Monday, February 23, 2009

ಶತಕ

ಮಾರುದ್ದ ಜಡೆ, ಮೋಹಕ ಕಂಗಳವಳು
ಮಾತನಾಡಿಸಿದರೆ ನಾಚುವಳು
ದೂರ ಸರಿದರೆ ಕಳ್ಳ ನೋಟವ ಬೀರುವಳು
ಮಾತನಾಡಳೆಂದು ಬೇರೆ ಬಾಲೆಯರೊಡನೆ ಹರಟಿದರೆ,
ಹುಸಿ ಮುನಿಸ ತೋರುವಳು

ಹೊಸ ಉಡುಗೆ ಉಟ್ಟು ವಯ್ಯಾರ ತೋರುವಳು
ಅವಳಂದವ ಹೊಗಳಿದರೆ ಕೆಂಪಾಗುವಳು
ಗಮನಿಸದಿರೆ ವಾರಗಳುರುಳಿದರೂ ಬಳಿ ಸುಳಿಯಳು

ಹಗಲೆಲ್ಲಾ ದೂರವಾಣಿಯಲಿ ಪಿಸು ಮಾತು, ಸದ್ದು
ಗೆಳೆಯನಿರಬಹುದೇ ಎಂದು ಕೇಳಬಯಸಿದರೆ ಕದ್ದು
ಹೊರಡುತ್ತಾಳವಳಲ್ಲಿಂದ ಎದ್ದು

ನಲ್ಲೆ ಎನಲು ಒಲ್ಲೆ ಎನಳು
ಓಲೆ ಕಳಿಸಿದರೆ ಕಲೆ ಹಾಕುವಳು
ಉತ್ತರ ಕೇಳಿದೊಡೆ, "ಇದು ನನ್ನ ೧೦೦ನೇ ಪ್ರೇಮ ಪತ್ರ ಎಂದಳು"!

Wednesday, February 11, 2009

ಪ್ಯಾನಿಂಗ್

ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ Shutter Speed ಹೆಚ್ಚಿಸಿಕೊಂಡು ಅದರ ಚಲನೆಯನ್ನು ಸ್ಥಬ್ದಗೊಳಿಸಿ ಚಿತ್ರ ಸೆರೆಹಿಡಿಯುವುದು ವಾಡಿಕೆ. ಪರಿಣಾಮ, ಕೆಳಗಿನ ಚಿತ್ರದಂತೆ ಮುನ್ನೆಲೆಯ ಜೀಪು, ಅದರ ಹಿನ್ನೆಲೆ ಎಲ್ಲವೂ ಸ್ಪಷ್ಟವಾಗಿ ಚಿತ್ರಿತವಾಗುವುದು. ಇಲ್ಲಿ ಜೀಪು ಹೊರಬಿಡುತ್ತಿರುವ ಹೊಗೆಯಿಂದ ಅದು ಚಲಿಸುತ್ತಿರಬಹುದೇನೋ ಎಂದು ಊಹಿಸಬಹುದಾದರೂ ಆ ಚಲನೆಯ ಪರಿಣಾಮ ಚಿತ್ರದಲ್ಲಿ ಮೂಡಿಲ್ಲ.
DSC08334


ಕಡಿಮೆ Shutter Speed ಬಳಸಿ ತೆಗೆದ ಈ ಕೆಳಗಿನ ಚಿತ್ರದಲ್ಲಿ ಚಲಿಸುತ್ತಿರುವ ವಾಹನಗಳು ಅಸ್ಪಷ್ಟವಾಗಿದ್ದು, ಹಿನ್ನೆಲೆ ಸ್ಪಷ್ಟವಾಗಿರುವುದನ್ನು ಗಮನಿಸಬಹುದು. ಇಲ್ಲಿ ಅಸ್ಪಷ್ಟವಾಗಿ ಮೂಡಿದ ವಾಹನಗಳು ಚಲನೆಯನ್ನು ಬಿಂಬಿಸುತ್ತಾದರೂ, ಅವೇ ಚಿತ್ರದ ವಿಷಯವಾಗಿದ್ದಲ್ಲಿ ನೋಡುಗರಲ್ಲಿ ಆಸಕ್ತಿ ಮೂಡಿಸಲು ವಿಫಲವಾಗುತ್ತದೆ.
SABARMATI ASHRAM


ಚಲಿಸುವ ವಿಷಯವನ್ನು ಸ್ಪಷ್ಟವಾಗಿಸಿ, ಚಲನೆಯ ಪರಿಣಾಮವನ್ನೂ ಬಿಂಬಿಸಲು ಉಪಯೋಗವಾಗುವ ವಿಧಾನವೇ ಪ್ಯಾನಿಂಗ್. ಈ ಕೆಳಗಿನ ಚಿತ್ರದಲ್ಲಿ ಚಲಿಸುವ ದ್ವಿಚಕ್ರ ವಾಹನ ಅದರ ಸವಾರರು ಸ್ಪಷ್ಟವಾಗಿ ಮೂಡಿದ್ದು, ಹಿನ್ನೆಲೆಯು ವಾಹನ ಚಲಿಸುವ ದಿಕ್ಕಿಗೆ ವಿರುದ್ಧವಾದ ಗೆರೆಗಳಂತಹ ರಚನೆಯೊಂದಿಗೆ ಅಸ್ಪಷ್ಟವಾಗಿ ಚಲನೆಯನ್ನು ಬಿಂಬಿಸುತ್ತಿದೆ. ಕಡಿಮೆ Shutter Speed ಉಪಯೋಗಿಸಿ, ಚಲಿಸುವ ವಿಷಯದೊಂದಿಗೆ ನಮ್ಮ ಕ್ಯಾಮರಾವನ್ನು ಅನುಸರಿಸಿ ಚಿತ್ರಿಸಿದರೆ ಈ ಬಗೆಯ ಚಿತ್ರವನ್ನು ಸೆರೆಹಿಡಿಯಬಹುದು.
DSC09062



  • ಪ್ಯಾನಿಂಗ್ ಚಿತ್ರಗಳನ್ನು ತೆಗೆಯುವ ಮೊದಲು ನಿಮ್ಮ ವಿಷಯದ ಚಲನೆಯ ದಿಕ್ಕನ್ನು ನಿರ್ಧರಿಸುವುದು ಮುಖ್ಯ. ಆದ್ದರಿಂದ ನೀವು ಇದನ್ನು ಮೊದಲ ಬಾರಿ ಪ್ರಯತ್ನಿಸುತ್ತಿದ್ದರೆ, ನಿಮ್ಮ ಮನೆಯ ಬಳಿಯಿರುವ ಯಾವುದಾದರೂ ರಸ್ತೆ ಉತ್ತಮ ವಿಷಯವನ್ನು ಒದಗಿಸಬಹುದು.

  • ವಿಷಯವನ್ನು ಪ್ಯಾನ್ ಮಾಡಲು ವಿಷಯಕ್ಕೆ ಸಮಾನಾಂತರವಾಗಿ ನಿಲ್ಲುವುದು ಅನುಕೂಲ. ಹಿನ್ನೆಲೆಯಲ್ಲಿನ ಬಣ್ಣ ಹಾಗೂ ಆಕೃತಿಗಳು ನಿಮ್ಮ ವಿಷಯಕ್ಕೆ ಪೂರಕವಾಗಿರುವಂತಹ ಸ್ಥಳವನ್ನು ಆಯ್ದುಕೊಳ್ಳುವುದು ಉತ್ತಮ.

  • ಈ ಚಿತ್ರಕ್ಕೆ ಕಡಿಮೆ Shutter Speed ಅಗತ್ಯ ಇರುವುದರಿಂದ, ISO, Aperture (ಇಲ್ಲಿ ಕಡಿಮೆ ಅಂದರೆ ಹೆಚ್ಚಿನ f ಸಂಖ್ಯೆ) ಕಡಿಮೆ ಇಟ್ಟುಕೊಂಡು ಚಿತ್ರ ಓವರ್ ಎಕ್ಸ್ ಪೋಸ್ ಆಗದಂತೆ ನೋಡಿಕೊಳ್ಳಬೇಕು. Shutter Speed ಸೆಟ್ ಮಾಡಲು Shutter Speed ಪ್ರಿಯೋರಿಟಿ (Tv OR S) ಅಥವಾ ಮ್ಯಾನ್ಯುಅಲ್ ಶೂಟಿಂಗ್ ಮೋಡನ್ನು ಆಯ್ದುಕೊಳ್ಳಬಹುದು. Shutter Speed ೧/೬೦ಯವರೆಗೂ ಕೈಯಲ್ಲೇ ಕ್ಯಾಮರಾ ಹಿಡಿದು ಚಿತ್ರಿಸಬಹುದಾದ್ದರಿಂದ ೧/೨೫೦ ಯಿಂದ ೧/೬೦ವರೆಗೆ ಇಟ್ಟುಕೊಂಡು ಆರಂಭಿಸುವುದು ಉತ್ತಮ. ವಿಷಯದ ವೇಗ ಕೂಡ ನಿಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಿಂದ Shutter Speed ಎಷ್ಟು ಕಡಿಮೆ ಇಡಬಹುದೆಂಬ ಕಲ್ಪನೆ ಕೆಲವು ಚಿತ್ರಗಳನ್ನು ತೆಗೆದ ನಂತರ ನಿಮಗೆ ಸಿಗುವುದು. ಪ್ಯಾನಿಂಗ್ ಚಿತ್ರ ತೆಗೆದು ಅಭ್ಯಾಸವಾದ ನಂತರ ಇನ್ನೂ ಕಡಿಮೆ Shutter Speed, ಟ್ರೈಪಾಡ್ ಬಳಸಿ ಈ ಚಲನೆಯನ್ನು ಇನ್ನೂ ಪರಿಣಾಮಕಾರಿಯಾಗಿ ಚಿತ್ರಿಸಬಹುದು.

  • ಯಾವುದಾದರೂ ಚಲಿಸುವ ವಿಷಯ ನಿಮ್ಮ ಕಣ್ಣಿಗೆ ಬಿದ್ದ ಕೂಡಲೇ ಅದನ್ನು ಕ್ಯಾಮರಾದ ಮೂಲಕ ಹಿಂಬಾಲಿಸುತ್ತಾ, ಬಟನ್ ಒತ್ತಿ, ಚಿತ್ರ ತೆಗೆದ ನಂತರ ಕೂಡ ಕ್ಯಾಮರಾದಿಂದ ವಿಷಯವನ್ನು ಕ್ಷಣ ಕಾಲ ಹಿಂಬಾಲಿಸಿ ಮೊದಲಿನಿಂದ ಕೊನೇಯವರೆಗೂ ಉತ್ತಮವಾದ "motion blur" ಪಡೆಯಬಹುದು.

  • ಅಟೋ ಫೋಕಸಿಂಗ್ ಇಟ್ಟಲ್ಲಿ ಕಂಟ್ಯುನ್ಯುಸ್ ಫೋಕಸಿಂಗ್ ಆಯ್ದಲ್ಲಿ ಉತ್ತಮ. ಒಂದು ವೇಳೆ ನಿಮ್ಮ ಕ್ಯಾಮರಾದ ಆಟೋ ಫೋಕಸಿಂಗ್ ನಿಧಾನವಿದ್ದಲ್ಲಿ, ನೀವು ಯಾವ ಜಾಗದಲ್ಲಿ ಶಟ್ಟರ್ ರಿಲೀಸ್ ಮಾಡುವಿರೋ ಆ ಜಾಗಕ್ಕೆ ಫೋಕಸ್ ಮಾಡಿ ಬಟನ್ನನ್ನು ಅರ್ಧ ಹಿಡಿದಿಟ್ಟು ನಂತರ ಕ್ಲಿಕ್ಕಿಸಬಹುದು ಅಥವಾ ಮನ್ಯುವಲ್ ಫೋಕಸಿಂಗ್ ಬಳಸಬಹುದು.


ಪ್ಯಾನಿಂಗ್ ವಿಧಾನವನ್ನು ರಚನಾತ್ಮಕವಾಗಿ ಹೇಗೆ ಉಪಯೋಗಿಸಬಹುದು ಎಂದು ಮಿತ್ರರಾದ ಶಿವು ತಮ್ಮ ಸುಂದರ ಚಿತ್ರಗಳ ಮೂಲಕ ತೋರಿಸಿದ್ದಾರೆ.


ಸಂನ್ಯಾಸಿಯ ಬಾಲ್ಯ

Monks wheel play
ಈ ಚಿತ್ರದಲ್ಲಿ ಚಕ್ರದೊಂದಿಗೆ ಓಡುತ್ತಿರುವ ಬಾಲಕರು ಸ್ಪಷ್ಟವಾಗಿ ಮೂಡಿ ಹಿನ್ನೆಲೆಯಲ್ಲಿ ಚಲನೆಯ ಪರಿಣಾಮ ಚಿತ್ರಿತವಾಗಿದೆ. ಬಾಲಕರ ಕಾಲುಗಳನ್ನು ಗಮನಿಸಿದಲ್ಲಿ ಅವರು ನಮ್ಮೆದುರಿನಲ್ಲೇ ಓಡಿತ್ತಿರಬಹುದೆಂಬ ಕಲ್ಪನೆ ಮೂಡುತ್ತದೆ. ಇಲ್ಲಿ ಬಾಲಕರ ಉಡುಗೆಯ ಬಣ್ಣ, ಹಿನ್ನೆಲೆಯ ಬಣ್ಣದೊಂದಿಗೆ ಹೇಗೆ ಒಂದಕ್ಕೊಂದು ಪೂರಕವಾಗಿರುವಂತೆ ಜಾಗ್ರತೆಯಿಂದ ಆರಿಸಿರುವುದನ್ನು ಗಮನಿಸಬಹುದು.


ಮುಂಜಾನೆಯ ತ್ರಿಚಕ್ರ ಪಯಣ

Morning Tricycle Play

ಈ ಚಿತ್ರದಲ್ಲಿ ತ್ರಿಚಕ್ರ ಸವಾರ, ತಳ್ಳುತ್ತಿರುವ ಬಾಲಕಿ, ಅಸ್ಪಷ್ಟ ಹಿನ್ನೆಲೆ, ನೆಲದಲ್ಲಿ ಬಿಂಬಿಸಿದ ನೆರಳು ಈ ಚಿತ್ರವನ್ನು ಭಿನ್ನವಾಗಿಸಿ ಹೇಗೆ ಅದರಲ್ಲಿ ಜೀವಂತಿಕೆ ತುಂಬಿದ್ದಾರೆ ಎಂಬುದನ್ನು ಗಮನಿಸಬಹುದು.


[ಈ ಮೇಲಿನ ಕೃತಿಗಳು ಹಲವು ಸ್ಪರ್ಧೆಗಳಲ್ಲಿ ಅವರಿಗೆ ಬಹುಮಾನ ದೊರಕಿಸಿಕೊಟ್ಟಿದ್ದು ಕೇಳಿ ಆಶ್ಚರ್ಯಪಡುವ ಕಾರಣವಿಲ್ಲ. "ಸಂನ್ಯಾಸಿಯ ಬಾಲ್ಯ" ಚಿತ್ರಕ್ಕೆ ಕಲ್ಕತ್ತದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್, ಆಷ್ಟ್ರೀಯ ದೇಶದಲ್ಲಿ ನಡೆದ ಆಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ ಮೆಡಲ್ ಬಂದಿದೆ. "ಮುಂಜಾನೆಯ ತ್ರಿಚಕ್ರ ಪಯಣ" ಚಿತ್ರಕ್ಕೆ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ, ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಹುಮಾನ ಬಂದಿದೆ.]


ಮೇಲೆ ತಿಳಿಸಿದ ವಿಷಯವನ್ನು ತಿಳಿದಿದ್ದರಿಂದ ನಿಮ್ಮ ಸಂಗ್ರಹದಲ್ಲಿ ಪ್ಯಾನಿಂಗ್ ಚಿತ್ರ ಸೇರ್ಪಡೆಗೊಳ್ಳುವುದಿಲ್ಲ. ಈ ಬಗೆಯ ಚಿತ್ರ ತೆಗೆಯಲು ತಾಳ್ಮೆ ಮುಖ್ಯ ಎಂಬ ವಿಷಯವನ್ನು ಗಮನದಲ್ಲಿರಿಸಿಕೊಂಡು ಈ ವಾರಾಂತ್ಯವೇ ನಿಮ್ಮ ಮನೆಯ ಬಳಿಯಿರುವ ರಸ್ತೆಯ ಬೀದಿಗಿಳಿದು ಪ್ರಯತ್ನಿಸಿ, ನಿಮ್ಮ ಅನುಭವ ಕಾಮೆಂಟಿನ ಮೂಲಕ ಹಂಚಿಕೊಂಡರೆ ತುಂಬಾ ಸಂತೋಷ.

Thursday, February 05, 2009

ಪೋರ್ಟ್ರೈಟ್ ೧


ಪೋರ್ಟ್ರೈಟ್ ಎಂದರೆ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದು ಕೇವಲ ಮುಖ ಅಥವಾ ಭುಜವನ್ನೊಳಗೊಂಡಂತೆ ತೆಗೆದೆ ಜನರ ಚಿತ್ರ. ಇಲ್ಲಿ ಪೋರ್ಟ್ರೈಟ್ ಎಂದರೆ ಕೇವಲ ಮುಖದ ಕ್ಲೋಸ್ ಅಪ್, ದೇಹದ ಮೇಲ್ಗಡೆಯ ಚಿತ್ರಕ್ಕಷ್ಟೆ ಸೀಮಿತವಾಗಿರಿಸದೆ ಇಡೀ ದೇಹದ ಮತ್ತು ವಾತಾವರಣವನ್ನೂ ಒಳಗೊಳ್ಳುವಂತೆ ವಿಸ್ತರಿಸಿದ್ದೇನೆ. ಈ ಬಗೆಯ ಚಿತ್ರ ತೆಗೆಯಲು ಹಲವು ಛಾಯಾಗ್ರಾಹಕರ ಅಭಿಪ್ರಾಯ ಭಿನ್ನವಾದರೂ, ಕೆಲವು ಸಾಮಾನ್ಯ ವಿಷಯವನ್ನು ಗಮನದಲ್ಲಿರಿಸಿ ಅದರ ಮೂಲಕ ನಮ್ಮ ಚಿತ್ರವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.


ಚಿತ್ರಗಳಲ್ಲಿ ಹಿನ್ನೆಲೆಯ ಪಾತ್ರ


DSC08870
ಪೋರ್ಟ್ರೈಟ್ನಲ್ಲಿ ಹಿನ್ನೆಲೆ ಸರಳವಾಗಿದ್ದಷ್ಟೂ, ವೀಕ್ಷಕರ ದೃಷ್ಟಿ ಹಿನ್ನೆಲೆಯ ಗೊಂದಲದಲ್ಲಿ ಕಳೆದು ಹೋಗದೇ, ನಿಮ್ಮ ವಿಷಯದ ಮೇಲೆ ಕೇಂದ್ರೀಕೃತವಾಗುವುದು. ಮೇಲಿನ ಚಿತ್ರದಲ್ಲಿ ಬಂಡೆ ಹತ್ತುತ್ತಾ ಇರೋ ಹುಡುಗಿ ವಿಷಯವಾಗಿದ್ದರೂ, ಅವಳ ಭುಜಕ್ಕೆ ತಾಗಿಕೊಂಡಂತೆ ಇರುವ ಮರದ ಕಾಂಡ, ವೀಕ್ಷಕರ ದೃಷ್ಟಿ ಅದರೆಡೆಗೆ ಸೆಳೆಯುವಂತೆ ಮಾಡುತ್ತದೆ. ಆದ್ದರಿಂದ ಪೋರ್ಟೈಟ್ ತೆಗೆಯುವ ಮೊದಲು ಹಿನ್ನೆಲೆಯನ್ನು ಗಮನಿಸಬೇಕಾದ್ದು ಅವಶ್ಯಕ. ದೇಹಕ್ಕೆ ಅಂಟಿಕೊಂಡಂತೆ ಇರುವ ಮರದ ಕೊಂಬೆ, ದೇಹದ ಭಾಗ ಹಾದುಹೋಗುವ ಎಲ್ಲೆ (horizon) ನಮ್ಮ ಚಿತ್ರದ ಅಂದಗೆಡಿಸುತ್ತದೆ. ಅಪಾರ್ಚರ್ ನೆರವಿನಿಂದ ಡೆಪ್ತ್ ಆಫ್ ಫೀಲ್ಡ್ ಕಡಿಮೆ ಮಾಡಿ ಹಿನ್ನೆಲೆಯನ್ನು ಅಸ್ಪಷ್ಟಗೊಳಿಸುವುದರ ಮೂಲಕ ಕೂಡ, ನಿಮ್ಮ ವಿಷಯವನ್ನು ಎದ್ದು ಕಾಣುವಂತೆ ಮಾಡಬಹುದು. ಕೇವಲ ಅಪಾರ್ಚರ್ ಅಲ್ಲದೆ ವಿಷಯಕ್ಕೂ ಹಿನ್ನೆಲೆಗೂ ಇರುವ ದೂರ ಮತ್ತು ಕ್ಯಾಮರಾದ ಫೋಕಲ್ ಲೆಂತ್ ಕೂಡ ಈ ಅಸ್ಪಷ್ಟಗೊಳಿಸುವ ಅಂಶದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಫೋಕಲ್ ಲೆಂತ್ (ಜೂಮ್) ಜಾಸ್ತಿಯಾದಂತೆ ಮತ್ತು ವಿಷಯಕ್ಕೂ ಹಿನ್ನೆಲೆಗೂ ನಡುವಿನ ಅಂತರ ಜಾಸ್ತಿಯಾದಂತೆಯೂ ಅಸ್ಪಷ್ಟದ ಪರಿಣಾಮ ಹೆಚ್ಚಿರುತ್ತದೆ. ಕೇವಲ ಡೆಪ್ತ್ ಆಫ್ ಫೀಲ್ಡ್ ಅಲ್ಲದೆ ಗೋಡೆಯಂತಹ ಸಮಾನವಾಗಿ ಹರಡಿದ ಹಿನ್ನೆಲೆಯನ್ನು ಕೂಡ ಬಳಸಿ ಪರಿಣಾಮಕಾರಿಯಾದ ಪೋರ್ಟ್ರೈಟ್ ಪಡೆಯಬಹುದು.




ಹಾಗೆಯೇ ಈ ಕೆಳಗಿನ ಚಿತ್ರದಲ್ಲಿ ತಲೆಯನ್ನು ಹಾದು ಹೋಗುತ್ತಿರುವ ಸಮುದ್ರದ ಎಲ್ಲೆ ಚಿತ್ರದ ಅಂದಗೆಡಿಸಿದ್ದನ್ನು ಗಮನಿಸಬಹುದು.

DSC08248



ಕ್ಲೋಸ್-ಅಪ್ ಚಿತ್ರಗಳು


EARRING
ಜನರ ಚಿತ್ರ ತೆಗೆಯುವಾಗ ಜೂಮ್ ಬಳಸಿ ಫ್ರೇಮನ್ನು ಬರೀ ಮುಖದಿಂದ ತುಂಬಿಸುವುದರ ಮೂಲಕ ಕ್ಲೋಸ್ ಅಪ್ ಚಿತ್ರಗಳನ್ನು ಪಡೆಯಬಹುದು . ಸಾಮಾನ್ಯವಾಗಿ ನಾವು ಜನರ ಚಿತ್ರ ತೆಗೆಯಬೇಕಾದಲ್ಲಿ ಫ್ರೇಮಿನಲ್ಲಿ ಕೇವಲ ೧೦% ಗಳಷ್ಟು ಉಪಯೋಗಿಸಿ, ವಿಷಯವನ್ನು ಮಧ್ಯದಲ್ಲಿ ಕೂರಿಸಿ ಉಳಿದ ಜಾಗವನ್ನು ಖಾಲಿ ಬಿಡುವುದು ವಾಡಿಕೆ. ಈ ರೂಢಿಯನ್ನು ಮುರಿದು ಕ್ಲೋಸ್ ಅಪ್ ಚಿತ್ರಗಳನ್ನು ತೆಗೆಯುವುದರ ಮೂಲಕ ಜನರ ಮುಖದಲ್ಲಿನ ಹೆಚ್ಚಿನ ವಿವರ ಸೆರೆ ಹಿಡಿಯಬಹುದು.
ಇಲ್ಲಿ ಬೆಳಕಿನ ದಿಕ್ಕು ಚಿತ್ರದ ಮೇಲೆ ತುಂಬಾ ಪರಿಣಾಮ ಬೀರುವುದರಿಂದ, ನಮ್ಮ ಆದ್ಯತೆಗನುಗುಣವಾಗಿ ಚಿತ್ರ ತೆಗೆಯಬಹುದು. ಬೆಳಿಗ್ಗಿನ ಮತ್ತು ಸಂಜೆಯ ಹೊಂಬೆಳಕು ಚರ್ಮಕ್ಕೆ ನೈಜತೆಯ ಬಣ್ಣ ಕೊಡುತ್ತದೆ. ನೇರವಾಗಿ ಬೀಳುವ ಬೆಳಕು ಉತ್ತಮವಾದರೂ ಮುಖದಲ್ಲಿ ಸುಕ್ಕು, ನೆರಿಗೆಯನ್ನು ಸೆರೆಹಿಡಿಯಲು ಮುಖವನ್ನು ಸವರಿಕೊಂಡು ಹೋಗುವಂತೆ ಅಡ್ಡದಿಂದ ಬರುವ ಬೆಳಕನ್ನು ಉಪಯೋಗಿಸಬಹುದು. ಸೂರ್ಯ ನೆತ್ತಿಯ ಮೇಲಿದ್ದಾಗ ಕಣ್ಣಿನ ಸುತ್ತ ಏರ್ಪಡುವ ನೆರಳನ್ನು ತಡೆಯಲು ಫ್ಲಾಷ್ (ಫಿಲ್ ಫ್ಲಾಷ್) ಬಳಸಬಹುದು.


ಚೌಕಟ್ಟು


EYE
ಹೇಗೆ ಚಿತ್ರ ತೆಗೆದು ಅದಕ್ಕೊಂದು ಚೌಕಟ್ಟು ಹಾಕಿಸಿ ಮನೆಯ ಗೋಡೆಗೆ ನೇತು ಹಾಕಿದರೆ ಚಿತ್ರದ ಅಂದ ಹೆಚ್ಚುವುದೋ ಹಾಗೆಯೇ ಚಿತ್ರ ತೆಗೆಯುವಾಗಲೇ ದೊರಕಬಹುದಾದ ನೈಸರ್ಗಿಕ ಚೌಕಟ್ಟುಗಳನ್ನು ಬಳಸಿ ನಿಮ್ಮ ಚಿತ್ರವನ್ನು ಪರಿಣಾಮಕಾರಿಯಾಗಿ ತೆಗೆಯಬಹುದು. ನೀವು ತೆಗೆಯಹೊರಟ ಚಿತ್ರವನ್ನು ಪೂರಕವಾದ ಇನ್ನೊಂದು ವಿಷಯದೊಳಗೆ ಬಂಧಿಸಿ ಚೌಕಟ್ಟನ್ನು ಪಡೆಯಬಹುದು. ಬಾಗಿಲು, ಕಿಟಕಿ, ಚಿಕ್ಕ ಕಂಡಿಯಂತಹ ಪೂರಕ ವಿಷಯಗಳು ನಿಮಗೆ ಈ ಬಗೆಯ ಚೌಕಟ್ಟನ್ನು ಒದಗಿಸುತ್ತವೆ. ಚಿತ್ರದಲ್ಲಿ ಚೌಕಟ್ಟನ್ನು ಬಳಸುವುದರಿಂದ ಚಿತ್ರಕ್ಕೆ ಇನ್ನೊಂದು ಆಯಾಮ ಸಿಕ್ಕಿ, ಆಳ ಹೆಚ್ಚುವುದಲ್ಲದೆ ವೀಕ್ಷಕರ ದೃಷ್ಟಿ ಚೌಕಟ್ಟಿನ ಒಳಗೆ ಹಿಡಿದಿಡಲು ಸಹಾಯ ಮಾಡುತ್ತದೆ. ಮೇಲಿನ ಚಿತ್ರ ಕಂಬವನ್ನು ಚೌಕಟ್ಟಾಗಿ ಉಪಯೋಗಿಸಿ ತೆಗೆದದ್ದು.



ಈ ಕೆಳಗಿನ ಚಿತ್ರದಲ್ಲಿ ಬಾಗಿಲನ್ನು ಚೌಕಟ್ಟಾಗಿ ಉಪಯೋಗಿಸಿದ್ದೇನೆ.

DSC07086



ಮುಂದುವರೆಯುವುದು...

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)