Thursday, December 22, 2011

ನೀ ನನಗಿದ್ದರೆ ನಾ ನಿನಗೆ

ANT AND APHIDS ಆಫಿಡ್‌ ಮೊಟ್ಟೆಯಿಂದ ಸಿಹಿರಸ ಸಂಗ್ರಹಿಸುತ್ತಿರುವ ಇರುವೆ. ಸಿಹಿರಸ ಕೊಡುವುದರಿಂದ ಇರುವೆ ಈ ಮೊಟ್ಟೆಗಳನ್ನು ಇತರ ಕೀಟಗಳಿಂದ ರಕ್ಷಿಸುತ್ತವೆ.

Monday, December 19, 2011

ಗೋಲಿಯಾಟ

GOLI GOLI BW ಬಣ್ಣದ್ ಇಷ್ಟ ಆಯ್ತಾ ಬ್ಲಾಕ್-ಅಂಡ್-ವೈಟಾ..

Thursday, December 15, 2011

Beetle

Mylabris pustulata

ಬೀಟಲ್ಗಳ ಮುಖ್ಯ ಲಕ್ಷಣ ರೆಕ್ಕೆಯ ಮೇಲೆ ಗಟ್ಟಿಯಾದ ಹೊಳೆಯುವ ಕವಚ. ಬಣ್ಣ ಬಣ್ಣದ ಈ ಕವಚವನ್ನು ಮೇಲೆತ್ತಿ, ರೆಕ್ಕೆ ಬಿಡಿಸಿ ಹಾರುವುದು ನೋಡಲು ಬಲು ಚೆನ್ನ.

Wednesday, December 14, 2011

ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು

ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

 ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಸುತ್ತಮುತ್ತ ಕಾಣಿಸುವುದು ಬೋಳು ಗುಡ್ಡ, ವಿಶಾಲವಾದ ಬಯಲು. ಆದರೆ ಡಾ|| ಸಂಜೀವ ಕುಲಕರ್ಣಿಯವರ ’ಸುಮನ ಸಂಗಮ’ ಹೊಕ್ಕಾಗ, ಬಯಲು ಸೀಮೆಯ ಈ ನೋಟಕ್ಕೆ ತೆರೆ. ಇವರ ತೋಟ ಸುತ್ತಾಡಿದರೆ, ಮಲೆನಾಡ ಕಾಡು ಹೊಕ್ಕ ಅನುಭವ. 1996ರಲ್ಲಿ 17 ಎಕರೆ ಜಾಗ ಕೊಂಡಾಗ ಪರಿಸ್ಥಿತಿ ಆಸುಪಾಸಿನ ನೋಟಕ್ಕಿಂತ ಭಿನ್ನವಾಗಿರಲಿಲ್ಲ. ಸಂಗಮ ಆಗಬೇಕು ಸುಮಂಗಳ, ಸು-ಮನಗಳ ಸಂಗಮ ಎಂಬ ಆಶಯದಲ್ಲಿ 15 ವರ್ಷಗಳ ಹಿಂದೆ ಕೈಗೊಂಡ ಪ್ರಯೋಗದ ಫಲ ಇದು.

 “ನಾವ್ ಇಲ್ಲಿಗ್ ಬಂದ್ ಮೊದಲ್ನಾಗ ಅಮಾಶಿ ದಿನ, ಹೆಣ್ಮಗು ಕೈಲಿ, 2 ಬೇವಿನ್ ಸಸಿ ನಡ್ಸಿದ್ವಿ. ಜನಾ ಅಮಾಶಿ ದಿನ ಬ್ಯಾಡ್ರಿ ಅಂದ್ರು. ಹೆಣ್ಮಗು ಕೈಲಿ ನಡಿಶ್ಬ್ಯಾಡ್ರಿ ಅಂದ್ರು. ಬೇವಿನ್ ಗಿಡ ಬ್ಯಾಡ, ಮಾವ್ ಹಾಕಿ ಅಂತಾನೂ ಅಂದ್ರು. ನಾ ಕೇಳಿಲ್ಲ”, ಬೇವಿನ ಸಸಿಗಳನ್ನು ತೋರಿಸಿತ್ತಾ ಅದರ ಹಿನ್ನೆಲೆಯನ್ನು ಕುಲಕರ್ಣಿಯವರು ವಿವರಿಸುತ್ತಿದ್ದರು. ಹೊಸತನ್ನು ಮಾಡಬೇಕೆಂಬ ಹಂಬಲ, ಪ್ರಯೋಗಶೀಲ ವ್ಯಕ್ತಿತ್ವ ಕುಲಕರ್ಣಿಯವರದ್ದು. ಈ ವ್ಯಕ್ತಿತ್ವವೇ ಬಯಲುಸೀಮೆಯ ಮಧ್ಯ ಮಲೆನಾಡ ಕಾಡು ತೋಟ ನಿರ್ಮಿಸುವ ಕಾರ್ಯಕ್ಕೆ ಸಹಾಯಕವಾಯ್ತು. ವೃತ್ತಿಯಲ್ಲಿ ಹೆರಿಗೆ ತಜ್ಞರಾದರೂ ಪರಿಸರವಾದಿ, ಸಮಾಜಮುಖೀ ಚಟುವಟಿಕೆಯಲ್ಲಿ ಆಸಕ್ತಿ.

  DSC00190_ ಸುಮನ ಸಂಗಮದಲ್ಲಿ ಸಂಜೀವ ಕುಲಕರ್ಣಿ

 ದಡ್ಡಿ ಕಮಲಾಪುರದಲ್ಲಿ ವಾರ್ಷಿಕ ಮಳೆ ಸುಮಾರು 30 ಇಂಚುಗಳಷ್ಟು. ಒಂದು ಇಂಚು ಮಳೆಯಿಂದ ಒಂದು ಎಕರೆ ಜಾಗದಲ್ಲಿ ಸಂಗ್ರಹವಾಗುವ ನೀರು ಸುಮಾರು 1,02,789 ಲೀಟರ್. ಅಂದರೆ 17 ಎಕರೆಯಲ್ಲಿ ವರ್ಷಕ್ಕೆ ಸುರಿವ ನೀರು ಐದುಕಾಲು ಕೋಟಿ ಲೀಟರ್! ಇಷ್ಟೊಂದು ನೀರು ಗುಡ್ಡದಂತಹ ಮೇಲ್ಮೈಯ ಇಳಿಜಾರಿನಿಂದ ಹರಿದು ಪೋಲಾಗದಂತೆ ತಪ್ಪಿಸುವ ಯೋಚನೆ ಕುಲಕರ್ಣಿಯವರದ್ದು. ಈ ಇಳಿಜಾರಿನಲ್ಲಿ ಕಾಂಟೂರ್ ಮಾದರಿಯಲ್ಲಿ 30 ಅಡಿಗಳ ಅಂತರದಲ್ಲಿ 2 ಅಡಿ ಆಳದ ಅಡ್ಡ ಸಾಲುಗಳನ್ನು ತೋಡಿಸಿದ್ದಾರೆ. ಇದೂ ಅಲ್ಲದೇ ಅಲ್ಲಲ್ಲಿ ಸುಮಾರು ಸಾವಿರದಷ್ಟು 1X1 ಅಡಿ ಅಳತೆಯ ಚಿಕ್ಕ ಚಿಕ್ಕ ಗುಂಡಿಗಳನ್ನು ತೋಡಿಸಿದ್ದಾರೆ. ಇವು ಮಳೆಯ ನೀರು ಒಂದೇ ಕಡೆ, ಒಮ್ಮೆಲೇ ಹರಿದು ಹೋಗುವುದನ್ನು ತಪ್ಪಿಸಿ ವಿವಿಧ ಹಂತಗಳಲ್ಲಿ ನೀರನ್ನು ಇಂಗಿಸುವ ಕೆಲಸ ಮಾಡುತ್ತದೆ. ಇಲ್ಲಿಂದ ಹೆಚ್ಚಾಗಿ ಹರಿಯುವ ನೀರನ್ನು ಸಂಗ್ರಹಿಸಲು ವಿವಿಧ ಹಂತಗಳಲ್ಲಿ 6 ಮಳೆ ಹೊಂಡ ರಚಿಸಿದ್ದಾರೆ. ಮಳೆ ಹೊಂಡದ ಬದುವಿನಲ್ಲಿ ಮಣ್ಣಿನ ಸವಕಳಿ ತಡೆಗಟ್ಟಲು ಲಾವಂಚದ ಸಸಿಗಳನ್ನು ಹಚ್ಚಿದ್ದಾರೆ.

DSC00192 ಮಳೆಹೊಂಡವನ್ನು ಆಸಕ್ತರು ವೀಕ್ಷಿಸುತ್ತಿರುವುದು

ಎತ್ತರದ ಪ್ರದೇಶದಲ್ಲಿ ನಾಟಿ ಮಾಡಲು ಇವರು ಆಯ್ದುಕೊಂಡಿದ್ದು ಕಾಡು ಸಸ್ಯಗಳನ್ನು. ತೇಗ, ಬಿದಿರು, ನೇರಳೆ, ಮತ್ತಿ, ಹೊನ್ನಿ, ದಾಲ್ಚಿನ್ನಿ, ರಂಗುಮಾಲ ಮೊದಲಾದ ಸ್ಥಳೀಯ ಕಾಡು ಮರಗಳಿಗೆ ನೀರಿನ ಅವಶ್ಯಕತೆ ಕಡಿಮೆ, ಆರೈಕೆಯ ಅಗತ್ಯವೂ ಇಲ್ಲ. ಆರಂಭದಲ್ಲಿ ಸುಮಾರು ಸಾವಿರದಷ್ಟು ಗಾಳಿ ಸಸಿಗಳನ್ನೂ ನಾಟಿ ಮಾಡಿಸಿದ್ದರು. ಸಸ್ಯ ಸಂಪನ್ಮೂಲ ಹೆಚ್ಚುತ್ತಾ ಹೋದಂತೆ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಕ್ಷಮತೆಯೂ ಹೆಚ್ಚುತ್ತಾ ಹೋಯಿತು. ಅಲ್ಲದೇ ಅವುಗಳ ಜೈವಿಕ ತ್ಯಾಜ್ಯದಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಿತು. “ನಮ್ ತೋಟದಾಗ 60 ರಿಂದ 70 ಜಾತೀ ಹಕ್ಕಿಗಳಿದಾವ, 20 ಜಾತಿ ಚಿಟ್ಟಿಗಳ್ನ ಗುರ್ತಿಸೀವಿ”, ಎನ್ನುವಾಗ ಕುಲಕರ್ಣಿಯವರ ಮುಖದಲ್ಲಿ ಸಹಬಾಳ್ವೆಯ ಸಂತೃಪ್ತಿ. ಒಮ್ಮೆ ಈ ಕಾಡಿನ ವಾತಾವರಣ ಸೃಷ್ಟಿಯಾದ ನಂತರ ಇನ್ನಷ್ಟು ಗಿಡಗಳು ಹುಟ್ಟಿಕೊಂಡಿದ್ದು ಹಕ್ಕಿ, ಗಾಳಿ, ನೀರಿನಿಂದಾದ ಬೀಜ ಪ್ರಸಾರದ ಮೂಲಕ. ಒಮ್ಮೆ ಬೇಸಿಗೆ ಕಾಲದಲ್ಲಿ ಪಕ್ಕದ ಬೋಳು ಗುಡ್ಡದಲ್ಲಿ ಹಬ್ಬಿದ್ದ ಕಾಳ್ಗಿಚ್ಚು ಕೆಲವು ಸಸಿಗಳನ್ನು ಬಲಿ ತೆಗೆದುಕೊಂಡಿತ್ತು. ಅಲ್ಲದೇ ಸ್ಥಳೀಯ ದನಕರುಗಳ ಹಾವಳಿ. ಆಗ ಇವರಿಗೆ ಅಗತ್ಯ ಕಾಣಿಸಿದ್ದು ರಕ್ಷಣೆಗೆ ಬೇಲಿ. 17 ಎಕರೆಯ ಸುತ್ತ ಬೇಲಿ ಹಾಕಿಸುವುದೆಂದರೆ ಖರ್ಚಿನ ವಿಷಯ, ಅಲ್ಲದೇ ಅದರ ನಿರ್ವಹಣೆಗೆ ಆಗಾಗ್ಗೆ ವೆಚ್ಚ ಮಾಡುತ್ತಿರಬೇಕು. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜೀವಂತ ಬೇಲಿಯ ನಿರ್ಮಾಣಕ್ಕೆ ಕೈಹಚ್ಚಿದರು. ದಾಸವಾಳ, ಗ್ಲಿರಿಸೀಡಿಯಾ, ನೀಲಗಿರಿ, ಹಲಸು, ಅಕೇಶಿಯಾ, ಹುಣಸೆ, ಬಿದಿರು, ಅಗಾವೆ (Agave) ಮೊದಲಾದ ಸಸಿಗಳನ್ನು ಆವರಣದ ಸುತ್ತ ನಾಟಿ ಮಾಡಿಸಿದರು. ಎರಡೇ ವರ್ಷಗಳಲ್ಲಿ ಇವು ಮನುಷ್ಯರೂ ನುಸುಳಲಾರದಷ್ಟು ದಟ್ಟವಾದ ಜೀವಂತ ಬೇಲಿಯಾಯಿತು. ಜೀವಂತ ಬೇಲಿ ಮಳೆಗಾಲದಲ್ಲಿ ನೀರಿನ ಓಟವನ್ನು ತಗ್ಗಿಸುವಲ್ಲಿಯೂ ಸಹಾಯಕವಾಯ್ತು. 

ನಂತರ ತಗ್ಗಿನ ಪ್ರದೇಶದಲ್ಲಿ ತೆಂಗು, ಮಾವು, ಚಿಕ್ಕು, ಪೇರಳೆ, ಗೇರು, ಲಿಂಬೆ, ಕೋಕಂ, ಕರಿಬೇವು, ಬಾಳೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಿಸಿದರು. ತೋಟಗಾರಿಕಾ ಬೆಳೆಗಳಿಗಾಗಲೀ, ಕಾಡು ಸಸಿಗಳಿಗಾಗಲೀ ಪ್ರತ್ಯೇಕ ನೀರುಣಿಕೆ ಇಲ್ಲ, ಗೊಬ್ಬರದ ಗೊಡವೆಯೂ ಇಲ್ಲ. ಇವಲ್ಲದೇ ಭತ್ತ, ದ್ವಿದಳ ಧಾನ್ಯ, ತರಕಾರಿಗಳನ್ನೂ ಬೆಳೆಯುತ್ತಾರೆ. ಸಧ್ಯಕ್ಕೆ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಇವುಗಳನ್ನು, ಫುಕುವೋಕಾರ ಮಾದರಿಯ ’ಸಹಜ ಕೃಷಿ’ಯಲ್ಲಿ ಬೆಳೆಯುವುದು ಮುಂದಿನ ಆಲೋಚನೆ. ಇವುಗಳಿಗೆ ಕೊಳವೆ ಬಾವಿಯಿಂದ ಅಗತ್ಯವಾದಲ್ಲಿ ನೀರಿನ ಪೂರೈಕೆ. ಮಳೆಕಡಿಮೆಯಾದ ವರ್ಷವೂ ಇವುಗಳ ಆರೈಕೆಗೆ ನೀರಿನ ಕೊರತೆಯಿಲ್ಲ. ಸಾವಯವ ಉತ್ಪನ್ನವಾದ್ದರಿಂದ ಬೇಡಿಕೆಯೂ ಹೆಚ್ಚು. ಬಂದುಗಳು, ಸ್ನೇಹಿತರು ಸಾಮಾನ್ಯವಾಗಿ ನೇರವಾಗಿ ಖರೀದಿಸುವುದರಿಂದ ಮಾರುಕಟ್ಟೆಯ ಚಿಂತೆಯಿಲ್ಲ.

ಕೋಳಿ, ದನ, ಕುರಿಸಾಕಣೆಯಲ್ಲೂ ಕುಲಕರ್ಣಿಯವರು ತೊಡಗಿದ್ದಾರೆ. ಮಳೆಗಾಲದ ನಂತರ ಪಕ್ಕದ ರೈತರು ಕೊಳವೆ ಬಾವಿಗಳ ಮೂಲಕ ಒಣ ಭೂಮಿಯ ತೋಟಕ್ಕೆ ನೀರು ಹಾಯಿಸುವ ಪ್ರಯತ್ನದಲ್ಲಿದ್ದರೆ, ಇವರು ಇದರ ಗೊಡವೆಯಿಲ್ಲದೆಯೇ ಈಗ ಮೀನು ಸಾಕಣೆಗೂ ಮುಂದಾಗಿದ್ದಾರೆ. ತಾವು ನಿರ್ಮಿಸಿದ ಮಳೆ ಹೊಂಡವೊಂದನ್ನು ಇದಕ್ಕಾಗಿ ಆರಿಸಿಕೊಂಡಿದ್ದಾರೆ. ಮಳೆಯ ಹನಿಹನಿಯನ್ನೂ ಹಲವು ವರ್ಷಗಳಿಂದ ಭೂಮಿಗೆ ಕುಡಿಸಿದ್ದರೆ ಫಲ ಇದು.

Thursday, December 08, 2011

ಕಸದಿಂದ ಪೊರಕೆ!

ಈ ಬಾರಿ ಧಾರವಾಡದಲ್ಲಿ ನಡೆದ ಕೃಷಿ ಗ್ರಾಮೀಣ ಪತ್ರಿಕೋದ್ಯಮ ಶಿಬಿರದಲ್ಲಿ ನಡೆದ ಚರ್ಚೆಯ ನಡುವೆ, ’ಕಳೆ’ ಎಂಬ ಪದ ಅಭ್ಯರ್ಥಿಯೊಬ್ಬರಿಂದ ನುಸುಳಿತು. ಅದಕ್ಕೆ ಪತ್ರಕರ್ತರಾದ ಶಿವಾನಂದ ಕಳವೆ ’ಕಳೆ’ ಅಂತ ಇಲ್ಲ, ಕಳೆ ಅಂದ್ರೆ ನಮಗೆ ಅದರ ಪ್ರಯೋಜನದ ಪರಿಚಯವಿಲ್ಲ ಅಷ್ಟೇ ಎಂದಿದ್ದರು. ಇಂದು ಸಂಜೆ ಹೀಗೆ ಕ್ಯಾಮರಾಧಾರಿಯಾಗಿ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಅಲೆಯುತ್ತಿರುವಾಗ ಕಾಣಿಸಿದ್ದು ಈ ನೋಟ. ನಮ್ಮ ಕಣ್ಣಿಗೆ ಕಳೆ ಎಂದು ಕಾಣಿಸಬಹುದಾದ ಹೆಚ್ಚೆಂದರೆ ಗುಂಪಿನಲ್ಲಿ ನೋಡಿದಾಗ ಚಲುವೆನ್ನಿಸಬಹುದಾದ ಹುಲ್ಲಿನಿಂದ ವ್ಯಕ್ತಿಯೊಬ್ಬರು ಪೊರಕೆ ತಯಾರಿಸುತ್ತಿದ್ದರು. ಹುಲ್ಲಿನ ಬುಡಕ್ಕೆ ಹತ್ತಿರವಾಗಿ ಹೀಗೆ ಕತ್ತರಿಸಿ ಒಟ್ಟಿಗಿಟ್ಟು ಕಟ್ಟು ಹಾಕಿದರೆ ಪೊರಕೆ ಸಿದ್ಧ (ಒಣಗಿಸಬೇಕಾಗಿಯೂ ಬರಬಹುದು)!

DSC_3569

DSC_3570

ಹುಲ್ಲಿನ ಪರಿಚಯ: Common name: Mauritian Grass
Kannada: ಅಕ್ಕು ಹುಲ್ಲು, ಕಾಡು ಹಂಚಿ ಹುಲ್ಲು
Botanical name: Apluda mutica

ಹಾಗಿದ್ದರೆ ಮನುಷ್ಯರಿಗೆ ಹೀಗೆ ಪ್ರತ್ಯಕ್ಷವಾಗಿ ಪ್ರಯೋಜನ ತರುವಂತದ್ದು ಮಾತ್ರ ಕಳೆಯಲ್ಲವೇ? ನಿರ್ಧಾರಕ್ಕೆ ಬರುವ ಮೊದಲು ಇನ್ನೊಮ್ಮೆ ಯೋಚಿಸುವುದೊಳಿತು.

Wednesday, November 02, 2011

ಚಿಟ್ಟಾಣಿ - ೮೦ರ ಆಸುಪಾಸಿನಲ್ಲೂ ದಣಿಯದ ಉತ್ಸಾಹ

ಉಡುಪಿಯಲ್ಲಿ ಅ. ೨೯ ರಂದು ಆರಂಭಗೊಂಡ "ಚಿಟ್ಟಾಣಿ ಯಕ್ಷಗಾನ ಸಪ್ತಾಹ"ದಲ್ಲಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೆಲವು ಚಿತ್ರಗಳು.
ಪ್ರಸಂಗ: ಬ್ರಹ್ಮ ಕಪಾಲ
ಪಾತ್ರ: ಈಶ್ವರ


ಚೌಕಿಯಲ್ಲಿ ತಾಳ ಹಾಕುತ್ತಾ... DSC00069_


 ವೇಷ
DSC00084_

  ಪಾತ್ರಕ್ಕೆ ಜೀವ ತುಂಬುತ್ತಾ DSC00133_


ಎಲವೋ ಬ್ರಹ್ಮ... DSC00137_


ಶಿವನು ಭಿಕ್ಷಕ್ಕೆ ಬಂದ.. DSC00141_

Monday, July 25, 2011

ಪಟ್ಟಣಿಗರ ಮಣ್ಣಿನ ನಂಟು

ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ 

ಬೆಂಗಳೂರಿನ ಸುಜಾತ ಹಂದೆಯವರ (50)  ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್ಕೆ, ಔಷಧಕ್ಕೆ  ೧೨ ಬಗೆಯ ದಾಸವಾಳ, ಮಲ್ಲಿಗೆ, ಚೆಂಡು ಹೂವು, ಪಾರಿಜಾತ, ಧವನ, ಪತ್ರಿ, ತುಳಸಿ, ಆಲೋವಿರ, ಕರವೀರ, ಮದರಂಗಿ, ಅಮೃತಬಳ್ಳಿ ಮೊದಲಾದ ಗಿಡಗಳು. ಅಲ್ಲದೆ ಒಂದೆಲಗ, ಕರಿಬೇವು, ಕೆಂಪು ಹರಿವೆ, ಬಿಳಿ ಹರಿವೆ, ಬಸಳೆ, ಟೊಮೇಟೊ, ಬದನೆ, ಹಾಗಲ, ಮಂಗಳೂರು ಸೌತೆ,  ಬಾಳೆ, ಕರಿ ಕೆಸು, ಸುವರ್ಣ ಗಡ್ಡೆ, ನುಗ್ಗೆ, ಪೇರಳೆ, ದಾಳಿಂಬೆ, ಅರಶಿನ, ಮೊದಲಾದ ದಿನ ಬಳಕೆಗೆ ಉಪಯುಕ್ತವಾದ ತರಕಾರಿ ಹಣ್ಣುಗಳ ಗಿಡಮರಗಳು. ಮುನಿಯ, ಚೋರೆ ಹಕ್ಕಿ, ಗುಬ್ಬಿಗಳು, ಹೂವಿನ ಹಕ್ಕಿ, ಬುಲ್ ಬುಲ್ ಇವರ ಕೈತೋಟದ ಖಾಯಂ ಅತಿಥಿ. 

ಬ್ಯಾಂಕ್ ನೌಕರರಾಗಿರುವ ಸುಜಾತರ ಪತಿ ವಸಂತ ಮಾಧವ ಹಂದೆ, ೭ ವರ್ಷಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿಯ ಸಮೀಪ  ತಮ್ಮ ೬೦-೪೦ರ  ನಿವೇಶನದಲ್ಲಿ ೮,೫೦೦ ಚದರ ಅಡಿಯಲ್ಲಿ ಮನೆ ಕಟ್ಟಿಸಿದ್ದರು. ಮನೆಯ ಎದುರುಗಡೆ ಉಳಿಸಿದ ಜಾಗವನ್ನೇ  ಸುಜಾತರು ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ. 

CSC_3062

ಸುಜಾತ 

"೧೯೭೮ ರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ತಂದೆ ೬ ಎಕರೆ ಹೊಲದಲ್ಲಿ ಹತ್ತಿ ನಾಟಿ ಮಾಡಿಸಿದ್ದರು. ಆ ವರ್ಷ ಮಳೆಯಿಲ್ಲ. ಧೃತಿಗೆಡದ ಅಮ್ಮ ನೀರನ್ನು ಹೊತ್ತು ಹೊಲಕ್ಕೆ ಉಣಿಸಿದ್ದಳು. ಮಕ್ಕಳಾದ ನಾವೂ ಅಕೆಗೆ ಸಹಾಯ ಮಾಡಿತ್ತು ", ಬೇಸಾಯದ ತಮ್ಮ ಹಿಂದಿನ ಅನುಭವ ನೆನಪಿಸಿಕೊಳ್ಳುತ್ತಾರೆ ಸುಜಾತರು. ೬೦೦೦ ರೂಪಾಯಿಗಳಷ್ಟು ಖರ್ಚು ಮಾಡಿಸಿ ಅಂದು ಬೆಳೆಸಿದ ಹತ್ತಿಗೆ  ಸಿಕ್ಕ ಪ್ರತಿಫಲವು ಖರ್ಚು ಮಾಡಿದಷ್ಟೇ. ಇಂತಹ ಹಲವು ಅನುಭವಗಳ ಫಲವಾಗಿ ಅವರ ತಂದೆ ಬೇಸಾಯದ ಹಂಗಿಗೆ ಹೋಗದೆ ತಾವು ನಡೆಸುತ್ತಿದ್ದ ಹೋಟೆಲ್ನೆ ನೆಚ್ಚಿಕೊಂಡಿದ್ದರು. ಮದುವೆಯ ನಂತರ ಪತಿಯ ಬ್ಯಾಂಕ್ ಉದ್ಯೋಗದ  ನಿಮಿತ್ತ ದೇಶದ ಹಲವು ಭಾಗಗಳಲ್ಲಿ ತಿರುಗಾಟ. ಮುಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಯೂರಿದ ನಂತರ ಇದ್ದ ಅಲ್ಪ ಜಾಗದಲ್ಲೇ ನಿತ್ಯ ಪೂಜೆಗೆ ಬೇಕಾದ ಹೂವಿಗಾಗಿ ಆರಂಭವಾದ ಮಣ್ಣಿನ ನಂಟು ಇಂದು ತರಕಾರಿ ಬೆಳೆಸುವುದರವರೆಗೂ ಮುಂದುವರಿದಿದೆ.  

"ಮೊದಲೆಲ್ಲ ಗಿಡ ಹೇಗೆ ಸಾಕಬೇಕೆಂಬ ಅರಿವಿರಲಿಲ್ಲ. ತೋಟದ ಕಸ, ಕಳೆಯನ್ನೆಲ್ಲ ಸಂಗ್ರಹಿಸಿ ಸುಡುಮಣ್ಣು  ಮಾಡಿ ಗೊಬ್ಬರವಾಗಿ ಹಾಕುತ್ತಿದ್ದೆ", ಎಂದು ತಮ್ಮ ಹಿಂದಿನ ನೆನಪನ್ನು ಬಿಚ್ಚಿಡುವ ಸುಜಾತರು,  ಗಿಡಗಳ ಆರೈಕೆಯ ಪ್ರಾಥಮಿಕ ಅರಿವು ಕೃಷಿ ಮೇಳವೊಂದರಲ್ಲಿ ಖರೀದಿಸಿದ, ಅನಸೂಯ ಶರ್ಮರ 'ಹಿತ್ತಿಲು'*** ಎಂಬ ಪುಸ್ತಕದಿಂದ ಲಭಿಸಿತು ಎನ್ನುತ್ತಾರೆ. ಸಂಜೆಯ ವಾಕಿಂಗ್ ಸಮಯದಲ್ಲಿ ಕೈಯಲ್ಲೊಂದು ಲಕೋಟೆ ಹಿಡಿದು ದಾರಿಯಲ್ಲಿ ಸಿಕ್ಕಿದ ದನದ ಸಗಣಿ ಅಸ್ಥೆಯಿಂದ ಸಂಗ್ರಹಿಸುತ್ತಾರೆ.  ಮನೆಯಲ್ಲಿ ದಿನನಿತ್ಯ ಸಂಗ್ರಹವಾಗುವ ಜೈವಿಕ ತ್ಯಾಜ್ಯ, ತೋಟದ ಕಳೆ, ಸಂಗ್ರಹಿಸಿದ ಸಗಣಿಯನ್ನು ಒಂದು ಪ್ಲಾಸ್ಟಿಕ್ ಬಕೇಟಿನಲ್ಲಿ ಕೊಳೆಯಲು ಬಿಡುತ್ತಾರೆ. ಮಣ್ಣಿನ ಹುಳುಗಳನ್ನು ನಿಯಂತ್ರಿಸಲು ಒಮ್ಮೊಮ್ಮೆ ಬೇವಿನ ಎಲೆಗಳನ್ನು ಈ ಮಿಶ್ರಣದಲ್ಲಿ ಹಾಕುವುದುಂಟು. ಎರಡು ವಾರಗಳಲ್ಲಿ ತಯಾರಾಗುವ ಈ ಗೊಬ್ಬರವನ್ನು ಗಿಡದ ಬುಡಗಳಿಗೆ ಆಗಾಗ ಹಾಕುತ್ತಾರೆ. "ಈ ಬಸಳೆಯ ಎಲೆ ನೋಡಿ. ನನ್ನ ಅಂಗೈಯ ಎರಡರಷ್ಟಿದೆ",   ತಮ್ಮ ಪ್ರಯೋಗದ ಫಲಿತಾಂಶವನ್ನು ಹೆಮ್ಮೆಯಿಂದಲೇ ತೋರಿಸುತ್ತಾರೆ. 

DSC_3060
ದೊಡ್ಡ ದೊಡ್ಡ ಎಲೆಯ ಬಸಳೆ ಸೊಪ್ಪಿನ ಗಿಡ 

ಬಡಾವಣೆಗೆ ಬೆಂಗಳೂರಿನ ನಗರ ಪಾಲಿಕೆಯಿಂದ ಕೊಳವೆ ಬಾವಿಯ ನೀರಿನ ಪೂರೈಕೆ. ಇದೇ ನೀರನ್ನು ಕೈತೊಟಕ್ಕೆ ಪೈಪಿನ ಮೂಲಕ ಹಾಯಿಸುತ್ತಾರೆ.  ಬೇಸಿಗೆಯಲ್ಲಿ ಒಮ್ಮೊಮ್ಮೆ ನೀರಿನ ಅಭಾವ ತೋರುವುದುಂಟು. ಆಗೆಲ್ಲ ಪಾತ್ರೆ ತೊಳೆದ ನೀರನ್ನು ಸಂಗ್ರಹಿಸಿ ಅದನ್ನೇ ಗಿಡಗಳಿಗೆ ಹಾಕುತ್ತಾರೆ.  

"ಹಿಂದಿನ ವರ್ಷ ತೋಟದ ತುಂಬಾ ಕಂಬಳಿ ಹುಳುಗಳು, ಈ ವರ್ಷ ನಿಯಂತ್ರಣದಲ್ಲಿದೆ ", ಮುಂದುವರೆಸುತ್ತ ಸುಜಾತರು,  ಹಿಂದೆಲ್ಲ ತೋಟದಲ್ಲಿ ಕೀಟಗಳ ಹಾವಳಿಯಿಂದ ಗಿಡ  ಸೊರಗತೊಡಗಿದಾಗ, ಅನಿವಾರ್ಯತೆಯಿಲ್ಲದೆ  ಅಂಗಡಿಯಿಂದ ರಾಸಾಯನಿಕ ಖರೀದಿಸಿ ಸಿಮ್ಪಡಿಸುತ್ತಿದ್ದೆ. ಹಿತ್ತಿಲು ಪುಸ್ತಕ ನನ್ನ ತೋಟ ವಿಷಮಯವಾಗುವುದನ್ನು ತಪ್ಪಿಸಿತು. ಕೈತೊಟದಲ್ಲೇ ಬೆಳೆಸಬಹುದಾದ ಚೆಂಡು ಹೂವು ಕೀಟ ವಿಕರ್ಷಕ ಅಷ್ಟೇ ಅಲ್ಲ, ಹೂವಿನ ಕಷಾಯ ಮಾಡಿ  ಸಿಮ್ಪಡಿಸುವುದರಿಂದಲೂ ಕೀಟಗಳನ್ನು ಹತೋಟಿಯಲ್ಲಿಡಬಹುದು. ಬಿತ್ತನೆಯ ಸಮಯದಲ್ಲಿ ಬೀಜವನ್ನು ಇರುವೆಗಳಿಂದ ಕಾಪಾಡಲು ಮಡಿಯಲ್ಲಿ  ಸುಡುಮಣ್ಣು ಹದವಾಗಿ ಹರಡುತ್ತಾರೆ.   

ಸಾಮಾನ್ಯವಾಗಿ ಮನೆಗೆ ತರುವ ತರಕಾರಿಗಳಿಂದಲೇ ಗಿಡವನ್ನು ನಾಟಿ ಮಾಡುತ್ತಾರೆ. ಮೇಳಗಳಲ್ಲೂ ಸಂಗ್ರಹಿಸಿದ ಬೀಜವನ್ನು ಬಿತ್ತಿ, ಆ ಸಸಿಗಳ ಬೀಜವನ್ನು ಕಾಪಿಡುತ್ತಾರೆ. ಸಂಗ್ರಹಿಸಿದ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ಬಾಟಲಿಗಳಲ್ಲಿ ಮುಂದಿನ ಬಿತ್ತನೆಗೆ ಭದ್ರವಾಗಿರಿಸುತ್ತಾರೆ. ಆಸಕ್ತರಿಗೂ ಅಸ್ಥೆಯಿಂದ ಹಂಚುವುದುಂಟು. ಅಕ್ಕ ಪಕ್ಕದ ಮನೆಯಲ್ಲಿ, ತಾವು ಭೇಟಿ ಕೊಟ್ಟ ಊರಿನಲ್ಲಿ ಹೊಸ ಗಿಡ ಕಂಡರೆ  ಅದನ್ನು ಸಂಗ್ರಹಿಸುವುದು ಇವರ ಹವ್ಯಾಸ.           

DSC_3055
ತಮ್ಮ ಕೈತೋಟದ ಕೆಲಸದಲ್ಲಿ - ಪ್ಲಾಸ್ಟಿಕ್ ಮುಚ್ಚಿದ್ದು ಸುಡುಮಣ್ಣು 

ಇವರ ಈ ಹವ್ಯಾಸಕ್ಕೆ ಮನೆಯಲ್ಲಿಯೂ ಸಹಕಾರ ದೊರೆಯುತ್ತದೆ. ಭಾನುವಾರದಂದು ಅಡುಗೆ ಮನೆಯ ಕೆಲಸ ನಿರ್ವಹಿಸುವ ಪತಿಯಿಂದಾಗಿ ವಾರದಲ್ಲೊಮ್ಮೆ ತಮ್ಮ ತೋಟದ ಕಡೆ ಹೆಚ್ಚಿನ ಗಮನ ಹರಿಸಲು ಸಹಾಯಕವಾಗುತ್ತದೆ. ಮಗ ಶ್ರೀನಿವಾಸ ಕೂಡ ಬೇವಿನ ಸೊಪ್ಪು, ಸಗಣಿ ಸಂಗ್ರಹಿಸುವಲ್ಲಿ ನೆರವಿಗೆ ನಿಲ್ಲುತ್ತಾರೆ.    ಮನೆಯ ಉಪಯೋಗಕ್ಕೆ ಬಳಸಿಯೂ ಉಳಿಯುವ ತರಕಾರಿಯನ್ನು ಅಕ್ಕ ಪಕ್ಕದ ಮನೆಯವರಿಗೂ, ಬಂಧುಗಳಿಗೂ ಹಂಚುತ್ತಾರೆ. "ನಾವೇ ಬೆಳೆಸಿದ ತರಕಾರಿಯ ರುಚಿ ಹೆಚ್ಚು, ವಿಷ ರಹಿತ" ಎನ್ನುವ ಸಮಾಧಾನ ಸುಜಾತರಿಗೆ. "ಮನೆಯ ಸುತ್ತ ವಿಶಾಲ ಆವರಣ, ಚೆನ್ನಾಗಿ ಸಂವಹಿಸುವ ಗಾಳಿ ಬೆಳಕು, ಬೆಳಗಾದೊಡನೆ ಮುದ ನೀಡುವ ಹಕ್ಕಿಗಳ ಚೀರಾಟ ಬೋನಸ್ ", ಎನ್ನುತ್ತಾರೆ ಪತಿ ವಸಂತರು. ಆಹಾರದ ಅಭಾವವೆಂದು ಜವಾಬ್ದಾರಿಯನ್ನೆಲ್ಲ ರೈತರ ತಲೆಗೆ ಹೊರಿಸುವುದರ ಬದಲು, ನಮ್ಮ ಕೈಲಾದಷ್ಟು ನಾವೇ ಬೆಳೆದುಕೊಳ್ಳುವುದು ಆರೋಗ್ಯದ ಹಿತದಿಂದಲೂ ಒಳ್ಳೆಯದು.  ನೀರಿನ ಬವಣೆ ಎದುರಿಸುತ್ತಿರುವ ಬೆಂಗಳೂರಿನಂತಹ ನಗರದಲ್ಲಿ ಕಾಂಕ್ರೀಟಿನಿಂದ ಮುಕ್ತವಾದ ಈ ರೀತಿಯ ನೆಲ ಮಳೆ ನೀರು ಇಂಗಿಸಲೂ ದಾರಿಯಾದಂತಾಗುತ್ತದೆ.                         

***
ಪುಸ್ತಕ:  ಹಿತ್ತಿಲು - ಕೈತೋಟಕ್ಕೊಂದು ಕೈಪಿಡಿ 
ಲೇಖಕರು: ಅನುಸೂಯ ಶರ್ಮ
ಬೆಲೆ: ೧೦೦ ರೂಪಾಯಿ
ಪ್ರಕಾಶನ:
ಭೂಮಿ ಪ್ರಕಾಶನ 
ನಂ.6/32, 'ಕಾಂಚನ ನಿಲಯ'
2ನೇ ಡಿ ಮುಖ್ಯರಸ್ತೆ, 60 ಅಡಿ ರಸ್ತೆ
ಆರ್ಎಂವಿ 2ನೇ ಹಂತ, ಭೂಪಸಂದ್ರ
ಬೆಂಗಳೂರು 560 094
ದೂರವಾಣಿ: 080-23510533 

ಕಿರು ಪರಿಚಯ: 
ಹಿರಿಯ ಲೇಖಕಿ ಅನುಸೂಯ ಶರ್ಮ ತಮ್ಮ ಎರಡು ದಶಕಗಳ ಕೈತೋಟದ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕೈತೋಟದ ಕುರಿತ ಪ್ರಾಥಮಿಕ ಮಾಹಿತಿಯಿಂದ ಹಿಡಿದು ತರಕಾರಿ ಮೌಲ್ಯವರ್ಧನೆ, ರೋಗ-ಕೀಟ ಬಾಧೆ, ತರಕಾರಿ-ಹಣ್ಣು-ಸಂಬಾರ ಪದಾರ್ಥಗಳ ಮೌಲ್ಯವರ್ಧನೆ ಹೀಗೆ ಕೈತೋಟಕ್ಕೆ ಸಂಬಂಧಿಸಿದ ಹತ್ತಾರು ಮಾಹಿತಿ ಪುಸ್ತಕದಲ್ಲಿ ಅಡಕವಾಗಿದೆ.

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)