Thursday, February 24, 2011

ಸಿರಿಧಾನ್ಯ ಮೇಳ

ಸಿರಿಧಾನ್ಯದ ಅರಿವು ಜನರಲ್ಲಿ ಮೂಡಿಸುವುದೊಂದು ಪುಣ್ಯದ ಕೆಲಸ
NavaNe
"ಗಂಗಾವತಿಯಲ್ಲಿ ಕಳೆನಾಷಕ, ಕೀಟ ನಾಷಕ ಯಥೇಚ್ಛವಾಗಿ ಸಿಂಪಡಿಸಿ ಬೆಳೆಯುವ ಭತ್ತದಲ್ಲಿ ಅದೆಷ್ಟು ವಿಷ ತುಂಬಿರಬಹುದು ನೀವೇ ಊಹಿಸಿ. ಗೊಬ್ಬರ ನೀರು ಎಂಬುದಾಗಿ ಪ್ರತ್ಯೇಕ ಆರೈಕೆ ಬೇಡದ, ಉತ್ತಮ ಪೋಷಕಾಂಶಗಳನ್ನೊಳಗೊಂಡ ಸಿರಿಧಾನ್ಯಗಳ ಮಹತ್ವದ ತಿಳಿವು ಜನರಿಗೆ ಮೂಡಿಸುವುದೊಂದು ಪುಣ್ಯದ ಕೆಲಸ. ಇದಕ್ಕಾಗಿ ರೈತರು, ವ್ಯಾಪಾರಿಗಳು, ಗ್ರಾಹಕರು ಸಮಾನ ವೇದಿಕೆಯಲ್ಲಿ ಒಂದುಗೂಡುವುದು ಅವಶ್ಯ", ಕೃಷ್ಣಪ್ರಸಾದರು ಸಿರಿಧಾನ್ಯ ಮೇಳದ ಮಹತ್ವವನ್ನು ತಿಳಿಸಿದರು.

ಸಿರಿಧಾನ್ಯ ಮೇಳ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಗಾಂಧಿಭವನದಲ್ಲಿ ಫೆಬ್ರವರಿ ೫, ೬ರಂದು, ಸಹಜ ಸಮೃದ್ಧ, ಪ್ರಿಸ್ಟೀನ್ ಆರ್ಗಾನಿಕ್, ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜರಗಿತು. ಸಿರಿಧಾನ್ಯಗಳ ಪರಿಚಯ, ಆಹಾರ ಆರೋಗ್ಯದಲ್ಲಿ ಧಾನ್ಯಗಳ ಮಹತ್ವ ಜನರಿಗೆ ತಿಳಿಸುವುದು ಉದ್ದೇಶ. ಡಾ. ಶ್ರೀಕಂಠಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಡಾ. ಪ್ರೇಮ, ಚೆನ್ನಭೈರೇ ಗೌಡ, ಮಲ್ಲಿಕಾರ್ಜುನ ಹೊಸಪಾಳ್ಯ, ಕೃಷ್ಣಪ್ರಸಾದ ಸಿರಿಧಾನ್ಯದ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಂಡರು.

ಜನರಿಗೆ ಸಿರಿಧಾನ್ಯಗಳ ಪ್ರಾತ್ಯಕ್ಷಿಕ ಪರಿಚಯಕ್ಕಾಗಿ ಅವುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಇತ್ತು. ರಾಗಿ, ಮೂರು ತಿಂಗಳ ರಾಗಿ, ಸಣ್ಣಕಡ್ಡಿ ರಾಗಿ, ಜೇನು ಮುತ್ತಿಗೆ, ಹಸಿರು ಬುಂಡುಗ, ಪಿಚ್ಚ ಕಡ್ಡಿ, ಕುಳ್ಳ ರಾಗಿ, ಮಳಲಿ ರಾಗಿ ಹೀಗೆ ರಾಗಿಯಲ್ಲೇ ವೈವಿಧ್ಯತೆಗಳು. ಅಲ್ಲದೇ ನವಣೆ, ಕರಿ ನವಣೆ, ಎಡೆಯೂರು ನವಣೆ, ಹಾಲು ನವಣೆ, ಕೆಂಪು ನವಣೆ, ಬಿಳಿ ಜೋಳ, ಕೊರಲು, ಕರಿಸಾವೆ, ಆರಕ, ರಾಜ್ಗೀರ, ಇತ್ಯಾದಿ ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟವಿತ್ತು. ಅಲ್ಲದೇ ಈ ಸಿರಿಧಾನ್ಯಗಳಿಂದ ಮಾಡಿದ ಬಿಸ್ಕತ್ತು, ರೊಟ್ಟಿ, ಹಾಲಿನ ಜೊತೆ ಸೇವಿಸುವ ಪುಡಿ, ರಾಗಿಯ ಸಿಹಿ ಉಂಡೆ, ದೋಸೆ ಹಿಟ್ಟು, ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳನ್ನೂ ಜನರಿಗೆ ಪರಿಚಯಿಸಲಾಯ್ತು. ಇದರ ಜೊತೆಗೆ ಕೃಷಿ ಪುಸ್ತಕ ಮಳಿಗೆ, ಸಾವಯವ ಕೃಷಿ ಉತ್ಪನ್ನಗಳೂ ಮಾರಾಟಕ್ಕಿದ್ದವು.

Seeling Millet Seeds

ಡಯಟೀಶಿಯನ್ ಡಾ. ಪ್ರೇಮ ಸಿರಿಧಾನ್ಯದ ಅವನತಿ, ಅವುಗಳ ಮಹತ್ವದ ಬಗ್ಗೆ ತಿಳಿಸಿದರು. ಎರಡನೇ ಪ್ರಪಂಚ ಯುದ್ಧಾನಂತರ ದೇಶದಲ್ಲಿ ಆಹಾರಕ್ಕೆ ಹಾಹಾಕಾರ ಕಾಣಿಸಿಕೊಂಡಿತು. ಸರಕಾರದ ವತಿಯಿಂದ ಜಾರಿಗೆ ಬಂದ ಪಡಿತರ ವಿತರಣೆಯಲ್ಲಿ ಗೋಧಿ, ಅಕ್ಕಿಗೆ ಸ್ಥಾನ ದೊರೆಯಿತಾದರೂ ಸುಮಾರು ೨೫ ಬಗೆಯ ಸಿರಿಧಾನ್ಯಗಳು ಹೊರಗುಳಿದವು. ಸಹಜವಾಗಿ ಇವು ಜನರಲ್ಲಿ ಗೋಧಿ, ಅಕ್ಕಿಗಳು ಮಾತ್ರ ಸತ್ವಯುಕ್ತ ಆಹಾರ ಎಂಬ ತಪ್ಪು ಸಂದೇಶವನ್ನು ಜನರಲ್ಲಿ ಮೂಡಿಸಿತು.

ಅರವತ್ತರ ದಶಕದಲ್ಲಿ ಅಮೇರಿಕಾದಲ್ಲಿನ ಆಹಾರ ಕ್ರಾಂತಿಯ ಫಲವಾಗಿ ಅತಿಯಾಗಿ ಬೆಳೆಯಿಸಿದ ಗೋಧಿಯನ್ನು ಭಾರತದಂತಹ ದೇಶಗಳಿಗೆ ಪುಕ್ಕಟೆಯಾಗಿ ವಿತರಿಸಲಾಯ್ತು. ಅಲ್ಲಿಯವರ ಮತ್ತು ಗೋಧಿ ಬೆಳೆಯುವ ನಮ್ಮ ದೇಶದವರಾದ ಪಂಜಾಬಿನ ಜನರ ನೀಳವಾದ, ದಷ್ಟ ಪುಷ್ಟವಾದ ಮೈಕಟ್ಟೂ ಕೂಡ ಗೋಧಿ ಅತ್ಯುತ್ತಮ ಆಹಾರ ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೂಡಿಸಿತು. ಆದರೆ ಅವರ ಶಾರೀರಿಕ ರಚನೆಗೆ ವಂಶವಾಹಿ ಕಾರಣವೆಂಬುದನ್ನು ಗ್ರಹಿಸುವಲ್ಲಿ ಜನಮಾನಸ ವಿಫಲವಾಯ್ತು.

ಅಲ್ಲದೇ ಸರಕಾರ ಅಂಗನವಾಡಿ, ಬಾಲವಾಡಿಗಳಲ್ಲಿಯೂ ಗೋಧಿ, ಗೋಧಿಯ ಉತ್ಪನ್ನ ಮಕ್ಕಳಿಗೆ ಹಂಚಲಾರಂಭಿಸಿತು. ಮಕ್ಕಳು ಮೊದಲಿಗಿಂತಲೂ ದೈಹಿಕವಾಗಿ, ಮಾನಸಿಕವಾಗಿ ಚೆನ್ನಾಗಿ ಬೆಳೆಯಲಾರಂಭಿಸಿದರು. ಯಾವುದೇ ಆಹಾರ ನಾಲ್ಕು ತುತ್ತು ಹೆಚ್ಚು ತಿಂದಿದ್ದರೂ ಚೆನ್ನಾಗಿ ಬೆಳೆಯುತ್ತಿದ್ದರು ಎಂಬುದರ ಬದಲಿಗೆ ಗೋಧಿ ಸೇವಿಸಲಾರಂಭಿಸಿದ್ದು ಈ ಬದಲಾವಣೆ ಕಾರಣ ಎಂಬ ಇನ್ನೊಂದು ತಪ್ಪು ಕಲ್ಪನೆ ಜನರಲ್ಲಿ ಬೇರೂರಿತು.

ಅಭಿವೃದ್ಧಿ, ಆಧುನಿಕತೆ ಹಾಗೂ ಇಳುವರಿಯನ್ನೇ ಗುರಿಯಾಗಿಟ್ಟುಕೊಂಡ ಕೃಷಿ ಪದ್ಧತಿಗೂ ಸಿರಿಧಾನ್ಯಗಳು ಬಲಿಯಾದವು. ಪರಿಣಾಮ ಜನರು ಸಿರಿಧಾನ್ಯಗಳನ್ನು ಮರೆಯಲಾರಂಭಿಸಿದರು. ಇದರಿಂದ ಇವುಗಳನ್ನು ಬೆಳೆಯುತ್ತಿದ್ದ ರೈತರಿಗೂ ಹೊಡೆತ, ಜನರ ಆರೋಗ್ಯದ ಮೇಲೂ ಹೊಡೆತ
.
“ಜೀವನ ಶೈಲಿ ಚೆನ್ನಾಗಿದ್ದರೆ ಆರೋಗ್ಯವಿರುತ್ತದೆ. ಜೀವನಶೈಲಿಗೂ ನಮ್ಮ ಆಹಾರಾಭ್ಯಾಸಕ್ಕೂ ನಿಕಟ ಸಂಬಂಧ” ಎಂದು ಡಾ. ಶ್ರೀಕಂಠಯ್ಯನವರು ಜನರ ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಮಹತ್ವ ತಿಳಿಸಿದರು. ಸಿರಿಧಾನ್ಯಗಳು ಕೇವಲ ಬರಗಾಲದ ಆಹಾರಮಾತ್ರವಲ್ಲ, ಆರೋಗ್ಯಕರ ಆಹಾರ ಪದ್ಧತಿ ಕೂಡ. ಗೋಧಿ, ಅಕ್ಕಿಗಿಂತ ನಾಲ್ಕು ಪಟ್ಟು ಇದರಲ್ಲಿ ಆಹಾರಾಂಶವಿದೆ. ಸಿರಿಧಾನ್ಯಗಳು ಅಧಿಕ ಅಮಿಲೋಸ್ ಅಂಶವನ್ನು ಹೊಂದಿದ್ದು, ನಾರಿನಂಶ (ಡಯಟರಿ ಫೈಬರ್) ಗಳ ಅತ್ಯುತ್ತಮ ಮೂಲಗಳಾಗಿವೆ. ಇವು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದಲ್ಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಆಧುನಿಕ ಆಹಾರ ಪದ್ಧತಿಯ ಬಹುಮುಖ್ಯ ಅಡ್ಡಿಯೆಂದರೆ ನಾರಿನಂಶದ ಕೊರತೆ.


ಧಾನ್ಯ

ಅಕ್ಕಿ

ಗೋಧಿ

ರಾಗಿ

ನವಣೆ

ಸಾಮೆ

ಹಾರಕ

ಕೊರಲು

ಊದಲು

ನಾರಿನಂಶ

5.2%

12.9%

18.8%

17.62%

15.08%

17.0%

14.2%

13.7%


ಸಿರಿಧಾನ್ಯಗಳಲ್ಲಿರುವ ಖನಿಜಾಂಶಗಳು ಗಮನಾರ್ಹ. ಮಾತ್ರೆಗಳು ಭರ್ಜರಿಯಾಗಿ ಮಾರಾಟವಾಗುತ್ತಿರುವ ಇಂದಿನ ದಿನಗಳಲ್ಲಿ, ಆ ಸ್ಥಾನವನ್ನು ಸಿರಿಧಾನ್ಯಗಳು ಸಮರ್ಥವಾಗಿ ತುಂಬುತ್ತವೆ.


ಧಾನ್ಯ

ಅಕ್ಕಿ

ಗೋಧಿ

ರಾಗಿ

ನವಣೆ

ಸಾಮೆ

ಸಜ್ಜೆ

ಊದಲು

ಕ್ಯಾಲ್ಸಿಯಂ
(ಮಿಲಿಗ್ರಾಂ/
100 ಗ್ರಾಂಗೆ)

10

41

344

31

17

42

11

ಕಬ್ಬಿಣ
(ಮಿಲಿಗ್ರಾಂ/
100 ಗ್ರಾಂಗೆ)

0.7

5.3

3.9

2.8

9.3

8.0

15.2

ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಪ್ಲೆವನೋಯ್ಡ್ಸ್ ಹಾಗೂ ಫೈಟೋಆಲೆಕ್ಸಿನ್ನಂಥ ಫೈಟೋನ್ಯೂಟ್ರಿಯಂಟ್ಸ್ಗಳನ್ನು ಸಿರಿಧಾನ್ಯಗಳು ಹೊಂದಿವೆ. ಇವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ಗಳು. ಸಿರಿಧಾನ್ಯಗಳು ಕೇವಲ ಕಾರ್ಬೋಹೈಡ್ರೇಟ್ ಮಾತ್ರವಲ್ಲ, ಉತ್ತಮ ಗುಣಮಟ್ಟದ ಕೊಬ್ಬನ್ನು ಕೂಡ ಪೂರೈಸುತ್ತದೆ. ಉದಾಹರಣೆಗೆ ಸಜ್ಜೆಯಲ್ಲಿರುವ ಕೊಬ್ಬಿನಲ್ಲಿ ಶೇಕಡಾ 2.3ರಿಂದ ಶೇಕಡಾ 5.8ರಷ್ಟು ಒಮೆಗಾ-3 ಕೊಬ್ಬಿನಾಮ್ಲ ಇರುತ್ತದೆ.

“ತುಮಕೂರು, ಅನಂತಪುರ ಜಿಲ್ಲೆಯಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಸಿರಿಧಾನ್ಯಗಳಲ್ಲೊಂದಾದ ಕೊರಲೆ ಈಗ ಕಣ್ಮರೆಯಾಗುತ್ತಿರುವ ಬೆಳೆ”, ಮಲ್ಲಿಕಾರ್ಜುನ ಹೊಸಪಾಳ್ಯರು ಕೊರಲೆಯ ಪರಿಚಯ ಮಾಡಿಸಿದರು. ಆಧುನಿಕ ಕೃಷಿಯ ಸುಳಿಗಾಳಿಗೆ ಸಿಲುಕಿ ನಲುಗುತ್ತಿರುವ "ಕೊರಲೆ"ಯ ಬಗ್ಗೆ ಮಾಹಿತಿ ಕಲೆಹಾಕಿ, “ಕಣ್ಮರೆಯ ಹಾದಿಯಲ್ಲಿ ಕೊರಲೆ” ಪುಸ್ತಕದಲ್ಲಿ ಇವರು ದಾಖಲಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಈ ಪುಸ್ತಕವನ್ನು ಡಾ. ಶ್ರೀಕಂಠಯ್ಯ ಅನಾವರಣಗೊಳಿಸಿದರು. ಸಿರಿಧಾನ್ಯಗಳ ಬೀಜದ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರ ವಿಳಾಸವೂ ಪುಸ್ತಕದಲ್ಲಿದೆ. ಬೆಂಗಳೂರಿನ ಸಹಜ ಸಮೃದ್ಧ, ತುಮಕೂರಿನ ಧಾನ್ಯ ಸಂಸ್ಥೆ, AICSMIP ಜಂಟಿ ಪ್ರಕಾಶನದಲ್ಲಿ ಹೊರಬಂದ ಈ ಪುಸ್ತಕದ ಬೆಲೆ 10 ರೂಪಾಯಿಗಳು.

KORALE BOOK Release

ಕಾರ್ಯಕ್ರಮದ ಅಂತ್ಯದಲ್ಲಿ ರೈತರಿಗೆಂದೇ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಇದರಲ್ಲಿ ಗಮನ ಸೆಳೆದ ಒಂದು ಪ್ರಶ್ನೆ, “ರೈತ ಜನರ ಅವಶ್ಯಕತೆ ನೋಡಿ ಬೆಳೆಯಬೇಕೆ ಅಥವಾ ತನ್ನ ಅವಶ್ಯಕತೆ ನೋಡಿಯೇ ಎಂದು. ಏಕೆಂದರೆ ಸಿರಿಧಾನ್ಯಗಳನ್ನು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಬೆಳೆಯಿಸಿದರೂ ಕೊನೆಯಲ್ಲಿ ರೈತರಿಗೆ ಅದು ಲಾಭದಾಯಕವೇ?” ಎಂಬುದು. ಅದಕ್ಕೆ ಉತ್ತರಿಸಿದ ಇನ್ನೊಬ್ಬ ರೈತ ಮಿತ್ರರು, “ಸಿರಿಧಾನ್ಯದ ಮಹತ್ವ ಜನರಿಗಿನ್ನೂ ಪರಿಚಯವಾಗುವ ಹಂತದಲ್ಲಿದೆ. ಮೊದಲಿಗೆ ನಿಮ್ಮ ಮನೆಗೆ ಬೇಕಾದಷ್ಟು ಬೆಳೆಯಿರಿ. ಸ್ವಲ್ಪ ನಿಮ್ಮ ಸುತ್ತಮುತ್ತಲಿನವರಿಗೆ ಪರಿಚಯಿಸಿ. ನಿಧಾನವಾಗಿ ಜನರಿಗೆ ಪರಿಚಯವಾಗುತ್ತದೆ. ನಂತರ ಬೇಡಿಕೆ ಬರುತ್ತದೆ” ಎಂದರು.

Tuesday, February 15, 2011

ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ

ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಅರ್ಕಾ, ಊದಲು, ಕೊರ್ಲು, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ ಸಿರಿ ಧಾನ್ಯಗಳ ಜಾಲ(ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ, 'ಮಿನಿ')ದ ಸಹಯೋಗದೊಂದಿಗೆ ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಒರಟುಧಾನ್ಯಗಳೆಂದು ಕಡೆಗಣಿಸಲ್ಪಟ್ಟಿರುವ, ಆದರೆ ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಮತ್ತು ಆಹಾರ ಭದ್ರತೆಗೆ ಪೂರಕವಾಗಿರುವ ಈ ಆಹಾರಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪಾಕವಿಧಾನ ದಾಖಲಾತಿ, ಪ್ರಚಾರವೂ ಸೇರಿದೆ.

ಆಸಕ್ತರು ಸಿರಿಧಾನ್ಯಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯ ಬಗ್ಗೆ ವಿವರ ಕಳಿಸುವಂತೆ ಕೋರಿಕೆ. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಪ್ರವೇಶಗಳನ್ನು ಕಳುಹಿಸುವಾಗ ಅಡುಗೆಗೆ ಬೇಕಾಗುವ ಸಾಮಗ್ರಿಗಳು, ಪಾಕ ವಿಧಾನ, ಆರೋಗ್ಯದ ದೃಷ್ಟಿಯಲ್ಲಿ (ರುಚಿ, ಶಕ್ತಿ, ಸತ್ವ, ಋತುಮಾನಕ್ಕನುಗುಣವಾಗಿ ಸೇವನೆ, ತಾಳಿಕೆ) ಅದರ ಮಹತ್ವ, ರಾಜ್ಯದ ಯಾವ ಭಾಗದಲ್ಲಿ ಈ ಅಡುಗೆ ಜನಪ್ರಿಯ ಇತ್ಯಾದಿ ವಿವರಗಳನ್ನು ನಮೂದಿಸಬೇಕು. ಜತೆಗೆ ಪ್ರವೇಶ ಕಳುಹಿಸುವವರ ಪುಟ್ಟ ಪರಿಚಯ (ಹೆಸರು, ಉದ್ಯೋಗ, ವಿಳಾಸ ಹಾಗೂ ಸಿರಿಧಾನ್ಯಗಳ ಕುರಿತು ಆಸಕ್ತಿಯ ಕಾರಣ) ಬರೆದಿರಬೇಕು. ಆಯ್ದ 10 ಪಾಕವಿಧಾನಗಳಿಗೆ ಬಹುಮಾನ ನೀಡಲಾಗುವುದು. ಎಲ್ಲ ಉತ್ತಮ ಪಾಕವಿಧಾನಗಳ ವಿವರವನ್ನು ಸಿರಿಧಾನ್ಯ ಕುರಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:
ಕೃಷಿ ಮಾಧ್ಯಮ ಕೇಂದ್ರ,
119, 1ನೇ ಮುಖ್ಯರಸ್ತೆ,
ನಾಲ್ಕನೇ ಅಡ್ಡರಸ್ತೆ,
ನಾರಾಯಣಪುರ,
ಧಾರವಾಡ - 580 008.

ಮಾಹಿತಿ ಕೃಪೆ: Centre for Agricultural Media CAM

ಪ್ರವೇಶ ತಲುಪಲು ಕೊನೆಯ ದಿನಾಂಕ: ಮಾರ್ಚ್ 20, 2011.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)