Monday, January 26, 2009

ರವಿಕೆ ಕಣ

ಯಾವುದಾದರೂ ಬಟ್ಟೆ ಅಂಗಡಿಗೆ ಹೋಗಿ "ನನಗೊಂದು ಹಳದಿ ಬಣ್ಣದ ರವಿಕೆ ಕಣ ಕೊಡಿ", ಅಂದರೆ ಅವರು ಹ್ಯಾಪು ಮೋರೆ ಹಾಕಿಕೊಂಡು ಮೇಲೆ ಕೆಳಗೆ ನೋಡಬಹುದು. ಅದೇ "ನನಗೊಂದು ಎಲ್ಲೋ ಕಲರಿನ ಬ್ಲೌಸ್ ಪೀಸ್ ಕೊಡಿ" ಎಂದಿದ್ದಾದರೆ, ಕೊಂಚವೂ ವಿಳಂಬಿಸದೆ ಹಳದಿ ಬಣ್ಣದ ಹಲವು ವಿಧದ ಬ್ಲೌಸ್ ಪೀಸ್ಗಳನ್ನು ನಿಮ್ಮೆದುರು ರಾಶಿ ಹಾಕಬಹುದು. ನೀವು ಅವರಂತೆ ಸಂಪ್ರದಾಯವಾದಿಗಳಾಗಿಲ್ಲದಿದ್ದಲ್ಲಿ ನಿಮಗೂ ಈ ’ರವಿಕೆ ಕಣದ’ ಹೆಸರು ಹೊಸದಾಗಿ ಕಾಣಿಸಬಹುದು. "ಸಂಪ್ರದಾಯವಾದಿಗಳಿಗೂ ಈ ರವಿಕೆ ಕಣಕ್ಕೂ ಎತ್ತಣದ ಸಂಬಂಧವಯ್ಯಾ?" ಎಂದು ನೀವು ಕೇಳಿದರೆ, ಮನೆ, ಮದುವೆ ಇನ್ನಿತರ ಶುಭ ಸಮಾರಂಭಗಳಲ್ಲಿ ಬರುವ ಮುತೈದೆಯರಿಗೆ ಈ ರವಿಕೆ ಕಣವನ್ನು ಎಲೆ ಆಡಿಕೆಯೊಂದಿಗೆ ಕೊಡುವುದು ಸಂಪ್ರದಾಯ. ಇಲ್ಲಿ ರವಿಕೆ ಕಣದ ಪ್ರಸ್ತಾಪ ಬರುವುದರಿಂದ, ಈ ಸಂಪ್ರದಾಯ ತಿಳಿದಿಲ್ಲದ ನಿಮ್ಮನ್ನು ಸಂಪ್ರದಾಯವಾದಿಗಳೆಂದು ಕರೆಯುವ ಪಾಪ ನಾನು ಮಾಡುವುದಿಲ್ಲ.

ಈಗ ನಾನು ಹೇಳ ಹೊರಟಿರುವುದು ಇದೇ ರೀತಿಯ ಸಂಪ್ರದಾಯದಿಂದ ನಮ್ಮ ಮನೆ ಪ್ರವೇಶಿಸಿದ ರವಿಕೆ ಕಣದ ಒಂದು ಗೋಳಿನ ಕತೆ. ಅಂದು ಸಂಕ್ರಾಂತಿಯ ರಜಾ ದಿನ, ಮಧ್ಯಾಹ್ನದ ಊಟದಲ್ಲಿ ಸಿಹಿ ಹುಗ್ಗಿ ಸ್ವಲ್ಪ ಜಾಸ್ತಿಯೇ ಉದರ ಪ್ರವೇಶಿಸಿದ್ದರಿಂದ, ಚಾಪೆಯನ್ನೆಳೆದುಕೊಂಡು ದಿನಪತ್ರಿಕೆ ಹಿಡಿದ ಕೆಲವೇ ಕ್ಷಣಗಳಲ್ಲಿ ಯೋಗ ನಿದ್ರೆ ಪ್ರಾಪ್ತವಾಗಿತ್ತು. ಅಂದರೆ ತೀರಾ ನಿದ್ರೆಯೂ ಅಲ್ಲದ, ಎಚ್ಚರವೂ ಅಲ್ಲದ, ಒಂದು ರೀತಿಯ ಸಮತೋಲನದ ಸ್ಥಿತಿ. ಹೊರಗಡೆ ಹಾಡಿಯಲ್ಲಿನ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಉಳಿದಂತೆ ಮೌನ, ಎಷ್ಟು ಹೊತ್ತು ಈ ಸ್ಥಿತಿಯಲ್ಲಿದ್ದೆನೋ; ನನ್ನ ನಿದ್ರೆಗೆ ಭಂಗ ಬರುವಂತೆ ಕೋಣೆಯ ಮೂಲೆಯಲ್ಲಿ ಕಿಚಿ, ಕಿಚಿ ಸದ್ದಿನೊಂದಿಗೆ ಕರುಳು ಹಿಂಡುವಂತಹ ಆಕ್ರಂದನ. ನಿದ್ರಾ ಭಂಗದಿಂದ ಕೋಪಗೊಂಡು ಕಣ್ಣು ತೆರೆದು, ಸದ್ದು ಬರುತ್ತಿದ್ದ ಕಡೆ ಹೆಜ್ಜೆ ಇಟ್ಟೆ. ಒಂದು ಕರೀ ಬಣ್ಣದ ಇಲಿ ನನ್ನ ಕಾಲು ಬುಡದಿಂದಲೇ ಓಡಿ ಹೋಗಿ ನನ್ನ ಗಾಬರಿ ಹೆಚ್ಚಿಸಿತ್ತು ಮತ್ತು ಮೂಲೆಯಲ್ಲಿ ಒಂದು ರವಿಕೆ ಕಣ ಅನಾಥವಾಗಿ ಬಿದ್ದುಕೊಂಡು ರೋಧಿಸುತ್ತಿತ್ತು. ಅಳುತ್ತಿರುವ ಮಗುವನ್ನು ಸಂತೈಸಲು ಹೊರಟ ತಾಯಿಯ ಮುಖದಲ್ಲಿ ಸೂಸುವ ವಾತ್ಸಲ್ಯ ಭಾವದಿಂದ, ರವಿಕೆ ಕಣವನ್ನು ಕೈಗೆತ್ತಿಕೊಂಡು ನೋಡಿದರೆ, ಅದರಲ್ಲಿ ಚಿತ್ರ ವಿಚಿತ್ರ ಛೇದಗಳು! ನಿದ್ರೆಯಿಂದೆಚ್ಚೆತ್ತ ನನ್ನ ಭೀಷಣ ದೃಷ್ಟಿಯ ತಾಪಮಾನಕ್ಕೆ ಹೆದರಿಯಲ್ಲವಾದರೂ, ನನ್ನ ಕಾಲಿನ ಸದ್ದಿಗೆ ಹೆದರಿ ಓಡಿ ಹೋದ ಇಲಿಗೂ, ಅಸಾಹಾಯಕವಾಗಿ ಬಿದ್ದು ಗೋಳಿಡುತ್ತಿರುವ ಈ ರವಿಕೆ ಕಣಕ್ಕೂ ಸಂಬಂಧ ಕಲ್ಪಿಸಿ, ನನ್ನ ನಿದ್ರಾ ಭಂಗಕ್ಕೆ ಕಾರಣವನ್ನು ಕಂಡು ಹಿಡಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಆದರೂ ಆ ರವಿಕೆ ಕಣದ ಬಾಯಿಂದ ಅದರ ಕಷ್ಟವನ್ನು ತಿಳಿದು, ಸಂತೈಸುವ ನೆಪದಿಂದ ಅದರೊಂದಿಗೆ ಮಾತಿಗಿಳಿದೆ.

"ಯಾಕೆ ಕರುಳು ಹಿಂಡುವಂತೆ ಈ ರೀತಿ ಕೂಗಿಕೊಳ್ಳುತ್ತಿರುವೆ, ನಿನ್ನ ಸಂಕಟವೇನೆಂದು ಹೇಳಬಾರದೇ? ಸಂಕಟ ಇನ್ನೊಬ್ಬರ ಬಳಿ ತೋಡಿಕೊಳ್ಳುವುದರಿಂದ ಮನಸ್ಸಿನ ದುಗುಡ ಕಡಿಮೆಯಾಗುತ್ತದೆ."

"ಸಂಕಟ ಹೇಳಿಕೊಳ್ಳಲು ನನ್ನವರು ಅಂತ ಯಾರೂ ಇಲ್ಲ, ಸುಮ್ಮನೆ ಸಿಕ್ಕ ಸಿಕ್ಕವರ ಬಳಿಯೆಲ್ಲಾ ಹೇಳಿ ಕನಿಕರದ ವಸ್ತುವಾಗಲು ನನಗೆ ಮನಸ್ಸೂ ಇಲ್ಲ."

"ನನ್ನನ್ನು ಸಿಕ್ಕ ಸಿಕ್ಕವರು ಅಂತ ಯಾಕೆ ತಿಳಿದುಕೊಳ್ಳುತ್ತೀಯ? ನಾನು ಈ ಮನೆಯವನೇ, ನಿನ್ನ ಸಂಕಟ ಏನಿದೆಯೋ ಹೇಳು ನನ್ನ ಕೈಲಾದ ಸಹಾಯ ನಾನು ಮಾಡುತ್ತೇನೆ. ಒಂದು ವೇಳೆ ಏನೂ ಮಾಡುವ ಹಾಗಿಲ್ಲದಿದ್ದಲ್ಲಿ, ನಿನ್ನ ಈ ಮನಸ್ಥಿತಿಗೆ ಕಾರಣ ತಿಳಿಸು, ಇದರಿಂದ ನಿನ್ನ ಮನಸ್ಸಿಗೆ ಸಮಾಧಾನವಾದರೂ ಆಗಬಹುದು."

ರವಿಕೆ ಕಣ ಅನುಮಾನದಿಂದ "ಮನೆಯ ಹೆಂಗಸರೇ ನನ್ನನ್ನು ತುಚ್ಛ ಭಾವದಿಂದ ನೋಡುತ್ತಿರಬೇಕಾದರೆ, ನಿನ್ನಂತಹ ಪುರುಷನಲ್ಲಿ ನನ್ನ ದುಗುಡ ತೋಡಿಕೊಳ್ಳಬಹುದೇ, ಅಲ್ಲದೇ ನೀನು ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಠಿಣ."

ನಾನು ಭರವಸೆಯ ದನಿಯಲ್ಲಿ "ಕಷ್ಟ, ಕಷ್ಟವೇ, ಅದನ್ನು ಗಂಡು ಕಷ್ಟ, ಹೆಣ್ಣು ಕಷ್ಟ ಅಂತ ಭೇದ ಮಾಡುವುದು ಸರಿಯಲ್ಲ. ನಿನ್ನ ಮನಸ್ಥಿತಿ ಪುರುಷನಾದ ನಾನು ತಿಳಿದುಕೊಳ್ಳುವುದು ಕಠಿಣವಾದರೂ, ಸಮಾಧಾನ ಚಿತ್ತದಿಂದ ನಿನ್ನ ಮಾತನ್ನು ಕೇಳುವೆ."

"ನನ್ನ ಮಾತು ಕೇಳುವವರೂ ಒಬ್ಬರಿದ್ದಾರೆಂದು ತಿಳಿದು ಸಂತೋಷವಾಯಿತು. ಇದರಿಂದ ನನಗೆ ಲಾಭವಾದೀತೆಂದು ನನಗನಿಸದಿದ್ದರೂ, ಕೇಳುವ ಕುತೂಹಲ ತೋರಿಸಿದ್ದರಿಂದ ನಿನ್ನಲ್ಲಿ ಹೇಳಿಕೊಳ್ಳುತ್ತಿದ್ದೇನೆ."

"ಹೇಳು, ಕೇಳುತ್ತಾ ಇದ್ದೇನೆ."

"ನಾನು ಹುಟ್ಟಿದ್ದು ಚೆನೈನ ಒಂದು ಪಾಲಿಸ್ಟರ್ ಕಾರ್ಖಾನೆಯಲ್ಲಿ. ಪೆಟ್ರೋಲಿಯಂನ ಕಚ್ಛಾವಸ್ತುವನ್ನು, ಹಲವು ಬಗೆಯ ಯಂತ್ರಗಳ ಸಹಾಯದಿಂದ ಬಟ್ಟೆ ಮಾಡಿ, ರಂಗನ್ನು ಬಳಿದು, ಸುಂದರವಾಗಿ ಪ್ಯಾಕ್ ಮಾಡಿ, ಕೆಲವು ವ್ಯಾಪಾರಿಗಳ ಮೂಲಕ ಈ ನಿಮ್ಮ ಊರು ತಲುಪಿದೆ."

"ತುಂಬಾ ಕುತೂಹಲಕಾರಿಯಾಗಿದೆ, ಮುಂದುವರೆಸು."

"ಯಾವುದಾದರೂ ಸುಂದರ ತರುಣಿ ನನ್ನನ್ನು ಕೊಂಡು, ಆಕೆಯ ಕುಪ್ಪಸವಾಗಿ ಮಾಡಿಕೊಳ್ಳಬಹುದೆಂದು ಅಂಗಡಿಗೆ ಬಂದು ಹೋಗುವವರನ್ನೆಲ್ಲಾ ಆಸೆಯ ಕಂಗಳಿಂದ ನೋಡುತ್ತಿದ್ದೆ."

"ಹೂಕುಸುಮದೆಳೆಯ ಹಳದಿ ಬಣ್ಣದ ನಿನ್ನ ಆಸೆ ಸಹಜವಾದದ್ದೇ."

"ಅಂಗಡಿಗೆ ಬಂದವರೆಲ್ಲಾ ಸೀರೆಕೊಂಡು ಹೋಗುತ್ತಿದ್ದರಾದರೂ ಒಬ್ಬರೂ ಅದಕ್ಕೆ ಹೊಂದುವ ಕಣವನ್ನು ಕೇಳಿಯೂ ನೋಡಲಿಲ್ಲ."

"ಯಾಕೆ ಈಗ ಹೆಂಗಸರು ಸೀರೆಯೊಂದಿಗೆ ಕುಪ್ಪಸ ತೊಡುವುದಿಲ್ಲವೇ?"

"ಛೇ ಹಾಗೇನಿಲ್ಲ. ಇತ್ತೀಚಿನ ದಿನಗಳಲ್ಲಿ ಸೀರೆಯೊಂದಿಗೇ ಈ ರವಿಕೆ ಕಣ ’ವಿತ್ ಬ್ಲೌಸ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಬರುವುದಾದ್ದರಿಂದ, ಮಹಿಳೆಯರು ಸೀರೆಗೊಪ್ಪುವ ರವಿಕೆ ಕಣ ಹುಡುಕಿಕೊಂಡು ಹೋಗುವ ಪ್ರಮೇಯವಿಲ್ಲ."

"ಹೋ ಹಾಗೆ, ಅಂದರೆ ಸೀರೆ ಮಾಡುವವರೇ ಈ ಸೀರೆಗೆ ಈ ಬಣ್ಣದ ಕುಪ್ಪಸ ಹೊಂದುತ್ತದೆ ಎಂದು ನಿರ್ಧರಿಸಿ, ಸೀರೆಯೊಂದಿಗೆ ಸ್ವಲ್ಪ ಹೆಚ್ಚಿನ ಬಟ್ಟೆ ಇರಿಸಿರುತ್ತಾರಲ್ಲವೇ? ಆದ್ರೆ ಈ ’ವಿತ್ ಬ್ಲೌಸ್’ ಅಧಿಕ ಬೆಲೆಯ ಸೀರೆಗಳೊಂದಿಗೆ ಮಾತ್ರ ಬರುವುದಲ್ಲವೇ? ಸಾಧಾರಣ ಬೆಲೆಯ ಅಥವಾ ಕಡಿಮೆ ಬೆಲೆಯ ಸೀರೆ ತೆಗೆದುಕೊಳ್ಳುವವರು ನಿನ್ನನ್ನು ಕೊಂಡೊಯ್ಯುಬಹುದಿತ್ತಲ್ಲವೇ?"

"ಸಾಧಾರಣ ಅಥವಾ ಕಡಿಮೆ ಬೆಲೆಯ ಸೀರೆ ಕೊಂಡು ಕೊಳ್ಳುವವರು ಸಾಮಾನ್ಯವಾಗಿ ಬಡವರು. ಸೀರೆಗೆ ೨೦೦, ೨೫೦ ಕೊಟ್ಟು ಒಂದೊಂದು ರವಿಕೆಗೂ, ಹೊಲಿಸುವ ಕೂಲಿ ಸೇರಿ, ೭೦ ರೂಪಾಯಿಗಳಷ್ಟು ಖರ್ಚು ಮಾಡುವ ಬದಲು, ಹೆಚ್ಚಿನ ಸೀರೆಗಳಿಗೆ ಹೊಂದುವಂತಹ ಕಪ್ಪು, ಕಡು ನೀಲಿ, ಬಿಳಿ ಮುಂತಾದ ಬಣ್ಣದ ಕುಪ್ಪಸ ಹೊಲಿಸಿಟ್ಟುಕೊಂಡು ಹೆಚ್ಚಿನ ಸೀರೆಗಳಿಗೆ ಇವನ್ನೇ ತೊಡುತ್ತಾರೆ."

"ಆಯಿತು, ಮತ್ತೆ ಅಂಗಡಿಯಿಂದ ಇಲ್ಲಿಗೆ ಹೇಗೆ ಬಂದೆ?"

"ಜೂನಿನಲ್ಲಿಯೇ ಅಂಗಡಿಯ ಮಳಿಗೆಯಲ್ಲಿ ಬಂದು ಬಿದ್ದಿದ್ದ ನನ್ನನ್ನು, ಜನವರಿಯಾದರೂ ಯಾರೂ ಕೊಂಡೊಯ್ದಿರಲಿಲ್ಲ. ಸುಂದರ ತರುಣಿ ಅಲ್ಲದಿದ್ದರೂ ಸರಿ, ಯಾರೋ ಒಬ್ಬರ ಉಡುಗೆಯಾಗಿ ನನ್ನ ಜೀವನ ಸಾರ್ಥಕಗೊಳಿಸಿಕೊಳ್ಳೋಣ ಎಂದಿದ್ದರೂ, ನನ್ನ ಕೇಳಿದವರೊಬ್ಬರಿಲ್ಲ. ಕೊನೇಗೆ ಫೆಬ್ರವರಿಯಲ್ಲಿ ಮಗಳ ಮದುವೆಗೆಂದು ಬಂದ ಯಜಮಾನರೊಬ್ಬರು ನನ್ನನ್ನು ಕೊಂಡೊಯ್ದರು."

"ಎಂತಹ ಸುಯೋಗ ನಿನ್ನದು, ಅಂತೂ ಮದುಮಗಳ ಉಡುಗೆಯಾಗುವ ಭಾಗ್ಯ ಲಭಿಸಿತು ಅನ್ನು."

"ಅದಕ್ಕೆ ನಾನು ಪುರುಷನಾದ ನಿನ್ನ ಬಳಿ ನನ್ನ ದುಗುಡ ಹೇಳಿಕೊಳ್ಳುವುದಿಲ್ಲ ಎಂದು ಹೇಳಿದ್ದು. ಮಗಳಿಗೆ ಮದುವೆಯ ಸಂದರ್ಭದಲ್ಲಿ ಯಜಮಾನರು ರೇಷ್ಮೆ ಬಟ್ಟೆ ಅಲ್ಲದೇ, ನನ್ನಂತಹ ಪಾಲಿಷ್ಟರ್ ಬಟ್ಟೆ ಕೊಳ್ಳುವರೇ?"

"ಕ್ಷಮಿಸು, ನನಗೆ ಅಷ್ಟೊಂದು ತಿಳಿದಿಲ್ಲ. ಮತ್ತೆ ನಿನ್ನನ್ನು ಅವರು ಕೊಂಡ ಪ್ರಮೇಯ?"

"ಕೇವಲ ನಾನಷ್ಟೇ ಅಲ್ಲ, ನನ್ನಂತೆಯೇ ಹಲವು ತಿಂಗಳಿಂದ ಮಳಿಗೆಯಲ್ಲೇ ಬಿದ್ದಿದ್ದ ಇತರ ಪಾಲಿಷ್ಟರ್ ಕಣಗಳನ್ನೂ ಕೂಡ, ಮದುವೆಗೆ ಬಂದು ಹರಸಲಿರುವ ಮುತೈದೆಯರಿಗೆ ಕಾಣಿಕೆಯಾಗಿ ನೀಡಲು ಕೊಂಡೊಯ್ದರು."

"ಹಾಗೆ, ಅಂತೂ ಯಾರೋ ಮುತ್ತೈದೆ ಮನೆ ಸೇರೋ ಭಾಗ್ಯ ನಿನಗೆ ಸಿಕ್ಕತು"

"ಒಬ್ಬರ ಮನೆಗೆ ಸೇರಿದ್ದೇನೋ ನಿಜ, ಆದರೆ ಆಕೆ ಕುಪ್ಪಸ ಹೊಲಿಸಿಕೊಳ್ಳುವ ಬದಲು ನನ್ನನ್ನು ಬೀರುವಿನಲ್ಲಿ ಕೆಲ ಕಾಲ ಇರಿಸಿಕೊಂಡು, ಆಕೆಯೆ ಮನೆಗೆ ಅಪೂರ್ವಕ್ಕೆ ಬಂದ ಮಹಿಳೆಯರೊಬ್ಬರಿಗೆ ನನ್ನನ್ನು ಎಲೆ ಅಡಿಕೆ, ಅರಶಿನ ಕುಂಕುಮದೊಂದಿಗೆ ಸೇರಿಸಿ ಕೊಟ್ಟು, ಬೀಳ್ಕೊಟ್ಟರು. "

"ತುಂಬಾ ಒಳ್ಳೆಯವರು ಅವರು, ಕಲಿಯುಗದಲ್ಲಿ ದಾನ ಮಾಡುವವರು ಎಲ್ಲಿ ಸಿಗುತ್ತಾರೆ"

"ದಾನವೂ ಅಲ್ಲ ಧರ್ಮವೂ ಅಲ್ಲ. ಉಚಿತವಾಗಿ ಬಂದ ಬೇಡದ ವಸ್ತುವನ್ನು ಇನ್ನೊಬ್ಬರಿಗೆ ದಾಟಿಸುವುದಷ್ಟೆ. ಆ ಮತ್ತೊಬ್ಬ ಮಹಿಳೆ ಮಾಡಿದ್ದೂ ಅದನ್ನೇ, ನನ್ನನ್ನು ಮಗದೊಬ್ಬರಿಗೆ ದಾಟಿಸಿದ್ದು."

"ಹೋ, ಹಾಗಾದರೆ ನೀನು ತುಂಬಾ ಮನೆ ಸುತ್ತಿ ಬಂದು ಈಗ ನಮ್ಮ ಮನೆಗೆ ಬಂದಿರುವುದೇ? ಒಟ್ಟಿನಲ್ಲಿ ಇದುವರೆಗೆ ನೀನು ಎಷ್ಟು ಮನೆ ಸುತ್ತಿ ಬಂದಿರಬಹುದು?"

"ನನಗೂ ಸರಿಯಾಗಿ ನೆನಪಿಲ್ಲ, ನನ್ನ ಮೈ ಮೇಲಿರುವ ಅರಶಿನ ಕುಂಕುಮದ ಕಲೆಗಳನ್ನು ನೋಡಿ ನೀನೇ ಊಹಿಸು."

"ನಿನ್ನ ಬಣ್ಣ ಅರಶಿನ ಕುಂಕುಮ ಸೇರಿ, ನಾನು ಮೇಲೆ ಹೊಗಳಿದ್ದ ಹೂಕುಸುಮದೆಳೆಯ ಹಳದಿಯಾದದ್ದೋ? ನಾನು ನಿನ್ನ ಬಣ್ಣಾನೇ ಅದು ಅಂತ ತಪ್ಪು ತಿಳಿದುಕೊಂಡಿದ್ದೆ."

"ಹೂಂ, ನನ್ನದು ಮೊದಲು ಹಾಲಿನ ಕೆನೆ ಬಣ್ಣ ಇತ್ತು"

"ಮುಂದಿನದ್ದು ನಾನು ಊಹಿಸುವುದಾದರೆ, ಹೀಗೆ ನನ್ನಮ್ಮನಿಗೆ ಬಳುವಳಿಯಾಗಿ ಬಂದ ನೀನು ಆಕೆಯ ಕಣ್ತಪ್ಪಿನಿಂದ ಯಾವುದೋ ಮೂಲೆ ಹಿಡಿದಿರಬೇಕು. ಕೊರೆದು ಹಾಕಲು ಏನೂ ಸಿಗದೇ ಇರುವ ಇಲಿಯೊಂದು ನಿನ್ನ ಹರಿದಾಡುತ್ತಿರಬೇಕಾದರೆ, ನಿನ್ನ ಕೂಗಿಗೆ ನಾನು ಎಚ್ಚೆತ್ತದ್ದಲ್ಲವೇ?"

"ಸರಿಯಾಗಿ ಊಹಿಸಿದಿ"

"ಅಂತೂ ಕುಪ್ಪಸವಾಗಿ ಮೆರೆಯಬೇಕಿದ್ದ ನೀನು, ಈಗ ಹೀಗೆ ಹರಿದು ಮುದ್ದೆಯಾಗಿ ಬಿದ್ದಿದ್ದಿ. ನಿನ್ನ ಅವಸ್ಥೆಗೆ ನಾನು ಮರುಕ ಸೂಚಿಸುವುದಕ್ಕಿಂತ ಹೆಚ್ಚಿನದೇನೂ ಮಾಡಲಾರೆ. ಹರಿದ ನಿನ್ನನ್ನು ಭಿಕ್ಷುಕರಿಗೆ ಕೊಡುವುದೂ ಸಮನಲ್ಲ. ಅಡುಗೆ ಮನೆಯಲ್ಲಿ ಬಿಸಿ ಪಾತ್ರೆ ಹಿಡಿಯಲು ಬಳಸುವ ಕೈ ಅರಿವೆಯಾಗಿಯೂ ಬಳಸಲಾಗದು. ಇನ್ನು ನಿನ್ನ ಜಾತಿ ಪಾಲಿಷ್ಟರ್ ಆದ್ದರಿಂದ ನೆಲ ಒರೆಸಲಿಕ್ಕೂ ಬರುವುದಿಲ್ಲ. ಅಂತೂ ಒಬ್ಬರ ಕೈಯಿಂದೊಬ್ಬರಿಗೆ ಸಾಗಿಯೇ, ಅವರಿಗೊಂದಷ್ಟು ಪುಣ್ಯ ಸಂಪಾದನೆ ಮಾಡಿಕೊಟ್ಟು, ಈ ಅಧೋಗತಿಗಿಳಿದ ನಿನ್ನದು ನಿಜಕ್ಕೂ ಆದರ್ಶ ವ್ಯಕ್ತಿತ್ವ. ನಿನ್ನ ವ್ಯಕ್ತಿತ್ವವನ್ನು ಬರಹದ ಮೂಲಕ ಪ್ರಪಂಚದ ಮೂಲೆ ಮೂಲೆಗೂ ಹರಡುವಂತೆ ಮಾಡುತ್ತೇನೆ."

"ನೀನು ನನ್ನ ಮಾತು ಕೇಳಿದ್ದೇ ನನಗೆ ಸಂತೋಷ. ಅದರಲ್ಲೂ ನನ್ನ ಬಾಳ ಕಥೆಯನ್ನು ಬರಹದ ಮೂಲಕ ಇತರರಿಗೆ ತಲುಪಿಸುವ ಪುಣ್ಯದ ಕೆಲಸ ಮಾಡುತ್ತಿದ್ದೀಯ. ಇದರಿಂದ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಳ್ಳೆಯ ಜೀವನ ಸಿಗಬಹುದು."

"ಅದೆಲ್ಲಾ ಇರಲಿ ಬಿಡು, ನಿನ್ನನ್ನು ಸುಮ್ಮನೆ ಬಿಸಾಡೋಕೆ ಮನಸ್ಸು ಬರುತ್ತಿಲ್ಲ, ನಿನ್ನ ಅನುಮತಿ ಇದ್ದರೆ ನಮ್ಮನೆ ದೇವರ ಫೋಟೋ ಒರೆಸುವುದಕ್ಕೆ ಹಾಕುತ್ತೇನೆ."

"ಧನ್ಯನಾದೆ."

13 comments:

  1. ಪಾಲಚಂದ್ರ...

    ಬೋರು ಹೊಡೆಯುತ್ತಿತ್ತು..
    ಓದಿದ ಮೇಲೆ.. ನಕ್ಕು ನಕ್ಕು ಸುಸ್ತಾದೆ..

    ವಾಸ್ತವನೂ ಹೌದು...

    ಚೆನ್ನಾಗಿದೆ ನಿಮ್ಮ ವಿಡಂಬನೆ..


    "ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲಸ ಅಲ್ಲವಾ..?"

    ಅಭಿನಂದನೆಗಳು..

    ReplyDelete
  2. ಪ್ರಕಾಶ್,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲ್ಸ" ಎಂಬ ನಿಮ್ಮ ಮಾತಿ ದಿಟವಾದರೂ (ಮತ್ತೆ ಸೀರೆ ಉಡೋ ನಾರಿಯರು ಇನ್ನೂ ಇದಾರೆ :)),, ಅದನ್ನ ತೊಡುವ ಯೋಚನೆಯೇ ಇಲ್ಲದಿದ್ದ ಮೇಲೆ ಆ ತರ ರವಿಕೆ ಕಣಾನ ಒಬ್ಬರಿಂದೊಬ್ಬರಿಗೆ ದಾಟಿಸುವುದು ಏಕೆ ಅಂತ. ಅದಕ್ಕಿಂತ ಉಪಯೋಗಕ್ಕೆ ಬರುವ ವಸ್ತುಗಳನ್ನು ಕೊಡುವುದು ಉತ್ತಮ ಅಂತ ನನ್ನ ಅಭಿಪ್ರಾಯ.
    --
    ಪಾಲ

    ReplyDelete
  3. >>"ಯಾವುದಾದರೂ ಸುಂದರ ತರುಣಿ ನನ್ನನ್ನು ಕೊಂಡು, ಆಕೆಯ ಕುಪ್ಪಸವಾಗಿ ಮಾಡಿಕೊಳ್ಳಬಹುದೆಂದು ಅಂಗಡಿಗೆ ಬಂದು ಹೋಗುವವರನ್ನೆಲ್ಲಾ ಆಸೆಯ ಕಂಗಳಿಂದ ನೋಡುತ್ತಿದ್ದೆ."

    :D

    ReplyDelete
  4. ಪಾಲಚಂದ್ರ,

    ರವಿಕೆ ಮತ್ತು ನಿಮ್ಮ ಸಂಭಾಷಣೆ ಚೆನ್ನಾಗಿದೆ.....ನಿಮಗೆ ನಿದ್ರಾ ಭಂಗವಾಗಿದ್ದು ಒಳ್ಳೆಯದೇ ಅಯಿತು.....

    ಲಘು ಹಾಸ್ಯದಿಂದ ಕೂಡಿದ್ದು ಓದಿಸಿಕೊಂಡು ಹೋಗುತ್ತದೆ.....

    ReplyDelete
  5. ಪಾಲಚಂದ್ರ...

    ಸೀರೆ ಉಡುವವರದ್ದು ಬಹಳ ಸಮಸ್ಯೆ ಇರುತ್ತೆ ...

    ಸೀರೆ ಬೊರ್ಡರ್ರು.. ಅಂಚು, ಕಲರ್ ಮ್ಯಾಚಿಂಗು.. ಬಹಳ ಸಮಸ್ಯೆ ...

    ಸೀರೆ ಉಡುವವರು ಕಡಿಮೆಯಾಗುತ್ತಿದ್ದಾರೆ...

    ಅದಕ್ಕಾಗಿ.. ಅದೆಲ್ಲ ಸೇರಿಸಿ ಹೇಳಿದ್ದು...

    ಜೀನ್ಸ್ ಕಾಲದಲ್ಲಿ ರವಿಕೆ ಕಣಕ್ಕೇನು ಕೆಲಸ..?

    ನೀವು ಹೇಳಿದ ಹಾಗೆ ಉಪಯೋಗಕ್ಕೆ ಬರುವದನ್ನು ಕೊಟ್ಟರೆ ಒಳ್ಳೆಯದು

    ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ...

    ReplyDelete
  6. hu baap re nage thadedukollalu aaguttilla maraya...
    tumba chennagide.......

    ReplyDelete
  7. Namaskara PalaChandra,

    Nimma barahaa nanage istta vayithu...
    adhare, ella hengasaru seereya ravike thundannu, holisuvudhilla... Kelavu dhappa iruvaa hengasarige, seereyaa udhaa sakagodhilla. awaru namma katha nayakki yantha ravike thundannu aarisi baruthhare....... :-)

    ReplyDelete
  8. namma kanada bagge yavaga barithiya???

    ReplyDelete
  9. ಅಶೋಕ್, ಶಿವು,
    ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು

    ಪ್ರಕಾಶ್,
    ನಿಮ್ಮ ಸಹಮತಕ್ಕೆ ಧನ್ಯವಾದಗಳು

    ಹರ್ಷ,
    ಪ್ರತಿಕ್ರಿಯೆಗೆ ಧನ್ಯವಾದ

    ಮಾನಸ,
    ನಮಸ್ಕಾರ ಮತ್ತು "ಗ್ನಾನ"ಕ್ಕೆ ಸ್ವಾಗತ. ನಿಮ್ಮ ಮಾತು ನಿಜ, ಈ ವಿಷಯವನ್ನೂ ನನ್ನ ಬರಹಕ್ಕೆ ತುರುಕಬಹುದಾಗಿತ್ತು. ಅಂತೂ ನಮ್ಮ ಕಥಾ ನಾಯಕಿಗೆ ಹೆಣ್ಮಕ್ಕಳು ದುಂಡಗಾದರೆ ಮಾತ್ರ ಮುಕ್ತಿ ಅನ್ನಿ :)

    ಅಂಶು,
    ಕ್ವಾಟ ಕನ್ನಡ ಮಾತಾಡುಕೆ ಬೆಂಗ್ಳೂರಂಗೆ ಯಾರೂ ಸಿಕ್ಕ್ದೆ, ಮರ್ತೋದಂಗಾಯ್ತ್! ಕಾಂಬ ಹೀಂಗೆ ಯಾವ್ದಾದ್ರೂ ಹರ್ಟೆ ಆದ್ರೆ ಬರೀತೆ

    --
    ಪಾಲ

    ReplyDelete
  10. ನೀವು ಈ ಬರಹ ಓದಲು ಸೂಚಿಸಿದ್ದು ಒಳ್ಳೆಯದಾಯಿತು.
    ಇದನ್ನು ಓದಿದಾಗ ಕಾರಂತರ ದಸ್ತುಬಿನ್ ನೆನಪಾಯಿತು. ಅಲ್ಲಿ ದಸ್ತುಬಿನ್(Dustbin) ತನ್ನ ದುಃಖಕರ ಕತೆಯನ್ನು ತಾನೇ ನಿರೂಪಿಸುತ್ತೆ.
    ನಿಮ್ಮ ಶೈಲಿ ಕಲ್ಪನೆ ಚೆನ್ನಾಗಿದೆ. ಈಗ ಕಡಿಮೆ ಬೆಲೆಯ ಸೀರೆಗಳೂ with blouse ಇರುತ್ತೆ.
    ಅಂದ ಹಾಗಿ ಒಬ್ಬರು ಕೊಡುವ ಕೊಡುಗೆಯನ್ನು ಇನ್ನೊಬ್ಬರಿಗೆ ದಟಿಸುವ ಪದ್ದತಿ ಲಾಗಾಯ್ತಿನಿಂದ ಇದೆ!! ಮೊದಲೆಲ್ಲಾ ಸ್ಟೀಲ್ ಬಟ್ಟಲುಗಳನ್ನು ಹೀಗೆ ದಾಟಿಸುತ್ತಿದ್ದರು. ಅದಕ್ಕೆ Rolling shield ಎನ್ನುತ್ತಾರೆ.

    ReplyDelete
  11. ಮೇಡಂ,
    ಅನುಭವ ಮಂಟಪಕ್ಕೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ವಂದನೆಗಳು

    ನೀವು ನಿಜವಾಗ್ಲು ಕಾರಂತರ ಅಭಿಮಾನಿ ಹೌದು :) ನನಗೆ "ಮೈಲಿಗಲ್ಲುಗಳೊಡನೆ ಮಾತುಕತೆ"ಯೇ ಇದನ್ನ ಬರೆಯೋಕೆ ಪ್ರೇರಣೆ..
    >>ಈಗ ಕಡಿಮೆ ಬೆಲೆಯ ಸೀರೆಗಳೂ with blouse ಇರುತ್ತೆ.
    ಅಮ್ಮನ ಜೊತೆ ಸೀರೆ ಅಂಗಡಿಗೆ ಹೋಗ್ದೆ ತುಂಬಾ ದಿನ ಆಯ್ತು..
    >>ಅಂದ ಹಾಗಿ ಒಬ್ಬರು ಕೊಡುವ ಕೊಡುಗೆಯನ್ನು ಇನ್ನೊಬ್ಬರಿಗೆ ದಟಿಸುವ ಪದ್ದತಿ ಲಾಗಾಯ್ತಿನಿಂದ ಇದೆ!! ಮೊದಲೆಲ್ಲಾ ಸ್ಟೀಲ್ ಬಟ್ಟಲುಗಳನ್ನು ಹೀಗೆ ದಾಟಿಸುತ್ತಿದ್ದರು. ಅದಕ್ಕೆ Rolling shield ಎನ್ನುತ್ತಾರೆ

    ಸರಿ, ನಮ್ಮೂರಲ್ಲಿ ಈಗ ಕಣದ ಬದಲು ಇದನ್ನೇ ಕೊಡ್ತಿದಾರೆ ಅಲ್ಲಾ ದಾಟಿಸ್ತಿದಾರೆ..
    --
    ಪಾಲ

    ReplyDelete
  12. ಎಷ್ಟು ಚೆನ್ನಾಗಿ ಬರಿತಿರಿ ಮಾರಾಯ್ರೆ ನೀವು...ಬಹಳ ಒಳ್ಳೆದಾಗಿದೆ...

    ReplyDelete
  13. Nimma baraha sogasaagidey... Hosa havyaasada gunginalli...bareyuvudannu nillisabedi... Munduvaresi

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)