ ಊಟ ಮಾಡುತ್ತಾ ಇದ್ದಾನೆ" ಎಂದು ನನ್ನ ಕಡೆ ನೋಡಿ, ನಿಮ್ಮ ಮನೆಯವರು ಎಂದು ಅರುಹಿದ.೬ ಗಂಟೆಗೆ ಮನೆ ಬಿಟ್ಟ ಒಬ್ಬನೇ ಮಗ, ಮನೆಗೆ ಹಿಂದಿರುಗದೇ ಇದ್ದುದಕ್ಕಾಗಿ ಗಾಬರಿಯಾಗಿ ಕರೆ ಮಾಡಿರಬಹುದೆಂದು ತಿಳಿದು, ಊಟ ಮುಗಿಸಿ ಆತುರ, ಅಳುಕಿನೊಂದಿಗೆ ಮನೆಯ ಕಡೆ ತೆರಳಿದೆ. ದಾರಿಯಲ್ಲಿ ಸಿಕ್ಕಿದ ಎಲ್ಲಾ ಅಂಗಡಿಯವರ ನೋಟ ಎಂದಿನಂತಿರದೆ ವಿಚಿತ್ರವಾಗಿತ್ತು. ಮನೆಗೆ ಹೋದರೆ,ಅಪ್ಪ, ಅಮ್ಮ, ಎದುರು ಮನೆ ಚಿಕ್ಕಪ್ಪ, ಪಕ್ಕದೂರಿನ ಬಾವ,ಅಕ್ಕಂದಿರು, ಪಕ್ಕದ ಮನೆಯವರು ಎಲ್ಲರೂ ನನ್ನ ಬರವಿಗಾಗಿ ಕಾದಿದ್ದರು. ನನ್ನ ಬೇಜವಾಬ್ದಾರಿ ತನಕ್ಕೆ, ಎಲ್ಲರಿಂದಲೂ ಮಂಗಳಾರತಿ ಮಾಡಿಸಿಕೊಂಡು, ಎನೂ ಮಾತನಾಡದೆ ಚಾಪೆ ಬಿಡಿಸಿ ಮಲಗಿದೆ. ಕೇವಲ ಮನೆಗೆ ತಿಳಿಸದೆ ಊಟಕ್ಕೆ ಹೋಗಿದ್ದಕ್ಕಾಗಿ, ಊರನ್ನೆಲ್ಲಾ ಹುಡುಕಿ, ನನ್ನ ಮಾನ ಕಳೆದು ಹಾಕಿದರಲ್ಲಾ, ನಾನು ನಾಳೆಯಿಂದ ಊರಿನವರಿಗೆ ಹೇಗೆ ಮುಖ ತೋರಿಸಲಿ, ಅವರು ಕೇಳುವ ಪ್ರಶ್ನೆಗಳಿಗೆ ಏನೆಂದು ಉತ್ತರ ಕೊಡಲಿ, ಎಂದು ಅಪ್ಪನ ಮೇಲೆ ಕೋಪಗೊಂಡೆ. ನನ್ನ ಮೊಂಡುತನಕ್ಕೆ ಬೇಸತ್ತು ನನ್ನ ಅಮ್ಮ ನಾ ಮಲಗಿದ್ದಲ್ಲಿಗೆ ಬಂದು ನಡೆದ ಘಟನೆಯನ್ನು ಸವಿಸ್ತಾರವಾಗಿ ಹೇಳತೊಡಗಿದಳು. ೭:೩೦ ಆದರೂ ಕಡಲಿನಿಂದ ಹಿಂದಿರುಗದಿದ್ದರಿಂದ ನೀರಿಗಿಳಿದು ಏನಾದರೂ ಅನಾಹುತ ಮಾಡಿಕೊಂಡೆನೋ ಎಂದು ಬಗೆದ ಅಪ್ಪ, ಉಬ್ಬಸದಿಂದ ಏಗುತ್ತಿರುವ ಶರೀರ ಹೊತ್ತುಕೊಂಡು, ಕಡಲಿನವರೆಗೂ ಕಾಲ್ನಡಿಗೆಯಿಂದ ಸಾಗಿ, ಎರಡು ಮಗ್ಗುಲಲ್ಲೂ ತಮ್ಮ ಕುರುಡು ಟಾರ್ಚ್ನಿಂದ ಹುಡುಕಿ, ನನ್ನ ಕುರುಹು ಕಾಣದೆ, ಎಲ್ಲಾ ಅಂಗಡಿಗಳಲ್ಲೂ ವಿಚಾರಿಸಿ ಅಲ್ಲಿಯೂ ಎನೂ ಸುಳಿವು ದೊರಕದೆ, ಒಬ್ಬೊಬ್ಬರಿಗಾಗಿ ಕರೆ ಮಾಡ ತೊಡಗಿ, ನನ್ನ ಸ್ನೇಹಿತನ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಮೇಲೇ ಅವರು ನಿರಮ್ಮಳರಾದರೆಂದು. ಇದನ್ನು ಕೇಳುತ್ತಾ ನನ್ನ ದಿಂಬು ನನಗರಿವಿಲ್ಲದಂತೆಯೇ ತೋಯ್ದಿತ್ತು, ಈ ವರ್ಷ ಎಂದಿಗಿಂತ ತುಸು ಹೆಚ್ಚೇ ಉಬ್ಬಸದಿಂದ ಬಳಲಿದ್ದರೂ, ಅವರು ತೋರಿದ ಮಮತೆಯ ಮುಂದೆ ನನ್ನ ಅವಮಾನ ತುಂಬಾ ಚಿಕ್ಕದೆನಿಸಿತು.

Friday, October 17, 2008

ಅಂಗೈಯಲ್ಲಿ ಕಚಗುಳಿ

ಚಿಕ್ಕವರಿದ್ದಾಗ ತೋಟದ ಮೂಲೆಯಲ್ಲೆಲ್ಲೋ, ಒಣಗಿದ ಹುಡಿಯಾದ ಮಣ್ಣಿನಲ್ಲಿ ಆಲಿಕೆಯಾಕಾರದ ಗುಳಿಗಳು ಕಂಡು ಬಂದರೆ ಒಂದು ರೀತಿಯ ಸಂಭ್ರಮ. ಆ ರಚನೆಯ ಬುಡಕ್ಕೆ ಕೈ ಹಾಕಿ, ಕೈಯಲ್ಲಿನ ಮಣ್ಣನ್ನು ಸ್ವಲ್ಪ ಸ್ವಲ್ಪವೇ ಗಾಳಿಸಿ, ಕೊನೇಯಲ್ಲಿ ಉಳಿಯುವ, ನಾವು ಕರೆಯುತ್ತಿದ್ದ ಗುಬ್ಬಚ್ಚಿ (ಹಕ್ಕಿಯಲ್ಲ) ಅಥವಾ ಅಜ್ಜಿ ಹುಳವನ್ನು ಅಂಗೈಯಲ್ಲಿರಿಸಿಕೊಂಡು ಕಚಗುಳಿಯನ್ನು ಸವಿಯುವುದು ನಮ್ಮ ಆಟಗಳಲ್ಲೊಂದು.ಈ ಹುಳದ ಮೂಲವನ್ನು ಅರಸುತ್ತಾ, ಅದರ ಚಿತ್ರವನ್ನು INWನಲ್ಲಿ ಪ್ರಕಟಿಸಿದಾಗ, ಮಿತ್ರರೊಬ್ಬರ ಸಹಾಯದಿಂದ, ಇದು "Antlion" ಎಂಬ ಕೀಟದ ಲಾರ್ವಾ ಎಂದು ತಿಳಿಯಿತು.


Antlion Larva"Antlion"ನ ವೈಜ್ಣಾನಿಕ ವರ್ಗೀಕರಣ ಈ ಕೆಳಗಿನಂತಿದೆ:
Kingdom: Animalia
Phylum: Arthropoda
Subphylum: Hexapoda
Class: Insecta
Subclass: Pterygota
Infraclass: Neoptera
Superorder: Endopterygota or Neuropterida
Order: Neuroptera
Suborder: Myrmeleontiformia
Superfamily: Myrmeleontoidea
Family: Myrmeleontidae

Friday, October 10, 2008

ಕುಮಾರ ಪರ್ವತದಲ್ಲಿ ಚಾರಣ

ನಮ್ಮ ತಯಾರಿ

ಕರ್ನಾಟಕದಲ್ಲಿ, ಅತ್ಯಂತ ಕಠಿಣವಾದ, ರಮಣೀಯವಾದ ಕುಮಾರ ಪರ್ವತದಲ್ಲಿ ಚಾರಣ ಮಾಡಬೇಕೆಂಬುದು ನನ್ನ ಹಲವು ವರ್ಷಗಳ ಬಯಕೆಯಾಗಿತ್ತು.ಹಲಕೆಲವು ಕಾರಣಗಳಿಂದ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಅಕ್ಟೋಬರ್ ೨ ೨೦೦೮, ಗುರುವಾರವಾಗಿದ್ದು ಗಾಂಧಿ ಜಯಂತಿಯ ಪ್ರಯುಕ್ತ ರಜೆ ಇದ್ದುದರಿಂದ, ಇದರೊಂದಿಗೆ ಶುಕ್ರವಾರದ ನನ್ನ ಖಾಸಗಿ ರಜೆ ಸೇರಿಸಿ ಸಿಗುವ ೪ ದಿನಗಳನ್ನು ನಿಸರ್ಗದೊಡನೆ ಕಳೆಯುವ ನನ್ನ ಹಂಬಲಕ್ಕೆ ಮೊದಲು ತೋಚಿದ್ದು ಕುಮಾರ ಪರ್ವತ. ನನ್ನ ಚಾರಣ ಮಿತ್ರರಲ್ಲಿ ಮೂವರು ವಿದೇಶೀ ಪಾಲದ್ದರಿಂದ, ಉಳಿದ ಇಬ್ಬರಲ್ಲಿ ಒಮ್ಮತಕ್ಕೆ ಬರಲು ಹೆಚ್ಚಿನ ಸಮಯ ತಗಲಲಿಲ್ಲ. ಈ ಮೊದಲು ರಾಘವೇಂದ್ರ ಕುಮಾರ ಪರ್ವತಕ್ಕೆ ೨ ಬಾರಿ ಭೇಟಿ ಕೊಟ್ಟಿದ್ದರೂ ಮತ್ತೆ ಅಲ್ಲಿಗೆ ಹೋಗುವ ಉತ್ಸಾಹ ತೋರಿಸಿದ. ನಮ್ಮ ಹಳೇಯ ಜೊತೆಗಾರರನ್ನು ಬಿಟ್ಟು ನಾವಿಬ್ಬರೇ ಹೋಗುವ ವಿಚಾರದಿಂದ ಮೊದಲಿಗೆ ತುಸು ಇರುಸು ಮುರುಸಾದರೂ ಅಕ್ಟೋಬರ್ ೧ರ ರಾತ್ರಿ ಬೆಂಗಳೂರಿನಿಂದ ಸುಬ್ರಮಣ್ಯಕ್ಕೆ ಹೋಗಲಿರುವ ಕ.ರಾ.ರು.ಸಾ.ಸಂ.ನಲ್ಲಿ ೨ ಟಿಕೇಟನ್ನು ಕಾಯ್ದಿರಿಸಿದೆವು. ಟಿಕೇಟ್ ಕಾಯ್ದಿರಿಸಲು ವಿಳಂಬ ಮಾಡಿದ್ದರಿಂದ ಕೊನೇಯ ೨ ಸೀಟುಗಳಿಗೆ ತೃಪ್ತಿ ಪಡಬೇಕಾಯಿತು. ಮರಳುವ ದಿನ ನಿರ್ಧರಿಸಿರಲಿಲ್ಲವಾದ್ದರಿಂದ ಸುಬ್ರಮಣ್ಯದಿಂದ ಬೆಂಗಳೂರಿಗೆ ಬರುವ ಟಿಕೇಟನ್ನು ಕಾಯ್ದಿರಿಸಲಿಲ್ಲ.ಇದಲ್ಲದೆ ಹೊರಡುವ ದಿನ ರಾಘವೇಂದ್ರ ಬಾಡಿಗೆ ಟೆಂಟನ್ನು ತಂದದ್ದು ಬಿಟ್ಟರೆ ಇನ್ನಾವುದೇ ಪೂರ್ವ ತಯಾರಿ ಇರಲಿಲ್ಲ.ಸ್ಥಳ ಪುರಾಣ

ದಕ್ಷಿಣ ಕನ್ನಡ ಜೆಲ್ಲೆಯ,ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ಪುಣ್ಯ ಕ್ಷೇತ್ರ, ಕರ್ನಾಟಕದ ೨ನೇ ಎತ್ತರದ ಶಿಖರವಿರುವ (ಪುಷ್ಪಗಿರಿ - ಸಮುದ್ರ ಮಟ್ಟದಿಂದ ೫೬೧೫ ಅಡಿಗಳು - ಮೊದಲನೆಯ ಎತ್ತರದ ಶಿಖರ ಮುಳ್ಳಯ್ಯನಗಿರಿ, ಎತ್ತರ ಸಮುದ್ರ ಮಟ್ಟದಿಂದ ೬೩೧೭ ಅಡಿಗಳು) ಕುಮಾರ ಪರ್ವತದ ಮಡಿಲಲ್ಲಿ ನಿಂತಿದೆ.ಆಳೆತ್ತರದ ಗೋಡೆಯಂತೆ ಭೃಹದಾಕಾರವಾಗಿ ನಿಂತಿರುವ ಪಶ್ಚಿಮ ಘಟ್ಟದ ಸಾಲು, ಮಂದಗತಿಯಿಂದ ಸಾಗುವ ಕುಮಾರ ಧಾರೆ ನದಿ, ಈ ಕ್ಷೇತ್ರಕ್ಕೆ ಹೆಚ್ಚಿನ ಸೊಬಗನ್ನು ತಂದುಕೊಟ್ಟಿದೆ. ನಾಗಾರಾಧನೆಗೆ ದೇಶದಾದ್ಯಂತ ಪ್ರಸಿದ್ಧವಾದ ಈ ಕ್ಷೇತ್ರ, ಘಾಟಿ ಸುಬ್ರಮಣ್ಯ ಹೊರತು ಪಡಿಸಿದರೆ ನಾಗಾರಾಧನೆ ನಡೆಯುವ ಏಕೈಕ ಸ್ಥಳ ಎಂದು ಖ್ಯಾತಿ ಪಡೆದಿದೆ. ಆದುದರಿಂದ ದೇಶದಾದ್ಯಂತ ಜನರು ನಾಗ ದೋಷ ಪರಿಹಾರಾರ್ಥವಾಗಿ ಇಲ್ಲಿಗೆ ಭೇಟಿ ಕೊಡುವುದುಂಟು. ಕೇವಲ ಹಿಂದುಗಳು ಮಾತ್ರವಲ್ಲದೆ ಮುಸಲ್ಮಾನರಿಗೂ ಇದು ಪೂಜನೀಯ ಸ್ಥಳವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಸಲ್ಮಾನರೂ ಕೂಡ ನಾಗರ ಪಂಚಮಿಯಂದು ತನು(ಹೂವು, ಕಾಯಿ, ಹಣ್ಣು) ಕೊಡುವುದು ಕ್ರಮವಾಗಿದೆ.ಪ್ರಯಾಣ

ಅಕ್ಟೋಬರ್ ೧ರ ರಾತ್ರಿ ೯:೦೫ ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ತೊರೆದ ನಮ್ಮ ಬಸ್ಸು ಮಂದಗತಿಯಿಂದ ಪಶ್ಚಿಮ ದಿಕ್ಕಿನೆಡೆಗೆ ಹೊರಟಿತ್ತು. ಕಿಟಕಿ ಬಾಗಿಲನ್ನು ಸಂಪೂರ್ಣ ತೆರೆದು ಹೊರಗಿನ ದೃಶ್ಯ ವೀಕ್ಷಿಸುತ್ತಿದ್ದರೂ ನನ್ನ ಮನಸ್ಸು ಹಿಂದಿನ ಹಲವು ಚಾರಣದ ನೆನಪಿನಿಂದ ಮುಂದಿನ ಅನುಭವದ ಕಲ್ಪನೆಯನ್ನು ಹೊಸೆದು ಸ್ವಪ್ನ ಲೋಕದಲ್ಲಿ ವಿಹರಿಸುತ್ತಿತ್ತು. ಹಾಸನಕ್ಕೆ ತುಸು ಹಿಂದೆ ಯಾವುದೋ ಊರಿನಲ್ಲಿ ಊಟಕ್ಕೆಂದು ಬಸ್ಸು ನಿಲ್ಲಿಸಿದಾಗಷ್ಟೇ ನನ್ನ ಸ್ವಪ್ನ ಲೋಕದಿಂದ ಹೊರಬಂದದ್ದು. ತುಂತುರು ಮಳೆ ಬೀಳುತ್ತಿದ್ದುದರಿಂದ ಬಸ್ಸನ್ನಿಳಿದು ಚಹಾ ಕುಡಿಯುವ ಮನಸ್ಸಾಯಿತು. ರಾತ್ರಿ ಚಹಾ ಕುಡಿದರೆ ನಿದ್ರೆ ಬರುವುದಿಲ್ಲ ಎಂದು ಬಲ್ಲವರು ಹೇಳುತ್ತಾರಾದರೂ, ನನ್ನ ಸ್ವಾನುಭವ ಈ ಹೇಳಿಕೆಗೆ ಸಮ್ಮತಿಸಿರಲಿಲ್ಲ. ವಿದ್ಯಾರ್ಥಿಯಾಗಿದ್ದಾಗ ಪರೀಕ್ಷೆಗೆ ಓದಲೆಂದು ಚಹಾ ಕುಡಿದು ಪುಸ್ತಕ ಹಿಡಿದರೆ ಸಾಕು ತನ್ನಂತೆಯೇ ನಿದ್ರೆ ಆವರಿಸಿ ಬಿಡುತ್ತಿತ್ತು. ಇದು ಚಹಾದ ಮಹಿಮೆಯೋ ಇಲ್ಲಾ ಪುಸ್ತಕದ ಮಹಿಮೆಯೋ ಅಂತೂ ಚಹಾ ಕುಡಿದರೆ ನಿದ್ರೆ ಬರುವುದಿಲ್ಲವೆಂಬ ಮಾತಿನಲ್ಲಿ ನನಗೇಕೋ ನಂಬಿಕೆಯಿಲ್ಲ.೧೫ ನಿಮಿಷದಲ್ಲಿ ಬಸ್ಸು ಮತ್ತೆ ಹೊರಟು, ತೆರೆದ ಕಿಟಕಿಯಿಂದ ತಣ್ಣನೆಯ ಗಾಳಿ ಬೀಸತೊಡಗಿತು. ಚಳಿಯ ಕೊರೆತ ಜೋರಾಗಲು ಕಿಟಕಿಯ ಬಾಗಿಲನ್ನು ಮುಚ್ಚಿ ಮಲಗುವ ಪ್ರಯತ್ನ ಮಾಡಿದೆ. ಹಾಸನ ದಾಟಿ ಸಕಲೇಶಪುರದ ಕಡೆಗೆ ತೆರಳುತ್ತಿರಬೇಕಾದರೆ ಕೆಟ್ಟ ರಸ್ತೆಯಿಂದಾಗಿ ಹಡಗಿನಲ್ಲಿ ಕುಳಿತಿದ್ದೇನೆಯೋ ಎಂಬ ಭ್ರಮೆ ಉಂಟಾಯಿತು. ಬಸ್ಸಿನ ಓಲಾಟದಿಂದಾಗಿ ಅಗುಳು ಸರಿಯಿಲ್ಲದ, ಮುಚ್ಚಿದ ಕಿಟಕಿ ಸ್ವಲ್ಪ ಸ್ವಲ್ಪವೇ ತೆರೆದು ತಣ್ಣನೆಯ ಗಾಳಿ ನುಸುಳಿ ತೊಂದರೆ ಕೊಡತೊಡಗಿತು. ಚಿಕ್ಕ ತೆರವಿನಲ್ಲಿ ನುಸುಳುವ ಗಾಳಿ ಅಲ್ಪವಾದರೂ ಅದರ ಪರಿಣಾಮ ಮಾತ್ರ ಪೂರ್ತಿ ತೆರೆದ ಕಿಟಕಿಯಿಂದ ಸುಳಿಯುವ ಗಾಳಿಗಿಂತಲೂ ಅಧಿಕ, ಸೂಜಿ ಮೊನೆಯ ಸ್ಪರ್ಷ ಹಾಗೂ ಮೊಳೆಯ ಸ್ಪರ್ಷದ ನಡುವಿನ ವ್ಯತ್ಯಾಸದಂತೆ. ಆದ್ದರಿಂದ ಕಿಟಕಿಯ ಅಗುಳನ್ನೂ, ಬಸ್ಸನ್ನೂ, ಕ.ರಾ.ರು.ಸಾ.ಸಂ.ನ್ನೂ ಶಪಿಸುತ್ತ ಕಿಟಕಿಯನ್ನು ಪೂರ್ತಿಯಾಗಿ ತೆರೆದೆ. ಶಿರಾಡಿ ಘಾಟಿ ಹತ್ತಿರಬಂದಂತೆ ರಸ್ತೆಯ ಗುಣಮಟ್ಟ ಇನ್ನೂ ಕಳಪೆಯಾದ್ದರಿಂದ ನಿದ್ರೆಯ ಆಸೆಯನ್ನು ತೊರೆದು ಕಿಟಕಿಯ ಹೊರಗೆ ದೃಷ್ಟಿ ನೆಟ್ಟು ಮತ್ತೆ ಅಂತರ್ಮುಖಿಯಾದೆ. ೫ ಗಂಟೆಗೆ ನಮ್ಮ ಈ ಸೊಗಸಾದ ಪ್ರಯಾಣ ಮುಗಿದು ಸುಬ್ರಮಣ್ಯ ತಲುಪಿದ್ದೆವು.ಉಗ್ರಗಾಮಿಗಳಾಗಿ

ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ಕೊಡುವವರು, ಇತರ ಪುಣ್ಯ ಕ್ಷೇತ್ರಗಳಂತೆಯೇ ಸಾಮನ್ಯವಾಗಿ ನದಿಯ ಸ್ನಾನ ಘಟ್ಟಕ್ಕೆ ತೆರಳಿ, ದೇಹದ ಪಾಪ ತೊಳೆದು, ಶುದ್ಧ ಮನಸ್ಸಿನಿಂದ ದೇವರ ದರ್ಶನ ಮಾಡುವುದು ಪದ್ಧತಿ. ಅಂತೆಯೇ ನಾವೂ ಕೂಡ ಬಸ್ ನಿಲ್ದಾಣದಿಂದ ೧.೫ ಕಿ.ಮಿ. ದೂರವಿರುವ ಸ್ನಾನ ಘಟ್ಟಕ್ಕೆ ತೆರಳಿದೆವು. ೫ ಗಂಟೆಗೆಲ್ಲಾ ಜನರು ಜಮಾಯಿಸಿರುವ ಸಾಧ್ಯತೆ ಬಹಳ ಅಲ್ಪವೆಂದು ಬಗೆದಿದ್ದ ನಮ್ಮ ಆಲೋಚನೆ ಸುಳ್ಳಾಗಿತ್ತು. ಕೆಲವು ಜನರು ನಮಗಿಂತಲೂ ಮುಂಚೆ ಬಂದು ಅದಾಗಲೇ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೊರಡುತ್ತಿದ್ದರೆ, ಇನ್ನು ಕೆಲವರು ಸ್ನಾನದಲ್ಲಿ ತೊಡಗಿದ್ದರು.ನದಿಯ ತಟದಲ್ಲಿದ್ದ ಧ್ವನಿವರ್ಧಕದಲ್ಲಿ ಸುಬ್ಬಲಕ್ಷ್ಮಿಯವರ "ಶುಕ್ಲಾಂ ಭರದರಂ ವಿಷ್ಣುಂ" ಬದಲಾಗಿ ಕಳ್ಳಕಾಕರಿಂದ ಜಾಗ್ರತೆಯಾಗಿರುವಂತೆ ಜನರಿಗೆ ಎಚ್ಚರಿಕೆಯ ಸಂದೇಶ ಬಿತ್ತರಿಸಲಾಗುತ್ತಿತ್ತು.ಜನ ಸಂದಣಿಯಿಂದ ಬೇಸತ್ತು ನದಿಗೆ ಅಡ್ಡವಾಗಿ ಕಟ್ಟಿದ್ದ ಸೇತುವೆಯ ಬಳಿ ತೆರಳಿದೆವು. ಸುಮ್ಮನೇ ಕುಳಿತು ಹೊತ್ತು ಹೋಗದ್ದುದ್ದರಿಂದ ನನ್ನ ಟ್ರೈಪೋಡ್ ನಿಲ್ಲಿಸಿ, ಅದರ ಮೇಲೆ ಕ್ಯಾಮರಾ ಇಟ್ಟು ಫೋಟೊ ತೆಗೆಯಲಾರಂಭಿಸಿದೆ. ಒಂದೇ ಒಂದು ಫೋಟೊ ತೆಗೆದಿದ್ದೆನಷ್ಟೆ, ಅದೆಲ್ಲಿಂದಲೋ ಬಂದ ಆಟೋ ಚಾಲಕ ನಮ್ಮ ಬಗ್ಗೆ ತನಿಖೆ ಆರಂಭಿಸಿದ. ಕುತೂಹಲಕ್ಕಿರಬಹುದು ಎಂದು ಲಘುವಾಗಿ ತೆಗೆದುಕೊಂಡು ಆತನ ಪ್ರಶ್ನೆಗೆ ಉತ್ತಿರಿಸುತ್ತಿರುವಾಗಿ, ಸುಮಾರು ೧೦ ಜನರ ಗುಂಪೇ ಅಲ್ಲಿ ಕಲೆತಿತು. ನೀವ್ಯಾರು, ಎಲ್ಲಿಂದ ಬಂದಿರಿ, ಹೆಸರೇನು, ಇಲ್ಲಿ ಏನು ಮಾಡುತ್ತಿರುವಿರಿ ಮುಂತಾದ ಪ್ರಶ್ನೆಗಳ ಸುರಿಮಳೆ. ಎಲ್ಲಿಂದ ಬಂದಿರಿ ಎಂಬ ಅವರ ಪ್ರಶ್ನೆಗೆ ನಾನು ಕೋಟ ಎಂದೂ, ರಾಘವೇಂದ್ರ ಬೆಂಗಳೂರು ಎಂದು ಒಮ್ಮೆಲೇ ಉಸುರಿದ್ದರಿಂದ ಅವರ ಅನುಮಾನಕ್ಕೆ ಪುಷ್ಟಿ ದೊರೆತು, ನಡೆಯಿರಿ ಆರಕ್ಷಕರ ಕಛೇರಿಗೆ ಎಂದು ನನ್ನ ರಟ್ಟೆ ಹಿಡಿದು ಕರೆದೊಯ್ಯಲನುವಾದರು. ನನಗೂ ಕೋಪ ಬಂದು ನನ್ನ ಬಳಿಯಿರುವ ಪ್ಯಾನ್ ಕಾರ್ಡ್ ತೋರಿಸಿದ ಮೇಲೆ ತುಸು ತಣ್ಣಗಾಗಿ, "ಹೀಗೆಲ್ಲ ಅನುಮಾನಾಸ್ಪದವಾಗಿ ತಿರುಗಾಡಬಾರದು, ದೇಶದಲ್ಲಿ ಆಗುವ ಅನಾಹುತದ ಬಗ್ಗೆ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿ ಜನರಿರುವ ಕಡೆ ಹೋಗಲು ಆದೇಶಿಸಿದರು. ಅವರ ಅನುಮಾನವೂ ಸರಿಯಾದದ್ದೇ ಎಂದು ಬಗೆದು ಅಲ್ಲಿಯೇ ಬಳಿಯಲ್ಲಿರುವ ಚಹಾ ಅಂಗಡಿಗೆ ತೆರಳಿ, ಕಾಲ ಹರಣ ಮಾಡಿ ನಂತರ ಸ್ನಾನ ಘಟ್ಟದ ಬಳಿಯಲ್ಲಿರುವ ಶೌಚಾಲಯಕ್ಕೆ ತೆರಳಿ ದೇಹಭಾದೆ ತೀರಿಸಿಕೊಂಡು, ಅರುಣೋದಯದ ಸಮಯಕ್ಕೆ ಸರಿಯಾಗಿ ಸೇತುವೆಯ ಇನ್ನೊಂದು ಮಗ್ಗುಲಲ್ಲಿರುವ ನದೀ ತೀರಕ್ಕೆ ತೆರಳಿದೆವು. ಸ್ನಾನ ಮಾಡೋಣವೆಂದಿದ್ದರೆ, ಶೌಚಾಲಯವಿದ್ದೂ ನದಿಯ ತೀರದಲ್ಲಿಯೇ ದೇಹಭಾದೆ ತೀರಿಸಿಕೊಳ್ಳುತ್ತಿದ್ದ ಭಕ್ತರನ್ನು ನೋಡಿ ಜಿಗುಪ್ಸೆಗೊಂಡು ಕೈಕಾಲು ಮುಖಗಳನ್ನು ತೊಳೆದುಕೊಂಡು, ದೇಹ ಶುದ್ಧಿಗಿಂತ ಮನಃಶುದ್ಧಿ ಮುಖ್ಯ ಎಂಬ ಮಾತಿನಂತೆ ದೇವಸ್ಥಾನದ ಕಡೆಗೆ ತೆರಳಿದೆವು.ದೇವರ ದರ್ಶನ

ನದೀ ತೀರದಿಂದ ಸುಬ್ರಮಣ್ಯ ದೇಗುಲಕ್ಕೆ ಬರುವ ಮಧ್ಯೆ ಇನ್ನೆರಡು ದೇವಾಲಯ ಸಿಗುತ್ತದೆ. ಮೊದಲನೆಯದ್ದು ವನದೇವಿಯದ್ದು, ಎರಡನೆಯದ್ದು ಗಣೇಶನದ್ದು. ವನ ಸುತ್ತಲು ಹೊರಟ ನಮಗೆ ವನದೇವಿಯ ಕೃಪಾಕಟಾಕ್ಷ ಅನಿವಾರ್ಯವಾದದ್ದರಿಂದ ಮೊದಲು ಸಿಕ್ಕ ವನದೇವಿಯ ಗುಡಿಯನ್ನು ಹೊಕ್ಕೆವು. ಜಂಬಿಟ್ಟಿಗೆ (ನೈಸರ್ಗಿಕವಾಗಿ ಸಿಗುವಂತಹ ಇಟ್ಟಿಗೆ ಬಣ್ಣದ ಕಲ್ಲು ಚಪ್ಪಡಿ) ಜೋಡಿಸಿ, ಸಿಮೆಂಟಿನ ಗಾರೆಯಿಲ್ಲದ ಹೆಂಚಿನ ಗುಡಿ, ಬೆಳಿಗ್ಗಿನ ಸೂರ್ಯ ಕಿರಣದಿಂದಾಗಿ ಸುಂದರವಾಗಿತ್ತು. ಗರ್ಭಗುಡಿಯೊಳಗೆ ಎರಡೂ ಕಡೆ ಹಚ್ಚಲಾಗಿದ್ದ ಎಳ್ಳೆಣ್ಣೆಯ ದೀಪದಿಂದ ಹೊಮ್ಮುತ್ತಿರುವ ಬೆಳಕಿನಿಂದ, ದೇವರ ವಿಗ್ರಹ ಅರೆಬರೆಯಾಗಿ ಕಾಣಿಸುತ್ತಿತ್ತು. ತೀರ್ಥವನ್ನು ಸೇವಿಸಿ ಮುಂದೆ ಗಣೇಶನ ಗುಡಿಯತ್ತ ಹೊರಟೆವು. ಕಪ್ಪು ಬಳಪದ ಕಲ್ಲಿನ ಸುಮಾರು ೫-೬ ಆಳೆತ್ತರದ ಗಣೇಶನ ವಿಗ್ರಹ ಸುಂದರವಾಗಿತ್ತು. ಇದಕ್ಕೆ ಅಲಂಕಾರಕ್ಕಾಗಿ ಹಿಂದುಗಡೆಯಿಂದ ಏಣಿಯನ್ನೂ ಇಡಲಾಗಿತ್ತು. ಗಣೇಶನ ಪ್ರಸಾದವನ್ನೂ ಸ್ವೀಕರಿಸಿ ಸುಬ್ರಮಣ್ಯನ ಗುಡಿಗೆ ತೆರಳಿದೆವು. ತೀರಾ ನೂಕು ನುಗ್ಗಲು ಇರದಿದ್ದರೂ ದೇವಾಲಯ ಜನನಿಬಿಡವಾಗಿತ್ತು. ಸಾಲಂಕೃತವಾದ ಸುಬ್ರಮಣ್ಯನ ವಿಗ್ರಹ ದೇದೀಪ್ಯಮಾನದಿಂದ ಕಂಗೊಳಿಸುತ್ತಿತ್ತು. ಹೆಚ್ಚಿನ ಆಧುನೀಕತೆಯ ವೈಭವವಿರದ ಗುಡಿ ಸರಳವಾಗಿತ್ತು. ಅಲ್ಲಿಂದ ಹೊರಟು ದೇವಾಲಯದ ಪಕ್ಕದಲ್ಲೇ ಇದುವ ಆದಿ ಸುಬ್ರಮಣ್ಯ ದೇವಸ್ಥಾನದ ಕಡೆ ಪಾದ ಬೆಳೆಸಿದೆವು. ದಾರಿಯಲ್ಲಿ ಅಕ್ಕಪಕ್ಕದಲ್ಲಿ ಭಕ್ತಿ ಗೀತೆಯ ಧ್ವನಿ ಸುರುಳಿ, ದೇವರ ಫೊಟೊ,ಹೂವು ಹಣ್ಣು ಮಾರುವ ಅಂಗಡಿಗಳಿದ್ದವು. ಕುಮಾರಧಾರೆಯ ಸಣ್ಣದೊಂದು ಸೆರಗು ಇದನ್ನು ಬಳಸಿ ಹರಿಯುತ್ತದೆ. ಎದುರಿಗಿರುವ ಅಶ್ವತ್ಥ ವೃಕ್ಷಕ್ಕೆ ಮಹಿಳೆಯರು ಕೆಂಪು ದಾರವನ್ನು ಸುತ್ತುತ್ತಾ ಸುತ್ತು ಬರುತ್ತಿದ್ದರು.ಇಲ್ಲಿಯ ವಿಗ್ರಹ ನೆನಪಿಗೆ ಬಾರದಿದ್ದರೂ ಒಳಗೆ ಹುತ್ತವನ್ನು ಕಂಡಿದ್ದು ನೆನಪಿನಲ್ಲಿದೆ, ಅಲ್ಲದೆ ಇಲ್ಲಿ ಹುತ್ತದ ಮಣ್ಣನ್ನೇ ಪ್ರಸಾದವಾಗಿ ನೀಡುತ್ತಾರೆ.ಅವಶ್ಯ ವಸ್ತುಗಳ ಸಂಗ್ರಹ


ದೇವರ ದರ್ಶನ ಮುಗಿಸಿ ಮೊದಲು ಮಾಡಿದ ಕೆಲಸ ಹೊಟ್ಟೆ ತುಂಬಿಸಿದ್ದು. ರಥ ಬೀದಿಯಲ್ಲಿ ಇರುವ ಹೋಟೆಲ್ ಒಂದಕ್ಕೆ ನುಗ್ಗಿ ಹಸಿವನ್ನು ತಣಿಸಿ, ಇನ್ನೆರಡು ದಿನಕ್ಕೆ ಬೇಕಾಗುವಷ್ಟು ಪೂರಿ, ಬನ್ಸ್, ಪರೋಟವನ್ನು ಕಟ್ಟಿಸಿಕೊಂಡು ಹೊರಬಿದ್ದೆವು.ದಾರಿ ಖರ್ಚಿಗೆ ಚೊಕಲೇಟುಗಳನ್ನೂ, ಟೆಂಟ್ ಹಿಡಿದುಕೊಳ್ಳಲು ಸುಲಭವಾಗಲು ಗೋಣಿ ದಾರವನ್ನೂ,ದಾಹ ನೀಗಿಸಲು ನೀರನ್ನೂ, ರಾತ್ರಿಗಾಗಿ ಟಾರ್ಚ್, ಮೇಣದ ಬತ್ತಿ, ಬೆಂಕಿ ಪೊಟ್ಟಣವನ್ನು ಕೊಂಡು ನಮ್ಮ ಸಾಮಾನುಗಳನ್ನು ಇರಿಸಿದ್ದ ಕಛೇರಿಯತ್ತ ನಡೆದೆವು.ನಡೆದಾಡುವ ಗಾಂಧಿರಥ ಬೀದಿಯಲ್ಲಿ ನಿಲ್ಲಿಸಲಾಗಿದ್ದ ಬೆಳ್ಳಿ ವರ್ಣದ ಗಾಂಧಿ ಪ್ರತಿಮೆಯನ್ನು ನೋಡಿದಾಗ ಇಂದು ಅಕ್ಟೋಬರ್ ೨, ಗಾಂಧಿಜಯಂತಿ ಎಂಬ ನೆನಪಾಯಿತು! ಸುತ್ತಲೂ ಜನರ ಗುಂಪಿದ್ದು, ಪ್ರತಿಮೆಗೆ ಹತ್ತಿರದಲ್ಲಿಯೇ ಕಾಣಿಕೆ ಡಬ್ಬ ಇದ್ದುದರಿಂದ ನಮ್ಮ ಕುತೂಹಲ ಹೆಚ್ಚಿ, ಸಮೀಪ ಹೋದಾಗಲೇ ತಿಳಿದಿದ್ದು ಅದು ಗಾಂಧಿಯ ಪ್ರತಿಮೆಯಲ್ಲ, ಗಾಂಧಿಯ ವೇಷ ತೊಟ್ಟ "ಸುರೇಂದ್ರ ಬಾಬು" ಎಂದು. ನಡೆದಾಡುವ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ಇವರು ೬೮ರ ಇಳಿವಯಸ್ಸಿನಲ್ಲೂ ದೇಶದೆಲ್ಲೆಡೆ ಸಂಚರಿಸುತ್ತ, ಗಾಂಧಿಯ ವೇಷ ತೊಟ್ಟು ೨೦ ಗಂಟೆಗಳಷ್ಟು ಕಾಲ ಪ್ರತಿಮೆಯಂತೆ ನಿಲ್ಲಬಲ್ಲವರು. ಒಂದು ಗಂಟೆಗಳಿಗೊಮ್ಮೆ ಕಾಲನ್ನು ಬದಲಿಸುವುದು ಬಿಟ್ಟರೆ, ಅವರು ಉಸಿರಾಡುವುದೂ ಕೂಡ ಗಮನಿಸುವುದು ಕಷ್ಟ! ವಿಶೇಷ ಸಂದರ್ಭಗಳಲ್ಲಿ ದೇಶ ಸಂಚರಿಸುವ ಇವರು ಕೆಲಸದಲ್ಲಿರುವುದು ಮೈಸೂರಿನ ಮೃಗಾಲಯದಲ್ಲಿ.ಮೊದಲ ಘಟ್ಟ


ಕೊಂಡ ವಸ್ತುಗಳನ್ನು ನಮ್ಮ ಚೀಲಕ್ಕೆ ತುಂಬಿಸಿಕೊಂಡರೆ, ಅದು ಬಿರಿಯುವಂತೆ ಉಬ್ಬಿ ತೂಕವನ್ನು ಇಮ್ಮಡಿಗೊಳಿಸಿಕೊಂಡಿತು. ಭಾರವಾದ ಹೊರೆ ಹೊತ್ತು, ದೇವಾಲಯದ ಎಡಗಡೆ ಇರುವ ಡಾಮರು ರಸ್ತೆಯಲ್ಲಿ ಮುಂದುವರೆದೆವು. ದಾರಿಯ ಬೇಲಿಯಲ್ಲಿ ಬೆಳೆದ ಕಾಡು ಹೂಗಳು, ಮಕರಂದಕ್ಕೆ ಎರಗುವ ಚಿಟ್ಟೆ, ಅವನ್ನು ಹಿಡಿಯಲು ಬಂದ ಮಡಿವಾಳ ಹಕ್ಕಿ, ಊರ ಕೋಳಿ,ರಸ್ತೆಯಿಂದ ಸರ್ರನೆ ಸರಿದು ಹೋದ ಯವುದೋ ಜಾತಿಯ ಕರಿ ಉರಗ, ಇವನ್ನೆಲ್ಲಾ ನೋಡುತ್ತ ೩ ಫರ್ಲಾಂಗ್ ನಡೆಯುವಷ್ಟರಲ್ಲಿ ರಸ್ತೆಯ ಎಡಗಡೆಯಲ್ಲಿ ಒಂದು ಕಾಲು ದಾರಿ ಹಾಗೂ "ಚಾರಣಿಗರಿಗೆ ಸ್ವಾಗತ" ಎಂಬ ಫಲಕದಲ್ಲಿ ಕೆಲವು ಉಪಯುಕ್ತ ಮಾಹಿತಿ ಕಂಡುಬಂದಿತು. ಪರ್ವತದ ಎತ್ತರ, ಮೊದಲು ನೀರು ಸಿಕ್ಕುವ ಸ್ಥಳ, ಚಾರಣದ ವಿವಿಧ ಹಂತಗಳು, ಪಾಲಿಸಬೇಕಾದ ನಿಯಮಗಳು ಹಾಗೂ ಚಿತ್ರಗಳು ಈ ಫಲಕದಲ್ಲಿದ್ದವು. ಇಲ್ಲಿಂದ ಕುಮಾರ ಪರ್ವತದ ಶಿಖರ ೧೩ ಕಿ.ಮೀ. ಹಾಗೆಯೇ ಕಾಲು ಹಾದಿಯಲ್ಲಿ ಸಾಗುತ್ತ ಮುಂದುವರಿದಂತೆ ಎಲ್ಲಿಯೂ ಸಮತಟ್ಟು ಅಥವಾ ಇಳುಜಾರಿನ ಸುಳಿವೇ ಇಲ್ಲದಂತೆ ದಾರಿ ಒಂದೇ ಸಮನೆ ಮೇಲಕ್ಕೇರುತ್ತಾ ಸಾಗುತ್ತದೆ. ಹೊಟ್ಟೆ ತುಂಬ ತಿಂದ ಪರಿಣಾಮವಾಗಿ ಮೊದಲಿಗೆ ಕೇವಲ ೧ ಕಿ.ಮೀ.ಗೆ ೧ ಗಂಟೆಯಂತೆ ಮುಂದುವರೆದರೂ ಬರುಬರುತ್ತಾ ನಮ್ಮ ನಡಿಗೆ ನಿಧಾನವಾಗಿ, ನಡೆಯುವುದಕ್ಕಿಂತ ವಿಶ್ರಮಿಸುವುದೇ ಅಧಿಕವಾಗ ತೊಡಗಿತು. ಹೀಗೆಯೇ ಒಂದು ಕಡೆ ವಿಶ್ರಮಿಸುತ್ತಿರಬೇಕಾದರೆ ೩ ಜನರ ಇನ್ನೊಂದು ತಂಡ ಸಮೀಪಿಸಿತು. ಮೂವರೂ ಸುಮಾರು ೪೦ರ ಆಸುಪಾಸಿನವರು, ಒಬ್ಬನ ಕೈಯಲ್ಲಿ ನಾರಿನ ಚೀಲವಿತ್ತು. ಉಭಯ ಕುಶಲೋಪರಿಯ ನಂತರ ಅವರೂ ಕೂಡ ಬೆಂಗಳೂರಿನವರೇ ಎಂದು ತಿಳಿದು ಬಂತು.ತಮ್ಮನ್ನು ಪತ್ರಕರ್ತರೆಂದು ಪರಿಚಯಿಸಿಕೊಂಡು ತಾವು ಬಂದ ಉದ್ದೇಶ ಚಾರಣವಲ್ಲ, "ಕುಮಾರ ಕುಂಭ" ಎಂಬ ಸ್ಪಟಿಕದಂತಹ ಕಲ್ಲನ್ನು ಅರಸಲು ಬಂದಿರುವುದಾಗಿಯೂ, ಅದು ಪರ್ವತದ ಮೇಲಿರುವ ಗುಡಿಯ ಬಳಿ ಸಿಕ್ಕುತ್ತದೆ ಎಂದೂ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸಿದರೆ ಅದೃಷ್ಟ ದೇವತೆ ಒಲಿಯುವುದಾಗಿಯೂ ತಿಳಿಸಿದರು. ಇಷ್ಟೆಲ್ಲಾ ಮಾತುಕತೆಯ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಸಿದೆವು. ೩ ಕಿ.ಮೀ. ಗಳಷ್ಟು ಮುಂದೆ ಸಾಗಲಾಗಿ ಭೀಮನಕಲ್ಲು ಎಂಬ ಹೆಸರಿನ ನೀರಿನ ಒರತೆ ಎದುರಾಯಿತು. ಬೆವರಿಳಿದು ಒದ್ದೆಯಾಗಿದ್ದ, ಬವಳಿ ಮುದ್ದೆಯಂತಾಗಿದ್ದ, ಶರೀರಕ್ಕೆ ತಣ್ಣನೆಯ ನೀರಿನ ಸಿಂಚನದಿಂದ ಮರು ಜೀವ ಬಂದಂತಾಯಿತು. ಆ ಕಾಡಿನಲ್ಲಿ ಹರಿಯುವ ನೀರಿಗೆ ಅದ್ಯಾವ ಶಕ್ತಿ ಇದೆಯೋ ಎನೋ, ಅದರ ಸ್ಪರ್ಷ ಮಾತ್ರದಿಂದ ಮೈಯಲ್ಲಿ ಉಲ್ಲಾಸ ಸಂಚರಿಸಿದಂತಾಗಿ ಅದುವರೆಗೂ ಮಂದವಾಗಿ ಕೇಳಿಸುತ್ತಿದ್ದ ಹಲವು ಬಗೆಯ ಹಕ್ಕಿಗಳ ಮಧುರ ಸಂಗೀತ, ತಮ್ಮ ಅಸ್ಥಿತ್ವವನ್ನು ಸಾರಲೋ ಎಂಬಂತೆ ಕಿರುಚಾಡುವ ಕೀಟ, ಎತ್ತರೆತ್ತರದ ಮರದ ಚಿಗುರು,ಪೊದೆಗಳು, ಹುಲ್ಲುಗಳು, ಸೂರ್ಯ ಕಿರಣಗಳು ಅದರ ಮೇಲೆ ಬಿದ್ದು ಮತ್ತೆ ಕೆಲವು ನುಸುಳಿ ಬಂದು ಉಂಟುಮಾಡುತ್ತಿದ್ದ ಬೆಳಕಿನಾಟ, ಹಲವು ಬಗೆಯ ಮಿಡತೆಗಳು, ಆಕರ್ಷಕ ವರ್ಣ ಸಂಯೋಜನೆಯೊಂದಿಗೆ ನವಿರಾದ ಕೂದಲಿನ ಕಂಬಳಿ ಹುಳುಗಳು, ತೇವ ಭರಿತ ಕತ್ತಲೆಯಲ್ಲಿ ಬೆಳೆದ ಪಾಮಾಜಿಗಳು, ಅಣಬೆಗಳು, ಕಲಾತ್ಮಕವಾಗಿ ಬಲೆ ಹೆಣೆದು ಭೇಟೆಗಾಗಿ ಹೊಂಚು ಹಾಕುತ್ತಿದ್ದ ಜೇಡಗಳು, ಮಂದಗತಿಯಿಂದ ಹರಿಯುವ ನೀರಿನಲ್ಲಿ ಬರೀ ಕಣ್ಣು ಮಾತ್ರ ಮೇಲೆ ಕಾಣಿಸುವಂತೆ ದೇಹವನ್ನು ಹುದುಗಿಸಿ ಕುಳಿತ ಕಪ್ಪೆಗಳು,ಕಲ್ಲಿನ ಸಂದಿಯಲ್ಲಿ ಓಡಾಡುವ ಏಡಿಗಳು, ಹಾಗೂ ಪರಿಚಯವಿಲ್ಲದ ಇನ್ನೂ ಅನೇಕ ಬಗೆಯ ಜೀವವೈವಿಧ್ಯಗಳು ಗಮನಕ್ಕೆ ಬಂದವು. ಇದ್ದ ಕಾಡನ್ನು ಕಡಿದು, ಅರಣ್ಯ ಬೆಳೆಸುವ ಉದ್ದೇಶದಿಂದ ಗುಡ್ಡಗಳ ಮೇಲೆ ಕೆಲವು ಅಕೇಶಿಯಾ ಗಿಡ ಹಾಕಿಬಿಟ್ಟ ಮಾತ್ರಕ್ಕೆ ಅದು ಹೆಸರಿಗೆ ಹಸುರಾಗಿರುತ್ತದೆಯೇ ಹೊರತು, ಇಂತಹ ವಿವಿಧತೆಯಿಂದ ಕೂಡಿದ ಅರಣ್ಯವಾಗಲಾರದು.
ಮತ್ತೆ ಹೊರಲಾರದ ಹೊರೆ ಹೊತ್ತು, ಏದುಸಿರು ಬಿಡುತ್ತಾ ಹತ್ತಿಪ್ಪತ್ತು ಹೆಜ್ಜೆಗೊಮ್ಮೆ ವಿಶ್ರಾಂತಿ ತೆಗೆದುಕೊಳ್ಳುತ್ತಾ ಸಾಗುತ್ತಿರಬೇಕಾದರೆ ಗಿರಿಗದ್ದೆ ಮನೆಯ ಭಟ್ಟರ ತಮ್ಮನ ಭೇಟಿಯಾಯಿತು. ದಾರಿಯಲ್ಲಿ ಸಿಕ್ಕ ಪತ್ರಕರ್ತರ ವಿಷಯ ಕೇಳಲಾಗಿ, ಅವರು ಕಂಠ ಪೂರ್ತಿ ಕುಡಿದು ಮರಳಿದರು ಎಂಬ ಉತ್ತರ ಬಂತು. ಪರಿಚಯವಾದ ನಂತರ ಚುರುಕು ನಡಿಗೆಯ ಭಟ್ಟರ ತಮ್ಮ, ಸರಸರನೆ ಹೆಜ್ಜೆ ಹಾಕಿ ನಡೆದು ಹೋದರೆ, ನಾವು ನಮ್ಮದೇ ವೇಗದಲ್ಲಿ ಮುಂದುವರಿದೆವು. ಮುಂದೆ ಮರಗಳು ವಿರಳವಾಗುತ್ತಾ ಹೋಗಿ ಬೆಟ್ಟದ ತಪ್ಪಲು ಕಾಣಿಸತೊಡಗಿ, ಇಮ್ಮಡಿ ಉತ್ಸಾಹದಿಂದ ಬಳಸು ದಾರಿ ತೊರೆದು ನೇರದಾರಿಯನ್ನು ಹಿಡಿದೆವು. ನೇರ ಎಂಬುದು ಕ್ರಮಿಸಿದ ಹಾದಿಯ ತುದಿಗಳನ್ನು ಜೋಡಿಸಿದಾಗ ಸಿಗುವ ರೇಖಾಗಣಿತದ ಸರಳ ರೇಖೆಯಾಗಿತ್ತೇ ಹೊರತು, ಉದ್ದೇಶಪಟ್ಟು ಮಾಡಿದ ಸುಲಭದ ಕಾಲುಹಾದಿಯಾಗಿರಲಿಲ್ಲ; ಆಳೆತ್ತರಕ್ಕೆ ಬೆಳೆದ, ಮೈ ಸೋಕಿದರೆ ಚರ್ಮ ಕಿತ್ತು ಹೋಗುವ ಹುಲ್ಲುಗಳು, ಮಳೆಗಾಲದಲ್ಲಿ ನೀರು ಹರಿದು ಉಬ್ಬು ತಗ್ಗಿನಿಂದ ಕೂಡಿದ, ಕಲ್ಲು ಎದ್ದು ಬಂದಿರುವ ಹಾದಿ. ಅಂತೂ ಗುಡ್ಡದ ನೆತ್ತಿ ತಲುಪಿ ಬೆಳೆದೊಂದು ಮರದ ಬುಡದಲ್ಲಿ ವಿಶ್ರಮಿಸುತ್ತಾ ಕುಳಿತಿರಬೇಕಾದರೆ, ನೀರಡಿಕೆಯಾಗಿ ಎಷ್ಟು ನೀರು ಕುಡಿದರೂ ತೃಪ್ತಿಯಾಗದ ಸ್ಠಿತಿಯನ್ನು ತಲುಪಿದ್ದೆವು. ಆಗ ಆದಿ ಸುಬ್ರಮಣ್ಯದಲ್ಲಿ ಪ್ರಸಾದವಾಗಿ ಕೊಟ್ಟಿದ್ದ ಬೆಲ್ಲದ ನೆನಪು ಬಂದು, ಅದರೊಂದಿಗೆ ನೀರು ಕುಡಿದ ನಂತರ ತುಸು ಸಮಾಧಾನವಾಯಿತು.ಬೆಲ್ಲದೊಂದಿಗೆ ಅವಲಕ್ಕಿ ಹಾಗೂ ತೆಂಗಿನ ಕಾಯಿ ಕಡಿ ಕೊಟ್ಟಿದ್ದರಿಂದ, ತುರುಮಣೆ ಹೊತ್ತು ತಂದಿದ್ದರೆ ಕಾಯಿ ತುರಿದು, ಬೆಲ್ಲ ಹೆರೆದು ಅವಲಕ್ಕಿಯೊಂದಿಗೆ ಕಲಸಿ ತಿನ್ನಬಹುದಾಗಿತ್ತು ಎಂಬ ಆಲೋಚನೆ ಬಂದಿತು. ತುರುಮಣೆ ಇಲ್ಲದಿದ್ದರೇನಂತೆ, ಕಾಯನ್ನು ಬಂಡೆಗೆ ಕುಟ್ಟಿ ಅದರಿಂದ ಕರಟವನ್ನು ಬೇರ್ಪಡಿಸಿ, ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ, ಬೆಲ್ಲವನ್ನು ಕೈಯಲ್ಲಿ ಹಿಸುಕಿ ಅವಲಕ್ಕಿಯೊಂದಿಗೆ ಬೆರೆಸಿದೆವು. ಈ ಮಿಶ್ರಣವನ್ನು ಒಂದೊಂದೇ ಮುಷ್ಟಿ ಬಾಯಿಗೆ ಹಾಕಿಕೊಳ್ಳುತ್ತಿದಂತೆ, ತೆಂಗಿನ ಕಾಯ ಹೋಳುಗಳು ಹಲ್ಲುಗಳ ನಡುವೆ ಸಿಲುಕಿ, ಚಿಕ್ಕ ಚಿಕ್ಕ ಚೂರುಗಳಾಗಿ ಹಾಲನ್ನು ಸ್ರವಿಸುತ್ತಾ, ಬೆಲ್ಲದ ಸವಿಯೊಡನೆ ಬೆರೆತು, ಶುಷ್ಕವಾದ ಅವಲಕ್ಕಿಯನ್ನು ನೆನೆಯಿಸಿ ಜಠರಾಗ್ನಿಯನ್ನು ತಣಿಸತೊಡಗಿ ಅಪೂರ್ವ ಆನಂದ ಉಂಟಾಯಿತು.
ಮುಂದಿನ ದಾರಿ ಹೆಚ್ಚು ಏರಿಲ್ಲದೇ ಸುಗಮವಾಗಿ ಸಾಗಿತ್ತಾದರೂ ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು. ೧ ಗಂಟೆ ನಡೆಯುವುದರೊಳಗೆ ಭಟ್ಟರ ಮನೆ (ಗಿರಿಗದ್ದೆ) ಸಮೀಪಿಸಿದ್ದೆವು. ಈ ೬ ಕಿ.ಮೀ. ಕ್ರಮಿಸಲು ನಾವು ತೆಗೆದುಕೊಂಡ ಸಮಯ ೪ ೧/೨ ಗಂಟೆಗಳಷ್ಟು. ನಮ್ಮ ಬಳಿ ಬಾಡಿಗೆಗೆ ಕೊಂಡು ಬಂದ ಟೆಂಟು ಹಾಗೂ ಊಟಕ್ಕೆ ಬೇಕಾದಷ್ಟು ಇದ್ದುದರಿಂದ ಭಟ್ಟರ ಮನೆಗೆ ಹೋಗದೆ, ಅವರ ಮನೆಗೆ ತುಸು ದೂರದಲ್ಲಿ ನಮ್ಮ ಅಂದಿನ ಪ್ರಯಾಣ ಮುಗಿಸಿದೆವು. ಬಲಗಡೆ ಉನ್ನತವಾದ ಬೆಟ್ಟದ ಸಾಲಿದ್ದು ಮರುದಿನದ ಪ್ರಯಾಣ ಅದನ್ನು ಹಾದೇ ಹೋಗಬೇಕಿತ್ತು. ನಾವು ತಂಗಿದ ಸ್ಥಳ ಹಿಂದಿನ ಅರಣ್ಯ ಇಲಾಖೆಯವರ ಕಛೇರಿಯಿದ್ದ ತಳಪಾಯವಾಗಿತ್ತು. ಮೂರು ಕಡೆ ಗುಡ್ಡಗಳಿಂದಾವೃತವಾದ ಸ್ಥಳದ ಒಂದು ಮಗ್ಗುಲಿಗೆ ಕಣಿವೆಯಿತ್ತು. ಪಕ್ಕದಲ್ಲಿ ಕಾಲ ಹಾದಿ ಸಾಗುತ್ತಿದ್ದು, ಸುತ್ತಲೂ ಪೇರಳೆ ಹಾಗೂ ಗಾಳಿ ಮರಗಳಿದ್ದವು.ಮೋಡ ಹಾಗೂ ಬಿಸಿಲಿನ ಕಣ್ಣಾ ಮುಚ್ಚಾಲೆಯಿಂದ ಕೆಲವು ಗುಡ್ಡಗಳು ಬಿಸಿಲಿನಿಂದ ಹೊಳೆದರೆ, ಇನ್ನು ಕೆಲವಕ್ಕೆ ನೆರಳು ಕವಿದಿರುತ್ತಿತ್ತು. ಸ್ವಲ್ಪ ಸುಧಾರಿಸಿಕೊಂಡು ಅಕ್ಕ ಪಕ್ಕದ ಚಿಕ್ಕ ಪುಟ್ಟ ಗುಡ್ಡಗಳನ್ನು ಏರಿ, ನೋಟಕ್ಕೊದಗಬಹುದಾದ ವಿವಿಧ ದೃಷ್ಯಾವಳಿಯನ್ನು ಕಣ್ಮನಗಳಲ್ಲಿ ತುಂಬಿಕೊಂಡೆವು. ಕತ್ತಲಾಗುವ ಮೊದಲೇ ಟೆಂಟ್ ನಿಲ್ಲಿಸುವುದು ಒಳ್ಳೆಯದೆಂದು ಬಗೆದು, ಟೆಂಟ್ ಬಿಡಿಸಿ ಸಿದ್ಡಪಡಿಸಿದೆವು. ಪಕ್ಕದಲ್ಲಿ ಬಿದ್ದಿದ್ದ ಒಣಗಿದ ಕಡ್ಡಿ, ಬಿಸಿಲಿಗೆ ಒಣಗಿ ಬೆರಣಿಯಂತಿದ್ದ ದನದ ಸಗಣಿ ಒಟ್ಟು ಮಾಡಿ ಸಣ್ಣಗೆ ಬೆಂಕಿ ಹೊತ್ತಿಸಿದೆವು. ಹಿಂದಿನ ದಿನ ಮಳೆಯಾಗಿದ್ದರೂ, ಬೆಳಿಗ್ಗಿನಿಂದ ಒಣಗಿದ ಕಡ್ಡಿಗಳಾದ್ದರಿಂದ ಬೆಂಕಿ ಹೊತ್ತಿಸಲು ಹೆಚ್ಚಿನ ಪ್ರಾಯಾಸ ಪಡಬೇಕಾಗಿರಲಿಲ್ಲ.
ನಮ್ಮ ಸಾಮಗ್ರಿಗಳನ್ನೆಲ್ಲ ಟೆಂಟ್ ಒಳಗಿಟ್ಟು, ಸೂರ್ಯಾಸ್ತಮಾನದ ಸೊಬಗ ಸವಿಯಲು ಪಕ್ಕದ ಗುಡ್ಡ ಹತ್ತಿದೆವು. ಪಶ್ಚಿಮ ದಿಕ್ಕಿನಲ್ಲಿ ಬೆಳಕಿನ ಕಿರಣಗಳು ಮೋಡದಿಂದ ಸೋಸಿ ಸ್ವಲ್ಪ ದೂರದಲ್ಲೇ ಕಾಣಿಸುತ್ತಿದ್ದ ಸುಬ್ರಮಣ್ಯಕ್ಕೆ ಬೀಳುತ್ತಿದ್ದರೆ, ಹಿನ್ನೆಲೆಯಲ್ಲಿ ಅಲೆ ಅಲೆಯಾಗಿ, ಹತ್ತಿರದವು ಕಡು ನೀಲಿ ಹಾಗೂ ದೂರ ಸರಿದಂತೆ ತಿಳಿ ನೀಲ ವರ್ಣದ ಪರ್ವತ ಶ್ರೇಣಿ ಹಬ್ಬಿತ್ತು. ಪೂರ್ವದಿಕ್ಕಿನಲ್ಲಿ ನಾವು ಹಾದು ಹೋಗಬೇಕಿದ್ದ ಬತ್ತದ ರಾಶಿ ಎಂಬ ಗಗನ ಚುಂಬಿ ಪರ್ವತ ಮೋಡಗಳೊಂದಿಗೆ ಸರಸವಾಡುತ್ತಿತ್ತು. ದಕ್ಷಿಣ ಹಾಗೂ ಉತ್ತರದಲ್ಲಿ ಆಳವಾದ ಕಣಿವೆಯಿದ್ದು, ಭೇದಿಸಲಸಾಧ್ಯವಾದ ವೃಕ್ಷ ಸಮೂಹವಿತ್ತು ಮತ್ತು ಹಿನ್ನೆಲೆಯಲ್ಲಿ ಬೆಟ್ಟದ ಸೆರಗಿತ್ತು.ಇಂತಹ ಪರಿಸರದ ಹಿನ್ನೆಲೆಯಲ್ಲಿ ಸಮೀಪದಲ್ಲೇ ಕಾಣುತ್ತಿದ್ದ ಭಟ್ಟರ ೫ ಎಕರೆ ಕಂಗಿನ ತೋಟ ಬಿಸಿಲು ಬಿದ್ದು ನಳನಳಿಸುತ್ತಿತ್ತು.ದೂರದ ಗುಡ್ಡದಲ್ಲಿ ಭಟ್ಟರ ಮನೆಯ ದನಗಳು ಕೊರಳಿಗೆ ಕಟ್ಟಿದ್ದ ಗಂಟೆಯ ನಾದಗೈಯುತ್ತಾ ಸಾವಕಾಶವಾಗಿ ರಸಭರಿತವಾದ ಹುಲ್ಲನ್ನು ಮೇಯುತ್ತಿದ್ದವು. ಸಮಯವಾಗುತ್ತಿದಂತೆ ನವಿರಾಗಿ ಬೀಸುತ್ತಿದ್ದ ಗಾಳಿ ಕರಿ ಬಿಳಿ ಮೋಡವನ್ನು ಹೊತ್ತು ತಂದು, ಮೈಯನ್ನು ಹಾದು ಚಳಿ ಹುಟ್ಟಿಸುತ್ತಿತ್ತು.ಇದರೊಂದಿಗೆ ಚಿಕ್ಕ ಪುಟ್ಟ ಮಳೆಹನಿಯೂ ಬೀಳ ತೊಡಗಿದ್ದರಿಂದ ಟೆಂಟ್ ಕಡೆ ಮರಳಿದೆವು. ಮಳೆಯಿಂದ ಬೆಂಕಿಯ ರಕ್ಷಣೆಗಾಗಿಯೂ, ಬೆಂಕಿಯು ಇತರೆಡೆಗೆ ಹರಡದಂತೆಯೂ, ಅದರ ಎರಡು ಕಡೆ ಕಲ್ಲನ್ನಿರಿಸಿ ಅದರ ಮೇಲೊಂದು ವಿಶಾಲವಾದ ಚಪ್ಪಡಿಯನ್ನು ಹೇರಿದೆವು. ಟೆಂಟ್ ಒಳಗೆ ನುಸುಳಿ, ಹದವಾಗಿ ಬೀಳುತ್ತಿದ್ದ ಮಳೆಯ ಸದ್ದನ್ನು ಆಲಿಸುತ್ತ ಕಾಲ ಕಳೆದೆವು. ಸ್ವಲ್ಪ ಸಮಯದ ನಂತರ ಮಳೆಹನಿಯು ನಿಂತಂತಾಗಿ ಹೊರಗೆ ಬಂದು ನೋಡಿದರೆ ಎಲ್ಲಾ ಕಡೆಯಲ್ಲೂ ಮೋಡದ ಮರೆಯಿದ್ದು, ಮರ ಗಿಡಗಳು ರೇಖಾ ಚಿತ್ರದಂತೆ ಕಂಡು ಬಂದವು. ನಾವು ಸಿದ್ಧಪಡಿಸಿದ್ದ ಬೆಂಕಿ ನಂದಿ ಹೋಗಿದ್ದರೂ, ಚಪ್ಪಡಿಯ ಕೆಳಗೆ ಕೆಂಡದುಂಡೆಗಳು ಮಿರುಗುತ್ತಿದ್ದವು. ಕೊಳ್ಳಿಗಳನ್ನು ನಿಧಾನಕ್ಕೆ ಮುಂದೂಕಿ ಹದವಾದ ಬೆಂಕಿಯೊಂದಿಗೆ ಹೊಮ್ಮಿದ ಸವಿಯಾದ ಹೊಗೆಯನ್ನು ಆಸ್ವಾದಿಸುತ್ತಾ, ಹರಟುತ್ತಾ ಕುಳಿತೆವು. ಬಾಯಾಡಿಸಲು ಉಳಿದಿದ್ದ ಅವಲಕ್ಕಿಯನ್ನು ತಂದ ಮೇಲಂತೂ ಸಂಭಾಷಣೆಗೆ ಇನ್ನೂ ಕಳೆ ಕಟ್ಟಿತ್ತು. ಅವಲಕ್ಕಿ ಬರಿದು ಮಾಡಿ, ಬೆಳಿಗ್ಗಿನಿಂದ ಭಾರ ಹೊತ್ತು ದಣಿದಿದ್ದ ಬೆನ್ನಿಗೆ ವಿಶ್ರಾಂತಿ ಕೊಡುವ ಉದ್ದೇಶದಿಂದ ಟೆಂಟ್ ಒಳ ಹೊಕ್ಕು ಕಾಲುಚಾಚಿ ಮಲಗಿದೆವು.
ಮಲಗಿದ ೧೦ ನಿಮಿಷಗಳಲ್ಲೆಲ್ಲಾ ರಾಘವೇಂದ್ರ ನಿದ್ರೆ ಹೋದರೆ, ನಾನು ಟೆಂಟ್ ಹೊರಗಡೆ ಕೇಳಿಸುತ್ತಿದ್ದ ನಾನಾ ರೀತಿಯ ಸಪ್ಪಳವನ್ನಾಲಿಸುತ್ತಿದ್ದೆ.ಸ್ವಲ್ಪ ಸಮಯದಲ್ಲಿ ಬೇಸರವಾಗಿ ಹೊರಗೆ ಬಂದು ಬೆಂಕಿಯನ್ನು ಕಾಯಿಸುತ್ತಾ ಕುಳಿತೆ. ನಾನು ಕುಳಿತಲ್ಲಿಗೆ ಭಟ್ಟರ ಮನೆಯ ಕಡೆಯಿಂದ ಇಬ್ಬರು ಮಾತನಾಡುತ್ತಾ ಬಂದು ನನ್ನ ಮುಂದೆಯೇ ಕುಳಿತರು. ನಮ್ಮಂತೆಯೇ ಬಂದ ಚಾರಣಿಗರು ಇರಬಹುದು ಎಂದು ಬಗೆದಿದ್ದ ನನಗೆ, ಏಕಾಂತದ ಭಂಗದಿಂದ ತುಸು ಅಸಮಾಧಾನವಾದರೂ, ತಾವು ಭಟ್ಟರ ಮನೆಯಲ್ಲಿ ಕೆಲಸಕ್ಕಿರುವವರೆಂದು ಅವರು ಪರಿಚಯಿಸಿಕೊಂಡ ನಂತರ ಅವರನ್ನು ಸ್ವಾಗತಿಸಿದೆ. ನಂತರ ೧ ತಾಸುಗಳಷ್ಟು ದೀರ್ಘವಾದ ಅವರೊಂದಿಗಿನ ಸಂಭಾಷಣೆ, ಅವರ ಕೆಲಸ, ಮನೆ, ಭಟ್ಟರ ಮನೆಯವರ ವಿಚಾರ, ಊರಿನ ರಾಜಕೀಯ, ದೇಶದ ರಾಜಕೀಯ ಇವುಗಳನ್ನೊಳಗೊಂಡು ಸ್ವಾರಸ್ಯವಾಗಿತ್ತು. ಭಟ್ಟರಿಗಿರುವುದು ಅಡಿಕೆ ತೋಟವಾದ್ದರಿಂದ ದಿನಬಳಕೆಗೆ ಬೇಕಾದ ಸಾಮಗ್ರಿಗಳನ್ನು ೬ ಕಿ.ಮೀ. ದೂರವಿರುವ ಸುಬ್ರಮಣ್ಯದಿಂದ ಹೊತ್ತು ತರುವುದು ಇವರ ಕೆಲಸ. ವಾರಾಂತ್ಯಗಳಲ್ಲಿ ಚಾರಣಿಗರ ಸಂಖ್ಯೆ ಅಧಿಕವಾದದ್ದರಿಂದ ಅವರಿಗೆ ಆಹಾರ, ವಸತಿ ಒದಗಿಸುವುದು ಭಟ್ಟರ ಮನೆಯವರಿಗೆ ಒಂದು ವ್ಯಾಪಾರವಾಗಿದೆ. ೯ ಗಂಟೆಯ ಸಮಯಕ್ಕೆ ಊಟದ ನೆಪದಿಂದ ಅವರಿಬ್ಬರೂ ಹೊರಡಲನುವಾಗಬೇಕಾದರೆ, ರಾಘವೇಂದ್ರ ನಿದ್ರೆಯಿಂದ ಎಚ್ಚೆತ್ತು ಹೊರಗೆ ಬಂದಿದ್ದ. ಮೋಡದ ದಟ್ಟಣಿ ಹೆಚ್ಚಿ, ತುಂತುರು ಮಳೆ ಬೀಳತೊಡಗಿದ್ದು, ಭಟ್ಟರ ಮನೆಯಲ್ಲಿರಬಹುದಾದ ಬಿಸಿಯೂಟದ ಕನಸು ಕಾಣುತ್ತಾ ನಾವು ತಂದ ತಣಕಲು ಪೂರಿಯನ್ನು ತಿಂದೆವು.ಊಟ ಮುಗಿದ ಮೇಲೆ ನಮ್ಮ ಟಾರ್ಚ್ ಹಚ್ಚಿ ೧೦೦ ಹೆಜ್ಜೆಗಳ ವಾಕಿಂಗ್ ಮುಗಿಸಿ, ಮೋಡಗಳ ಮೇಲೆ ಬೆಳಕು ಚೆಲ್ಲುತ್ತಾ, ಅದರಿಂದ ಉಂಟಾದ ಚಿತ್ರ ವಿಚಿತ್ರ ಆಕೃತಿಗಳನ್ನು ನೋಡಿ ಆನಂದಿಸುತ್ತಾ ಕಾಲ ಕಳೆದೆವು. ಬೆಂಕಿಯ ಗಾವನ್ನು ಕಡಿಮೆ ಮಾಡಿ ಅದು ಇತರೆಡೆಗೆ ಹರಡದಂತೆ ಮಾಡಿ, ಟೆಂಟ್ ಒಳಗೆ ಮಲಗಿ ನಿದ್ರೆ ಹೋದೆವು. ೧೦ ಗಂಟೆಗೆ ಮಲಗಿದ್ದ ನಮಗೆ ಎಚ್ಚರವಾದದ್ದು ಮರುದಿನ ಬೆಳಿಗ್ಗೆ ೬ಕ್ಕೇ.ಎರಡನೇ ಘಟ್ಟ


ಬೆಳಿಗ್ಗೆ ೬ಗಂಟೆಗೆಲ್ಲಾ ಸಾಕಷ್ಟು ಬೆಳಕು ಹರಿದಿತ್ತು. ಹಿಂದಿನ ದಿನ ಹಚ್ಚಿದ್ದ ಬೆಂಕಿ ನಂದಿ, ಇದ್ದಲಿನ ಮತ್ತು ಬೂದಿಯ ಕುರುಹು ಮಾತ್ರ ಉಳಿದಿತ್ತು. ಹಿಂದಿನ ದಿನದ ಸೂರ್ಯಾಸ್ತಮಾನವನ್ನು ಮೋಡದ ದೆಸೆಯಿಂದ ಕಳೆದುಕೊಂಡಿದ್ದರೂ, ಸೂರ್ಯೋದಯ ಕಾಣಲು ಸಿಗಬಹುದೆಂಬ ಆಸೆಯಿಂದ ಎಡ ಮಗ್ಗುಲಲ್ಲಿರುವ ಗುಡ್ಡವನ್ನು ಏರ ತೊಡಗಿದೆವು. ಸುತ್ತಲಿನ ಕಣಿವೆಗಳೆಲ್ಲಾ ಹತ್ತಿಯಂತೆ ಶುಭ್ರವಾದ ಮೋಡದ ಸೆರಗನ್ನು ಹೊದ್ದು ಪವಡಿಸಿದ್ದವು. ದೂರದ ಕೆಲವು ಮನೆಗಳ ಹೆಂಚಿನ ಛಾವಣಿಗಳಿಂದ ಹೊಗೆ ಹೊಮ್ಮುತ್ತಿತ್ತು. ಪೂರ್ವ ದಿಕ್ಕಿನಲ್ಲಿ ನಾವು ಹತ್ತ ಬೇಕಿದ್ದ ಪರ್ವತದ ಸಾಲು ಸೂರ್ಯನನ್ನು ಮರೆಮಾಡಿರುವೆ ಎಂದು ಠೀವಿಯಿಂದ ಬೀಗುತ್ತಿತ್ತು. ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು, ನಮ್ಮ ಟೆಂಟ್ ಕಳಚಿ ಭಟ್ಟರ ಮನೆಯ ದಾರಿಯಲ್ಲಿ ನಡೆದೆವು. ಭಟ್ಟರ ಪರಿಚಯ ಮಾಡಿಕೊಂಡು ಮುಖ ಮಜ್ಜನಾದಿ ಪೂರೈಸಿ, ಅನಾವಶ್ಯಕವಾದ ವಸ್ತುಗಳನ್ನು ಅವರ ಮನೆಯಲ್ಲಿರಿಸಿ, ಆ ದಿನಕ್ಕೆ ಬೇಕಾದ ಆಹಾರ, ನೀರು, ಕ್ಯಾಮರ ಹಿಡಿದುಕೊಂಡು ಮುಂದುವರೆದೆವು. ಅಲ್ಲಿಂದ ಸ್ವಲ್ಪದೂರದಲ್ಲಿಯೇ ಇರುವ ಅರಣ್ಯ ಇಲಾಖೆಯ ಕಛೇರಿಯಲ್ಲಿ ಸುಂಕ ತೆತ್ತೆವು. ಅಲ್ಲಿಯೂ ಎಲ್ಲಿಂದ ಬಂದದ್ದು, ಎಷ್ಟು ಜನ, ಇಬ್ಬರೇ ಬಂದಿದ್ದೀರ, ಮರ್ಗದರ್ಶಕರು ಬೇಕೆ, ಮುಂತಾದ ವಿಚಾರಣೆ ನಡೆಯಿತು.
ನಮ್ಮ ಮುಂದಿನ ಮೈಲಿಗಲ್ಲು ೨ ಕಿ.ಮೀ ದೂರವಿರುವ ಕಲ್ಲಿನ ಮಂಟಪ. ಹದವಾದ ಏರಿನಿಂದ ಕೂಡಿದ ಕಾಲ್ದಾರಿ ಇದ್ದುದರಿಂದ ಮತ್ತು ಹಿಂದಿನ ದಿನದ ಹೊರೆ ಇರದುದ್ದರಿಂದ ದಾರಿ ಸುಗಮವಾಗಿ ಸಾಗಿತು. ನಿಸರ್ಗವನ್ನು ನೋಡುವ ನೆಪದಿಂದ ಅಲ್ಲಲ್ಲಿ ವಿಶ್ರಮಿಸಿ, ಸಾವಕಾಶವಾಗಿ ೧೦ ಗಂಟೆಯ ಸಮಯಕ್ಕೆ ಕಲ್ಲಿನ ಮಂಟಪ ತಲುಪಿದ್ದೆವು. ಮಂಟಪ ನಾಲ್ಕು ಕಲ್ಲಿನ ಕಂಬಗಳನ್ನಿರಿಸಿ, ಕಲ್ಲಿನ ಹಾಸು ಹಾಸಿ, ಮುಚ್ಚಿಗೆ ಹೊದಿಸಿದ್ದ ಸುಮಾರು ೭ ಅಡಿ ಉದ್ದ, ೭ ಅಡಿ ಅಗಲದಷ್ಟು ಅಗಲವಾದ ಒಂದು ಕಲಾಕೃತಿ. ಅದನ್ನು ಯಾರು, ಯಾವ ಕಾಲದಲ್ಲಿ, ಯಾವ ಉದ್ದೇಶಕ್ಕಾಗಿ ರಚಿಸಿದರೋ ತಿಳಿಯದು. ಅದರ ಎಡ ಮಗ್ಗುಲಲ್ಲಿ ಕುರುಚಲು ಕಾಡಿದ್ದು ಸಣ್ಣದೊಂದು ನೀರಿನ ಒರತೆ ಹರಿಯುತ್ತಿದ್ದುದರಿಂದ, ಹಿಂದನ ಕಾಲದಲ್ಲಿ ಮಡಿಕೇರಿಯ ಕಡೆಯಿಂದ ಸುಬ್ರಮಣ್ಯದ ಕಡೆಗೆ ಪಯಣಿಸುವವರಿಗೆ ವಿಶ್ರಾಂತಿಗಾಗಿ ಕಟ್ಟಿಸಿರಬಹುದೆನೋ ಎಂದು ಊಹಿಸಬಹುದೇನೋ. ಮಂಟಪದಲ್ಲಿ ಕೂತು, ಚಪ್ಪಲಿಯನ್ನು ಕಳಚಿಟ್ಟು ಇಂತಹ ಯೋಚನೆಯಲ್ಲಿ ಮಗ್ನನಾಗಿರುವಾಗ ನನ್ನ ಕಾಲಿನಿಂದ ಸೃವಿಸುತ್ತಿದ್ದ ರಕ್ತವನ್ನು ನೋಡಿದಾಗ ಅದುವರೆಗೂ ಗಮನಕ್ಕೆ ಬರದ ಇಂಬಳಗಳೂ ಗೋಚರವಾದವು. ಜಿಗುಪ್ಸೆಯಿಂದ ಅವನ್ನು ಕಿತ್ತೊಗೆದು, ನೀರಿನ ಒರತೆಯ ಬಳಿಗೆ ಸಾಗಿದೆವು. ನೀರಿನ ಜರಿಯನ್ನು ಸಮೀಪಿಸುತ್ತಿದಂತೆಯೇ ಫ್ರಿಜ್ ಒಳಗೆ ಹೊಕ್ಕಂತೆ ತಣ್ಣನೆಯ ಅನುಭವವಾಗಿ, ಕೈ ಕಾಲು ಮುಖ ತೊಳೆದುಕೊಂಡು ಅಲ್ಲಿಯೇ ಸ್ವಲ್ಪ ಕಾಲ ಕೂತಿದ್ದು ಮತ್ತೆ ಮಂಟಪದ ಕಡೆಗೆ ತೆರಳಿದೆವು. ಹೋಟೆಲ್ನಲ್ಲಿ ಕಟ್ಟಿಕೊಂಡು ಬಂದಿದ್ದ ಬನ್ಸ್ ತಿಂದು, ನೀರಡಿಕೆ ನೀಗಿಸಿಕೊಂಡು ಭತ್ತದ ರಾಶಿಯತ್ತ ಮುಂದುವರಿದೆವು.
ಸುತ್ತಲೆಲ್ಲಾ ಭತ್ತ ಬೆಳೆಯದ ಈ ಗುಡ್ಡಕ್ಕೆ "ಭತ್ತದ ರಾಶಿ" ಎಂಬ ಹೆಸರು ಏಕೆ ಬಂತೋ ತಿಳಿಯದು. ಇಲ್ಲಿಂದ ದಾರಿ ಒಂದೇ ಸಮನೇ ಏರುತ್ತಾ ಸಾಗುತ್ತದೆ. ಬೆಟ್ಟ, ಪಶ್ಚಿಮ ದಿಕ್ಕಿನಿಂದ ಹಿಂಡು ಹಿಂಡಾಗಿ ಬೆನ್ನತ್ತಿ ಬರುವ ಮೋಡವನ್ನು ತಡೆದು ಸುತ್ತಲೆಲ್ಲಾ ಪಸರಿಸಿತ್ತು. ಜಾತಕ ತಿಳಿಯದ ಹಲವು ಬಗೆಯ ಹೂಗಳು ಸಂತಸದಿಂದ ತನ್ನೆಡೆಗೆ ತೇಲಿ ಬರುತ್ತಿರುವ ಅಂಗೈ ಗಾತ್ರದ, ಹಾರುವ ಹೂವಾದ ಚಿಟ್ಟೆಗಳನ್ನು ಆಹ್ವಾನಿಸುತ್ತಿತ್ತು.ಹಲವು ಬಗೆಯ ಏರೋಪ್ಲೇನ್ ಚಿಟ್ಟೆಗಳು ಹಾರಾಡಿ, ಅಲ್ಲಲ್ಲಿ ಕುಳಿತು, ಕೆಲವೊಮ್ಮೆ ಮುಖವನ್ನು ಕಾಲಿನಿಂದ ತೀಡಿಕೊಳ್ಳುತ್ತಿತ್ತು. ಆಗಂತುಕನಂತೆ ಯಾವುದೋ ಜಾತಿಯ ಕಂದು ಬಣ್ಣದ ಹಕ್ಕಿಗಳು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಇದ್ಯಾವುದನ್ನೂ ಗಮನಿಸದೆ ಅಲ್ಲಲ್ಲಿ ಹಿರಿದಾದ ಕಪ್ಪು ಇರುವೆ ತಮ್ಮ ಗೂಡು ಕಟ್ಟುವ ಕಾರ್ಯದಲ್ಲಿ ಮಗ್ನವಾಗಿದ್ದವು. ಮುಂದೆ ಸಾಗುತ್ತಿದಂತೆಯೇ ಬೆಟ್ಟದಿಂದ ಇಳಿದು ಬರುತ್ತಿದ್ದ ಇನ್ನೂ ಕೆಲವು ತಂಡಗಳು ಕಾಣಿಸಿದವು. ಕೆಲವರು ರಾತ್ರಿ ಪರ್ವತದ ಮೇಲೆ ಕಳೆದು ಬಂದವರಾಗಿದ್ದರೆ ,ಇನ್ನು ಕೆಲವರು ಸೋಮವಾರ ಪೇಟೆಯ ಕಡೆಯಿಂದ ಬಂದವರಾಗಿದ್ದರು. ದಾರಿಯಲ್ಲಿ ಅಲ್ಲಲ್ಲಿ ಕುಳಿತು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡು ಮುಂದೆ ಸಾಗಿದೆವು. ಕಾಲು ದಾರಿ ಸ್ಪಷ್ಟವಾಗಿದ್ದುದರಿಂದಲೂ, ಅಲ್ಲಲ್ಲಿ ಗುರುತುಗಳಿದ್ದುದರಿಂದಲೂ ದಾರಿ ತಪ್ಪಿ ಹೋಗುವ ಸಂಭವ ತೀರಾ ದುರ್ಲಭವಾಗಿತ್ತು. ಮುಂದೆ ಹೋದಂತೆ ಬಂಡೆಗಳ ದಟ್ಟಣಿ ಹೆಚ್ಚಿದ್ದು, ಮಳೆಯಿಂದಾಗಿ ಪಾಮಾಜಿಗಳು ಬೆಳೆದದ್ದರಿಂದ ಜಾಗರೂಕತೆಯಿಂದ ಹೆಜ್ಜೆಯಿಡಬೇಕಿತ್ತು. ಅಂತೆಯೇ ಇನ್ನೊಂದು ಬೆಟ್ಟದ ನೆತ್ತಿಯನ್ನು ತಲುಪಿದಾಗ ಸುಮಾರು ೧೫೦೦ ಅಡಿಗಳಷ್ಟು ಮೇಲಕ್ಕೇರಿದ್ದೆವು. ಎಡ ಮಗ್ಗುಲಲ್ಲಿ ಕಾಡು ಬಲಗಡೆ ಬಂಡೆಯಿಂದ ನಿರ್ಮಿಸಲ್ಪಟ್ಟ, ಆಳವಾದ ಕಣಿವೆ. ಆ ಬಂಡೆಗಳಾದರೋ ಗುಡ್ಡದ ಮೇಲ್ಮೈಯಂತೆ ಇಳುಜಾರಾಗಿರದೆ, ಗೋಡೆಯಂತೆ ಲಂಬವಾಗಿತ್ತು. ೧.೫ ಕಿ.ಮೀ. ಎತ್ತರದ ಗೋಡೆಯ ಮೇಲೆ ನಿಂತುಕೊಂಡು ಕೆಳಗಿನ ದೃಶ್ಯ ವೀಕ್ಷಿಸಿದಂತಿತ್ತು. ಆದರೂ ಮೋಡದ ದೆಸೆಯಿಂದಾಗಿ ಈ ದೃಶ್ಯದ ಭಯಾನಕತೆಯ ತೀವ್ರತೆ ಕಡಿಮೆಯಾಗಿತ್ತು.
ಮುಂದಿನದಾರಿ ಪಶ್ಚಿಮ ಘಟ್ಟದ ಮಳೆ ಕಾಡಾಗಿತ್ತು. ಪಾಚಿ, ಪಾಮಾಜಿಗಳು ಬೆಳೆದು, ಕೇವಲ ಎಲೆಗಳಲ್ಲದೆ, ಕಾಂಡದಿಂದ ಹಿಡಿದು ಬೇರಿನವರೆಗೂ ಹಸಿರುಮಯವಾಗಿತ್ತು. ಕೆಲವು ಪಾಚಿಗಳಂತೂ ಮರದ ಕೊಂಬೆಯಿಂದ ಜೋತು ಬಿದ್ದು, ಸುಳಿಯುವ ಮೋಡಗಳನ್ನು ಕರಗಿಸಿ, ಒದ್ದೆಯಾಗಿ, ತಮ್ಮ ತೆಕ್ಕೆಯಲ್ಲಿ ಬಂಧಿಯಾಗಿದ್ದ ಹಿಮ ಮಣಿಗಳಲ್ಲಿ ಇನ್ನೊಂದೇ ಪ್ರಪಂಚ ಬಿಂಬಿಸುತ್ತಿತ್ತು. ಫೋಟೋ ತೆಗೆಯುವ ಆಸೆಯಿಂದ ನಿಂತು ಕ್ಯಾಮರಾ ಕೈಗೆತ್ತುಕೊಂಡರೆ, ಅಷ್ಟ ದಿಕ್ಕುಗಳಿಂದಲೂ ಇಂಬಳದ ಸೈನ್ಯ ದಾಳಿ ಇಡಲಾರಂಭಿಸಿತು. ಇವುಗಳ ದಾಳಿಗೆ ತತ್ತರಿಸಿ ಬೀಸುಬೀಸನೆ ಹೆಜ್ಜೆ ಹಾಕುತ್ತಾ ಮುಂದುವರೆದೆವು. ಮುಂದೆ ಒಂದು ಸಣ್ಣ ತೊರೆ ದಾಟಿ ದಾರಿ ಹುಡುಕುತ್ತಿರಬೇಕಾದರೆ ಎದುರಿಗಿರುವ, ಜಲಪಾತದ ನೀರು ಶುಷ್ಕವಾಗಿ ಬರೀ ಕಲ್ಲು ಬಂಡೆಗಳಿಂದ ಕೂಡಿದ ಏರು ಕಾಣಿಸಿತು. ಅನುಮಾನದಿಂದ ಅದನ್ನೇ ಹತ್ತುತ್ತಿರಬೇಕಾದರೆ, ಇದು ನಿಜವಾಗಿಯೂ ಜಲಪಾತವಾಗಿದ್ದು,ಮೇಲಿನಿಂದ ಒಮ್ಮೆಲೇ ನೀರು ಹರಿದು ಬಂದರೆ ಎಂಬ ಆಲೋಚನೆಯಾಯಿತು.ಮೇಲೆ ಹತ್ತಿದೊಡನೆ ೨೫ ಅಡಿಗಳಷ್ಟು ಎತ್ತರಕ್ಕೆ ವಿಶಾಲವಾಗಿ ಹರಡಿಕೊಂಡ ಬಂಡೆ ಕಾಣಿಸಿತಲ್ಲದೇ, ಯಾವುದೇ ದಾರಿ ಗೋಚರವಾಗಲಿಲ್ಲ. ದಾರಿ ತಪ್ಪಿಸಿಕೊಂಡೆವೋ ಎಂಬ ಅನುಮಾನದಿಂದ ಸುಳಿದಾಡಬೇಕಾದರೆ, ಮೇಲಿನಿಂದ ಯಾವುದೋ ಜನರ ಗುಂಪೊಂದು ನಮ್ಮನ್ನು ಕರೆದು, ಕೆಳಗೆ ಹೋಗುವ ದಾರಿ ಯಾವುದೆಂದು ಕೇಳಿತು. ಮೇಲ್ಗಡೆ ಮೋಡದ ದಟ್ಟಣಿ ಅಧಿಕವಾದದ್ದರಿಂದ ಚಾರಣಿಗರ ಗುಂಪೊಂದು ೧ ತಾಸಿನಿಂದ ದಾರಿಯ ಶೋಧದಲ್ಲಿ ತೊಡುಗಿತ್ತು. ಕೆಳಗೆ ಹೋಗುವ ದಾರಿ ಅವರಿಗೆ ತೋರಿಸಿ ಮೇಲೆ ಹತ್ತಬೇಕಾಗಿದ್ದ ನಮ್ಮ ದಾರಿಯ ಬಗ್ಗೆ ತಿಳಿದುಕೊಂಡು, ಅಲ್ಲಲ್ಲಿ ಗುರುತಿಗಾಗಿ ನಮ್ಮ ಬಳಿಯಿರುವ ವಸ್ತುವನ್ನಿರಿಸಿ ಮೇಲೆ ಹತ್ತಿದೆವು. ಬಂಡೆಯ ಮೇಲೆ ಎಲ್ಲಿ ನೋಡಿದರೂ ೫ ಅಡಿಗಳಷ್ಟು ಎತ್ತರದ ಪೊದೆ. ಆದರೂ ದಾರಿಯ ವಿಚಾರವಾಗಿ ಕೇಳಿ ತಿಳಿದಿದ್ದ ನಮಗ ಬಲಗಡೆಯಿರುವ ಒಂದು ಪೊದೆ ಹೊಗ್ಗಬೇಕೆಂದು ಕಂಡುಹಿಡಿಯಲು ಹೆಚ್ಚಿನ ಸಮಯ ತಗಲಲಿಲ್ಲ. ಒಂದು ಬಾರಿಗೆ ಒಬ್ಬರೇ ನುಸುಳಬಹುದಾದಷ್ಟು ಜಾಗವಿದ್ದುದರಿಂದ ಬೆನ್ನು ಬಗ್ಗಿಸಿಕೊಂಡು, ಒಬ್ಬರ ಹಿಂದೊಬ್ಬರಂತೆ ಮುನ್ನಡೆದೆವು.

ಪುಷ್ಪಗಿರಿಯ ನೆತ್ತಿ ಇನ್ನು ಕೆಲವೇ ಫರ್ಲಾಂಗುಗಳಷ್ಟು ದೂರವಿತ್ತು. ಏಕ ಶಿಲೆಯಂತಿದ್ದ ಬಂಡೆಯ ದಾರಿ ಹತ್ತಿ, ಶಿಖರವನ್ನು ತಲುಪಿದೆವು. ಮೊದಲಿಗೆ ಕಾಣಿಸಿದ್ದು ಆಯ ಅಳತೆಗಳಿಲ್ಲದೇ, ಕಲ್ಲುಗಳನ್ನು ಜೋಡಿಸಿ ರಚಿಸಿದ ಗುಡಿ; ಗುಡಿಯಲ್ಲಿ ಶಿವಲಿಂಗವಿತ್ತು. ಸುತ್ತಲೂ ಮೂರು ಅಡಿಗಳಷ್ಟು ಎತ್ತರದ ಕಲ್ಲಿನ ಪಾಗರವನ್ನೂ ಕಟ್ಟಿದ್ದರು. ದೀಪದ ಬೆಳಕೂ ಅಲಭ್ಯವಾಗಿದ್ದ ಗುಡಿಯಲ್ಲಿ ನೈಸರ್ಗಿಕ ಬೆಳಕು ಒಂದು ಕಂಡಿಯಿಂದ ತೂರಿಬರುತ್ತಿತ್ತು . ಯಾರೋ ದೇಣಿಗೆಯಾಗಿ ಕೊಟ್ಟ ಗಂಟೆ, ಕಿಲುಬು ಹಿಡಿದಿದ್ದ ದೀಪದ ಸೊಡರನ್ನು ಹೊರತು ಪಡಿಸಿದರೆ ಇನ್ಯಾವುದೇ ಪೂಜಾಸಾಮಗ್ರಿಯೂ ಅಲ್ಲಿರಲಿಲ್ಲ. ಶಿಖರದ ಸುತ್ತಲೂ ಮಡಿಕೇರಿ, ದಕ್ಷಿಣ ಕನ್ನಡದ ಸೊಬಗನ್ನು ವೀಕ್ಷಿಸಬಹುದಾದರೂ ಮೋಡ ಕವಿದದ್ದರಿಂದ ನಮಗೆ ಯಾವುದೇ ಬಗೆಯ ನೋಟ ಕಾಣಿಸಲಿಲ್ಲ.ಗುಡಿಯ ಒಂದು ಮಗ್ಗುಲಲ್ಲಿ ವಿಶ್ರಾಂತಿ ತೆಗೆದುಕೊಂಡು, ಕಲ್ಲಿನಂತೆ ಕಠಿಣವಾದ ಪರೋಟವನ್ನು, ಹೇರಳೆಕಾಯಿ, ನಿಂಬೇ ಕಾಯಿ, ಶುಂಠಿಗಳಿಂದ ತಯಾರಿಸಿದ ಸಂರಕ್ಷಕ ರಹಿತವಾದ ಉಪ್ಪಿನಕಾಯಿ ಜೊತೆಗೆ ತೃಪ್ತಿಯಿಂದ ತಿಂದು ಕೆಳಮುಖವಾಗಿ ಹೊರಟೆವು.
ಇಳಿಯುವ ದಾರಿ ಹತ್ತುವ ದಾರಿಯಂತೆ ತ್ರಾಸದಾಯಕವಾಗಿರದಿದ್ದರೂ,ಜಾರುವ ಇಳಿಜಾರಿನಲ್ಲಿ ಬೀಳದಂತೆ ಜಾಗರೂಕತೆಯಿಂದ ಇಳಿಯಬೇಕಾಗುತ್ತದೆ. ಹತ್ತಬೇಕಾದರೆ ಹಾದಿಗೆ ಹೆಚ್ಚಿನ ಗಮನ ಕೊಡದೆ ಸುತ್ತಲಿನ ಸೌಂದರ್ಯ ಸವಿಯುತ್ತಾ ಸಾಗಬಹುದಾದರೆ, ಇಳಿಯಬೇಕಾದರೆ ಕಾಲಿನ ಕಡೆಗೇ ಲಕ್ಷ್ಯ ಕೊಡಬೇಕಾಗುತ್ತದೆ. ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತಾ, ಅಲ್ಲಲ್ಲಿ ಎಡವಿ, ತೊಡರುತ್ತಾ, ಒಂದು ರೀತಿಯ ಬಳಲಿಕೆಯಿಂದ ತೂಕಡಿಸುತ್ತಾ, ಕತ್ತಲೆ ಆವರಿಸುತ್ತಾ ಇನ್ನೇನು ಮಳೆ ಬೀಳುತ್ತದೆ ಎನ್ನುವ ಹೊತ್ತಿಗೆ ಭಟ್ಟರ ಮನೆ ತಲುಪಿದೆವು.ಬೆಟ್ಟದ ಜೀವಭಟ್ಟರ ಮನೆಗೆ ಹೊಗ್ಗುತ್ತಿದಂತೆಯೇ ನಮ್ಮಂತೆಯೇ ಚಾರಣಕ್ಕೆ ಬಂದ ಇನ್ನೆರಡು ಗುಂಪುಗಳು ಕಣ್ಣಿಗೆ ಬಿದ್ದವು. ಮರುದಿನ ಬೆಟ್ಟದ ತುದಿಗೆ ಹೊರಟಿದ್ದ ಎಲ್ಲರೂ ಕಲೆತು ಇಸ್ಪೀಟ್ ಆಟದಲ್ಲಿ ಮಗ್ನರಾಗಿದ್ದರು. ಕೈಕಾಲು ಮುಖ ತೊಳೆದು ಬಂದು ನಾವು ಭಟ್ಟರ ಜೊತೆಗೆ ಹರಟೆಗೆ ಕೂತೆವು. ಭಟ್ಟರು ಕಳೆದ ಸುಮಾರು ೩೦ ವರ್ಷಗಳಿಂದ ಅದೇ ಬೆಟ್ಟಗಳ ನಡುವೆ ೫ ಎಕರೆ ಅಡಿಕೆ ತೋಟವನ್ನು ಮಾಡಿಕೊಂಡು ಬದುಕುತ್ತಿದ್ದಾರೆ.ಸುತ್ತಲಿನ ಪರಿಸರ "ವೈಲ್ಡ್ ಲೈಫ್"ರಕ್ಷಣೆಯಲ್ಲಿದ್ದರೂ ಪಿತ್ರಾರ್ಜಿತವಾಗಿ ಬಂದ ಭಟ್ಟರ ಆಸ್ತಿ ಇದಕ್ಕೆ ಹೊರತಾಗಿದೆ. ಭಟ್ಟರು ಮೂಲತಹಃ ಉತ್ತರ ಕನ್ನಡದ ಹವ್ಯಕ ಬ್ರಾಹ್ಮಣರಾಗಿದ್ದು, ಅಪ್ಪನ ಕಾಲದಲ್ಲಿ ಇಲ್ಲಿಗೆ ಬಂದು ನೆಲೆಸಿದ್ದಾರೆ. ಸುಮಾರು ಅರವತ್ತು ವರ್ಷದ ಆಸುಪಾಸಿನ ಭಟ್ಟರು ಮಾಸಲು ಬಣ್ಣದ ಅಂಗಿ, ಪಂಚೆ, ಅರೆ ನೆರೆತ ಗಡ್ಡ ಕೂದಲು,ಚುರುಕಾದ ನಡಿಗೆ, ಎಲ್ಲರೊಂದಿಗೂ ಮಾತನಾಡುವ ಅವರ ಸ್ವಭಾವದಿಂದಾಗಿ, ಸರಳರಾಗಿ ತೋರಿದರೂ, ಎಲ್ಲಾ ತಿಳಿದವರಂತೆ ಕಾಣುತ್ತಾರೆ. ಹೆಂಡತಿ ತೀರಿಕೊಂಡಿದ್ದು, ತಮ್ಮ ಅತ್ತೆ ಹಾಗೂ ತಮ್ಮನ ಜೊತೆ ಇದ್ದುಕೊಂಡು ಚಾರಣಿಗರಿಗೆ ಆಶ್ರಯದಾತರಾಗಿದ್ದಾರೆ (ಭಟ್ಟರ ದೂ.ಸಂ. ೯೪೪ ೮೬೪ ೭೯೪೭ ಕ್ಕೆ ಕರೆ ಮಾಡಿ ಅರ್ಧ ದಿನ ಮುಂಚಿತವಾಗಿ ತಿಳಿಸಬಹುದು). ೮೦ರ ಆಸುಪಾಸಿನವರಂತೆ ಕಾಣುವ ಅವರ ಅತ್ತೆ, ಸಂಕಷ್ಟದ ದ್ಯೋತಕವೋ ಎಂಬತೆ ಬಾಗಿದ ಬೆನ್ನಿನ ನೆರವಿನಿಂದ ತಮ್ಮ ಕೆಲಸವಷ್ಟೇ ಅಲ್ಲದೆ, ಚಾರಣಿಗರಿಗೆ ಅಡುಗೆ ಮಾಡುವ ಕೆಲಸವನ್ನೂ ಮಾಡುತ್ತಾರೆ. ಬೆಳಿಗ್ಗಿನ ಮತ್ತು ಮಧ್ಯಾಹ್ನದ ಅಡುಗೆಯ ಕೆಲಸ ಭಟ್ಟರದ್ದಾದರೆ, ರಾತ್ರಿಯ ಆಡುಗೆ ಪಾಳಿ ಅವರ ಅತ್ತೆಯದು. ಭಟ್ಟರು, ೧೯೯೮ನೇ ಇಸವಿಯಿಂದ ಅವರ ಮನೆಗೆ ಭೇಟಿ ಕೊಟ್ಟ ಚಾರಿಣಿಗರ ಹೆಸರು, ವಿಳಾಸ, ಭೇಟಿ ಕೊಟ್ಟ ಸಮಯ ಇವುಗಳನ್ನು ಬರೆಸಿಕೊಂಡಿದ್ದು, ೨೦೦೨ ಏಪ್ರಿಲ್ನಲ್ಲಿ ಈ ಹಿಂದೆ ಭೇಟಿ ಕೊಟ್ಟ ರಾಘವೇಂದ್ರನ ತಂಡದ ಹೆಸರು ಅವರ ಕಡತದಲ್ಲಿರುವುದನ್ನು ಕಂಡು ಸಂತೋಷಗೊಂಡ.
ಹೊರಗಡೆ ಹಿತವಾಗಿ ಮಳೆ ಸುರಿಯುತ್ತಿದ್ದು, ಬಚ್ಚಲು ಮನೆಯಲ್ಲಿ ಹಚ್ಚಿದ್ದ ಕಿಚ್ಚು ಹಂಡೆಯ ನೀರನ್ನು ಬಿಸಿಯಾಗಿಸುತ್ತಿತ್ತು. ಬೆಂಕಿಯ ಮುಂದೆ ಕೂತು ಚಳಿಕಾಯಿಸುತ್ತಾ, ಬಿಸಿನೀರಿನ ಸ್ನಾನದ ಕನಸು ಕಾಣತೊಡಗಿದೆವು. ಮೊದಲು ಕೇಳಲು ಸಂಕೋಚವಾದರೂ, ನಡೆದು ದಣಿದಿದ್ದ ಮೈಗೆ ಬಿಸಿನೀರಿನ ಸ್ನಾನದ ಹಂಬಲ ಅಧಿಕವಾಗಿ, ಸಂಕೋಚವನ್ನು ಬದಿಗಿಟ್ಟು ಭಟ್ಟರನ್ನು ಕೇಳಲಾಗಿ, "ನನ್ನ ಸ್ನಾನದ ನಂತರ ಧಾರಾಳವಾಗಿ ಮಾಡಬಹುದು" ಎಂದರು. ಭಟ್ಟರ ಸ್ನಾನದ ನಂತರ ಬಚ್ಚಲು ಮನೆಗೆ ತೆರಳಿ, ಕುದಿಯುವ ನೀರನ್ನು ಪಕ್ಕದಲ್ಲಿದ್ದ ತಣ್ಣೀರಿಗೂ ಬೆರೆಸದೆ, ಒಂದೊಂದಾಗಿ ಚೊಂಬಿನಿಂದ ತಲೆಯ ಮೇಲೆ ಸುರಿದು ಕೊಳ್ಳತೊಡಗಿದ ನಂತರ ಮೈ ಮನಗಳಲ್ಲಿದ್ದ ಉದಾಸೀನ ಭಾವ ತೊಲಗಿ, ಹಗುರವಾಯಿತು. ಬಿಸಿನೀರಿನ ಅಭ್ಯಂಜನದಿಂದ ಕೆಂಪಗೆ ಹಬೆಯಾಡುತ್ತಿದ್ದ ಮೈಯನ್ನು ಹೊತ್ತುಕೊಂಡು ಮನೆಯ ಚಾವಡಿಗೆ ಬಂದು ಊಟದ ಕರೆಗಾಗಿ ಕಾಯುತ್ತಾ ಕುಳಿತೆವು.ಚೆನ್ನಾಗಿ ಹಸಿದಿದ್ದ ಹೊಟ್ಟೆಗೆ ಬಿಸಿಬಿಸಿಯಾದ ಅನ್ನ, ಆಲೂಗಡ್ಡೆ ಹುಳಿ ತುಂಬಾ ರುಚಿಯಾಗಿ ಕಾಣಿಸಿತು. ಉಂಡು, ಬೆಚ್ಚಗೆ ಮಲಗಿದ ನಮಗೆ ಬೆಳಿಗ್ಗೆ ೭ ಗಂಟೆಗೆ ಭಟ್ಟರ ಮನೆಯ ಆಕಾಶವಾಣಿ ಕೇಳಿಯೇ ಎಚ್ಚರವಾದದ್ದು.
ಬೆಳಿಗ್ಗೆ ಎದ್ದು ಭಟ್ಟರ ಮನೆಯ ವೀಕ್ಷಣೆಗೆ ತೊಡಗಿದೆವು. ಕೆಂಪು ಮಣ್ಣಿನಿಂದ ಎಬ್ಬಿಸಿದ ಗೋಡೆ, ಮರ ಹಾಗೂ ಕಬ್ಬಿಣವನ್ನು ಉಪಯೋಗಿಸಿ ಹೆಂಚು ಹೊದೆಸಿದ್ದ ಸೂರು, ಉದ್ದವಾಗಿದ್ದ ಮನೆಯ ಮುಂಭಾಗದ ಚಾವಡಿಗೆ ಅರೆ ಮುಚ್ಚಿದ ಗೋಡೆ, ಮರದ ಬಾಗಿಲು ತೆರೆದು ತಲೆತಗ್ಗಿಸಿ ಮುಂದುವರಿದರೆ ಮತ್ತೆ ಅದೇ ಚಾವಡಿಯಂತಹ ಉದ್ದನೆಯ ರಚನೆಯ ಎಡಗಡೆ ಅರೆ ಗೋಡೆಯನ್ನಿರಿಸಿ ರಚಿಸಿದ ೨ ಚಿಕ್ಕ ಕೋಣೆ, ಒಂದರಲ್ಲಿ ಸೌರ ಫಲಕದಲ್ಲಿ ತಯಾರಾಗುವ ವಿದ್ಯುತ್ ಶೇಖರಿಸುವ ಬ್ಯಾಟರಿ, ಮುಂದಕ್ಕೆ ಬಾಗಿಲು ದಾಟಿ ಹೋದರೆ ಅಡುಗೆ ಸಾಮಾನು ಇಡುವ ಕೊಟಡಿ, ಮಗ್ಗುಲಲ್ಲಿ ಚಿಕ್ಕ ಅಡುಗೆ ಕೋಣೆ, ಅದರ ಹಿಂದೆ ವಿಶಾಲವಾದ ಇನ್ನೊಂದು ಅಡುಗೆ ಕೋಣೆಯಿದ್ದು ಇದನ್ನು ಭಟ್ಟರೂ, ಇನ್ನೊಂದನ್ನು ಅವರ ಅತ್ತೆಯೂ ಅಡುಗೆಗಾಗಿ ಬಳಸುತ್ತಾರೆ. ಮನೆಯ ನೆಲ ಕೆಲವು ಕಡೆ ಸಿಮೆಂಟಿನಿಂದ ಹಾಗೂ ಇನ್ನು ಕೆಲವೆಡೆ ಸಗಣಿ ಹಾಗು ಇದ್ದಲನ್ನು ಒರೆದು ಮಾಡಿದ್ದು.ಮನೆಯ ಬಲಗಡೆ ದನದ ಕೊಟ್ಟಿಗೆ, ಎಡಗಡೆ ಬಚ್ಚಲು ಮನೆ, ಅಲ್ಲೇ ಕೆಳಗಡೆ ತೋಟಕ್ಕೆ ಹೋಗುವ ದಾರಿಯಲ್ಲಿ ಶೌಚಾಲಯವಿತ್ತು. ಕಿಟಕಿಗಳು ಇಲ್ಲದೆಡೆ ಮನೆಯ ಮಾಡಿನಲ್ಲಿ ಒಂದೆರಡು ಗಾಜಿನ ಫಲಕವಿಟ್ಟು ಬೆಳಕು ಬರುವಂತೆ ಮಾಡಿದ್ದಾರೆ. ಮನೆಯ ಗೋಡೆಯ ಮೇಲೆ ಹಳೆಯ ಕ್ಯಾಲೆಂಡರ್, ಚಿತ್ರ ಪಟಗಳು ತೂಗುಹಾಕಿದ್ದವು. ಇಂತಹ ವಾತಾವರಣದಲ್ಲೇ ಭಟ್ಟರ ಫೋಟೊ ತೆಗೆಯಲು ಅನುಮತಿ ಕೇಳಿದಾಗ, ಸಂತೋಷದಿಂದಲೇ ಒಪ್ಪಿಕೊಂಡು ಪೋಸು ನೀಡಿದರು.
ಬಂದಿದ್ದ ಎರಡು ತಂಡಗಳು ಅದಾಗಲೇ ಚಾರಣಕ್ಕೆ ಹೊರಟಿತ್ತು. ನಮಗೆ ಅಂತಹ ತರಾತುರಿ ಇಲ್ಲದ್ದರಿಂದ ಪ್ರಾತಃ ವಿಧಿಗಳನ್ನು ಮುಗಿಸಿ, ಉಪ್ಪಿಟ್ಟು, ಚಿತ್ರಾನ್ನ ತಿಂದು, ಚಹಾ ಹೀರಿ ಸಾವಕಾಶವಾಗಿ ಹೊರಡಲನುವಾದೆವು. ಭಟ್ಟರನ್ನು ದುಡ್ಡು ಎಷ್ಟು ಎಂದು ಕೇಳಲಾಗಿ "ಎಷ್ಟಾದರೂ ಕೊಡಿ" ಎಂಬ ಉತ್ತರ ಬಂತು. ನಮಗೆ ತೋಚಿದಷ್ಟು ಕೊಟ್ಟು, ಹಿಂದಿನ ದಿನ ಅವರು ಮೆಚ್ಚಿಕೊಂಡಿದ್ದ ನಮ್ಮ ಟಾರ್ಚ್ ಕೊಟ್ಟು, ವಿದಾಯ ಹೇಳುತ್ತಾ ಸುಬ್ರಮಣ್ಯದ ದಾರಿ ಹಿಡಿದೆವು.ಜನಾರಣ್ಯದೆಡೆಗೆ


ಮತ್ತೆ ಬಂದ ಹಾದಿಯಲ್ಲೇ, ಸೋನ್ ಪಪ್ಪಡಿಯನ್ನು ಎಳೆ ಎಳೆಯಾಗಿ ಸವಿಯುವಂತೆ, ನಡೆದದ್ದಕ್ಕಿಂತ ಜಾಸ್ತಿಯಾಗಿ ಅರಣ್ಯದ ಸೊಬಗನ್ನು ಸವಿಯುತ್ತಾ ಮುನ್ನೆಡೆದೆವು. ವಾರಾಂತ್ಯವಾದ್ದರಿಂದ ದಾರಿಯಲ್ಲಿ ಹಲವು ಚಾರಣಿಗರ ಗುಂಪು ಭೇಟಿಯಾಯಿತು. ಕೊನೇಯಲ್ಲಿ ಸಿಕ್ಕಿದ ಗುಂಪೊಂದು ದಾರಿಯ ಬೇಸರ ಕಳೆಯಲು ಬಿಯರ್ ಕುಡಿಯುತ್ತಾ,ಖಾಲಿ ಡಬ್ಬವನ್ನು ಅಲ್ಲಲ್ಲಿ ಬಿಸಾಡುತ್ತಾ, ಕಿರುಚಾಡುತ್ತಾ ಬರುತ್ತಿದ್ದರು. ಅವರು ನಾವು ವಿಶ್ರಮಿಸುತ್ತಿದ್ದ ಬಂಡೆಯೆಡೆಗೆ ಬಂದು, ನಮ್ಮ ಜೊತೆಯೇ ಕುಳಿತು, ನಮ್ಮ ಅನುಭವ ಹಂಚಿಕೊಂಡು ಪರಿಚಯ ಮಾಡಿಕೊಂಡ ನಂತರ, "ಹೀಗೆಲ್ಲ ಕಂಡ ಕಂಡಲ್ಲಿ ಡಬ್ಬ ಎಸಯಬಾರದು, ಅವನ್ನೆಲ್ಲಾ ಸಂಗ್ರಹಿಸಿ ಇಟ್ಟುಕೊಂಡು ಮುಂದೆ ಸಿಗುವ ಕಸದ ತೊಟ್ಟಿಯಲ್ಲಿ ಎಸಯಿರಿ" ಎಂದು ಕೇಳಿಕೊಂಡೆವು. ನಮ್ಮ ಮಾತಿಗೆ ಸಮ್ಮತಿಸಿ ಖಾಲಿ ಡಬ್ಬವನ್ನು ಚೀಲದೊಳಗೆ ಹಾಕಿಕೊಂಡರಾದರೂ, ಹೊರಡುವ ವೇಳೆಯಲ್ಲಿ ಅವರಲ್ಲೊಬ್ಬ "ಈ ಡಬ್ಬಿಗಳು ಕಾಲಂತರದಲ್ಲಿ ಮಣ್ಣಿನೊಡನೆ ಬೆರೆತು ಹೋಗುತ್ತದೆ" ಎಂದು ಗೊಣಗಿಕೊಂಡು ಹೋದನು. ನಮ್ಮ ಸ್ವಾರ್ಥಕ್ಕಾಗಿ ಸಮಾಜದ ಸ್ವತ್ತನ್ನು ಹಾಳುಗೆಡುವಬಾರದೆಂಬ ಅರಿವು, ಅವರವರ ಮನದೊಳಗೆ ಮೂಡಬೇಕೇ ಹೊರತು, ಇಂತಹ ಯುವ-ಕರು-ಗಳಿಗೆ ಬುದ್ಧಿಮಾತಿನಿಂದ ಯಾವುದೇ ಪ್ರಯೋಜನವಿಲ್ಲ.
೬ ಗಂಟೆಗಳಷ್ಟು ದೀರ್ಘ ಪ್ರಯಾಣ ಮುಗಿದು ನಾಗರೀಕತೆಯ ದ್ಯೋತಕವೋ ಎಂಬಂತೆ ತೋಟಗಳಿಗೆ ಹಾಕಿದ್ದ ಬೇಲಿಯನ್ನು ನೋಡುವುದರೊಂದಿಗೆ ನಮ್ಮ ಕುಮಾರ ಪರ್ವತದ ಚಾರಣ ಮುಕ್ತಾಯವಾಯಿತು. ಸುಬ್ರಮಣ್ಯಕ್ಕೆ ಹೋಗಿ, ಬೆಂಗಳೂರಿಗೆ ಹೊರಡಲಿರುವ ಕ.ರಾ.ರು.ಸಾ.ಸಂ.ನಲ್ಲಿ ಉಳಿದಿದ್ದ ಕೊನೇಯ ಎರಡು ಸೀಟ್ ಕಾಯ್ದಿರಿಸಿದೆವು. ರಾತ್ರಿ ೧೦ಕ್ಕೆ ಹೊರಡಲಿರುವ ಬಸ್ಸು, ೧೦.೩೦ಕ್ಕೆ ಬಂದಂದ್ದರಿಂದ, ೫ ಗಂಟೆಗಳಷ್ಟು ದೀರ್ಘವಾದ ಬಿಡುವಿನ ವೇಳೆಯನ್ನು ರಥ ಬೀದಿಯಲ್ಲಿ ತಿರುಗಾಡುತ್ತಾ,ವಾಚನಾಲಯದಲ್ಲಿ ಓದುತ್ತಾ ಕಳೆದೆವು. ಬಸ್ಸಿನಲ್ಲಿ ಕುಳಿತ ನಮಗೆ ಕಳೆದ ಮೂರು ದಿನಗಳ ಪ್ರಕೃತಿಯೊಂದಿಗಿನ ಮಧುರ ನೆನಪು ಕಾಡುತ್ತಿತ್ತು, ಜೊತೆಗೆ ಇಂಬಳಗಳ ಕಡಿತದಿಂದುಂಟಾದ ತುರಿಕೆಯೂ ಕೂಡ.ಫೋಟೋ ಆಲ್ಬಮ್

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)