Monday, September 28, 2009

ನಂಬುಗೆ

ಬೇಸಿಗೆಯ ರಜೆಯೊಂದರ ದಿನ ಬಿಸಿಲ ಬೇಗೆಗೆ ಬೆವರಿಳಿಸುತ್ತಾ ಮಂಜುನಾಥ ಮಯ್ಯರು ತಮ್ಮನ ಮನೆಯೊಳಗೆ ಕಾಲಿಡುತ್ತಾ, ನಗು ಮೊಗದಿಂದ ತಮ್ಮನ ಕೂಗಿ ಕರೆದರು. ದೂರದ ಮಂಗಳೂರಿನಿಂದ ಕೋಡಿಯ ತಮ್ಮ ಮನೆಗೆ ಅನಿರೀಕ್ಷಿತವಾಗಿ ಭೇಟಿಯಿತ್ತ ಅಣ್ಣನ ನೋಡಿ ಜಗನ್ನಾಥರಿಗೂ ಸಂತಸವಾಯ್ತು. ಅಣ್ಣನ ಮುಖ ನೋಡುತ್ತಾ, "ಮೊನ್ನೆ ದಾವಣಗೆರೇಲಿ ಒಂದ್ ಕಾರ್ಯಕ್ರಮಕ್ಕೆ ಹೋಗಿದ್ಯಲ್ಲ ಹೇಗಿತ್ತು?" ಎಂದು ಕೇಳಿದರು. ಇದಕ್ಕುತ್ತರವಾಗಿ ಮಂಜುನಾಥ ಮಯ್ಯರು "ಕಾರ್ಯಕ್ರಮದ ವಿಷಯ ನಂತರ ತಿಳಿಸುತ್ತೇನೆ, ನಿನ್ನ ಮಗಳ ಜಾತಕ ಒಬ್ಬರಿಗೆ ಕೊಟ್ಟು ಬಂದಿದ್ದೇನ. ಹುಡುಗ ಕೋಟೇಶ್ವರದವನು. ನಮ್ಮ ಸಾಲಿಗ್ರಾಮದ ಗಜಾನನ ಸ್ಟೋರ್ಸ್ ಉಪಾಧ್ಯರ ಹೆಂಡತಿಯ ತಮ್ಮ. ಹೆಸರು ಅರವಿಂದ. ಹುಡುಗ ಬೆಂಗ್ಳೂರಲ್ಲಿ ಇಂಜಿನಿಯರ್ ಅಂತೆ. ಅವ್ನ ಅಪ್ಪ ಶ್ರೀಧರ ಅಡಿಗ ಅಂತ, ಬ್ಯಾಂಕಲ್ಲಿ ಕೆಲ್ಸ ಮಾಡಿ ರಿಟೈರ್ ಆಗಿದ್ದಾರೆ. ಮೂರು ಜನ ಮಕ್ಳು ಅವ್ರಿಗೆ; ೨ ಹೆಣ್ಣು, ೧ ಗಂಡು, ಹುಡ್ಗ ಕೊನೇಯವನು." ಎಂದು ಒಂದೇ ಉಸಿರಿನಲ್ಲಿ ಅರುಹಿದರು. ಜಗನ್ನಾಥರು ನಿರ್ವಿಣ್ಣ ಮುಖ ಭಾವದಿಂದ ,"ಯಾವ್ದಕ್ಕೂ ಅವ್ಳು ಒಪ್ಪಬೇಕಲ್ಲ; ಹುಡುಗಿಯರಿಗೆ ಓದಿಸುವುದೇ ತಪ್ಪು, ತಲೆಯಲ್ಲಿ ಏನಿರುತ್ತೋ" ಎಂದು ನಿಟ್ಟುಸಿರು ಬಿಟ್ಟರು. ಮಂಜುನಾಥ ಮಯ್ಯರು ಇದಕ್ಕುತ್ತರವಾಗಿ, "ನೀ ಯಾವುದಕ್ಕೂ ಉಪಾಧ್ಯರನ್ನ ಒಮ್ಮೆ ನೋಡಿ ಬಾ, ಮುಂದಿನದ್ದನ್ನು ದೇವ್ರಿಗೆ ಬಿಟ್ರಾಯ್ತು" ಎಂದು ಸಮಾಧಾನ ಪಡಿಸಿ, ಕಾರ್ಯಕ್ರಮದ ವಿವರ ನೀಡಲಾರಂಭಿಸಿದರು.

ವೃತ್ತಿಯಿಂದ ಶಾಲಾ ಶಿಕ್ಷಕರಾದ ಜಗನ್ನಾಥರಿಗೆ "ಆರತಿಗೊಬ್ಬಳು, ಕೀರ್ತಿಗೊಬ್ಬ" ಎಂಬಂತೆ ಎರಡು ಮಕ್ಕಳು. ಮೊದಲ ಮಗಳು ರಷ್ಮಿ ಕಲಿಯುವುದರಲ್ಲಿ ಜಾಣೆಯಾಗಿದ್ದು, MSc ಯವರೆಗೂ ಓದಿದ್ದಳು. ಕಾಲೇಜಿನ ವ್ಯಾಸಂಗ ಮುಗಿಯುವ ಮೊದಲೇ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಈಚೆಗೆ ಎರಡು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದಳು. ಮಗಳ ವಯಸ್ಸು ೨೩ ದಾಟುತ್ತಿದಂತೆಯೇ ಜಗನ್ನಾಥರಿಗೆ, ಆಕೆಗೊಂದು ತಕ್ಕ ವರನನ್ನು ಹುಡುಕುವ ಚಿಂತೆ ಕಾಣಿಸತೊಡಗಿತು. ಈ ಮೊದಲು ಕಂಡ ಏಳೆಂಟು ನಂಟಸ್ತಿಕೆಯನ್ನು ಮಗಳೂ ಒಪ್ಪದ ಕಾರಣ, ಬಲವಂತದಿಂದ ಮದುವೆ ಮಾಡಿಸುವುದು ಬೇಡವೆಂದು ಮನಗಂಡಿದ್ದರು.

ಮರುದಿನ ಬೆಳಿಗ್ಗೆ ಬೇಗ ಎದ್ದು ಪೂಜಾದಿ ಕಾರ್ಯಗಳನ್ನು ಮುಗಿಸಿ, ಉಪಹಾರ ಸೇವಿಸಿ ಗಜಾನನ ಸ್ಟೋರ್ಸ್-ನ ಉಪಾಧ್ಯರನ್ನು ಭೇಟಿಮಾಡಲು ಹೊರಟರು. ಹುಡುಗನ ಕೆಲಸ, ಸಂಬಳ ಮೊದಲಾದವುಗಳ ಬಗ್ಗೆ ವಿಚಾರಿಸಿ, ಹುಡುಗನ ಚಿತ್ರ ತೆಗೆದುಕೊಂಡು ಹೋದರು. ಉಪಾಧ್ಯಾಯರು ಬೆಂಗಳೂರಿನ ತಮ್ಮ ಭಾವನಂಟನಿಗೆ ಹುಡುಗಿಯ ಚಿತ್ರವನ್ನು ಕೊರಿಯರ್ ಮೂಲಕ ರವಾನಿಸಿದರು. ಹುಡುಗ ಫೋಟೋ ನೋಡಿ ಒಪ್ಪಿಗೆ ಸೂಚಿಸಲು, ಜಾತಕ ಹೊಂದುವಿಕೆಯ ಪರಿಶೀಲನೆಗೆ ಉಪಾಧ್ಯರು ಜ್ಯೋತಿಷಿಗಳ ಬಳಿ ತೆರಳಿದರು. ಇಬ್ಬರ ಜಾತಕ ಹೊಂದುವುದನ್ನು ನಿಶ್ಚಯಿಸಿಕೊಂಡು ಜಗನ್ನಾಥರಿಗೆ ವಿಷಯ ತಿಳಿಸಿದರು. ಮುಂದಿನ ಕಾರ್ಯಕ್ರಮ ಹುಡುಗ, ಹುಡುಗಿಯರ ಮುಖತಃ ಭೇಟಿಯಾಗಿತ್ತು. ಇದಕ್ಕಾಗಿ ದಿನವೊಂದನ್ನು ನಿಶ್ಚಯಿಸಿ ಇಬ್ಬರಿಗೂ ಕರೆಮಾಡಲಾಯ್ತು. ಹುಡುಗಿಗೆ ಹುಡುಗನ ಚಿತ್ರ ತೋರಿಸುವ ಬಗ್ಗೆ ಉಪಾಧ್ಯರು ತಿಳಿಸಿದರೂ, ಜಗನ್ನಾಥರು "ಅವಳೇನೂ ನೋಡಬೇಕಾದ್ದಿಲ್ಲ" ಎಂದುತ್ತರಿಸಿದರು. ಇದರಿಂದ ಉಪಾಧ್ಯರಿಗೆ ಹುಡುಗಿಯ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಮೂಡುವಂತಾಯ್ತ.

ನಿಶ್ಚಿತ ದಿನ ರಾಹುಕಾಲಕ್ಕೆ ಮೀರದಂತೆ ಮನೆಯವರೊಡಗೂಡಿ ಹುಡುಗ ಜಗನ್ನಾಥರ ಮನೆಗೆ ಭೇಟಿ ಕೊಟ್ಟ. ಹುಡುಗ ಈ ಮೊದಲು ಹುಡುಗಿಯನ್ನು ಚಿತ್ರದಲ್ಲಿ ನೋಡಿದ್ದಾಗಿಯೂ, ಕಲ್ಪಿತವಾದ ಹುಡುಗಿಯ ರೂಪು ರೇಖೆಗಳನ್ನು ಮನದಲ್ಲೇ ಸವಿಯುತ್ತಾ , ಮಧುರ ಎದೆಬಡಿತದ ಹಿನ್ನೆಲೆಯೊಂದಿಗೆ ಹುಡುಗಿಯ ಬರವನ್ನು ನಿರೀಕ್ಷಿಸುತ್ತಾ, ತನ್ನ ಹಂಬಲವನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದನು. ತನ್ನ ಅಮ್ಮನ ಜೊತೆಯಲ್ಲಿ, ತಲೆ ತಗ್ಗಿಸಿ, ನಿಧಾನಕ್ಕೆ ಹೆಜ್ಜೆ ಹಾಕುತ್ತಾ, ಲಜ್ಜಾವತಿಯಂತೆ ಸಭೆ ಪ್ರವೇಶಿಸುವುದನ್ನು ನಿರೀಕ್ಷಿಸಿದ್ದ ಹುಡುಗ, ತಲೆ ಎತ್ತಿ, ನಗು ಮೊಗದಿಂದ ಒಬ್ಬಳೇ ಬಂದದ್ದನ್ನು ಕಂಡು ಕಸಿವಿಸಿಯಾದನು. ಜಗನ್ನಾಥರು ಮಗಳಿಗೆ ನೆರೆದವರ ಪರಿಚಯ ಮಾಡಿಸಲಾಗಿ, ಹುಡುಗನ ಕತ್ತು ಯಾಂತ್ರಿಕವಾಗಿ ಎಲ್ಲರೆಡೆ ತಿರುಗುತ್ತಿತ್ತಾದರೂ, ಶುಭ್ರ ಕಡಲ ನೀಲ ಕಂಗಳು, ನೀಳವಾದ ಮೂಗು, ತುಂಬಿದ ಕೆನ್ನೆ, ಬಳಿದ ಬಣ್ಣವನ್ನು ಭೇದಿಸಿ ಕಾಣುವಂತಹ ತುಟಿಯ ಆಕೃತಿ, ಸ್ವಲ್ಪವೇ ಉಬ್ಬೆನಿಸಿದರೂ ಮುಖಕ್ಕೆ ಹೊಂದುವಂತಹ ದಂತ ಪಂಕ್ತಿ, ಸದಾ ಹಸನ್ಮುಖಿ, ಹೆಗಲವರೆಗೂ ಇಳಿಬಿದ್ದ ದಟ್ಟ ಕಪ್ಪು ಕೂದಲು, ಕಪ್ಪೂ ಅಲ್ಲದ ತೀರ ಬಿಳಿಯೂ ಅಲ್ಲದ ಮೈಬಣ್ಣ, ಹದವಾದ ಮೈಕಟ್ಟಿನ, ನಾಳೆ ತನ್ನವಳಾಗಬಹುದಾದ ಹುಡುಗಿಯನ್ನು ಕದ್ದು ಕದ್ದು ನೋಡಿ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಿದ್ದನು.

ಹುಡುಗಿಯ ಅಮ್ಮ ಒಳಗಡೆಯಿಂದ ಉಪ್ಪಿಟ್ಟು, ಮೈಸೂರು ಪಾಕು ತುಂಬಿದ ತಟ್ಟೆಗಳನ್ನು ತಂದು ಒಂದೊಂದಾಗಿ ಮಗಳ ಕೈಗೆ ಕೊಡುತ್ತಾ, ಬಂದಿದ್ದವರಿಗೆ ಕೊಡುವಂತೆ ಸೂಚಿಸಿದರು. ಮೊದಲ ತಟ್ಟೆ ತನಗೇ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಹುಡುಗನಿಗೆ, ತನ್ನ ಅಪ್ಪ ಅಮ್ಮನಿಗೆ ಕೊಟ್ಟದ್ದು ನೋಡಿ ನಿರಾಸೆಯಾಯಿತಾದರೂ, ತನಗೆ ತಟ್ಟೆ ಕೊಡುವಾಗ ಲಭಿಸಬಹುದಾದ ಮೊದಲ ಕಣ್ಣುಗಳ ಮಿಲನಕ್ಕೆ ಕಾತರನಾಗಿದ್ದ. ನಿರೀಕ್ಷಿಸಿದ್ದಂತೆ ಕಣ್ಣಿನಲ್ಲಿ ಯಾವ ಬಗೆಯ ಹೊಳಪೂ ಕಾಣಿಸದೆ, ಆಕೆ ನಕ್ಕ ಹಾವಕ್ಕಷ್ಟೇ ತೃಪ್ತನಾಗಿ, ಪ್ರತಿವಂದನೆ ಸಲ್ಲಿಸಿದ. ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ ಕೊಟ್ಟ ತಿಂಡಿ, ಕಾಫಿ ಮುಗಿಸಲಾಗಿ ಉಪಾಧ್ಯರು "ಇನ್ನು ಇವರಿಬ್ರು ಫ್ರೈವೇಟಾಗಿ ಮಾತಾಡಿಕೊಳ್ಲಿ" ಎಂದರುಹಿದರು. ಹುಡುಗಿ ಎದ್ದು ನಿಂತು ಜನರಿರುವ ಸ್ಥಳದಿಂದ ಬೇರೆಯಾಗಿ ನಡೆಯಲು ಹುಡುಗನೂ ಆಕೆಯನ್ನು ಹಿಂಬಾಲಿಸಿದನು. ಊರಿಗೆ ಬಂದಿದ್ದು ಯಾವಾಗ, ಕೆಲಸ ಇತ್ಯಾದಿಗಳ ಬಗ್ಗೆ ಆರಂಭಿಸಿದ ಮಾತು ಅಭಿರುಚಿಗಳ ಕಡೆಗೆ ಹೊರಳಿತ್ತು. ಹುಡುಗಿ ವಾರಾಂತ್ಯಗಳಲ್ಲಿ ತಾನು ನಂಟರ ಮನೆ, ದೇವಸ್ಥಾನಕ್ಕೆ ಹೋಗುವುದಾಗಿಯೂ, ತಿಂಗಳಿಗೆ ಎರಡು ಬಾರಿಯಾದರೂ ಊರಿಗೆ ಬರುವುದಾಗಿಯೂ ತಿಳಿಸಿದಳು. ಹುಡುಗ ತನಗೆ ಸಾಹಿತ್ಯದಲ್ಲಿ ಹಾಗೂ ಕವನ ಬರೆಯುವುದರಲ್ಲಿ ಆಸಕ್ತಿ ಎಂದಂದನು. "ಅಡುಗೆ ಮಾಡಲು ಬರುತ್ತದೆಯೇ" ಎಂದು ಕೇಳಿದ ಹುಡುಗಿಯ ಪ್ರಶ್ನೆಗೆ ದಂಗಾದರೂ "ಬರುತ್ತದೆ, ಚೆನ್ನಾಗಿಯೇ ಮಾಡುತ್ತೇನೆ" ಎಂದು ನಕ್ಕು ಉತ್ತರಿಸಿದನು. ಹುಡುಗಿಯ ಮುಂದಾಲೋಚನೆ, ವಿದೇಶ ಪ್ರಯಾಣ ಇತ್ಯಾದಿ ಆಸಕ್ತಿಯ ಬಗ್ಗೆ ವಿಚಾರಿಸಲಾಗಿ, ತನಗೆ ಅಂತಹ ಆಕಾಂಕ್ಷೆಗಳೇನೂ ಇಲ್ಲ ಎಂದ ಆಕೆಯ ಉತ್ತರಕ್ಕೆ ಪ್ರತಿಯಾಗಿ ಹುಡುಗ ಮುಗುಳ್ನಗೆಯನಿತ್ತನು.

ಈ ಮಾತುಕತೆಯಿಂದ ಹುಡುಗನಿಗೆ, ಹುಡುಗಿಯ ಬಗ್ಗೆ ಸ್ವಲ್ಪ ತಿಳಿದಂತಾಯ್ತು. ಹೊರ ಪ್ರಪಂಚಕ್ಕೆ ಹೆಚ್ಚೇನೂ ಪರಿಚಯಿಸಲ್ಪಡದ, ಹೆಚ್ಚಿನ ಮಹತ್ವಾಕಾಂಕ್ಷೆ, ಅಭಿರುಚಿ ಇರದ ಸಾಧಾರಣ ಹುಡುಗಿ ಎಂಬುದನ್ನು ಮನಗಂಡನು. ನಗುಮೊಗದಿಂದ ಎರಡೂ ಕಡೆಯವರು ಬೀಳ್ಕೊಡಲಾಗಿ, ಜಗನ್ನಾಥರು "ಹೆಚ್ಚು ಕಾಯಿಸುವುದು ಬೇಡ, ಆದಷ್ಟು ಬೇಗ ನಿಮ್ಮಭಿಪ್ರಾಯ ತಿಳಿಸಿ" ಎಂದರು. ಮನೆಗೆ ತಲುಪಿ ಹುಡುಗನ ಅಭಿಪ್ರಾಯ ಕೇಳಲಾಗಿ, ನನಗವಳು ಬೇಕೇ ಎನ್ನುವಂತಹ ಅಭಿಪ್ರಾಯ ಇರದಿದ್ದರೂ, ಅವಳಾಗಬಹುದು ಎಂದೆನ್ನಿಸಿತು ಎಂದನು. ಮನೆಯ ಇತರರಿಗೂ ಇಷ್ಟವಾದ್ದರಿಂದ ಉಪಾಧ್ಯರು ಜಗನ್ನಾಥರಿಗೆ ದೂರವಾಣಿಯ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದರು. ಜಗನ್ನಾಥರು ಹುಡುಗನ ಬಗ್ಗೆ ಈ ಮೊದಲೇ ಊರಿನ ಕೆಲವರಲ್ಲಿ ವಿಚಾರಿಸಿ, ಒಳ್ಳೆಯ ಅಭಿಪ್ರಾಯವನ್ನೇ ಸಂಗ್ರಹಿಸಿದ್ದರು. ಹುಡುಗನ ಮಾತು, ನಡವಳಿಕೆಯಿಂದ ಜಗನ್ನಾಥರಿಗೂ ಇದೇ ಅಭಿಪ್ರಾಯ ಮೂಡಿತ್ತು. ರಾತ್ರಿ ಊಟ ಮಾಡುತ್ತಿರಬೇಕಾದರೆ ತಮ್ಮ ಅಭಿಪ್ರಾಯವನ್ನು ಮಗಳ ಮುಂದಿರಿಸಿ ಆಕೆಯ ಉತ್ತರಕ್ಕಾಗಿ ಕಾಯತೊಡಗಿದರು.

ರಾತ್ರಿಯಾದರೂ ಜಗನ್ನಾಥರಿಂದ ಯಾವುದೇ ಬಗೆಯ ಪ್ರತಿಕ್ರಿಯೆ ಇಲ್ಲದ್ದು ಕಂಡು, ಹುಡುಗನ ಮನೆಯವರಿಗೆ ಸಹಜವಾಗಿಯೇ ಒಂದು ಬಗೆಯ ನಿರಾಸೆ ಪ್ರಾಪ್ತವಾಗಿತ್ತು. ಹುಡುಗನಿಗೆ ನಿರಾಸೆಯಾದರೂ ತೋರಿಸಿಕೊಳ್ಳದೇ, "ನನ್ನ ಬಗ್ಗೆ ನಿಮಗೇನೋ ಚೆನ್ನಾಗಿ ತಿಳಿದಿದೆ. ಅದರರ್ಥ ಅವರು ಯೋಚಿಸದೇ ತಮ್ಮ ಹುಡುಗಿಯನ್ನು ಕೊಡಬೇಕೆಂದಲ್ಲ. ತಮ್ಮ ಮಗಳು ಸುಖವಾಗಿರಬೇಕೆಂಬ ಬಯಕೆ ಅವರಿಗಿರುವುದು ಸಹಜ. ಅದೂ ಅಲ್ಲದೇ ಹುಡುಗಿಯೂ ಕೂಡ ಓದಿದವಳು. ಅವಳಿಗೂ ತನ್ನ ಗಂಡನಾಗುವವನ ಬಗ್ಗೆ ಕಾಮನೆಗಳಿರುವುದು ಸಹಜ. ಹೆತ್ತವರಿಗೆ ಹೆಗ್ಗಣ ಮುದ್ದಾಗಿ ಕಾಣುವಂತೆ, ಇತರರಿಗೂ ಕಾಣಬೇಕೆಂದೇನಿಲ್ಲ" ಎಂದು ಸಮಾಧಾನ ಪಡಿಸಿದ.

ಮರುದಿನ ಬೆಳಿಗ್ಗೆ ಜಗನ್ನಾಥರು ಉಪಾಧ್ಯರಿಗೆ ಕರೆ ಮಾಡಿ ತಮ್ಮ ಕಡೆಯ ಒಪ್ಪಿಗೆಯನ್ನು ತಿಳಿಸಿದರು. ಮುಂದಿನ ಕಾರ್ಯಕ್ಕಾಗಿ ಹುಡುಗ, ಹುಡುಗಿಯ ಮನೆಯವರು ಉಪಾಧ್ಯರ ಮನೆಯಲ್ಲಿ ಆ ದಿನ ಸಂಜೆ ಸೇರುವುದಾಗಿ ನಿಶ್ಚಯವಾಯ್ತು. ಪುರೋಹಿತರ ಜೊತೆಗೂಡಿ ಬಂದ ಹುಡುಗಿಯ ಮನೆಯವರು ಒಂದು ತಿಂಗಳ ನಂತರ ನಂಬುಗೆಯ ದಿನ, ಅಕ್ಟೋಬರ್ ತಿಂಗಳಲ್ಲಿ ಮದುವೆಯ ದಿನವನ್ನು ನಿಶ್ಚಯಿಸಿದರು.

ನಂಬುಗೆಗೂ ಮೊದಲು ಹುಡುಗನಿಗೆ ಹುಡುಗಿಯನ್ನು ಮಾತನಾಡಿಸುವ ಬಯಕೆಯಾದರೂ , ಯಾವುದೇ ಮಾಧ್ಯಮವಿಲ್ಲದೆ ಚಟಪಡಿಸುತ್ತಿದ್ದ. ಅಂತರ್ಜಾಲದಲ್ಲಿ ಜಾಲಾಡಿ ದೊರೆತ ಸಮೂಹದ ಆಕೆಯ ಫ್ರೊಫೈಲಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ. ಕಳುಹಿಸಿದ ಮರು ಕ್ಷಣದಲ್ಲಿಯೇ ಆಕೆ ಅದನ್ನು ಸ್ವೀಕರಿಸಿದಾಗ, ಆಕೆಯ ಇ-ಮೈಲ್ ಅಡ್ರೆಸ್ ಗುರುತಿಸಿ, ಆಕೆಯ ದೂರವಾಣಿ ಸಂಖ್ಯೆ ತಿಳಿಸುವಂತೆ ಪತ್ರಿಸಿದರೂ ಅದಕ್ಕೆ ಪ್ರತ್ಯುತ್ತರ ದೊರೆಯಲಿಲ್ಲ. ತನ್ನ ಗೆಳೆಯರ ಮೂಲಕ ಆಕೆಯ ಮೊಬೈಲ್ ಸಂಖ್ಯೆ ಸಂಗ್ರಹಿಸಿದನಾದರೂ, ಕರೆ ಮಾಡಲು ನಾಚಿ ಸಂದೇಶ ಕಳುಹಿಸಿದ. ಅದಕ್ಕೂ ಪ್ರತ್ಯುತ್ತರ ಬರದಿದ್ದುದನ್ನು ನೋಡಿ, ನಾಚಿಕೆಯಿರಬಹುದೆಂದು ಭ್ರಮಿಸಿ ಸುಮ್ಮನಾದ.

ಒಂದು ತಿಂಗಳೆಂಬುದು, ಒಂದು ವರ್ಷದ ವಿಯೋಗವೆಂಬಂತೆ ಹುಡುಗನಿಗೆ ಕಾಣಿಸಿದರೂ ಕೊನೆಗೊಂದು ದಿನ ನಿಶ್ಚಿತಾರ್ಥದ ದಿನ ಬಂದೇ ಬಿಟ್ಟಿತು. ಎಂದಿನಂತೆಯೇ ನಿರಾಭರಣನಾಗಿ, ಸಾದಾ ಉಡುಪಿನಲ್ಲಿಯೇ ನಿಶ್ಚಿತಾರ್ಥ ನಡೆಯುವ ಸ್ಥಳವನ್ನು ತನ್ನ ಮನೆಯವರೊಡಗೂಡಿ ಸೇರಿದ. ಅಳುಕಿನಿಂದಲೇ ಸಭೆ ಪ್ರವೇಶಿಸಿ, ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಸಾಕ್ಷಿಯಾದ. ನಡುಗುವ ಕೈಗಳಿಂದ ಹುಡುಗಿಯ ಕೈಗೆ ಉಂಗುರ ತೊಡಿಸಿ, ಮುಟ್ಟಿಸಿಕೊಳ್ಳಲೋ ಬೇಡವೋ ಎಂಬಂತೆ ಹುಡುಗಿಯ ಕೈಗೂ ತನ್ನ ಕೈ ಕೊಟ್ಟು, ಓರೆಗಣ್ಣಿನಿಂದ ಆಕೆಯ ಸಾಲಂಕೃತ ಮೊಗವನ್ನು ಸವಿದ. ಗುರು ಹಿರಿಯರಿಗೆ ಈರ್ವರೂ ಜೊತೆಗೂಡಿ ನಮಸ್ಕಾರ ವಿಧಿಯನ್ನು ಪೂರೈಸಿದರು. ನೆರೆದ ಜನರು ಉಪಹಾರ ಸ್ವೀಕರಿಸಿ, ಹುಡುಗ ಹುಡುಗಿಯನ್ನು ಮಾತನಾಡಿಸಿ ಅವರವರ ಮನೆಗೆ ತೆರಳಲು ಅನುವಾದರು. ಹುಡುಗನಿಗೆ ಆಕೆಯೊಡನೆ ಮಾತನಾಡುತ್ತಾ ಕುಳಿತಿರಬೇಕೆಂಬ ಹಂಬಲವಾದರೂ, ಆಕೆಯ ಮನೆಯವರೂ ಬಳಿಯಲ್ಲಿದ್ದುದರಿಂದ ಸಂಕೋಚಗೊಂಡು, ತನ್ನ ಬಂಧು ಮಿತ್ರರೊಡನೆ ಮಾತಿಗಿಳಿದ.

ಉಪಹಾರಕ್ಕೆಂದು ಹುಡುಗ, ಹುಡುಗಿಯನ್ನು ಜೊತೆಗೆ ಕೂರಿಸಲಾಗಿ ನಿಧಾನಕ್ಕೆ ಆಕೆಯೊಂದಿಗೆ ಮಾತಿಗಿಳಿದ. ಆಕೆಯ ದೂರವಾಣಿ ಸಂಖ್ಯೆಯ ಬಗ್ಗೆ ವಿಚಾರಿಸಲಾಗಿ, ಹೌದು ಅದು ತನ್ನದೇ ಎಂದಳಲ್ಲದೇ, ನಿಮಗದು ಹೇಗೆ ಲಭಿಸಿತು ಎಂದೂ ಕೇಳಿದಳು. ಹುಡುಗ ಗೂಗಲ್ ಎಂದು ನಕ್ಕು ಸುಮ್ಮನಾದ. ಹುಡುಗಿ ತನ್ನ ಉಪಹಾರ ಬೇಗನೆ ಮುಗಿಸಿ, ತಾನು ಹೊರಡುತ್ತೇನೆ ಎಂದು ಎದ್ದು ನಿಂತೊಡನೆ ಆತನಿಗೆ ನಿರಾಸೆಯಾಯ್ತು. ಜನ ಬರಿದಾಗುತ್ತಿರಲು, ಹುಡುಗನ ಮನೆಯವರೂ ಹೊರಡಲು ಅನುವಾದರು. ತನಗಾಗಿ ಕೈಯೆತ್ತಿ ಟಾಟಾ ಮಾಡುತ್ತಿದ್ದ ಹುಡುಗಿಯನ್ನು ಕಣ್ತುಂಬಿಕೊಂಡು ಆತ ವಿದಾಯ ಹೇಳಿದನು.

ನಂಬುಗೆಯಾದ ಮೊದಲ ವಾರಾಂತ್ಯ ಹುಡುಗನಿಗೆ, ತನ್ನ ಮನದನ್ನೆಯ ಭೇಟಿಯಾಗುವ ಹಂಬಲದಿಂದ ಆಕೆಗೆ ಕರೆ ಮಾಡಿದನು. ಏನು ಮಾತನಾಡುವುದೆಂದು ತೋಚದೆಯೇ, ಅಡುಗೆ ಊಟ, ಆಫೀಸಿನ ವಿಷಯ ಮಾತನಾಡಿ, ವಾರಾಂತ್ಯದಲ್ಲಿ ಭೇಟಿಯಾಗಬಹುದೇ ಎಂದು ಪ್ರಶ್ನಿಸಿದ. ಪ್ರತ್ಯುತ್ತರವಾಗಿ ಆಕೆ ನೋಡೋಣ ಎಂದರುಹಿದಳು. ವಾರಾಂತ್ಯ ಮತ್ತೆ ಕರೆಮಾಡಲಾಗಿ, ಇಂದು ಕೆಲಸವಿರುವುದಾಗಿಯೂ, ನಾಳೆ ನಂಟರ ಮನೆಗೆ ಹೋಗುವುದಾಗಿಯೂ ತಿಳಿಸಿದಳು. ಮತ್ತೆ ನಿರಾಸೆಯಿಂದ ಹುಡುಗ, ಹಾಗಿದ್ದಲ್ಲಿ ಮುಂದಿನವಾರ ಭೇಟಿಯಾಗುವೆ ಎಂದು ತಿಳಿಸಿದನು.

ಎಲ್ಲೋ ತಪ್ಪು ನಡೆದಿರಬಹುದೆಂದು ಹುಡುಗನ ಮನಸ್ಸು ಚಿಂತೆಗೀಡಾಯಿತು. ಬೆಂಗಳೂರಿನಂತಹ ನಗರದಲ್ಲಿದ್ದು, ಹುಡುಗ ಹುಡುಗಿಯರು ಜೊತೆ ಜೊತೆಯಾಗಿ ಅಲೆಯುತ್ತಿರುವಾಗ, ನಂಬುಗೆಯಾದ ಮೇಲೂ ಈಕೆ ಭೇಟಿ ಮಾಡಲು ಅಂಜುತ್ತಿರಲು ಕಾರಣವೇನು ಎಂದು ಚಿಂತಿಸತೊಡಗಿದ. ತನ್ನಲ್ಲೇಕೆ ಆಕೆ ಇನ್ನೂ ತನ್ನವಳು ಎಂಬ ಭಾವನೆ ಸ್ಫುರಿಸುತ್ತಿಲ್ಲ ಎಂದು ಕೊರಗಿ ಸೊರಗತೊಡಗಿದನು. ಇನ್ನು ಆಕೆ ಕರೆ ಮಾಡುವವರೆಗೂ ತಾನು ಮುಂದುವರೆಯುವುದು ಬೇಡವೆಂದು ನಿಶ್ಚಯಿಸಿಕೊಂಡನು.

ವಾರಾರಂಭದಲ್ಲಿ ಆಫೀಸಿಗೆ ಹೋದೊಡನೆಯೇ ಕಾಣಿಸಿದ ಆಕೆಯ "good morning" ಮೈಲನ್ನೋದಿ, ಈತನ ಮನಸ್ಸು ಮೃದುವಾಯಿತು. ಅದಕ್ಕೆ ಪ್ರತ್ಯುತ್ತರ ಕಳುಹಿಸಿ, ಆಫೀಸಿನ ಸಮಯದಲ್ಲಿ ಆಕೆಗೆ ತೊಂದರೆ ಕೊಡುವುದು ಬೇಡವೆಂದು, ಮನೆಗೆ ಮರಳಿದ ಕೂಡಲೇ ಕರೆ ಮಾಡಿದ. ಅತ್ತ ಕಡೆಯಿಂದ ಹಲೋ ಎಂಬ ಮಧುರ ದನಿ ಕೇಳುತ್ತಲೇ, ಏನು ಮಾಡುತ್ತಿರುವುದಾಗಿ ಕೇಳಿದ. ಅಡುಗೆ ಎಂದು ಆಕೆ ತಿಳಿಸಿದ ಕೂಡಲೇ, ನಿನಗೀಗ ತೊಂದರೆಯಾದರೆ ಅಡುಗೆ ಮುಗಿದ ಕೂಡಲೇ ಕರೆ ಮಾಡು ಎಂದರುಹಿ, ಆಕೆಯ ಕರೆಯ ನಿರೀಕ್ಷೆಯಲ್ಲಿಯೇ ಕಳೆದ. ಹನ್ನೊಂದಾದರೂ ಯಾವ ಕರೆಯೂ ಬರದಿದ್ದರಿಂದ, ಆಕೆಗೆ ಸವಿರಾತ್ರಿಯ ಸಂದೇಶ ಕಳುಹಿಸಿ ನಿದ್ರೆಗೆ ಜಾರಿದ.

ಮರುರಾತ್ರಿ ಮತ್ತಿನ್ಯಾವ ಕೆಲಸದಲ್ಲಿ ತೊಡಗಿರುವಳೋ ಎಂಬ ಅಳುಕಿನಿಂದಲೇ ಕರೆ ಮಾಡಿದನು. ಇಬ್ಬರ ಕಡೆಯಿಂದಲೂ ಮಾತು ಸಾಗಿತ್ತಾದರೂ, ಮಾತಿನಲ್ಲಿ ಯಾವುದೇ ಸ್ವಾರಸ್ಯವಿದ್ದಂತಿರಲಿಲ್ಲ. ಕೆಲಸ ಅರಸುವಾಗಿನ ಇಂಟರ್ವ್ಯೂ ಪ್ರಶ್ನೋತ್ತರದಂತೆ ಅವರ ಮಾತಿನ ಧಾಟಿ ಸಾಗಿತ್ತು. ಏನಾದರಾಗಲಿ ಅಂತೂ ಮಾತನಾಡಿಸುವ ಅವಕಾಶ ದೊರೆಯಿತಲ್ಲ ಎಂದು ಹುಡುಗ ಸಂತೋಷದಿಂದ ಹಗಲುಗನಸು ಕಾಣುತ್ತಾ ಪವಡಿಸಿದ. ಇದೇ ರೀತಿ ಮತ್ತಿನ್ನೊಂದೆರಡು ಬಾರಿ ಮಾತುಕತೆಯ ಲಕ್ಷಣ ಕಾಣಿಸಿದರೂ, ಇಬ್ಬರ ಮನಸ್ಸು ಒಂದುಗೂಡುವ ಲಕ್ಷಣ ಮಾತ್ರ ಕಾಣಿಸಲಿಲ್ಲ. ಈತ ಹೇಳುತ್ತಿದ್ದ ಚಿಕ್ಕ ಪುಟ್ಟ ಹಾಸ್ಯಗಳಿಗೆ ಮಾತ್ರ ಆಕೆ ಮನಃಪೂರ್ವಕವಾಗಿ ನಕ್ಕು, ಅವನ ಗೊಂದಲವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಳು. ಸಾಹಿತ್ಯವನ್ನೋದಿದ್ದರಿಂದ ತನ್ನ ಮಾತಿನ ಧಾಟಿ, ತನ್ನ ಹಾವ ಭಾವಗಳ ಮೇಲೆ ಅವುಗಳ ಪ್ರಭಾವದಿಂದ ತಾನು ಅಸಹಜವಾಗಿ ಮಾತನಾಡುತ್ತಿರುವೆನೇನೋ ಎಂದು ಒಮ್ಮೆ ಭ್ರಮೆಗೊಂಡ. ಆದರೆ ಮರುಕ್ಷಣವೇ ಅದು ಕಾರಣವಿದ್ದಿರಲಾರದು; ತಾನು ಸಾಹಿತ್ಯದ ವಿಷಯವನ್ನಾಗಲೀ, ತನ್ನ ಆಲೋಚನೆಗಳ ಬಗೆಯಾಗಲೀ ಒಮ್ಮೆಯೂ ಆಕೆಯೊಡನೆ ಹಂಚಿಕೊಂಡಿಲ್ಲ. ತನ್ನ ಬರವಣಿಗೆಯ ಬಗ್ಗೆ, ದಿನಚರಿಯ ಬಗ್ಗೆ ಒಮ್ಮೆ ಕೂಡ ಮನುಷ್ಯ ಸಹಜ ಗುಣವಾದ ಕುತೂಹಲವನ್ನು ಆಕೆ ತೋರಿಸಿಲ್ಲ ಎಂಬುದನ್ನು ಮನಗಂಡು, ಹುಡುಗಿಯ ಬಗ್ಗೆ ಉತ್ತಮ ಅಭಿಪ್ರಾಯವನ್ನೇ ಜನರಿಂದ ಕೇಳಿದ್ದ ಹುಡುಗನಿಗೆ, ಸ್ತ್ರೀ ಸಹಜ ಗುಣವಾದ ನಾಚಿಕೆಯೊಂದಲ್ಲದೇ ಇತರ ಯಾವ ಕಾರಣವೂ ಹೊಳೆಯಲಿಲ್ಲ. ಏನಾದರೂ ಸರಿ, ಈ ವಾರಾಂತ್ಯ ಭೇಟಿ ಮಾಡಿ ಬಗೆಹರಿಸಿಕೊಂಡರಾಯ್ತೆಂದು ಬಗೆದು, ಆಲೋಚನೆಗೆ ಕಡಿವಾಣ ಹಾಕಿ ನಿದ್ರಿಸಲು ತೊಡಗಿದ.

ವಾರಾಂತ್ಯದ ಶನಿವಾರ ಮತ್ತೆ ಕರೆಮಾಡಿ, ತಮ್ಮ ಭೇಟಿಯ ಪ್ರಸ್ತಾಪ ಮಾಡಿದ. ಆಕೆ ನಾಳೆ ತಮ್ಮ ಮನೆಗೆ ಬನ್ನಿ ಎಂದು ಆಹ್ವಾನವಿತ್ತಳು. ಊಟಕ್ಕೇ ಬರಬಹುದು ಎಂದು ಆಕೆ ಹೇಳಿದರೂ ಮಿತ್ರನೋರ್ವನ ಔತಣ ಕೂಟ ಇದೆಯೆಂದೂ, ಸಂಜೆ ಬರುವುದಾಗಿಯೂ ತಿಳಿಸಿದ. ಭಾನುವಾರವೆಂಬುದು ಆತನಿಗೆ ಬಹಳ ಅಪ್ಯಾಯಮಾನವಾಗಿ ಕಾಣಿಸಿತು. ಇದುವರೆಗೂ ಕೇವಲ ಎರಡು ಬಾರಿ, ಅದೂ ಸಾಂಪ್ರದಾಯಿಕವಾಗಿ ಭೇಟಿಮಾಡಿದ್ದು. ಸಾಮಾನ್ಯವಾಗಿ ಆಕೆ ಹೇಗಿರಬಹುದು, ಹಿರಿಯರು ಬಳಿಯಿಲ್ಲದಿದ್ದಲ್ಲಿ ಆಕೆ ನನ್ನೊಡನೆ ಹೇಗೆ ಮಾತನಾಡಬಹುದು ಮೊದಲಾದ ಕನಸು ಕಾಣತೊಡಗಿದನು. ಭಾನುವಾರದ ಸಂಜೆ ಒಂದಿಷ್ಟು ಚಾಕಲೇಟನ್ನು ಖರೀದಿಸಿ, ಆಕೆಯ ವಿಳಾಸವರಸಿ ಸಾಗಿದ. ೪ ಗಂಟೆಗೇ ಬರುತ್ತೇನೆಂದವ ೪:೩೦ ಆದರೂ ಸುಳಿವಿಲ್ಲದ್ದು ಕಂಡು ಹುಡುಗಿಯೇ ಕರೆ ಮಾಡಿ ಎಲ್ಲಿರುವಿರೆಂದು ಕೇಳಿದಳು. ವಿಳಾಸ ಹಿಡಿದು ಅರ್ಧಗಂಟೆಯವರೆಗೂ ಅಲೆದಾಡುತ್ತಾ ಬಸವಳಿದ ಹುಡುಗ, ತನ್ನ ದುರ್ಭಲತೆಯನ್ನು ಮುಚ್ಚಿಡುವ ಸಲುವಾಗಿ, ಈಗ ತಾನೇ ಔತಣ ಕೂಟ ಮುಗಿಸಿ, ನಿಮ್ಮ ಮನೆಯ ಬಳಿಯಿರುವ ದೇವಸ್ಥಾನದ ಬಳಿ ಬಂದೆ. ಮನೆ ಯಾವುದು ಎಂದು ತಿಳಿಯುತ್ತಿಲ್ಲ, ರಸ್ತೆಯ ಬಳಿ ಬಂದರೆ ಸುಲಭವಾಗುವುದಾಗಿ ಹೇಳಿದ. ಮನೆಯಿಂದ ಹೊರಬಂದು ಆಕೆ ನಗುಮೊಗದಿಂದಲೇ ಸ್ವಾಗತಿಸಿ, ಮನೆಗೆ ಕರೆದುಕೊಂಡು ಹೋದಳು. ಹುಡುಗನಿಗೆ ಮಾತ್ರ ಮೊದಲ ಭೇಟಿಯಲ್ಲಾದ ಮಧುರ ಎದೆಬಡಿತದ ಅರಿವೂ ಆಗಿಲ್ಲ, ಆಕೆಯ ಕಣ್ಣುಗಳಲ್ಲಿ ನಿರೀಕ್ಷಿಸಿದ್ದ ಸ್ನೇಹದ ಹೊಳಪನ್ನೂ ಗುರುತಿಸಲಿಲ್ಲ.

ತಾನು ತಂದಿದ್ದ ಚಾಕಲೇಟನ್ನು ಆಕೆಯ ಕೈಗಿತ್ತು ಮಾತಿಗಾರಂಭಿಸಿದ. ಆಕೆ ಮನೆಯವರೆಗೆ ಬರುವಾಗಿನ ಕಷ್ಟದ ವಿಷಯ, ಮಾತು, ನೀರಿನಿಂದ ಬಂದವನನ್ನು ಉಪಚರಿಸಿದಳು. ಮನೆಯಲ್ಲಿ ಇದ್ದ ತನ್ನ ಸಹೋದರ ಸಂಬಂಧೀ ಅಣ್ಣನನ್ನು ಪರಿಚಯಿಸಿ, ಆತನೊಂದಿಗೆ ಮಾತನಾಡುವಂತೆ ಮಾಡಿ, ತಾನು ಅಡುಗೆ ಮನೆ ಸೇರಿದಳು. ಸ್ವಲ್ಪ ಹೊತ್ತಿನಲ್ಲಿಯೇ ಗೋಳಿ ಬಜೆ, ಜಾಮೂನಿನೊಂದಿಗೆ ಹಿಂದಿರುಗಿದಳು. ಹೊಟ್ಟೆ ತುಂಬಿದ್ದರೂ ತೋರಿಸಿಕೊಳ್ಳದೇ ಅವುಗಳಲ್ಲಿ ಕೆಲವನ್ನು ತಿಂದು ಮುಗಿಸಿದನು. ಆಕೆ ಇನ್ನಷ್ಟು ಮಾಡಿ ಹಾಕುವ ಉತ್ಸಾಹ ತೋರಿದಾಗ, ಮಧ್ಯಾಹ್ನದ ಊಟ ಹೆಚ್ಚಾದ್ದರಿಂದ ಇನ್ನಷ್ಟು ತಿನ್ನುವ ಉತ್ಸಾಹ ಇಲ್ಲ ಎಂದು ಸತ್ಯವನ್ನೇ ಹೇಳಬೇಕಾಯ್ತು. ಆಕೆಯ ಮುಖ ನೋಡಿ, ನೀನು ಮಾಡಿದ ತಿಂಡಿಯೆಲ್ಲವೂ ರುಚಿಯಾಗಿಯೇ ಇವೆ ಎಂದನು.

ಮನೆಯಲ್ಲಿದ್ದ ಆಕೆಯ ಅಣ್ಣ ಯಾವುದೋ ಕಾರ್ಯ ನಿಮಿತ್ತ ಹೊರಗಡೆ ಹೋಗಬೇಕಾದ್ದರಿಂದ, ಮನೆಯಲ್ಲಿ ಇವರಿಬ್ಬರೇ ಇರಬೇಕಾಯಿತು. ಪರಿಸ್ಥಿತಿಯ ಮನಗಂಡ ಹುಡುಗ, ಆಕೆಗೆ ಮುಜುಗರವಾಗದಿರಲೆಂದು ಮನೆಯ ಹೊರಗಡೆ ಯಾವುದೋ ನೆಪ ಹೇಳಿ, ಆಕೆಯನ್ನು ಅಲ್ಲಿಗೆ ಕರೆಸಿಕೊಂಡು ಮಾತಿಗಿಳಿದನು. ಹೀಗೆಯೆ ಸ್ವಲ್ಪ ಸಮಯ ಮಾತನಾಡಿ, ಬಳಿಯಲ್ಲೆಲ್ಲಾದರೂ ತಿರುಗಿಕೊಂಡು ಬರುವ ಬಗ್ಗೆ ಆಕೆಗೆ ತಿಳಿಸಿದನು. ಇಲ್ಲೇ ಬಳಿಯಲ್ಲಿ ಪಾರ್ಕೊಂದಿದೆ, ಅಲ್ಲಿಗೆ ಬೇಕಾದರೆ ಹೋಗಿಬರಬಹುದು ಎಂದು ಆಕೆ ಮಾರುತ್ತರಿಸಿದಳು. ದಾರಿಯಲ್ಲಿ ಸಾಗುತ್ತಾ ಮೊದಲ ಬಾರಿಗೆಂಬತೆ ಆಕೆ ಮನಬಿಚ್ಚಿ ಮಾತನಾಡತೊಡಗಿದಳು. ತನಗೆ ಶಾಪಿಂಗ್ ಹೋಗುವುದು ಇಷ್ಟ, ಯಾವಾಗಲೂ ಹೊಸ ಹೊಸ ಬಟ್ಟೆ ಧರಿಸುವುದೆಂದರೆ ತನಗೆ ಸಂತಸ ಎಂದು ತಿಳಿಸಿದಳು.

ಶಾಪಿಂಗ್ ಹೋಗುವುದು, ಹೊಸ ಬಟ್ಟೆ ಧರಿಸುವುದು, ಸಂತೋಷ ಕೊಡುವ ತೀರ ಎಳಸು ಮಾರ್ಗ, ಬದಲಾವಣೆ ನಮ್ಮ ಮನಸ್ಸಿನಲ್ಲಿ ಆಗಬೇಕು. ಹೊಸ ಆಲೋಚನೆ, ಹೊಸ ಅನುಭವ ಇವುಗಳಿಂದ ನಾವು ಪಡೆಯಬಹುದಾದ ಸಂತೋಷದ ಮಾರ್ಗ ಕೂಡ ಹೆಚ್ಚುತ್ತದೆ ಎಂದು ತಿಳಿದಿದ್ದ ಹುಡುಗನಿಗೆ ಆಕೆಯ ಅಭಿರುಚಿಯನ್ನು ತಿಳಿದು ನಿರಾಸೆಯಾಯಿತು. ಆದರೂ ಆಕೆಯ ಬಗ್ಗೆ ಇನ್ನಷ್ಟು ತಿಳಿಯುವ ಹಂಬಲದಿಂದ, "ನನಗೆ ಮನಸ್ಸಿನಲ್ಲಿ ಯಾವುದಾದರೂ ಭಾವನೆ ಬಂದರೆ, ಬರೆಯುತ್ತೇನೆ. ಇತರರು ಅದನ್ನೋದಿ ಪ್ರಶಸ್ತಿ ಕೊಡುವ ಹಂಬಲದಿಂದಲ್ಲವಾದರೂ, ನನ್ನ ಮನಸ್ಸಿನ ತೃಪ್ತಿಗಾಗಿ ಏನೋ ಗೀಚುತ್ತೇನೆ. ನನ್ನಂತೆಯೇ ಕೆಲವರು ಸಂಗೀತದಲ್ಲೋ, ಚಿತ್ರ ಬಿಡಿಸುವುದರಲ್ಲೋ ಅಥವಾ ಹಾಡಿದ್ದೋ, ಬಿಡಿಸಿದ್ದೋ ಕೇಳಿ, ನೋಡಿ ತೃಪ್ತಿ ತಂದುಕೊಳ್ಳುತ್ತಾರೆ. ನಿನ್ನ ಮನದಲ್ಲಿ ಅಂತಹ ಭಾವನೆ ಎದ್ದರೆ ಏನು ಮಾಡುತ್ತಿಯ?" ಎಂಬುದಾಗಿ ಪ್ರಶ್ನಿಸಿದ. ಆಕೆ ತನಗೇನಾದರೂ ಖುಷಿಯಾದಲ್ಲಿ, ಬೇಸರವಾದಲ್ಲಿ ಅಮ್ಮನ ಬಳಿ ಹೇಳಿಕೊಳ್ಳುವೆ ಎಂದುತ್ತರಿಸಿದಳು. "ಬಹುಷಃ ಬೆಳೆಯುವ ವಯಸ್ಸಿನಲ್ಲಿ ಮನುಷ್ಯರು ಇತರರ ಸಂಪರ್ಕಕ್ಕೆ ಹೆಚ್ಚಾಗಿ ಬರದೇ ಇದ್ದಲ್ಲಿ ಅವರ ಅನುಭವ ಸೀಮಿತವಾಗಿರುತ್ತದೆ" ಎಂದು ಆತ ಚಿಂತಿಸುತ್ತಿರುವಾಗ, ಆಕೆಯ ಮೊಬೈಲ್ ರಿಂಗಿಸಲಾರಂಭಿಸಿತು. ತನ್ನ ಆಲೋಚನೆಯನ್ನು ನಿಲ್ಲಿಸಿ ಆಕೆಯ ಕಡೆ ಮುಖ ಮಾಡಿದಾಗ, ಆಕೆ "ಮನೆಗೆ ಹೋಗಬೇಕು, ಅಣ್ಣ ಬಂದಿದ್ದಾನೆ, ಸ್ವಲ್ಪ ಹೊರಗೆ ಹೋಗೋದಿತ್ತು" ಎಂದಳು. ತಮ್ಮ ಭೇಟಿ ಇಷ್ಟರಲ್ಲೇ ಕೊನೆಗೊಂಡದ್ದರಿಂದ ಮತ್ತೆ ನಿರಾಸೆಯಾದರೂ, ಆಕೆಯೊಂದಿಗೆ ಮನೆಯ ಕಡೆ ಹೆಜ್ಜೆ ಹಾಕಿದ.

ಮನೆ ತಲುಪಿದೊಡನೆಯೇ ಆಕೆಯ ಅಣ್ಣ, "ಮಾತನಾಡಿದ್ದಾಯಿತೇ" ಎಂದು ಹುಡುಗನನ್ನು ಕೇಳಿದ. ಇಲ್ಲ, ಇನ್ನೂ ಇದೆ ಎಂದು ಹುಡುಗನ ಮುಖ ಭಾವ ಸೂಚಿಸುತ್ತಿತ್ತಾದರೂ, ತುಂಟ ನಗುವಿನಿಂದ "ಆಡಿದ್ದೇನಿಲ್ಲ, ಬರೀ ಕೇಳಿದ್ದು" ಎಂದುತ್ತರಿಸಿದ. ತನ್ನ ಮಾತಿಗೆ ನಗುವನ್ನು ನಿರೀಕ್ಷಿಸಿದ್ದನಾದರೂ, ಎದುರಿರುವವರ ಮುಖದಲ್ಲಿ ಯಾವ ಭಾವವೂ ಕಂಡು ಬರಲಿಲ್ಲ. ಹುಡುಗಿ ತನ್ನ ಅಣ್ಣನೊಡನೆ ಹೊರಗೆ ಹೋಗುವ ತವಕ ವ್ಯಕ್ತ ಪಡಿಸುತ್ತಿದ್ದಂತೆಯೇ, ಆತ ತನ್ನ ಮನೆಯ ಹಾದಿ ಹಿಡಿದ.

ಮನೆಗೆ ತಲುಪಿದೊಡನೆಯೇ, ಹುಡುಗಿ ಅಭಿರುಚಿಯಿರದವಳೇನಲ್ಲ. ಮನೆಯನ್ನಿರಿಸಿಕೊಂಡ ಲಕ್ಷಣ, ಅಡುಗೆಯ ಅಭಿರುಚಿ ಇವೆಲ್ಲವೂ ಚೆನ್ನಾಗಿಯೇ ಇವೆ. ಆದರೆ ಆಕೆಯ ಪ್ರಪಂಚ ಮಾತ್ರ ತೀರ ಕಿರಿದು. ಮನೆಯಲ್ಲಿರುವ ಮಗುವಿನ ಹಾವ ಭಾವಗಳ ಮೇಲೆ ಮನೆಯವರ ಪ್ರಭಾವ ಆರಂಭದಲ್ಲಿ ಬಿದ್ದರೆ, ಮಗು ಬೆಳೆದು ಶಾಲೆಗೆ ಹೋಗತೊಡಗಿದಂತೆ ತನ್ನ ಸಹಪಾಠಿಗಳು, ಅಧ್ಯಾಪಕರು ಮೊದಲಾದವರ ಪ್ರಭಾವ ಬೀರುತ್ತದೆ. ಕೆಲವು ಮಕ್ಕಳು ಅದನ್ನೂ ಮೀರಿ ತಮ್ಮ ಸಮಾಜ, ದೇಶ, ಹೊರದೇಶ, ಪ್ರಸಿದ್ಧ ವ್ಯಕ್ತಿಗಳ ಚಿಂತನೆ ಇವುಗಳನ್ನು ಓದಿನ ಮೂಲಕವೋ, ಪ್ರತ್ಯಕ್ಷ ನೋಡಿಯೋ ಪ್ರಭಾವಿತರಾದರೆ ಇನ್ನು ಕೆಲವರು ಓದು ಮುಗಿಸಿ ತಮ್ಮ ಕಾರ್ಯಕ್ಷೇತ್ರಕ್ಕಷ್ಟೆ ಅದನ್ನು ಮೀಸಲಾಗಿಸುತ್ತಾರೆ. ಅದು ತಪ್ಪಲ್ಲವಾದರೂ ಅದರಿಂದ ನಾವು ಪಡುವ ಸುಖ ಕೇವಲ ಹಣ, ಉದ್ಯೋಗಕ್ಕಷ್ಟೇ ಸೀಮಿತವಾದುದು. ಕೆಲವರಿಗೆ ಎಳೆತನದಲ್ಲಿಯೇ ತಮ್ಮ ಅಭಿರುಚಿಯ ಬಗ್ಗೆ ತಿಳಿವಳಿಕೆಯಿದ್ದು, ಆ ದಿಕ್ಕಿನ ಕಡೆಯ ಮುಂದುವರಿಯುವ ಗುಣವಿರುತ್ತದೆ. ಇನ್ನು ಕೆಲವರಿಗೆ ತಮ್ಮ ಅಭಿರುಚಿಯ ಬಗ್ಗೆ ವ್ಯಾಸಂಗ ಮುಗಿಸಿದ ನಂತರವೋ, ಕೆಲಸಕ್ಕೆ ಸೇರಿದ ನಂತರವೋ ತಿಳಿಯುತ್ತದೆ. ಅಂತವರು ತಮ್ಮ ಅಭಿರುಚಿಯನ್ನು ಗುರುತಿಸಿ, ಹವ್ಯಾಸಗಳಲ್ಲಿ ತಮ್ಮ ಹಂಬಲ ತೀರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರಿಗೆ ಅದರ ಪರಿವೆಯೇ ಇಲ್ಲದಂತೆ ಇದ್ದುಬಿಡುತ್ತಾರೆ. ಆಕೆಯಿನ್ನೂ ಅಂತಹ ಅಭಿರುಚಿ ಬೆಳೆಸಿಕೊಂಡಂತೆ ಕಾಣುತ್ತಿಲ್ಲ. ತನ್ನ ಅಭಿಪ್ರಾಯವನ್ನು ಆಕೆಯಲ್ಲಿ ಹೇರುವುದು ಕ್ರಮವಲ್ಲ, ಆಕೆಯದ್ದನ್ನು ಆಕೆಯೇ ಕಂಡುಹಿಡಿಯಬೇಕು. ಆದರೂ ತಾನೊಂದು ಕವನ ಬರೆದು ಆಕೆಗೆ ಕಳುಹಿಸಿದರೆ ಪ್ರತ್ಯುತ್ತರ ಏನು ಬರಬಹುದೆಂದು ಪರೀಕ್ಷಿಸಬೇಕೆಂದುಕೊಂಡ.

ಅದೇ ರಾತ್ರಿ ಪುಟ್ಟದೊಂದು ಕವನ ರಚಿಸಿ, ಆಕೆಗೆ ಇಮೈಲ್ ಮಾಡಿದ. ಪ್ರತಿಕ್ರಿಯೆ ಏನು ಬರಬಹುದೆಂದು ಆಲೋಚಿಸುತ್ತಾ, ಮಲಗಿದ್ದಲ್ಲಿಯೇ ಹೊರಳಾಡುತ್ತಾ ರಾತ್ರಿಯನ್ನು ಕಳೆದ. ಬೆಳಿಗ್ಗೆ ಆಫೀಸಿಗೆ ಹೋದರೆ, ಆಕೆಯ ಪ್ರತ್ಯುತ್ತರ ಕಾಣಿಸಿತ್ತು. ಆಕೆಯಿಂದ ಪುಟ್ಟದೊಂದು ಹೊಗಳಿಕೆ ಬಂದರೂ ತನಗೊಂದು ಪ್ರಶಸ್ತಿ ಬಂದಂತೆ ಎಂದು ಓದಿದರೆ, "ನನಗೆ ಕವನ, ಗಿವನ ಎಲ್ಲಾ ಇಷ್ಟ ಇಲ್ಲ" ಎಂಬ ಉತ್ತರ ಕಾಣಿಸಿತು. ಕವನ ಇಷ್ಟವಾಗದಿದ್ದರೂ, ನಾನು ಚೆನ್ನಾಗಿ ಬರೆಯದಿದ್ದರೂ ಸೌಜನ್ಯಕ್ಕಾದರೂ ಚೆನ್ನಾಗಿದೆ ಅನಬಹುದಿತ್ತು, ಇಲ್ಲವಾದಲ್ಲಿ ಸುಮ್ಮನಾದರೂ ಇರಬಹುದಿತ್ತು. ಈ ರೀತಿ ಪ್ರತಿಕ್ರಿಯಿಸಲು ಕಾರಣವೇನಿರಬಹುದು. ಈಕೆಗೆ ನನ್ನ ವಿಷಯದಲ್ಲೋ ಅಥವಾ ಮದುವೆಯ ವಿಷಯದಲ್ಲೋ ಯಾವುದೋ ಪೂರ್ವಾಗ್ರಹವಿದ್ದಂತಿದೆ. ಅದನ್ನು ದೂರ ಮಾಡಲು ನನಗೆ ಅವಕಾಶವನ್ನೂ ಒದಗಿಸುತ್ತಿಲ್ಲ. ತನ್ನ ಅಭಿಪ್ರಾಯ ಸರಿಯೋ ತಪ್ಪೋ ಎಂದು ಪರೀಕ್ಷಿಸಿ ನೋಡುವ ಗುಣವೂ ಇಲ್ಲ, ಎಂದಂದುಕೊಂಡನು.

ರಾತ್ರಿ ಮನೆಗೆ ಬಂದೊಡನೆ ಆಕೆಗೆ ಕರೆ ಮಾಡಿದರೆ, ಯಾವುದೇ ಪ್ರತ್ಯುತ್ತರ ಬರಲಿಲ್ಲ. ಮಲಗಿರಬಹುದೋ, ಯಾವುದೋ ಕೆಲಸದಲ್ಲಿರಬಹುದೋ ಎಂದು ಮರು ಪ್ರಯತ್ನಿಸದೆ ಬಿಡುವಾದಾಗ ಕರೆಮಾಡುವಂತೆ ಸಂದೇಶವನ್ನು ಕಳುಹಿಸಿದನು. ೧೧ಗಂಟೆಯವರೆಗೆ ಕಾದರೂ ಕರೆಯೂ, ಪ್ರತಿಕ್ರಿಯೆಯೂ ಬರದಿದ್ದನ್ನು ನೋಡಿ ನಿದ್ರೆ ಬರದಿದ್ದರೂ ಮಲಗುವ ಕೆಲಸ ಮಾಡಿದನು.

ಬೆಳಿಗ್ಗೆ ಎದ್ದು , ಯಾಕೆ ಕರೆ ಮಾಡಲಿಲ್ಲ, ನನಗೆ ತುಂಬಾ ಬೇಸರವಾಗಿದೆಯೆಂದು ಸಂದೇಶ ಕಳುಹಿಸಿ ಆಫೀಸಿಗೆ ತೆರಳಿದ. ಅದಕ್ಕೂ ನಿರೀಕ್ಷಿಸಿದಂತೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ರಾತ್ರಿ ತುಸು ಕೋಪದಿಂದಲೇ ಕರೆ ಮಾಡಿದರೆ, ಆಕೆಯ "ಹಲೋ" ಎಂಬ ಮಧುರ ದನಿಗೆ ಬದಲಾಗಿ "ಹೇಳಿ" ಎಂಬ ಗಡಸು ದನಿ ಕೇಳಿ ಆತ ಕೋಪಗೊಂಡು "ಹೇಳುವುದಕ್ಕೇನೂ ಇಲ್ಲ, ಮಾತನಾಡಬೇಕೆನಿಸಿತು ಅದಕ್ಕೇ ಕರೆ ಮಾಡಿದೆ. ನಿನಗೆ ನನ್ನೊಡನೆ ಎಂದಿಗೂ ಮಾತನಾಡಬೇಕೆಂದು ಅನಿಸಿವುದಿಲ್ಲವೇ. ನಿನ್ನೆ ಕರೆ ಮಾಡಿದರೆ ಯಾಕೆ ಪ್ರತಿಕ್ರಿಯಿಸಲಿಲ್ಲ" ಎಂದು ಕೇಳಿದನು. ಅದಕ್ಕುತ್ತರವಾಗಿ ಆಕೆ, "ನಿನ್ನೆ ಕರೆ ಮಾಡಿದ್ದೀರ, ನನಗೆ ತಿಳಿಯಲಿಲ್ಲ" ಎಂದಳು. ಕರೆ ಮಾಡಿದ್ದು ತಿಳಿಯದಿದ್ದರೂ ನನ್ನ ಸಂದೇಶ ಓದಿ ಅದಕ್ಕೆ ಪ್ರತಿಕ್ರಿಯಿಸಬಹುದಿತ್ತಲ್ಲ ಎಂದು ಮರು ಪ್ರಶ್ನಿಸಿದ್ದಕ್ಕೆ ಆಕೆ, ತನ್ನ ಸ್ನೇಹಿತರು ತುಂಬಾ ಸಂದೇಶಗಳನ್ನು ಕಳುಹಿಸಿವಿದರಿಂದ ಅವುಗಳನ್ನೋದುವುದಿಲ್ಲ ಎಂದಳು. ಆತನಿಗೆ ಇದಕ್ಕೇನು ಉತ್ತರ ಹೇಳಬೇಕೆಂದು ತೋಚದೆ, ಕುಶಲ ಪ್ರಶ್ನೆ ಹಾಕಿ, ಶುಭ ರಾತ್ರಿ ಹೇಳಿ ಕರೆಯನ್ನು ಕೊನೆಗೊಳಿಸುವ ಸಂದರ್ಭದಲ್ಲಿ ಆಕೆ "ಮೊನ್ನೆ ಮನೆಗೆ ಎಷ್ಟು ಗಂಟೆಗೆ ತಲುಪಿದಿರಿ" ಎಂದು ಪ್ರಶ್ನಿಸಿದಳು. ಅದಕ್ಕಾತ ಉತ್ತರಿಸಿದ ನಂತರ, "ಮನೆ ತಲುಪಿದ ನಂತರ ಒಂದು ಕರೆ ಮಾಡಬಹುದಿತ್ತಲ್ಲ" ಎಂದು ಕೇಳಿದಳು.

ಈಗಲಾದರೆ ಈತನಿಗೆ ಆಕೆಯ ನಡವಳಿಕೆಯ ಬಗ್ಗೆ ತಿಳಿಯಲಾರಂಭಿಸಿತು. ಮನೆ ತಲುಪಿದ ಮೇಲೆ ತಲುಪಿದೆ ಎಂದು ಹೇಳುವುದು ಈತನಿಗೆ ಅಂತಹ ದೊಡ್ಡ ವಿಷಯವೇನಾಗಿರಲಿಲ್ಲ. ಹೇಳಲು ಇದು ದೀರ್ಘವಾದ ಪ್ರಯಾಣವೂ ಆಗಿರಲಿಲ್ಲ. ಆದರೂ ತನ್ನ ಗಂಡನಾಗಿ ಬರುವವನ ವಿಷಯದಲ್ಲಿ ಹುಡುಗಿಯರಲ್ಲಿ ಎಂತಹ ಅಪೇಕ್ಷೆ ಇರುತ್ತದೆ, ಇದ್ದರೂ ಎಲ್ಲರಲ್ಲೂ ಒಂದೇ ತೆರನಾಗಿ ಇರಬಹುದೇ. ಅದನ್ನು ತಿಳಿಸಿದರಲ್ಲವೇ ನನಗೆ ತಿಳಿಯುವುದು, ಅದನ್ನು ಬಿಟ್ಟು ಕೋಪ ಮಾಡಿಕೊಂಡರೆ ಹೇಗೆ ತಿಳಿಯುವುದು. ತನಗೂ ಇಂತಹ ಚಿಕ್ಕ ವಿಷಯಗಳು ಏಕೆ ಹೊಳೆಯುವುದಿಲ್ಲ ಎಂಬಿತ್ಯಾದಿ ಯೋಚನೆಗಳು ಕಾಣಿಸಿಕೊಂಡವು. ಮೊದಲ ಬಾರಿಯೆಂಬಂತೆ ಆಕೆಯ ಪ್ರೀತಿಯನ್ನು ಅನುಭವಿಸಿದನು. ಆಕೆಯ ಪ್ರಶ್ನೆಗೆ ಉತ್ತರವಾಗಿ, ತನಗೆ ತಿಳಿಯಲಿಲ್ಲ, ಮುಂದಿನ ಬಾರಿ ಖಂಡಿತಾ ತಿಳಿಸುವೆ ಎಂದುತ್ತರಿಸಿ, ಈ ವಾರಾಂತ್ಯ ಸಿಗಬಹುದೇ, ಮನೆ ಎಲ್ಲಿ ಮಾಡಬಹುದು ಇನ್ನಿತರ ವಿಷಯದ ಬಗ್ಗೆ ಮಾತನಾಡುವುದಿದೆ ಎಂದು ತಿಳಿಸಿದ. ಅದಕ್ಕಾಕೆ ಈ ವಾರಾಂತ್ಯ ತಾನು ಮನೆಯವರೊಡನೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುವುದಾಗಿ ತಿಳಿಸಿದಳು. ಈತ ಅದರ ಮುಂದಿನವಾರ ತನಗೂ ಒಂದು ತಿರುಗಾಟ ಇದೆ, ಇನ್ನು ೩ ವಾರ ನಿನ್ನ ನೋಡುವಂತಿಲ್ಲ ಎಂದು ಹಲುಬಿದ. ಅತ್ತ ಕಡೆಯ ನಗು ಮನಸೂರೆ ಮಾಡಿ ಇನ್ನೊಮ್ಮೆ ಆತನ ನಿದ್ರೆ ಕೆಡಿಸಿತು.

ಮರುದಿನ ರಾತ್ರಿ ಕರೆಮಾಡಲಾಗಿ ಆಕೆ, "ನಿಮಗೆ ನಾನು ಕೆಲಸಕ್ಕೇ ಹೋಗಲೇಬೇಕೆಂದಿದೆಯೇ" ಎಂದು ಪ್ರಶ್ನಿಸಿದಳು. ಮನೆಯಲ್ಲಿರಲು ಇಷ್ಟ ಪಡುವವಳಿರಬಹುದೆಂದು, "ಇಷ್ಟವಾದಲ್ಲಿ ಹೋಗಬಹುದು, ಇಲ್ಲವಾದಲ್ಲಿ ಇಲ್ಲ" ಎಂದುತ್ತರಿಸಿದನು. ಆತನ ಉತ್ತರಕ್ಕೆ ಪ್ರತಿಯಾಗಿ ಆಕೆ, "ನನಗೆ ಹೋಗಲೇಬೇಕೆಂದಿದೆ, ಇಲ್ಲವಾದಲ್ಲಿ ಎಲ್ಲದಕ್ಕೂ ಅವಲಂಭಿಸಿರಬೇಕಾಗುತ್ತದೆ" ಎಂದಳಾದರೂ, ಅದನ್ನು ಅನುಮೋದಿಸುವ ಅಥವಾ ಖಂಡಿಸುವ ಯಾವ ಪ್ರಯತ್ನವನ್ನೂ ಆತ ಮಾಡಲಿಲ್ಲ. ಆಕೆಯೇ ಮುಂದುವರಿದು, "ರಿಸೇಶನ್ನಿನಿಂದಾಗಿ ತನಗೆ ಇತ್ತೀಚೆಗೆ ನಾಲ್ಕೈದು ತಿಂಗಳಿನಿಂದ ಸಂಬಳ ಬರುತ್ತಿಲ್ಲ. ಅಪ್ಪ ಮನೆಯ ಖರ್ಚಿಗಾಗಿ ಇಂತಿಷ್ಟು ಕಳುಹಿಸಿಕೊಡುತ್ತಾರೆ" ಎಂದು ತಿಳಿಸಿದಳು. ಅದಕ್ಕೀತ ಸಮಾಧಾನ ಮಾಡುತ್ತಾ, "ನನಗೆ ಬರುತ್ತದಲ್ಲ, ನನ್ನ ಕೆಲಸಕ್ಕಂತೂ ಸಧ್ಯಕ್ಕೆ ಯಾವುದೇ ಬಗೆಯ ಆಪತ್ತಿಲ್ಲ. ನಿನಗೆ ಕೆಲಸಕ್ಕೆ ಹೋಗಬೇಕೆಂಬ ಆಸಕ್ತಿಯಿದ್ದಲ್ಲಿ ಫ್ರೊಫೈಲ್ ಕಳುಹಿಸು, ಇಬ್ಬರೂ ಸೇರಿ ಕೆಲಸ ಹುಡುಕೋಣ" ಎಂದು ಹೇಳಿದನು.

ಎರಡು ದಿನಗಳಾದರೂ ಆಕೆಯಿಂದ ಮೈಲ್ ಬರದಿದ್ದ ಕಾರಣ, ಅದೇ ರಾತ್ರಿ ಕರೆ ಮಾಡಿ ಕಾರಣ ಕೇಳಿದ. ಆಕೆ ತನಗೆ ಕೆಲಸಕ್ಕಿಂತ ಮುಂದೆ ಓದಬೇಕುನ್ನುವ ಆಸೆ ಎಂದು ತಿಳಿಸಿದಳು. ಏನು ಓದಬೇಕು ಎಂದಿದ್ದಕ್ಕೆ PhD ಎಂದು ಮರುನುಡಿದಳು. ಅದಕ್ಕೀತ ಯಾವ ವಿಷಯ ಆಯ್ದುಕೊಂಡಿದ್ದೀರಿ, ಏನಾದರೂ ತಯಾರಿ ಇದೆಯೇ ಎಂದು ಪ್ರಶ್ನಿಸಿದಕ್ಕೆ ಆಕಡೆಯಿಂದ ಯಾವ ಪ್ರತ್ಯುತ್ತರವೂ ದೊರೆಯಲಿಲ್ಲ. ಈತನಿಗೆ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿ ಕಾಣಿಸಿ, ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಹೊರಳಾಡಿದ.

ಯಾವ ತೀರ್ಮಾನಕ್ಕೂ ಬರದೆ, ಆಕೆ ಪ್ರವಾಸ ಕೈಗೊಂಡಿದ್ದ ದಿನ ಕರೆ ಮಾಡಿ ಶುಭಾಷಯ ತಿಳಿಸಿದ. ಸುಮಾರು ಒಂದು ವಾರದವರೆಗೂ ಇಬ್ಬರು ಒಬ್ಬರನ್ನೊಬ್ಬರು ಮರೆತಂತಿದ್ದರು. ಮುಂದಿನವಾರದ ತನ್ನ ತಿರುಗಾಟದ ದಿನ ಆಕೆಯಿಂದ ಒಂದು ಸಂದೇಶವನ್ನಾದರೂ ನಿರೀಕ್ಷಿಸಿದ್ದ. ಅದೂ ಬರದಿದ್ದರಿಂದ ತನ್ನ ತಿರುಗಾಟದಲ್ಲಿ ಕಂಡ ಕಾಡು, ಮಳೆ, ಮೋಡಗಳೊಡನೆ ಎಲ್ಲವನ್ನೂ ಮರೆತ. ಹೊಸತನದ ಹುರುಪು ತಳೆದುಕೊಂಡು, ಬೆಂಗಳೂರಿಗೆ ಮರಳಿ ತನ್ನ ಅನುಭವ ಹಂಚಿಕೊಳ್ಳುವ ಆಸೆಯಿಂದ ಮತ್ತೆ ಆಕೆಗೆ ಕರೆಮಾಡಿದ. ಅತ್ತ ಕಡೆಯಿಂದ ಯಾವುದೇ ಉತ್ಸಾಹದ ಮಾತು ಬರದಿದ್ದರಿಂದ ಒಂದೇ ವಾಕ್ಯದಲ್ಲಿ ತನ್ನ ಅನುಭವ ಹಂಚಿಕೊಂಡು, ಆಕೆಯನ್ನೂ ಒಮ್ಮೆ ತಾನೋಡಿದ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ. ಆಕೆಯ ಸಮ್ಮತಿ, ಅಸಮ್ಮತಿ, ಸಂತೋಷ ಯಾವುದೂ ವ್ಯಕ್ತವಾಗದೆ, ಅನುಮಾನಗೊಂಡು ಯಾವುದಾದರೂ ಕೆಲಸದಲ್ಲಿ ನಿರತರಾಗಿದ್ದೀಯ ಎಂದು ಕೇಳಿದನು. ಅದಕ್ಕಾಕೆ ತಾನು ತನ್ನ ಸಹೋದ್ಯೋಗಿಯೊಬ್ಬರನ್ನು ಭೇಟಿಮಾಡಲು ಹೊರಟಿರುವುದಾಗಿ ತಿಳಿಸಿದಳು. ಮರಳಿದ ಮೇಲೆ ಮತ್ತೆ ಕರೆ ಮಾಡುವಂತೆ ಆಕೆಗೆ ತಿಳಿಸಿ, ಕರೆಯನ್ನು ಅಂತ್ಯಗೊಳಿಸಿದ.

ನಿರೀಕ್ಷಿಸಿದ್ದಂತೆ ಆಕೆಯಿಂದ ಯಾವ ಕರೆಯೂ ಬರಲಿಲ್ಲ. ಆಕೆಯನ್ನು ನೋಡದೆ ಬಹಳ ದಿನವಾದ್ದರಿಂದ, ಸಂಜೆ ಆಫೀಸು ಮುಗಿದ ನಂತರ ಭೇಟಿಯಾಗಬಹುದೇ ಎಂದು ಕರೆ ಮಾಡಿ ಕೇಳಿದ. ಸಂಜೆ ೪ ಗಂಟೆಯೊಳಗೆ ಕರೆ ಮಾಡಿ ತಿಳಿಸುವುದಾಗಿ ಆಕೆ ಪ್ರತ್ಯುತ್ತರಿಸಿದರೂ ಮರು ಕರೆ ಮಾಡಲಿಲ್ಲ. ರಾತ್ರಿ ಮತ್ತೆ ಈತನೇ ಕರೆ ಮಾಡಿದರೆ "ಮಾತಿನಲ್ಲಿ ನಿರತರಾಗಿದ್ದಾರೆ" ಎಂಬ ಪ್ರತ್ಯುತ್ತರ ದೊರೆಯಿತು. ೧೦ ನಿಮಿಷದ ನಂತರ ಮರುಪ್ರಯತ್ನಿಸಿದರೆ, ಆಕೆ ಕರೆಯನ್ನು ಅಂತ್ಯಗೊಳಿಸಿ, ತನಗೆ ದೇಹ ಸ್ವಾಸ್ಥ್ಯ ಇಲ್ಲವೆಂದೂ ನಾಳೆ ಕರೆಮಾಡುವುದಾಗಿಯೂ ತಿಳಿಸಿದಳು. ಈತ ಏನಾಗಿದೆಯೆಂದು ಪ್ರತಿಕ್ರಿಯಿಸಿದ್ದಕ್ಕೆ ಯಾವ ಉತ್ತರವೂ ಸಿಗಲಿಲ್ಲ. ಮೊದಲಬಾರಿಗೆಂಬಂತೆ ಹುಡುಗನ ಮನಸಿನಲ್ಲಿ ಅನುಮಾನವೊಂದು ಸುಳಿದಾಡಿತು. ಆಕೆಗೆ ಈ ಮದುವೆ ಇಷ್ಟ ಇದೆಯೇ ಇಲ್ಲವೇ ಅಥವಾ ಬೇರೆ ಯಾರನ್ನಾದರೂ ಇಷ್ಟ ಪಡುತ್ತಿದ್ದು ಮನೆಯರ ಮುಜುಗರಕ್ಕೆ ಈ ಮದುವೆಗೆ ಒಪ್ಪಿದ್ದೇ, ಎಂಬುದಾಗಿ ಆಲೋಚಿಸಿದ.

ಕೆಲವು ತಿಂಗಳಿನಲ್ಲಿಯೇ ತನ್ನ ಕೈಹಿಡಿಯುವ ಹುಡುಗಿ, ಬೇರೆ ಹುಡುಗನನ್ನು ಇಷ್ಟ ಪಡುತ್ತಿರಬಹುದೆಂಬ ತನ್ನ ಕಲ್ಪನೆಗೆ ಬೆಂದು, ಅದರಿಂದ ಮನಸ್ಸು ಇನ್ನಷ್ಟು ಕ್ಷುದ್ರವಾಗಿ ಬೆಳಗಿನ ಜಾವ ೪ ಗಂಟೆಯಾದರೂ ನಿದ್ರೆ ಬರದೆ ಹೊರಳಾಡಿದ. ತಾನು ಬರೆದೆ ಪತ್ರಕ್ಕೆ ಪ್ರತಿಕ್ರಿಯಿಸಿ, ತನಗೆ ನಿದ್ರೆ ಬರುತ್ತಿಲ್ಲವೆಂಬ ವಿಷಯವನ್ನೂ ಆಕೆಗೆ ಮನದಟ್ಟು ಮಾಡುವಂತೆ ಮಾಡಿದ. ಮರುದಿನ ಆಕೆ ತನ್ನ ನಡವಳಿಕೆಗೆ ಕ್ಷಮೆಯಾಚಿಸುತ್ತಾ, ಭಾನುವಾರ ಭೇಟಿಯಾಗುವುದಾಗಿ ತಿಳಿಸಿದಳು. ಈತ ಎಲ್ಲಿ, ಯಾವಾಗ ಎಂದು ಮರುಪ್ರತಿಕ್ರಿಯಿಸಿದ್ದಕ್ಕೆ ಆಕೆಯಿಂದ ಮತ್ತಿನ್ನೇನೂ ಪ್ರತಿಕ್ರಿಯೆ ಬರಲಿಲ್ಲ. ಆಕೆಯ ನಡವಳಿಕೆಗೆ ರೋಸಿ, ತಪ್ಪು ಮಾಡಿ ಕ್ಷಮೆ ಕೇಳಿ, ಮತ್ತದೇ ತಪ್ಪು ಮಾಡುವುದು ಸರಿಯೇ ಎಂದು ತಿಳಿಸಿದ. ಅದಕ್ಕೂ ಮಾರುತ್ತರ ಬರದಿದ್ದಾಗ, ಇನ್ನು ಆಕೆಗೆ ಕರೆ ಮಾಡುವುದು, ಮೈಲ್ ಕಳುಹಿಸುವುದು ಬೇಡ, ಮದುವೆ ಮಂಟಪದಲ್ಲೇ ಭೇಟಿಯಾದರಾಯಿತು ಎಂದು ನಿರ್ಧರಿಸಿದ.

ಎಂದೂ ಕಳೆದುಕೊಳ್ಳದ ತಾಳ್ಮೆ ತಾನೇತಕ್ಕೀಗ ಕಳೆದುಕೊಳ್ಳುತ್ತಿದ್ದೇನೆ ಎಂದು, ತನ್ನ ನಡವಳಿಕೆಯ ಬಗ್ಗೆ ಜಿಗುಪ್ಸೆ ಮೂಡಿ, ಇನ್ನೆರಡು ದಿನ ಬಿಟ್ಟು ಕರೆ ಮಾಡಿ ಆಕೆಯ ಕಷ್ಟದ ಬಗ್ಗೆ ವಿಚಾರಿಸುವುದಾಗಿ ಅಂದುಕೊಂಡ. ಎರಡು ದಿನದ ನಂತರ ಕರೆಮಾಡಿ ಶಾಂತ ರೀತಿಯಿಂದ ಮಾತನಾಡಿದರೆ, ಅತ್ತ ಕಡೆಯಿಂದ ಕೋಪದ ಶಬ್ಧಗಳೇ ಹೊರಬೀಳುತ್ತಿದ್ದುದರಿಂದ, ಪರಿಸ್ಥಿತಿ ತನ್ನ ಕೈ ಮೀರಿದ್ದನ್ನು ಮನಗಂಡು , ಆಕೆಯ ತಂದೆಯ ಜೊತೆಗೆ ಮಾತನಾಡುವುದಾಗಿ ತಿಳಿಸಿದನು. ಆಕೆ ಅದಕ್ಕೆ ಸಮ್ಮತಿ ಸೂಚಿಸಲಾಗಿ, ತನ್ನ ಭಾವನಿಗೆ ಕರೆ ಮಾಡಿ ವಿಷಯವನ್ನೆಲ್ಲಾ ತಿಳಿಸಿದನು. ಉಪಾಧ್ಯರು ತಾನು ವಿಚಾರಿಸುವುದಾಗಿ ಭರವಸೆಯಿತ್ತ ಕೆಲವು ಸಮಯದಲ್ಲಿಯೇ, ಜಗನ್ನಾಥರು ಹುಡುಗನಿಗೆ ಕರೆ ಮಾಡಿ ಸಮಾಧಾನದ ಮಾತನಾಡಿಸಿ, ಆಕೆಯದಿನ್ನೂ ಹುಡುಗಾಟದ ಬುದ್ಧಿ ಅದರ ಬಗ್ಗೆ ಬೇಸರ ಮಾಡಿಕೊಳ್ಳಬಾರದೆಂದು ತಿಳಿಹೇಳಿದರು. ಸ್ವಲ್ಪ ಸಮಯದ ನಂತರ ಹುಡುಗಿಯೂ ಕರೆ ಮಾಡಿ ತನ್ನ ವರ್ತನೆಯ ಬಗ್ಗೆ ಕ್ಷಮೆಯಾಚಿಸಿದಳು. ಹುಡುಗ ಅದಕ್ಕೆ ನಕ್ಕು, ಕರೆ, ಮೈಲು ಎರಡೂ ಬೇಡ ಮುಖತಃ ಭೇಟಿಯಾಗೋಣ ಎಂದು ದಿನ, ಸಮಯ ನಿಶ್ಚಯಿಸಿದನು.

ಇತ್ತ ಜಗನ್ನಾಥರು, ಉಪಾಧ್ಯರನ್ನು ಭೇಟಿ ಮಾಡಿ ತಮ್ಮ ಮಗಳಿಗಿನ್ನೂ ಹುಡುಗಾಟದ ಬುದ್ಧಿ ಎಂದು ತಿಳಿಸಿದರು. ಯಾವುದಕ್ಕೂ ತಾನು ಇನ್ನೊಮ್ಮೆ ಆಕೆಗೆ ಈ ಮದುವೆ ಇಷ್ಟ ಇದೆಯೋ ಇಲ್ಲವೋ ಕೇಳಿ ತಿಳಿಯುವುದಾಗಿ ಹೇಳಿ, ಒಂದು ವೇಳೆ ಇಷ್ಟವಿಲ್ಲದಿದ್ದಲ್ಲಿ ಮದುವೆಯನ್ನು ನಿಲ್ಲಿಸಬಹುದೆಂದು ಹೇಳಿದರು. ಮತ್ತೂ ಮುಂದುವರೆದು, ಆಕೆ ಮದುವೆ ನಿಶ್ಚಯವಾದ ವಿಷಯ ಆಫೀಸಿನಲ್ಲಿ ಕೂಡ ಯಾರಿಗೂ ತಿಳಿಸಿಲ್ಲ. ಸಂಬಳ ಸಿಗುತ್ತಿಲ್ಲ, ಅಲ್ಲಿಯವರು ಪಾರ್ಟಿ ಕೇಳಿದರೆ ಕಷ್ಟ ಎಂದು ಹೇಳಿದರು. ತಮ್ಮ ಭೇಟಿಯ ಬಗ್ಗೆ ಉಪಾಧ್ಯರು ಹುಡುಗನಿಗೆ ಕರೆ ಮಾಡಿ ತಿಳಿಸಿದರು. ಈಗಲಾದರೆ ಹುಡುಗನಿಗೆ ಹಿಂದೆ ಹಿಡಿದಿದ್ದ ಪೂರ್ವಾಗ್ರಹಕ್ಕೊಂದು ಸಾಕ್ಷಿ ಸಿಕ್ಕಿದಂತಾಯ್ತು. ಆಫೀಸಿನಲ್ಲಿ ವಿಷಯ ತಿಳಿಸಿಲ್ಲ ಎಂದರೆ, ಅಲ್ಲಿಯೇ ಆಕೆ ಯಾರನ್ನಾದರೂ ಇಷ್ಟ ಪಟ್ಟಿರಬಹುದೆಂದು ಊಹಿಸಿದನು.



ಆಕೆ ನಿಜವಾಗಿಯೂ ಯಾರನ್ನಾದರೂ ಇಷ್ಟ ಪಟ್ಟಿದ್ದಲ್ಲಿ ತಾನು ಸನ್ನಿವೇಷದಿಂದ ದೂರವಾಗಬೇಕು. ಇಲ್ಲವಾದಲ್ಲಿ ನನಗೂ ಹಿತವಿಲ್ಲ, ಆಕೆಗೂ ಹಿತವಿಲ್ಲ, ಆಕೆಯನ್ನು ಇಷ್ಟ ಪಟ್ಟವನಿಗೂ ಹಿತವಿಲ್ಲ. ಒಂದು ವೇಳೆ ಆಕೆ ಯಾರನ್ನಾದರೂ ಇಷ್ಟ ಪಟ್ಟಿದ್ದು ಯಾವುದೋ ಕಾರಣಕ್ಕೆ ಅವರ ಸಂಬಂಧ ಮುರಿದು ಬಿದ್ದಿದ್ದರೆ. ಹೀಗಾಗಿದ್ದಲ್ಲಿ ಅದು ತೀರಾ ಇತ್ತೀಚೆಗೆ ಆಗಿರಬೇಕು, ಇಲ್ಲವಾದಲ್ಲಿ ಕಾಲ ಕಳೆದಂತೆ ಇಂತಹ ನೆನಪುಗಳು ಮಾಸುತ್ತವೆ. ವಿಷಯ ಇದಾಗಿದ್ದರೂ ಇದನ್ನು ನೇರವಾಗಿ ಪ್ರಶ್ನಿಸುವುದು ಹೇಗೆ. ತಾನು ಪ್ರಶ್ನಿಸಿದರೂ ಆಕೆ ಅದಕ್ಕೆ ಉತ್ತರ ನೀಡಬಲ್ಲಳೇ. ಉತ್ತರ ನೀಡಿದರೂ ನಾನು ಯಾವ ರೀತಿ ವರ್ತಿಸಬೇಕು. ಮೊದಲನೆಯ ಕಾರಣವಾಗಿದ್ದಲ್ಲಿ, ನಾನು ಹೊರಬರಬಹುದು. ಎರಡನೆಯ ಕಾರಣವಾಗಿದ್ದಲ್ಲಿ.. ಒಂದು ವೇಳೆ ಹಿಂದೆ ಆಕೆ ಯಾರನ್ನಾದರೂ ಇಷ್ಟ ಪಟ್ಟಿದ್ದಲ್ಲಿ ಅದರಲ್ಲೇನು ತಪ್ಪು. ಹೊಟ್ಟೆಯ ಹಸಿವಿನಂತೆಯೇ ಮನಸ್ಸಿನ, ಕಾಮದ ಹಸಿವೂ ಸಹಜವಲ್ಲವೇ? ತನ್ನ ಜೀವನದಲ್ಲಿಯೂ ಹಲವಾರು ಹುಡುಗಿಯರನ್ನು ಭೇಟಿ ಮಾಡಿದ್ದೇನೆ. ಅದರಲ್ಲಿ ಕೆಲವರಾದರೂ ಈಕೆ ನನ್ನ ಜೀವನ ಸಂಗಾತಿಯಾಗಲಾರಳೇ ಎಂದು ಹಂಬಲಿಸಿದ್ದಿಲ್ಲವೇ. ಮೈಯಿಂದಲ್ಲವಾದರೂ ಮನಸ್ಸಿನಿಂದ ಅವರನ್ನು ಮುಟ್ಟಿದ್ದಿಲ್ಲವೇ.. ಅಷ್ಟಕ್ಕೆ ನಾನು ಅಪವಿತ್ರನಾಗಬೇಕೆ ಅಥವಾ ಅಷ್ಟಕ್ಕೆ ಆಕೆ ಅಪವಿತ್ರಳಾಗಬೇಕೆ. ಇಷ್ಟ ಪಡುವ ಗುಣವಿದ್ದಲ್ಲಿ ಆಕೆ ಮುಂದೆ ನನ್ನನ್ನೂ ಇಷ್ಟಪಡದಿರಲಾರಳೇ? ಏನಾದರಾಗಲಿ ನಾಳೆ ಆಕೆಯನ್ನು ಕೇಳಿದರಾಯಿತು ಎಂದು ನಿದ್ರಿಸಲು ಪ್ರಯತ್ನಿಸಿದ.

ಬೆಳಿಗ್ಗೆ ಹತ್ತು ಗಂಟೆಯಾದರೂ ಹಾಸಿಗೆಯಿಂದ ಏಳದಿದ್ದವನಿಗೆ ದೂರವಾಣಿಯ ಸದ್ದು ಎಚ್ಚರಿಸಿತ್ತು. ಮಾತನಾಡಿದರೆ ಹುಡುಗಿಯ ಕರೆಯಾಗಿತ್ತು. ಆ ದಿನ ಬೆಳಿಗ್ಗೆ ೧೧ ಗಂಟೆಗೆ ಭೇಟಿಯಾಗುತ್ತೇನೆ ಎಂದಿದ್ದ ಆತನ ಮಾತನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾಡಿದ ಕರೆಯಾಗಿತ್ತು. ಒಂದರ್ಧ ಗಂಟೆ ವಿಳಂಬವಾಗಬಹುದು, ಈಗ ತಾನೆ ಎದ್ದೆ ಎಂದು ಕರೆ ಅಂತ್ಯಗೊಳಿಸಿ ಮೊಬೈಲ್ ನೋಡಿದರೆ, ಆಕೆಯಿಂದ ೭ ಮಿಸ್ಡ್ ಕಾಲ್ಗಳು. ಆತ ಕರೆ ತೆಗೆದುಕೊಳ್ಳುವವರೆಗೂ ಒಂದರ ಹಿಂದೊಂದರಂತೆ ಮಾಡಿದ ಕರೆಗಳವು. ನಿದ್ರೆಯ ದೆಸೆಯಿಂದ ಕಿವಿಗೆ ಕರೆಯ ದನಿ ಬೀಳಲು ಅಷ್ಟು ಸಮಯ ತಗುಲಿತ್ತು. ಇಷ್ಟು ದಿನದ ತನ್ನ ನಡವಳಿಕೆಯ ಬಗ್ಗೆ ಇನ್ನೊಮ್ಮೆ ನಗಬೇಕಾಯಿತು! ಈ ಹಿಂದೆ ತಾನು ಒಮ್ಮೆ ಕರೆ ಮಾಡಿ ತೆಗೆದುಕೊಳ್ಳದಿದ್ದಲ್ಲಿ, ಮತ್ತೆ ಕರೆ ಮಾಡುವ ಪ್ರಯತ್ನ ಮಾಡುತ್ತಿರಲಿಲ್ಲ. ಈಕೆಯಾದರೋ ನಾನು ತೆಗೆದುಕೊಳ್ಳುವವರೆಗೂ ಪ್ರಯತ್ನಿಸುತ್ತಲೇ ಇದ್ದಳು. ಇದೂ ಪ್ರೀತಿಯನ್ನು ವ್ಯಕ್ತ ಪಡಿಸುವ ಒಂದು ಬಗೆಯಲ್ಲವೇ ಎಂದುಕೊಂಡ.

ಸುಮಾರು ಹನ್ನೊಂದೂವರೆಯ ಸಮಯದಲ್ಲಿ ಆಕೆಯ ಮನೆಯ ಬಳಿ ಬಂದರೆ, ಮಳೆ ಸುರಿಯಲು ಆರಂಭಿಸಿತ್ತು. ಆಕೆಗೆ ಕರೆ ಮಾಡಿ ತನ್ನ ಬಳಿ ಕೊಡೆಯಿಲ್ಲವೆಂದು ತಿಳಿಸಿದ ಬಳಿಕ, ಆಕೆ ತನ್ನ ಬಳಿಯಿದ್ದ ಒಂದೇ ಕೊಡೆಯಲ್ಲಿ ಅವನಿದ್ದ ಕಡೆ ಬಂದು, ಅದರಲ್ಲೇ ಮನೆಯವರೆಗೂ ಕರೆದೊಯ್ದಳು. ಹದವಾಗಿ ಬಿಳುತ್ತಿದ್ದ ಮಳೆಯ ದೆಸೆಯಿಂದಾಗಿ ರಸಿಕ ವಾತಾವರಣ ಸೃಷ್ಟಿಯಾಗಿತ್ತು. ಆಗೊಮ್ಮೆ, ಈಗೊಮ್ಮೆ ಆಕೆಯ ಭುಜ ಸ್ಪರ್ಷಿಸುತ್ತಿತ್ತಾದರೂ, ಆ ಸ್ಪರ್ಷದಲ್ಲಿ ಯಾವುದೇ ಅಸಹಜ, ಕಾಮದ ಬಯಕೆಯಿದ್ದಂತೆ ಕಾಣಿಸಲಿಲ್ಲ. ಮನೆಯ ದಾರಿ ಸುಮಾರು ಹತ್ತು ನಿಮಿಷಗಳಷ್ಟಿದ್ದುದರಿಂದ ಆಕೆಯೇ ಮಾತಿಗೆ ಆರಂಭಿಸಿದಳು. ಹುಡುಗನ ಮುಖವನ್ನೇ ನೋಡುತ್ತಾ, "ನಿಮಗೆ ಬೆಕ್ಕೆಂದರೆ ಇಷ್ಟವಿದೆಯೇ" ಎಂದು ಕೇಳಿದ ಆಕೆಯ ಹಾವದಲ್ಲಿ ಎಷ್ಟು ಮುಗ್ಧತೆಯಿತ್ತೆಂದರೆ, ಬೆಕ್ಕಿನ ಬಗ್ಗೆ ಯಾವ ಭಾವನೆಯನ್ನೂ ಇರಿಸಿಕೊಳ್ಳದ ಈತ, "ಹುಂ, ಅದರಲ್ಲೂ ಬೆಕ್ಕಿನ ಮರಿ ತುಂಬಾನೇ ಇಷ್ಟ. ಅದೊಂದೇ ಅಲ್ಲ ಎಲ್ಲಾ ಪ್ರಾಣಿಯ ಮರಿ ಕೂಡ" ಎಂದುತ್ತರಿಸುವಾಗ ಕುತೂಹಲದಿಂದ ಆತನ ಮುಖ ನೋಡುತ್ತಿದ್ದ ಆ ಹುಡುಗಿ ಚಿಕ್ಕ ಮಗುವಿನಂತೆ ಕಾಣಿಸಿ, ಆಕೆಯ ಹಣೆಗೆ ಚುಂಬಿಸುವ ಮನಸ್ಸು ಬಂದರೂ ತಡೆದುಕೊಂಡ.

ಮನೆ ತಲುಪಿದರೆ, ಎಂದಿನಂತೆಯೇ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯ ಬೀಗ ತೆಗೆದು, ಒಳಗೆ ಕರೆದು, ಬಾಗಿಲನ್ನು ಸರಿದರೂ ಅವಳ ಮುಖದಲ್ಲಿ ಸಂಕೋಚವಾಗಲಿ, ನಾಚಿಕೆಯಾಗಲೀ ಯಾವೊಂದು ಭಾವನೆಯೂ ಮಿಂಚಲಿಲ್ಲ. ೨೪ ವರ್ಷದ ಯುವತಿಯ ದೇಹ ಎದುರಿಗಿದ್ದರೂ, ತಾನೊಂದು ಮಗುವಿನ ಜೊತೆಗಿದ್ದೇನೆ ಎಂಬ ಭಾವನೆ ಆತನನ್ನಾವರಿಸಿತು. ಆತ ಸುತ್ತು ಬಳಸಿ ಕೇಳಬೇಕೆಂದಿದ್ದ ಪ್ರಣಯದ ಕುರಿತಾದ ಪ್ರಶ್ನೆಗಳು ಅವನ ಗಂಟಲಿನೊಳಗೇ ಹುದುಗಿಕೊಂಡವು. ವಿಷಯಾಂತರಗೊಳಿಸಿ ನಂತರ ಇದರ ಬಗ್ಗೆ ಕೇಳಿದರಾಯ್ತು ಎಂದುಕೊಂಡು, ತನ್ನ ಮಳೆಗಾಲದಲ್ಲಿ ಕೈಗೊಂಡ ಕೆಲವು ಚಾರಣಾನುಭವಗಳನ್ನು ಕುರಿತು ಹೇಳಲಾರಂಭಿಸಿದ. ತಾನು ಮೆಚ್ಚಿದ ಕೆಲವು ಪುಸ್ತಕ, ಅದರಲ್ಲಿನ ಅಂತಹ ಗಹನವಲ್ಲದ ವಿಷಯಗಳ ಕುರಿತಾಗಿಯೂ ಹೇಳತೊಡಗಿದ. ಅಜ್ಜಿಯ ಕಥೆಯನ್ನು ಕೇಳುವ ಪುಟ್ಟ ಹುಡುಗಿಯಂತೆ ಆಕೆ ಆಸಕ್ತಿಯಿಂದ ಕೇಳುತ್ತಿದ್ದಳಲ್ಲದೇ ನಡುನಡುವೆ ತನ್ನ ಸಂದೇಹ ಪರಿಹರಿಸಿಕೊಳ್ಳುತ್ತಿದ್ದಳು.

ಮಾತು ಮುಗಿದ ನಂತರ ಆಕೆ, ಲಿಂಬೇ ಹಣ್ಣಿನ ಪಾನಕವನ್ನು ಆತನ ಕೈಗಿತ್ತು.. ಏನೋ ಕೇಳಬೇಕೆಂದಿದ್ದರಲ್ಲ, ಏನದು ಎಂದು ಕೇಳಿದಳು. ಪಾನಕದ ಗುಟುಕನ್ನು ಒಂದೊಂದಾಗಿ ಗಂಟಲಿನೊಳಗೆ ಇಳಿಸುತ್ತಾ, "ಕೇಳಬೇಕು ಅಂತ ಬಂದಿದ್ದೆ, ಆದರೆ ಈಗ ಕೇಳಬೇಕು ಅನ್ನಿಸ್ತಾ ಇಲ್ಲ" ಎಂದುತ್ತರಿಸಿದನು. ಅದಕ್ಕಾಕೆ, "ಮನೆ ತಲುಪಿದ ನಂತರ, ಮತ್ತೆ ಕೇಳಬೇಕೆನಿಸಿದರೆ" ಎಂದು ನಕ್ಕಳು. ಹುಡುಗ "ನಿನಗೆ ನಿನ್ನ ಮದುವೆಯಾಗುವವರು ಯಾವ ತರ ಇರಬೇಕು ಅನ್ನಿಸುತ್ತೆ. ನೀನು ಯಾರನ್ನಾದರೂ ನೋಡಿದಾಗ ಮದುವೆಯಾದರೆ ಇಂತವನನ್ನು ಆಗಬೇಕು ಅಂತ ಅನ್ನಿಸಿದೆಯಾ " ಎಂದು ಕೇಳಿದನು. ಅದಕ್ಕಾಕೆ ತನಗೆ ಇದುವರೆಗೆ ಅಂತಹ ಯಾವ ಭಾವನೆಯೂ ಬಂದಿಲ್ಲವಾಗಿ ತಿಳಿಸಿದಳು. ಆತ "ನಿನ್ನ ಈ ರೀತಿಯ ವರ್ತನೆಗೆ, ನೀನು ಯಾರನ್ನಾದರೂ ಇಷ್ಟ ಪಟ್ಟಿರುವುದೇ ಕಾರಣ ಎಂದು ತಿಳಿದುಕೊಂಡಿದ್ದೆ. ಆದ್ರೆ ಆ ಪ್ರಶ್ನೆ ಭೇಟಿಯಾದ ಮೇಲೆ ಕೇಳಬೇಕು ಅಂತ ಅನ್ನಿಸಿಲ್ಲ. ಆದರೂ ಕೇಳಿದೆ ಅದಕ್ಕೆ ಕ್ಷಮೆಯಿರಲಿ" ಎಂದನು. ಆಕೆ ಮುಗುಳ್ನಕ್ಕು, "ಇಲ್ಲ, ಆ ತರ ಏನೂ ಇಲ್ಲ" ಎಂದುಲಿದಳು. ಆಕೆಯ ಮಾತಿಗಿಂತ, ಆಕೆಯ ಕಣ್ಣುಗಳು ಸತ್ಯ ನುಡಿಯುತ್ತಿದ್ದವು.

ಹುಡುಗ ಮಾತು ಮುಂದುವರಿಸಿ, "ನೀನು ಇದುವರೆಗೂ ನನ್ನ ಕರೆ ಯಾಕೆ ತೆಗೆದುಕೊಳ್ಳುತ್ತಿರಲಿಲ್ಲ, ನಿನಗೆ ಈ ಮದುವೆ ಇಷ್ಟವಿದೆಯೇ", ಎಂದು ಪ್ರಶ್ನಿಸಿದನು. ಅದಕ್ಕಾಕೆ, "ನಿಮ್ಮ ಕರೆ ಬಂದರೆ ನನಗೆ ಒಂದು ರೀತಿಯ ಕಿರಿಕಿರಿಯಾಗುತ್ತಿತ್ತು, ಇನ್ನು ಮದುವೆಯ ವಿಷಯ ನಮ್ಮಿಬ್ಬರದ್ದೂ ಈಗಾಗಲೇ ನಿಶ್ಚಿತಾರ್ಥವಾಗಿದೆ ಇನ್ನೇನು ಮಾಡಬಹುದು", ಎಂದು ಆತನನ್ನೇ ಮರುಪ್ರಶ್ನಿಸಿದಳು. ಈಕೆಯ ಮರು ಪ್ರಶ್ನೆಯಿಂದ ಹುಡುಗನಿಗೆ ನಗುವುದೋ, ಅಳುವುದೋ ತಿಳಿಯಲಿಲ್ಲ. ಈಗ ಆಗಿರೋದು ಬರೀ ನಿಶ್ಚಿತಾರ್ಥ ಮಾತ್ರ, ಮದ್ವೆಗೆ ಇನ್ನೂ ಸಮಯವಿದೆ. ಆಕೆಗೆ ತಾನು ಇಷ್ಟವಾಗದಿದ್ದಲ್ಲಿ ಮದುವೆ ನಿಲ್ಲಿಸಬಹುದು. ಮದುವೆ ಎಂದರೆ ಸಾವಿರಾರು ಜನರು ಉಂಡು ಹೋಗುವಂತದ್ದಲ್ಲ, ತಾವಿಬ್ಬರೂ ಮುಂದೆ ಚೆನ್ನಾಗಿರಬೇಕಲ್ಲವೇ. ಒಂದು ವೇಳೆ ತಾನು ಆಕೆಗೆ ಇಷ್ಟವಾಗದಿದ್ದಲ್ಲ ಅಂತೆಯೇ ಹೇಳು, ಅದರಿಂದ ತನಗೇನೂ ಬೇಸರವಿಲ್ಲ ಎಂದು ಸಮಾಧಾನ ಮಾಡಿ, ಆಕೆಯ ನಿಶ್ಚಯ ಏನೇ ಆದರೂ ತನ್ನ ಸ್ನೇಹಿತೆಯಾಗಿಯೇ ಇರುವಂತೆ ಕೇಳಿಕೊಂಡ. ಆಕೆ ಮೂರು ದಿನಗಳ ಗಡುವನ್ನು ಕೇಳಿದ್ದರಿಂದ, ತನ್ನ ಜೇಬಿನಲ್ಲಿದ್ದ ಚಾಕಲೇಟನ್ನು ಆಕೆಯ ಕೈಗಿತ್ತು ಮನೆಗೆ ಮರಳಿದನು.

ಮನೆ ತಲುಪಿದ ನಂತರ ಆಕೆಗೆ ಕರೆ ಮಾಡಿ, ತಲುಪಿದ್ದರ ಬಗ್ಗೆ ತಿಳಿಸಿದ. ಆಕೆ ಯಾಕಿಷ್ಟು ವಿಳಂಬಯಾಯ್ತೆಂದು ಕೇಳಿದ್ದಕ್ಕೆ, ಮನೇಲಿ ಅಡುಗೆ ಮಾಡಿರಲಿಲ್ಲ, ಹೊರಗಡೆ ಊಟ ಮಾಡಿ ಈಗ ತಾನೇ ಬಂದೆ ಎಂದುತ್ತರಿಸಿದ.

ಮರುದಿನ ರಾತ್ರಿ ಆಕೆಯ ಕರೆ ಬಂದಿತ್ತು. ಅನಿರೀಕ್ಷಿತವಾದ ಕರೆಯನ್ನು ಸಂತಸದಿಂದಲೇ ಸ್ವೀಕರಿಸಿದರೆ, ಹುಡುಗಿಯ ದನಿಯಲ್ಲಿ ಆತಂಕವಿತ್ತು. ನಿಮ್ಮ ಭಾವ ನನ್ನ ದೊಡ್ಡಪ್ಪನ ಬರ ಹೇಳಿದ್ದರಂತೆ. ವಿಷಯ ಏನೂ ಇಲ್ಲಾಂತ ನಿಮ್ಮ ಭಾವನಿಗೆ ತಿಳಿಸುತ್ತೀರ ಎಂದು ಯಾಚಿಸಿದಳು. ಈತ ಹೂಂ ಗುಟ್ಟಿದನಾದರೂ ಏನು ಮಾಡಲೂ ತೋಚದಂತವನಾಗಿದ್ದ. ಆದರೂ ಭಾವನಿಗೆ ಕರೆ ಮಾಡಿ, "ಆಕೆಗೆ ಈ ಮದುವೆ ಇಷ್ಟ ಇದೆಯೋ, ಇಲ್ಲವೋ ಕೇಳಿ ತೊಂದರೆಯಿಲ್ಲ. ಆದರೆ ಆಕೆ ಬೇರೆಯವರನ್ನು ಇಷ್ಟ ಪಟ್ಟಿರುವುದು ಮಾತ್ರ ಸುಳ್ಳೆಂದು ನನಗನ್ನಿಸಿತು. ಅದರ ಬಗ್ಗೆ ಏನೂ ವಿಚಾರಿಸುವುದು ಬೇಡ, ಸುಮ್ಮನೆ ಆಕೆಗೆ ಕೆಟ್ಟ ಹೆಸರು" ಎಂದು ತಿಳಿಸಿದನು.

ಹುಡುಗಿಯ ತಂದೆಯನ್ನು ವಿಚಾರಿಸಿ, ಅವರು ಕೊಟ್ಟ ಉತ್ತರದಿಂದ ಸಮಾಧಾನರಾಗದೆ, ಹುಡುಗನ ಭಾವ ಜಾತಕ ಕೊಡಿಸಿದ ಅವಳ ದೊಡ್ಡಪ್ಪನನ್ನು ಕರೆಸಿದ್ದರು. ಆ ವಿಷಯ ಹುಡುಗಿಯ ತಂದೆಗೆ ತಿಳಿದು, ಹುಡುಗಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಬರುವುದು ಬೇಡವೆಂದು ತಮ್ಮ ಮಗಳಿಂದ ಹುಡುಗನಿಗೆ ಕರೆ ಮಾಡಿಸಿದ್ದರು.

ಮರುದಿನ ಹುಡುಗಿಯ ದೊಡ್ಡಪ್ಪ ಖುದ್ದು ಹುಡುಗಿಗೆ ಕರೆ ಮಾಡಿ, ಆಕೆಯ ಅಭಿಪ್ರಾಯ ತಿಳಿದುಕೊಂಡು ಉಪಾಧ್ಯರ ಅಂಗಡಿಗೆ ಬಂದರು. ಉಪಾಧ್ಯರು ಪರಿಸ್ಥಿತಿಯನ್ನು ವಿವರಿಸಿ, ಆಕೆಗೆ ಯಾರಾದರೂ ಒತ್ತಾಯ ಮಾಡಿದ್ದಾರೆಯೇ ಎಂದು ಕೇಳಿದರು. ಅದಕ್ಕವರು ಉತ್ತರಿಸಿ, "ಆತರ ಏನೂ ಇಲ್ಲ, ನಾನೀಗಷ್ಟೆ ಅವಳ ಹತ್ತಿರ ಮಾತನಾಡಿದೆ. ನನಗಿಷ್ಟ ಇದೆ ಅಂತ ಹೇಳಿದ್ಲು. ಯಾವುದಕ್ಕೂ ನನ್ನ ಮಗಳಿರುವುದು ಬೆಂಗಳೂರಿನಲ್ಲಿಯೇ, ಆಕೆಯನ್ನು ಒಮ್ಮೆ ವಿಚಾರಿಸಲು ಹೇಳುತ್ತೇನೆ" ಎಂದು ತಿಳಿಸಿ ತೆರಳಿದರು.

ಇತ್ತ ಹುಡುಗಿಯ ಅಕ್ಕ ಆಕೆಯನ್ನು ಭೇಟಿಮಾಡಿದಾಗ, ಆಕೆಗೆ ತನ್ನ ವರ್ತನೆಯ ಬಗ್ಗೆ ಏನು ಹೇಳಬೇಕೆಂದು ತಿಳಿಯದೆಯೇ ತಾನು ಗೊಂದಲದಲ್ಲಿರುವುದಾಗಿಯೂ.. ತನ್ನ ಮತ್ತು ಹುಡುಗನ ಅಭಿರುಚಿ ಭಿನ್ನ ಎಂದೂ ತಿಳಿಸಿದಳು. ಇಂತಹ ಗೊಂದಲವಿದ್ದಲ್ಲಿ ಮದುವೆ ಮುಂದುವರಿಸುವುದು ಬೇಡವೆಂದು ಹುಡುಗಿಯ ಅಕ್ಕ ತನ್ನ ಮನೆಯವರಿಗೆ ತಿಳಿಸಿದಳು. ಇತ್ತ ಹುಡುಗಿಯ ತಾಯಿ ಮದುವೆ ಸೀರೆ, ಆಭರಣ ಕೊಳ್ಳುವಾಗಲೂ ಇದರ ಬಗ್ಗೆ ಏನೂ ಹೇಳದ ಮಗಳ ಬಗ್ಗೆ ಆಶ್ಚರ್ಯಗೊಂಡು ಕಣ್ಣೀರಿಟ್ಟರು.

ಹುಡುಗನಿಗೆ ಹುಡುಗಿಯ ನಿರ್ಧಾರದ ವಿಷಯ ಕೇಳಿ ಕೋಪ ಬಂದಿತ್ತಾದರೂ, ನಿರ್ಧಾರದ ಕಾರಣ ಕೇಳಿ ಸೋಜಿಗವೂ ಆಯ್ತು. ಹುಡುಗಿಯೇ ಬೇಡವೆಂದ ಮೇಲೆ ತಾನಿನ್ನೇನು ಮಾಡಬೇಕು ಎಂದು ನಿಟ್ಟುಸಿರು ಬಿಟ್ಟನು. ಒಂದು ವೇಳೆ ಹುಡುಗಿಗೆ ತನ್ನ ಮೇಲೆ ಇಷ್ಟವಿಲ್ಲದೆಯೇ ಇದ್ದಿರಬಹುದು. ಆದರೂ ಆಕೆಯನ್ನು ನೋಡಿದ ದಿನ, ಆಕೆ ತನ್ನನ್ನು ಒಪ್ಪಿಕೊಂಡು ನಿಶ್ಚಿತಾರ್ಥದವರೆಗೂ ಸುಮ್ಮನಿದ್ದು, ನಂತರ ತನ್ನನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ಋಣಾತ್ಮಕವಾಗಿ ಪ್ರತಿಕ್ರಿಯಿಸಲು ಕಾರಣವೇನು. ಮುದ್ದಿನಿಂದ ಬೆಳೆಸಿದ ಒಬ್ಬಳೇ ಮಗಳನ್ನು ಆಕೆಯ ಇಚ್ಛೆಯಿಲ್ಲದೆಯೇ ಮದುವೆ ಮಾಡಿಸುವ ಪ್ರಯತ್ನ ಆಕೆಯ ತಂದೆ ಮಾಡಿರಲಾರರು. ತಾನೇ ಎಲ್ಲಿಯಾದರೂ ಎಡವಿದ್ದೇನೆಯೇ. ಒಬ್ಬ ಹುಡುಗ ಒಪ್ಪಿಗೆಯಾದರೂ, ಆತನ ಬಗ್ಗೆ ಏನೂ ತಿಳಿಯದೆಯೇ ಮುಂದೆ ಬಾಳಬೇಕಾದರೆ, ಆತನಿಂದ ಕೊಂಚವಾದರೂ ಭರವಸೆಯನ್ನು ಹುಡುಗಿಯಾದವಳು ನಿರೀಕ್ಷಿಸುತ್ತಾಳಲ್ಲವೇ. ತಾನು ತನ್ನ ಅಭಿರುಚಿಯನ್ನು ತಿಳಿಸುವ ಉತ್ಸಾಹದಲ್ಲಿದ್ದೆನಾದರೂ ಆಕೆಯದ್ದನ್ನು ತಿಳಿಯಲು ಪ್ರಯತ್ನಿಸಿದ್ದುಂಟೇ. ತನಗೆ ಅದಕ್ಕೆ ಅವಕಾಶ ದೊರೆತಿಲ್ಲವೆಂಬುದು ನಿಜವಾದರೂ ಆಕೆಯ ಸ್ವಭಾವ ತಿಳಿದೆನೆಂದುಕೊಂಡ ನಂತರವಾದರೂ ಅದನ್ನು ಮಾಡಬೇಕಲ್ಲವೇ.

ತಾನು ಕೊನೆಯ ಬಾರಿ ಕಂಡ ಹುಡುಗಿ ಅವಳಾಗಿದ್ದಲ್ಲಿ, ತಿಳಿದೂ ತಿಳಿದೂ ತಪ್ಪು ಮಾಡಿದಂತಾಗಲಿಲ್ಲವೇ? ಅಭಿರುಚಿಯಲ್ಲಿ ವ್ಯತ್ಯಯ ಇರಬಹುದು. ಪ್ರಪಂಚದ ಯಾವ ಎರಡು ಜೀವಿಯು ಒಂದೇ ತರಹದ ಅನುಭವ ಪಡೆದು, ಅದಕ್ಕೆ ಒಂದೇ ರೀತಿಯಾಗಿ ಪ್ರತಿಕ್ರಿಯಿಸುವುದು ಸಾಧ್ಯ? ಹೆಂಡತಿಯಾಗಿ ಬರುವವಳಲ್ಲಿ, ತನ್ನದೇ ಅಭಿರುಚಿಯನ್ನು ಬಯಸುವುದು ಸಾಧುವೇ. ತನಗೇ ತನ್ನ ಅಭಿರುಚಿಯಲ್ಲಿ ಎಷ್ಟರ ಮಟ್ಟಿಗೆ ತಾಳಿಕೆ ಇದೆ ಎಂಬುದು ತಿಳಿದಿಲ್ಲ. ಇಂದು ಚೆಂದವಾಗಿ ಕಾಣಿಸಿದ್ದು, ನಾಳೆ ನೀರಸವಾಗಬಹುದು. ಎರಡು ವರ್ಷದ ಹಿಂದೆ ಇದ್ದ ತಾನು, ಇಂದಿನ ತನಗೆ ಹೋಲಿಸಿದಲ್ಲಿ ಎಷ್ಟೊಂದು ವ್ಯತ್ಯಾಸವಿಲ್ಲ. ಆಕೆಯ ಸ್ನೇಹದಿಂದ ತಾನೂ, ತನ್ನ ಸ್ನೇಹದಿಂದ ಆಕೆಯೂ ಏತಕ್ಕೆ ಬದಲಾಗಬಾರದು. ತನ್ನ ಗುರಿ ಆಕಾಂಕ್ಷೆ, ತಮ್ಮದೇಕಾಗಬಾರದು.

ಅವಳು ತಾನಂದುಕೊಂಡಂತೆ ಇದ್ದರೆ, ಆಕೆಗಿನ್ನೂ ಮದುವೆ, ಗಂಡ ಮೊದಲಾದ ವಿಷಯದಲ್ಲಿ ಇನ್ನೂ ಗೊಂದಲವಿದೆ. ಅವಳ ವರ್ತನೆ ನೋಡಿದರೆ ಆಕೆಗೆ ಮದುವೆಯ ಬಗ್ಗೆಯೇ ಯಾವುದೋ ಭಯ, ಪೂರ್ವಾಗ್ರಹವಿದ್ದಂತೆ ತೋರುತ್ತದೆ. ಆಕೆಯ ಹುಡುಗಾಟದ ಸ್ವಭಾವ ನೋಡಿ, ಮನೆಯವರು ಮದುವೆಯಾದ ನಂತರ ನೀನು ಹೀಗಿರಬೇಕು, ಹಾಗಿರಬೇಕು ಎಂದು ತಿಳಿ ಹೇಳಿರಬಹುದು. ಆಕೆಗೆ ಮದುವೆ ಒಂದು ಸ್ವಾತಂತ್ರ್ಯ ಹರಣದಂತೆ ಕಾಣಿಸಿರಬಹುದು. ತಾನೂ ಬಯಸಿದ್ದು ಇಂತಹ ಹುಡುಗಿಯಲ್ಲದೇ, ಗಂಭೀರ ಸ್ವಭಾವದ ಗರತಿಯನ್ನಲ್ಲವಲ್ಲ. ನಾಳೆ ಆಕೆ ತನ್ನ ಬದಲು ಇನ್ನೊಬ್ಬರ ಕೈ ಹಿಡಿಯಬಹುದು. ಎಲ್ಲವೂ ಸರಿಯಾದಲ್ಲಿ ತೊಂದರೆಯಿಲ್ಲ. ಒಂದು ವೇಳೆ ಆತ ಈಕೆಯ ಮುಗ್ದತೆಯನ್ನು ಅರಿಯಲಾಗದೆ ಹೋಗಿ, ಈಕೆ ಮುಂದೆಂದಾದರೂ ತನ್ನ ಅಭಿಪ್ರಾಯದ ಬಗ್ಗೆ ಪಶ್ಚಾತ್ತಾಪ ಪಡುವಂತಾದರೆ, ತಿಳಿದೂ ತಿಳಿದೂ ತಾನು ಅವಳನ್ನು ದೂರ ತಳ್ಳಿದಂತಾಗಲಿಲ್ಲವೇ.

ತನಗೆ ಅವಳ ತೀರ್ಮಾನದ ಬಗ್ಗೆ ಯಾವ ರೀತಿಯ ಬೇಸರವಿಲ್ಲವೆಂದೂ, ಕೇವಲ ಆಕೆಯ ಸ್ನೇಹ ಬಯಸುತ್ತಿರುವುದಾಗಿ ಮೈಲ್ ಮಾಡಿ, ಆಕೆಯ ಸಂಪರ್ಕದಲ್ಲಿದ್ದು ನಿಧಾನಕ್ಕೆ ಆಕೆಯ ಆಕಾಂಕ್ಷೆಯನ್ನು ಅರಿತು, ತನಗೆ ತಾಳಿಕೆಯಾದಲ್ಲಿ ಇನ್ನೊಮ್ಮೆ ಕೇಳಬಹುದಲ್ಲವೇ. ಒಂದು ವೇಳೆ ತನಗನಿಸಿದಂತೆ, ಆಕೆ ಮುಗ್ಧೆಯಾಗಿಲ್ಲದಿದ್ದಲ್ಲಿ.. ಯಾವುದಕ್ಕೂ ಮೊದಲ ಯೋಚನೆಯನ್ನು ಅನುಸರಿಸುವುದರಲ್ಲಿ ತಪ್ಪೇನಿಲ್ಲ. ಆಕೆಗೆ ಮೊದಲು ತನ್ನೊಡನೆ ಬಳಕೆಯಾದಲ್ಲಿ, ಮುಂದಿನದ್ದು ಯೋಚಿಸಬಹುದು ಎಂದು ಮನಗಂಡು, "ತನಗೆ ಆಕೆಯ ಬಗ್ಗೆ ಯಾವುದೇ ರೀತಿಯ ಬೇಸರವಿಲ್ಲವೆಂದೂ, ಈ ಘಟನೆಯಿಂದ ತನಗೊಬ್ಬ ಒಳ್ಳೆಯ ಸ್ನೇಹಿತೆ ಸಿಕ್ಕಿದಳೆಂದೂ, ಆದ ಘಟನೆಯ ಬಗ್ಗೆ ಬೇಸರ ಮಾಡಿಕೊಳ್ಳಬಾರದೆಂದು" ಪತ್ರಿಸಿದನು.

ನಂಬುಗೆ ಮುಗಿದು ಒಂದು ವರ್ಷ ಕಳೆಯುತ್ತಾ ಬಂದಿತ್ತು. ಮಳೆಯ ಸೊಬಗ ನೋಡುವ ಆಸೆಯಿಂದ ರಷ್ಮಿ , ಕೆಲವು ದಿನ ರಜಾ ಹಾಕಿ ಊರಿಗೆ ಬಂದಿದ್ದಳು. ಬೆಳಿಗ್ಗಿನ ಉಪಹಾರ ಮುಗಿಸಿ, ಕೊಠಡಿಯಲ್ಲಿ ದಿನಪತ್ರಿಕೆ ಓದುತ್ತಿದ್ದ ತಂದೆಯನ್ನುದ್ದೇಶಿಸಿ, "ಅಪ್ಪಾ, ನಾನು ನಿಮ್ಮ ಜೊತೆ ಮಾತನಾಡಬೇಕಿತ್ತು" ಎಂದಳು. ಪತ್ರಿಕೆಯಿಂದ ತಮ್ಮ ದೃಷ್ಟಿಯನ್ನು ಹೊರತೆಗೆದು, ಜಗನ್ನಾಥರು ಪ್ರಶ್ನಾರ್ಥಕವಾಗಿ ಮಗಳ ಮುಖವನ್ನು ನೋಡಿದರು. ಮಗಳು ಮುಂದುವರಿಸಿ,ತಾನು ಒಬ್ಬ ಹುಡುಗನನ್ನು ಇಷ್ಟ ಪಟ್ಟಿರುವುದಾಗಿ ತಿಳಿಸಿದಳು. ಮಗಳ ಮಾತು ತಂದೆಗೆ ಆಶ್ಚರ್ಯ ತಂದಿತಾದರೂ, ಯಾರನ್ನು ಎಂದು ಪ್ರಶ್ನಿಸಿದರು. ಹುಡುಗಿ ತಲೆ ಕೆಳಗೆ ಹಾಕಿ, ಮೋರೆಯನ್ನು ಕೆಂಪಾಗಿಸಿ, ಕಾಲ್ಬೆರಳಿನಲ್ಲಿ ನೆಲವನ್ನು ಮೀಟುತ್ತಾ, "ಅರವಿಂದ" ಎಂದಳು.

* ನಂಬುಗೆ: ನಂಬ್ಗೆ ಎನ್ನುವ ರೂಪದಲ್ಲಿ ಉಡುಪಿಯ ಕಡೆ, ನಿಶ್ಚಿತಾರ್ಥಕ್ಕೆ ಬಳಸುವ ಪದ

Sunday, September 20, 2009

ಕುಂದಾಪುರ ಸಂತೆ

ಕಳೆದ ಶನಿವಾರ ಊರಿಗೆ ಹೋಗಿದ್ದಾಗ ಕುಂದಾಪುರ ಸಂತೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಛಾಯಾಗ್ರಹಣಕ್ಕೆಂದೇ ಹೋಗದಿದ್ದರೂ ಕೈಯಲ್ಲಿ ಕ್ಯಾಮರಾ ಇದ್ದಿದ್ದರಿಂದ ದೊರೆತ ಅರ್ಧ ಗಂಟೆಯಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳು.

ಗಿರಾಕಿಯ ನಿರೀಕ್ಷೆಯಲ್ಲಿ
DSC_2267


ಹಣ್ಣಿನ ಭರಾಟೆಯಲ್ಲಿ
DSC_2264


ಬಾಯಾರಿಕೆ ನೀಗಿಸಲು
DSC_2262


ಸಂತೆಯ ಗೌಜು
DSC_2268


ಬಗೆಬಗೆಯ ತಿನಿಸುಗಳು
DSC_2269


ಮನೆಯುಪಯೋಗಿ ವಸ್ತುಗಳ ಖರೀದಿ
DSC_2291

Friday, September 18, 2009

ಬಯಕೆ


ಮನದ ಸೊಬಗ ಬಯಸಿದ್ದೆ,
ಮೈಯ ಅಲಂಕಾರವನಲ್ಲ

ಕಣ್ತುಂಬ ತುಂಬು ಪ್ರೀತಿಯ ಬಯಸಿದ್ದೆ,
ತುಟಿಯ ನಗುವನಲ್ಲ

ಮೊಗದಲಿ ಕಾತರದ ನಿರೀಕ್ಷೆಯ ಬಯಸಿದ್ದೆ,
ಅಗಲಿಕೆಯ ನಿರಾಳತೆಯನಲ್ಲ

ಭೇಟಿಯ ಮಧುರ ಎದೆಬಡಿತವ ಬಯಸಿದ್ದೆ,
ಮೈಯ ಸ್ಪರ್ಷವನಲ್ಲ

ಏಕಾಂತದಲಿ ಜೊತೆ ನಡೆಯ ಬಯಸಿದ್ದೆ,
ಗದ್ದಲದೊಳು ಧಾವಿಸಲಲ್ಲ

ಪ್ರೀತಿಯ ಕೈತುತ್ತು ಬಯಸಿದ್ದೆ,
ರುಚಿ ಅಡುಗೆಯನಲ್ಲ

ಸತ್ಯದ ಸೌಂದರ್ಯವ ಬಯಸಿದ್ದೆ,
ಸುಳ್ಳು ಹಿತನುಡಿಯನಲ್ಲ

ಸಂತಸದಿಂದಿರಬೇಕೆಂದು ಬಯಸಿದ್ದೆ,
ಮುಖವಾಡ ಧರಿಸಲಲ್ಲ

Friday, September 04, 2009

behind every happy woman



behind every happy woman, there will be a crying man

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)