Thursday, February 05, 2009

ಪೋರ್ಟ್ರೈಟ್ ೧


ಪೋರ್ಟ್ರೈಟ್ ಎಂದರೆ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದು ಕೇವಲ ಮುಖ ಅಥವಾ ಭುಜವನ್ನೊಳಗೊಂಡಂತೆ ತೆಗೆದೆ ಜನರ ಚಿತ್ರ. ಇಲ್ಲಿ ಪೋರ್ಟ್ರೈಟ್ ಎಂದರೆ ಕೇವಲ ಮುಖದ ಕ್ಲೋಸ್ ಅಪ್, ದೇಹದ ಮೇಲ್ಗಡೆಯ ಚಿತ್ರಕ್ಕಷ್ಟೆ ಸೀಮಿತವಾಗಿರಿಸದೆ ಇಡೀ ದೇಹದ ಮತ್ತು ವಾತಾವರಣವನ್ನೂ ಒಳಗೊಳ್ಳುವಂತೆ ವಿಸ್ತರಿಸಿದ್ದೇನೆ. ಈ ಬಗೆಯ ಚಿತ್ರ ತೆಗೆಯಲು ಹಲವು ಛಾಯಾಗ್ರಾಹಕರ ಅಭಿಪ್ರಾಯ ಭಿನ್ನವಾದರೂ, ಕೆಲವು ಸಾಮಾನ್ಯ ವಿಷಯವನ್ನು ಗಮನದಲ್ಲಿರಿಸಿ ಅದರ ಮೂಲಕ ನಮ್ಮ ಚಿತ್ರವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.


ಚಿತ್ರಗಳಲ್ಲಿ ಹಿನ್ನೆಲೆಯ ಪಾತ್ರ


DSC08870
ಪೋರ್ಟ್ರೈಟ್ನಲ್ಲಿ ಹಿನ್ನೆಲೆ ಸರಳವಾಗಿದ್ದಷ್ಟೂ, ವೀಕ್ಷಕರ ದೃಷ್ಟಿ ಹಿನ್ನೆಲೆಯ ಗೊಂದಲದಲ್ಲಿ ಕಳೆದು ಹೋಗದೇ, ನಿಮ್ಮ ವಿಷಯದ ಮೇಲೆ ಕೇಂದ್ರೀಕೃತವಾಗುವುದು. ಮೇಲಿನ ಚಿತ್ರದಲ್ಲಿ ಬಂಡೆ ಹತ್ತುತ್ತಾ ಇರೋ ಹುಡುಗಿ ವಿಷಯವಾಗಿದ್ದರೂ, ಅವಳ ಭುಜಕ್ಕೆ ತಾಗಿಕೊಂಡಂತೆ ಇರುವ ಮರದ ಕಾಂಡ, ವೀಕ್ಷಕರ ದೃಷ್ಟಿ ಅದರೆಡೆಗೆ ಸೆಳೆಯುವಂತೆ ಮಾಡುತ್ತದೆ. ಆದ್ದರಿಂದ ಪೋರ್ಟೈಟ್ ತೆಗೆಯುವ ಮೊದಲು ಹಿನ್ನೆಲೆಯನ್ನು ಗಮನಿಸಬೇಕಾದ್ದು ಅವಶ್ಯಕ. ದೇಹಕ್ಕೆ ಅಂಟಿಕೊಂಡಂತೆ ಇರುವ ಮರದ ಕೊಂಬೆ, ದೇಹದ ಭಾಗ ಹಾದುಹೋಗುವ ಎಲ್ಲೆ (horizon) ನಮ್ಮ ಚಿತ್ರದ ಅಂದಗೆಡಿಸುತ್ತದೆ. ಅಪಾರ್ಚರ್ ನೆರವಿನಿಂದ ಡೆಪ್ತ್ ಆಫ್ ಫೀಲ್ಡ್ ಕಡಿಮೆ ಮಾಡಿ ಹಿನ್ನೆಲೆಯನ್ನು ಅಸ್ಪಷ್ಟಗೊಳಿಸುವುದರ ಮೂಲಕ ಕೂಡ, ನಿಮ್ಮ ವಿಷಯವನ್ನು ಎದ್ದು ಕಾಣುವಂತೆ ಮಾಡಬಹುದು. ಕೇವಲ ಅಪಾರ್ಚರ್ ಅಲ್ಲದೆ ವಿಷಯಕ್ಕೂ ಹಿನ್ನೆಲೆಗೂ ಇರುವ ದೂರ ಮತ್ತು ಕ್ಯಾಮರಾದ ಫೋಕಲ್ ಲೆಂತ್ ಕೂಡ ಈ ಅಸ್ಪಷ್ಟಗೊಳಿಸುವ ಅಂಶದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಫೋಕಲ್ ಲೆಂತ್ (ಜೂಮ್) ಜಾಸ್ತಿಯಾದಂತೆ ಮತ್ತು ವಿಷಯಕ್ಕೂ ಹಿನ್ನೆಲೆಗೂ ನಡುವಿನ ಅಂತರ ಜಾಸ್ತಿಯಾದಂತೆಯೂ ಅಸ್ಪಷ್ಟದ ಪರಿಣಾಮ ಹೆಚ್ಚಿರುತ್ತದೆ. ಕೇವಲ ಡೆಪ್ತ್ ಆಫ್ ಫೀಲ್ಡ್ ಅಲ್ಲದೆ ಗೋಡೆಯಂತಹ ಸಮಾನವಾಗಿ ಹರಡಿದ ಹಿನ್ನೆಲೆಯನ್ನು ಕೂಡ ಬಳಸಿ ಪರಿಣಾಮಕಾರಿಯಾದ ಪೋರ್ಟ್ರೈಟ್ ಪಡೆಯಬಹುದು.




ಹಾಗೆಯೇ ಈ ಕೆಳಗಿನ ಚಿತ್ರದಲ್ಲಿ ತಲೆಯನ್ನು ಹಾದು ಹೋಗುತ್ತಿರುವ ಸಮುದ್ರದ ಎಲ್ಲೆ ಚಿತ್ರದ ಅಂದಗೆಡಿಸಿದ್ದನ್ನು ಗಮನಿಸಬಹುದು.

DSC08248



ಕ್ಲೋಸ್-ಅಪ್ ಚಿತ್ರಗಳು


EARRING
ಜನರ ಚಿತ್ರ ತೆಗೆಯುವಾಗ ಜೂಮ್ ಬಳಸಿ ಫ್ರೇಮನ್ನು ಬರೀ ಮುಖದಿಂದ ತುಂಬಿಸುವುದರ ಮೂಲಕ ಕ್ಲೋಸ್ ಅಪ್ ಚಿತ್ರಗಳನ್ನು ಪಡೆಯಬಹುದು . ಸಾಮಾನ್ಯವಾಗಿ ನಾವು ಜನರ ಚಿತ್ರ ತೆಗೆಯಬೇಕಾದಲ್ಲಿ ಫ್ರೇಮಿನಲ್ಲಿ ಕೇವಲ ೧೦% ಗಳಷ್ಟು ಉಪಯೋಗಿಸಿ, ವಿಷಯವನ್ನು ಮಧ್ಯದಲ್ಲಿ ಕೂರಿಸಿ ಉಳಿದ ಜಾಗವನ್ನು ಖಾಲಿ ಬಿಡುವುದು ವಾಡಿಕೆ. ಈ ರೂಢಿಯನ್ನು ಮುರಿದು ಕ್ಲೋಸ್ ಅಪ್ ಚಿತ್ರಗಳನ್ನು ತೆಗೆಯುವುದರ ಮೂಲಕ ಜನರ ಮುಖದಲ್ಲಿನ ಹೆಚ್ಚಿನ ವಿವರ ಸೆರೆ ಹಿಡಿಯಬಹುದು.
ಇಲ್ಲಿ ಬೆಳಕಿನ ದಿಕ್ಕು ಚಿತ್ರದ ಮೇಲೆ ತುಂಬಾ ಪರಿಣಾಮ ಬೀರುವುದರಿಂದ, ನಮ್ಮ ಆದ್ಯತೆಗನುಗುಣವಾಗಿ ಚಿತ್ರ ತೆಗೆಯಬಹುದು. ಬೆಳಿಗ್ಗಿನ ಮತ್ತು ಸಂಜೆಯ ಹೊಂಬೆಳಕು ಚರ್ಮಕ್ಕೆ ನೈಜತೆಯ ಬಣ್ಣ ಕೊಡುತ್ತದೆ. ನೇರವಾಗಿ ಬೀಳುವ ಬೆಳಕು ಉತ್ತಮವಾದರೂ ಮುಖದಲ್ಲಿ ಸುಕ್ಕು, ನೆರಿಗೆಯನ್ನು ಸೆರೆಹಿಡಿಯಲು ಮುಖವನ್ನು ಸವರಿಕೊಂಡು ಹೋಗುವಂತೆ ಅಡ್ಡದಿಂದ ಬರುವ ಬೆಳಕನ್ನು ಉಪಯೋಗಿಸಬಹುದು. ಸೂರ್ಯ ನೆತ್ತಿಯ ಮೇಲಿದ್ದಾಗ ಕಣ್ಣಿನ ಸುತ್ತ ಏರ್ಪಡುವ ನೆರಳನ್ನು ತಡೆಯಲು ಫ್ಲಾಷ್ (ಫಿಲ್ ಫ್ಲಾಷ್) ಬಳಸಬಹುದು.


ಚೌಕಟ್ಟು


EYE
ಹೇಗೆ ಚಿತ್ರ ತೆಗೆದು ಅದಕ್ಕೊಂದು ಚೌಕಟ್ಟು ಹಾಕಿಸಿ ಮನೆಯ ಗೋಡೆಗೆ ನೇತು ಹಾಕಿದರೆ ಚಿತ್ರದ ಅಂದ ಹೆಚ್ಚುವುದೋ ಹಾಗೆಯೇ ಚಿತ್ರ ತೆಗೆಯುವಾಗಲೇ ದೊರಕಬಹುದಾದ ನೈಸರ್ಗಿಕ ಚೌಕಟ್ಟುಗಳನ್ನು ಬಳಸಿ ನಿಮ್ಮ ಚಿತ್ರವನ್ನು ಪರಿಣಾಮಕಾರಿಯಾಗಿ ತೆಗೆಯಬಹುದು. ನೀವು ತೆಗೆಯಹೊರಟ ಚಿತ್ರವನ್ನು ಪೂರಕವಾದ ಇನ್ನೊಂದು ವಿಷಯದೊಳಗೆ ಬಂಧಿಸಿ ಚೌಕಟ್ಟನ್ನು ಪಡೆಯಬಹುದು. ಬಾಗಿಲು, ಕಿಟಕಿ, ಚಿಕ್ಕ ಕಂಡಿಯಂತಹ ಪೂರಕ ವಿಷಯಗಳು ನಿಮಗೆ ಈ ಬಗೆಯ ಚೌಕಟ್ಟನ್ನು ಒದಗಿಸುತ್ತವೆ. ಚಿತ್ರದಲ್ಲಿ ಚೌಕಟ್ಟನ್ನು ಬಳಸುವುದರಿಂದ ಚಿತ್ರಕ್ಕೆ ಇನ್ನೊಂದು ಆಯಾಮ ಸಿಕ್ಕಿ, ಆಳ ಹೆಚ್ಚುವುದಲ್ಲದೆ ವೀಕ್ಷಕರ ದೃಷ್ಟಿ ಚೌಕಟ್ಟಿನ ಒಳಗೆ ಹಿಡಿದಿಡಲು ಸಹಾಯ ಮಾಡುತ್ತದೆ. ಮೇಲಿನ ಚಿತ್ರ ಕಂಬವನ್ನು ಚೌಕಟ್ಟಾಗಿ ಉಪಯೋಗಿಸಿ ತೆಗೆದದ್ದು.



ಈ ಕೆಳಗಿನ ಚಿತ್ರದಲ್ಲಿ ಬಾಗಿಲನ್ನು ಚೌಕಟ್ಟಾಗಿ ಉಪಯೋಗಿಸಿದ್ದೇನೆ.

DSC07086



ಮುಂದುವರೆಯುವುದು...

14 comments:

  1. ಪಾಲಚಂದ್ರ...

    ಸರಳವಾದ ವಿವರಣೆಯೊಂದಿಗೆ...

    ಛಾಯಾಗ್ರಹಣದ ಪಾಠ ತಿಳಿಸಿದ್ದೀರಿ...

    ಅದಕ್ಕೆ ಪೂರಕವಾದ ಫೋಟೊಗಳೂ ಚಂದವಾಗಿದೆ...

    ಉತ್ತಮ ಮಾಹಿತಿಗಾಗಿ..

    ಧನ್ಯವಾದಗಳು..

    ReplyDelete
  2. ಕೊನೆಯ ಫೋಟೋ ಒಂದು ಕವಿತೆಯಂತಿದೆ

    ReplyDelete
  3. ಪಾಲಚಂದ್ರ,

    ತುಂಬಾ ದಿನಗಳ ನಂತರ ಒಂದು ಉತ್ತಮ ಪೋರ್ಟ್ರೈಟ್ ಛಾಯಾಚಿತ್ರ ಕಲಿಕೆಯನ್ನು ಕೆಲವು ಚಿತ್ರಗಳ ಮೂಲಕ ಚೆನ್ನಾಗಿ ವಿವರಿಸಿದ್ದೀರಿ.....ಇವುಗಳಲ್ಲಿ ನನ್ನ ಕೆಲವು ಅಭಿಪ್ರಾಯಗಳು ಹೀಗಿವೆ....

    ಮೊದಲೆರಡು ಚಿತ್ರಗಳು ಪೊರ್ಟ್ರೈಟ್ ಚಿತ್ರಗಳ ಉದಾಹರಣೆ ಅಷ್ಟು ಸೂಕ್ತವಲ್ಲ ಅನ್ನಿಸುತ್ತದೆ...ಪೋರ್ಟ್ರೈಟ್ ನಿಯಮಗಳನ್ನು ಆ ಚಿತ್ರಗಳು ಸರಿಯಾಗಿ ಪಾಲಿಸಿಲ್ಲ...

    ಮೂರನೆಯದು ಉತ್ತಮ....ಅದರೆ ಅದರ ಮೇಲಿನ ನೆರಳು ಬೆಳಕಿನಾಟದಲ್ಲಿ ಬೆಳಕು ಮೂಗಿನಿಂದ ಮೇಲ್ಮಟ್ಟದ್ದಲ್ಲಿ ಇದ್ದಿದ್ದರೆ ಕಣ್ಣುಗಳಲ್ಲಿನ ಭಾವನೆಗಳಿಂದ ಚಿತ್ರವನ್ನು ಇನ್ನಷ್ಟು ಚೆಂದಗೊಳಿಸಬಹುದಿತ್ತು.[ಈ ಚಿತ್ರದಲ್ಲಿ ಮುಖ್ಯ ಬೆಳಕು ಕುತ್ತಿಗೆ ಭಾಗದಲ್ಲಿದ್ದು ನೋಡುಗನ ದೃಷ್ಟಿಯು ಕಣ್ಣಿನ ಕಡೆಗೆ ಹರಿಯದೆ ಕುತ್ತಿಗೆಯಡೆಗೆ ಹೋಗಿ ಚಿತ್ರದ ಪರಿಕಲ್ಪನೆ ವಿಫಲವಾಗುತ್ತದೆ....

    ನಾಲ್ಕನೆ ಚಿತ್ರವೂ ಮೂರನೆಯದಕ್ಕಿಂತ ಉತ್ತಮ....ಆದರೆ ಅದು ಫೋರ್ಟ್ರೈ ಅನ್ನಿಸಿಕೊಳ್ಳುವಲ್ಲಿ ವಿಫಲ...ಬೇಕಾದರೆ ಕಪ್ಪು-ಬಿಳುಪಿನ ಪಿಕ್ಟೋರಿಯಲ್ ಚಿತ್ರವೆನಿಸುತ್ತದೆ....ಇದರಲ್ಲೂ ಕೂಡ centre of interest ವ್ಯಕ್ತಿಯ ಭಾವನೆ ವ್ಯಕ್ತಪಡಿಸುವ ಕಣ್ಣು ಆಗಿದ್ದು ಅದು ಪೇಲವವಾಗಿರುವ ಕಾರಣ ಚಿತ್ರದಲ್ಲಿ ಅದು ತೀರ ಚಿಕ್ಕದಾಗಿ ಉಳಿದ ಹಿನ್ನೆಲೆ ಮುನ್ನೆಲೆಗಳು[ನೀವೆ ಹೇಳಿದಂತೆ ಚೌಕಟ್ಟು] dominating position ನಲ್ಲಿದೆ...ಈಗಿದ್ದಾಗ ಚಿತ್ರದ ಉದ್ದೇಶ ವಿಫಲವಾಗುತ್ತದೆ...ನಿಮ್ಮ ಪ್ರಕಾರ dept of field ನಿಂದಲೋ ಅಥವ ಉತ್ತಮ ಟೆಲಿ ಲೆನ್ಸ್ ಬಳಸಿ centre of interest ಅನ್ನು ನಿಯಮಾವಳಿ ಪ್ರಕಾರ ಐಲೈಟ್ ಮಾಡಿ ಚಿತ್ರದಲ್ಲಿ ಮೂಡ್ ಕ್ರಿಯೇಟ್ ಮಾಡಬಹುದು....

    ಕೊನೆಯ ಚಿತ್ರದ ವಿಚಾರಕ್ಕೆ ಬಂದರೆ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಾಸ್ತವಿಕತೆ[ಈ ಚಿತ್ರದಂತೆ]ಹೆಚ್ಚು ಪ್ರಸ್ತುತವಾಗುತ್ತಿರುವುದರಿಂದ ಇದು ಇತ್ತೀಚಿನ ಸ್ಪರ್ಧಾತ್ಮಕ ನಿಯಮಗಳ ಪ್ರಕಾರ ಪೋರ್ಟ್ರೈಟ್ ಆಗಬಹುದು ಮತ್ತು ಉತ್ತಮ ಪಿಕ್ಟೋರಿಯಲ್ ಚಿತ್ರವೂ ಕೂಡ...
    [ಕೆಲವು ವರ್ಷಗಳ ಹಿಂದೆ ನಮ್ಮ ದೇಶದ ಸ್ಪರ್ಧಾತ್ಮಕ ನಿಯಮದ ಪ್ರಕಾರ ಚಿತ್ರವನ್ನು ಹಿನ್ನೆಲೆ ಮುನ್ನೆಲೆಗಳು ಹೆಚ್ಚು ಹೈಲೈಟ್ ಆಗಿ ಮುಖ್ಯ ವಸ್ತು ಪೇಲವವೆನಿಸುವುದು ಅಂತ ಈ ಚಿತ್ರವನ್ನು ವ್ಯಾಖ್ಯಾನ ಮಾಡಬಹುದಿತ್ತು....
    ಇವೆಲ್ಲವೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ನಿಯಮಾವಳಿ ಪ್ರಕಾರ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ....ಅದರೆ ಸಾಮಾನ್ಯ ದೃಷ್ಟಿಕೋನದಿಂದ ನೋಡಿದರೆ ಮೊದಲನೆಯದು ಬಿಟ್ಟರೆ ಉಳಿದ ನಾಲ್ಕು ಚಿತ್ರಗಳು ತಾಂತ್ರಿಕವಾಗಿ ಉತ್ತಮ, ನೋಡುಗರ ಗಮನ ಸೆಳೆಯುತ್ತವೆ....good keep it up...ನಿಮ್ಮ ಪ್ರಯತ್ನಕ್ಕೆ ನನ್ನ ಸಹಕಾರವಿದೆ....

    ReplyDelete
  4. ಪ್ರಕಾಶ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ, ಹಾಗೆಯೇ ಸಮಯವಿದ್ದಲ್ಲಿ ಛಾಯಾಗ್ರಹಣದ ಬಗ್ಗೆ ಬರೆದ ಇನ್ನಿತರ ಲೇಖನಗಳನ್ನೂ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಇನ್ನಿತರ ಬರಹಗಳು ಛಾಯಾಗ್ರಹಣ ಲೇಬಲಿನ ಮೇಲೆ ಕ್ಲಿಕ್ ಮಾಡಿದರೆ ಸಿಗುತ್ತದೆ.

    ಬಾಲ,
    ಭಟ್ಟರ ಚಿತ್ರ ಮೆಚ್ಚಿಕೊಂಡಿದ್ದಕ್ಕೆ ವಂದನೆಗಳು. ಆ ಚಿತ್ರ ಕೂಮಾರ ಪರ್ವತಕ್ಕೆ ಹೋಗಿದ್ದಾಗ ಅವರ ಮನೆಯಲ್ಲೇ ತೆಗೆದದ್ದು. ನನ್ನ ಗೆಳೆಯನೊಬ್ಬ ಮತ್ತೊಮ್ಮೆ ಅಲ್ಲಿಗೆ ಭೇಟಿ ಕೊಟ್ಟಾಗ, ಇದರ ಪ್ರಿಂಟ್ ಔಟ್ ತೆಗೆದು ಅವರಿಗೆ ಕೊಟ್ಟಿದ್ದ, ಚಿತ್ರ ನೋಡಿ ಭಟ್ಟರೂ ಖುಷಿಯಾಗಿದ್ದರು.

    ಶಿವು,
    ವಿವರವಾದ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ನಿಮ್ಮ ಪ್ರತಿಕ್ರಿಯೆ ಓದುಗರಿಗೆ ಇನ್ನೂ ಹೆಚ್ಚಿನ ಮಾಹಿತಿ ಒದಗಿಸಬಲ್ಲುದು.

    >>ಮೊದಲೆರಡು ಚಿತ್ರಗಳು ಪೊರ್ಟ್ರೈಟ್ ಚಿತ್ರಗಳ ಉದಾಹರಣೆ ಅಷ್ಟು ಸೂಕ್ತವಲ್ಲ ಅನ್ನಿಸುತ್ತದೆ...ಪೋರ್ಟ್ರೈಟ್ ನಿಯಮಗಳನ್ನು ಆ ಚಿತ್ರಗಳು ಸರಿಯಾಗಿ ಪಾಲಿಸಿಲ್ಲ...
    ಫೋನ್ ಮಾಡಿ ಪೋರ್ಟ್ರೈಟ್ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದ.

    >>ಮೂರನೆಯದು ಉತ್ತಮ....ಅದರೆ ಅದರ ಮೇಲಿನ ನೆರಳು ಬೆಳಕಿನಾಟದಲ್ಲಿ ಬೆಳಕು ಮೂಗಿನಿಂದ ಮೇಲ್ಮಟ್ಟದ್ದಲ್ಲಿ ಇದ್ದಿದ್ದರೆ ಕಣ್ಣುಗಳಲ್ಲಿನ ಭಾವನೆಗಳಿಂದ ಚಿತ್ರವನ್ನು ಇನ್ನಷ್ಟು ಚೆಂದಗೊಳಿಸಬಹುದಿತ್ತು
    ಧನ್ಯವಾದ ಹೌದು ಇಲ್ಲಿ ಕುತ್ತಿಗೆಯ ಭಾಗದಲ್ಲಿ ಬ್ರೈಟ್ ನೆಸ್ಸ್ ಜಾಸ್ತಿ ಇದೆ.

    >>ನಾಲ್ಕನೆ ಚಿತ್ರವೂ ಮೂರನೆಯದಕ್ಕಿಂತ ಉತ್ತಮ....ಆದರೆ ಅದು ಫೋರ್ಟ್ರೈ ಅನ್ನಿಸಿಕೊಳ್ಳುವಲ್ಲಿ ವಿಫಲ
    ಸರಿ

    ಮತ್ತೆ ಕೊನೇಯ ಚಿತ್ರದ ಬಗ್ಗೆ ನೀವು ಹೇಳಿದ್ದೂ ನಿಜ..

    ನಿಮ್ಮ ಸಹಕಾರಕ್ಕೆ ವಂದನೆಗಳು.. ಮುಂದಿನ ಕಂತಿನಲ್ಲಿ ಇನ್ನೂ ಒಳ್ಳೆಯ ಗುಣಮಟ್ಟದ ಚಿತ್ರ ಮತ್ತು ಮಾಹಿತಿ ಹಂಚಿಕೊಳ್ಳುತ್ತೇನೆ.. ಹೀಗೆಯೇ ನಿಮ್ಮ ಅಭಿಪ್ರಾಯ ತಿಳಿಸುತ್ತಿರಿ.

    --
    ಪಾಲ

    ReplyDelete
  5. ಪಾಲಚಂದ್ರ ಸರ್....
    ನಾನು ಪ್ರತಿ ಬಾರಿ ನಿಮ್ಮ ಬ್ಲಾಗ್ ನೋಡಿದಾಗಲೂ ಏನೋ ಹೊಸತು ಅನಿಸೋದು ಸಿಗುತ್ತೆ. ನಿಜವಾಗಿ ಹೇಳಬೇಕೆಂದರೆ ನಂಗೆ ಫೋಟೋಗ್ರಾಫಿ ಬಗ್ಗೆ ಎಂಥದ್ದೂ ಗೊತ್ತಿಲ್ಲ. ಓದುತ್ತಾ ಹೋದಂತೆ ಏನೋ ಕಲಿತ ಖುಷಿ..
    -ಚಿತ್ರಾ

    ReplyDelete
  6. ಚಿತ್ರಾ,
    ನಿಮ್ಮಂತವರು ಪ್ರತೀ ಬಾರಿ ಬ್ಲಾಗಿಗೆ ಬಂದು ಈ ರೀತಿ ಪ್ರೋತ್ಸಾಹ ಕೊಡ್ತಾ ಇರೋದ್ರಿಂದಾನೆ ನನಗೆ ಹೊಸ ಹೊಸ ವಿಷಯ ಬರಿಯೋಕೆ ಪ್ರೇರಣೆ ಸಿಕ್ತಾ ಇರೋದು. ಇನ್ನೂ ಫೋಟೋಗ್ರಫಿ ಬಗ್ಗೆ ಹೇಳ್ಬೇಕು ಅಂದ್ರೆ ನನಗೂ ಅದ್ರ ಬಗ್ಗೆ ಅಷ್ಟೊಂದು ಆಳವಾಗಿ ತಿಳಿದಿಲ್ಲ. ಚೆನ್ನಾಗಿರೋ ಚಿತ್ರ ತೆಗಿಬೇಕು, ಹೇಗೆ ತೆಗೀಬೇಕು ಅನ್ನೋದನ್ನ ಕಲಿಯೋ ಉತ್ಸಾಹ ಇದೆ.

    ಈ ನನ್ನ ಉತ್ಸಾಹಕ್ಕೆ ಶಿವು ಅಂತೋರು ತಮ್ಮ ಅನುಭವ ಹಂಚಿಕೊಳ್ತಾ ಇರೋದು ನನಗೆ ತುಂಬಾ ಸಂತೋಷದ ವಿಷಯ, ವಂದನೆಗಳು.
    --
    ಪಾಲ

    ReplyDelete
  7. ಪಾಲಚಂದ್ರ,

    ನಾಲ್ಕನೆ ಚಿತ್ರವನ್ನು ಕ್ರಾಪ್ ಮಾಡಿರುವುದು ಚೆನ್ನಾಗಿದೆ...ಮೊದಲಿಗಿಂತಲೂ ಉತ್ತಮವಾಗಿ ನೋಡುಗನ ನೋಟವು centre of interest ಕಡೆಗೆ ಹೋಗಿ ಚಿತ್ರದ ಮುಖ್ಯ ಉದ್ದೇಶ ಈಡೇರಿದಂತಾಗುತ್ತದೆ...good ..ಇನ್ನಷ್ಟು ಪ್ರಯತ್ನ ಮುಂದುವರಿಯಲಿ..

    ReplyDelete
  8. paala ,

    Ninna pratiyondu blog nu tappade odutha iddene .. prati bariyuu nireeksheyanthe ondakintha ondu olleya post madteera ... great !

    ReplyDelete
  9. ಕಾರಂತ್ರೆ,
    ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು, ಹೀಗೆ ಬರ್ತಾ ಇರಿ, ನಿಮ್ಮನುಭವ ಹಂಚಿಕೊಳ್ತಾ ಇರಿ
    --
    ಪಾಲ

    ReplyDelete
  10. ಶಿವು,
    ಅದು ನಿನ್ನೆ ಫೋಟೊ ಪೋಸ್ಟ್ ಮಾಡ್ಬೇಕಾದ್ರೆ ಆದ ಎಡವಟ್ಟು.. ನಾನಿದನ್ನ ಮಾಡ್ಬೇಕು ಅಂದುಕೊಂಡಿದ್ದೆ, ೧ ವರ್ಶ ಹಳೇ ಚಿತ್ರ ಅದು,, ಮಿಸ್ ಆಗಿ ಆ ಚಿತ್ರ ಮಾಡ್ಬಿಟ್ಟಿದ್ದೆ..
    --
    ಪಾಲ

    ReplyDelete
  11. ಪಾಲಚಂದ್ರ
    ನಾನು ನಿಮ್ಮ ಬ್ಲಾಗನ್ನು ಅದಲ್ಲಿಯು ವಿಶೇಶವಾಗಿ ಛಾಯಾಗ್ರಹಣಕ್ಕೆ ಸಂಬಂಧಿಸಿದ
    ಲೇಖನಗಳನ್ನು ತಪ್ಪದೆ ಒದುತ್ತೆನೆ.ನಾನೊಬ್ಬ ಛಾಯಾಗ್ರಹಣದ ವಿಧ್ಯಾರ್ಥಿಯಾಗಿರಿವುದರಿಂದ ನಾನು ತಿಳಿದಿರುವ ಹಾಗೆ ೩ ಮತ್ತು ೪ ನೆ
    ಚಿತ್ರಗಳು ಮಾತ್ರ ಪೊರ್ಟ್ರೈಟ್ ಗೆ ಅತ್ಯಂತ ಸೂಕ್ತ ಎಂದು ನನ್ನ ಅಭಿಪ್ರಾಯ.
    ಉಳಿದಂತೆ ಚಿತ್ರಗಳು ಚನ್ನಾಗಿವೆ.

    ReplyDelete
  12. ಸಲೀಂ,
    ನೀವು ನನ್ನ ಬರಹಗಳನ್ನು ಓದುತ್ತಿರುವುದು ತಿಳಿದು ಸಂತೋಷವಾಯಿತು. ಅಂತೆಯೇ ಪೋರ್ಟ್ರೈಟ್ ಬಗೆಗಿನ ನಿಮ್ಮ ಅಭಿಪ್ರಾಯಕ್ಕೆ ವಂದನೆ. ಮೊದಲೆರಡು ಚಿತ್ರದ ಬಗ್ಗೆ ನನ್ನ ಸಹಮತವೂ ಇದೆ, ಆದರೆ ಉದಾಹರಣೆಗಾಗಿ ಬೇರೆಯೇ ಚಿತ್ರ ಹಾಕಬಹುದಿತ್ತು ಅಂತ ಈಗ ಅನ್ನಿಸ್ತಾ ಇದೆ. ಕೊನೇಯ ಚಿತ್ರ ಶಿವು ಹೇಳಿದಂತೆ ೫೦-೫೦, ಕೆಲವ್ರು ಪೋರ್ಟ್ರೈಟ್ ಅಂತ ಒಪ್ತಾರೆ ಇನ್ನು ಕೆಲವ್ರು ಇಲ್ಲ.

    ಹೀಗೇ ಬರ್ತಾ ಇರಿ, ನಿಮ್ಮ ಅನಿಸಿಕೆ ತಿಳಿಸ್ತಾ ಇರಿ.
    --
    ಪಾಲ

    ReplyDelete
  13. ಪಾಲಚಂದ್ರ,
    ನನಗೆ ನಾಲ್ಕನೆಯ ಚಿತ್ರ ಇಷ್ಟವಾಯ್ತು. ಫೋಟೋಗ್ರಫಿ ಕಲಿಕೆ ಮತ್ತು ಕಲಿಯುವಿಕೆ ಎರಡೂ ನಿಮ್ಮ ಪ್ರಯತ್ನದಲ್ಲಿ ಕಾಣುತ್ತಿದೆ. ಶಿವು ಚೆನ್ನಾಗಿ ವ್ಯಾಕ್ಯಾನಿಸಿದ್ದಾರೆ.ಚೆನ್ನಾಗಿದೆ. ಮುಂದುವರೆಸಿ. ಆಲ್ ದಿ ಬೆಸ್ಟ್.
    -ಮಲ್ಲಿಕಾರ್ಜುನ.ಡಿ.ಜಿ.

    ReplyDelete
  14. ಮಲ್ಲಿಕಾರ್ಜುನ್,
    ಅನುಭವ ಮಂಟಪಕ್ಕೆ ಸ್ವಾಗತ, ನಿಮ್ಮ ಅನಿಸಿಕೆಗೆ ವಂದನೆಗಳು.
    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)