Monday, June 06, 2011

ಬೆಂಗಳೂರಿನ ಕೆಂಪಕ್ಕಿ ಸಂತೆ


ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೀಗೆ ನಾನಾ ಅನಾರೋಗ್ಯದ ನೆಪವೊಡ್ಡಿ ಅನ್ನ ತ್ಯಜಿಸುತ್ತಿರುವ ಸಮಯದಲ್ಲಿ ಅನ್ನದ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಒಂದು ಯತ್ನ. 

DSC_2569

ಡಯಾಬಿಟೀಸಿಗೆ ಯಾವ ಅಕ್ಕಿ ತಿನ್ನಬೇಕು?”, ಮೇಳದಲ್ಲಿನ ಮಳಿಗೆಗಳಿಗೆ ಭೇಟಿಯಿಡುತ್ತಿದ್ದ ಗ್ರಾಹಕರ ಮುಖ್ಯ ಪ್ರಶ್ನೆಯಾಗಿತ್ತು. ಡಯಾಬಿಟೀಸಿಗೆ ಪಥ್ಯದ ನೆಪದಲ್ಲಿ ಡಾಕ್ಟರು, ಡಯಟೀಶಿಯನ್ಸ್ ಬಿಳಿಯಕ್ಕಿಯನ್ನು ನಿಷೇಧಿಸಿರುತ್ತಾರೆ. ಅನ್ನ ತಿನ್ನದೇ ಇದ್ದ ಹಲವು ದಿನಗಳ ಹಪಹಪಿ ಗ್ರಾಹಕರ ಮಾತಿನಲ್ಲಿತ್ತು. ಕೆಂಪಕ್ಕಿ ಯಾವುದಾದರೂ ತಿನ್ನಬಹುದುಎಂಬ ಉತ್ತರಕ್ಕೆ ಪ್ರತಿಕ್ರಿಸುವಾಗ ಗ್ರಾಹಕರು ಎಷ್ಟು ದಿನ ತಿಂದರೆ ವಾಸಿಯಾಗುತ್ತದೆ?ಎಂಬ ಮತ್ತೊಂದು ಪ್ರಶ್ನೆ.

ಇಷ್ಟಕ್ಕೂ ಕೆಂಪಕ್ಕಿ ಎಂದರೆ ಏನು ಎಂಬುದನ್ನು ಮೊದಲು ತಿಳಿದಿಕೊಳ್ಳುವುದೊಳಿತು. ಭತ್ತದ ಹೊರಗಿನ ಹೊಟ್ಟು ತೆಗೆದಾಗ ಉಳಿಯುವುದೇ ಕೆಂಪಕ್ಕಿ. ಬಿಳಿಯಕ್ಕಿಗಿಂತ ಸ್ವಲ್ಪ ನಿಧಾನಕ್ಕೆ ಬೇಯುವ ಇದು ಅನ್ನ ಮಾಡಿದಾಗ ದಪ್ಪ ದಪ್ಪಗೆ ಸ್ವಲ್ಪ ಅಂಟು ಅಂಟಾಗಿರುತ್ತದೆ. ಹಾಗೆಯೇ ಬಿಳಿ ಅಕ್ಕಿಯೂ ಇದೇ ಭತ್ತದಿಂದ ತಯಾರಿಸಲ್ಪಡುತ್ತದೆಯಾದರೂ ಭತ್ತದ ಹೊಟ್ಟಿನ ಜೊತೆಗೆ ಅಕ್ಕಿಯ ಹೊರಪದರವನ್ನೂ ಪಾಲೀಷ್ ಮಾಡಿ ತೆಗೆಯಲಾಗುತ್ತದೆ.

ಹಾಗಾದರೆ ಕೆಂಪಕ್ಕಿ, ಬಿಳಿಯಕ್ಕಿಯ ಮೂಲ ಒಂದೇ ಎಂದಾಯ್ತು. ಎರಡರಲ್ಲೂ ದೇಹಕ್ಕೆ ಅಗತ್ಯವಾದ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಪ್ರೋಟೀನ್ ಇರುತ್ತದೆ. ಆದರೆ ಪಾಲಿಷ್ ಮಾಡುವುದರಿಂದ ಹೊರ ಪದರದಲ್ಲಿರುವ ವಿಟಮಿನ್, ಖನಿಜಾಂಶ, ನಾರಿನಾಂಶ ಬಿಳಿಯಕ್ಕಿಯಲ್ಲಿ ಅಲಭ್ಯವಾಗುತ್ತದೆ. ಈ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಬಿಳಿಯಕ್ಕಿಗೆ ಕೆಲವು ವಿಟಮಿನ್, ಖನಿಜಾಂಶಗಳನ್ನು ಕೃತಕವಾಗಿ ಸೇರಿಸಿ ಅಕ್ಕಿಯ ಮೌಲ್ಯವರ್ಧನೆ ಮಾಡಲಾಗುತ್ತದೆ. ಇಷ್ಟೆಲ್ಲಾ ಸೇರಿಸಿದರೂ ಅಕ್ಕಿಯನ್ನು ತೊಳೆದು ನಂತರ ಬಳಸುವುದರಿಂದ ಹೆಚ್ಚಿನ ಪೋಷಕಾಂಶಗಳು ನಷ್ಟವಾಗುವ ಸಂಭವವೇ ಹೆಚ್ಚು. ಅಲ್ಲದೇ ಕೆಂಪಕ್ಕಿಯಲ್ಲಿ ಲಭ್ಯವಿರುವ ಖನಿಜಾಂಶವಾದ ಮೆಗ್ನೇಶಿಯಂ, LDL Cholesterol ಕಡಿಮೆ ಮಾಡುವ ಗುಣವುಳ್ಳ ಹೊಟ್ಟಿನ ಎಣ್ಣೆ, ನಾರಿನಂಶ ಬಿಳಿಯಕ್ಕಿಯಲ್ಲಿ ಅಲಭ್ಯ. ಆರೋಗ್ಯಕ್ಕೆ ಒಳ್ಳೆಯದೆಂದು ಇದೇ ಹೊಟ್ಟಿನ ಎಣ್ಣೆಯನ್ನೇ ಮತ್ತೆ ದುಡ್ಡು ಕೊಟ್ಟು ತರುತ್ತೇವೆ. ಇಲ್ಲಿ ಲಾಭವಾಗಿದ್ದು ಉತ್ಪಾದಕರಿಗೂ ಅಲ್ಲ, ಗ್ರಾಹಕರಿಗೂ ಅಲ್ಲ – ಮಧ್ಯವರ್ತಿಗಳಿಗೆ.

DSC_2580

ಈ ಮೊದಲೇ ಉಲ್ಲೇಖಿಸಿದ ಪ್ರಶ್ನೆಗೆ ಮಾಹಿತಿದಾರರು ಉತ್ತರಿಸುತ್ತಾ, ಕೆಂಪಕ್ಕಿಯನ್ನು ಮಾತ್ರೆಯಂತೆ ಸೇವಿಸುವುದಲ್ಲ, ಅದರ ಬದಲಾಗಿ ಕೆಂಪಕ್ಕಿ ಸೇವಿಸಿದರೆ ಮಾತ್ರೆಯ ಅಗತ್ಯವಿಲ್ಲ. ಇದು ಜೀವನ ಶೈಲಿಯ ಪರಿವರ್ತನೆ. ಅಳವಡಿಸಿಕೊಂಡರೆ ನಮ್ಮ ಮುಂದಿನ ಪೀಳಿಗೆಯ ಆಹಾರ ಪದ್ಧತಿಯಾದರೂ ಆರೋಗ್ಯಪೂರ್ಣವಾಗಿ, ಕಾಯಿಲೆ ಮುಕ್ತವಾಗಿರಬಹುದು.       
ಸುಮಾರು ೫೦ರಷ್ಟು ದೇಶೀ, ವಿದೇಶೀ ಅಕ್ಕಿಯ ತಳಿಗಳ ನಮೂನೆ ಪ್ರದರ್ಶನಕ್ಕಿರಿಸಲಾಗಿತ್ತು. ಸರ್ಪ ಸುತ್ತಿಗೆ ಕರಿ ಭತ್ತ, ಬಾಣಂತಿಯರಿಗೆ ಕರಿಗಜವಲಿ, ಮೂಲ ವ್ಯಾಧಿ ಮತ್ತು ನಿಶ್ಯಕ್ತಿಗೆ ಕೇರಳದ ನವರ, ಪಾಯಸಕ್ಕೆ ಬರ್ಮಾ ಕಪ್ಪು ಅಕ್ಕಿ, ಫಲಾವಿಗೆ ಗಂಧಸಾಲೆ ಹೀಗೆ ಬೇರೆ ಬೇರೆ ಕಾಯಿಲೆಗೆ ಬೇರೆ ಬೇರೆ ಭತ್ತ. ಅಲ್ಲದೇ ಒಂದೊಂದು ಅಡುಗೆಗೆ ಒಂದೊಂದು ಭತ್ತ. ಅದರಲ್ಲೂ ಕರಿ ಭತ್ತ ಉತ್ತರ ಕನ್ನಡ ಜಿಲ್ಲೆಯ ನೆರೆಯ ನೀರಿನಲ್ಲೂ ಬೆಳೆಯುವಂಥದ್ದು.

ತಮ್ಮ ಬಾಲ್ಯದಲ್ಲಿ ಹಳ್ಳಿಯಲ್ಲಿ ಉಂಡು ಬೆಳೆದ ಭತ್ತವನ್ನು ನೋಡುವ ಸಲುವಾಗಿಯೇ ಹಿರಿಯರನೇಕರು ಬಂದಿದ್ದರೆ, ಇನ್ನು ಕೆಲವರು ಪರಿಚಯಿಸಿಕೊಂಡು ಕೊಳ್ಳುವ ಉತ್ಸಾಹದಲ್ಲಿದ್ದರು, ಕೆಲವು ಹವ್ಯಾಸೀ ರೈತರು ಭತ್ತ ಬೆಳೆದವರ ಅನುಭವ ತಿಳಿದುಕೊಳ್ಳುತ್ತಿದ್ದರು. ಯಾದಗಿರಿ ಜಿಲ್ಲೆಯ ದೇವೇಂದ್ರಪ್ಪ ಭೋಯಿ, ಈ ತಳಿಯ ಹುಲ್ಲು ಎತ್ತರಕ್ಕೆ ಬೆಳೆಯುತ್ತದೆ. ರಾಸಾಯನಿಕ ಉಪಯೋಗಿಸಿದರೆ ಹುಲ್ಲು ಸೊಕ್ಕಿ ಬೆಳೆದು ಫಸಲು ಬಂದ ಕೂಡಲೇ ಗಿಡ ಬಾಗಿ ಫಸಲು ನಷ್ಟವಾಗುವುದು. ದೇಶೀ ಪದ್ಧತಿಯಲ್ಲಿ ಬೆಳೆಯುವುದರಿಂದ ಫಸಲು ಕಡಿಮೆ. ಆದರೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ”, ನವರ ಬೆಳೆದ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಒಂದು ದಿನದಲ್ಲೆಲ್ಲಾ ತಾವು ಮಾರಾಟಕ್ಕೆಂದು ತಂದ ಅಕ್ಕಿ ಖಾಲಿಯಾಗಿದ್ದಕ್ಕೆ ಕಾರಣ ವಿವರಿಸುತ್ತಿದ್ದರು.

ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿ ಪ್ರಾತ್ಯಕ್ಷಿಕವಾಗಿ ತೋರಿಸಲಾಗಿತ್ತು. ಕೆಂಪಕ್ಕಿಯನ್ನು ಬಳಸಿ ಅಕ್ಕಿಯುಂಡೆ, ಅಕ್ಕಿ ರೊಟ್ಟಿ, ಮೊಸರನ್ನ ಮಾಡಿ ಮಾರಾಟಕ್ಕಿರಿಸಲಾಗಿತ್ತು. ಅಕ್ಕಿಯುಂಡೆಯಂತೂ ವಿಶಿಷ್ಟ ಪರಿಮಳದೊಂದಿಗೆ ಹುಚ್ಚೆಳ್ಳು ಚಟ್ನಿಯೊಂದಿಗೆ ರುಚಿಕರವಾಗಿತ್ತು.

ಇವೆಲ್ಲಾ ಒಂದೇ ಸೂರಿನಡಿ ಕಾಣಸಿಕ್ಕಿದ್ದು ಸಹಜ ಸಮೃದ್ಧ ಬೆಂಗಳೂರಿನ ಗಾಂಧಿ ಭವನದಲ್ಲಿ ಮೇ 14, 15ರಂದು  ಆಯೋಜಿಸಿದ್ದ ಕೆಂಪಕ್ಕಿ ಸಂತೆಯಲ್ಲಿ. ಎರಡು ದಿನ ನಡೆದ ಈ ಮೇಳದಲ್ಲಿ ಅನ್ನ ತಿನ್ನಿ(ಲೇ:  ಡಾ. ಸತ್ಯನಾರಾಯಣ ಭಟ್, ಡಾ.ಪ್ರೇಮಾ  - 25 ರೂಪಾಯಿ( ಎಂಬ ಪುಸ್ತಕವನ್ನೂ ಬಿಡುಗಡೆಗೊಳಿಸಲಾಯ್ತು. ಆಗಮಿಸಿದ್ದ ಗಣ್ಯರು ಅನ್ನದ ಮಹತ್ವದ ಬಗ್ಗೆ ಉಪನ್ಯಾಸವನ್ನೂ ಕೊಟ್ಟರು.

4 comments:

 1. ಒಳ್ಳೆ ಲೇಖನ ಸರ್
  ಈ ಸಂತೆ ಎಲ್ಲಿ ನಡೆಯುತ್ತದೆ?

  ಕೆಂಪಕ್ಕಿ ಅಂದರೆ ದಕ್ಷಿಣ ಕನ್ನಡ ದವರು ಗಂಜಿಗೆ ಬಳಸುತ್ತಾರಲ್ಲ,
  ಕುಸುಬಲಕ್ಕಿ (ಕುಚಲಕ್ಕಿ- ಅದು ಕೆಂಪಗೆ ಇರುತ್ತದೆ) ಅದೇನ?

  ಮುಂದೆ ಇಂಥ ಸಂತೆ ಇದ್ದರೆ ಇಲ್ಲಿ ಮಾಹಿತಿ ಕೊಡುವಿರಾ ಪ್ಲೀಸ್?
  ಸ್ವರ್ಣ

  ReplyDelete
 2. @ಸ್ವರ್ಣ,

  ಧನ್ಯವಾದ.. ಈ ಸಂತೆ ಜನರಿಗೆ ಅಕ್ಕಿಯ ಹಲವು ಪ್ರಕಾರಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದದ್ದು..

  ಕೆಂಪಕ್ಕಿ ಎಂದರೆ ನೀವು ತಿಳಿಸಿದ ಕುಚಲಕ್ಕಿಯೂ ಹೌದು.. ಅದೂ ಅಲ್ಲದೇ ಇತರ ಪಾಲೀಷ್ ಮಾಡದಿರುವ ಅಕ್ಕಿಯೂ ಹೌದು..

  ಖಂಡಿತ ಪೋಸ್ಟ್ ಮಾಡ್ತೀನಿ ಮುಂದಿನ ಕಾರ್ಯಕ್ರಮವಿದ್ದರೆ..

  ReplyDelete
 3. Kochaakkili istondu guna ittanta ivatte gotaad mareya, nee obbane hodd, nannu kardidre nanu batidnalla...

  ReplyDelete
 4. ಪಾಲ,
  ಧನ್ಯವಾದಗಳು.

  ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (101) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (24) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹಳ್ಳಿ (3) ಹಿಮ (1) ಹೂಗಳು (5) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)