

Kingdom: Animalia
Phylum: Arthropoda
Subphylum: Hexapoda
Class: Insecta
Subclass: Pterygota
Infraclass: Neoptera
Superorder: Endopterygota
Order: Diptera
Suborder: Brachycera
Infraorder: Asilomorpha
Superfamily: Empidoidea
Family: Dolichopodidae
ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!
ನೀವು ಯಾವುದೋ ಮ್ಯೂಸಿಯಂಗೋ, ದೇವಸ್ಥಾನಕ್ಕೋ ಹೋಗಿರುವಿರಿ. ಒಳಗಡೆ ಬೆಳಕು ಕಡಿಮೆ ಇದ್ದು, ಫ್ಲಾಷ್ ಉಪಯೋಗಿಸುವುದನ್ನು ನಿಷೇದಿಸಿರುತ್ತಾರೆ. ಫ್ಲಾಷ್ ಆಫ್ ಮಾಡಿ ಚಿತ್ರ ತೆಗೆದು, ಮನೆಗೆ ಬಂದು ಕಂಪ್ಯೂಟರಿನಲ್ಲಿ ನೋಡಿದರೆ ಎಲ್ಲವೂ ಅಸ್ಪಷ್ಟ! ಬೆಳಕು ಕಡಿಮೆಯಾದ್ದರಿಂದ, ಫ್ಲಾಷ್ ಕೂಡ ಬಳಸದಿದ್ದುದರಿಂದ ನಿಮ್ಮ ಕ್ಯಾಮಾರದ Shutter Speed ಕಡಿಮೆಯಾದುದ್ದೇ ಇದಕ್ಕೆ ಕಾರಣ. ಕ್ಯಾಮರಾ ಹಿಡಿದ ನಮ್ಮ ಕೈ ಇಷ್ಟೊಂದು ದೀರ್ಘಾವಧಿಯವರೆಗೆ ಒಂದುಚೂರೂ ಚಲಿಸದೆ ಇರುವುದು ಕಷ್ಟ. ಇಂತಹ ಸಂದರ್ಭದಲ್ಲಿ ಟ್ರೈಪಾಡ್ ಅಥವಾ ಸ್ಥಿರವಾದ ವಸ್ತುವಿನ ಮೇಲೆ ಕ್ಯಾಮರಾ ಇರಿಸಿ ಚಿತ್ರ ತೆಗೆಯಬಹುದು. ಒಂದುವೇಳೆ ಇವೆರಡೂ ಇಲ್ಲದಿದ್ದಲ್ಲಿ? ಇಂತಹ ಸಂದರ್ಭದಲ್ಲಿ ಕ್ಯಾಮರಾದ ISO ಜಾಸ್ತಿ ಮಾಡಬಹುದು. ISO ಜಾಸ್ತಿ ಮಾಡಿದಂತೆಲ್ಲಾ ಹೆಚ್ಚಿನ Shutter Speed ಮೂಲಕ ಚಿತ್ರ ತೆಗೆಯಬಹುದು. ಹಾಗಿದ್ದಲ್ಲಿ ಎಲ್ಲಾ ಸಮಯದಲ್ಲೂ ISO ಜಾಸ್ತಿ ಇರಿಸಿಕೊಳ್ಳಬಹುದಲ್ಲಾ? ಆದರೆ ISO ಜಾಸ್ತಿ ಮಾಡಿದಂತೆಲ್ಲ ನಿಮ್ಮ ಚಿತ್ರದ ಗುಣಮಟ್ಟ ಕುಸಿಯುತ್ತದೆ.
ನೀವು ಈ ಹಿಂದೆ ಅನಲಾಗ್ ಕ್ಯಾಮರಾ ಉಪಯೋಗಿಸಿದ್ದಲ್ಲಿ, ಫಿಲ್ಮ್ ಕೊಳ್ಳುವಾಗ ಅದರ ಡಬ್ಬಿಯಲ್ಲಿ ೧೦೦, ೨೦೦, ೪೦೦ ಅಥವಾ ೮೦೦ ಮುಂತಾದ ಸಂಖ್ಯೆಯನ್ನು ಗುರುತಿಸಿರಬಹುದು. ಈ ಸಂಖ್ಯೆ ಬೆಳಕಿಗೆ, ಫಿಲ್ಮಿನ ಸಂವೇದನೆಯನ್ನು ಸೂಚಿಸುತ್ತದೆ. ಅಂದರೆ ಈ ಸಂಖ್ಯೆಯ ಬೆಲೆ ಕಡಿಮೆಯಾದಂತೆಲ್ಲಾ ಫಿಲ್ಮ್ ಚಿತ್ರವನ್ನು ಸೆರೆಹಿಡಿಯಲು ಹೆಚ್ಚಿನ ಕಾಲವಧಿ ತೆಗೆದುಕೊಳ್ಳುತ್ತದೆ. ಇದನ್ನೇ ಡಿಜಿಟಲ್ ಕ್ಯಾಮರಾಕ್ಕೆ ಅನ್ವಯಿಸುವುದಾದರೆ, ISO ಸೆನ್ಸರ್ನ್ ಸಂವೇದನೆ ಎನ್ನಬಹುದು. ISOವನ್ನು ೧೦೦, ೨೦೦, ೪೦೦, ೮೦೦, ೧೬೦೦ ಹೀಗೆ ಮೊದಲಾದ ಸಂಖ್ಯೆಯಿಂದ ಗುರುತಿಸುತ್ತಾರೆ. ISO ಹೆಚ್ಚು ಮಾಡಿದಂತೆಲ್ಲಾ ಹೆಚ್ಚಿನ Shutter Speed ಅಥವಾ ಕಡಿಮೆ Aperture ಮೂಲಕ ಚಿತ್ರ ತೆಗೆಯಲು ಅನುಕೂಲ.
ಈ ಮೇಲಿನ ಎರಡು ಚಿತ್ರ ಒಂದೇ ಕ್ಯಾಮಾರಾದಿಂದ ತೆಗೆದಿರುವುದು. ಮೊದಲನೆಯದ್ದು ISO ೮೦ರಲ್ಲಿ (ನನ್ನ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆ) ಹಾಗೂ ಎರಡನೆಯದ್ದು ISO ೧೦೦೦ದಲ್ಲಿ (ನನ್ನ ಕ್ಯಾಮರಾ ಒದಗಿಸುವ ಜಾಸ್ತಿ ಸಂಖ್ಯೆ) ತೆಗೆದದ್ದು. ಸುಲಭವಾಗಿ ಗುರುತಿಸುವಂತೆ ಮೊದಲನೆಯದ್ದಕ್ಕೆ ಹೋಲಿಸಿದಲ್ಲಿ ಎರಡನೆ ಚಿತ್ರದಲ್ಲಿ ಕಪ್ಪು ಚುಕ್ಕಿಗಳು (noise) ಜಾಸ್ತಿ ಇದೆ. ಕಪ್ಪು ಚುಕ್ಕಿಗಳು ಎರಡನೆಯ ಚಿತ್ರದ ಮಾಸಲು ಬಣ್ಣಕ್ಕೆ ಕಾರಣ. ಆದ್ದರಿಂದ ಸಾಮಾನ್ಯವಾಗಿ ಇದನ್ನು ನಮ್ಮ ಕ್ಯಾಮರಾ ಒದಗಿಸುವ ಕಡಿಮೆ ಸಂಖ್ಯೆಗೆ ಹೊಂದಿಸಿಟ್ಟು ಉತ್ತಮ ಗುಣಮಟ್ಟದ ಚಿತ್ರವನ್ನು ನಿರೀಕ್ಷಿಸಬಹುದು. ಬೆಳಕು ಕಡಿಮೆಯಿದ್ದು ಫ್ಲಾಷ್ ಉಪಯೋಗಿಸಲು ಅವಕಾಶ ಇರದಿದ್ದಲ್ಲಿ ಅಥವಾ ಇಷ್ಟವಿರದಿದ್ದಲ್ಲಿ ISO ಜಾಸ್ತಿ ಮಾಡುತ್ತಾ ಹೋಗಬಹುದು.
ಜಾಸ್ತಿ ISO ಉಂಟುಮಾಡುವ ಈ ಕಪ್ಪು ಚುಕ್ಕಿಗಳನ್ನು, ವಿಷಯಕ್ಕೆ, ಮನೋಭಾವನೆಗೆ ತಕ್ಕಂತೆ ನಿಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದು. ಕಪ್ಪು ಬಿಳುಪು ಮತ್ತು ಹೆಚ್ಚಿನ ISO ಬಳಸಿ ತೆಗೆದ ಈ ಚಿತ್ರ, ವ್ಯಕ್ತಿಯ ಕಣ್ಣಿನ ಸುತ್ತ ಇರುವ ನೆರಿಗೆಗೆ ಪೂರಕವಾಗಿ ಒಂದು ರೀತಿಯ ಹಳೇಯ ಭಾವನೆ ಕೊಡುತ್ತದೆ.
ನನ್ನ ಮಿತ್ರನೊಬ್ಬ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ, ಆದ್ದರಿಂದ ಅವನ್ನು ತಿನ್ನುವುದು ಏನೂ ಅಪರಾಧವಲ್ಲ. ಮಾಂಸಾಹಾರ ಪ್ರಾಣಿ ಹಿಂಸೆ ಆದ್ರೆ ಸಸ್ಯಾಹಾರ ಸಸ್ಯ ಹಿಂಸೆ ಅಲ್ವೆ, ಅದಕ್ಕೆ ಕೂಡ ಜೀವ ಇರುತ್ತೆ ಅಂತ ಜಗದೀಶಚಂದ್ರ ಭೋಸರು ತೋರಿಸಿಕೊಟ್ಟಿಲ್ಲವೇ" ಎಂದು ನಾನ್ ವೆಜ್ ಹೋಟೆಲ್ನಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ನನ್ನನ್ನು ಪ್ರಶ್ನಿಸಿದ. ನಾನೇನೂ "ನಾನು ಮಾಂಸಾಹಾರಿ ಅಲ್ಲ, ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದೀನಿ" ಅಂತ ಅವನ ಬಳಿ ಹೇಳಿಕೊಂಡಿರಲಿಲ್ಲ. ಆದರೂ ನಾನು ತಿನ್ನುತ್ತಾ ಇರೋ ಚಿತ್ರಾನ್ನ ಅವನಿಗೆ ಆ ರೀತಿ ಹೇಳ್ತೋ ಎನೋ. ಹಿಂದಿನಿಂದಲೂ ಕೇಳುತ್ತಾ ಬರುತ್ತಿದ್ದ, ಮಾನವ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ ಎಂಬುದನ್ನು ಕಣ್ಮುಚ್ಚಿ ಒಪ್ಪಿಕೊಂಡ ನನಗೆ ಇವನು ಹೇಳಿದ "ದೇವರು ಈ ಪ್ರಪಂಚದ ಸಕಲ ಜೀವಿಗಳನ್ನು ಮನುಷ್ಯನಿಗಾಗಿಯೇ ಮಾಡಿದ್ದಾನೆ" ಎಂಬ ಮಾತೂ ಸರಿಯಾಗಿ ಕಾಣಿಸಿತು. ನಂತರ ಆ ವಿಷಯದ ಮೇಲೆ ಮಂಥನ ನಡೆಸಿದಾಗ ಕಂಡುಕೊಂಡ ಸತ್ಯದ ಕೆಲವು ತುಣುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ.
ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕಾಕಾರದ ಒಂದು ಆಕೃತಿ, ಮಧ್ಯದಲ್ಲಿ ತೆರೆದ ಬಾಗಿಲು, ಅದರ ಅಕ್ಕ ಪಕ್ಕದಲ್ಲಿ ಕಿಟಕಿ, ಅದರ ಸರಳು, ಹೆಂಚಿನದ್ದೊಂದು ಸೂರು, ಎರಡು ಮೆಟ್ಟಿಲು ನನ್ನ ಮನೆ ಇಲ್ಲಿಗೆ ಸಂಪೂರ್ಣ. ಆದರೆ ಇದೇ ಚಿತ್ರವನ್ನು ಎಷ್ಟು ಬಾರಿ ಬಿಡಿಸುವುದು, ಮನೆಯ ಪಕ್ಕದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆನ್ನ. ಆದರೆ ಮಧ್ಯದಲ್ಲಿ ಮನೆ ಬಿಡಿಸಿದರೆ ನದಿಗೆ ಜಾಗ ಎಲ್ಲಿ? ಮನೆಯನ್ನು ಕೊಂಚ ಬಲಕ್ಕೆ ಸರಿಸಿದರೆ ಪಕ್ಕದಲ್ಲೊಂದು ನದಿ ಬಿಡಿಸಬಹುದು. ಬರೀ ನದಿ ಇದ್ದರೆ ಸಾಕೇ,ಹಿನ್ನೆಲೆಯಲ್ಲಿ ಗುಡ್ಡ ಬೆಟ್ಟ ಇದ್ದರೆ? ಮತ್ತೆ ಜಾಗದ ಅಭಾವ, ಮನೆಯನ್ನು ಸ್ವಲ್ಪ ಕೆಳಕ್ಕೆ ತಂದು, ಹಿನ್ನೆಲೆಯಲ್ಲಿ ಗುಡ್ಡ ಬರೆದು, ಪಕ್ಕದಲ್ಲಿ ಅಂಕುಡೊಂಕಾಗಿ ಹರಿಯುವ ನದಿಯ ಚಿತ್ರ ಬರೆದರೆ? ಇವನ್ನೆಲ್ಲಾ ಸೇರಿಸಿ ಚಿತ್ರ ಬರೆದಾಗ ಮಧ್ಯದಲ್ಲಿ ಒಂಟಿಯಾಗಿ ಕೂತ ಹಳೇಯ ಚಿತ್ರಕ್ಕಿಂತ, ಇದು ಚೆನ್ನಾಗಿ ಕಾಣಿಸಿತು.
ಕಾರಣ, ನನಗೆ ತಿಳಿಯದಂತೆಯೇ ನಾನಿಲ್ಲಿ ಚಿತ್ರ ಸಂಯೋಜನೆಯ ಒಂದು ನಿಯಮವನ್ನು ಪಾಲಿಸಿದ್ದಕ್ಕೆ ಮತ್ತು ಮೂಲ ವಿಷಯಕ್ಕೆ ಪೂರಕವಾದ ಇನ್ನಿತರ ವಿಷಯವನ್ನು ಬಳಸಿದ್ದರಿಂದ. ಈ ನಿಯಮದಂತೆ ಚಿತ್ರವನ್ನು ೨ ಅಡ್ಡ ಗೆರೆ, ೨ ಉದ್ದ ಗೆರೆ ಎಳೆದು ಸರಿಯಾದ ೯ ಭಾಗ ಮಾಡಿದರೆ, ಸಿಗುವ ಗೆರೆಗಳೊಂದಿಗೆ ಅಥವಾ ಅದು ಕೂಡುವ ಸ್ಥಳದಲ್ಲಿ ನಮ್ಮ ವಿಷಯವನ್ನು ಇರಿಸಬೇಕು. ಚಿತ್ರ ಪರಿಣತರ ಸಂಶೋಧನೆಯಿಂದ ಕಂಡು ಬಂದ ವಿಷಯವೇನೆಂದರೆ ಚಿತ್ರವನ್ನು ನೋಡುವವರ ದೃಷ್ಟಿ ಸ್ವಾಭಾವಿಕವಾಗಿ ಈ ೪ ಬಿಂದುವಿನ ಮೇಲೆ ಬೀಳುವುದು. ಆದ್ದರಿಂದ ನಮ್ಮ ಮೂಲ ವಿಷಯವನ್ನು ಫ್ರೇಮಿನ ಮಧ್ಯದಲ್ಲಿಡದೆ ನಾಲ್ಕು ಬಿಂದುವಿನಲ್ಲಿ ಒಂದು ಕಡೆ ಇರಿಸಬೇಕು, ಆಗ ವೀಕ್ಷಕರ ಮೇಲೆ ನಮ್ಮ ಚಿತ್ರ ಹೆಚ್ಚಿನ ಪರಿಣಾಮ ಬೀರುತ್ತದೆ.
ಈಗ ಹಿಂದೆ ಬರೆದ ಚಿತ್ರವನ್ನು ಇದೇ ನಿಯಮದಂತೆ ೯ ಪಾಲು ಮಾಡಿದರೆ, ಮನೆಯು ಕೆಳ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಸಂಧಿಸುವಲ್ಲಿದ್ದು, ನದಿ ಮೇಲಿನ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಕೂಡುವಲ್ಲಿ ಆರಂಭವಾಗಿ ಕೆಳಗಿನ ಅಡ್ಡ ರೇಖೆ ಮತ್ತು ಎಡ ಉದ್ದ ರೇಖೆ ಕೂಡುವಲ್ಲಿ ಹಾದು ಹೋಗುತ್ತದೆ. ಗುಡ್ಡದ ಶ್ರೇಣಿ ಮೇಲಿನ ಅಡ್ಡ ರೇಖೆಯೊಂದಿಗೆ ಸಾಗುತ್ತದೆ. ಈ ಕೆಳಗಿನ ಚಿತ್ರದಂತೆ
ನಾನು ಹೆಚ್ಚಾಗಿ ಒಂಟಿಯಾಗಿ ಪ್ರಯಾಣ ಮಾಡುವುದು ಜಾಸ್ತಿ. ಪಯಣಿಸುವಾಗಲೆಲ್ಲಾ ಈ ಬಾರಿಯಾದರೂ ಒಂದು ಚೆಲುವೆ ಬಳಿ ಕೂರಬಾರದೇ ಎಂದು ಕೊಂಡೇ ಹೋಗುತ್ತೇನೆ. ಕಳೆದ ತಿಂಗಳ ಪ್ರಯಾಣದಲ್ಲಿ ನನ್ನ ಅಭಿಲಾಷೆ ನಿಜವಾಯಿತು. ಆಕೆ, ಅದರಲ್ಲೂ ಆಕೆಯ ಕಂಗಳು ಎಷ್ಟು ಸುಂದರವಾಗಿತ್ತೆಂದರೆ ಚೀಲದಲ್ಲಿ ಹುದುಗಿದ್ದ ನನ್ನ ಕ್ಯಾಮರಾ ಹೊರಗೆ ತೆಗೆದು ಆಕೆಯ ಚಿತ್ರವನ್ನು ಇದೇ ನಿಯಮವನ್ನು ಗಮನದಲ್ಲಿರಿಸಿಕೊಂಡು ತೆಗೆದಾಗ ಮೂಡಿದ್ದು ಈ ಚಿತ್ರ.ಇಲ್ಲಿ ಆಕೆಯ ಎಡ ಕಣ್ಣು ಫ್ರೇಮಿನ ಬಲ ಮೇಲ್ತುದಿಯ ಬಿಂದುವಿನಲ್ಲಿ, ಬಲಗಣ್ಣು ಎಡ ಉದ್ದ ರೇಖೆಯಲ್ಲಿ ಹಾಗೂ ಬಾಯಿ ಬಲಗಡೆಯ ಕೆಳ ಬಿಂದುವಿನಲ್ಲಿದೆ.
ಪ್ರಾಣಿಯೋ, ಹಕ್ಕಿಯೋ, ಕೀಟವೋ, ನದಿಯೋ,ಗುಡ್ಡ ಬೆಟ್ಟವೋ, ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮುಖ ಎಂಬುದೊಂದಿರುತ್ತದೆ. ಸಾಮಾನ್ಯವಾಗಿ ಅದರ ಮುಖವನ್ನು ಅವಲಂಭಿಸಿ ಈ ನಾಲ್ಕು ಬಿಂದುವಿನಲ್ಲಿ ಅದಕ್ಕೆ ಸೂಕ್ತವಾದ ಸ್ಥಳದಲ್ಲಿ ವಿಷಯವನ್ನು ಇರಿಸಬಹುದು. ಮುಖ ಯಾವ ದಿಕ್ಕಿನಲ್ಲಿ ಇರುತ್ತದೆಯೋ ಆ ದಿಕ್ಕಿನಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು. ಈ ಕೆಳಗಿನ ಚಿತ್ರದಲ್ಲಿ ಕೀಟದ ಮುಖ ಎಡಗಡೆಗೆ ನೋಡುತ್ತಿದ್ದು, ಕೊಂಚ ಕೆಳಗೆ ಬಾಗಿದ್ದರಿಂದ ಇದನ್ನು ಚಿತ್ರದಲ್ಲಿ ಬಲಗಡೆಯ ಮೇಲ್ತುದಿಯಲ್ಲಿ ಇರಿಸಿದ್ದೇನೆ. ಅಂತೆಯೇ ಹಾರಲು ಹೊರಟ ಹಕ್ಕಿಯ ಮುಖ ಮೇಲಕ್ಕಿರುವುದರಿಂದ ಅದರ ಮುಖದ ದಿಕ್ಕನ್ನು ಅನುಸರಿಸಿ ಅದನ್ನು ಕೆಳಗಡೆಯ ಎಡ ಅಥವಾ ಬಲ ಬಿಂದುವಿನಲ್ಲಿ ಇರಿಸಬಹುದು.
ಅಂತೆಯೇ ಲ್ಯಾಂಡ್ ಸ್ಕೇಪುಗಳಲ್ಲಿ ಆಕಾಶ ಮತ್ತು ಭೂಮಿಯ ಎಲ್ಲೆಯನ್ನು ನಿರ್ಧರಿಸಬಹುದು. ನಿಮ್ಮ ವಿಷಯ ಸುಂದರವಾದ ಮರುಭೂಮಿಯೋ, ಕಾಡೋ, ನದಿಯೋ, ಸಮುದ್ರವೋ ಆಗಿದ್ದಲ್ಲಿ ಅದನ್ನು ಫ್ರೇಮಿನ ೨/೩ ರಷ್ಟರಲ್ಲಿ ಚಿತ್ರಿಸಿ ಉಳಿದ ೧/೩ ರಷ್ಟನ್ನು ಆಕಾಶಕ್ಕೆ ಮೀಸಲಾಗಿಡಬಹುದು. ಈ ಚಿತ್ರದಲ್ಲಿ ಮರದ ರೆಂಬೆ ಮತ್ತೆ ನಡುವಿನಿಂದ ತೂರಿ ಬರುತ್ತಿರುವ ಸೂರ್ಯ ನನ್ನ ವಿಷಯವಾದ್ದರಿಂದ ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಸಮುದ್ರವನ್ನು ಬರೀ ೧/೩ರಷ್ಟು ಇರುವಂತೆ ಸಂಯೋಜಿಸಿದ್ದೇನೆ.ಇಲ್ಲಿಯೂ ಕೂಡ ಸೂರ್ಯನನ್ನು ನಿಯಮಕ್ಕೆ ಅನುಗುಣವಾಗಿ ಕೂರಿಸಿರುವುದನ್ನು ಗಮನಿಸಬಹುದು.
ಸಾಮಾನ್ಯವಾಗಿ ಮೇಲೆ ಹೇಳಿದಂತೆ ಸಂಯೋಜಿಸಿದರೆ ನಿಮ್ಮ ಚಿತ್ರ ಚೆನ್ನಾಗಿ ಕಾಣಿಸುವುದಾದರೂ ಇದನ್ನು ಪಾಲಿಸಿದರೆ ಮಾತ್ರ ನಿಮ್ಮ ಚಿತ್ರ ಚೆನ್ನಾಗಿದೆ ಇಲ್ಲವಾದಲ್ಲಿ ಇಲ್ಲ ಎಂದೇನೂ ಇಲ್ಲ. ವಿಷಯಕ್ಕೆ ತಕ್ಕಂತೆ ಈ ನಿಯಮವನ್ನು ಮುರಿದು ನಿಮ್ಮ ಪ್ರತಿಭೆಯನ್ನು ತೋರಬಹುದು.
ಸೂಚನೆ: ಆಟೋಫೋಕಸ್ ಉಪಯೋಗಿಸುವವರಾದಲ್ಲಿ, ಕ್ಯಾಮರಾ ಸಾಮಾನ್ಯವಾಗಿ ಮಧ್ಯದ ಸ್ಥಳವನ್ನು ಫೋಕಸ್ ಮಾಡುವುದರಿಂದ ಈ ನಾಲ್ಕು ಬಿಂದುವಿನಲ್ಲೊಂದರಲ್ಲಿ ಕೂರಿಸ ಹೊರಟ ನಿಮ್ಮ ವಿಷಯ ಅಸ್ಪಷ್ಟವಾಗಿ ಮೂಡಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಿಷಯವನ್ನು ಮಧ್ಯದಲ್ಲಿರಿಸಿ ಕ್ಯಾಮರಾದ ಬಟನ್ನನ್ನು ಅರ್ಧ ಅಮುಕಿ,ಹಾಗೆಯೇ ಹಿಡಿದು ಕೊಂಡು ಮರು ಸಂಯೋಜಿಸಿ ಚಿತ್ರ ತೆಗೆಯಬಹುದು.