Saturday, May 23, 2009

ಬೆಳ್ಳಕ್ಕಿ

ಇತ್ತೀಚೆಗೆ ತೆಗೆದ ಬೆಳ್ಳಕ್ಕಿ/ಕೊಕ್ಕರೆಯ ಚಿತ್ರ. ಮರಿ ಮಾಡುವ ಸಂದರ್ಭದಲ್ಲಿ ಮೂಡಿದ ಹಿಂಜುಟ್ಟನ್ನು ಗಮನಿಸಿ.

DSC00548

ಬೆಳ್ಳಕ್ಕಿಯ ಹಾರಾಟದ ಭಂಗಿ, ಪ್ಯಾನಿಂಗಿನ ಪ್ರಯತ್ನ.

DSC00552

ಬೆಳ್ಳಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: ಬೆಳ್ಳಕ್ಕಿ

Saturday, May 16, 2009

ಕ್ಯಾಮರಾ ಮೀಟರಿಂಗ್

Aperture, Shutter Speed, ISOಗಳನ್ನು ಉಪಯೋಗಿಸಿಕೊಂಡು ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಬಹುದು. ಚಿತ್ರಕ್ಕೆ ಎಷ್ಟು ಬೆಳಕು ಬೇಕು ಎಂಬುದನ್ನು ಕ್ಯಾಮರಾದ ಮೀಟರಿಂಗ್ ಸೂಚಿಸುತ್ತದೆ. ಸಾಮಾನ್ಯವಾಗಿ ಕ್ಯಾಮರಾದಲ್ಲಿ ೦.೩, ೦.೪ ಮಧ್ಯಂತರದಲ್ಲಿ -೨.೦ ರಿಂದ ೨.೦ ವರೆಗೆ ಮೀಟರಿಂಗ್ ಗುರುತು ಇರುತ್ತದೆ. ಅಂದರೆ -೨.೦, -೧.೭, -೧.೩,-೧.೦, -೦.೭, -೦.೩, ೦, ೦.೩, ೦.೭, ೧.೦, ೧.೩, ೧.೭, ೨.೦ ಎಂದು ಗುರುತಿರುವ ಸ್ಕೇಲಿನಂತೆ ಇರುತ್ತದೆ. ಇಲ್ಲಿ ಮೀಟರಿಂಗ್ ಬೆಲೆ ಋಣಾತ್ಮಕ ಸಂಖ್ಯೆ ತೋರಿಸುತ್ತಿದ್ದರೆ ನಿಮ್ಮ ಚಿತ್ರ ಅಂಡರ್ ಎಕ್ಸ್-ಫೋಸಾಗಿದೆಯೆಂದೂ, ಧನಾತ್ಮಕ ಬೆಲೆ ಸೂಚಿಸುತ್ತಿದ್ದರೆ ಓವರ್-ಎಕ್ಸ್-ಪೋಸಾಗಿದೆಯೆಂದೂ, ೦ ಸೂಚಿಸುತ್ತಿದ್ದರೆ ಸರಿಯಾಗಿ ಎಕ್ಸ್-ಪೋಸಾಗಿದೆಯೆಂದು ಸೂಚಿಸುತ್ತದೆ.

ಲ್ಯಾಂಡ್-ಸ್ಕೇಪುಗಳಂತೆ ಇಡೀ ಚಿತ್ರವೇ ನಿಮ್ಮ ವಿಷಯವಾಗಿರಬಹುದು ಅಥವಾ ಪೋರ್ಟ್ರೈಟ್, ಮಾಕ್ರೋಗಳಂತೆ ಚಿತ್ರದ ಕೆಲವು ಭಾಗ ಮಾತ್ರ ನಿಮ್ಮ ವಿಷಯವಾಗಿರಬಹುದು. ಅಂದರೆ ಕೆಲವೊಮ್ಮೆ ಇಡೀ ಚಿತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು, ಇನ್ನು ಕೆಲವೊಮ್ಮೆ ಚಿತ್ರದ ಕೆಲವು ಭಾಗ ಮಾತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು. ಈ ಅನುಕೂಲಕ್ಕಾಗಿ ಸಾಮಾನ್ಯ ಕ್ಯಾಮರಾದಲ್ಲಿ ಮಾಟ್ರಿಕ್ಸ್, ಸೆಂಟರ್ ವೈಟೆಡ್, ಕ್ರಾಸ್ ಹೈರ್ ಮೊದಲಾದ ಮೀಟರಿಂಗ್ ಮೋಡುಗಳಿರುತ್ತವೆ. ಈಗ ಈ ಮೀಟರಿಂಗ್ ಮೋಡಿನ ವಿಧ ಮತ್ತು ಉಪಯೋಗವನ್ನು ತಿಳಿದುಕೊಳ್ಳೋಣ.

ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್:

ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡು ಚಿತ್ರದ ಚೌಕಟ್ಟಿನೊಳಗಿರುವ ಬೇರೆ ಬೇರೆ ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆದು, ಈ ಅಳತೆಯನ್ನು ಸರಾಸರಿಯಂತೆ ಒಂದುಗೂಡಿಸಿ ಚಿತ್ರಕ್ಕೆ ಬೇಕಾದ ಒಟ್ಟು ಬೆಳಕಿನ ಪ್ರಮಾಣವನ್ನು ಸೂಚಿಸುತ್ತದೆ.

ಕುದುರೆಮುಖ

ಈ ಮೇಲಿನ ಲ್ಯಾಂಡ್-ಸ್ಕೇಪಿನಲ್ಲಿ ಮುನ್ನೆಲೆಯ ಗುಡ್ಡ ಮರ, ನಡುನೆಲೆಯ ಗುಡ್ಡ, ಹಿನ್ನೆಲೆಯ ಚಂದ್ರನನ್ನೊಳಗೊಂಡ ಆಗಸ ಒಟ್ಟಿನಲ್ಲಿ ನಿಸರ್ಗವು ನನ್ನ ವಿಷಯವಾದ್ದರಿಂದ ಎಲ್ಲವನ್ನೂ ಸರಿಯಾಗಿ ಎಕ್ಸ್-ಪೋಸ್ ಮಾಡಲು ಮ್ಯಾಟ್ರಿಕ್ಸ್ ಮೀಟರಿಂಗ್ ಬಳಸಿದ್ದೇನೆ. ಹೆಚ್ಚಿನ ಕ್ಯಾಮರಾದಲ್ಲಿ ಇದು ಸಾಮಾನ್ಯವಾಗಿ ಆಯ್ಕೆಯಾಗಿರುವ ಮೀಟರಿಂಗ್ ಮೋಡ್.

ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್:

ಸೆಂಟರ್ ವೈಟೆಡ್ ಮೀಟರಿಂಗ್ ಮೋಡು ಮ್ಯಾಟ್ರಿಕ್ಸ್ ಮೀಟರಿಂಗಿನಂತೆಯೇ ಚಿತ್ರದ ಚೌಕಟ್ಟಿನೊಳಗಿನ ಹಲವು ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆಯುವುದಾದರೂ ಮಧ್ಯಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.

DSC09765

ಈ ಮೇಲಿನ ಚಿತ್ರವನ್ನು ಹೋಟೆಲಿನ ಒಳಗಡೆಯಿಂದ ತೆಗೆದದ್ದು. ಮಧ್ಯಾಹ್ನದ ಸಮಯವಾದ್ದರಿಂದ ಹೊರಗಡೆ ಪ್ರಖರ ಬೆಳಕು ಮತ್ತು ಹೋಟೆಲಿನ ಒಳಗಡೆ ಕಡಿಮೆ ಬೆಳಕಿತ್ತು. ಅಂದರೆ ಒಳಗಡೆಯ ಮತ್ತು ಹೊರಗಡೆಯ ಬೆಳಕಿನ ವ್ಯತ್ಯಾಸ ಜಾಸ್ತಿ ಇತ್ತು. ಇಲ್ಲಿ ನನ್ನ ವಿಷಯ ಜನರಾಗಿದ್ದು, ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದಲ್ಲಿ ಅಂಡರ್-ಎಕ್ಸ್-ಪೋಸಾಗುವ ಸಾಧ್ಯತೆ ಇತ್ತು. ಆದ್ದರಿಂದ ಮೀಟರಿಂಗ್ ಮೋಡನ್ನು ಸೆಂಟರ್ ವೈಟೆಡ್ಗೆ ಬದಲಿಸಿ, ನನ್ನ ವಿಷಯದ ಮೇಲೆ ಬೀಳುತ್ತಿರುವ ಬೆಳಕನ್ನು ಅಳೆದು, ಮರು ಸಂಯೋಜಿಸಿ ತೆಗೆದೆ. ಇಲ್ಲಿ ವಿಷಯ ಸರಿಯಾಗಿ ಎಕ್ಸ್-ಪೋಸಾಗಿದ್ದು, ಹಿನ್ನೆಲೆ ಓವರ್-ಎಕ್ಸ್-ಪೋಸಾಗಿದ್ದು ಗಮನಿಸಬಹುದು.

ಕ್ರಾಸ್ ಹೇರ್ (ಸ್ಪಾಟ್) ಮೀಟರಿಂಗ್ ಮೋಡ್:

ಮೇಲಿನೆರಡು ಮೀಟರಿಂಗ್ ಮೋಡುಗಳಿಗೆ ಭಿನ್ನವಾಗಿ ಕ್ರಾಸ್ ಹೇರ್ ಮೀಟರಿಂಗ್ ಮೋಡಿನಲ್ಲಿ ಚಿತ್ರದ ಚೌಕಟ್ಟಿನ ಒಂದು ಭಾಗದ (ಸಾಮಾನ್ಯವಗಿ ಮಧ್ಯ ಭಾಗದ) ಬೆಳಕಿನ ಪ್ರಮಾಣವನ್ನು ಮಾತ್ರ ಪರಿಗಣಿಸುತ್ತದೆ. ಬೆಳಕಿನ ವ್ಯತ್ಯಾಸ ತುಂಬಾ ವ್ಯತಿರಿಕ್ತವಾಗಿದ್ದ ಪಕ್ಷದಲ್ಲಿ ಇದನ್ನು ಉಪಯೋಗಿಸಬಹುದು.

DSC00138

ಈ ಮೇಲಿನ ಚಿತ್ರದಲ್ಲಿ ಬೆಳಕು ವಿಶಿಷ್ಟವಾಗಿದ್ದು ನನ್ನ ವಿಷಯದ ಮೇಲೆ ಅದರ ಪ್ರಮಾಣ ಅನಿರ್ಧಿಷ್ಟವಾಗಿ ಹರಡಿದೆ. ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದ್ದಲ್ಲಿ ಮುಖದ ಕೆಲವು ಭಾಗ ಓವರ್-ಎಕ್ಸ್-ಪೋಸಾಗಿ ಉಳಿದ ಭಾಗ ಸರಿಯಾಗಿ ಎಕ್ಸ್-ಪೋಸಾಗುತ್ತಿತ್ತು. ಅದೂ ಅಲ್ಲದೇ ಹಿನ್ನೆಲೆ ಸಂಪೂರ್ಣ ಕತ್ತಲಾಗಿದ್ದುದರಿಂದ ಬೆಳಕಿನ ಪ್ರಮಾಣವನ್ನು ತಪ್ಪಾಗಿ ಅಳೆಯುವ ಸಾಧ್ಯತೆ ಇತ್ತು. ಆದ್ದರಿಂದ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸಿ ನನಗೆ ಬೇಕಾದ ಮುಖದ ಭಾಗದ ಬೆಳಕನ್ನು ಅಳೆದು ಮರು ಸಂಯೋಜಿಸಿ ತೆಗೆದೆ. ಬೆಳಕನ್ನು ಅಳೆಯುವಲ್ಲಿ ಹಿನ್ನೆಲೆಯನ್ನು ಕಡೆಗಣಿಸಿದ್ದು, ಹಿನ್ನೆಲೆ ಸಂಪೂರ್ಣ ಕತ್ತಲಿರುವುದನ್ನು ಗಮನಿಸಬಹುದು.

DSC05050

ಇದೇ ರೀತಿ ಈ ಮೇಲಿನ ಚಂದ್ರನ ಚಿತ್ರ ಕೂಡ ಕ್ರಾಸ್ ಹೇರ್ ಮೀಟರಿಂಗ್ ಉಪಯೋಗಿಸಿ ತೆಗೆದದ್ದು. ಇಲ್ಲಿಯೂ ಚಂದ್ರನ ಸುತ್ತಲಿನ ಆಗಸಕ್ಕೂ ಚಂದ್ರನಿಗೂ ಇರುವ ಬೆಳಕಿನ ವ್ಯತ್ಯಾಸ ಅಧಿಕ.

ಲ್ಯಾಂಡ್-ಸ್ಕೇಪು, ಪೋರ್ಟ್ರೈಟ್ ಉದಾಹರಣೆಗೆ ಕೊಟ್ಟಿದ್ದಷ್ಟೆ. ಇದರರ್ಥ ಲ್ಯಾಂಡ್-ಸ್ಕೇಪುಗಳಿಗೆ ಕೇವಲ ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್ ಮತ್ತು ಪೋರ್ಟ್ರೈಟ್ಗಳಿಗೆ ಕೇವಲ ಸೆಂಟರ್ ವೈಟೆಡ್/ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಉಪಯೋಗಿಸಬೇಕೆಂದಲ್ಲ.ಬೆಳಕಿನ ವ್ಯತ್ಯಾಸಕ್ಕೆ, ವಿಷಯಕ್ಕೆ ಅನುಗುಣವಾಗಿ ಈ ಮೇಲಿನ ವಿವಿಧ ಮೀಟರಿಂಗ್ ಮೋಡುಗಳನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಛಾಯಾಗ್ರಾಹಕರು ಪೋರ್ಟ್ರೈಟ್ಗಳಿಗೆ ಸೆಂಟರ್ ವೈಟೆಡ್ ಅಥವಾ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸುವರು.

ಚಿತ್ರ ಕೃಪೆ: ಪಾಲ

Friday, May 15, 2009

ತಾವರೆಕೆರೆಯ ವೀರಗಲ್ಲು

ಬೆಂಗಳೂರಿನ ಮಾಗಡಿ ರೋಡಿನಿಂದ ಹಾಗೇ ಮುಂದುವರಿದು ತಾವರೆಕೆರೆಯ ಮಾರ್ಗವಾಗಿ ಮುನ್ನೆಡೆಯುತ್ತಿದ್ದಾಗ, ಎಡಗಡೆ ಕಾಣಿಸಿದ ಹೊಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿವು.

DSC00599

DSC00595

DSC00597

DSC00594

ಸ್ಥಳೀಯರ ವಿವರಣೆಯಿಂದ ಮನದಣಿಯದೆ ಚಿತ್ರ ತೆಗೆದುಕೊಂಡು ಸಂಪದದಲ್ಲಿ ಹಾಕಿದಾಗ, ಮರಿಜೋಸೆಫರು ಕೊಟ್ಟ ವಿವರಣೆ ಇಂತಿದೆ:

ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ದೇವನ ಸಾನ್ನಿಧ್ಯದಲ್ಲಿ ವಿರಾಜಮಾನನಾಗಿ ದೇವಸೇವೆ ಮಾಡುವ ದೃಶ್ಯ ಕಂಡುಬರುತ್ತದೆ. ಕೆಲ ವೀರಗಲ್ಲುಗಳಲ್ಲಿ ವೀರನ ಸಾವು ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆತ್ತಲಾಗಿರುತ್ತದೆ. ಕೆಲ ವೀರಗಲ್ಲುಗಳಲ್ಲಿ ಶಿವಲಿಂಗದ ಅಥವಾ ತೀರ್ಥಂಕರನ ಅಥವಾ ಶಂಖಚಕ್ರಗಳ ಚಿತ್ರವಿರುತ್ತದೆ. ಸೂರ್ಯ ಚಂದ್ರರ ಚಿತ್ರಗಳಿದ್ದರೆ ಆ ವೀರನ ಕೀರ್ತಿ ಆಚಂದ್ರಾರ್ಕವಾಗಿರುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ಪಾಲಚಂದ್ರರು ತೋರಿಸಿರುವ ಚಿತ್ರದಲ್ಲಿ ವೀರನೊಬ್ಬನು ದರೋಡೆಕೋರರಿಂದ ತನ್ನ ಕುರಿಗಳನ್ನು ಕಾಪಾಡುವುದಕ್ಕಾಗಿ ಸೆಣಸುತ್ತಿದ್ದಾನೆ. ಈ ಸಂದರ್ಭದಲ್ಲಿ ಅವನು ಇಬ್ಬರು ಕಳ್ಳರನ್ನು ಕೆಳಕ್ಕೆ ಕೆಡವಿದ್ದಾನೆ. ಅವನ ಬಲಬದಿಯಲ್ಲಿ ಪ್ರಾಣಿಗಳ ಚಿತ್ರ ಇರುವುದರಿಂದ ತನ್ನ ಪ್ರಾಣಿಗಳನ್ನು ಸುರಕ್ಷಿತವಾಗಿ ಊರೆಡೆಗೆ ಕಳಿಸಿದ್ದಾನೆ ಎಂದರ್ಥ. ಅವನ ಎಡಬದಿಯಲ್ಲಿ ಪ್ರಾಣಿ ಕಂಡುಬಂದರೆ ಶತ್ರಗಳು ಅವನ್ನು ಅಪಹರಿಸಿದರು ಎಂಬುದನ್ನು ಸಂಕೇತಿಸುತ್ತದೆ. ಇಲ್ಲಿ ಆತ ತನ್ನ ಪ್ರಾಣಿಗಳನ್ನು ಉಳಿಸಿದ್ದಾನಾದರೂ ಶತ್ರಗಳ ಕೈ ಮೇಲಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಆಗ ವೀರಸ್ವರ್ಗದ ಅಪ್ಸರೆಯರು ಬಂದು ನಿನ್ನಂಥ ವೀರ ಈ ಭೂಮಿಯಲ್ಲಿರುವುದು ತರವಲ್ಲ ಬಾರೆಂದು ತಮ್ಮ ಲೋಕಕ್ಕೆ ಕರೆದೊಯ್ಯುತ್ತಾರೆ. ಮೇಲಣ ಹಂತದಲ್ಲಿ ಆತ ಅಪ್ಸರೆಯರೊಂದಿಗೆ ಲಾಸ್ಯವಾಡುತ್ತಿರುವುದನ್ನು ನೋಡಬಹುದಾಗಿದೆ.


ಪುರಾತನ ದೇವಸ್ಥಾನವನ್ನೆಲ್ಲಾ ಜೀರ್ಣೋದ್ಧಾರದ ನೆಪದಿಂದ ಅಂದಗೆಡಿಸುವ ನಾವು ಇವುಗಳ ಬಗ್ಗೆ ಅಲಕ್ಷ್ಯ ಧೋರಣೆ ಏಕೆ ತಳೆದಿದ್ದೇವೆಯೋ ತಿಳಿದಿಲ್ಲ! ಐತಿಹಾಸಿಕವಾಗಿ ಇವುಗಳ ಪ್ರಾಮುಖ್ಯತೆ ಶೂನ್ಯವೇ?

[ಇದರಲ್ಲಿ ಬರೆದ ಹಳೆಗನ್ನಡ ಲಿಪಿ ತಿಳಿದವರಿಂದ ಓದಿಸಿ ತಿಳಿದು ಕೊಳ್ಳುವ ಕುತೂಹಲ ಇದೆ. ತಿಳಿದ ದಿನ ನಿಮ್ಮೊಂದಿಗೆ ಹಂಚಿಕೊಳ್ಳುವೆ.]

Saturday, May 09, 2009

ಮಡಿವಾಳ

ತಲೆಬರಹ ಓದಿ, ಬೆಂಗಳೂರಿನ ಮಡಿವಾಳದ ಬಗ್ಗೆ ಬರೆಯಲಿಕ್ಕೆ ಹೊರಟೆ ಅಂದುಕೊಳ್ಳಬೇಡಿ. ಮಡಿವಾಳ ಹಕ್ಕಿಯ ಕೆಲವು ಚಿತ್ರಗಳನ್ನ ತೋರಿಸೋಣ ಅಂತ. ಕಳೆದವಾರ ಊರಿಗೆ ಹೋಗಿದ್ದಾಗ ಮಧ್ಯಾಹ್ನ ಗಡದ್ದಾಗಿ ಪತ್ರೊಡೆ ತಿಂದು, ಹಾಗೇ ತೂಕಡಿಸ್ತಾ ಇರಬೇಕಾದರೆ ಕಿಟಕಿಯಿಂದ ಹಳೇ ದೋಸ್ತಿಗಳ ಕಿರುಚಾಟ. ಕಿಟಕಿಯಿಂದ ನೋಡಿದಾಗ ಮಡಿವಾಳದ ದಂಪತಿಗಳಿಬ್ಬರು ತುಂಬಾ ಸಂತೋಷದಿಂದ ತನ್ನ ಹೊಸ ಹೆಣ್ಣು ಮಗಳನ್ನು ತೋರಿಸ್ತಾ ಇದ್ವು. ನಾನೂ ನೋಡಿ ಹೀಗೇ ವಾಪಾಸ್ ಬಂದು ಮಲಗಿಕೊಳ್ಳೋಣ ಅಂತಿದ್ದೆ.

ಅಷ್ಟರಲ್ಲಿ ಅಪ್ಪ ಹಕ್ಕಿ ಬಂದು "ಕೆಲಸಕ್ಕೆ ಬಾರದ ಕೀಟಗಳ ಫೋಟೋ ಎಲ್ಲಾ ತೆಗೀತೀಯ, ನನ್ನ ಮಗಳ ಫೋಟೋ ತೆಗೆಯೋದಿಲ್ವ ಅಂತ ಕೇಳ್ತು". ಅದಕ್ಕುತ್ತರವಾಗಿ ನಾನು "ದಿನ ಪೂರ್ತಿ ಆರಿಸ್ಕೊಂಡು ಹೊಟ್ಟೆ ತುಂಬ ತಿಂದು ತೇಗೋ ಕೀಟಗಳು ನಿನಗೆ ಕೆಲಸಕ್ಕೆ ಬರದೇ ಇರೋವಾ" ಅಂತ ಗದರಿಸಿದೆನಾದರೂ ಕ್ಯಾಮರಾ ಹಿಡಿದುಕೊಂಡು ಹೊರಗೆ ಹೋದೆ.

ಇವ್ರೇ ನಂಜೊತೆ ಮಾತಾಡಿದ ತಂದೆ ಹಕ್ಕಿ
DSC00152

ಹಕ್ಕಿ, ಹೂಗಳು ವರ್ಣರಂಜಿತವಾಗಿರುವುದರಿಂದ ಅವುಗಳ ಬಣ್ಣದ ಚಿತ್ರ ತೆಗೆದೇ ರೂಢಿ. ಈ ಹಕ್ಕಿ ಬಣ್ಣವೇ ಕಪ್ಪು ಬಿಳುಪಾದ್ದರಿಂದ, ಬಣ್ಣದ ಚಿತ್ರ ತೆಗೆದೇನು ಫಲ ಎಂಬ ಭಾವನೆ ಮನವನ್ನಾವರಿಸಿತು. ಹೆಣ್ಣು ಗಂಡಿನಂತೆ ಕಡು ಕಪ್ಪು ಬಣ್ಣ ಇಲ್ದೇ ಚುಕ್ಕೆಗಳಿರುವ ಬೂದಿ ಬಣ್ಣ ಇದ್ರೂ, ಕಪ್ಪು ಬಿಳುಪೇ ಸಾಕು ಅಂದುಕೊಂಡು ಪೋಸ್ ಕೊಡೋಕೆ ಹೇಳಿದೆ.

ಹಂಗೆ ಆ ಟೊಂಗೆ ಮೇಲೆ ಕೂತ್ಕೋ, ಕತ್ತು ಸ್ವಲ್ಪ ಎಡಕ್ಕೆ ತಿರ್ಸು
DSC00183

ಈಗ ಬಲಕ್ಕೆ ತಿರ್ಸು ಕತ್ತನ್ನ
DSC00181

ನೋಡೋಣ ಕುತ್ಕೆ ಒಂಚೂರು ಮೇಲಕ್ಕೆತ್ತು
DSC00180

ಬಾಲ ಎತ್ತಿ ಹಾಡ್ತೀಯಂತಲ್ಲ, ಹೆಂಗೆ ನೋಡೋಣ
DSC00203

ಬೆನ್ನು ತೋರ್ಸು
DSC00186

ಟೊಂಗೆ ಹೆಂಗೆ ಹಿಡ್ಕೊಂತೀಯ
DSC00211

ಇಷ್ಟರಲ್ಲೇ ಮರಿಹಕ್ಕಿಗೆ ಬೇಸರ ಬಂದಿರ್ಬೇಕು. ಅದಕ್ಕೇ ನನ್ನನ್ನುದ್ದೇಶಿಸಿ "ಬಣ್ಣ ಬಣ್ಣವಾಗಿ ಚೆನ್ನಾಗಿ ಬಂತಾ ಫೋಟೋ ಎಲ್ಲಾ"
ನಾನದಕ್ಕೆ ಉತ್ತರವಾಗಿ "ನೀನಿರೋದೆ ಕಪ್ಪು-ಬಿಳಿ, ಬಣ್ಣ ಎಲ್ಲಿಂದ ತರ್ಲಿ.

ಹೋಗು ಹಾಗಾದ್ರೆ ನಾನು ನಿಂಗೆ ಪೋಸ್ ಕೊಡೋದಿಲ್ಲ
DSC00209

ತಪ್ಪಾಯ್ತಮ್ಮ, ಬೇಜಾರ್ ಮಾಡ್ಕೋಬೇಡ, ಬಣ್ಣದ್ದೇ ತೆಗೀತೀನಿ ಬಾ
DSC00208

ಅದಕ್ಕೆ ಬೇಜಾರಾಗಬಾರದು ಅಂತ ಮೇಲಿನ ಬಣ್ಣದ ಚಿತ್ರ ತೆಗೆದು, ಮಲಗಿಕೊಳ್ಳೋಕೆ ಹೊರಟೆ. "ನನ್ನ ಕಥೆ ಹೇಳ್ತೀನಿ", ಅಂತ ಹಕ್ಕಿ ಕರೆದ್ರೂ ತೇಜಸ್ವಿಯವರ "ಹಕ್ಕಿ ಪುಕ್ಕ"ದ ೮೨ನೇ ಪುಟದಲ್ಲಿ ನಿನ್ನ ಬಗ್ಗೆ ಇದೆ, ಆಮೇಲೆ ಸಿಕ್ತೀನಿ ಅಂತ ಹೇಳಿ ಮಲಗೋಕೆ ಹೊರಟೆ.

ಹಕ್ಕಿ ಪುಸ್ತಕಕ್ಕೆ ೩೦೦ರೂ. ಕೊಟ್ಟು ಯಾರು ಓದ್ತಾರೆ ಅಂತ ನಿಮಗನ್ನಿಸಿದರೆ ಈ ಕೊಂಡಿನ ಓದ್ಕೊಳಿ: Oriental Magpie Robin. ಇಂಗ್ಲೀಷಲ್ಲಿದೆ, ನಿಮ್ಮ ಹಣೇಬರಹ!

Thursday, May 07, 2009

ಪತ್ರೊಡೆ


ಕೆಸು Araceae ವಂಶಕ್ಕೆ ಸೇರಿದ, ಏಷಿಯಾದ ಜವುಗು ಪ್ರದೇಶಗಳಲ್ಲಿ ಕಂಡು ಬರುವ, ಏಕದಳ ಸಸ್ಯ. ಎಲೆಗಳು ಹೃದಯಾಕಾರದಲ್ಲಿ ಇದ್ದು, ಎಲೆಯ ಮೇಲ್ಮೈ ತೈಲ ಸವರಿದಂತೆ ನುಣುಪಾಗಿದ್ದು, ನೀರಿನ ಹನಿ ಜಾರುವಂತಿರುತ್ತದೆ. ನೆಲದೊಳಗೆ ಹುದುಗಿರುವ ಗಡ್ಡೆ, ನೆಲದ ಮಟ್ಟದಿಂದಲೇ ಕವಲೊಡೆದ ಮೃದುವಾದ ಕಾಂಡ, ಕಾಂಡಕ್ಕೊಂದೇ ಎಲೆ ಈ ಗಿಡದ ಸಾಮಾನ್ಯ ರೂಪ.

ಕೆಸುವಿನಲ್ಲೇ ಹಲವು ಪ್ರಭೇದಗಳಿದ್ದರೂ ನಮ್ಮ ಪ್ರಯೋಜನ ದೃಷ್ಟಿಯಿಂದ ಬೆಳಿ ಕೆಸು, ಕರಿ ಕೆಸು, ಮರ ಕೆಸು ಈ ಹೆಸರುಗಳನ್ನಷ್ಟೇ ತಿಳಿದುಕೊಂಡರೆ ಸಾಕು. ಬಿಳಿ ಕೆಸು ತಿಳಿ ಹಸುರು ಬಣ್ಣದ ಕಾಂಡ ಮತ್ತು ಎಲೆಯಂಚು ಹೊಂದಿದ್ದರೆ, ಕರಿ ಕೆಸು ಕಡು ಕಪ್ಪು ಬಣ್ಣವನ್ನು ಹೋಲುವ ಕಾಂಡ, ಎಲೆಯಂಚು ಹೊಂದಿದೆ. ಮರದ ಮೇಲೆ ಆರ್ಕಿಡ್ನಂತೆ ಬೆಳೆಯುವುದು ಮರ ಕೆಸು. ಉಡುಪಿ, ದ.ಕ.ಗಳಲ್ಲಿ ತಯಾರಿಸುವ ಪತ್ರೊಡೆಗೆ ಇವೇ ಎಲೆಗಳನ್ನು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಗುಜರಾತಲ್ಲೂ ಈ ಬಗೆಯ ಖಾದ್ಯ ಮಾಡಿ ಅದಕ್ಕೆ "ಪಾತ್ರ" ಎಂಬ ಹೆಸರನ್ನು ಇಟ್ಟಿದ್ದಾರಾದರೂ, ಎರಡರ ರುಚಿಯನ್ನೂ ಸವಿದ ನನ್ನ ನಾಲಿಗೆ ನಿಶ್ಪಕ್ಷಪಾತಿಯಾಗಿ ಪತ್ರೊಡೆಯತ್ತ ಒಲವು ತೋರಿಸಿದ್ದರಿಂದ "ಪಾತ್ರ"ವನ್ನು ಕಡೆಗಾಣಿಸಲಾಗಿದೆ. ಮೇಲೆ ತಿಳಿಸಿದ ಎಲೆಗಳನ್ನು ರುಚಿಯ ದೃಷ್ಟಿಯಿಂದ, ಮೃದುತ್ವದ ದೃಷ್ಟಿಯಿಂದ ಸಮೀಕರಣದಲ್ಲಿ ಹೀಗೆ ವಿವರಿಸಬಹುದು: ಬಿಳಿ ಕೆಸು < ಕರಿ ಕೆಸು < ಮರ ಕೆಸು. ಪತ್ರೊಡೆಯಲ್ಲಿ ಎರಡು ವಿಧಗಳುಂಟು, ಮೊದಲನೆಯದು ದೋಸೆ ಕಲ್ ಪತ್ರೊಡೆ, ಎರಡನೆಯದು ಪತ್ರೊಡೆ. ಇವೆರಡನ್ನೂ ಮಾಡುವ ವಿಧಾನವನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ. ದೋಸೆ ಕಲ್ ಪತ್ರೊಡೆ: ೧. ದೋಸೆ ಮೊದಲಾದ ತಿಂಡಿಗೆ ಬಳಸುವ ಅಕ್ಕಿಯನ್ನು ಎರಡು ಘಂಟೆಗಳಷ್ಟು ಕಾಲ ನೀರಿನಲ್ಲಿ ನೆನೆಹಾಕಿ. ೨. ತೋಟಕ್ಕೆ ತೆರಳಿ ಕೆಸುವಿನ ಎಲೆಯನ್ನಾಯ್ದುಕೊಂಡು ಬನ್ನಿ. ಎಲೆ ತೀರ ಬಲಿತದ್ದಾಗಿರಬಾರದು. ಸ್ವಲ್ಪ ಎಳೆಯ ಎಲೆಯಾದರೆ ಚೆನ್ನಾಗಿ ಬೇಯುವುದೂ ಅಲ್ಲದೇ, ತಿಂದ ನಂತರ ಬಾಯಿ ತುರಿಕೆಯಾಗುವ ಸಂಭವವೂ ಕಡಿಮೆ. ೩. ಎಲೆಯನ್ನು ಚೆನ್ನಾಗಿ ತೊಳೆದು, ದಂಟನ್ನು ಎಲೆಯಿಂದ ಬೇರ್ಪಡಿಸಬೇಕು. ಎಲೆಯ ಕೆಳಭಾಗದಲ್ಲಿರುವ ದಂಟುಗಳನ್ನೂ ಕೂಡ ಇದೇ ರೀತಿ ಬೇರ್ಪಡಿಸಬೇಕು. ೪. ಸುಮಾರು ಒಂದು ಕಡಿಯಷ್ಟು ತೆಂಗಿನ ತುರಿಯನ್ನು ತಯಾರಿಸಿಕೊಳ್ಳಬೇಕು. ೫. ನೆನೆಸಿದ ಅಕ್ಕಿ, ತೆಂಗಿನ ತುರಿ, ೨ ಚಮಚದಷ್ಟು ಜೀರಿಗೆ, ೨ ಚಮಚದಷ್ಟು ಕೊತ್ತುಂಬರಿ ಬೀಜ, ಒಂದು ಚಮಚ ಅರಶಿನ, ೧೦ ಒಣ ಮೆಣಸಿನ ಕಾಯಿ, ಸ್ವಲ್ಪ ಹುಣಸೇ ಹಣ್ಣನ್ನು ದೋಸೆಯ ಹಿಟ್ಟಿನ ಹದಕ್ಕೆ ಅರೆದುಕೊಳ್ಳಬೇಕು. ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ೬. ಕೆಸುವಿನ ಎಲೆಯ ಹಿಂಭಾಗಕ್ಕೆ ಹದವಾಗಿ ಈ ಮಿಶ್ರಣವನ್ನು ಹಚ್ಚುತ್ತಾ, ಮಡಿಸುತ್ತಾ, ಸುರುಳಿಯಾಗಿ ಸುತ್ತಬೇಕು.








೭. ಗಾಲಿಗಳಂತೆ ಇವನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.



೮. ಹದವಾದ ಬೆಂಕಿ ಹೊತ್ತಿಸಿ ಒಲೆ ಮೇಲಿಟ್ಟ ದೋಸೆ ಕಾವಲಿಗೆ ಎಣ್ಣೆ ಹಚ್ಚಿ, ಈ ಗಾಲಿಗಳನ್ನು ಒಂದೊಂದಾಗಿ ಮೇಲೆ ತಿಳಿಸಿದ ಮಿಶ್ರಣದಲ್ಲಿ ಅದ್ದಿ ಕಾವಲಿ ಮೇಲಿಡಬೇಕು. ಕಾವು ಜಾಸ್ತಿಯಿರುವ ಮಧ್ಯ ಭಾಗ ಬೇಗನೆ ಕರಟಿ ಹೋಗುವ ಸಂಭವ ಇರುವುದರಿಂದ, ಕಾವಲಿ ಮೇಲೆ ಗಾಲಿಗಳನ್ನು ಇಡುವಾಗ ಹೊರವರ್ತುಲದಿಂದ ಆರಂಭಿಸಬೇಕು.
೯. ಕಾವಲಿಗೆ ಎಣ್ಣೆ ಹಚ್ಚುವಾಗ ಬೇರೆ ಎಣ್ಣೆಯನ್ನು ಬಳಸಿದರೂ, ತೆಗೆಯುವ ಕೊಂಚ ಮೊದಲು ತೆಂಗಿನೆಣ್ಣೆ ಹಾಕುವುದು ಸೂಕ್ತ.


೧೦. ಹದವಾಗಿ ಬೀಳುತ್ತಿರುವ ಮಳೆಯ ತಾಳದೊಂದಿಗೆ, ಕೆಂಪಗೆ ಕಾದ, ಬಿಸಿ ಬಿಸಿಯಾದ ದೋಸೆ ಕಲ್ ಪತ್ರೊಡೆ ಅವರ್ಣನೀಯವಾದ ಅನುಭವವನ್ನು ಒದಗಿಸುವುದು.

ಪತ್ರೋಡೆ:
"ದೋಸೆ ಕಲ್ ಪತ್ರೊಡೆ"ಮಾಡುವ ವಿಧಾನದ ೬ನೇ ಹಂತದವರೆಗೆ ಅನುಸರಿಸಿ(ಎಲೆಗೆ ಹಿಟ್ಟು ಹಚ್ಚುವ ಮೊದಲು, ಹಿಟ್ಟಿಗೆ ಸ್ವಲ್ಪ ಬೆಲ್ಲ ಬೆರಸಬೇಕು)
೭. ಸುರುಳಿಯ ಮುಂಭಾಗಕ್ಕೂ ಮಿಶ್ರಣವನ್ನು ಸವರಿ, ಇಡ್ಲಿ ಬೇಯಿಸುವಂತೆ ಇಡ್ಲಿ ಅಟ್ಟದಲ್ಲಿ ಬೇಯಿಸಬೇಕು.
೮. ಬಿಸಿ ಬಿಸಿಯಾದ ಪತ್ರೊಡೆಯನ್ನು ಬೆಕ್ಕಿನ ಮಂಡೆಗಾತ್ರದ ಬೆಣ್ಣೆಯೊಂದಿಗೋ ಅಥವಾ ತೆಂಗಿನೆಣ್ಣೆ ಸವರಿಯೋ ತಿನ್ನಬಹುದು.
೯. ಹೆಚ್ಚಿಗೆ ಉಳಿದಿದ್ದನ್ನು ಮರುದಿನ ಚಿಕ್ಕದಾಗಿ ಕತ್ತರಿಸಿ, ಸಾಸಿವೆ, ಕರಿ ಬೇವು, ಒಣ ಮೆಣಸಿನ ಒಗ್ಗರಣೆಯೊಂದಿಗೆ ತುರಿದ ಕಾಯಿ ಸೇರಿಸಿ ಹುರಿದು, ಸಕ್ಕರೆಯನ್ನು ಉದುರಿಸಿ ತಿಂದರೆ ಇನ್ನೊಂದು ಬಗೆಯ ಸುಖ ಪ್ರಾಪ್ತಿಯಾಗುವುದು.

ಈ ಮೇಲಿನ ಎರಡೂ ವಿಧಗಳು ಕೆಲವೊಮ್ಮೆ ನಾಲಗೆ, ಗಂಟಲು ತುರಿಕೆ ಉಂಟು ಮಾಡುವ ಸಂದರ್ಭ ಇರುವುದರಿಂದ, ಇದರ ಶಮನಕ್ಕಾಗಿ ಹುಣಸೇ ಹಣ್ಣು, ಬೆಲ್ಲ ಬಳಿಯಲ್ಲಿಟ್ಟುಕೊಳ್ಳುವುದು ಉತ್ತಮ. ಹೆಚ್ಚಾಗಿ ಸುಳ್ಳು ಹೇಳುವ ಅಭ್ಯಾಸ ಇರುವವರಿಗೆ ತುರಿಕೆ ಜಾಸ್ತಿ ಅಂತ ನನ್ನ ಅಮ್ಮ ಹೇಳುತ್ತಾಳಾದ್ದರಿಂದ, ಸಹಜವೆಂಬಂತೆ ಜೀವಮಾನದಲ್ಲಿ ನನಗೆ ಒಮ್ಮೆಯೂ ಪತ್ರೊಡೆ ತಿಂದು ತುರಿಕೆ ಬಂದದ್ದಿಲ್ಲ.

ಬಣ್ಣ ಬಣ್ಣದ ಕೆಸು ನೋಡಲು ಅಂದವಾಗಿರುವುದಾದರೂ ತಿನ್ನಲು ಯೋಗ್ಯವಲ್ಲ.

ನಿಮ್ಮ ಮನೆ ಅಥವಾ ಪಕ್ಕದ ಮನೆ ತೋಟದಲ್ಲಿ ಕೆಸು ಇಲ್ಲವಾದಲ್ಲಿ, ದೋಸೆ ಕಲ್ ಪತ್ರೊಡೆಯ ಹಿಟ್ಟನ್ನು ಉಪಯೋಗಿಸಿ ಹೀರೆಕಾಯಿ, ಬದನೇಕಾಯಿ, ಬಾಳೆಕಾಯಿ, ಮೆಂತೆ, ಬಸಳೆ ಇನ್ನಿತರ ಸೊಪ್ಪು, ಹೆಬ್ಬಲಸು ಇತ್ಯಾದಿಗಳಲ್ಯಾವುದನ್ನಾದರೂ ಬಳಸಿ ಚಟ್ಟಿ ಮಾಡಬಹುದು.

ಕೆಸುವಿನ ಉಪಯೋಗ ಬರೀ ಪತ್ರೊಡೆಗೆ ಮೀಸಲು ಎಂದು ನೀವು ತಿಳಿಯಬೇಕಾಗಿಲ್ಲ. ಅದರ ಎಲೆಯ ಚಟ್ನಿಯನ್ನೂ, ದಂಟಿನ ಹುಳಿಯನ್ನೂ, ಗಡ್ಡೆಯ ಹಪ್ಪಳವನ್ನೂ ಮಾಡಬಹುದು. ಎಲ್ಲವನ್ನೂ ಒಮ್ಮೆಲೇ ಪ್ರಯೋಗಿಸಿ ನಿಮಗೆ ಅಜೀರ್ಣವಾಗುವ ಸಂಭವ ಇರುವುದರಿಂದ ಅವನ್ನು ಮುಂದಿನ ತರಗತಿಯಲ್ಲಿ ನೋಡೋಣ.

ಚಿತ್ರ ಕೃಪೆ: ಪಾಲ

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)