Thursday, April 01, 2010

ಡಿಜಿಟಲ್ ಕ್ಯಾಮರಾ ಕೊಳ್ಳುವ ಮುನ್ನ

ಕೆಲವು ವರ್ಷಗಳಿಂದ ಒಂದಿಷ್ಟು ಫೋಟೋ ತೆಗೆದು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿರುವೆನಾದ್ದರಿಂದ, ಅವರಲ್ಲಿ ಕೆಲವರಾದರೂ ತಾವು ಕ್ಯಾಮರಾ ಕೊಳ್ಳುವ ಸಂದರ್ಭದಲ್ಲಿ, "ಯಾವ ಕ್ಯಾಮರಾ ತೆಗೆದುಕೊಳ್ಳಲಿ?" ಎಂದು ಕೇಳಿದ್ದುಂಟು. ಹೊಸ ಕ್ಯಾಮರಾಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ಓದುತ್ತಿರುವೆನಾದರೂ, "ಇದೇ ಕ್ಯಾಮರಾ ತಗೋ" ಎಂದು ಖಡಾಖಂಡಿತವಾಗಿ ಹೇಳಲಾರೆ. ಮೊದಲನೆಯದಾಗಿ ನನ್ನ ಗೆಳೆಯರು ಕ್ಯಾಮರಾಗೆ ತೊಡಗಿಸಹೊರಟ ಹಣ, ಕ್ಯಾಮರಾದ ಬಗ್ಗೆ ಅವರಿಗಿರುವ ತಿಳುವಳಿಕೆ, ಕ್ಯಾಮರಾ ತೆಗೆದುಕೊಳ್ಳಲು ಹೊರಟ ಅವರ ಉದ್ದೇಶ, ಇತ್ಯಾದಿ ತಿಳಿಯದೆಯೆ ಉತ್ತರ ಕೊಡುವುದು ಕಷ್ಟ.

ನನಗಿಷ್ಟವಾದ ಕ್ಯಾಮರಾಗಳ ಪಟ್ಟಿ ಕೊಡಬಹುದಿತ್ತಾದರೂ, ದಿನ ದಿನವೂ ಹೊಸ ಕ್ಯಾಮರಾ ಮಾರುಕಟ್ಟೆ ಪ್ರವೇಶಿಸುವುದರಿಂದ, ನನ್ನ ಪಟ್ಟಿ ಹಳತಾಗಬಹುದು; ಆದ್ದರಿಂದ ಹೊಸ ಕ್ಯಾಮರಾ ಕೊಳ್ಳುವಾಗ ಯಾವ ಅಂಶಗಳನ್ನು ಗಮನದಲ್ಲಿರಿಸಬೇಕೆಂಬುದನ್ನು ನೋಡೋಣ.


ಉದ್ದೇಶ

ಕ್ಯಾಮರಾ ತೆಗೆದುಕೊಂಡನಂತರ ಕೆಲವರು, "ನನಗೆ ಇಷ್ಟೊಂದು ಬೆಲೆಯ ಕ್ಯಾಮರಾ ಬೇಡವಿತ್ತು" ಅಥವಾ "ಇನ್ನೂ ಒಂದು ಸ್ವಲ್ಪ ಹಣ ಹೊಂದಿಸಿದ್ದರೆ ಒಳ್ಳೇ ಕ್ಯಾಮರಾ ಸಿಕ್ತಾ ಇತ್ತು" ಅಂತ ಹೇಳೋದನ್ನ ಕೇಳಿರಬಹುದು. ನಮಗೇನು ಬೇಕೋ ಅದು ತಿಳಿಯದಿದ್ದರೆ ಬರುವ ತೊಂದರೆ ಇದು. ಆದ್ದರಿಂದ ಕ್ಯಾಮರಾ ಕೊಳ್ಳುವ ಮುಂಚೆ, ನನಗೇಕೆ ಕ್ಯಾಮರಾ ಬೇಕು (ಇತ್ತೀಚೆಗೆ ಮೊಬೈಲಿನ ಕ್ಯಾಮರಾಗಳೂ ಕೂಡ ತಕ್ಕಮಟ್ಟಿಗೆ ಚೆನ್ನಾಗಿಯೇ ಇರುತ್ತದೆ), ನನ್ನ ಹೂಡಿಕೆ ಎಷ್ಟು, ಯಾವ ರೀತಿಯ ಚಿತ್ರೀಕರಣ ಮಾಡಲು ಹೊರಟಿದ್ದೇನೆ, ಕ್ಯಾಮರಾದ ಬಗ್ಗೆ ನನ್ನ ತಿಳುವಳಿಕೆ, ಛಾಯಾಗ್ರಹಣದಲ್ಲಿ ಆಸಕ್ತಿ ಇದೆಯೇ ಅಥವಾ ಕೆಲವು ನೆನಔಗಳನ್ನು ಚಿತ್ರಿಸಲು ಮಾತ್ರವೇ... ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡು ನಿಮಗೇನು ಬೇಕು ಎಂಬುದನ್ನು ನಿರ್ಧರಿಸುವುದು ಉತ್ತಮ.

ಮೆಗಾ ಪಿಕ್ಸೆಲ್

ಮೆಗಾ ಪಿಕ್ಸೆಲ್ ಚಿತ್ರದ ಅಳತೆಗೆ ಸಂಬಂಧಿಸಿದ್ದೇ ಹೊರತು ಚಿತ್ರದ ಗುಣಮಟ್ಟಕ್ಕಲ್ಲ. ಅಂದರೆ ಹೆಚ್ಚಿನ ಮೆಗಾ ಪಿಕ್ಸೆಲ್ ಕ್ಯಾಮರಾಗಳು ಉತ್ತಮ ಚಿತ್ರವನ್ನು ನೀಡುತ್ತವೆ ಎಂಬ ತಿಳುವಳಿಕೆ ತಪ್ಪು. ಚಿತ್ರದ ಗುಣಮಟ್ಟ ಕ್ಯಾಮರಾಗೆ ಅಳವಡಿಸಿದ ಲೆನ್ಸ್, ಸೆನ್ಸರ್ (ಫಿಲ್ಮ್ ಕ್ಯಾಮರಾದ ಫಿಲ್ಮಿಗೆ ಬದಲಾಗಿ ಡಿಜಿಟಲ್ ತಂತ್ರಜ್ಞಾನದಲ್ಲಿ ಸೆನ್ಸರ್ ಅಳವಡಿಸಿರುತ್ತಾರೆ. ನಮ್ಮ ಕಣ್ಣನ್ನು ಲೆನ್ಸ್ ಎಂದುಕೊಂಡರೆ ಸೆನ್ಸರ್ ಅಕ್ಷಿಪಟಲವಿದ್ದಂತೆ) ಇವುಗಳ ಮೇಲೆ ಅವಲಂಭಿಸಿದೆ. ೪ X ೬ ಇಂಚು, ೫ X ೭ ಇಂಚು, ೮ X ೧೨ ಇಂಚು (A4) ಮೊದಲಾದ ಸಾಮಾನ್ಯ ಅಳತೆಯ ಪ್ರಿಂಟ್ ತೆಗೆಯುವುದಿದ್ದರೆ ೬.೦ ಮೆಗಾ ಪಿಕ್ಸೆಲ್ ಕ್ಯಾಮರ ಸಾಕಾಗುತ್ತದೆ. ಅದಕ್ಕೂ ದೊಡ್ಡ ಪ್ರಿಂಟ್ ತೆಗೆಯುವುದಾದರೆ ಮಾತ್ರ ೧೨, ೧೫.. ಇತ್ಯಾದಿ ಹೆಚ್ಚಿನ ಮೆಗಾ ಪಿಕ್ಸೆಲಿನ ಕ್ಯಾಮರಾ ಖರೀದಿಸಬಹುದು.

ಕೆಲವರು ೧೨ ಮೆಗಾ ಪಿಕ್ಸೆಲ್ ಕ್ಯಾಮರಾ ತೆಗೆದುಕೊಂಡು ೬, ೮ ಮೆಗಾ ಪಿಕ್ಸೆಲಿಂದ ಚಿತ್ರ ತೆಗೆಯುವುದನ್ನು ನೋಡಿದ್ದೇನೆ. ಕಾರಣ ಹೆಚ್ಚಿನ ಮೆಗಾ ಪಿಕ್ಸೆಲ್ ಚಿತ್ರಗಳು ದೊಡ್ಡ ಅಳತೆಯವಾಗಿದ್ದು- ಕಂಪ್ಯೂಟರಿನಲ್ಲೋ, ಸೀಡಿಯಲ್ಲಿಯೋ ಹೆಚ್ಚಿನ ಸ್ಥಳ ಆಕ್ರಮಿಸುವುದರಿಂದ. ೧೨ ಮೆಗಾ ಪಿಕ್ಸೆಲ್ ಕ್ಯಾಮರಾಕ್ಕೆ ಹಣ ಕೊಟ್ಟು ೬, ೮ ಮೆಗಾ ಪಿಕ್ಸೆಲಿನಲ್ಲಿ ತೆಗೆಯುವುದು ಜಾಣತನವೇ ಅಥವಾ ೮ ಮೆಗಾ ಪಿಕ್ಸೆಲ್ಲಿಗೆ ಹಣ ಕೊಟ್ಟು ೬,೮ ರಲ್ಲಿ ತೆಗೆಯುವುದೇ?

ಡಿ.ಎಸ್.ಎಲ್.ಆರ್. ಅಥವಾ ಪಾಯಿಂಟ್ ಅಂಡ್ ಶೂಟ್

ಸುಲಭವಾಗಿ ಇವೆರಡರ ನಡುವಿನ ವ್ಯತ್ಯಾಸ ತಿಳಿಸಬೇಕೆಂದರೆ, ಡಿ.ಎಸ್.ಎಲ್.ಆರ್. ನಲ್ಲಿ ನಮ್ಮ ಅವಶ್ಯಕತೆಗೆ ತಕ್ಕಂತೆ ಲೆನ್ಸ್ ಬದಲಾಯಿಸಬಹುದು ಮತ್ತು ಚಿತ್ರ ತೆಗೆಯುವಾಗ ವೀವ್ ಫೈಂಡರಿನಲ್ಲಿ ಕಾಣುವ ಚಿತ್ರ ಡಿಜಿಟಲ್ ಡಿಸ್ಪ್ಲೇ ಆಗಿರದೆ, ಕನ್ನಡಿಯಂತಹ ಮೇಲ್ಮೈಯಿಂದ ಪ್ರತಿಫಲನ ಹೊಂದಿದ ಸಹಜವಾದ ಚಿತ್ರವಾಗಿರುತ್ತದೆ.

ಡಿ.ಎಸ್.ಎಲ್.ಆರ್. ತನ್ನದೇ ಧನಾತ್ಮಕ ಗುಣ ಹೊಂದಿದ್ದರೂ ಪಾಯಿಂಟ್ ಅಂಡ್ ಶೂಟ್ ಕ್ಯಾಮರಾಗಿಂತ ಭಾರವಾಗಿಯೂ, ಗಾತ್ರದಲ್ಲಿ ದೊಡ್ಡದಿದ್ದೂ ಉಪಯೋಗಿಸಲೂ ಕ್ಲಿಷ್ಟವಾಗಿರುತ್ತದೆ.

ಇತರ ಸಲಕರಣೆಗಳು

ಕ್ಯಾಮರಾ ಕೊಳ್ಳುವ ಮೊದಲು ಕೆಲವರು ಅದಕ್ಕೆ ಪೂರಕವಾದ ಇತರ ಸಲಕರಣೆಗಳ ಬಗ್ಗೆ ಗಮನಹರಿಸಿರುವುದಿಲ್ಲ. ಸಂನ್ಯಾಸಿಯ ಸಂಸಾರದಂತೆ ಒಂದಕ್ಕೊಂದು ಖರ್ಚು ಬೆಳೆಯುತ್ತಾ ಹೋದಂತೆ ಗೊಣಗಾಟ ಆರಂಭವಾಗುತ್ತದೆ. ಕ್ಯಾಮರಾ ಬ್ಯಾಗ್, ಮೆಮೋರಿ ಕಾರ್ಡ್, ಟ್ರೈಪಾಡ್, ಕ್ಲೀನಿಂಗ್ ಕಿಟ್, ಫ್ಲಾಷ್, ಲೆನ್ಸ್ (ಡಿ.ಎಸ್.ಎಲ್.ಆರ್. ಆಗಿದ್ದಲ್ಲಿ - ಕ್ಯಾಮರಾಗೆ ಜಾಸ್ತಿ ಹಣ ಹೂಡಬೇಕಾ, ಇಲ್ಲಾ ಲೆನ್ಸಿಗಾ ಇತ್ಯಾದಿ) ಇದರಲ್ಲಿ ಯಾವುದು ಬೇಕಾಗಬಹುದು, ಅವುಗಳ ಬೆಲೆ ಎಷ್ಟಾಗಬಹುದು ಎಂದು ಮೊದಲೇ ನಿರ್ಧರಿಸುವುದು ಉತ್ತಮ.

ಆಪ್ಟಿಕಲ್ ಜೂಮ್ ಮತ್ತು ಡಿಜಿಟಲ್ ಜೂಮ್

ದೂರದ ವಸ್ತುವನ್ನು ಇದ್ದ ಸ್ಥಳದಿಂದಲೇ ಚಿತ್ರದ ಫ್ರೇಮಿನಲ್ಲಿ ದೊಡ್ಡದಾಗಿ ಚಿತ್ರಿಸಲು ಜೂಮ್ ನೆರವಾಗುತ್ತದೆ. ಕ್ಯಾಮರಾದ ಜೂಮಿನ ಬಗ್ಗೆ ಮಾತನಾಡುವಾಗ ಆಪ್ಟಿಕಲ್, ಡಿಜಿಟಲ್ ಎಂಬ ೨ ಬಗೆಯ ಜೂಮಿನ ವಿಷಯವಾಗಿ ಕೇಳಿರಬಹುದು. ಆಪ್ಟಿಕಲ್ ಜೂಮು ಲೆನ್ಸಿನ ಭೌತಿಕ ಚಲನೆಯಾಗಿದ್ದು(ಲೆನ್ಸ್ ಮತ್ತು ಸೆನ್ಸರಿನ ನಡುವಿನ ಅಂತರ; ಹೆಚ್ಚು ಜೂಮು - ಹೆಚ್ಚು ಅಂತರ) ಇದರಿಂದ ಪಡೆದ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗುವುದಿಲ್ಲ. ಆದರೆ ಡಿಜಿಟಲ್ ಜೂಮಿನಲ್ಲಿ ಪಿಕ್ಸೆಲ್ಗಳನ್ನು ಹಿಗ್ಗಿಸುವುದರಿಂದ ಚಿತ್ರ ಗುಣಮಟ್ಟ ಕಳೆದುಕೊಳ್ಳುತ್ತದೆ.

ಪಾಯಿಂಟ್ ಅಂಡ್ ಶೂಟ್ ಕ್ಯಾಮರಾ ಆದರೆ, ಡಿಜಿಟಲ್ ಜೂಮಿಗೆ ಬದಲಾಗಿ ಆಪ್ಟಿಕಲ್ ಜೂಮಿಗೆ ಒತ್ತುಕೊಡುವ ಕ್ಯಾಮರಾ ಆಯ್ದುಕೊಳ್ಳುವುದು ಉತ್ತಮ. ಅಲ್ಲದೇ ಆಪ್ಟಿಕಲ್ ಜೂಮು ಕನಿಷ್ಟ ೮X ಇದ್ದರೆ ಪೋರ್ಟ್ರೈಟ್ಗಳ ಚಿತ್ರಣಕ್ಕೆ ಅನುಕೂಲ (ಇಂದಿನ ಮಾರುಕಟ್ಟೆಯಲ್ಲಿ ೨೦X ಜೂಮಿನ ಕ್ಯಾಮರಾಗಳೂ ಇವೆ).

ಡಿ.ಎಸ್.ಎಲ್.ಆರ್. ಆಗಿದ್ದಲ್ಲಿ ವೈಡ್ ಆಂಗಲ್, ಜೂಮ್ ಲೆನ್ಸ್, ಮಾಕ್ರೋ ಲೆನ್ಸ್, ಟೆಲಿ ಲೆನ್ಸ್ ಹೀಗೆ ನಿಮ್ಮ ಅಭಿರುಚಿಗೆ ತಕ್ಕಂತೆ ಹಲವಾರು ಲೆನ್ಸ್ ಆರಿಸಿಕೊಳ್ಳುವ ಅನುಕೂಲ ಇದೆ.

ತಾಂತ್ರಿಕತೆ

ಕ್ಯಾಮರಾದ ಕಡಿಮೆ-ಹೆಚ್ಚಿನ ಅಪಾರ್ಚರ್, ಶಟ್ಟರ್ ಸ್ಪೀಡ್, ಐ.ಎಸ್.ಓ., ರಿಮೋಟು ಅಳವಡಿಸುವ ಅವಕಾಶ, ಚಿತ್ರದ ಫಾರ್ಮಾಟ್ (ಜೇಪೆಗ್, ರಾ) ಇತ್ಯಾದಿ ತಾಂತ್ರಿಕ ವಿಷಯಗಳ ಬಗ್ಗೆ ಗಮನಹರಿಸುವುದೂ ಆಯ್ದುಕೊಳ್ಳುವಲ್ಲಿ ಸಹಕಾರಿ.

ದಿನಕಳೆದಂತೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರ ಆಗುತ್ತಲಿದೆ. ಉದಾಹರಣೆಗೆ ಹಿಂದಿನ ಕ್ಯಾಮರಾಗಳಲ್ಲಿ ಅಳವಡಿಸಲಾಗುತ್ತಿದ್ದ ಸಿ.ಸಿ.ಡಿ. ಸೆನ್ಸರಿಗೆ ಬದಲಾಗಿ ಇತ್ತೀಚಿನ ದಿನಗಳಲ್ಲಿ ಸಿ.ಮೋ.ಸ್. ಸೆನ್ಸರ್ ಬಳಕೆಯಾಗುತ್ತಿದೆ. ಇದು ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ತೆಗೆಯಲು ಸಹಾಯ ಮಾಡುವುದಲ್ಲದೇ, ಬ್ಯಾಟರಿಯ ಕಾಲಾವಧಿಯನ್ನು ಹೆಚ್ಚಿಸುತ್ತದೆ. ಇನ್ನು ಕೆಲವು ಕ್ಯಾಮರಾಗಳಲ್ಲಿ ಪೋರ್ಟ್ರೈಟ್ ತೆಗೆಯುವಾಗ, ವ್ಯಕ್ತಿ ನಕ್ಕಾಗ ತಾನೇ ಚಿತ್ರ ಕ್ಲಿಕ್ಕಿಸುವ ಸೌಲಭ್ಯವೂ ಇದೆ. ಯಾವ ಹೊಸ ತಂತ್ರಜ್ಞಾನದ ಮಾಡೆಲ್ ಮಾರುಕಟ್ಟೆ ಸಧ್ಯದಲ್ಲೇ ಪ್ರವೇಶಿಸಲಿದೆ, ಅದರ ಅವಶ್ಯಕತೆಗಳ ಕುರಿತಾಗಿಯೂ ಗಮನಹರಿಸುವುದೊಳಿತು.

ವಿಮರ್ಶೆ

ಛಾಯಾಗ್ರಹಣದ ಪತ್ರಿಕೆಗಳು, ಅಂತರ್ಜಾಲದಲ್ಲಿ ಅನುಭವಿಗಳ ಕ್ಯಾಮರಾದ ಗುಣವೈಶಿಷ್ಟ್ಯಗಳನ್ನು, ವಿಮರ್ಷೆಗಳನ್ನು, ಮಾದರಿ ಚಿತ್ರಗಳನ್ನು ನೋಡುವುದರಿಂದ ಅದರ ಅನುಕೂಲತೆ ಹಾಗೂ ಅನನುಕೂಲತೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು. ಅಲ್ಲದೇ ಒಂದಕ್ಕಿಂತ ಹೆಚ್ಚಿನ ಆಯ್ಕೆಯಿದ್ದಲ್ಲಿ ಅವುಗಳ ಗುಣಾವಗುಣಗಳನ್ನು ತುಲನೆಮಾಡಿ ನೋಡುವ ಸೌಲಭ್ಯವೂ ದೊರೆಯುತ್ತದೆ.

ಉದಾಹರಣೆ: ಡಿಜಿಟಲ್ ಫೋಟೋಗ್ರಫಿ ರಿವೀವ್

ಶೋರೂಂ ಭೇಟಿ:

ಶೋರೂಮಿಗೆ ಭೇಟಿ ನೀಡುವುದರಿಂದ ನೀವು ಆಯ್ದ ಕ್ಯಾಮರಾವನ್ನು ಕೈಯಲ್ಲಿ ಹಿಡಿದು, ಕಂಟ್ರೋಲು, ಬಟನ್ನುಗಳ ಅನುಕೂಲತೆ ಇತ್ಯಾದಿಯನ್ನು ವಯುಕ್ತಿಕವಾಗ ಅನುಭವಿಸಬಹುದು. ಎಲ್ಲರಿಗೂ ಎಲ್ಲಾ ರೀತಿಯ ಕ್ಯಾಮರಾ ಹಿಡಿಸುವುದಿಲ್ಲವಾದ್ದರಿಂದ, ನಿಮ್ಮ ಕೈಗೆ ಹಿತವಾಗುವಂತಹ ಕ್ಯಾಮರಾ ಕಂಡುಕೊಂಡು, ನೀವು ಇದುವರೆಗೆ ಒತ್ತುಕೊಟ್ಟ ನಿಮ್ಮ ಅವಶ್ಯಕತೆಯನ್ನು ಈ ಕ್ಯಾಮರಾ ಪೂರೈಸುವುದೇ ಎಂದು ನಿರ್ಧರಿಸಬಹುದು.

ಖರೀದಿ
ಒಮ್ಮೆ ಯಾವ ಕ್ಯಾಮರಾ ಕೊಳ್ಳುಬಹುದು ಎಂದು ನಿರ್ಧರಿಸಿದ ನಂತರ, ಸೂಕ್ತ ಬೆಲೆಯನ್ನು ಇಂಟರ್ನೆಟ್, ಶೋರೂಮುಗಳಲ್ಲಿ ಕಡಿಮೆ ಬೆಲೆಗೆ ಎಲ್ಲಿ ದೊರಕುತ್ತದೆ ಎಂದು ವಿಚಾರಿಸಬಹುದು. ಹಾಗೆಯೇ ಕ್ಯಾಮರಾ ಕೊಳ್ಳುವಾಗ ಉಚಿತವಾಗಿ ದೊರಕಬಹುದಾದ ಮೆಮೊರಿ ಕಾರ್ಡ್, ಕಾರ್ಡ್ ರೀಡರ್, ಬ್ಯಾಗ್ ಇತ್ಯಾದಿ ಕೇಳುವುದನ್ನು ಮರೆಯಬೇಡಿ.

10 comments:

  1. Amazing article Pala

    nimma research great

    tumba useful information

    ReplyDelete
  2. ತು೦ಬಾ ಉಪಯುಕ್ತ ಮಾಹಿತಿ..
    ನನಗೆ ಛಾಯಾಗ್ರಹಣದ ಗ೦ಧ ಗಾಳಿ ಇಲ್ಲದಿದ್ದರೂ ನಾನೂ ಕೆಲವೊಮ್ಮೆ ಫೋಟೋ ತೆಗೆಯುತ್ತೇನೆ..!!
    ಕೆಲವೊಮ್ಮೆ ಅದಾಗಿಯೆ.. ನನ್ನ ಕೈವಾಡವೇನೂ ಇಲ್ಲದೆಯೆ ಕ್ಯಾಮರಾದ ಚಮತ್ಕಾರದಿ೦ದಾಗಿ ಫೋಟೋಗಳು ಸು೦ದರವಾಗಿ ತೆಗೆಯಲ್ಪಡುತ್ತವೆ...!!!!!
    ಹೇಗೆ ಚನ್ನಾಗಿ ಬ೦ತು ಅ೦ದರೆ ನನಗೆ ಗೊತ್ತಾಗುವುದಿಲ್ಲ...ನನ್ನದು ಸೋನಿ ಸೈಬರ್ ಶೋಟ್ ಕ್ಯಾಮರಾ..
    ನೀವು ವಿವರಿಸಿದ್ದು ಉಪಯುಕ್ತವಾಯಿತು...

    ReplyDelete
  3. ಪಾಲಚಂದ್ರ ಸರ್,
    ಡಿಜಿಟಲ್ ಕ್ಯಾಮರಾ ಕೊಳ್ಳುವ ಮಾಹಿತಿಯನ್ನು ತುಂಬಾ ಸರಳವಾಗಿ ವಿವರಿಸಿದ್ದಿರಿ,
    ಅಲ್ಲದೆ ನಿಮ್ಮ ಫೋಟೊಗಳನ್ನು flicker ನಲ್ಲಿ ನೊಡಿದೆ ಅಧ್ಬುತವಾಗಿವೆ,
    ಧನ್ಯವಾದಗಳು

    ReplyDelete
  4. ಪಾಲ,
    ತುಂಬಾ ಉಪಯುಕ್ತ ಮಾಹಿತಿಗಳಿಗಾಗಿ ಧನ್ಯವಾದಗಳು. ಕ್ಯಾಮರಾ ಕೊಳ್ಳುವಾಗ ಇರುವ ಗೊಂದಲಗಳನ್ನು ನಿವಾರಣೆ ಮಾಡಲು ಉಪಯುಕ್ತ ಬರಹ.

    ReplyDelete
  5. ಬಹಳ ಉಪಯುಕ್ತ ವಿಷಯ. ಥ್ಯಾಂಕ್ಸ್ ಪಾಲ. ಖುಷಿ ಆಯ್ತು. ಸಹಾಯ ಆಗತ್ತೆ ಇದು ನಮ್ಗೆ.

    ReplyDelete
  6. Very good article bro.. Will give you more info about this which help others.. post it if you can :)

    ReplyDelete
  7. hello sir,good article.......thank you for info.
    i just love your photos.........
    continue your good work
    am planning to buy a camera recently.......but am having great confusion in selection......
    i finalized these three cameras
    please help me in choosing one in these.........

    1. Nikon Coolpix L24 Point & Shoot

    2. Canon PowerShot A 1200 Point & Shoot

    3. Nikon Coolpix S2500 Point & Shoot

    ReplyDelete
  8. Sangathya,

    Choosing a camera model always depends on your "agatya" :)

    My preference would be Canon A1200, because:
    1. HD video
    2. Wide aperture (f/2.8 over f/3.2) - wider aperture means more light.
    3. Min macro distance (3cm over 8cm)
    4. Optical View finder

    But Nikon wins S2500 in:
    1. Image stabilization
    2. panoramic scanning, intelligent portrait system (with smiley timer)
    3. Upto 3200 ISO selection capability (over 1600)
    4. TFT LCD with brightness adjustment


    In general all camera has its own pros and cons. Its upto you to decide what you want.

    It's because you are beginner you may be interested in trying some videos. So better go for Canon A1200 model. Try some macro also. That's how most of the people start photography.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)