
ಗಂಟೆಗೆ ಎಂಭತ್ತು ಕಿ.ಮೀ.ಗಳಷ್ಟು ವೇಗವಾಗಿ ಹಾರುವ ಏರೋಪ್ಲೇನ್ ಚಿಟ್ಟೆ ಅಥವಾ ಡ್ರಾಗನ್ ಫ್ಲೈ ಕೀಟ ಸಮೂಹದಲ್ಲಿ ನಿಸ್ಸೀಮ ಹಾರಾಟಗಾರರೆಂದು ಖ್ಯಾತಿ ಪಡೆದಿದೆ. ಬಣ್ಣ ಬಣ್ಣದ ದೇಹ, ಗಡುಸಾದ ಪಾರದರ್ಶಕ ರೆಕ್ಕೆಗಳು, ರೆಕ್ಕೆಗಳಲ್ಲಿ ಜಾಲದಂತೆ ಹರಡಿರುವ ರಕ್ತನಾಳಗಳು, ದೊಡ್ಡದಾದ ಸಂಯುಕ್ತ ಕಣ್ಣು ಇದರ ಗುಣ ಲಕ್ಷಣ. ಇತರ ಕೀಟಗಳಂತೆಯೇ ೩ ಜೊತೆ ಕಾಲುಗಳಿದ್ದರೂ ಅವು ಚಲಿಸಲು ನಿರುಪಯುಕ್ತವಾಗಿದೆ. ಏರೋಪ್ಲೇನ್ ಚಿಟ್ಟೆಗಳಲ್ಲೇ ಹಲವು ಜಾತಿ ಇದ್ದು, ಸುಮಾರು ೩ ಸೆ.ಮೀ.ನಷ್ಟು ಚಿಕ್ಕ ಚಿಟ್ಟೆಯಿಂದ ೧೦ ಸೆ.ಮೀ.ಗಳಷ್ಟು ಉದ್ದದವರೆಗಿನ ಚಿಟ್ಟೆಗಳೂ ಇವೆ. ಏರೋಪ್ಲೇನ್ ಚಿಟ್ಟೆಗಳು ಸೊಳ್ಳೆ, ನೊಣ, ಚಿಕ್ಕ ಚಿಕ್ಕ ಮಿಡತೆ, ಪತಂಗ, ಚಿಟ್ಟೆಗಳನ್ನು ಹಿಡಿದು ತಿನ್ನುತ್ತವೆ.
ಏರೋಪ್ಲೇನ್ ಚಿಟ್ಟೆಗಳು ಮೊಟ್ಟೆಗಳನ್ನು ನೀರಿನಲ್ಲಿಡುತ್ತವೆ. ಒಂದುವಾರದ ಕಾಲಾವಧಿಯಲ್ಲಿ ಮೊಟ್ಟೆಯಿಂದ ಹೊರಗೆ ಬರುವ ಲಾರ್ವಾಗಳು ನೀರಿನಲ್ಲಿ ಜಲಚರಗಳಾಗಿ ಬದುಕುತ್ತವೆ.ಚಿಕ್ಕ ಪುಟ್ಟ ಲಾರ್ವಾಗಳು ನೀರಿನೊಳಗಿನ ಸೂಕ್ಷ್ಮಜೀವಿಗಳನ್ನು ಭಕ್ಷಿಸಿದರೆ, ದೊಡ್ಡ ಗಾತ್ರದ ಲಾರ್ವಾಗಳು ಚಿಕ್ಕ ಪುಟ್ಟ ಮೀನುಗಳು, ಸ್ವಜಾತಿಯ ಚಿಕ್ಕ ಲಾರ್ವಾಗಳು, ಸೊಳ್ಳೆಯ ಲಾರ್ವಾಗಳನ್ನು ತಿಂದು ಬದುಕುತ್ತವೆ. ಇವು ಪ್ರೌಢಾವಸ್ಥೆಗೆ ಬರಲು ಒಂದು ವರ್ಷಗಳಷ್ಟು ಕಾಲ ಹಿಡಿಯುತ್ತದೆ. ಈ ಸಮಯದಲ್ಲಿ ಹನ್ನೆರಡು ಬಾರಿ ತನ್ನ ಹೊರಗವಚವನ್ನು ಬದಲಿಸುತ್ತವೆ.

ಹೆಲಿಕಾಪ್ಟರ್ ಚಿಟ್ಟೆ ಅಥವಾ ಡ್ಯಾಮ್ಸೆಲ್ ಫ್ಲೈ ಏರೋಪ್ಲೇನ್ ಚಿಟ್ಟೆಯಂತೆಯೇ ಕಾಣಿಸುವ ಅದರ ಹತ್ತಿರದ ಸಂಬಂಧಿ. ಏರೋಪ್ಲೇನ್ ಚಿಟ್ಟೆಗಳ ಹಲವು ಗುಣಲಕ್ಷಣವನ್ನು ಹೋಲುತ್ತವಾದರೂ, ಇವು ಅವುಗಳಿಗಿಂತ ಸೂಕ್ಷ್ಮ. ಏರೋಪ್ಲೇನ್ ಚಿಟ್ಟೆಗಳು ಕೂತಾಗ ರೆಕ್ಕೆಯನ್ನು ದೇಹಕ್ಕೆ ಸಮಾನಾಂತರವಾಗಿ ಬಿಡಿಸಿ ಹಿಡಿದರೆ, ಹೆಲಿಕಾಪ್ಟರ್ ಚಿಟ್ಟೆ ನಾಲ್ಕೂ ರೆಕ್ಕೆ ಒಂದಕ್ಕೊಂದಕ್ಕೆ ಸೇರಿಸಿ ಮಡಿಚಿಕೊಂಡು ಕುಳಿತಿರುತ್ತವೆ. ಹೆಲಿಕಾಪ್ಟರ್ ಚಿಟ್ಟೆಯ ನಾಲ್ಕೂ ರೆಕ್ಕೆಗಳು ಒಂದೇ ಗಾತ್ರದಲ್ಲಿದ್ದು, ಬುಡದಲ್ಲಿ ಚಿಕ್ಕದಾಗಿ ಬೆನ್ನಿಗೆ ಅಂಟಿಕೊಂಡಿದ್ದರೆ, ಏರೋಪ್ಲೇನ್ ಚಿಟ್ಟೆಯ ಮುಂದುಗಡೆಯ ಎರಡು ರೆಕ್ಕೆಗಳು ಹಿಂದಿನ ಎರಡು ರೆಕ್ಕೆಗಳಿಗಿಂತ ಚಿಕ್ಕದಾಗಿರುತ್ತವೆ. ಇವೆರಡೂ ಚಿಟ್ಟೆಗಳು ಹೆಲಿಕಾಪ್ಟರಿನಂತೆಯೇ ಗಾಳಿಯಲ್ಲಿ ಸ್ತಬ್ಧವಾಗಿ ನಿಲ್ಲಬಲ್ಲವಾದರೂ ಏರೋಪ್ಲೇನ್ ಚಿಟ್ಟೆಗಳಿಗಿರುವಂತೆ ವೇಗವಾದ ಹಾರಾಟ ಹೆಲಿಕಾಪ್ಟರ್ ಚಿಟ್ಟೆಗಳಿಗಿಲ್ಲ. ಏರೋಪ್ಲೇನ್ ಚಿಟ್ಟೆಯ ಕಣ್ಣುಗಳು ಒಂದುಗೂಡಿದಂತಿದ್ದರೆ,ಹೆಲಿಕಾಪ್ಟರ್ ಚಿಟ್ಟೆಯ ಕಣ್ಣುಗಳು ಬೇರೆ ಬೇರೆಯಾಗಿ ಗುರುತಿಸುವಂತಿದೆ.
ಆಧಾರ:
ನಡೆಯುವ ಕಡ್ಡಿ, ಹಾರುವ ಎಲೆ - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ ವಿ.ವಿ. ಬೆಳವಾಡಿ
Damselflies
Dragonfly
ಪಾಲಚಂದ್ರ,
ReplyDeleteಏರೋಪ್ಲೇನ್ ಮತ್ತು ಹೆಲಿಕಾಪ್ಟರ್ ಚಿಟ್ಟೆಗಳ ಫೋಟೋಗಳು ತುಂಬಾ ಚೆನ್ನಾಗಿವೆ...ಮತ್ತು ಅವುಗಳಿಗೆ ಸಂಭಂದಿಸಿದ ಮಾಹಿತಿಯನ್ನು ಚೆನ್ನಾಗಿ ನೀಡಿದ್ದೀರಿ...
ನಾನು ಚಿಕ್ಕವನಿದ್ದಾಗ ರಜಕ್ಕೆ ನಮ್ಮ ಅಜ್ಜಿ ಊರಿಗೆ ಹೊಗುತ್ತಿದ್ದೆ.. ನನ್ನ ಅಜ್ಜಿಯ ಮೊಮ್ಮೊಕ್ಕಳೆಲ್ಲಾ ೮ - ೧೦ ಜನ ಸೇರಿ ಈ ಏರೋಪ್ಲೇನ್ ಚಿಟ್ಟೆ ಹಿಡಿಯುವ ಆಟ ಆಡುತ್ತಿದ್ದೆವು (ಅವು ನಮ್ಮ ಕೈಗೆ ಸಿಗುತ್ತಿರಲಿಲ್ಲ ಬಿಡಿ). ಈ ಚಿತ್ರಗಳನ್ನು ನೋಡಿ ಅದೆಲ್ಲಾ ನೆನಪಾಯಿತು :) :(
ReplyDeleteಚಿತ್ರಗಳು ಮತ್ತು ವಿವರಣೆ ಎರಡೂ ಚೆನ್ನಾಗಿದೆ. ನನ್ನ ಬ್ಲಾಗಲ್ಲಿ ಡ್ರಾಗನ್ ಫ್ಲೈ ಬಗ್ಗೆ ಬರೆದಿದ್ದೆ. ಹೊಸ ಕ್ಯಾಮೆರಾದಲ್ಲಿ ತೆಗೆದಿದ್ದಾ?
ReplyDeleteಪಾಲಚಂದ್ರ....
ReplyDeleteತುಂಬಾ ಚಂದವಾಗಿ ಫೋಟೊ ತೆಗೆದಿದ್ದೀರಿ...
ಅದರ ಬ್ಯಾಕ್ ಗ್ರೌಂಡಿಂದಾಗಿ ಇನ್ನಷ್ಟು ಆಕರ್ಷಕವಾಗಿದೆ...
ಅಂದದ ಫೋಟೊ..
ಮಾಹಿತಿಗಳಿಗಾಗಿ
ಧನ್ಯವಾದಗಳು
ಪಾಲ ರವರೆ....
ReplyDeleteಎರೋಪ್ಲೈನ್ ಚಿಟ್ಟೆಗಳ ಫೋಟೋ ನಿಜವಾಗ್ಲೂ ತುಂಬ ಚೆನ್ನಾಗಿ ಇದೆ... ನಿಮ್ಮ ಹೊಸ ಕ್ಯಾಮೆರಾ ದಿಂದ ತೆಗೆದಿರಬೇಕಲ್ವ.....? ಗುಡ್ ಇಂತದ್ದು ಇನ್ನಸ್ಟು ಬರಲಿ.......ಹಾಗೆ ಇದರ ಬಗ್ಗೆ ಅಪೂರ್ವ ಮಾಹಿತಿ ಕೂಡ...... ಚಿಕ್ಕವರಿರಬೇಕಾದರೆ ಇ ಎರೋಪ್ಲೈನ್ ಚಿಟ್ಟೆ ಹಿಡಿಯುವುದಕ್ಕೊಸ್ಕರ.....ಪಟ್ಟ ಕಷ್ಟ ಗಳೆಲ್ಲ ನೆನಪಾದವು....ಊಟ ತಿಂಡಿ ಬಿಟ್ಟ ಚಿಟ್ಟೆ ಹಿಡಿಯುವುದರಲ್ಲೇ ಮಗ್ನರಾಗುತ್ತಿದೆವು....
ಧನ್ಯವಾದಗಳು....
ಗುರು
ಪಾಲ ಅವರೆ
ReplyDeleteಬಹಳ ಸುಂದರ ಚಿತ್ರಗಳು. ಏರೋಪ್ಲೇನ್ ಚಿಟ್ಟೆ ಎಂದ ಕೂಡಲೇ ತೇಜಸ್ವಿ ನೆನಪಿಗೆ ಬಂದರು. ಮೊದಲ ಸೆಮಿಸ್ಟರ್ ಬಿ.ಎ. ವಿದ್ಯಾರ್ಥಿಗಳಿಗೆ ತೆಜಸ್ವಿಯವರ ಈ ಪ್ರಬಂಧ ಪಾಠ ಮಾಡುತ್ತಿದ್ದೇನೆ. ಈ ಬಾರಿ ನಿಮ್ಮ ಈ ಚಿತ್ರಗಳನ್ನು ನಮ್ಮ ವಿದ್ಯಾರ್ಥಿನಿಯರಿಗೆ ತೋರಿಸುತ್ತೇನೆ.ಈ ಚಿಟ್ಟೆಯ ಮೊಟ್ಟೆಗಳು ಮರಿಯಾದ ನಂತರ ನಾಲ್ಕು ವರ್ಷ ನೀರಿನಲ್ಲಿಯೇ ಬೆಳೆಯುತ್ತದೆ ಎನ್ನುತ್ತಾರೆ ತೇಜಸ್ವಿ. ದುರಂತವೆಂದರೆ ನೀರಿನಿಂದ ಹೊರಬಂದು ಚಿಟ್ಟೆಯಾದಮೆಲೆ ಅದು ಜೀವಿಸಿರುವುದು ಕೇವಲ ಒಂದೆರಡು ತಿಂಗಳಷ್ಟೆ.
ಫೋಟೋಗಳು ತುಂಬಾ ಚೆಂದ ಉಂಟು..ನಾವು ಚಿಕ್ಕವರಿದ್ದಾಗ ಊರಲ್ಲಿ ಇದಕ್ಕೆ ಪೀಟಿ ಅಂತ ಕರೀತಿದ್ವಿ...ಅದನ್ನ ಹಿಡಿಯೋದೇ ಒಂದು ಆಟ ಆಗಿತ್ತು..ಆ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..
ReplyDeleteಶಿವು,
ReplyDeleteನಿಮ್ಮನಿಸಿಕೆಗೆ ನನ್ನಿ
ವಿಜಯ್,
ಸಧ್ಯ ನಿಮ್ಮ ಕೈಗೆ ಸಿಗದೇ ಬಡ ಜೀವಿಗಳು ಬದುಕಿದವಲ್ಲ, ಆದ್ರೆ ನನ್ನ ಕೈಗೆ ಸಿಕ್ಕಿ ಬಾಲಕ್ಕೆ ದಾರ ಸಿಕ್ಕಿಸಿಕೊಂಡು ಹಲವು ಏರೋಪ್ಲೇನ್ಗಳು ಒದ್ದಾಡಿ ಶಾಪ ಹಾಕಿವೆ :(
ಮಲ್ಲಿಕಾರ್ಜುನ್, ಗುರು
ಪ್ರತಿಕ್ರಿಯೆಗೆ ಧನ್ಯವಾದ, ಇದು ಹಳೇ ಕ್ಯಾಮರಾದ ಫೋಟೋ
ಪ್ರಕಾಶ್,
ನಿಮ್ಮನಿಸಿಕೆಗೆ ನನ್ನಿ
ಚಂದ್ರಕಾಂತ ಮೇಡಂ,
ನೀವು ಪಾಠ ಮಾಡಿರುವ ತೇಜಸ್ವಿಯವರ ಬರಹ ಯಾವುದೆಂದೆ ತಿಳಿಸಬಹುದೇ. ಕುತೂಹಲಕಾರಿಯಾದ ವಿಷ್ಯ. ನಿಮ್ಮ ಪಾಠಕ್ಕೆ ಈ ಫೋಟೋಗಳನ್ನು ಉಪಯೋಗಿಸಿಕೊಂಡರೆ ತುಂಬಾ ಸಂತೋಷ.
ಸುಧೀಂದ್ರ,
ಪೀಟಿ ಹೆಸರು ಹೊಸದು, ಅಂದಹಾಗೇ ಯಾವ ಕಡೆ ಈ ಹೆಸರಿನಿಂದ ಕರೆಯುತ್ತಾರೆ?
ಪಾಲಚಂದ್ರ ಅವರೆ, ಫೋಟೋ ಲೇಖನ ಸೂಪರ್. ಧನ್ಯವಾದಗಳು.
ReplyDeleteಪಾಲ ಅವರೆ
ReplyDeleteನಾನು ಪಾಥ ಮಾಡುವ ತೇಜಸ್ವಿಯವರ ಬರಹದ ಬಗ್ಗೆ ಕೇಳಿದ್ದು ತುಂಬಾ ಸಂತಸ ತಂದಿತು.ಬೆಂಗಳೂರು ವಿಶ್ವ ವಿದ್ಯಾಲಯದವರು ಪ್ರಕಟಿಸಿರುವ ಮೊದಲನೆ ಮತ್ತು ಎರಡನೆ ಸೆಮಿಸ್ಟರ್ ಬಿ.ಎ. ಪಥ್ಯ ಪುಸ್ತಕ " ಸಾಹಿತ್ಯ ಸಂವಾದ - ೧"ಮೊದಲ ಪ್ರಬಂಧವೇ ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು. ಅದರಲ್ಲಿ ಇನ್ನೂ ಕುತೂಹಲಕಾರಿ ವಿಚಾರಗಳಿವೆ. ಅದರಲ್ಲಿಯೇ ‘ಒಂಟೆಹುಳು’ವಿನ ಪ್ರಸ್ತಾಪವೂ ಬರುತ್ತದೆ.
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಹೆಸರಿನ ತೇಜಸ್ವಿಯವರ ಪುಸ್ತಕವೂ ಇದೆ. ಅದು ಗಾಂಧಿಬಜಾರಿನ ಅಂಕಿತದಲ್ಲಿ ಸಿಗುತ್ತದೆ.ಈ ಪುಸ್ತಕ ಓದಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.
ಪಾಲ ಅವರೆ ಮೊದಲ ಮತ್ತು ಎರಡನೆಯ ಸೆಮಿಸ್ಟರ್ ಪಠ್ಯವು ಒಂದೇ ಪುಸ್ತಕದಲ್ಲಿದೆ.
ReplyDeleteಚಂದ್ರಕಾಂತ ಮೇಡಂ,
ReplyDeleteಬಂದು ಮರುಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಅಂತೆಯೇ ತಡವಾದ ನನ್ನ ಪ್ರತಿಕ್ರಿಯೆಗೆ ಕ್ಷಮೆಯಿರಲಿ. ಬಿ.ಇ. ಪಠ್ಯದ ವಿಷಯ "ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಪುಸ್ತಕದಿಂದ" ಆಯ್ದುಕೊಂಡಿದ್ದೇ? ಈ ವಾರಾಂತ್ಯ ಖಂಡಿತ ಅಂಕಿತದಲ್ಲಿ ಇದರ ಬಗ್ಗೆ ವಿಚಾರಿಸುವೆ. ಅಂತೆಯೇ ವಿಕಿಯಲ್ಲಿ ಕೂಡ ಲಾರ್ವಾದ ಗರಿಷ್ಟ ಕಾಲಾವಧಿ ಸುಮಾರು ೫ ವರ್ಷ, ಆದರೆ ಏರೋಪ್ಲೇನ್ ಚಿಟ್ಟೆಯ ಜಾತಿಗನುಗುಣವಾಗಿ ಇದು ೨ ತಿಂಗಳಿನಿಂದ ೩ ವರ್ಷದವರೆಗೂ ಬದಲಾಗಬಹುದೆಂದು ನಮೂದಿಸಿದ್ದಾರೆ. ನಾನೋದಿದ "ನಡೆಯುವ ಕಡ್ಡಿ, ಹಾರುವ ಎಲೆ" ಎಂಬ ಹೊತ್ತಿಗೆಯಲ್ಲಿ ನಮೂದಿಸಿದ ೧ ವರ್ಷವನ್ನು ಸಾಮಾನ್ಯೀಕರಿಸಿ ಮೇಲಿನಂತೆ ನನ್ನ ಬರಹದಲ್ಲಿ ಹೇಳಿದ್ದು ಗೊಂದಲ ಮೂಡಿಸುವಂತಿದೆ. ಇದರ ಬಗ್ಗೆ ಹೆಚ್ಚಿನ ವಿಷಯ ಹಂಚಿಕೊಂಡಿದ್ದಕ್ಕೆ ಇನ್ನೊಮ್ಮೆ ವಂದನೆಗಳು.
Informative
ReplyDelete