ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ Shutter Speed ಹೆಚ್ಚಿಸಿಕೊಂಡು ಅದರ ಚಲನೆಯನ್ನು ಸ್ಥಬ್ದಗೊಳಿಸಿ ಚಿತ್ರ ಸೆರೆಹಿಡಿಯುವುದು ವಾಡಿಕೆ. ಪರಿಣಾಮ, ಕೆಳಗಿನ ಚಿತ್ರದಂತೆ ಮುನ್ನೆಲೆಯ ಜೀಪು, ಅದರ ಹಿನ್ನೆಲೆ ಎಲ್ಲವೂ ಸ್ಪಷ್ಟವಾಗಿ ಚಿತ್ರಿತವಾಗುವುದು. ಇಲ್ಲಿ ಜೀಪು ಹೊರಬಿಡುತ್ತಿರುವ ಹೊಗೆಯಿಂದ ಅದು ಚಲಿಸುತ್ತಿರಬಹುದೇನೋ ಎಂದು ಊಹಿಸಬಹುದಾದರೂ ಆ ಚಲನೆಯ ಪರಿಣಾಮ ಚಿತ್ರದಲ್ಲಿ ಮೂಡಿಲ್ಲ.
ಕಡಿಮೆ Shutter Speed ಬಳಸಿ ತೆಗೆದ ಈ ಕೆಳಗಿನ ಚಿತ್ರದಲ್ಲಿ ಚಲಿಸುತ್ತಿರುವ ವಾಹನಗಳು ಅಸ್ಪಷ್ಟವಾಗಿದ್ದು, ಹಿನ್ನೆಲೆ ಸ್ಪಷ್ಟವಾಗಿರುವುದನ್ನು ಗಮನಿಸಬಹುದು. ಇಲ್ಲಿ ಅಸ್ಪಷ್ಟವಾಗಿ ಮೂಡಿದ ವಾಹನಗಳು ಚಲನೆಯನ್ನು ಬಿಂಬಿಸುತ್ತಾದರೂ, ಅವೇ ಚಿತ್ರದ ವಿಷಯವಾಗಿದ್ದಲ್ಲಿ ನೋಡುಗರಲ್ಲಿ ಆಸಕ್ತಿ ಮೂಡಿಸಲು ವಿಫಲವಾಗುತ್ತದೆ.
ಚಲಿಸುವ ವಿಷಯವನ್ನು ಸ್ಪಷ್ಟವಾಗಿಸಿ, ಚಲನೆಯ ಪರಿಣಾಮವನ್ನೂ ಬಿಂಬಿಸಲು ಉಪಯೋಗವಾಗುವ ವಿಧಾನವೇ ಪ್ಯಾನಿಂಗ್. ಈ ಕೆಳಗಿನ ಚಿತ್ರದಲ್ಲಿ ಚಲಿಸುವ ದ್ವಿಚಕ್ರ ವಾಹನ ಅದರ ಸವಾರರು ಸ್ಪಷ್ಟವಾಗಿ ಮೂಡಿದ್ದು, ಹಿನ್ನೆಲೆಯು ವಾಹನ ಚಲಿಸುವ ದಿಕ್ಕಿಗೆ ವಿರುದ್ಧವಾದ ಗೆರೆಗಳಂತಹ ರಚನೆಯೊಂದಿಗೆ ಅಸ್ಪಷ್ಟವಾಗಿ ಚಲನೆಯನ್ನು ಬಿಂಬಿಸುತ್ತಿದೆ. ಕಡಿಮೆ Shutter Speed ಉಪಯೋಗಿಸಿ, ಚಲಿಸುವ ವಿಷಯದೊಂದಿಗೆ ನಮ್ಮ ಕ್ಯಾಮರಾವನ್ನು ಅನುಸರಿಸಿ ಚಿತ್ರಿಸಿದರೆ ಈ ಬಗೆಯ ಚಿತ್ರವನ್ನು ಸೆರೆಹಿಡಿಯಬಹುದು.
- ಪ್ಯಾನಿಂಗ್ ಚಿತ್ರಗಳನ್ನು ತೆಗೆಯುವ ಮೊದಲು ನಿಮ್ಮ ವಿಷಯದ ಚಲನೆಯ ದಿಕ್ಕನ್ನು ನಿರ್ಧರಿಸುವುದು ಮುಖ್ಯ. ಆದ್ದರಿಂದ ನೀವು ಇದನ್ನು ಮೊದಲ ಬಾರಿ ಪ್ರಯತ್ನಿಸುತ್ತಿದ್ದರೆ, ನಿಮ್ಮ ಮನೆಯ ಬಳಿಯಿರುವ ಯಾವುದಾದರೂ ರಸ್ತೆ ಉತ್ತಮ ವಿಷಯವನ್ನು ಒದಗಿಸಬಹುದು.
- ವಿಷಯವನ್ನು ಪ್ಯಾನ್ ಮಾಡಲು ವಿಷಯಕ್ಕೆ ಸಮಾನಾಂತರವಾಗಿ ನಿಲ್ಲುವುದು ಅನುಕೂಲ. ಹಿನ್ನೆಲೆಯಲ್ಲಿನ ಬಣ್ಣ ಹಾಗೂ ಆಕೃತಿಗಳು ನಿಮ್ಮ ವಿಷಯಕ್ಕೆ ಪೂರಕವಾಗಿರುವಂತಹ ಸ್ಥಳವನ್ನು ಆಯ್ದುಕೊಳ್ಳುವುದು ಉತ್ತಮ.
- ಈ ಚಿತ್ರಕ್ಕೆ ಕಡಿಮೆ Shutter Speed ಅಗತ್ಯ ಇರುವುದರಿಂದ, ISO, Aperture (ಇಲ್ಲಿ ಕಡಿಮೆ ಅಂದರೆ ಹೆಚ್ಚಿನ f ಸಂಖ್ಯೆ) ಕಡಿಮೆ ಇಟ್ಟುಕೊಂಡು ಚಿತ್ರ ಓವರ್ ಎಕ್ಸ್ ಪೋಸ್ ಆಗದಂತೆ ನೋಡಿಕೊಳ್ಳಬೇಕು. Shutter Speed ಸೆಟ್ ಮಾಡಲು Shutter Speed ಪ್ರಿಯೋರಿಟಿ (Tv OR S) ಅಥವಾ ಮ್ಯಾನ್ಯುಅಲ್ ಶೂಟಿಂಗ್ ಮೋಡನ್ನು ಆಯ್ದುಕೊಳ್ಳಬಹುದು. Shutter Speed ೧/೬೦ಯವರೆಗೂ ಕೈಯಲ್ಲೇ ಕ್ಯಾಮರಾ ಹಿಡಿದು ಚಿತ್ರಿಸಬಹುದಾದ್ದರಿಂದ ೧/೨೫೦ ಯಿಂದ ೧/೬೦ವರೆಗೆ ಇಟ್ಟುಕೊಂಡು ಆರಂಭಿಸುವುದು ಉತ್ತಮ. ವಿಷಯದ ವೇಗ ಕೂಡ ನಿಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಿಂದ Shutter Speed ಎಷ್ಟು ಕಡಿಮೆ ಇಡಬಹುದೆಂಬ ಕಲ್ಪನೆ ಕೆಲವು ಚಿತ್ರಗಳನ್ನು ತೆಗೆದ ನಂತರ ನಿಮಗೆ ಸಿಗುವುದು. ಪ್ಯಾನಿಂಗ್ ಚಿತ್ರ ತೆಗೆದು ಅಭ್ಯಾಸವಾದ ನಂತರ ಇನ್ನೂ ಕಡಿಮೆ Shutter Speed, ಟ್ರೈಪಾಡ್ ಬಳಸಿ ಈ ಚಲನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಚಿತ್ರಿಸಬಹುದು.
- ಯಾವುದಾದರೂ ಚಲಿಸುವ ವಿಷಯ ನಿಮ್ಮ ಕಣ್ಣಿಗೆ ಬಿದ್ದ ಕೂಡಲೇ ಅದನ್ನು ಕ್ಯಾಮರಾದ ಮೂಲಕ ಹಿಂಬಾಲಿಸುತ್ತಾ, ಬಟನ್ ಒತ್ತಿ, ಚಿತ್ರ ತೆಗೆದ ನಂತರ ಕೂಡ ಕ್ಯಾಮರಾದಿಂದ ವಿಷಯವನ್ನು ಕ್ಷಣ ಕಾಲ ಹಿಂಬಾಲಿಸಿ ಮೊದಲಿನಿಂದ ಕೊನೇಯವರೆಗೂ ಉತ್ತಮವಾದ "motion blur" ಪಡೆಯಬಹುದು.
- ಅಟೋ ಫೋಕಸಿಂಗ್ ಇಟ್ಟಲ್ಲಿ ಕಂಟ್ಯುನ್ಯುಸ್ ಫೋಕಸಿಂಗ್ ಆಯ್ದಲ್ಲಿ ಉತ್ತಮ. ಒಂದು ವೇಳೆ ನಿಮ್ಮ ಕ್ಯಾಮರಾದ ಆಟೋ ಫೋಕಸಿಂಗ್ ನಿಧಾನವಿದ್ದಲ್ಲಿ, ನೀವು ಯಾವ ಜಾಗದಲ್ಲಿ ಶಟ್ಟರ್ ರಿಲೀಸ್ ಮಾಡುವಿರೋ ಆ ಜಾಗಕ್ಕೆ ಫೋಕಸ್ ಮಾಡಿ ಬಟನ್ನನ್ನು ಅರ್ಧ ಹಿಡಿದಿಟ್ಟು ನಂತರ ಕ್ಲಿಕ್ಕಿಸಬಹುದು ಅಥವಾ ಮನ್ಯುವಲ್ ಫೋಕಸಿಂಗ್ ಬಳಸಬಹುದು.
ಪ್ಯಾನಿಂಗ್ ವಿಧಾನವನ್ನು ರಚನಾತ್ಮಕವಾಗಿ ಹೇಗೆ ಉಪಯೋಗಿಸಬಹುದು ಎಂದು ಮಿತ್ರರಾದ ಶಿವು ತಮ್ಮ ಸುಂದರ ಚಿತ್ರಗಳ ಮೂಲಕ ತೋರಿಸಿದ್ದಾರೆ.
ಸಂನ್ಯಾಸಿಯ ಬಾಲ್ಯ
ಈ ಚಿತ್ರದಲ್ಲಿ ಚಕ್ರದೊಂದಿಗೆ ಓಡುತ್ತಿರುವ ಬಾಲಕರು ಸ್ಪಷ್ಟವಾಗಿ ಮೂಡಿ ಹಿನ್ನೆಲೆಯಲ್ಲಿ ಚಲನೆಯ ಪರಿಣಾಮ ಚಿತ್ರಿತವಾಗಿದೆ. ಬಾಲಕರ ಕಾಲುಗಳನ್ನು ಗಮನಿಸಿದಲ್ಲಿ ಅವರು ನಮ್ಮೆದುರಿನಲ್ಲೇ ಓಡಿತ್ತಿರಬಹುದೆಂಬ ಕಲ್ಪನೆ ಮೂಡುತ್ತದೆ. ಇಲ್ಲಿ ಬಾಲಕರ ಉಡುಗೆಯ ಬಣ್ಣ, ಹಿನ್ನೆಲೆಯ ಬಣ್ಣದೊಂದಿಗೆ ಹೇಗೆ ಒಂದಕ್ಕೊಂದು ಪೂರಕವಾಗಿರುವಂತೆ ಜಾಗ್ರತೆಯಿಂದ ಆರಿಸಿರುವುದನ್ನು ಗಮನಿಸಬಹುದು.
ಮುಂಜಾನೆಯ ತ್ರಿಚಕ್ರ ಪಯಣ
ಈ ಚಿತ್ರದಲ್ಲಿ ತ್ರಿಚಕ್ರ ಸವಾರ, ತಳ್ಳುತ್ತಿರುವ ಬಾಲಕಿ, ಅಸ್ಪಷ್ಟ ಹಿನ್ನೆಲೆ, ನೆಲದಲ್ಲಿ ಬಿಂಬಿಸಿದ ನೆರಳು ಈ ಚಿತ್ರವನ್ನು ಭಿನ್ನವಾಗಿಸಿ ಹೇಗೆ ಅದರಲ್ಲಿ ಜೀವಂತಿಕೆ ತುಂಬಿದ್ದಾರೆ ಎಂಬುದನ್ನು ಗಮನಿಸಬಹುದು.
[ಈ ಮೇಲಿನ ಕೃತಿಗಳು ಹಲವು ಸ್ಪರ್ಧೆಗಳಲ್ಲಿ ಅವರಿಗೆ ಬಹುಮಾನ ದೊರಕಿಸಿಕೊಟ್ಟಿದ್ದು ಕೇಳಿ ಆಶ್ಚರ್ಯಪಡುವ ಕಾರಣವಿಲ್ಲ. "ಸಂನ್ಯಾಸಿಯ ಬಾಲ್ಯ" ಚಿತ್ರಕ್ಕೆ ಕಲ್ಕತ್ತದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್, ಆಷ್ಟ್ರೀಯ ದೇಶದಲ್ಲಿ ನಡೆದ ಆಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ ಮೆಡಲ್ ಬಂದಿದೆ. "ಮುಂಜಾನೆಯ ತ್ರಿಚಕ್ರ ಪಯಣ" ಚಿತ್ರಕ್ಕೆ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ, ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಹುಮಾನ ಬಂದಿದೆ.]
ಮೇಲೆ ತಿಳಿಸಿದ ವಿಷಯವನ್ನು ತಿಳಿದಿದ್ದರಿಂದ ನಿಮ್ಮ ಸಂಗ್ರಹದಲ್ಲಿ ಪ್ಯಾನಿಂಗ್ ಚಿತ್ರ ಸೇರ್ಪಡೆಗೊಳ್ಳುವುದಿಲ್ಲ. ಈ ಬಗೆಯ ಚಿತ್ರ ತೆಗೆಯಲು ತಾಳ್ಮೆ ಮುಖ್ಯ ಎಂಬ ವಿಷಯವನ್ನು ಗಮನದಲ್ಲಿರಿಸಿಕೊಂಡು ಈ ವಾರಾಂತ್ಯವೇ ನಿಮ್ಮ ಮನೆಯ ಬಳಿಯಿರುವ ರಸ್ತೆಯ ಬೀದಿಗಿಳಿದು ಪ್ರಯತ್ನಿಸಿ, ನಿಮ್ಮ ಅನುಭವ ಕಾಮೆಂಟಿನ ಮೂಲಕ ಹಂಚಿಕೊಂಡರೆ ತುಂಬಾ ಸಂತೋಷ.
ಪಾಲಚಂದ್ರ..
ReplyDeleteಛಾಯಾಗ್ರಹಣದ ಈ ವಿಚಾರಗಳನ್ನು ಬಹಳ ಸರಳವಾಗಿ,
ಅರ್ಥವಾಗುವಂತೆ ವಿವರಿಸಿದ್ದೀರಿ..
ಶಿವು ರವರ ಫೋಟೊಗಳಂತೂ ಮನಮೋಹಕವಾಗಿದೆ..
ಈ ಮೂಲಕ ಮತ್ತೊಮ್ಮೆ ಅವರಿಗೆ "ಅಭಿನಂದನೆಗಳು"
ನಿಮ್ಮ ಫೋಟೊಗಳೂ ಚೆನ್ನಾಗಿವೆ.
ಉತ್ತಮ ಲೇಖನಕಾಗಿ ವಂದನೆಗಳು..
ಛಾಯಗ್ರಹಣದ ಮಾಹಿತಿ ಚೆನ್ನಾಗಿ ಕೊಡುತ್ತಿರುವಿರಿ
ಪಾಲ,
ReplyDeleteಪ್ಯಾನಿಂಗ್ ಬಗ್ಗೆ ಗೊಂದಲಗಳಿದ್ದವು. ಅಂದರೆ, ವಸ್ತು ಚಲನೆಯಲ್ಲಿದ್ದಾಗ ಚಿತ್ರ ಹೇಗೆ ತೆಗೆಯಬೇಕೆಂಬ ಪ್ರಶ್ನೆಗಳು ನನ್ನಲ್ಲಿದ್ದವು.
ಇದ್ದ ಗೊಂದಲಗಳು ಸ್ವಲ್ಪ ಬಗೆಹರಿದಿರುವಂತೆ ತೋರುತ್ತೆ.
ಇದರ ಬಗ್ಗೆ ಬರೆದು ಒಳ್ಳೇ ಕೆಲಸ ಮಾಡಿದ್ದೀರ!!!
ತುಂಬಾ ಉಪಯೋಗವಾಯಿತು.
ಈ ವಾರಾಂತ್ಯ ಶಬರಿಮಲೆಗೆ ಹೊರಟಿರುವೆ. ೧೮ರಂದು ಹಿಂದಿರುಗುವೆ.
ಮುಂದಿನ ವಾರಾಂತ್ಯದಲ್ಲಿ ಪ್ರಯತ್ನಿಸುವೆ.
ಚಿತ್ರಗಳನ್ನು ಸೆರೆಹಿಡಿದು ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಉಪಯುಕ್ತ ಮಾಹಿತಿಗೆ ನನ್ನಿ.
ಅಂದಹಾಗೆ, ಚಿತ್ರಗಳು ತುಂಬಾ ಚೆನ್ನಾಗಿವೆ.
ಮೂರನೆಯ ಚಿತ್ರ ತುಂಬಾ ಇಷ್ಟ ಆಯ್ತು.
ಶಿವು ಅವರು ಸೆರೆಹಿಡಿದಿರುವ ಚಿತ್ರಗಳೂ ಸೂಪರ್.
ಅವರಿಗೂ ಅಭಿನಂದನೆಗಳು.
-ಅನಿಲ್
ಪ್ರಕಾಶ್,
ReplyDeleteನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.
ಅನಿಲ್,
ಚಿತ್ರ ತೆಗೆದ ನಂತರ ಪೂರ್ತಿ ಗೊಂದಲ ಕಡಿಮೆಯಾಗುತ್ತದೆ. ಪ್ರತಿಕ್ರಿಯೆಗೆ ವಂದನೆಗಳು ಮತ್ತು ನಿಮ್ಮ ಶಬರಿಮಲೈ ಯಾತ್ರೆ ಹಿತಕರವಾಗಿರಲಿ.
--
ಪಾಲ
ಪಾಲಚಂದ್ರ,
ReplyDeleteನೀವು ಫೋಟೋಗ್ರಫಿಯಲ್ಲಿ ಪ್ಯಾನಿಂಗ್ ತಂತ್ರದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ....[ಮೊದಲಿಗೆ ಎರಡು ಚಿತ್ರ ತೋರಿಸಿ ಅದು ವಿಫಲವಾದ ಬಗ್ಗೆ ಬರೆದು ನಂತರ ಮೂರನೆ ಚಿತ್ರದಲ್ಲಿ ಹೇಗೆ ಪ್ಯಾನಿಂಗ್ ಮಾಡಬೇಕು ಅನ್ನುವುದನ್ನು ಕ್ಯಾಮೆರಾದಲ್ಲಿ ಉಪಯೋಗಿಸುವ, ಬದಲಾಯಿಸುವ ಅಂಶಗಳನ್ನು ಚೆನ್ನಾಗಿ ಹೇಳಿದ್ದೀರಿ....ಮೊದಲು ಈ ವಿಧಾನ ಕಲಿಯುವವರಿಗೆ ಒಳ್ಳೆಯದಾಗುತ್ತದೆ.
ಯಾವುದೇ ಒಂದು ಚಿತ್ರ ಸುಂದರವಾಗಲು , ಮುಖ್ಯವಸ್ತು ೩ಡಿ ಅಯಾಮದಲ್ಲಿ ಕಾಣಲು ಹಿನ್ನೆಲೆ ಬ್ಲರ್ ಆಗುವುದು ಮುಖ್ಯ. ಹಿನ್ನೆಲೆಯನ್ನು ಬ್ಲರ್ ಮಾಡಲು ಪ್ಯಾನಿಂಗ್ ಕೂಡ ಒಂದು ಅತ್ಯುತ್ತಮ ತಂತ್ರ. ಮತ್ತೆ ಇದೊಂದು ರಿವರ್ಸ್ ತಂತ್ರವೆಂದೆ ಹೇಳಬಹುದು...ಮುಖ್ಯ ವಸ್ತು ನಿಜವಾಗಿ ಚಲಿಸುತ್ತಿದ್ದರೂ ಅದನ್ನು ಚಿತ್ರದಲ್ಲಿ ನಿಂತಾಗ ಹೇಗೆ ಕಾಣುತ್ತದೋ ಹಾಗೆ ಮಾಡುವುದು, ಮತ್ತು ಸುಮ್ಮನಿರುವ ಹಿನ್ನೆಲೆಯನ್ನು ಚಲಿಸುವಂತೆ ಮೂಡ್ ಕ್ರಿಯೇಟ್ ಮಾಡಿ ನೋಡುಗನ ಮನಸೂರೆಗೊಳ್ಳಬಹುದು....
ನನ್ನ ಅನುಭವದ ಪ್ರಕಾರ ಪ್ಯಾನಿಂಗ್ ತಂತ್ರ ಒಂದು ಉತ್ತಮ ಚಿತ್ರವಾಗುವಲ್ಲಿ ಸಹಾಯ ಮಾಡುತ್ತದೆ. ಒಂದು ವಸ್ತು ಚಲಿಸುವಾಗ[ಸ್ಕೂಟರ್, ಸೈಕಲ್, ಕಾರು, ಜಟಕ ಬಂಡಿ ಇತ್ಯಾದಿ]ವಸ್ತುವಿಗನುಗುಣವಾಗಿ ನಮ್ಮ ಕ್ಯಾಮೆರಾ ಚಲಿಸುವಾಗ ಯಾವುದೇ ಕಾರಣಕ್ಕೂ ಕ್ಯಾಮೆರಾವನ್ನು ಮೇಲೆ-ಕೆಳಗೆ ಜಗ್ಗಿಸಬಾರದು. ಹಾಗೂ ಸ್ಕೂಟರ್ ಚಲಿಸುವಾಗ ನಮ್ಮ ಕ್ಯಾಮೆರಾವೂ ಕೂಡ ಹೆಚ್ಚಾಗಲಿ ಅಥವ ಕಡಿಮೆಯಾಗಲಿ ಚಲಿಸುವಂತಿಲ್ಲ....ಉದಾ ನಾವು ಒಂದು ವಾಹನವನ್ನು ಕಣ್ಣಿನಿಂದ ನೋಡುವಾಗ ವಾಹನವನ್ನೇ ನೋಡುತ್ತಾ ನಮ್ಮ ಕುತ್ತಿಯನ್ನು ಅದಕ್ಕೆ ತಕ್ಕಂತೆ ತಿರುಗಿಸುತ್ತೇವೆ ಅದೇ ರೀತಿ ಕ್ಯಾಮೆರಾವನ್ನು ಉಪಯೋಗಿಸಬೇಕು. ಪ್ರಾರಂಬದಲ್ಲಿ ಕಷ್ಟವಾದರೂ ನಂತರ ಇದು ಸುಲಭವಾಗುತ್ತದೆ.....ಇನ್ನೂ ಕ್ಯಾಮೆರಾದಲ್ಲಿ ಷಟರ್ priority ಯಲ್ಲಿ ಇದನ್ನು ಹೆಚ್ಚಾಗಿ ಪ್ರಯೋಗ ಮಾಡಬೇಕು. manual ಮಾಡಬೇಕಾದರೆ ತುಂಬಾ ಅನುಭವ ಮತ್ತು ಪ್ರಯತ್ನಗಳಾಗಿರಬೇಕು. ಆಗ ಈ ತಂತ್ರ ಕರಗತವಾಗುತ್ತದೆ. ಮತ್ತೊಂದು ವಿಚಾರವೆಂದರೆ ಇಲ್ಲಿ ಎಸ್ ಎಲ್ ಅರ್ ಹಾಗೂ ಪಕ್ಕ ವೃತ್ತಿ ಪರವಾಗಿದ್ದರೆ ಅದರಲ್ಲಿ features ಹೆಚ್ಚು ಇರುತ್ತವೆ.[ಉದಾ..ಮೋಟರ್ ಡ್ರೈವ್, maximum focusing point, ಇತ್ಯಾದಿಗಳಿದ್ದಾಗ ಇದು ಸುಲಭ] ಮೋಟರ್ ಡ್ರೈವ್ ಇಟ್ಟುಕೊಂಡರೆ ಒಂದು ಸೆಕೆಂಡಿಗೆ ಐದು frame [ನನ್ನ ಕ್ಯಾಮೆರಾದಲ್ಲಿದೆ]ಕ್ಲಿಕ್ಕಿಸಬಹುದು. ಆಗ ಐದರಲ್ಲಿ ಒಂದು ಫೋಟೊ, overall focus, ಹಿನ್ನೆಲೆ, ಬೆಳಕು, ಸಾಧ್ಯವಾದರೆ expression, [ನಿಮ್ಮ ಪ್ಯಾನಿಂಗ್ ಚಿತ್ರದಲ್ಲಿದೆ. ಬೈಕು ಓಡಿಸುವವನು ಮೂಗಿನತ್ತ ಕೈ ತಂದಿದ್ದಾನೆ. ನನ್ನ ಮೊದಲ ಚಿತ್ರದಲ್ಲಿ ಮೂವರ ಮುಖದಲ್ಲೂ ಆಟದ ಖುಷಿ, ಎರಡನೆ ಚಿತ್ರ್ರದಲ್ಲಿ ಹುಡುಗನ ಮುಖದಲ್ಲಿ ಸ್ಪೂರ್ತಿ ಕಾಣುತ್ತದೆ] ಒಟ್ಟಾರೆ ಸಿಗಬಹುದು...ಇದು ಚಿತ್ರವನ್ನು ಚಂದವಾಗಿಸುತ್ತದೆ.
ಮೊದಲಿಗೆ ಕಲಿಯುವವರು ಪ್ರಾರಂಭದಲ್ಲಿ ವಿಫಲರಾಗುವ ಸಾಧ್ಯತೆ ಹೆಚ್ಚು ಅದರೆ ಅದಕ್ಕೆ ವಿಚಲಿತರಾಗಬೇಕಿಲ್ಲ....ಮತ್ತೆ ಅಬ್ಯಾಸ ಮಾಡಿದರೆ ಬಹ್ಮವಿದ್ಯೆ ಖಚಿತವಾಗಿ ಕೋತಿಯಾಗಿ ನಿಮ್ಮ ನಿಯಂತ್ರಣದಲ್ಲಿರುತ್ತದೆ....ಇನ್ನು ಉಳೀದ ವಿಚಾರವನ್ನು ನೀವು ಹೇಳಿರುವುದರಿಂದ ನಾನು ಹೇಳುವ ಅವಶ್ಯಕತೆಯಿಲ್ಲ...
ಶಿವು,
ReplyDeleteನಿಮ್ಮನುಭವವನ್ನು ಹಂಚಿಕೊಂಡು ಪ್ಯಾನಿಂಗ್ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸಿದ್ದಕ್ಕೆ ವಂದನೆಗಳು.
--
ಪಾಲ
ಫಾಲಚಂದ್ರ ಅವರೇ ನಮಸ್ಕಾರ. ನಿಮ್ಮ `ಗ್ಯಾನ' ಜಾಲತಾಣ ಮಾಹಿತಿದಾಯಕವಾಗಿದೆ. ಅದರಲ್ಲಿಯೂ ಛಾಯಾಗ್ರಹಣದ ಪಾಠಗಳು ಪ್ರಾರಂಭಿಕರಿಗೆ ಸಾಕಷ್ಟು ಮಾಹಿತಿಯೊಂದಿಗೆ ಛಾಯಾಗ್ರಹಣದ ವಿಷಯದಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಪ್ಯಾನಿಂಗ್ ಬಗೆಗಿನ ಚಿತ್ರಗಳು ಚಿತ್ತಾಪಹಾರಿಯಾಗಿವೆ.
ReplyDeleteಧನ್ಯವಾದಗಳು.
ಕ್ಷಣಚಿಂತನೆ
ಪಾಲ,
ReplyDeleteಮೂವಿಂಗ್ object ಫೋಟೋ ತೆಗೆಯೋದು ತುಸು ತ್ರಾಸದ್ದೇ ಸರಿ. ಪ್ಯಾನಿಂಗ್ ಬಗೆಗಿನ ಲೇಖನ ಚೆನ್ನಾಗಿದೆ. ಶಿವು ಅವರ ಚಿತ್ರಗಳೂ ಸಹ :)
ಧನ್ಯವಾದಗಳು
-ಸವಿತ
ಪ್ಯಾನಿಂಗ್ ಟೆಕ್ನಿಕ್ ಬಗ್ಗೆ ನೀವು ಮತ್ತು ಶಿವು ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದೀರಿ. ಅದೂ ಚಿತ್ರಗಳೊಂದಿಗೆ. ನನ್ನ ಬ್ಲಾಗ್ ನಲ್ಲಿ ಬ್ಯಾನರಿನಲ್ಲಿರುವ ಸೈಕಲ್ ತುಳಿಯುತ್ತಿರುವ ನನ್ನ ಮಗನ ಫೋಟೊ ಪ್ಯಾನಿಂಗ್ ಟೆಕ್ನಿಕ್ ಬಳಸಿ ತೆಗೆದಿರುವಂತಹುದು. ಪ್ರಹ್ಲಾದ ಅಗಸನಕಟ್ಟೆ ಯವರ ಪುಸ್ತಕ ಧರೆ ಹತ್ತಿ ಉರಿದೊಡೆ ಪುಸ್ತಕಕ್ಕೆ ಬಳಸಿರುವ ನನ್ನ ಚಿತ್ರ "ಬೆಲೂನ್ ಬಾಯ್"(http://raghuapara.blogspot.com/) ಕೂಡ ಪ್ಯಾನಿಂಗ್ ಟೆಕ್ನಿಕ್ ಬಳಸಿ ತೆಗೆದದ್ದು.
ReplyDeleteಕ್ಷಣ... ಚಿಂತನೆ..., ಸವಿತ
ReplyDeleteಪ್ರತಿಕ್ರಿಯೆಗೆ ವಂದನೆಗಳು
--
ಪಾಲ
ಮಲ್ಲಿಕಾರ್ಜುನ್,
ReplyDeleteಲೇಖನದ ಬಗೆಗಿನ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಪ್ಯಾನಿಂಗ್ ಬಗ್ಗೆ ಇನ್ನಷ್ಟು ಚಿತ್ರಗಳನ್ನು ತೋರಿಸಿದ್ದಕ್ಕೆ ವಂದನೆಗಳು, ಬೆಲೂನ್ ಹುಡುಗ ಮತ್ತು ನಿಮ್ಮಗನ ಫೋಟೋ ಎರಡೂ ಸುಂದರವಾಗಿದೆ.
--
ಪಾಲ
ಪಾಲಚಂದ್ರ ಸರ್..
ReplyDeleteಒಳ್ಳೆ ಮಾಹಿತಿ. ಫೋಟೋಗಳು ಸೂಪರ್..ನಿಮ್ಮ ಈ ಎಲ್ಲಾ ಮಾಹಿತಿಗಳು ಪುಸ್ತಕದ ರೂಪದಲ್ಲಿ ನಮ್ಮ ಕೈಸೇರುವಂತಾಗಲೀ ಅನ್ನೋದು ನನ್ ಹಾರೈಕೆ
-ಚಿತ್ರಾ