Thursday, June 25, 2009

ನನ್ನಬ್ಬಿ

"ತಾರೇ ಜಮೀನ್ ಪರ್" ನ "ಮೇರಿ ಮಾ" ಹಾಡಿನ ಕೋಟ(ಕುಂದ)ಗನ್ನಡಾನುವಾದ

ಅಬ್ಬೇ,
ನಾ ಏಗ್ಳಿಗೂ ಬಾಯ್ಬಿಟ್ ಹೇಳುದಿಲ್ಲೆ
ಆದ್ರೆ ಬೈಗಾರ್ಕೂಳೆ ನಂಗೆ ಹೆದ್ರಿಕೆಯಾತ್ತಬ್ಬಿ
ನಾ ತೋರ್ಸ್ಕಂತಿಲ್ದಿರೂ
ನಿನ್ ಮೇಲ್ ನಿಗಾ ಇತ್ತಬ್ಬಿ
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..
ನನ್ನಬ್ಬಿ

ಈ ನಮ್ನಿ ಗಲಾಟೀಲಿ ನನ್ ಕೈ ಬಿಡ್ಬೇಡ
ನಂಗೆ ಮತ್ತೆ ಮನೀಗ್ ಬಪ್ಪುಕಾತ್ತಿಲ್ಲ
ಕಂಡಾಪಟಿ ದೂರ ಕಳ್ಸ್ಬೇಡ
ನಾ ಹಮ್ಲಲ್ಲಿರ್ತ್ನಲ್ದ
ನಾನೇನ್ ಅಷ್ಟಪ ಕೆಟ್ಟವ್ನ
ನಾನೇನ್ ಅಷ್ಟಪ ಕೆಟ್ಟವ್ನ.. ನನ್ನಬ್ಬಿ
ನನ್ನಬ್ಬಿ

ಅಪ್ಪಯ್ಯ ಏಗ್ಳಿಗಾದ್ರೂ ಒಂದೊಂದ್ ಸಲ
ಜೋರ್ ಮಾಡಿ ಹೊಡಿತ್ರಬ್ಬಿ
ನನ್ ಕಣ್ ಆಗ ನಿನ್ನನ್ನೆ ಹುಡ್ಕತ್
ನೀ ಬಂದ್ಕಂಡ್ ನನ್ ತಬ್ಕಂತೆ ಅಂದ್ಕಂಡ್
ಆ ಗಳ್ಗಿಲಿ ನಂಗೆ ಹೇಳುಕಾತ್ತಿಲ್ಲ
ನಂಗೊಳ್ಗೊಳ್ಗೆ ಪುಕು ಪುಕು ಆತ್
ನಿಂಗೆಲ್ಲಾ ಗೊತಿತಲ್ದಾ
ನಿಂಗೆಲ್ಲಾ ಗೊತಿತ್.. ನನ್ನಬ್ಬಿ..

Wednesday, June 17, 2009

ಕ್ರಾಪಿಂಗ್ - ಒಂದು ಉದಾಹರಣೆ

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.


ಈ ಮೇಲಿನ ಚಿತ್ರ ಹಾಲು ಕುಡಿಯುತ್ತಿರುವ ಮರಿಯದ್ದು. ಇಲ್ಲಿ ಫ್ರೇಮಿಂಗಿಗಾಗಿ ಬಿದಿರನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದರೂ, ತಾಯಿಯ ಎಡ ಕಣ್ಣಿನಲ್ಲಿ ಇಲ್ಲವಾದ ಕ್ಯಾಚ್ ಲೈಟ್, ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಚಿತ್ರದ ಅಂದ ಕೆಡಿಸಿದೆ.


ತಾಯಿಯ ಮುಖದಲ್ಲಿನ ಕೊರತೆಯನ್ನು ಹೋಗಲಾಡಿಸಲು, ಈ ಮೇಲಿನಂತೆ ಇನ್ನೊಂದು ರೀತಿಯ ಕ್ರಾಪ್ ಮಾಡಿ ನೋಡಿದಾಗ, ತಾಯಿಯ ರುಂಡ ಇಲ್ಲದಿರುವಿಕೆ ನೊಡುಗರಿಗೆ ಸರಿಕಾಣದಿರಬಹುದು. ಅಲ್ಲದೇ ಇಲ್ಲಿ ಬಿದಿರಿನ ಫ್ರೇಮಿಂಗ್ ಇದ್ದರೂ ತಾಯಿಯ ಓವರ್ ಎಕ್ಸ್ಪೋಸಾದ ದೇಹ ಭಾಗ ಇನ್ನೂ ಕಾಣಿಸುತ್ತಿದೆ.


ಈ ಮೇಲಿನ ಚಿತ್ರವನ್ನು ಮತ್ತೂ ಕ್ರಾಪ್ ಮಾಡಿ ಈ ಮೇಲಿನಂತೆ ಪ್ರದರ್ಶಿಸಿದಾಗ, ಹಾಲು ಕುಡಿಯುತ್ತಿರುವ ಮಗುವಿನ ನೋಟ ನೋಡುಗರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿದೆಯಲ್ಲದೇ ಮೇಲೆ ತಿಳಿಸಿದ ಕೊರತೆಗಳನ್ನು ಹೆಚ್ಚಿನ ಮಟ್ಟಿಗೆ ಮೀರಿಸುವಲ್ಲಿ ಸಹಾಯಕವಾಗಿದೆ.

ಕೊನೇಯ ಚಿತ್ರ ದೊಡ್ಡ ಪ್ರಿಂಟ್ ತೆಗೆಯುವಲ್ಲಿ ನನಗೆ ಸಹಾಯಕವಾಗದಿದ್ದರೂ ಮುಂದೆ ಇದೇ ರೀತಿಯ ಚಿತ್ರ ತೆಗೆಯಲು ಅವಕಾಶ ಸಿಕ್ಕಿದರೆ, ನಾನು ಈಗ ಕ್ರಾಪಿಂಗಿನಲ್ಲಿ ಮಾಡಿದ ಪ್ರಯೋಗ ನೆರವಿಗೆ ಬರುತ್ತದೆ. ಒಂದು ಒಳ್ಳೆಯ ಚಿತ್ರ ಸಾವಿರ ಪದ ಹೇಳಿದರೆ ಒಂದು ಕೆಟ್ಟ ಚಿತ್ರ ಕನಿಷ್ಟ ಒಂದು ಪಾಠವನ್ನಾದರೂ ಕಲಿಸುತ್ತದೆ.

ಸಾರಾಂಶ:
ಚಿತ್ರದ ಚೌಕಟ್ಟನ್ನು ತುಂಬಿಸುವುದರ (filling the frame) ಮೂಲಕ, ನೀವು ಚಿತ್ರದ ಮೂಲಕ ವ್ಯಕ್ತಪಡಿಸ ಹೊರಟ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.

Tuesday, June 16, 2009

ಬಿದಿರಮ್ಮ ತಾಯಿ ಕೇಳೆ

ರಾಮನಗರದ ಜನಪದ ಲೋಕದ ಬಿದಿರ ಹಿಂಡಿನ ಹಿನ್ನೆಲೆಯಲ್ಲಿ ಕಾಣಿಸಿದ ಬಿದಿರಿನ ಕುರಿತಾದ ಜಾನಪದ ಗೀತೆ.
[ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡ ಚಿತ್ರ ತೆರೆದುಕೊಳ್ಳುವುದು]


ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ || ಪಲ್ಲವಿ ||
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ || ಅನುಪಲ್ಲವಿ ||

ರಂಗನಿಗೆ ಕೊಳಲು ಆದೆ ಕಂದನಿಗೆ ತೊಟ್ಟಿಲಾದೆ
ಆಡುವ ಮಕ್ಕಳಿಗೆ ಓಡುವ ಕುದುರೆ ಆದೆ || ೧ ||

ಮದುವೇಯ ಹಂದರಕ್ಕೆ ಚಪ್ಪರದ ಕಂಬವಾದೆ
ಮೈದುಂಬುವ ಕುಣಿತಕ್ಕೆ ನಂದೀಯ ಕೋಲು ಆದೆ || ೨ ||

ಅತ್ತೆಮನೆ ಸೊಸೆಯರೀಗೆ ಬೀಸುವ ಕುಕ್ಕೆಯಾದೆ
ಮುತ್ತೈದೆ ಮಕ್ಕಳೀಗೆ ಬಾಗಣದ ಮರಗಳಾದೆ || ೩ ||

ಆಡು ಕಾಯೊ ಮಕ್ಕಳೀಗೆ ಸೆಣೆಯೆಂಬ ಜವಳಿಯಾದೆ
ಕಾಳುಗಳ ಕೂಡಿ ಇಡಲು ಕಟ್ಟೀದ ಕಣಜವಾದೆ || ೪ ||

ಊರೂರು ಸೂರು ಆದೆ ಕೂರಿಗೆಯ ಕೊಳವೆ ಆದೆ
ಮುಪ್ಪೀನ ಮುದುಕರಿಗೆ ಊರಂಬೊ ದೊಣ್ಣೆಯಾದೆ || ೫ ||

ಅಂಬಿಗನಿಗೆ ಹುಟ್ಟು ಆದೆ ಮ್ಯಾದಾರ್ಗೆ ಬುಟ್ಟಿ ಆದೆ
ಹತ್ತುವವಗೆ ಏಣಿ ಆದೆ ಸತ್ತವಂಗೆ ಚಟ್ಟವಾದೆ || ೬ ||

ಅಂತೆಯೇ ಈ ಕೆಳಗಿನ ಪದ, ಸಾಲುಗಳಿಗೆ ತಿಳಿದವರಿಂದ ಉತ್ತರ ನಿರೀಕ್ಷಿಸುತ್ತಾ

* ಬಾಗಣದ = ?
* ಮ್ಯಾದಾರ್ಗೆ = ?
* ಆಡು ಕಾಯೊ ಮಕ್ಕಳೀಗೆ ಸೆಣೆಯೆಂಬ ಜವಳಿಯಾದೆ = ?

Saturday, June 13, 2009

ಏರೋಪ್ಲೇನ್ ಚಿಟ್ಟೆ

FULVOUS FOREST SKIMMER

ಗಂಟೆಗೆ ಎಂಭತ್ತು ಕಿ.ಮೀ.ಗಳಷ್ಟು ವೇಗವಾಗಿ ಹಾರುವ ಏರೋಪ್ಲೇನ್ ಚಿಟ್ಟೆ ಅಥವಾ ಡ್ರಾಗನ್ ಫ್ಲೈ ಕೀಟ ಸಮೂಹದಲ್ಲಿ ನಿಸ್ಸೀಮ ಹಾರಾಟಗಾರರೆಂದು ಖ್ಯಾತಿ ಪಡೆದಿದೆ. ಬಣ್ಣ ಬಣ್ಣದ ದೇಹ, ಗಡುಸಾದ ಪಾರದರ್ಶಕ ರೆಕ್ಕೆಗಳು, ರೆಕ್ಕೆಗಳಲ್ಲಿ ಜಾಲದಂತೆ ಹರಡಿರುವ ರಕ್ತನಾಳಗಳು, ದೊಡ್ಡದಾದ ಸಂಯುಕ್ತ ಕಣ್ಣು ಇದರ ಗುಣ ಲಕ್ಷಣ. ಇತರ ಕೀಟಗಳಂತೆಯೇ ೩ ಜೊತೆ ಕಾಲುಗಳಿದ್ದರೂ ಅವು ಚಲಿಸಲು ನಿರುಪಯುಕ್ತವಾಗಿದೆ. ಏರೋಪ್ಲೇನ್ ಚಿಟ್ಟೆಗಳಲ್ಲೇ ಹಲವು ಜಾತಿ ಇದ್ದು, ಸುಮಾರು ೩ ಸೆ.ಮೀ.ನಷ್ಟು ಚಿಕ್ಕ ಚಿಟ್ಟೆಯಿಂದ ೧೦ ಸೆ.ಮೀ.ಗಳಷ್ಟು ಉದ್ದದವರೆಗಿನ ಚಿಟ್ಟೆಗಳೂ ಇವೆ. ಏರೋಪ್ಲೇನ್ ಚಿಟ್ಟೆಗಳು ಸೊಳ್ಳೆ, ನೊಣ, ಚಿಕ್ಕ ಚಿಕ್ಕ ಮಿಡತೆ, ಪತಂಗ, ಚಿಟ್ಟೆಗಳನ್ನು ಹಿಡಿದು ತಿನ್ನುತ್ತವೆ.

ಏರೋಪ್ಲೇನ್ ಚಿಟ್ಟೆಗಳು ಮೊಟ್ಟೆಗಳನ್ನು ನೀರಿನಲ್ಲಿಡುತ್ತವೆ. ಒಂದುವಾರದ ಕಾಲಾವಧಿಯಲ್ಲಿ ಮೊಟ್ಟೆಯಿಂದ ಹೊರಗೆ ಬರುವ ಲಾರ್ವಾಗಳು ನೀರಿನಲ್ಲಿ ಜಲಚರಗಳಾಗಿ ಬದುಕುತ್ತವೆ.ಚಿಕ್ಕ ಪುಟ್ಟ ಲಾರ್ವಾಗಳು ನೀರಿನೊಳಗಿನ ಸೂಕ್ಷ್ಮಜೀವಿಗಳನ್ನು ಭಕ್ಷಿಸಿದರೆ, ದೊಡ್ಡ ಗಾತ್ರದ ಲಾರ್ವಾಗಳು ಚಿಕ್ಕ ಪುಟ್ಟ ಮೀನುಗಳು, ಸ್ವಜಾತಿಯ ಚಿಕ್ಕ ಲಾರ್ವಾಗಳು, ಸೊಳ್ಳೆಯ ಲಾರ್ವಾಗಳನ್ನು ತಿಂದು ಬದುಕುತ್ತವೆ. ಇವು ಪ್ರೌಢಾವಸ್ಥೆಗೆ ಬರಲು ಒಂದು ವರ್ಷಗಳಷ್ಟು ಕಾಲ ಹಿಡಿಯುತ್ತದೆ. ಈ ಸಮಯದಲ್ಲಿ ಹನ್ನೆರಡು ಬಾರಿ ತನ್ನ ಹೊರಗವಚವನ್ನು ಬದಲಿಸುತ್ತವೆ.

Damselfly

ಹೆಲಿಕಾಪ್ಟರ್ ಚಿಟ್ಟೆ ಅಥವಾ ಡ್ಯಾಮ್ಸೆಲ್ ಫ್ಲೈ ಏರೋಪ್ಲೇನ್ ಚಿಟ್ಟೆಯಂತೆಯೇ ಕಾಣಿಸುವ ಅದರ ಹತ್ತಿರದ ಸಂಬಂಧಿ. ಏರೋಪ್ಲೇನ್ ಚಿಟ್ಟೆಗಳ ಹಲವು ಗುಣಲಕ್ಷಣವನ್ನು ಹೋಲುತ್ತವಾದರೂ, ಇವು ಅವುಗಳಿಗಿಂತ ಸೂಕ್ಷ್ಮ. ಏರೋಪ್ಲೇನ್ ಚಿಟ್ಟೆಗಳು ಕೂತಾಗ ರೆಕ್ಕೆಯನ್ನು ದೇಹಕ್ಕೆ ಸಮಾನಾಂತರವಾಗಿ ಬಿಡಿಸಿ ಹಿಡಿದರೆ, ಹೆಲಿಕಾಪ್ಟರ್ ಚಿಟ್ಟೆ ನಾಲ್ಕೂ ರೆಕ್ಕೆ ಒಂದಕ್ಕೊಂದಕ್ಕೆ ಸೇರಿಸಿ ಮಡಿಚಿಕೊಂಡು ಕುಳಿತಿರುತ್ತವೆ. ಹೆಲಿಕಾಪ್ಟರ್ ಚಿಟ್ಟೆಯ ನಾಲ್ಕೂ ರೆಕ್ಕೆಗಳು ಒಂದೇ ಗಾತ್ರದಲ್ಲಿದ್ದು, ಬುಡದಲ್ಲಿ ಚಿಕ್ಕದಾಗಿ ಬೆನ್ನಿಗೆ ಅಂಟಿಕೊಂಡಿದ್ದರೆ, ಏರೋಪ್ಲೇನ್ ಚಿಟ್ಟೆಯ ಮುಂದುಗಡೆಯ ಎರಡು ರೆಕ್ಕೆಗಳು ಹಿಂದಿನ ಎರಡು ರೆಕ್ಕೆಗಳಿಗಿಂತ ಚಿಕ್ಕದಾಗಿರುತ್ತವೆ. ಇವೆರಡೂ ಚಿಟ್ಟೆಗಳು ಹೆಲಿಕಾಪ್ಟರಿನಂತೆಯೇ ಗಾಳಿಯಲ್ಲಿ ಸ್ತಬ್ಧವಾಗಿ ನಿಲ್ಲಬಲ್ಲವಾದರೂ ಏರೋಪ್ಲೇನ್ ಚಿಟ್ಟೆಗಳಿಗಿರುವಂತೆ ವೇಗವಾದ ಹಾರಾಟ ಹೆಲಿಕಾಪ್ಟರ್ ಚಿಟ್ಟೆಗಳಿಗಿಲ್ಲ. ಏರೋಪ್ಲೇನ್ ಚಿಟ್ಟೆಯ ಕಣ್ಣುಗಳು ಒಂದುಗೂಡಿದಂತಿದ್ದರೆ,ಹೆಲಿಕಾಪ್ಟರ್ ಚಿಟ್ಟೆಯ ಕಣ್ಣುಗಳು ಬೇರೆ ಬೇರೆಯಾಗಿ ಗುರುತಿಸುವಂತಿದೆ.

ಆಧಾರ:
ನಡೆಯುವ ಕಡ್ಡಿ, ಹಾರುವ ಎಲೆ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ ವಿ.ವಿ. ಬೆಳವಾಡಿ
Damselflies
Dragonfly

Sunday, June 07, 2009

ಗಾಂಧಿ ಬಜಾರ್

೨೦೦೩, ಇಂಜಿನಿಯರಿಂಗಿನ ಕೊನೇಯ ವರ್ಷ ಪ್ರಾಜೆಕ್ಟಿಗಾಗಿ ಬೆಂಗಳೂರಿಗೆ ಬಂದಾಗ ಮೊದಲು ಇಳಿದು ಕೊಂಡಿದ್ದು ಆಶ್ರಮದ ಸಮೀಪದ ಒಂದು ಮನೆಯಲ್ಲಿ. ೨ ಬೆಡ್ ರೂಂ ಮನೆ ೩೫೦೦ ರೂ ಬಾಡಿಗೆ, ೬ ಜನ ಮನೆಯ ಪಾಲುದಾರರು. ಅಂದಿನಿಂದ ನಾ ಮೆಚ್ಚಿದ ನನ್ನ ನೆಚ್ಚಿನ ತಿರುಗಾಟದ ತಾಣ ಗಾಂಧಿ ಬಜಾರ್.

ಛಾಯಾಗ್ರಹಣದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆಂದು ಎಂದೂ ಕನಸು ಕಂಡಿರಲಿಲ್ಲ. ಇಂಜಿನಿಯರಿಂಗ್ ಮುಗಿಸಿ ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ, ನಮ್ಮ ಕಂಪೆನಿಯ ಪ್ರಾಜೆಕ್ಟಿನ ಕೆಲವು ಚಿತ್ರಗಳಿಗೆ ಸಹೋದ್ಯೋಗಿಯ ಜೊತೆ ಹೋದದ್ದಲ್ಲದೇ ಬೇರಾವ ಅನುಭವವೂ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದು ಕೆಲಸ ಬದಲಾಯಿಸಿ, ಕೈಯಲ್ಲಿ ಸ್ವಲ್ಪ ಕಾಸು ಬಂದ ಮೇಲೆ ಮೊದಲು ಕೊಂಡು ಕೊಂಡಿದ್ದೇ ನನ್ನ ಸೋನಿ ಡಿ.ಎಸ್.ಸಿ ಎಚ್೨ ಕ್ಯಾಮರಾ. ನನ್ನ ಅದರ ಸಂಬಂಧ ಸುಮಾರು ೩.೫ ವರ್ಷಗಳಷ್ಟು.

೨೦೦೬ರ ಪ್ರವಾಸದಲ್ಲಿ ಗೆಳೆಯನಾದ ಪವನ್ ಜೊತೆಗೂಡಿ ಮಾಡಿದ ಕೇರಳದ ಪ್ರವಾಸದಲ್ಲಿ, ಆತನ ಚಿತ್ರ ನೋಡಿ ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದೆ. ಪ್ರತ್ಯಕ್ಷವಾಗಿ ಛಾಯಾಗ್ರಹಣದ ಬಗ್ಗೆ ಯಾವ ಸಲಹೆ ಕೊಟ್ಟಿಲ್ಲವಾದರೂ ನನ್ನ ಅಭಿರುಚಿ ಕೆರಳಿಸುವಲ್ಲಿ ಆತನ ಚಿತ್ರಗಳು ತುಂಬಾ ಸಹಾಯಕವಾದವು. ಮುಂದೆ ಹನಿವೆಲ್ಲಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ "ಅರವಿಂದ್" ತಮ್ಮ ಅನುಭವ, ಪುಸ್ತಕಗಳನ್ನು ಹಂಚಿಕೊಂಡು ಇನ್ನಷ್ಟು ನೆರವಾದರು. ಹೀಗೆ ಒಂದು ದಿನ ನನಗೆ ಬೇಕಾದ ಯಾವುದೋ ಛಾಯಾಗ್ರಹಣದ ವಿಷಯದ ಬಗ್ಗೆ ಹುಡುಕಾಡುತ್ತಿತ್ತಾಗ ಕಣ್ಣಿಗೆ ಬಿದ್ದಿದ್ದು "ಡಿಜಟಲ್ ಫೋಟೋಗ್ರಫಿ ಸ್ಕೂಲ್" ಎಂಬ ತಾಣ. ಇಲ್ಲಿ ಬರೀ ಪಾಟಗಳಷ್ಟೇ ಅಲ್ಲದೇ ನೀವು ತೆಗೆದ ಚಿತ್ರವನ್ನು ಹಾಕಿದರೆ, ಆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಪ್ರಪಂಚದ ನಾನಾ ಭಾಗದ ವೃತ್ತಿನಿರತ/ಹವ್ಯಾಸೀ ಛಾಯಾಚಿತ್ರಕಾರರಿಂದ ಬರುತ್ತದೆ. ಇಲ್ಲಿಯೇ ಭೇಟಿಯಾದ ವೃತ್ತಿಯಿಂದ ಚಿತ್ರಕಾರರಾಗಿರುವ "ಜಿಮ್" ಆರಂಭದಿಂದ ನನಗೆ ಸಲಹೆ ಸೂಚನೆ ನೀಡುತ್ತಾ ಇಲ್ಲಿಯವರೆಗೆ ತಂದು ಬಿಟ್ಟಿದ್ದಾರೆ. ಅದೂ ಅಲ್ಲದೇ ಯಾಹೂವಿನ ಫ್ಲಿಕರ್ ಕೂಡ ನನ್ನ ಅಭಿರುಚಿಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇದೆಲ್ಲದರ ಪ್ರಭಾವದಿಂದ ಎಸ್.ಎಲ್.ಎರ್ ಕ್ಯಾಮರಾ ಕೊಳ್ಳಬೇಕೆಂಬ ನನ್ನ ೨ ವರ್ಷದ ಬಯಕೆ ಈ ವಾರ ಕೊನೆಗೊಂಡಿದೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ನಿಕಾನ್ ಕಂಪೆನಿಯ ಡಿ೯೦, ನನ್ನ ವಶವಾಗಿದೆ. ಕಳೆದು ೧ ವರ್ಷದಿಂದ ಕೂಡಿಟ್ಟ ಹಣ ಮುಂದಿನ ನನ್ನ ಸ್ವಸಂತೋಷಕ್ಕಾಗಿ.

ಹೊಸ ಕ್ಯಾಮರಾದೊಂದಿಗೆ ನಿನ್ನೆ ಗಾಂಧಿ ಬಜಾರ್ ಸುತ್ತಲು ಹೊರಟಾಗ ಕಣ್ಣಿಗೆ ಬಿದ್ದ ಚಿತ್ರಗಳೇ ಇವು. ಹೊಸ ಕ್ಯಾಮರಾದ ಬಗ್ಗೆ ತಿಳಿದದ್ದು ಇನ್ನೂ ಅಲ್ಪ, ಆದರೂ ಮೊದಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.

ಹೂವು ಎಷ್ಟು ಮೊಳ ಕೊಡಲಮ್ಮ?
DSC_0014

ಹೇಗಿದೆ ನನ್ನ ಪೋಸು?
DSC_0021

ದ್ರಾಕ್ಷಿಗೊಂಚಲಿನೊಂದಿಗೆ
DSC_0031

ಹಣ್ಣಿನ ರಾಶಿಯ ನಡುವೆ
DSC_0038

ನಾನಾ ಬಗೆಯ ಹೂಗೊಂಚಲೊಂದಿಗೆ
DSC_0054

ಹೂಮಾಲೆಗೆ ಜರಿ ಸಿಂಗರಿತ್ತಾ
DSC_0046

ತರ ತರ ತರಕಾರಿಯ ನಡುವೆ
DSC_0056

ಇಳಿವಯಸಿನಲ್ಲಿ
DSC_0068

ನನ್ನ ಚಿತ್ರ ನಿಮಗೇತಕೋ
DSC_0069

ತೆಂಗಿನ ಕಾಯಿ ಕೊಳ್ಳುವವರಾರು
DSC_0071

ಕತ್ತಲಾದರೂ ನಿಂತಿಲ್ಲ ಭರಾಟೆ
DSC_0073

Thursday, June 04, 2009

ಹಿನ್ನೆಲೆಯಲೊಂದಾಗಿ

ಹಸಿರಲ್ಲಿ ಹಸಿರಾದ ಮಿಡತೆ.
GRASSHOPPER IN ACTION

ಬಂಡೆಯ ಮೇಲ್ಮೈಗೂ ಓತಿಯ ಮೇಲ್ಮೈಯ ಲಕ್ಷಣಕ್ಕೂ ಇರುವ ಸಾಮ್ಯತೆ ಗಮನಿಸಿ

ಹೊಯಿಗೆಯ ಬಣ್ಣಕ್ಕೂ, ಏಡಿಯ ಬಣ್ಣಕ್ಕೂ ಇರುವ ಸಾಮ್ಯತೆ ಗಮನಿಸಿ
DSC08225

ಹೀಗೆಯೇ ಹಲವು ಹಕ್ಕಿಗಳು, ಪ್ರಾಣಿಗಳು, ಕೀಟಗಳನ್ನು ಗಮನಿಸಿದರೆ ಅವುಗಳ ಮೇಲ್ಮೈ ಲಕ್ಷಣ ಅವು ವಾಸಿಸುವ ಪರಿಸರದ ಹಿನ್ನೆಲೆಗೆ ಹೊಂದುವುದನ್ನು ಗಮನಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಇವುಗಳನ್ನು ಹಿನ್ನೆಲೆಯಿಂದ ಬೇರ್ಪಡಿಸಿ ನೋಡುವುದು ಕಠಿಣವಾಗಿ ಕಾಣಿಸುವುದು. ಇವುಗಳ ಈ ಗುಣಲಕ್ಷಣವೇ ವೈರಿಗಳಿಂದ ರಕ್ಷಿಸಿ ಇವುಗಳ ಸಂತತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಾಯಕ.

ಇಲ್ಲಿ ಮೊದಲಿಗೆ ಏಳುವ ಪ್ರಶ್ನೆ, ಈ ಜೀವಿಗಳು ಹೇಗೆ ತಮ್ಮ ಮೈಯ ಬಣ್ಣವನ್ನು ಪರಿಸರಕ್ಕೆ ಅನುಕೂಲವಾಗಿ ಹೊಂದಿಸಿಕೊಂಡವು ಎಂಬುದು.ನಾವಾದರೋ ಕನ್ನಡಿಯನ್ನು ನೋಡಿ ನಮ್ಮ ರೂಪ, ಬಣ್ಣ ಹೀಗೆ ಇದೆ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಈ ಜೀವಿಗಳು ಹೇಗೆ ತಮ್ಮನ್ನು ಕಂಡುಕೊಂಡು, ಪರಿಸರಕ್ಕೆ ಅನುಗುಣವಾಗಿ ತಮ್ಮ ಬಣ್ಣ ಬದಲಿಸಿಕೊಂಡವು ಎಂಬುದು.

ತುಂಬಾ ಹಳೇ ಪ್ರಶ್ನೆ ಉತ್ತರ ನೀವೇ ಕಂಡುಕೊಳ್ಳಿ.

Tuesday, June 02, 2009

ಪಿಚ್ಚಳ್ಳಿ ಶ್ರೀನಿವಾಸ್
ಕಳೆದ ಭಾನುವಾರ ಕೋಲಾರದ ಶಿವಗಂಗೆಯ "ಆದಿಮ" ಸಂಸ್ಥೆಯಲ್ಲಿ ಭೇಟಿಯಾದ, ನಾಡಿನ ಖ್ಯಾತ ಜಾನಪದ ಕಲಾವಿದರಾದ "ಪಿಚ್ಚಳ್ಳಿ ಶ್ರೀನಿವಾಸ್" ನನ್ನ ಕ್ಯಾಮರಾಗೆ ಸೆರೆ ಸಿಕ್ಕಿದ್ದು ಹೀಗೆ.


ಶುಕ್ರವಾರ, ಜನವರಿ 14, 2005ರ "ಪ್ರಜಾವಾಣಿ"ಯಲ್ಲಿ ಇವರ ಪರಿಚಯ ಇಂತಿದೆ:

ಕಾಲಿಗೆ ಗೆಜ್ಜೆ ಇಲ್ಲ, ತಮಟೆ, ಡೋಲು ವಾದನ ಬೇಕಿಲ್ಲ. ಬರಿಯ ಕಂಠ ಸಿರಿಯಿಂದಲೇ ಕೇಳುವವರು ಬಾಯಿ ಬಿಟ್ಟುಕೊಂಡು ‘ಅರೇ! ಈ ಹಾಡು ಇಷ್ಟು ಬೇಗ ಮುಗಿಯಿತೆ’ ಎನ್ನುವಂತೆ ಮಾಡುತ್ತಾರೆ, ಪಿಚ್ಚಳ್ಳಿ ಶ್ರೀನಿವಾಸ್‌. ಅವರು ಹಾಡಲು ನಿಂತರೆ ಜಾನಪದ ಹಾಗೂ ಕ್ರಾಂತಿ ಗೀತೆಗಳು ಪುಂಖಾನುಪುಂಖವಾಗಿ ಹರಿದು ಬರುತ್ತವೆ. ಕರ್ನಾಟಕದ ‘ಗದ್ದರ್‌’ ಎಂದೇ ಖ್ಯಾತರು ಅವರು.

‘ಅಮಾಸ’ ಚಲನಚಿತ್ರದ ಅವರ ಗಾಯನಕ್ಕೆ ರಾಜ್ಯ ಸರ್ಕಾರ ಈ ಸಾಲಿನ ‘ಅತ್ಯುತ್ತಮ ಗಾಯಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇವನೂರು ಮಹಾದೇವ ಅವರ ‘ಅಮಾಸ’ ಕತೆ ಆಧಾರಿತ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ದುಡಿದು, ಗಾಯಕರಾಗಿಯೂ ಅವರು ತಮ್ಮ ಕಂಠಸಿರಿಯನ್ನು ಹರಿಸಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಪಿಚ್ಚಳ್ಳಿಯ ಬಡ ಕೃಷಿ ಕುಟುಂಬದಲ್ಲಿ ಜನಿಸಿ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದು ರಾಜ್ಯ ಮಟ್ಟದ ಗೌರವಕ್ಕೆ ಭಾಜನರಾಗಿದ್ದಾರೆ. ದಲಿತ ಸಂಘರ್ಷ ಸಮಿತಿಯ ಒಂದು ಭಾಗವಾದ ದಲಿತ ಕಲಾ ಮಂಡಳಿಯ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿ ಹಾಡಿನ ಜತೆಗೆ ಸಂಗೀತ ನೀಡಿದ್ದಾರೆ. ನಾಟಕ, ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಯಾವುದೇ ತಾಳ, ಮೇಳಗಳಿಲ್ಲದೆ ಧ್ವನಿಯ ಮೂಲಕವೇ ಕೇಳುಗರನ್ನು ಸೆಳೆಯುವ ಶಕ್ತಿ ಅವರದು.

‘ಈ ನಾಡ ಮಣ್ಣಿನಲ್ಲಿ’ ಸೇರಿದಂತೆ 16 ಮೂಲ ಜಾನಪದ ಗೀತೆಗಳ ಧ್ವನಿಸುರುಳಿ ಹೊರ ತಂದಿದ್ದಾರೆ. ವಿವಿಧ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಒಂಬತ್ತು ಧ್ವನಿಸುರುಳಿಗಳಿಗೆ ಹಾಡಿರುವ ಶ್ರೀನಿವಾಸ್‌, ಮಹಿಳೆಯರ ಹಕ್ಕುಗಳ ಕುರಿತ ಒಂಬತ್ತು ಸಾಕ್ಷ್ಯ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ‘ಸಿಂದ್‌ಆಟ’, ‘ಗಂಗಾಭಾರತ’ ನಾಟಕಗಳಿಗೆ ಸಂಗೀತ ನೀಡಿ ನಿರ್ದೇಶನವನ್ನೂ ಮಾಡಿದ್ದಾರೆ. ಸಿಜಿಕೆ, ಸಿ. ಬಸಲಿಂಗಯ್ಯ ಮೊದಲಾದ ಖ್ಯಾತ ರಂಗ ನಿರ್ದೇಶಕರ ಎಂಟು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸಾಕ್ಷರತಾ ಆಂದೋಲನಕ್ಕಾಗಿ ಎಂಟು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿರುವ ಅವರು ‘ರಂಗಾಯಣ’ದ 14 ನಾಟಕಗಳಲ್ಲಿ ನಟರಾಗಿ, ಗಾಯಕರಾಗಿ, ಸಂಗೀತ ಸಹಾಯಕರಾಗಿ ದುಡಿದಿದ್ದಾರೆ. ಸಾಕ್ಷರತೆ, ಆದಿವಾಸಿ ಬುಡಕಟ್ಟು, ಗ್ರಾಮ ಪಂಚಾಯಿತಿ ಚುನಾಯಿತ ಮಹಿಳೆಯರಿಗೆ ಜಾಗೃತಿ ಮೂಡಿಸುವ ಹತ್ತು ಹಲವು ಬೀದಿ ನಾಟಕ ಬರೆದಿದ್ದಾರೆ. ಸಾಂಸ್ಕೃತಿಕ ಶಿಬಿರಗಳನ್ನು ನಡೆಸಿದ್ದಾರೆ. ಈಚೆಗೆ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ‘ರಂಗ ಭಾರತಿ’ ತಂಡದ ಜತೆಗೆ ಸೇರಿಕೊಂಡು ಕುವೆಂಪು ಅವರ ‘ಜಲಗಾರ’ ನಾಟಕವನ್ನು ಸರಳೀಕರಿಸಿ ಪ್ರದರ್ಶಿಸಿದ್ದಾರೆ.

ಶ್ರೀನಿವಾಸ್‌ ಅವರಿಗೆ 1999ರಲ್ಲಿ ರಾಜ್ಯ ಸರ್ಕಾರ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರಶಸ್ತಿ ನೀಡಿ ಗೌರವಿಸಿದೆ. 2000ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅದೇ ವರ್ಷದಲ್ಲಿ ಕೋಲಾರ ಜಿಲ್ಲಾಡಳಿತವು ‘ನಂದಿ’ ಪ್ರಶಸ್ತಿಯನ್ನು ನೀಡಿದೆ. ಈಗ ಪಿಚ್ಚಳ್ಳಿ ಅವರ ಕಿರೀಟದಲ್ಲಿ ರಾಜ್ಯ ಪ್ರಶಸ್ತಿಯ ಗರಿ ಶೋಭಿಸುತ್ತಿದೆ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)