Tuesday, August 31, 2010

ಮೀನು ಹಿಡಿಯಲು ಕಲಿಸಿ, ಮೀನು ಹಿಡಿದುಕೊಡಬೇಡಿ

hanuman_begger

ಹಬ್ಬ ಹರಿದಿನಗಳಲ್ಲಿ ದೇವತೆಗಳ ವೇಷ ಧರಿಸಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಜನವರ್ಗವುಂಟು. ಅದೂ ಅಲ್ಲದೇ ಪುಣ್ಯ ಕ್ಷೇತ್ರಗಳಂತಹ ಸ್ಥಳಗಳಲ್ಲಿ ವರ್ಷದುದ್ದಕ್ಕೂ ವೇಷ ಧರಿಸಿದ ಅಥವಾ ಧರಿಸದ ಭಿಕ್ಷುಕರೂ ಕಾಣಿಸಿಕೊಳ್ಳುವುದುಂಟು. ಕೈಲಾಗದವರು, ವಯಸ್ಸಾದವರು ಮಾತ್ರವಲ್ಲದೇ ಚಿಕ್ಕ ಮಕ್ಕಳೂ ಭಿಕ್ಷೆಗೆ ಕೈಯೊಡ್ಡುವುದುಂಟು. ಇಂತವರ ಕಾಟ ತಾಳಲಾರದೇ ಪುಣ್ಯ ಕ್ಷೇತ್ರಗಳ ಬಗ್ಗೆ ಜಿಗುಪ್ಸೆ ಮೂಡುವುದು ಸಹಜ. ಆದರೆ ಇತ್ತೀಚೆಗೆ ಇವು ಕೇವಲ ಪುಣ್ಯ ಕ್ಷೇತ್ರಗಳಷ್ಟೇ ಅಲ್ಲದೇ ಬೆಂಗಳೂರಿನ ಸಮೀಪದ ಹಳ್ಳಿಗಳಲ್ಲೂ ಪಸರಿಸಿರುವುದು ವಿಪರ್ಯಾಸ!

ತಿಂಗಳ ಹಿಂದಷ್ಟೇ ಭೇಟಿ ನೀಡಿದ ಸ್ಕಂಧಗಿರಿ ಒಂದು ಬಗೆಯ ಉದಾಹರಣೆಯಾದರೆ ವಾರದ ಹಿಂದೆ ಭೇಟಿ ನೀಡಿದ ಪಾಂಡವಪುರ ಇನ್ನೊಂದು ಬಗೆಯದು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಸ್ಕಂಧಗಿರಿಯಂತಹ ತಾಣಕ್ಕೆ ಹೋದರೆ ಸ್ವಯಂಘೋಷಿತ ಗೈಡುಗಳ ಕಾಟ. ಮೊದಲು "ಸಾರ್ ದಾರಿ ನಿಮಗೆ ಗೊತ್ತಾಗೋದಿಲ್ಲ, ಮಧ್ಯದಲ್ಲಿ ಅಪಾಯಕರ ಪ್ರಾಣಿಗಳು ಎದುರಾಗಬಹುದು", ಇತ್ಯಾದಿ ಬೆದರಿಕೆಯೊಡ್ಡಿ ಗೈಡಿನ ಅನಿವಾರ್ಯತೆ ಸೂಚಿಸುತ್ತಾರೆ. ಇದಕ್ಕೆ ನೀವು ಮಣೆ ಹಾಕದಿದ್ದರೆ, ಗುಂಪು ಕಟ್ಟಿಕೊಂಡು ಬಂದು "ಇಲ್ಲಿ ಕಳ್ಳಕಾಕರು ಜಾಸ್ತಿ, ದಾರೀಲಿ ನಿಮಗೇನಾದರೂ ಅಪಾಯವಾಗಬಹುದು; ನಿಮ್ಮ ವಾಹನ ಇಲ್ಲೇ ಬಿಟ್ಟಿದ್ದೀರ, ಅದಕ್ಕೆ ನಾವು ಜವಾಬ್ದಾರರಲ್ಲ;" ಇತ್ಯಾದಿಯಾಗಿ ಬೆದರಿಸುವುದರ ಮೂಲಕವಾದರೂ ಒಂದು ಬೆಲೆಯನ್ನು ನಿಶ್ಚಯಿಸಿ ನಿಮ್ಮೊಂದಿಗೆ ಬರುತ್ತಾರೆ. ಇನ್ನು ಕೊಕ್ಕರೆ ಬೆಳ್ಳೂರು ಅಥವಾ ತೊಣ್ಣೂರು ಕೆರೆಗೋ ಭೇಟಿಯಿತ್ತರೆ ಬೇರೆಯ ಬಗೆಯ ವಸೂಲಿ. "ಅಣ್ಣ ಅಣ್ಣ, ನನ್ನ ಹತ್ರ ಪೆನ್ನಿಲ್ಲ/ಪುಸ್ತಕವಿಲ್ಲ. ತಗೋಳೋಕೆ ದುಡ್ಡು ಕೊಡಿ. ನಂಬಿಕೆ ಇಲ್ಲದಿದ್ರೆ ಇಲ್ಲೇ ಹತ್ತಿರದಲ್ಲಿ ಅಂಗಡಿ ಇದೆ ಕೊಡ್ಸಿ ಅಣ್ಣ " ಅಂತ ಬೇಡೋ ಮಕ್ಕಳು.  ಮೊದಲನೆಯದು ಒಂದು ರೀತಿಯಲ್ಲಿ ಹಿಂದಿನಿಂದ ಇದ್ದಿದ್ದೇ. ಆದರೆ ಎರಡನೆಯದು ಮಾತ್ರ ಭಿಕ್ಷೆ ಬೇಡುವ ಹೊಸ ಪರಿ. ನನಗೆ ಆಶ್ಚರ್ಯವಾಗಿದ್ದು ಇವರು ದುಡ್ಡು ಬಿಟ್ಟು ಪುಸ್ತಕ ಪೆನ್ನನ್ನು ಕೇಳಲು ತೊಡಗಿದ್ದು ಹೇಗೆ ಎಂದು.

"community service" ಇತ್ತೀಚಿನ ದಿನಗಳಲ್ಲಿ ತಲೆಯೆತ್ತುತಿರುವ ಹೊಸ ಬಗೆಯ ಹವ್ಯಾಸ. ಜನರ ಸೇವೆಯ ಹೆಸರಿನಲ್ಲಿ ಉಳ್ಳವರಿಂದ ಹಣ ಸಂಗ್ರಹಿಸಿ, ಬಡವರನ್ನು ಹುಡುಕಿ ಅವರಿಗೆ ಸಹಾಯ ಮಾಡುವಂತದ್ದು.  ಇಂತವರು ಹೆಚ್ಚಾಗಿ ಸಹಾಯ ಮಾಡುವುದು ಶಾಲಾ ವಿದ್ಯಾರ್ಥಿಗಳಿಗೆ; ಪುಸ್ತಕ, ಪೆನ್ನು, ಪೆನ್ಸಿಲ್ ಬಟ್ಟೆ ಇತ್ಯಾದಿ ಹಂಚುವುದು. ಪಟ್ಟಣದಿಂದ ಆಗಾಗ್ಗೆ ಇಂಥವರು ಬಂದು ಪುಕ್ಕಟೆಯಾಗಿ ಪುಸ್ತಕ, ಪೆನ್ಸಿಲ್, ಪೆನ್ನು ಕೊಟ್ಟುಹೋಗುವುದನ್ನು ಕಂಡ ಮಕ್ಕಳು, ಅವರ ಹೆತ್ತವರು ಹಿಂದಿನ ರೀತಿ ಭಿಕ್ಷೆ ಬೇಡುವುದಕ್ಕಿಂತ ಪುಸ್ತಕ ಪೆನ್ನಿಗಾಗಿ ಕೇಳಿದರೆ ಜನರು ಹಣ ಕೊಡುತ್ತಾರೆ ಎಂಬುದನ್ನು ಮನಗಂಡರೇನೋ. ಕೊಕ್ಕರೆ ಬೆಳ್ಳೂರಿನಂತಹ ಹಳ್ಳಿಗೆ ವಾರಾಂತ್ಯದಲ್ಲಿ ಕನಿಷ್ಟಪಕ್ಷ ೧೦-೧೫ ಜನ ಭೇಟಿ ಕೊಟ್ಟರೂ ಪ್ರತಿಯೊಂದು ಮಕ್ಕಳಿಗೆ ೭ ದಿನಗಳಲ್ಲಿ ಅಷ್ಟೊಂದು ಪೆನ್ನು, ಪುಸ್ತಕಗಳ ಅವಶ್ಯಕತೆಯಾದರೂ ಏನುಂಟು? "community service"ನ ಹೆಸರಲ್ಲೋ, ನಾವೇ ಖುದ್ದಾಗಿ ಮಕ್ಕಳಿಗೆ ಪುಸ್ತಕ ಕೊಡಿಸಿದರೂ ಅವುಗಳನ್ನು ಮತ್ತೆ ಅಂಗಡಿಗೆ ಮಾರುವುದಿಲ್ಲ ಎಂದು ಹೇಗೆ ತಿಳಿಯುವುದು?

"community service"ನಲ್ಲಿ ತೊಡಗಿಸಿಕೊಂಡವರ ಉದ್ದೇಶ ಒಳ್ಳೆಯದಿರಬಹುದು. ಆದರೂ ಸಮಸ್ಯೆಯ ಮೂಲ ತಿಳಿಯದೆಯೆ ತಾತ್ಕಾಲಿಕ ಪರಿಹಾರ ಕೊಡಲು ಹೋದರೆ ಮೀನು ಕೊಟ್ಟಂತಾಗುತ್ತದೆ; ನಾಳೆ ಮೀನಿಗಾಗಿ ಮತ್ತೆ ಕೈ ಒಡ್ಡುವಂತಾಗುತ್ತದೆ. ಅದರ ಬದಲು ಸಮಸ್ಯೆಯ ಮೂಲದತ್ತ ಚಿಂತಿಸಿದರೆ ಒಳಿತಲ್ಲವೇ?

ಕಳೆದ ವಾರಾಂತ್ಯ ಇಂತಹ ಹಲವು ಮಕ್ಕಳನ್ನು ನೋಡಿ ನೋಡಿ ಬೇಸತ್ತು (ಯಾರಿಗೂ ಏನೂ ಕೊಡಲಿಲ್ಲ), ಕೊನೆಯಲ್ಲಿ ಬಂದವನ ಬಳಿ, ಅವನು ಮಾತನಾಡುವ ಮೊದಲೇ, "ತಮ್ಮಾ, ಪುಸ್ತಕ ಕೊಡ್ಸು" ಅಂತ ಕೇಳಿದೆ. ನನ್ನನ್ನೊಮ್ಮೆ ನೋಡಿ ಏನೂ ಹೇಳದೆ ಹಿಂದಿರುಗಿದ. ಜೊತೆಯಲ್ಲಿದ್ದ ರವಿ, "ಮುಂದಿನ ಬಾರಿ lap top ಕೊಡ್ಸೋಕೆ ಕೇಳ್ಕೊಳಿ" ಅಂದ್ರು.

Monday, August 30, 2010

Friday, August 27, 2010

ಕವಿ ಶೈಲ

ಮನೇ ಮನೇ ಮುದ್ದು ಮನೇ
ಮನೇ ಮನೇ ನನ್ನ ಮನೇ
--
ಕುವೆಂಪು


ಕವಿ ಮನೆ
ಕವಿ ಮನೆ


ಮಿತ್ರರಿಗೆ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ
ಮೌನವ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
--
ಕುವೆಂಪು

ಕವಿ ಸಮಾಧಿ
ಕವಿ ಸಮಾಧಿ


ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ
--
ಕುವೆಂಪು

ಕವಿ ಹಸ್ತ್ರಾಕ್ಷರ
ಟಿ.ಎಸ್.ವೆಂ., ಬಿ.ಎಂ.ಶ್ರೀ., ಕು.ವೆಂ.ಪು., ಪೂ.ಚಂ.ತೇ. ಹಸ್ತಾಕ್ಷರ

Wednesday, August 25, 2010

ನಾಗೇಶ್ ಹೆಗಡೆ

ಕನ್ನಡದ ಖ್ಯಾತ ಪತ್ರಕರ್ತರಾದ ನಾಗೇಶ್ ಹೆಗಡೆಯವರು ಅವರ ಮನೆಯ ಆವರಣದಲ್ಲಿ ಬೆಳಗಿನ ಜಾವ ಕಾಣಿಸಿದ್ದು ಹೀಗೆ

Nagesh Hegde

Tuesday, August 24, 2010

ಕೆಳದಿಯ ರಾಮೇಶ್ವರ ದೇವಾಲಯ

ಯಾದವ/ಮುರಾರಿ (ಕೆಳದಿಯ ರಾಜ್ಯ ಸ್ಥಾಪನೆಯ ಉದ್ದೇಶಕ್ಕಾಗಿ ತಮ್ಮೊಡೆಯನಿಗೆ ಸಿಕ್ಕಿದ ನಿಧಿಯನ್ನು ವಶಕ್ಕೆ ತೆಗೆದುಕೊಳ್ಳಲು ಸ್ವ-ಇಚ್ಛೆಯಿಂದ ಬಲಿಯಾದವರು)

CSC_7823

ಗರ್ಭಗುಡಿಯ ಮೇಲ್ಛಾವಣಿಯಲ್ಲಿನ ಗಂಢಭೇರುಂಡ ಎಂಬ ಕಾಲ್ಪನಿಕ ಪಕ್ಷಿಯ ಉಬ್ಬು ಕೆತ್ತನೆ

GANDABHERUNDA

ಸ್ಥೂಪದಲ್ಲಿ ಕೆತ್ತಿದ ಸುಂದರ ಗಣೇಶನ ಕೆತ್ತನೆ

ಗಣೇಶ

ಗರ್ಭಗುಡಿಯ ಒಂದು ನೋಟ

CSC_7806

ರಾಜ ಮತ್ತಾತನ ಪರಿವಾರ

KING

ಅಭಿಷೇಕದ ತೀರ್ಥ ಸಂಗ್ರಹವಾಗುವ ಸ್ಥಳ (ಇದಕ್ಕೆ ಏನಂತಾರೆ ತಿಳಿದಿಲ್ಲ-ತಿಳಿದವರು ತಿಳಿಸಿದರೆ ಆಭಾರಿ)

TEERTHA

ಶಿವನ ವಿಶಿಷ್ಟ ಆರಾಧಕ ಭೃಂಗಿ (ಪಾರ್ವತಿಯಿಂದ ಶಾಪಕ್ಕೊಳಗಾಗಿ ದೇಹದ ರಕ್ತ ಮಾಂಸಾದಿಗಳನ್ನು ಕಳೆದುಕೊಂಡು ದುರ್ಭಲನಾದಾಗ, ಶಿವ ಮೂರನೇ ಕಾಲನ್ನು ಕರುಣಿಸುತ್ತಾನೆ.)

ಭೃಂಗಿ

ಇನ್ನಷ್ಟು ಚಿತ್ರಗಳಿಗೆ ಈ ಕೆಳಗಿನ ಆಲ್ಬಮ್ಮಿಗೆ ಭೇಟಿ ಕೊಡಿ:

http://www.flickr.com/photos/palachandra/sets/72157624577769179/

Thursday, August 19, 2010

ಮೂರ್ಬಣ್ಣದ ಮುನಿಯ

ಬಿಳಿ ಅಥವಾ ಬೆಳ್ಳಿ ಬಣ್ಣದ ಕೊಕ್ಕು, ಕಡು ಕಪ್ಪು ತಲೆ, ಕುತ್ತಿಗೆಯಿಂದ ದೇಹದ ಕೆಳಭಾಗದವರೆಗೆ ಎರಡೂ ಕಡೆ ಹರಿಯುವ ಬಿಳಿಯ ಪಟ್ಟೆ, ಕಪ್ಪಾದ ಎದೆಯ ಭಾಗ, ಕಂದು ಬಣ್ಣದ ಮೇಲ್ಮೈ ಇರುವ ಈ ಹಕ್ಕಿ ಚಿಕ್ಕ ಪುಟ್ಟ ಹುಲ್ಲಿನ ನಡುವೆ ಗುಂಪು ಗುಂಪಾಗಿ ಕಾಣಿಸುತ್ತವೆ. ಹಾರಿದರೆ ಹೂವೊಂದು ಸುರುಳಿ ಸುರುಳಿಯಾಗಿ ಗಿರ್ಕಿ ಹೊಡೆಯುತ್ತಾ ಮೇಲೇರಿದ ಅನುಭವ. ಕೊಕ್ಕು ಗಿಳಿಯ ಕೊಕ್ಕಿನಂತೆ ಬಲಿಷ್ಟವಾಗಿದ್ದು ಇದರ ಆಹಾರವಾದ ಕಾಳು, ಧಾನ್ಯವನ್ನು ತಿನ್ನಲು ಅನುಕೂಲವಾಗಿದೆ. ಜವುಗು ಹುಲ್ಲುಗಾವಲಿನಲ್ಲಿ ಕಾಣಬರುವ ಈ ಹಕ್ಕಿ ಗಾತ್ರದಲ್ಲಿ ಗುಬ್ಬಿಗಿಂತಲೂ ಕೊಂಚ ಚಿಕ್ಕದು.

ಈ ಬಾರಿ ಕೋಟಕ್ಕೆ ಹೋದಾಗ ಸಮುದ್ರದ ಬಳಿಯ ಗದ್ದೆಯಂಚಿನಲ್ಲಿ ಕಾಣಿಸಿದ ಈ ಸುಂದರ ಹಕ್ಕಿಯ ಚಿತ್ರ ತೆಗೆಯಲು ಪ್ರಯತ್ನಿಸಿದೆ. ತುಂಬಾ ಪುಟ್ಟ ಹಕ್ಕಿಯಾದ್ದರಿಂದ ಕೆಳಗಿನದಕ್ಕಿಂತ ಸಮೀಪದಿಂದ ತೆಗೆಯಲಾಗಲಿಲ್ಲ.

TRICOLORED MUNIA

Thursday, August 12, 2010

ಮಳೆಗಾಲದ ಸೈಕಲ್ ಸವಾರಿ

ಕಳೆದ ವರ್ಷದ ಮಳೆಗಾಲ ಮುಗಿಯುತ್ತಾ ಬಂದ ಸಮಯ. ಹಾಸನದಲ್ಲಿ ನನ್ನ ಸ್ನೇಹಿತನೊಬ್ಬನ ಮದುವೆ ಮುಗಿಸಿ ಊರಿಗೆ ಹೊರಟಿದ್ದೆ. ಶಿರಾಡಿ ಘಾಟಿ, ಮಧ್ಯಾಹ್ನ ೩ರ ಸಮಯ, ಸುತ್ತ ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ, ಸೋನೆ ಮಳೆ, ಸ್ವಚ್ಛ ಹವೆ, ತೋಯ್ದ ಮರಗಳು ಐಪಾಡ್ ಕಿವಿಯಲ್ಲಿ "ಎಲ್ಲೋ ಮಳೆಯಾಗಿದೆಯೆಂದು" ಹಾಡು ಕೇಳಿಸುತಿತ್ತು. ಊರಿನವರೆಗೂ ಟಿಕೇಟ್ ಕೊಂಡಿದ್ದರೂ, ಈಗಲೇ ಊರಿಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆ ಎದ್ದಿತು. ತಡಮಾಡಲಿಲ್ಲ, ಎದ್ದು ಡ್ರೈವರ್ ಬಳಿ ಬಸ್ ನಿಲ್ಲಿಸಲು ಹೇಳಿ ಅಲ್ಲಿಯೇ ಇಳಿದುಕೊಂಡೆ. ಕೊಡೆಯಿಲ್ಲ, ರೈನು ಕೋಟಿಲ್ಲ, ಮಳೆಯಲ್ಲೇ ನೆನೆಯುತ್ತಾ ಘಾಟಿ ಇಳಿಯತೊಡಗಿದೆ. ಕತ್ತಲಾಗದೇ, ಹೊಟ್ಟೆಗೆ ಏನಾದರೂ ಸಿಕ್ಕಿದ್ದರೆ ಜೀವನದ ಕೊನೆಯವರೆಗೂ ಹಾಗೆಯೇ ನಡೆಯುತ್ತಿದೆನೇನೋ. ಹಾಗಾಗಲಿಲ್ಲ, ಸಿಕ್ಕ ಲಾರಿಯೊಂದನ್ನು ಹತ್ತಿಕೊಂಡು ಕುಕ್ಕೆ ಸುಬ್ರಮಣ್ಯ ತಲುಪಿದೆ. ಕುಮಾರಧಾರೆ ಸೇತುವೆ ಮೀರಿ ಹರಿಯುತ್ತಿತ್ತು, ಕರಾವಳಿಯ ಧಾರಾಕಾರ ಮಳೆ, ಮಲೆನಾಡ ಹಸಿರು. ದೇವಸ್ಥಾನಕ್ಕೂ ಹೋಗದೆ ರಥ ಬೀದಿ, ಹೊಳೆಯ ಬದಿ ಒಬ್ಬನೇ ತಿರುಗಾಡಿಕೊಂಡು, ರಾತ್ರಿ ರೂಮನ್ನು ಬಾಡಿಗೆಗೆ ಕೊಂಡು ಬೆಳೆಗೆದ್ದು ಮನೆಗೆ ಹೊರಟೆ..

ಮೊನ್ನೆ ಮಲೆನಾಡ ಪ್ರವಾಸ ಕೈಗೊಂಡಾಗಲೂ ಇದೇ ಆಗಿದ್ದು. ಜೋಗ ನೋಡಿದ ನಂತರ ನಾವು ಹೋಗಬೇಕಾಗಿದ್ದುದು ಯಾವುದೋ ಮಠವನ್ನು ನೋಡಲು, ಸುಮಾರು ೨ ಗಂಟೆ ವಾಹನದಲ್ಲಿ ಕುಳಿತು ಪಯಣ. ಹಾಗೇ ಸಾಗುತ್ತಾ ಇದ್ದಾಗ ವಿಶಾಲವಾದ ಗದ್ದೆಬಯಲು ಎದುರಾಯಿತು. ಈಗಷ್ಟೆ ನೆಟ್ಟಿ ಮಾಡಿದ್ದು, ಹಚ್ಚ ಹಸುರು. ಕ್ಯಾಬ್ ನಿಲ್ಲಿಸಲು ಹೇಳಿ ಕೂಡಲೇ ಕೆಳಗಿಳಿದೆ. ರಾಜ ಮಾರ್ಗದ ಮಗ್ಗುಲಲ್ಲಿ ಕಿರಿದಾದ ರಸ್ತೆ, ಅಕ್ಕ ಪಕ್ಕದಲ್ಲಿ ಗದ್ದೆ, ಡೊಂಕಾದ ರಸ್ತೆಯ ದೂರದಲ್ಲಿ ಸೈಕಲ್ ಸವಾರ. ನಾನು ಫೋಟೋ ತೆಗೆಯುವುದರೊಳಗೆ ಆತ ಮುಂದೆ ಹೋಗಬಹುದೆಂದು ಓಡತೊಡಗಿದೆ. ಇನ್ನೇನು ಹತ್ತಿರ ಬಂದೆ, ಅಷ್ಟರಲ್ಲಿ ಆತ ಹೋಗಿಯಾಗಿತ್ತು. ಹಿಂದೆ ನೋಡಿದೆ, ಮಿತ್ರ ಅನಿಲ್ ಹಿಂಬಾಲಿಸುತ್ತಿದ್ದನು. ಅವನ ಮುಖ ನೋಡಿ, "ಹೋಗ್ಬೇಕಾ ಮಠಕ್ಕೆ?" ಕೇಳಿದೆ. ಆತನಿಗೂ ಸ್ಥಳ ಹಿಡಿಸಿದ್ದರಿಂದ ಹಳ್ಳಿಯ ದಾರಿ, ಗದ್ದೆಯ ಅಂಚಿನಲ್ಲಿ ನಡೆಯುತ್ತಾ, ರೈತರೊಂದಿಗೆ ಮಾತಿಗಿಳಿಯುತ್ತಾ, ನನಗೆ ಬೇಕಾದ ಚಿತ್ರ ತೆಗೆಯುತ್ತಾ ಸಂತೋಷವಾಗಿದ್ದೆ. ಉಳಿದವರು ತಮ್ಮ ಪ್ರಯಾಣ ಮುಂದುವರೆಸಿದರು. ಹಾಗೆಯೇ ಕೆಳಗಿನವು ನಾ ಸೆರೆಹಿಡಿದ ಸೈಕಲ್ ಚಿತ್ರಗಳು.

ಮಳೆಯಲ್ಲಿ ತೋಯ್ದ ಸೈಕಲ್

BICYCLE PARKING

ಡಬ್ಬಲ್ ರೈಡಿನ ಮಜಾ

BICYCLE DOUBLE RIDE

ಮೋಡವನ್ನು ಹಿಂಬಾಲಿಸಿ

Chase the cloud

ಪರಿಸರ ಸ್ನೇಹಿ ವಾಹನ

CYCLIST


"If we admit that human life can be ruled by reason, then all possibility of life is destroyed."
— Leo Tolstoy

Tuesday, August 10, 2010

ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ ಮಾಲೀಕರು ಮಲೆನಾಡ ವೈವಿಧ್ಯವನ್ನು ತಮ್ಮ ಬ್ಲಾಗಿನಲ್ಲಿ ಚಿತ್ರಿಸುತ್ತಾ ಬಂದ ರಾಘವೇಂದ್ರ ಶರ್ಮ ತಲವಾಟರು. ಅನೇಕ ಮಲೆನಾಡಿನ ವೈವಿಧ್ಯಮಯ ಖಾದ್ಯಗಳನ್ನು ಮಳೆಗಾಲದಲ್ಲಿ ಉಣಬಡಿಸಿ ನಮ್ಮ ನಾಲಿಗೆ ಚಪಲವನ್ನು ಹೆಚ್ಚಿಸಿದ್ದಾರೆ.

ಕೃಷಿಯಲ್ಲಿ ತೊಡಗಿರುವ ಶರ್ಮಾರವರು ಜೇನುಸಾಕಣೆಯನ್ನೂ ಮಾಡುತ್ತಿದ್ದಾರೆ. ನಮಗೋಸ್ಕರ ತಮ್ಮ ಮನೆಯಲ್ಲಿನ ಜೇನುಪೇಟ್ಟಿಗೆಯನ್ನು ಹೊತ್ತುತಂದು ನಮಗೆ ತೋರಿಸಿದ್ದಕ್ಕೆ ಅವರಿಗೊಂದು ಧನ್ಯವಾದ.

ರಾಘವೇಂದ್ರ ಶರ್ಮಾ ತಲವಾಟರು

Raghavendra Talavaata

ಜೇನು ಪೆಟ್ಟಿಗೆಯೊಳಗೆ ನುಸುಳುತ್ತಿರುವ ಜೇನು

CSC_7349

ಜೇನಿನ ಹಲ್ಲೆಯೊಂದನ್ನು ಹೊರತೆಗೆಯುತ್ತಿರುವುದು

CSC_7135

ಗೂಡಿನ ತುಂಬ ಸಿಹಿ ತುಪ್ಪ

CSC_7343

ಗೂಡನ್ನು ಚೂರಿಯಿಂದ ಕೊಂಚ ಕತ್ತರಿಸಿದಾಗ ಒಸರಿದ ಜೇನು

CSC_7346

ತಾಜಾ ಜೇನು (ಉಳಿದವರು ಗೂಡಿನ ಜೊತೆ ತಿನ್ನಲು ಹಿಂದೆ ಮುಂದೆ ನೋಡಿದ್ದರಿಂದ ಹೆಚ್ಚು ಕಡಿಮೆ ಇದು ನನ್ನ ಹೊಟ್ಟೆ ಸೇರಿತು)

CSC_7348

ರಾಘವೇಂದ್ರ ಶರ್ಮಾ ತಲವಾಟ, ಅವರ ಹೋಂ ಸ್ಟೇಯಲ್ಲಿ

Raghavendra Talavaata

ಅಂದ ಹಾಗೇ ಹೋಂ ಸ್ಟೇ ಸೂಪರಾಗಿತ್ತು. ಹೆಚ್ಚಿನ ವಿವರಕ್ಕೆ ರಾಘವೇಂದ್ರರನ್ನು ಸಂಪರ್ಕಿಸಿ.

Tuesday, August 03, 2010

ಆಸರೆ

ಆಸರೆ

ನಿಸರ್ಗದಂತೆಯೇ ಮಾನವ ಸಂಬಂಧಗಳೂ ಮಧುರವಾದುದಲ್ಲವೇ?

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)