ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಬಹುದಾದ ಪ್ರಮೇಯವನ್ನು ಈ ಕೆಳಗಿನ ಚಿತ್ರಗಳಿಂದ ತಿಳಿಯೋಣ. ಇದು ಮನೆಯೊಳಗೆ ತೆಗೆದ ಚಿತ್ರವಾದರೂ ಬೆಳಕಿನ ಮೂಲ ಕೋಣೆಯ ತುಂಬಾ ಹರಡದೆ ನೆಲಬೆಳಕಿನಂತೆ (ಸ್ಪಾಟ್ ಲೈಟ್) ಒಂದು ಕಡೆ ಮಾತ್ರ ಬಿದ್ದ ವೆಂಟಿಲೇಶನ್ನಿನಿಂದ ಹೊರಟ ಬೆಳಗಿನ ಹೊಂಬೆಳಕು.

ಈ ಚಿತ್ರದ ಸೆಟ್ಟಿಂಗ್ ಕೆಳಗಿನಂತಿದೆ:
ಕ್ಯಾಮೆರಾ: ನಿಕಾನ್ ಡಿ ೯೦
ಲೆನ್ಸ್: ೧೮-೧೦೫ ಎಂಎಂ.
ಶೂಟಿಂಗ್ ಮೋಡ್: ಅಪಾರ್ಚರ್ ಪ್ರಿಯಾರಿಟಿ
ಮೀಟರಿಂಗ್: ಪ್ಯಾಟರ್ನ್
ಅಪಾರ್ಚರ್: f೬.೩
ಐ.ಎಸ್.ಓ: ೪೦೦
ಶಟ್ಟರ್ ಸ್ಫೀಡ್: ೧/೪೦೦ ಸೆ.
ಫೋಕಲ್ ಲೆಂತ್: ೧೮ ಎಂಎಂ.
ಎಕ್ಸ್-ಪೋಶರ್ ಕಾಂಪನ್ಸೇಶನ್: -೧.೭
ಮೊದಲೇ ತಿಳಿಸಿದಂತೆ ಇಲ್ಲಿ ಬೆಳಕು ಅಸಮಾನವಾಗಿ ಹಂಚಿಕೆಯಾದ್ದರಿಂದ ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಿ -೧.೭ರಷ್ಟು ಅಂಡರ್ ಎಕ್ಸ್ಪೋಸ್ ಮಾಡಬೇಕಾಗಿ ಬಂತು. ಆದರೂ ಚಿತ್ರದಲ್ಲಿ ಕಾಣಿಸಿದಂತೆ ವಿಷಯದ ಮೇಲೆ ಬೆಳಕಿನ ಪ್ರಮಾಣ ಜಾಸ್ತಿಯಾದದ್ದು ಗಮನಿಸಬಹುದು.
ಮೇಲಿನ ಸೆಟ್ಟಿಂಗಿನಲ್ಲಿಯೇ ಎಕ್ಸ್-ಪೋಶರ್ ಕಾಂಪನ್ಸೇಶನ್ -೨.೩ ಗೆ ಬದಲಾಯಿಸಿದಾಗ (ಶಟ್ಟರ್ ಸ್ಫೀಡ್ - ೧/೧೨೫೦ಸೆ.) ದೊರೆತ ಕೆಳಗಿನ ಚಿತ್ರದಲ್ಲಿ ವಿಷಯದ ಮೇಲೆ ಬಿದ್ದ ಬೆಳಕು ಸರಿಯಾಗಿದ್ದೂ ಅಲ್ಲದೇ, ಹಿನ್ನೆಲೆ ಕತ್ತಲೆಯಲ್ಲಿ ಲೀನವಾಗಿದ್ದನ್ನು ಗಮನಿಸಬಹುದು. ಇಲ್ಲಿ ಶಟ್ಟರ್ ಸ್ಪೀಡ್ ಜಾಸ್ತಿಯಾಗಿ ಕ್ಯಾಮರಾದ ಸೆನ್ಸರ್ ಕಡಿಮೆ ಬೆಳಕು ಪಡೆಯುತ್ತಿದೆ.

ಈ ಕೆಳಗಿನ ಪೋರ್ಟ್ರೈಟಿನಲ್ಲಿ ಸಂಜೆಯ ಹೊಂಬಿಸಿಲು ಹಿಂಬದಿಯಿಂದ (ಬ್ಯಾಕ್ಲಿಟ್) ಬೀಳುತ್ತಿದ್ದುದರಿಂದ ಆಕೆಯ ಮುಖದ ಮೇಲೆ ನೆರಳು ಬಿದ್ದು ಅಂಡರ್ ಎಕ್ಸ್ಪೋಸಾಗುವ ಸಂಭವ ಇರುವುದರಿಂದ, ಎಕ್ಸ್-ಪೋಶರ್ ಕಾಂಪನ್ಸೇಶನ್ +೦.೭ಗೆ ಬದಲಾಯಿಸಿ ಚಿತ್ರವನ್ನು ಓವರ್ ಎಕ್ಸ್ಪೋಸ್ ಮಾಡಿ, ಆಕೆಯ ಮುಖ ಸರಿಯಾಗಿ ಎಕ್ಸ್ಪೋಸಾಗುವಂತೆ ಮಾಡಲಾಗಿದೆ.

ಈ ಚಿತ್ರದ ಸೆಟ್ಟಿಂಗ್ ಕೆಳಗಿನಂತಿದೆ:
ಕ್ಯಾಮೆರಾ: ನಿಕಾನ್ ಡಿ ೯೦
ಲೆನ್ಸ್: ೧೮-೧೦೫ ಎಂಎಂ.
ಶೂಟಿಂಗ್ ಮೋಡ್: ಅಪಾರ್ಚರ್ ಪ್ರಿಯಾರಿಟಿ
ಮೀಟರಿಂಗ್: ಪ್ಯಾಟರ್ನ್
ಅಪಾರ್ಚರ್: f೫.೬
ಐ.ಎಸ್.ಓ: ೨೦೦
ಶಟ್ಟರ್ ಸ್ಫೀಡ್: ೧/೧೨೫ ಸೆ.
ಫೋಕಲ್ ಲೆಂತ್: ೧೦೫ ಎಂಎಂ.
ಎಕ್ಸ್-ಪೋಶರ್ ಕಾಂಪನ್ಸೇಶನ್: +೦.೭
ಈ ಮೇಲಿನ ಚಿತ್ರಗಳನ್ನು ಸ್ಪಾಟ್ ಅಥವಾ ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್ ಬಳಸಿ ತೆಗೆಯಬಹುದಾಗಿತ್ತಾದರೂ, ಮೊದಲೇ ತಿಳಿಸಿದಂತೆ ಎಕ್ಸ್-ಪೋಶರ್ ಕಾಂಪನ್ಸೇಶನ್- ಎಕ್ಸ್ಪೋಶರ್ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣ ಒದಗಿಸುವುದಲ್ಲದೇ, ಪ್ರತೀ ಚಿತ್ರಕ್ಕೂ ಮೀಟರಿಂಗ್ ಮೋಡ್ ಬದಲಾಯಿಸುವ ತೊಂದರೆಯಿಂದ ತಪ್ಪಿಸಿಕೊಳ್ಳಲು ಅನುಕೂಲ. ಇನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಕ್ಯಾಮರಾ ಮೀಟರಿಂಗ್ ತಪ್ಪಾಗಿ ತೋರಿಸುವ ಸಂದರ್ಭದಲ್ಲಿ ಇದು ಹೆಚ್ಚು ಉಪಯುಕ್ತ. ಉದಾಹರಣೆಗೆ ಹಿಮದ ಚಿತ್ರ ತೆಗೆಯುವಾಗ ಸಾಮಾನ್ಯವಾಗಿ ಕ್ಯಾಮರಾ ಚಿತ್ರವನ್ನು ಅಂಡರ್ ಎಕ್ಸ್ಪೋಸ್ ಮಾಡಿ ಹಿಮದ ಬಣ್ಣ ಮಸುಕಾಗಿರುವಂತೆ ಕಾಣುವುದನ್ನು ಗಮನಿಸಿರಬಹುದು. ಬಿಳಿ ಬಣ್ಣದ ಹಿಮ ಹೆಚ್ಚಿನ ಬೆಳಕನ್ನು ಪ್ರತಿಫಲಿಸುವುದನ್ನು ಮೀಟರಿಂಗ್ ತಪ್ಪಾಗಿ ಗ್ರಹಿಸಿ ಅದನ್ನು ಮಸುಕಾಗಿ ಚಿತ್ರಿಸುತ್ತದೆ. ಇಲ್ಲಿ ಎಕ್ಸ್-ಪೋಶರ್ ಕಾಂಪನ್ಸೇಶನ್ ಉಪಯೋಗಿಸಿ ಓವರ್-ಎಕ್ಸ್ಪೋಸ್ ಮಾಡುವುದರಿಂದ ಬಿಳುಪಾದ ಹಿಮದ ಚಿತ್ರ ಪಡೆಯಬಹುದು. ಇನ್ನು ಸಿಲ್ಹೌಟ್ ತೆಗೆಯುವ ಸಂದರ್ಭದಲ್ಲಿ ಕೂಡ ಎಕ್ಸ್-ಪೋಶರ್ ಕಾಂಪನ್ಸೇಶನ್ ಬಳಸಿ ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಬಹುದು.