Tuesday, August 31, 2010

ಮೀನು ಹಿಡಿಯಲು ಕಲಿಸಿ, ಮೀನು ಹಿಡಿದುಕೊಡಬೇಡಿ

hanuman_begger

ಹಬ್ಬ ಹರಿದಿನಗಳಲ್ಲಿ ದೇವತೆಗಳ ವೇಷ ಧರಿಸಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಜನವರ್ಗವುಂಟು. ಅದೂ ಅಲ್ಲದೇ ಪುಣ್ಯ ಕ್ಷೇತ್ರಗಳಂತಹ ಸ್ಥಳಗಳಲ್ಲಿ ವರ್ಷದುದ್ದಕ್ಕೂ ವೇಷ ಧರಿಸಿದ ಅಥವಾ ಧರಿಸದ ಭಿಕ್ಷುಕರೂ ಕಾಣಿಸಿಕೊಳ್ಳುವುದುಂಟು. ಕೈಲಾಗದವರು, ವಯಸ್ಸಾದವರು ಮಾತ್ರವಲ್ಲದೇ ಚಿಕ್ಕ ಮಕ್ಕಳೂ ಭಿಕ್ಷೆಗೆ ಕೈಯೊಡ್ಡುವುದುಂಟು. ಇಂತವರ ಕಾಟ ತಾಳಲಾರದೇ ಪುಣ್ಯ ಕ್ಷೇತ್ರಗಳ ಬಗ್ಗೆ ಜಿಗುಪ್ಸೆ ಮೂಡುವುದು ಸಹಜ. ಆದರೆ ಇತ್ತೀಚೆಗೆ ಇವು ಕೇವಲ ಪುಣ್ಯ ಕ್ಷೇತ್ರಗಳಷ್ಟೇ ಅಲ್ಲದೇ ಬೆಂಗಳೂರಿನ ಸಮೀಪದ ಹಳ್ಳಿಗಳಲ್ಲೂ ಪಸರಿಸಿರುವುದು ವಿಪರ್ಯಾಸ!

ತಿಂಗಳ ಹಿಂದಷ್ಟೇ ಭೇಟಿ ನೀಡಿದ ಸ್ಕಂಧಗಿರಿ ಒಂದು ಬಗೆಯ ಉದಾಹರಣೆಯಾದರೆ ವಾರದ ಹಿಂದೆ ಭೇಟಿ ನೀಡಿದ ಪಾಂಡವಪುರ ಇನ್ನೊಂದು ಬಗೆಯದು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಸ್ಕಂಧಗಿರಿಯಂತಹ ತಾಣಕ್ಕೆ ಹೋದರೆ ಸ್ವಯಂಘೋಷಿತ ಗೈಡುಗಳ ಕಾಟ. ಮೊದಲು "ಸಾರ್ ದಾರಿ ನಿಮಗೆ ಗೊತ್ತಾಗೋದಿಲ್ಲ, ಮಧ್ಯದಲ್ಲಿ ಅಪಾಯಕರ ಪ್ರಾಣಿಗಳು ಎದುರಾಗಬಹುದು", ಇತ್ಯಾದಿ ಬೆದರಿಕೆಯೊಡ್ಡಿ ಗೈಡಿನ ಅನಿವಾರ್ಯತೆ ಸೂಚಿಸುತ್ತಾರೆ. ಇದಕ್ಕೆ ನೀವು ಮಣೆ ಹಾಕದಿದ್ದರೆ, ಗುಂಪು ಕಟ್ಟಿಕೊಂಡು ಬಂದು "ಇಲ್ಲಿ ಕಳ್ಳಕಾಕರು ಜಾಸ್ತಿ, ದಾರೀಲಿ ನಿಮಗೇನಾದರೂ ಅಪಾಯವಾಗಬಹುದು; ನಿಮ್ಮ ವಾಹನ ಇಲ್ಲೇ ಬಿಟ್ಟಿದ್ದೀರ, ಅದಕ್ಕೆ ನಾವು ಜವಾಬ್ದಾರರಲ್ಲ;" ಇತ್ಯಾದಿಯಾಗಿ ಬೆದರಿಸುವುದರ ಮೂಲಕವಾದರೂ ಒಂದು ಬೆಲೆಯನ್ನು ನಿಶ್ಚಯಿಸಿ ನಿಮ್ಮೊಂದಿಗೆ ಬರುತ್ತಾರೆ. ಇನ್ನು ಕೊಕ್ಕರೆ ಬೆಳ್ಳೂರು ಅಥವಾ ತೊಣ್ಣೂರು ಕೆರೆಗೋ ಭೇಟಿಯಿತ್ತರೆ ಬೇರೆಯ ಬಗೆಯ ವಸೂಲಿ. "ಅಣ್ಣ ಅಣ್ಣ, ನನ್ನ ಹತ್ರ ಪೆನ್ನಿಲ್ಲ/ಪುಸ್ತಕವಿಲ್ಲ. ತಗೋಳೋಕೆ ದುಡ್ಡು ಕೊಡಿ. ನಂಬಿಕೆ ಇಲ್ಲದಿದ್ರೆ ಇಲ್ಲೇ ಹತ್ತಿರದಲ್ಲಿ ಅಂಗಡಿ ಇದೆ ಕೊಡ್ಸಿ ಅಣ್ಣ " ಅಂತ ಬೇಡೋ ಮಕ್ಕಳು.  ಮೊದಲನೆಯದು ಒಂದು ರೀತಿಯಲ್ಲಿ ಹಿಂದಿನಿಂದ ಇದ್ದಿದ್ದೇ. ಆದರೆ ಎರಡನೆಯದು ಮಾತ್ರ ಭಿಕ್ಷೆ ಬೇಡುವ ಹೊಸ ಪರಿ. ನನಗೆ ಆಶ್ಚರ್ಯವಾಗಿದ್ದು ಇವರು ದುಡ್ಡು ಬಿಟ್ಟು ಪುಸ್ತಕ ಪೆನ್ನನ್ನು ಕೇಳಲು ತೊಡಗಿದ್ದು ಹೇಗೆ ಎಂದು.

"community service" ಇತ್ತೀಚಿನ ದಿನಗಳಲ್ಲಿ ತಲೆಯೆತ್ತುತಿರುವ ಹೊಸ ಬಗೆಯ ಹವ್ಯಾಸ. ಜನರ ಸೇವೆಯ ಹೆಸರಿನಲ್ಲಿ ಉಳ್ಳವರಿಂದ ಹಣ ಸಂಗ್ರಹಿಸಿ, ಬಡವರನ್ನು ಹುಡುಕಿ ಅವರಿಗೆ ಸಹಾಯ ಮಾಡುವಂತದ್ದು.  ಇಂತವರು ಹೆಚ್ಚಾಗಿ ಸಹಾಯ ಮಾಡುವುದು ಶಾಲಾ ವಿದ್ಯಾರ್ಥಿಗಳಿಗೆ; ಪುಸ್ತಕ, ಪೆನ್ನು, ಪೆನ್ಸಿಲ್ ಬಟ್ಟೆ ಇತ್ಯಾದಿ ಹಂಚುವುದು. ಪಟ್ಟಣದಿಂದ ಆಗಾಗ್ಗೆ ಇಂಥವರು ಬಂದು ಪುಕ್ಕಟೆಯಾಗಿ ಪುಸ್ತಕ, ಪೆನ್ಸಿಲ್, ಪೆನ್ನು ಕೊಟ್ಟುಹೋಗುವುದನ್ನು ಕಂಡ ಮಕ್ಕಳು, ಅವರ ಹೆತ್ತವರು ಹಿಂದಿನ ರೀತಿ ಭಿಕ್ಷೆ ಬೇಡುವುದಕ್ಕಿಂತ ಪುಸ್ತಕ ಪೆನ್ನಿಗಾಗಿ ಕೇಳಿದರೆ ಜನರು ಹಣ ಕೊಡುತ್ತಾರೆ ಎಂಬುದನ್ನು ಮನಗಂಡರೇನೋ. ಕೊಕ್ಕರೆ ಬೆಳ್ಳೂರಿನಂತಹ ಹಳ್ಳಿಗೆ ವಾರಾಂತ್ಯದಲ್ಲಿ ಕನಿಷ್ಟಪಕ್ಷ ೧೦-೧೫ ಜನ ಭೇಟಿ ಕೊಟ್ಟರೂ ಪ್ರತಿಯೊಂದು ಮಕ್ಕಳಿಗೆ ೭ ದಿನಗಳಲ್ಲಿ ಅಷ್ಟೊಂದು ಪೆನ್ನು, ಪುಸ್ತಕಗಳ ಅವಶ್ಯಕತೆಯಾದರೂ ಏನುಂಟು? "community service"ನ ಹೆಸರಲ್ಲೋ, ನಾವೇ ಖುದ್ದಾಗಿ ಮಕ್ಕಳಿಗೆ ಪುಸ್ತಕ ಕೊಡಿಸಿದರೂ ಅವುಗಳನ್ನು ಮತ್ತೆ ಅಂಗಡಿಗೆ ಮಾರುವುದಿಲ್ಲ ಎಂದು ಹೇಗೆ ತಿಳಿಯುವುದು?

"community service"ನಲ್ಲಿ ತೊಡಗಿಸಿಕೊಂಡವರ ಉದ್ದೇಶ ಒಳ್ಳೆಯದಿರಬಹುದು. ಆದರೂ ಸಮಸ್ಯೆಯ ಮೂಲ ತಿಳಿಯದೆಯೆ ತಾತ್ಕಾಲಿಕ ಪರಿಹಾರ ಕೊಡಲು ಹೋದರೆ ಮೀನು ಕೊಟ್ಟಂತಾಗುತ್ತದೆ; ನಾಳೆ ಮೀನಿಗಾಗಿ ಮತ್ತೆ ಕೈ ಒಡ್ಡುವಂತಾಗುತ್ತದೆ. ಅದರ ಬದಲು ಸಮಸ್ಯೆಯ ಮೂಲದತ್ತ ಚಿಂತಿಸಿದರೆ ಒಳಿತಲ್ಲವೇ?

ಕಳೆದ ವಾರಾಂತ್ಯ ಇಂತಹ ಹಲವು ಮಕ್ಕಳನ್ನು ನೋಡಿ ನೋಡಿ ಬೇಸತ್ತು (ಯಾರಿಗೂ ಏನೂ ಕೊಡಲಿಲ್ಲ), ಕೊನೆಯಲ್ಲಿ ಬಂದವನ ಬಳಿ, ಅವನು ಮಾತನಾಡುವ ಮೊದಲೇ, "ತಮ್ಮಾ, ಪುಸ್ತಕ ಕೊಡ್ಸು" ಅಂತ ಕೇಳಿದೆ. ನನ್ನನ್ನೊಮ್ಮೆ ನೋಡಿ ಏನೂ ಹೇಳದೆ ಹಿಂದಿರುಗಿದ. ಜೊತೆಯಲ್ಲಿದ್ದ ರವಿ, "ಮುಂದಿನ ಬಾರಿ lap top ಕೊಡ್ಸೋಕೆ ಕೇಳ್ಕೊಳಿ" ಅಂದ್ರು.

9 comments:

  1. ಉದರನಿಮಿತ್ತಂ ಬಹುಕೃತ ವೇಷಮ್!

    ReplyDelete
  2. ಪುಸ್ತಕ, ತಿಂಡಿ-ಊಟ, ಔಷಧಿ ಹೀಗೆ ನಾನಾತರದ ಬೇಡಿಕೆಗಳಿಗೆ ಮಣಿದು ಕೊನೆಗೊಂದು ದಿನ ಔಷಧಿ ಕೊಡಿಸಿಕೊಂಡ ಹೆಂಗಸು... ಅರ್ಧ ಘಂಟೆ ನಂತರ, ಅದೇ ಅಂಗಡಿಗೆ ಔಷಧಿ ವಾಪಸ್ಸು ಕೊಟ್ಟು ದುಡ್ಡು ಪಡೆಯುವುದು ಕಂಡ ನಂತರ, ನಾವೂ ಯಾರಿಗೂ ಏನನ್ನೂ ಕೊಡುವುದಿಲ್ಲವೆಂದು ನಿರ್ಧರಿಸಿದೆವು. ಯಾರನ್ನು ನಂಬುವುದು ಎನ್ನುವುದೇ ಅರ್ಥವಾಗದಂತಾಗಿದೆ.... ನಿಮ್ಮ ಅನುಭವ ಬರೆದು, ಅಕಸ್ಮಾತ್ ಆ ಜಾಗಗಳಿಗೆ ಹೋದರೆ, ನಾವೂ ಎಚ್ಚರದಿಂದಿರಬೇಕೆಂದಿದ್ದೀರಿ ಪಾಲ... ಧನ್ಯವಾದಗಳು.

    ಶ್ಯಾಮಲ

    ReplyDelete
  3. ಪಾಲಚಂದ್ರ..
    ತುಂಬಾ ಚೆನ್ನಾಗಿ ಬರೆದಿದ್ದೀರಾ..... ನಿಮ್ಮನ್ನು ಬ್ಲೊಗ್ ಸಮ್ಮೇಳನದಲ್ಲಿ ನೋಡಿದ್ದೆ..... ಆದರೆ ಮಾತನಾಡಿಸಲು ಆಗಿರಲಿಲ್ಲ.... ಫೊಟೊ ತುಂಬಾ ಚೆನ್ನಾಗಿ ತೆಗಿತೀರಾ....

    ReplyDelete
  4. ತುಂಬಾ ಚೆನ್ನಾಗಿ ಬರೆದಿದ್ದೀರಿ. ಒಳ್ಳೆಯ ಎಚ್ಚರಿಕೆ. ನಾನು ಈ ರೀತಿ ಮೋಸ ಹೋಗಿದ್ದು ತುಂಬಾ ಸಲ.

    ReplyDelete
  5. ಲೇಖನ ಚೆನ್ನಾಗಿ ಮೂಡಿಬಂದಿದೆ.ನನಗೂ ಇಂತಹ ಅನುಭವ ಆಗಿದೆ. ಈ ಬಗ್ಗೆ ಅಲ್ಲಿಯ ಜನರಿಗೆ ತಿಳುವಳಿಕೆ ಕೊಟ್ಟು ಅವರ ಊರುಗಳಿಗೆ ಕೆಟ್ಟ ಹೆಸರು ಬರದಂತೆ ಎಚ್ಚರವಹಿಸಲು ತಿಳಿ ಸುವತ್ತ ಗಮನಹರಿಸಬೇಕಾಗಿದೆ.

    ReplyDelete
  6. ಪಾಲ ಅವರೆ, ಇದು ಆಧುನಿಕ ರೀತಿಯಲ್ಲಿ 'ಬೇಡಿ'ಕೊಳ್ಳುವುದು. ಚೆನ್ನಾಗಿದೆ ನಿಮ್ಮ ಅನುಭವದ ಬರಹ. ಇದು ಒಂದು ಎಚ್ಚರಿಕೆಯೂ ಆಗಿದೆ.
    ಧನ್ಯವಾದಗಳು.

    ReplyDelete
  7. ಸರ್

    ಇದರ ಶೀರ್ಷಿಕೆಯೇ ತುಂಬಾ ಅದ್ಭುತ

    ಬರಹ ಸೂಪರ್

    ReplyDelete
  8. ತುಂಬಾ ನಿಜವಾದ ಮಾತು, ತಾತ್ಕಾಲಿಕ ಪರಿಹಾರವನ್ನು ಕೊಡುವುದರಿಂದ ಯಾವ ಸಮಸ್ಯೆಯು ಪರಿಹಾರವಾಗುವುದಿಲ್ಲ, ದಿನ ಬೇಡುವುದರಲ್ಲಿ ಅರ್ಥವಿಲ್ಲ, ಒಮ್ಮೆ ಪರಿಸ್ಥಿತಿಯ ಒತ್ತಡಕ್ಕೆ ಬೇರೆಯವರಲ್ಲಿ ಸಹಾಯ ಕೇಳಿದರೆ ಪರವಾಗಿಲ್ಲ, ಅದೆ ದಿನದ ಕೆಲಸವಾದರೆ ಕಷ್ಟ. ಅದರೆ ಅದು ಯಾವ ರೀತಿಯದು ಎಂದು ಗುರುತಿಸಿ ಸಹಯ ಮಾಡುವದು ತುಂಬಾ ಕಷ್ಟ.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)