Sunday, March 01, 2009

ಗೃಹ ಪ್ರವೇಶ

DSC09355ಬೆಂಗಳೂರಿನ ಖ್ಯಾತ ಬಡಾವಣೆಯಲ್ಲಿ ಹೊಸದಾಗಿ ತಲೆ ಎತ್ತಿ ನಿಂತ ಮೂರಂತಸ್ಥಿನ ಭವ್ಯ ಬಂಗಲೆ. ಮನೆಯೆದುರಿನ ರಸ್ತೆಯಲ್ಲಿ ಶಾಮಿಯಾನ ಹಾಕಿಸಿ, ಸುಮಾರು ೨೦೦ ಜನ ಒಮ್ಮೆಲೇ ಕುಳಿತು ಊಟ ಮಾಡುವಷ್ಟು ಮೇಜು ಕುರ್ಚಿಗಳನ್ನಿರಿಸಿ, ಪಕ್ಕದಲ್ಲಿಯೇ ಅಡುಗೆಗಾಗಿ ತಾತ್ಕಾಲಿಕ ಏರ್ಪಾಡು ಮಾಡಲಾಗಿತ್ತು. ಮಗನ ಮನೆಯ ಗೃಹ ಪ್ರವೇಶವಾದ್ದರಿಂದ ರಾಯರು ಗೆಲುವಿನಿಂದಲೇ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಬಂದವರಿಗೆ ನೀರು, ಕಾಪಿ, ಮಾತುಗಳಿಂದ ಉಪಚರಿಸಿ, ಮಗ ಕಟ್ಟಿಸಿದ್ದ ಮನೆಯ ಅಂಚಂಚನ್ನು ಹುಮ್ಮಸ್ಸಿನಿಂದ ತೋರಿಸಿ, ಅವರಾಡಿದ ಮೆಚ್ಚುಗೆಯ ಮಾತುಗಳಿಂದ ಪುಳಕಿತರಾಗಿದ್ದರು.

ಬಡತನದಲ್ಲಿ ಬೆಳೆದು, ವಿದ್ಯೆಯನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿರಬೇಕಾದರೆ ಅವರಿಗೆ ಸಿಕ್ಕಿದ್ದು ಬ್ಯಾಟರ್ ಫ್ಯಾಕ್ಟರಿಯಲ್ಲೊಂದು ಸಣ್ಣ ಕೆಲಸ. ತೀರಾ ಸಿರಿತನ ಅಲ್ಲದ್ದಿದ್ದರೂ ಇನ್ನೊಬ್ಬರ ಮುಂದೆ ಕೈಚಾಚಿ ಬದುಕಬೇಕಿಲ್ಲದಿದ್ದ ಪರಿಸ್ಥಿತಿಯಲ್ಲಿ, ತಮ್ಮ ಊರಿನ ಒಬ್ಬ ಕನ್ಯೆಯನ್ನೇ ವಿವಾಹವಾಗಿ ಸುಖವಾಗಿಯೇ ಇದ್ದರು. ಒಂದೆರಡು ವರ್ಷಗಳೊಳಗಾಗಿ ಗಂಡು ಮಗುವನ್ನು ಹೆತ್ತು, ಆ ಮಗುವಿನಲ್ಲಿ ತಮ್ಮ ಸುಖ ಕಾಣಲು ಮೊದಲುಗೊಂಡರು. ಸಂಸಾರಕ್ಕೆ ಹೊಸಬ್ಬನ ಆಗಮನದಿಂದ ಮನೆಯ ಅವಶ್ಯಕತೆ ಹೆಚ್ಚಿ ರಾಯರು ಫ್ಯಾಕ್ಟರಿಯಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಿ ಇನ್ನಷ್ಟು ಹಣ ಹೊಂದಿಸಬೇಕಾದ ಪರಿಸ್ಥಿತಿ ಬಂದಿತ್ತು. ಎಡ ಬಿಡದ ದುಡಿತ, ಬ್ಯಾಟರಿ ಆಸಿಡ್ಗಳೊಂದಿಗಿನ ನಂಟು ರಾಯರ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿತ್ತು. ಮಡದಿ ಬಂದಾಗಿನಿಂದ ಆಕೆಗೊಂದು ಹೊಸ ಬಟ್ಟೆ, ಆಭರಣ, ಅಪೂರ್ವಕ್ಕೊಮ್ಮೆಯಾದರೂ ತಿರುಗಾಟ ಮೊದಲಾದ ಸೌಲಭ್ಯ ಒದಗಿಸಲಾರದೇ ರಾಯರು ಖಿನ್ನರಾಗಿದ್ದರು.

ರಾಯರ ಮಡದಿಯೇನೂ ಅನುಕೂಲವಂತರ ಮನೆಯಲ್ಲಿ ಬೆಳೆದ ಹುಡುಗಿಯಲ್ಲ. ಬೆಂಗಳೂರಿಗೆ ಬಂದ ಹೊಸತರಲ್ಲಿ ಪತಿಯ ಸಹವಾಸ, ಪೇಟೆಯ ಸೊಬಗು ಮೆಚ್ಚಿಕೊಂಡೂ ಇದ್ದಳು. ದಿನಕಳೆದಂತೆ ಅಕ್ಕ ಪಕ್ಕದ ಮನೆಯವರ ಸಿರಿತನ ಸೊಬಗನ್ನು ನೋಡಿ ಆಸೆಗೊಂಡು, ಪತಿಯೊಡನೆ ಈ ವಿಷಯವನ್ನು ಹಂಚಿಕೊಂಡಿದ್ದೂ ಉಂಟು. ಇದ್ದೊಬ್ಬ ಮಗುವಿಗೆ ಒಂದೆಳೆ ಚಿನ್ನದ ಸರ ಹಾಕಲೂ ಗತಿಯಿಲ್ಲವೆಂದು ಒಮ್ಮೊಮ್ಮೆ ಕೊರಗುತ್ತಿದ್ದುದೂ ಉಂಟು. ಮಡದಿ ಪರರ ಐಶ್ವರ್ಯದ ಮಾತನೆತ್ತುವಾಗಲೆಲ್ಲಾ ರಾಯರಿಗೆ ತನಗಿದನ್ನೆಲ್ಲಾ ಒದಗಿಸಲಾಗದಲ್ಲ ಎಂಬ ಅಪರಾಧ ಭಾವನೆ ಮೂಡುತ್ತಿತ್ತು. ಈ ಭಾವನೆ ಆಳವಾಗಿ ಮನಸ್ಸನ್ನು ಹೊಕ್ಕು ರಾಯರಿಗೆ ಮಡದಿಯ ಬಳಿ ಮಾತನಾಡುವುದು ಕಷ್ಟವಾಗತೊಡಗಿತು, ತಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಂಡು ಮನೆಯಲ್ಲಿ ಮಡದಿಯೊಡನಿರಬಹುದಾದ ಅವಧಿಯನ್ನು ಕಡಿಮೆ ಮಾಡಿಕೊಂಡರು. ಮಡದಿ ಗಂಡನನ್ನು ಚುಚ್ಚುವ ಉದ್ದೇಶದಿಂದ ಈ ಮಾತನ್ನು ಆಡಿದವಳಲ್ಲ, ಆದರೂ ಆಕೆ "ನಾನು ಕೇವಲ ಇವನ್ನಷ್ಟೆ ನಿಮ್ಮಿಂದ ಬಯಸಿದ್ದಲ್ಲ ಎಂದು ಹೇಳಬಹುದಿತ್ತು", ಹೇಳಲಿಲ್ಲ. ರಾಯರಿಗೆ ಸಿರಿ ಸಂಪತ್ತು ಒದಗಿಸುವ ಸೌಭಾಗ್ಯ ಇಲ್ಲವಾದರೂ ಮಾತಿನಿಂದ ಮಡದಿಯನ್ನು ಸಂತೈಸಬಹುದಿತ್ತು, ಸಂತೈಸಲಿಲ್ಲ.

ಹೀಗಿರುತ್ತ ಮಗ ಬೆಳೆದು ಶಾಲೆಗೆ ಹೋಗಿ ಬರುತ್ತ, ವಿದ್ಯಾಭ್ಯಾಸದಲ್ಲೂ, ಪಠ್ಯೇತರ ಚಟುವಟಿಕೆಗಳಲ್ಲೂ ಮೊದಲಿಗನಾಗಿ ಬೆಳೆಯತೊಡಗಿದ. ರಾಯರ ಸಹವಾಸ ಕಡಿಮೆಯಾದ ಮಡದಿಗೆ ಮಗ ಸ್ನೇಹಿತನಾಗಿ, ತಂದೆಯ ಸ್ನೇಹ ಕಡಿಮೆಯಾದ ಮಗನಿಗೆ ತಾಯಿ ಸರ್ವಸ್ವವಾದರು. ಗಂಡನ ಅಪರಾಧ ಭಾವವನ್ನು ತನ್ನ ಮೇಲೆ ತೋರಿಸುತ್ತಿರು ಅಸಡ್ಡೆಯೆಂದೇ ತಿಳಿದು, ರಾಯರ ಮೇಲೆ ಮಡದಿಗೆ ತಿರಸ್ಕಾರ ಭಾವನೆ ಮೂಡಲು ಆರಂಭವಾಯಿತು, ಮಗನಲ್ಲಿಯೂ ತಂದೆಯ ಬಗ್ಗೆ ಇದೇ ಭಾವನೆಯನ್ನು ಮೂಡುವಂತೆ ಮಾಡಿದಳು. ಪದೇ ಪದೇ ಕಾಯಿಲೆಯ ನೆಪ ಹೇಳಿ ಮನೆವಾರ್ತೆ, ಹೊರಗಡೆ ಕೆಲಸ ಎರಡು ರಾಯರ ಮೇಲೆ ಬೀಳುವಂತೆ ಮಾಡಿ ಅವರ ಗಮನ ತನ್ನ ಮೇಲೆ ಹರಿಯುವಂತೆ ಮಾಡುತ್ತಿದ್ದಳು. ಓದುವ ಮಗನಾದ್ದರಿಂದ, ಇಂತಹ ಸಂದರ್ಭಗಳಲ್ಲಿ ಮನೆಯ ಕೆಲಸಗಳು ರಾಯರ ಪಾಲಾಗುತ್ತಿತ್ತು. ಇಂತಹ ವಾತಾವರಣದಲ್ಲೇ ಛಲದಿಂದ ಪದವಿ ಪೂರ್ವ ವ್ಯಾಸಂಗ ಮುಗಿಸಿದ ಮಗ, ಮುಂದಿನ ವ್ಯಾಸಂಗಕ್ಕಾಗಿ ಇಂಜಿನಿಯರಿಂಗ್ ಆಯ್ದು ಕೊಂಡನು. ತನ್ನ ನಿರ್ಧಾರವನ್ನು ತಾಯಿಗೆ ತಿಳಿಸಿ ಆಕೆಯ ಆಶೀರ್ವಾದ ಪಡೆದನಾದರೂ, ಏನೂ ಪ್ರಯೋಜನವಾಗಲಾರದೆಂದು ತಂದೆಗೆ ತಿಳಿಸುವ ಕೆಲಸ ಮಾಡಲಿಲ್ಲ. ಹಣಕಾಸಿಗಾಗಿ ವಿದ್ಯಾರ್ಥಿ ವೇತನ, ತಾಯಿಯ ಕಡೆಯವರ ಸಹಾಯದಿಂದ ಬ್ಯಾಂಕಿನಲ್ಲಿ ಸಾಲವನ್ನು ಪಡೆದನು. ಈ ವಿಷಯ ಮೂರನೇ ವ್ಯಕ್ತಿಯಿಂದ ತಿಳಿದ ರಾಯರಿಗೆ ಮಗನೂ ತಮ್ಮನ್ನು ಅಸಡ್ಡೆಯಿಂದ ನೋಡುತ್ತಿರುವನಲ್ಲ ಎಂದು ಬೇಸರವಾಯಿತು.

ಮಗ, ತಂದೆಯ ನೆರವು ಪಡೆಯದೆ, ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ, ಕೈತುಂಬಾ ಸಂಬಳ ಬರುವ ಕೆಲಸವೊಂದನ್ನು ಗಿಟ್ಟಿಸಿಕೊಂಡನು. ಮೊದಲ ಸಂಬಳವನ್ನು ತಂದು ತಾಯಿಯ ಕೈಗೆ ಕೊಟ್ಟಾಗ ಆಕೆ ತಾನೇ ದುಡಿದದ್ದೇನೋ ಎನ್ನುವಷ್ಟು ಸಂಭ್ರಮಿಸಿದಳು. ಪತಿ ವರ್ಷ ಪೂರ್ತಿ ದುಡಿದರೂ ಹೊಂದಿಸಲಾರದ ಹಣವನ್ನು ಮಗ ಒಂದೇ ತಿಂಗಳಲ್ಲಿ ದುಡಿದಿದ್ದನು. ರಾಯರು ಮನೆಗೆ ಬಂದೊಡನೆ ಹಣವನ್ನು ಅವರಿಗೆ ತೋರಿಸುತ್ತಾ, ಇನ್ನಾದರೂ ಉತ್ತಮ ಮನೆಯೊಂದನ್ನು ಬಾಡಿಗೆಗೆ ಕೊಂಡು ಅದರಲ್ಲಿ ಸುಖವಾಗಿರಬಹುದೆಂದು ಅರುಹಿದಳು. ತಾನು ಇದುವರೆಗೆ ಅದುಮಿಟ್ಟ ಆಸೆಯನ್ನು ಮಗನ ಸಂಪಾದನೆಯಲ್ಲಿ ಕಾಣತೊಡಗಿದಳು. ಪತಿ ಮನೆಯ ಖರ್ಚಿಗಿರಲೆಂದು ತಂದುಕೊಡುತ್ತಿದ್ದ ಹಣವನ್ನು ಮಗನ ಸಂಪಾದನೆಯೆದುರು ತುಲನೆ ಮಾಡಿ, "ಈ ಹಣ ಹೀಗೆಯೇ ಕೂಡಿಸಿಟ್ಟರೆ, ಮುಂದೆ ಮಗ ಕಟ್ಟಲಿರುವ ಮನೆಯ ಗೃಹ ಪ್ರವೇಶಕ್ಕೆ ಅಕ್ಕಿಯನ್ನು ಕೊಳ್ಳಲು ಉಪಯೋಗವಾಗುತ್ತದೆ. ನಾಲ್ಕು ಜನರಿಗೆ ಅನ್ನ ಹಾಕಿದ ಪುಣ್ಯವಾದರೂ ನಿಮಗಿರಲಿ" ಎಂದು ಮಗನೆದುರು ರಾಯರನ್ನು ಹಂಗಿಸುತ್ತಿದ್ದಳು.

ಮದುವೆಯ ವಯಸ್ಸಿಗೆ ಬಂದ ಮಗನಿಗೆ ಸಿರಿವಂತ ಕುಟುಂಬದಿಂದ ಕನ್ಯೆಯನ್ನು ತರುವ ಆಸೆ ರಾಯರ ಮಡದಿಗಿತ್ತು. ವಿದ್ಯಾವಂತನಾದ, ಕೈತುಂಬಾ ಸಂಬಳ ಬರುವ ಹುಡುಗನಿಗೆ ಸಿರಿವಂತ ಮಾವ ದೊರಕುವುದು ದುರ್ಲಭವಾಗಲಿಲ್ಲ. ಸಿರಿವಂತರೊಬ್ಬರು ತಮ್ಮ ಮಗಳೊಂದಿಗೆ ಮದುವೆ ಮಾಡಿಸಿಕೊಟ್ಟು, ಅಳಿಯನಿಗೆ ಬೆಂಗಳೂರಿನಲ್ಲೇ ಒಂದು ನಿವೇಶನವನ್ನು ಉಡುಗೊರೆಯಾಗಿ ಕೊಟ್ಟು ಹರಸಿದರು. ಮಗ, ಮಡದಿಯ ವರ್ತನೆಯಿಂದಾಗಿ ಮನೆಗೆ ಬಂದ ಸೊಸೆಗೂ ಮಾವನ ಮೇಲೆ "ಭೂಮಿಗೆ ಭಾರ, ಕೂಳಿಗೆ ದಂಡ" ಎಂಬ ತಾತ್ಸಾರ ಭಾವನೆ ಬೆಳೆಯಿತು. ಮದುವೆಯಾಗಿ ಎರಡು ವರ್ಷಗಳಲ್ಲಿ ಮಗುವನ್ನು ಹೆತ್ತು, ಮಗುವಿನ ವಸ್ತ್ರ ಪಾನಾದಿ ಕೆಲಸಗಳಿಗೆಲ್ಲಾ ಮಾವನನ್ನು ಉಪಯೋಗಿಸತೊಡಗಿದಳು. ಮಗನ ವೈಭೋಗ ಕಂಡು ಇನ್ನಷ್ಟು ಕುಗ್ಗಿದ ರಾಯರು ಮನೆ ಕೆಲಸಗಳನ್ನೆಲ್ಲಾ ಎದುರು ಮಾತನಾಡದೇ ಮಾಡುತ್ತಿದ್ದರು.

ಐದಾರು ವರ್ಷಗಳಿಂದ ದುಡಿದು, ಕೈಯಲ್ಲೊಂದಿಷ್ಟು ಕಾಸು ಮಾಡಿಕೊಂಡ ರಾಯರ ಮಗ, ಮಾವ ಕೊಟ್ಟ ನಿವೇಶನವೊಂದರಲ್ಲಿ ಭರ್ಜರಿಯಾಗಿ ಮನೆ ಕಟ್ಟಿಸುವ ಸಂಕಲ್ಪ ಹಾಕಿಕೊಂಡ. ಬ್ಯಾಂಕಿನಿಂದ ಇನ್ನಷ್ಟು ಹಣದ ನೆರವನ್ನು ಪಡೆದು, ತನಗೆ ಬೇಕಾದಂತಹ ಮೂರಂತಸ್ತಿನ ಮನೆಯ ನೀಲನಕ್ಷೆ ಮಿತ್ರರ ನೆರವಿನಿಂದ ಮಾಡಿಸಿ, ಕಂಟ್ರಾಕ್ಟರೊಬ್ಬರಿಗೆ ಗುತ್ತಿಗೆ ಕೊಟ್ಟ. ಸುಮಾರು ಒಂದು ವರ್ಷಗಳೊಳಗೆಲ್ಲಾ ತನ್ನ ಅಸ್ತಿತ್ವವನ್ನು ಒಂದು ಮೈಲಿ ದೂರದಿಂದಲೇ ಗುರುತಿಸುವಂತಹ ಭವ್ಯ ಬಂಗಲೆಯ ಮಾಲೀಕನಾಗಿ ಸ್ನೇಹಿತ ಬಂಧುಗಳಿಗೆ ಗೃಹ ಪ್ರವೇಶದ ಆಮಂತ್ರಣ ಪತ್ರವನ್ನು ಕಳುಹಿಸಿದ್ದ. ಬಂಧು ಮಿತ್ರರಿಗೆ ಕೊಡಬೇಕಾದ ಉಡುಗೊರೆ ಸಂಗ್ರಹಿಸಿ, ಪುರೋಹಿತರು, ಅಡುಗೆಯವರನ್ನು ನೇಮಿಸಿ ಸಕುಟುಂಬವಾಗಿ ಗೃಹ ಪ್ರವೇಶದ ಹಿಂದಿನ ಸಂಜೆ ಹೊಸ ಮನೆಯತ್ತ ಪಾದ ಬೆಳೆಸಿದನು. ಮಗನ ವ್ಯವಹಾರದಲ್ಲಿ ಇದುವರೆಗೂ ತಲೆ ಹಾಕದ ರಾಯರಿಗೆ, ಮಗ ಕಟ್ಟಿಸಿದ ಬಂಗಲೆಯನ್ನು ನೋಡಿ ಮನದುಂಬಿ ಬಂತು. ಕಾರಿನಲ್ಲಿ ತುಂಬಿ ತಂದಿದ್ದ ಪೂಜಾ ಸಾಮಗ್ರಿ, ಮನೆಯ ಆಭರಣ,ಉಡುಗೊರೆಗಳನ್ನು ರಾಯರು ಹೊತ್ತು ಹೊಸ ಮನೆಯ ಕಪಾಟಿನಲ್ಲಿ ಭದ್ರವಾಗಿರಿಸಿ, ಬೀಗದ ಕೈ ಹಿಡಿದು ಹೊರ ಬಂದರು. ಬಂದಿದ್ದ ನಂಟರೆದುರಿಗೇ ಮಗನ ಆಣತಿಯಂತೆ ಬೀಗದ ಕೈಯನ್ನು ಸೊಸೆಗೆ ಹಸ್ತಾಂತರಿಸಿ, ತಾವು ಬಂಧು ಮಿತ್ರರನ್ನು ಎದುರುಗೊಳ್ಳಲು ನಿಂತರು. ಪುರೋಹಿತರು ಬಂದು ಗಣಹೋಮ, ಇನ್ನಿತರ ಪೂಜಾ ವಿಧಿಗಳನ್ನು ನೆರವೇರಿಸಿ ವಾಸ್ತು ಹೋಮಕ್ಕೆ ಅಣಿಯಾದರು. ಮಗ ಸೊಸೆಯೊಡನೆ, ತಾನೂ ತನ್ನ ಮಡದಿಯೂ ವಾಸ್ತು ಹೋಮಕ್ಕೆ ಕುಳಿತು ಕೊಳ್ಳಬೇಕೆಂಬ ಅವರ ಹಂಬಲ ಮಡದಿಯ "ಮನೆ ಕಟ್ಟಿಸಿದವರಿಗೆ ಮಾತ್ರ ಅಲ್ಲಿ ಕುಳಿತುಕೊಳ್ಳುವ ಯೋಗ್ಯತೆ" ಎಂಬ ಚುಚ್ಚು ಮಾತಿನಿಂದ ಕೊನರಿತು. ಅವಮಾನಿತರಂತೆ ಕೋಣೆಯ ಮೂಲೆಯಲ್ಲಿ ಸ್ಥಳವನ್ನಾಯ್ದುಕೊಂಡು ಹೋಮಕ್ಕೆ ಹಾಕಿದ ಸೌದೆ, ಸಮಿತ್ತು, ತುಪ್ಪಗಳಿಂದ ಹೊಮ್ಮುತ್ತಿರುವ ಧೂಮವನ್ನು ನೋಡುತ್ತಾ ಕುಳಿತಿದ್ದರು. ಹೋಮ ಕುಂಡ ನಿಧಾನಕ್ಕೆ ಕಾವೇರಿಸಿಕೊಳ್ಳುತ್ತಾ, ಧೂಮ ಬಿಡುತ್ತ, ನೆರೆತವರ ಕಂಗಳನ್ನು ಕೆಂಪಾಗಿಸಿ, ಕೋಣೆಯನ್ನೆಲ್ಲಾ ಆವರಿಸುತ್ತಿತ್ತು. ಉಸಿರು ಗಟ್ಟಿ, ಜೀವ ಹಿಂಡಿದಂತಾಗಿ ಕ್ಷೀಣ ಸ್ವರದಲ್ಲಿ ವಿಕಾರವಾಗಿ ಅರಚಿಕೊಂಡು ರಾಯರು ಕುಸಿದರು. ನೆರೆತ ಜನ ದೇಹದ ಬಳಿ ಸಾರಿ ನೋಡಿದಾಗ ರಾಯರ ಉಸಿರು ನಿಂತಿತ್ತು ಮತ್ತು ಹೋಮದ ಧೂಮ ಅವರ ಸಾವಿಗೆ ನೆಪ ಮಾತ್ರವಾಗಿತ್ತು.

13 comments:

  1. ಪಾಲಚಂದ್ರ..

    ಮನೆ ಕಟ್ಟುವದೇ ನನ್ನ ಕೆಲಸವಾದ್ದರಿಂದ..

    ನನಗೆ ಈ ಥರಹದ ಅನುಭವಗಳಾಗಿವೆ..

    ಬಹಳ ಬೇಸರ ಆಗುತ್ತದೆ..

    ವಯಸ್ಸಾದ ತಂದೆ ತಾಯಿಗಳಿಗೆ ..
    ಬೆಲೆ ಕೊಡದ ಮಕ್ಕಳು..
    ಬಹಳ ಇದ್ದಾರೆ .. ಇಲ್ಲಿ..

    ಚಂದದ ಬರಹಕ್ಕಾಗಿ

    ವಂದನೆಗಳು..

    ReplyDelete
  2. ಮನ ಮುಟ್ಟುವ ಕತೆ. ಆರ್ಥಿಕ ದಾರಿದ್ರ್ಯ ಮನುಷ್ಯನನ್ನು ಯಾವ ಸ್ಥಿತಿಗೆ ಇಳಿಸುತ್ತದೆ.
    ಹೆಂಡತಿಯೂ ಬಡತನದಿಂದ ಬಂದವಳೇ ಆದರೂ ಅವಳ ನಡವಳಿಕೆ ಹೇಗಿದೆ/ ಬಹುಶಃ ಇದು ವಾಸ್ತವಕ್ಕೆ ಹತ್ತಿರವಾದ ಕತೆ.

    ReplyDelete
  3. ಪಾಲಚಂದ್ರ ಒಂದು ತುಂಬಾ ಸುಂದರವಾದ ಮನಕ್ಕೆ ನೇರ ತಾಕುವ ಕತೆಯನ್ನು ಬರೆದಿದ್ದೀರಿ.....ಸಣ್ಣಕತೆಯಾದರೂ ಒಬ್ಬ ಮದ್ಯಮ ವರ್ಗದ ಹಿರಿಯನ ಬದುಕಿನ ಸತ್ಯವನ್ನು ಇಂಚಿಂಚು ಗಮನಿಸಿದಂತೆ ಬರೆದಿದ್ದೀರಿ....ನೀವು ಹೀಗೆ ಬರೆಯುತ್ತೀರುವುದು ನನಗೆ ಖುಷಿಯಾಗುತ್ತದೆ....

    ಮುಂದುವರಿಸಿ.....ಥ್ಯಾಂಕ್ಸ್....

    ReplyDelete
  4. hoooooo... man its really heart touching....
    really kannalli neer bantu....

    ReplyDelete
  5. ಮನಸ್ಸಿಗೆ ಹತ್ತಿರವಾಗುವ ಕಥೆ ಬರೆದಿದ್ದೀರ.
    ಧನ್ಯವಾದಗಳು

    ReplyDelete
  6. ಯಾರಿಗೂ ಬೇಡವಾದ ಜೀವವೊಂದರ ನೈಜ ಹಾಗು ಚಂದವಾದ ಕತೆ

    ReplyDelete
  7. story line predictable.. but good one..

    ReplyDelete
  8. ಪ್ರಕಾಶ್,
    >>ವಯಸ್ಸಾದ ತಂದೆ ತಾಯಿಗಳಿಗೆ ..ಬೆಲೆ ಕೊಡದ ಮಕ್ಕಳು..ಬಹಳ ಇದ್ದಾರೆ .. ಇಲ್ಲಿ..
    ನಿಮ್ಮ ಮಾತು ನಿಜ, ಕೇವಲ ದುಡ್ಡು ಮಾಡಿದ ಕೂಡಲೇ ತಮ್ಮ ಜೀವನ ಸಾರ್ಥಕ ಅಂದು ಕೊಳ್ಳುವವರೂ ಇದ್ದಾರೆ. ಹಾಗಂತ ದುಡ್ಡು ಮಾಡಬಾರದು ಅಂತ ಅಲ್ಲ, ಆದರೂ ನಾವು ಸಾಗಿ ಬಂದ ಹಾದಿ, ನಮ್ಮನ್ನು ಸಲಹಿದವರನ್ನು ನೆನಪಿನಲ್ಲಿಟ್ಟುಕೊಳ್ಳುವುದು ತೀರಾ ಅವಶ್ಯಕ.

    ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು, ನಿಮಗಾದ ಅನುಭವವನ್ನೂ ನಮ್ಮೊಂದಿಗೆ ಹಂಚಿಕೊಳ್ಳುವರೆಂಬ ನಿರೀಕ್ಷೆಯಲ್ಲಿ

    ಚಂದ್ರಕಾಂತ,
    >>ಹೆಂಡತಿಯೂ ಬಡತನದಿಂದ ಬಂದವಳೇ ಆದರೂ ಅವಳ ನಡವಳಿಕೆ ಹೇಗಿದೆ
    ಅವಳ ನಡವಳಿಕೆ ಬಹುಷಃ ಗಂಡನೇ ಕಾರಣವೇನೋ, ಸಂಪತ್ತಿಲ್ಲದಿದ್ದರೂ ಒಲುಮೆ, ಮಾತುಗಳಿಂದ ಅವಳನ್ನು ಸಂತೈಸಬಹುದಾಗಿತ್ತು.. ಇಬ್ಬರೂ ಅದನ್ನು ಮಾಡದೆ ಒಬ್ಬರಿಗೊಬ್ಬರು ದೂರವಾಗುತ್ತಾ ಸಾಗಿದರು..
    ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು

    ಶಿವು,
    ಪ್ರವಾಸ ಕಥನ ಬರಿಯೋಣ ಅಂತ ನಿಮ್ಮ ಹತ್ರ ಹೇಳಿ ಕಥೆ ಬರೆದದ್ದನ್ನ ನೋಡಿ ನಿಮಗೆ ಆಶ್ಚರ್ಯ ಆಯ್ತೋ ಏನೋ! ಏನೋ ಬರಿಯೋಕೆ ಹೊರ್ಟೆ ಈ ಕಥೆ ಬಂತು.
    ಎಂದಿನಂತೆಯೇ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    ಹರ್ಷ,
    ಕಣ್ಣಲ್ಲಿ ನೀರು ಬರ್ಬೇಕಾದ್ರೆ ಅದೆಷ್ಟು ಆಸ್ಥೆಯಿಂದ ನೀನು ಈ ಕಥೆ ಓದಿದೀಯ ಅಂತ ತಿಳಿಯುತ್ತೆ, ಪ್ರತಿಕ್ರಿಯೆಗೆ ವಂದನೆಗಳು

    ರವೀಶ್,
    "ಅನುಭವ ಮಂಟಪಕ್ಕೆ" ಸ್ವಾಗತ, ಕಥೆಯನ್ನು ಅನುಭವಿಸಿ ಓದಿದ್ದಕ್ಕೆ ವಂದನೆಗಳು

    ಬಾಲ,
    ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು

    ಅಶೋಕ್,
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

    --
    ಪಾಲ

    ReplyDelete
  9. baravaNige chennaagide. maga byaank ninda saala paDedu mane kaTTalu shuru maaDida mEle, kelsa kaLedukoLLuva tiruvu koDutteerEnO endu nireekshiside :) haagaagalilla..

    tappu oppugaLannu kanDu hiDiyuvudu swalpa kashTa annisuttade illi. raayaradE tappo? handatiyadO? maganadO ? raayara mattu raayara munida peeLigeya yOchaneya antaraddo.. tamma abhipraayavEnaadaru ideyaa??

    ReplyDelete
  10. ಗುರು,
    ರಿಸೇಶನ್ ಬಗ್ಗೆ ತಲೆಗೆ ಹೊಳ್ದೇ ಇಲ್ಲ :)

    ಈ ಕಥೆ ನಾನು ಬರ್ದಿದಲ್ಲ ಅಂತ ಯೋಚ್ನೆ ಮಾಡಿ ಓದಿದ್ರೆ, ಅಥವಾ ಹಾಗೆ ಯೋಚ್ನೆ ಮಾಡದೇ ಇದ್ರೂ ನನಗೂ ತಪ್ಪು ಯಾರದ್ದು ಅಂತ ಹೇಳೋಕೆ ಕಷ್ಟ. ಎಲ್ಲಾ ಅವರವರ ಲಿಮಿಟೇಶನ್, ಯಾರೂ ಅದನ್ನ ಮೀರಿ ಯೋಚನೆ ಮಾಡಿಲ್ಲ. ಅದಿಕ್ಕೆ ತಪ್ಪು ಯಾರದ್ದು ಅಂತ ತೋರ್ಸೋ ಬದ್ಲು ಆ ತೀರ್ಮಾನಾನ ಓದುಗರಿಗೇ ಬಿಟ್ಟಿದ್ದೇನೆ :) ಮಗ ಹೆಂಡತಿಯ ದೃಷ್ಟಿಯಲ್ಲಿ ತಪ್ಪು ರಾಯರದ್ದು, ರಾಯರ ದೃಷ್ಟಿಯಲ್ಲಿ ತಪ್ಪು ಮಡದಿ, ಮಗನದ್ದು.. ಎಷ್ಟಂದರೂ ಸರಿ, ತಪ್ಪು ರಿಲೇಟಿವ್ ಅಲ್ಲವೇ. ಒಳ್ಳೆ ಪ್ರತಿಕ್ರಿಯೆ ನೀಡಿದೀರ ತುಂಬಾ ಧನ್ಯವಾದ.

    --
    ಪಾಲ

    ReplyDelete
  11. howdu paala, neevu hELiddu nija.. tappu reletive!

    ReplyDelete
  12. ಬದುಕು, ಜನ್ರು ಯಾಕೆ ಹಿಂಗಿರ್ತಾರೆ ಅನ್ನೋದು ನನ್ನ ಪ್ರಶ್ನೆ? ಈ ಕಥೆ ಓದುತ್ತಿದ್ದಂತೆ ಮನಸ್ಸಲ್ಲಿ ನೋವು ಮಡುಗಟ್ಟಿತು.
    -ಚಿತ್ರಾ

    ReplyDelete
  13. ಈ ಕತೆ ಓದಿ ಕಣ್ಣಾಲಿ ತುಂಬಿ ಬರುತ್ತಿದೆ....ವಯಸ್ಸಾದ ತಂದೆಯನ್ನು ನಿಕ್ರಷ್ಟ ಮಾಡೊ ಆ ರೀತಿ ವರ್ತನೆಯ ಮಕ್ಕಳು ಇದ್ದು ಇಲ್ಲದ ಹಾಗೆ......

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)