Monday, July 25, 2011

ಪಟ್ಟಣಿಗರ ಮಣ್ಣಿನ ನಂಟು

ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ 

ಬೆಂಗಳೂರಿನ ಸುಜಾತ ಹಂದೆಯವರ (50)  ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್ಕೆ, ಔಷಧಕ್ಕೆ  ೧೨ ಬಗೆಯ ದಾಸವಾಳ, ಮಲ್ಲಿಗೆ, ಚೆಂಡು ಹೂವು, ಪಾರಿಜಾತ, ಧವನ, ಪತ್ರಿ, ತುಳಸಿ, ಆಲೋವಿರ, ಕರವೀರ, ಮದರಂಗಿ, ಅಮೃತಬಳ್ಳಿ ಮೊದಲಾದ ಗಿಡಗಳು. ಅಲ್ಲದೆ ಒಂದೆಲಗ, ಕರಿಬೇವು, ಕೆಂಪು ಹರಿವೆ, ಬಿಳಿ ಹರಿವೆ, ಬಸಳೆ, ಟೊಮೇಟೊ, ಬದನೆ, ಹಾಗಲ, ಮಂಗಳೂರು ಸೌತೆ,  ಬಾಳೆ, ಕರಿ ಕೆಸು, ಸುವರ್ಣ ಗಡ್ಡೆ, ನುಗ್ಗೆ, ಪೇರಳೆ, ದಾಳಿಂಬೆ, ಅರಶಿನ, ಮೊದಲಾದ ದಿನ ಬಳಕೆಗೆ ಉಪಯುಕ್ತವಾದ ತರಕಾರಿ ಹಣ್ಣುಗಳ ಗಿಡಮರಗಳು. ಮುನಿಯ, ಚೋರೆ ಹಕ್ಕಿ, ಗುಬ್ಬಿಗಳು, ಹೂವಿನ ಹಕ್ಕಿ, ಬುಲ್ ಬುಲ್ ಇವರ ಕೈತೋಟದ ಖಾಯಂ ಅತಿಥಿ. 

ಬ್ಯಾಂಕ್ ನೌಕರರಾಗಿರುವ ಸುಜಾತರ ಪತಿ ವಸಂತ ಮಾಧವ ಹಂದೆ, ೭ ವರ್ಷಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿಯ ಸಮೀಪ  ತಮ್ಮ ೬೦-೪೦ರ  ನಿವೇಶನದಲ್ಲಿ ೮,೫೦೦ ಚದರ ಅಡಿಯಲ್ಲಿ ಮನೆ ಕಟ್ಟಿಸಿದ್ದರು. ಮನೆಯ ಎದುರುಗಡೆ ಉಳಿಸಿದ ಜಾಗವನ್ನೇ  ಸುಜಾತರು ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ. 

CSC_3062

ಸುಜಾತ 

"೧೯೭೮ ರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ತಂದೆ ೬ ಎಕರೆ ಹೊಲದಲ್ಲಿ ಹತ್ತಿ ನಾಟಿ ಮಾಡಿಸಿದ್ದರು. ಆ ವರ್ಷ ಮಳೆಯಿಲ್ಲ. ಧೃತಿಗೆಡದ ಅಮ್ಮ ನೀರನ್ನು ಹೊತ್ತು ಹೊಲಕ್ಕೆ ಉಣಿಸಿದ್ದಳು. ಮಕ್ಕಳಾದ ನಾವೂ ಅಕೆಗೆ ಸಹಾಯ ಮಾಡಿತ್ತು ", ಬೇಸಾಯದ ತಮ್ಮ ಹಿಂದಿನ ಅನುಭವ ನೆನಪಿಸಿಕೊಳ್ಳುತ್ತಾರೆ ಸುಜಾತರು. ೬೦೦೦ ರೂಪಾಯಿಗಳಷ್ಟು ಖರ್ಚು ಮಾಡಿಸಿ ಅಂದು ಬೆಳೆಸಿದ ಹತ್ತಿಗೆ  ಸಿಕ್ಕ ಪ್ರತಿಫಲವು ಖರ್ಚು ಮಾಡಿದಷ್ಟೇ. ಇಂತಹ ಹಲವು ಅನುಭವಗಳ ಫಲವಾಗಿ ಅವರ ತಂದೆ ಬೇಸಾಯದ ಹಂಗಿಗೆ ಹೋಗದೆ ತಾವು ನಡೆಸುತ್ತಿದ್ದ ಹೋಟೆಲ್ನೆ ನೆಚ್ಚಿಕೊಂಡಿದ್ದರು. ಮದುವೆಯ ನಂತರ ಪತಿಯ ಬ್ಯಾಂಕ್ ಉದ್ಯೋಗದ  ನಿಮಿತ್ತ ದೇಶದ ಹಲವು ಭಾಗಗಳಲ್ಲಿ ತಿರುಗಾಟ. ಮುಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಯೂರಿದ ನಂತರ ಇದ್ದ ಅಲ್ಪ ಜಾಗದಲ್ಲೇ ನಿತ್ಯ ಪೂಜೆಗೆ ಬೇಕಾದ ಹೂವಿಗಾಗಿ ಆರಂಭವಾದ ಮಣ್ಣಿನ ನಂಟು ಇಂದು ತರಕಾರಿ ಬೆಳೆಸುವುದರವರೆಗೂ ಮುಂದುವರಿದಿದೆ.  

"ಮೊದಲೆಲ್ಲ ಗಿಡ ಹೇಗೆ ಸಾಕಬೇಕೆಂಬ ಅರಿವಿರಲಿಲ್ಲ. ತೋಟದ ಕಸ, ಕಳೆಯನ್ನೆಲ್ಲ ಸಂಗ್ರಹಿಸಿ ಸುಡುಮಣ್ಣು  ಮಾಡಿ ಗೊಬ್ಬರವಾಗಿ ಹಾಕುತ್ತಿದ್ದೆ", ಎಂದು ತಮ್ಮ ಹಿಂದಿನ ನೆನಪನ್ನು ಬಿಚ್ಚಿಡುವ ಸುಜಾತರು,  ಗಿಡಗಳ ಆರೈಕೆಯ ಪ್ರಾಥಮಿಕ ಅರಿವು ಕೃಷಿ ಮೇಳವೊಂದರಲ್ಲಿ ಖರೀದಿಸಿದ, ಅನಸೂಯ ಶರ್ಮರ 'ಹಿತ್ತಿಲು'*** ಎಂಬ ಪುಸ್ತಕದಿಂದ ಲಭಿಸಿತು ಎನ್ನುತ್ತಾರೆ. ಸಂಜೆಯ ವಾಕಿಂಗ್ ಸಮಯದಲ್ಲಿ ಕೈಯಲ್ಲೊಂದು ಲಕೋಟೆ ಹಿಡಿದು ದಾರಿಯಲ್ಲಿ ಸಿಕ್ಕಿದ ದನದ ಸಗಣಿ ಅಸ್ಥೆಯಿಂದ ಸಂಗ್ರಹಿಸುತ್ತಾರೆ.  ಮನೆಯಲ್ಲಿ ದಿನನಿತ್ಯ ಸಂಗ್ರಹವಾಗುವ ಜೈವಿಕ ತ್ಯಾಜ್ಯ, ತೋಟದ ಕಳೆ, ಸಂಗ್ರಹಿಸಿದ ಸಗಣಿಯನ್ನು ಒಂದು ಪ್ಲಾಸ್ಟಿಕ್ ಬಕೇಟಿನಲ್ಲಿ ಕೊಳೆಯಲು ಬಿಡುತ್ತಾರೆ. ಮಣ್ಣಿನ ಹುಳುಗಳನ್ನು ನಿಯಂತ್ರಿಸಲು ಒಮ್ಮೊಮ್ಮೆ ಬೇವಿನ ಎಲೆಗಳನ್ನು ಈ ಮಿಶ್ರಣದಲ್ಲಿ ಹಾಕುವುದುಂಟು. ಎರಡು ವಾರಗಳಲ್ಲಿ ತಯಾರಾಗುವ ಈ ಗೊಬ್ಬರವನ್ನು ಗಿಡದ ಬುಡಗಳಿಗೆ ಆಗಾಗ ಹಾಕುತ್ತಾರೆ. "ಈ ಬಸಳೆಯ ಎಲೆ ನೋಡಿ. ನನ್ನ ಅಂಗೈಯ ಎರಡರಷ್ಟಿದೆ",   ತಮ್ಮ ಪ್ರಯೋಗದ ಫಲಿತಾಂಶವನ್ನು ಹೆಮ್ಮೆಯಿಂದಲೇ ತೋರಿಸುತ್ತಾರೆ. 

DSC_3060
ದೊಡ್ಡ ದೊಡ್ಡ ಎಲೆಯ ಬಸಳೆ ಸೊಪ್ಪಿನ ಗಿಡ 

ಬಡಾವಣೆಗೆ ಬೆಂಗಳೂರಿನ ನಗರ ಪಾಲಿಕೆಯಿಂದ ಕೊಳವೆ ಬಾವಿಯ ನೀರಿನ ಪೂರೈಕೆ. ಇದೇ ನೀರನ್ನು ಕೈತೊಟಕ್ಕೆ ಪೈಪಿನ ಮೂಲಕ ಹಾಯಿಸುತ್ತಾರೆ.  ಬೇಸಿಗೆಯಲ್ಲಿ ಒಮ್ಮೊಮ್ಮೆ ನೀರಿನ ಅಭಾವ ತೋರುವುದುಂಟು. ಆಗೆಲ್ಲ ಪಾತ್ರೆ ತೊಳೆದ ನೀರನ್ನು ಸಂಗ್ರಹಿಸಿ ಅದನ್ನೇ ಗಿಡಗಳಿಗೆ ಹಾಕುತ್ತಾರೆ.  

"ಹಿಂದಿನ ವರ್ಷ ತೋಟದ ತುಂಬಾ ಕಂಬಳಿ ಹುಳುಗಳು, ಈ ವರ್ಷ ನಿಯಂತ್ರಣದಲ್ಲಿದೆ ", ಮುಂದುವರೆಸುತ್ತ ಸುಜಾತರು,  ಹಿಂದೆಲ್ಲ ತೋಟದಲ್ಲಿ ಕೀಟಗಳ ಹಾವಳಿಯಿಂದ ಗಿಡ  ಸೊರಗತೊಡಗಿದಾಗ, ಅನಿವಾರ್ಯತೆಯಿಲ್ಲದೆ  ಅಂಗಡಿಯಿಂದ ರಾಸಾಯನಿಕ ಖರೀದಿಸಿ ಸಿಮ್ಪಡಿಸುತ್ತಿದ್ದೆ. ಹಿತ್ತಿಲು ಪುಸ್ತಕ ನನ್ನ ತೋಟ ವಿಷಮಯವಾಗುವುದನ್ನು ತಪ್ಪಿಸಿತು. ಕೈತೊಟದಲ್ಲೇ ಬೆಳೆಸಬಹುದಾದ ಚೆಂಡು ಹೂವು ಕೀಟ ವಿಕರ್ಷಕ ಅಷ್ಟೇ ಅಲ್ಲ, ಹೂವಿನ ಕಷಾಯ ಮಾಡಿ  ಸಿಮ್ಪಡಿಸುವುದರಿಂದಲೂ ಕೀಟಗಳನ್ನು ಹತೋಟಿಯಲ್ಲಿಡಬಹುದು. ಬಿತ್ತನೆಯ ಸಮಯದಲ್ಲಿ ಬೀಜವನ್ನು ಇರುವೆಗಳಿಂದ ಕಾಪಾಡಲು ಮಡಿಯಲ್ಲಿ  ಸುಡುಮಣ್ಣು ಹದವಾಗಿ ಹರಡುತ್ತಾರೆ.   

ಸಾಮಾನ್ಯವಾಗಿ ಮನೆಗೆ ತರುವ ತರಕಾರಿಗಳಿಂದಲೇ ಗಿಡವನ್ನು ನಾಟಿ ಮಾಡುತ್ತಾರೆ. ಮೇಳಗಳಲ್ಲೂ ಸಂಗ್ರಹಿಸಿದ ಬೀಜವನ್ನು ಬಿತ್ತಿ, ಆ ಸಸಿಗಳ ಬೀಜವನ್ನು ಕಾಪಿಡುತ್ತಾರೆ. ಸಂಗ್ರಹಿಸಿದ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ಬಾಟಲಿಗಳಲ್ಲಿ ಮುಂದಿನ ಬಿತ್ತನೆಗೆ ಭದ್ರವಾಗಿರಿಸುತ್ತಾರೆ. ಆಸಕ್ತರಿಗೂ ಅಸ್ಥೆಯಿಂದ ಹಂಚುವುದುಂಟು. ಅಕ್ಕ ಪಕ್ಕದ ಮನೆಯಲ್ಲಿ, ತಾವು ಭೇಟಿ ಕೊಟ್ಟ ಊರಿನಲ್ಲಿ ಹೊಸ ಗಿಡ ಕಂಡರೆ  ಅದನ್ನು ಸಂಗ್ರಹಿಸುವುದು ಇವರ ಹವ್ಯಾಸ.           

DSC_3055
ತಮ್ಮ ಕೈತೋಟದ ಕೆಲಸದಲ್ಲಿ - ಪ್ಲಾಸ್ಟಿಕ್ ಮುಚ್ಚಿದ್ದು ಸುಡುಮಣ್ಣು 

ಇವರ ಈ ಹವ್ಯಾಸಕ್ಕೆ ಮನೆಯಲ್ಲಿಯೂ ಸಹಕಾರ ದೊರೆಯುತ್ತದೆ. ಭಾನುವಾರದಂದು ಅಡುಗೆ ಮನೆಯ ಕೆಲಸ ನಿರ್ವಹಿಸುವ ಪತಿಯಿಂದಾಗಿ ವಾರದಲ್ಲೊಮ್ಮೆ ತಮ್ಮ ತೋಟದ ಕಡೆ ಹೆಚ್ಚಿನ ಗಮನ ಹರಿಸಲು ಸಹಾಯಕವಾಗುತ್ತದೆ. ಮಗ ಶ್ರೀನಿವಾಸ ಕೂಡ ಬೇವಿನ ಸೊಪ್ಪು, ಸಗಣಿ ಸಂಗ್ರಹಿಸುವಲ್ಲಿ ನೆರವಿಗೆ ನಿಲ್ಲುತ್ತಾರೆ.    ಮನೆಯ ಉಪಯೋಗಕ್ಕೆ ಬಳಸಿಯೂ ಉಳಿಯುವ ತರಕಾರಿಯನ್ನು ಅಕ್ಕ ಪಕ್ಕದ ಮನೆಯವರಿಗೂ, ಬಂಧುಗಳಿಗೂ ಹಂಚುತ್ತಾರೆ. "ನಾವೇ ಬೆಳೆಸಿದ ತರಕಾರಿಯ ರುಚಿ ಹೆಚ್ಚು, ವಿಷ ರಹಿತ" ಎನ್ನುವ ಸಮಾಧಾನ ಸುಜಾತರಿಗೆ. "ಮನೆಯ ಸುತ್ತ ವಿಶಾಲ ಆವರಣ, ಚೆನ್ನಾಗಿ ಸಂವಹಿಸುವ ಗಾಳಿ ಬೆಳಕು, ಬೆಳಗಾದೊಡನೆ ಮುದ ನೀಡುವ ಹಕ್ಕಿಗಳ ಚೀರಾಟ ಬೋನಸ್ ", ಎನ್ನುತ್ತಾರೆ ಪತಿ ವಸಂತರು. ಆಹಾರದ ಅಭಾವವೆಂದು ಜವಾಬ್ದಾರಿಯನ್ನೆಲ್ಲ ರೈತರ ತಲೆಗೆ ಹೊರಿಸುವುದರ ಬದಲು, ನಮ್ಮ ಕೈಲಾದಷ್ಟು ನಾವೇ ಬೆಳೆದುಕೊಳ್ಳುವುದು ಆರೋಗ್ಯದ ಹಿತದಿಂದಲೂ ಒಳ್ಳೆಯದು.  ನೀರಿನ ಬವಣೆ ಎದುರಿಸುತ್ತಿರುವ ಬೆಂಗಳೂರಿನಂತಹ ನಗರದಲ್ಲಿ ಕಾಂಕ್ರೀಟಿನಿಂದ ಮುಕ್ತವಾದ ಈ ರೀತಿಯ ನೆಲ ಮಳೆ ನೀರು ಇಂಗಿಸಲೂ ದಾರಿಯಾದಂತಾಗುತ್ತದೆ.                         

***
ಪುಸ್ತಕ:  ಹಿತ್ತಿಲು - ಕೈತೋಟಕ್ಕೊಂದು ಕೈಪಿಡಿ 
ಲೇಖಕರು: ಅನುಸೂಯ ಶರ್ಮ
ಬೆಲೆ: ೧೦೦ ರೂಪಾಯಿ
ಪ್ರಕಾಶನ:
ಭೂಮಿ ಪ್ರಕಾಶನ 
ನಂ.6/32, 'ಕಾಂಚನ ನಿಲಯ'
2ನೇ ಡಿ ಮುಖ್ಯರಸ್ತೆ, 60 ಅಡಿ ರಸ್ತೆ
ಆರ್ಎಂವಿ 2ನೇ ಹಂತ, ಭೂಪಸಂದ್ರ
ಬೆಂಗಳೂರು 560 094
ದೂರವಾಣಿ: 080-23510533 

ಕಿರು ಪರಿಚಯ: 
ಹಿರಿಯ ಲೇಖಕಿ ಅನುಸೂಯ ಶರ್ಮ ತಮ್ಮ ಎರಡು ದಶಕಗಳ ಕೈತೋಟದ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕೈತೋಟದ ಕುರಿತ ಪ್ರಾಥಮಿಕ ಮಾಹಿತಿಯಿಂದ ಹಿಡಿದು ತರಕಾರಿ ಮೌಲ್ಯವರ್ಧನೆ, ರೋಗ-ಕೀಟ ಬಾಧೆ, ತರಕಾರಿ-ಹಣ್ಣು-ಸಂಬಾರ ಪದಾರ್ಥಗಳ ಮೌಲ್ಯವರ್ಧನೆ ಹೀಗೆ ಕೈತೋಟಕ್ಕೆ ಸಂಬಂಧಿಸಿದ ಹತ್ತಾರು ಮಾಹಿತಿ ಪುಸ್ತಕದಲ್ಲಿ ಅಡಕವಾಗಿದೆ.

Friday, July 01, 2011

ಸೆಲೆಕ್ಟಿವ್ ಕಲರಿಂಗ್

ಕೆಲವು ತಿಂಗಳ ಹಿಂದೆ ಚಿತ್ರದುರ್ಗಕ್ಕೆ ಹೋದಾಗ ಹಾವಾಡಿಗ ಹುಡುಗನೊಬ್ಬನ ಚಿತ್ರ ತೆಗೆದಿದ್ದೆ. ಈ ಚಿತ್ರದ ಹಿನ್ನೆಲೆ ಬ್ಲರ್ ಕಡಿಮೆಯಾಗಿದ್ದು ಬಣ್ಣಗಳು ಎದ್ದು ಕಾಣಿವಂತಿದ್ದು ಹುಡುಗ ಹಿನ್ನೆಲೆಯಲ್ಲಿ ಬೆರೆತಂತಿದ್ದ.  ಚಿತ್ರದಲ್ಲಿ ಹಿನ್ನೆಲೆಯ ಆಯ್ಕೆ ಸರಿಯಾಗಿರದಿದ್ದ ಕಾರಣ ಇದುವರೆಗೂ ಇದನ್ನು ಹಾಗೆಯೇ ಒಂದು ಮೂಲೆಯಲ್ಲಿಟ್ಟಿದ್ದೆ. ಇತ್ತೀಚಿಗೆ ಬ್ಲಾಗ್ ಗೆಳೆಯರೊಬ್ಬರ ಬರಹದಿಂದ (ಜೀವನ ಕಲೆ) ಮತ್ತೆ ಈ ಚಿತ್ರದ ನೆನಪಯ್ತು. ಏನಾದರೂ ಪ್ರಾಸೆಸಿಂಗ್ ಮಾಡಬಹುದಲ್ಲ ಎಂದೆಣಿಸಿ ಚಿತ್ರವನ್ನು ಕೈಗೆತ್ತೊಕೊಂಡೆ.

ಸಾಮಾನ್ಯವಾಗಿ picasa ಬಳಸಿ photo edit ಮಾಡುವವನು ನಾನು. Post processing ಬಗ್ಗೆ ಇರುವ ತಿಳಿವು ತುಂಬಾ ಕಡಿಮೆ. ಆದರೂ ಗೊತ್ತಿರುವ ಸ್ವಲ್ಪವನ್ನೇ GIMPನಲ್ಲಿ ಕಾರ್ಯರೂಪಕ್ಕೆ ತಂದಾಗ ಕಾಣಿಸಿದ್ದು ಕೆಳಗಿನ ಚಿತ್ರ. [ಈ ಚಿತ್ರ GIMPನಲ್ಲಿ ಪ್ರಾಸೆಸ್ ಮಾಡಿದ್ದು - ಈ ಮಾಹಿತಿ ಕಾಂತಿಯವರ ಕಾಮೆಂಟ್ ನೋಡಿದ ಮೇಲೆ ಸೇರಿಸಿದ್ದು]

DSC_1526

ಈ ವಿಧಾನಕ್ಕೆ "selective coloring" ಎನ್ನುತ್ತಾರೆ. ಅಂದ ಹಾಗೆ ಇದು ನನ್ನ ಮೊದಲ ಪ್ರಯತ್ನ. 

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)