ಸ್ಥಳೀಯರ ವಿವರಣೆಯಿಂದ ಮನದಣಿಯದೆ ಚಿತ್ರ ತೆಗೆದುಕೊಂಡು ಸಂಪದದಲ್ಲಿ ಹಾಕಿದಾಗ, ಮರಿಜೋಸೆಫರು ಕೊಟ್ಟ ವಿವರಣೆ ಇಂತಿದೆ:
ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.
ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ದೇವನ ಸಾನ್ನಿಧ್ಯದಲ್ಲಿ ವಿರಾಜಮಾನನಾಗಿ ದೇವಸೇವೆ ಮಾಡುವ ದೃಶ್ಯ ಕಂಡುಬರುತ್ತದೆ. ಕೆಲ ವೀರಗಲ್ಲುಗಳಲ್ಲಿ ವೀರನ ಸಾವು ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆತ್ತಲಾಗಿರುತ್ತದೆ. ಕೆಲ ವೀರಗಲ್ಲುಗಳಲ್ಲಿ ಶಿವಲಿಂಗದ ಅಥವಾ ತೀರ್ಥಂಕರನ ಅಥವಾ ಶಂಖಚಕ್ರಗಳ ಚಿತ್ರವಿರುತ್ತದೆ. ಸೂರ್ಯ ಚಂದ್ರರ ಚಿತ್ರಗಳಿದ್ದರೆ ಆ ವೀರನ ಕೀರ್ತಿ ಆಚಂದ್ರಾರ್ಕವಾಗಿರುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಪಾಲಚಂದ್ರರು ತೋರಿಸಿರುವ ಚಿತ್ರದಲ್ಲಿ ವೀರನೊಬ್ಬನು ದರೋಡೆಕೋರರಿಂದ ತನ್ನ ಕುರಿಗಳನ್ನು ಕಾಪಾಡುವುದಕ್ಕಾಗಿ ಸೆಣಸುತ್ತಿದ್ದಾನೆ. ಈ ಸಂದರ್ಭದಲ್ಲಿ ಅವನು ಇಬ್ಬರು ಕಳ್ಳರನ್ನು ಕೆಳಕ್ಕೆ ಕೆಡವಿದ್ದಾನೆ. ಅವನ ಬಲಬದಿಯಲ್ಲಿ ಪ್ರಾಣಿಗಳ ಚಿತ್ರ ಇರುವುದರಿಂದ ತನ್ನ ಪ್ರಾಣಿಗಳನ್ನು ಸುರಕ್ಷಿತವಾಗಿ ಊರೆಡೆಗೆ ಕಳಿಸಿದ್ದಾನೆ ಎಂದರ್ಥ. ಅವನ ಎಡಬದಿಯಲ್ಲಿ ಪ್ರಾಣಿ ಕಂಡುಬಂದರೆ ಶತ್ರಗಳು ಅವನ್ನು ಅಪಹರಿಸಿದರು ಎಂಬುದನ್ನು ಸಂಕೇತಿಸುತ್ತದೆ. ಇಲ್ಲಿ ಆತ ತನ್ನ ಪ್ರಾಣಿಗಳನ್ನು ಉಳಿಸಿದ್ದಾನಾದರೂ ಶತ್ರಗಳ ಕೈ ಮೇಲಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ಆಗ ವೀರಸ್ವರ್ಗದ ಅಪ್ಸರೆಯರು ಬಂದು ನಿನ್ನಂಥ ವೀರ ಈ ಭೂಮಿಯಲ್ಲಿರುವುದು ತರವಲ್ಲ ಬಾರೆಂದು ತಮ್ಮ ಲೋಕಕ್ಕೆ ಕರೆದೊಯ್ಯುತ್ತಾರೆ. ಮೇಲಣ ಹಂತದಲ್ಲಿ ಆತ ಅಪ್ಸರೆಯರೊಂದಿಗೆ ಲಾಸ್ಯವಾಡುತ್ತಿರುವುದನ್ನು ನೋಡಬಹುದಾಗಿದೆ.
ಪುರಾತನ ದೇವಸ್ಥಾನವನ್ನೆಲ್ಲಾ ಜೀರ್ಣೋದ್ಧಾರದ ನೆಪದಿಂದ ಅಂದಗೆಡಿಸುವ ನಾವು ಇವುಗಳ ಬಗ್ಗೆ ಅಲಕ್ಷ್ಯ ಧೋರಣೆ ಏಕೆ ತಳೆದಿದ್ದೇವೆಯೋ ತಿಳಿದಿಲ್ಲ! ಐತಿಹಾಸಿಕವಾಗಿ ಇವುಗಳ ಪ್ರಾಮುಖ್ಯತೆ ಶೂನ್ಯವೇ?
[ಇದರಲ್ಲಿ ಬರೆದ ಹಳೆಗನ್ನಡ ಲಿಪಿ ತಿಳಿದವರಿಂದ ಓದಿಸಿ ತಿಳಿದು ಕೊಳ್ಳುವ ಕುತೂಹಲ ಇದೆ. ತಿಳಿದ ದಿನ ನಿಮ್ಮೊಂದಿಗೆ ಹಂಚಿಕೊಳ್ಳುವೆ.]
ಪಾಲ ಅವರೆ, ಫೋಟೋ ಚೆನ್ನಾಗಿವೆ. ನಾನೂ ಇದರ ಫೋಟೋ ತೆಗೆದಿದ್ದೆ, ಆದರೆ ಹೆಸರು ಗೊತ್ತಿರಲಿಲ್ಲ. ಧನ್ಯವಾದಗಳು
ReplyDeleteಪಾಲಚಂದ್ರ,
ReplyDeleteತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ....ಅದರ ಸಂಪೂರ್ಣ ವಿಳಾಸಕೊಡಿ...ಸಾಧ್ಯವಾಗದಿದ್ದಲ್ಲಿ ತಾವರೆಕೆರೆಯಿಂದ ಎಷ್ಟು ದೂರ ಹೋಗಬೇಕು ಅನ್ನುವುದನ್ನು ತಿಳಿಸಿ...ಇದರ ಬಗ್ಗೆ ಬೇರೆಯವರ ಗಮನ ಸೆಳೆಯಬೇಕಿದೆ...
ಧನ್ಯವಾದಗಳು
Deepasmitha,
ReplyDeleteಪ್ರತಿಕ್ರಿಯೆಗೆ ವಂದನೆಗಳು.
ಶಿವು,
ನಿಮ್ಮ ಕಾಳಜಿ ನೋಡಿ ತುಂಬಾ ಸಂತೋಷವಾಯಿತು. ಇದು ತಾವರೆಕೆರೆಯಿಂದ ನಾಲ್ಕು ಕಿ.ಮೀ. ಒಳಗಡನೇ ಇದೆ. ಮೈನ್ ರೋಡಿನಿಂದ ಎಡಗಡೆ ಹಾಗೆಯೇ ಕಣ್ಣಾಡಿಸ್ತಾ ಹೋದರೆ ಕಾಣಿಸುತ್ತೆ. ಇನ್ನೇನಾದರೂ ವಿವರ ಬೇಕಿದ್ದಲ್ಲಿ ತಿಳಿಸಿ.
ಪಾಲಚಂದ್ರ....
ReplyDeleteಇದನ್ನು ನೋಡುತ್ತಿದ್ದ ಹಾಗೆ ನಮ್ಮೂರಲ್ಲಿ ಹಾಳು ಬಿದ್ದಿರುವ..
"ಮಾಸ್ತಿಕಲ್ಲು" (ಮಹಾಸತಿ) ನೆನಪಾಯಿತು...
ನಮ್ಮ ಪುರಾತತ್ವ ಇಲಾಖೆಯವರು ಇದನ್ನೆಲ್ಲ ಸರಂಕ್ಷಿಸಿ ಇಡಬೇಕಾಗಿತ್ತು...
ನಿಮ್ಮ ಕಾಳಜಿಗೊಂದು ನಮನ...
ಓದಿದೆ ! ಬಹಳ ಸ೦ತೊಶವಾಯಿತು!
ReplyDeleteಪ್ರಕಾಶ್,
ReplyDeleteಮಾಸ್ತಿಕಲ್ಲಿನ ನೆನಪು ಮಾಡಿಸಿದ್ದಕ್ಕೆ ವಂದನೆಗಳು. ಮಹಾ ಸತಿ= ಮಾಸ್ತಿ, ಹಿಂದಿನ ಸತೀ ಪದ್ಧತಿಯ ಚಿತ್ರಣ ಇದು. ಸಾಧ್ಯವಾದರೆ ಇನ್ನೊಮ್ಮೆ ಊರಿಗೆ ಹೋದಾಗ ಇವುಗಳ ಚಿತ್ರ ತೋರಿಸಬಹುದೇ? ಪ್ರತಿಕ್ರಿಯೆಗೆ ವಂದನೆಗಳು.
ಸ್ಕಂದ,
ಅಂತೂ ಅದರ ಚಿತ್ರ ತೆಗೆದುಕೊಂಡು ಬಂದಿದ್ದಕ್ಕೆ ಇಷ್ಟಾದ್ರೂ ವಿಷಯ ಸಿಕ್ಕಿದಂತಾಯಿತು.
ಫಾಲ ಅವರೆ, ವೀರಗಲ್ಲುಗಳ ಚಿತ್ರಗಳು ಮತ್ತು ನಿಮ್ಮ ಬರಹ ಗಮನ ಸೆಳೆವಂತಿದೆ. ಇದು ಇತಿಹಾಸದ ಆಸ್ತಿ. ಇದನ್ನು ಸಂರಕ್ಷಿಸುವುದು ಎಲ್ಲರ ಹೊಣೆಯೂ ಸಹ. ಪ್ರಾಚ್ಯವಸ್ತು ಇಲಾಖೆಯ ಗಮನಕ್ಕೆ ಇದು ಬಂದಿರಲಿಲ್ಲವೆಂದು ಕಾಣುತ್ತದೆ. ನಿಮ್ಮ ಈ ಒಂದು ಪುಟ್ಟ ಲೇಖನದಿಂದ ಅವರಿಗೂ ತಲುಪಿ, ಇವುಗಳು ಸುರಕ್ಷಿತ ಹಾಗೂ ಸಂರಕ್ಷಿತವಾಗಲಿ ಎಂದು ಆಶಿಸುವೆ.
ReplyDeleteಪಾಲ ಅವರೆ
ReplyDeleteನೀವು ವೀರಗಲ್ಲುಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ಇಲ್ಲಿ ಪ್ರಕಟಿಸಿದ್ದು ತುಂಬಾ ಖುಷಿಯ ವಿಚಾರ.ಈ ವೀರಗಲ್ಲುಗಳ ಬಗ್ಗೆ ಇನ್ನೊಂದು ವಿಚಾರ ಏನು ಗೊತ್ತೇ? ಯುದ್ಧಕ್ಕೆ ಹೊರಡುವ ವೀರನನ್ನು ಆತನ ಸತಿ ಆರತಿ ಎತ್ತಿ ಕಳಿಸುವಾಗ ಹೀಗೆ ಹೇಳುತ್ತಾಳಂತೆ
" ನೀನು ಯುದ್ಧದಲ್ಲಿ ಹೋರಾಡಿ ವೀರಮರಣ ಅಪ್ಪಿದರೆ ಆ ಸ್ವರ್ಗದಲ್ಲಿ ಅಪ್ಸರೆಯರು ನಿನ್ನನ್ನು ಸ್ವಾಗತಿಸುವ ಮುಂಚೆ ನಾನು ನಿನ್ನನ್ನು ಸ್ವರ್ಗದಲ್ಲಿ ಸ್ವಾಗತಿಸುತ್ತೇನೆ " ಎಂದು
ಪತಿಯ ಮರಣದ ಸುದ್ಧಿ ಕೇಳಿದ ಕೂಡಲೇ ನಮ್ಮ ಹೆಣ್ಣು ಮಕ್ಕಳು ನಗುನಗುತ್ತಾ ತಮ್ಮ ಪ್ರಾಣ ಅರ್ಪಿಸಿ ಮಹಾಸತಿಯರಾಗುತ್ತಿದ್ದುದನ್ನು ಈ ಮಾತುಗಳು ಸೂಚಿಸುತ್ತವೆ.
ಈ ಮಾತುಗಳನ್ನು ನೆನಪಿಸಿಕೊಳ್ಳಲು ಕಾರಣವಾದ ನಿಮ್ಮ ಚಿತ್ರ ಬರಹಕ್ಕೆ ಧನ್ಯವಾದಗಳು
ಚಂದ್ರಕಾಂತ ಮೇಡಂ,
ReplyDeleteಪತಿಗೆ ಸತಿಯ ಹಾರೈಕೆಯ ಬಗ್ಗೆ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ವಂದನೆ.
ಕ್ಷಣಚಿಂತನೆ,
ನಿಮ್ಮ ಆಶಯದಂತೆಯೇ ಆಗಲಿ.