ನೀವು "Mask of Zorro" ಸಿನೇಮಾ ನೋಡಿದ್ದರೆ, ಅದ್ರಲ್ಲಿ ಹೀರೋ ತನ್ನ ಕೈವಾಡವಿದ್ದಲ್ಲೆಲ್ಲಾ "Z" ಎಂಬ ಚಿಹ್ನೆಯ ಕತ್ಯಾಕ್ಷರ (ಹಸ್ತದಿಂದ ಹಾಕುವ ಅಕ್ಷರ ಹಸ್ತಾಕ್ಷರ, ಹಾಗೆಯೇ ಕತ್ತಿಯಿಂದ ಹಾಕುವುದು ಕತ್ಯಾಕ್ಷರ) ಹಾಕುವುದನ್ನು ನೋಡಿರುತ್ತೀರಿ. ನಾವೂ ಕೂಡ ಯಾವುದಾದರೂ ಒಪ್ಪಂದ ಪತ್ರಕ್ಕೆ ಆಗಾಗ ಹಸ್ತಾಕ್ಷರ (ಸಹಿ) ಹಾಕಬೇಕಾಗಿ ಬರುತ್ತದೆ. ಈ ಹಸ್ತಾಕ್ಷರವೇ ನಮ್ಮ ಒಪ್ಪಂದಕ್ಕೆ ಸಾಕ್ಷಿ, ನಮ್ಮ ವ್ಯಕ್ತಿತ್ವಕ್ಕೆ ಗುರುತು.
ಇದೇ ರೀತಿ ಈ "ಹಸ್ತಾಕ್ಷರಿ ಜೇಡ (signature spider)" ತನ್ನ ಬಲೆಯಲ್ಲಿ ನಾಲ್ಕು ಕಡೆ zig-zag ಹಸ್ತಾಕ್ಷರ ಹಾಕುತ್ತದೆ. ಬಲೆಯ ಈ ತರದ ರಚನೆ ಒಂದು ರೀತಿ ಅಲಂಕಾರದಂತೆ(stabilimentum). ತಮ್ಮ identityಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇದು ಸಹಾಯಕ. ನೆಲಮಟ್ಟದಿಂದ ಒಂದು ಮೀಟರೊಳಗೆ ಇದು ಬಲೆ ನೇಯುವುದರಿಂದ, ಇತರ ದೊಡ್ಡ ಪ್ರಾಣಿಗಳು ಸುಳಿದಾಡುವಾಗ, ಅದು ಗುರುತಿಸಿ, ಬಲೆಯನ್ನು ಹಾದು ಹೋಗದಂತೆ ಮಾಡಲು ಈ ಅಲಂಕಾರ. ಈ ಅಲಂಕಾರವಿಲ್ಲದಿದ್ದರೆ ಬರೀ ಕಣ್ಣಿಗೆ ಸೂಕ್ಷವಾಗಿ ಗಮನಿಸಿದರಷ್ಟೇ ಇದರ ಬಲೆ ಕಾಣಿಸುವುದು.
ದೊಡ್ಡ ಪ್ರಾಣಿಗಳೇನೋ ಇದರ ಹಸ್ತಾಕ್ಷರ ನೋಡಿ, ಬಲೆಯ ಬಳಿ ಸುಳಿಯುವುದಿಲ್ಲ. ಅಂತೆಯೇ ಈ ಜೇಡದ ಆಹಾರವಾದ ಇತರ ಕೀಟಗಳೂ ಈ ಹಸ್ತಾಕ್ಷರ ನೋಡಿ ಅದರ ಬಳಿ ಸುಳಿಯದಿದ್ದರೆ ಅವಕ್ಕೆ ಉಪವಾಸವೇ ಸರಿ. ಆಗ ಈ ಬಲೆಯ ಅಲಂಕಾರ "ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ" ಎಂಬಂತೆಯೇ. ಅದಕ್ಕಾಗಿ ಈ ಜೇಡ ಅಷ್ಟಪಾದಿಯಾದರೂ, ಕಾಲನ್ನು ಜೋಡಿ ಜೋಡಿಯಾಗಿರಿಸಿಕೊಂಡು ಚತುಷ್ಪಾದಿಯಂತೆ, ತಾನು ಜೇಡ ಅಲ್ಲ ಎನ್ನುವ ನಿಲುವಿನಲ್ಲಿರುತ್ತದೆ. ಈ ರೀತಿ ತನ್ನ ಕಾಲನ್ನು ಜೋಡಿ ಜೋಡಿಯಾಗಿರಿಸಿ ತಾನು ನೇಯ್ದ ಬಲೆಯ ನಾಲ್ಕು ಹಸ್ತಾಕ್ಷರದಂತಹ ರಚನೆಯಮೇಲೆ ಇಡುವುದರಿಂದ ಇನ್ನೊಂದು ಉಪಯೋಗವೂ ಇದೆ. ಕಾಲನ್ನು ಜೋಡಿಸಿದಾಗ ಕಾಲಿನ ರೋಮಗಳು ಬೆಸದು, ಹಸ್ತಾಕ್ಷರದ ಬಿಳುಪಿನ ರಚನೆಯೊಂದಿಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವಂತಹ ಸಾಧನವಾಗುತ್ತದೆ. ಕೀಟಗಳು ತೀಕ್ಷ ಬೆಳಕು ಮತ್ತು ಗಾಢವಾದ ಅದರ ಮೈಬಣ್ಣದಿಂದ ಹೂವೆಂದು ತಿಳಿದು ಆಕರ್ಷಿತವಾಗುವುದರಿಂದ ಇದರ ಬಲೆಗೆ ಸುಲಭವಾಗಿ ಬೀಳುತ್ತವೆ.
ತನ್ನ ಹೆಚ್ಚಿನ ಇತರ ಜೇಡಗಳಂತೆಯೇ ಈ ಪ್ರಭೇದದಲ್ಲೂ ಹೆಣ್ಣು ಗಂಡಿಗಿಂತ ದೊಡ್ಡದು. ಅಲ್ಲದೇ ಜೊತೆಗೂಡಿದ ನಂತರ ಜೊತೆಗಾರನನ್ನು ಕೊಲ್ಲುವುದೂ ಉಂಟು. ಜೇಡದ ಜೀವನದಂತೆ ನಮ್ಮದೂ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂನ್ಯಾಸಿಗಳಾಗುತ್ತಿದ್ದರೇನೋ! ಗಂಡು ಜೇಡ, ಹೆಣ್ಣು ಜೇಡದ ಬಲೆಯ ಬಳಿಯಲ್ಲೇ ಬಲೆ ನೇಯ್ದುಕೊಂಡಿರುತ್ತದೆ. ಹೆಣ್ಣು ಜೇಡ ಮುಂದೆ ಮೊಟ್ಟೆಯಿಡುವಾಗ ಈ ಬಲೆಯನ್ನು ಚೀಲದಂತೆ ಮಾಡಿ ಅದರಲ್ಲಿ ಮೊಟ್ಟೆಯನ್ನು ತುಂಬಿಸುತ್ತದೆ. ಈ ಚೀಲದಲ್ಲಿ ಸುಮಾರು ೪೦೦-೧೪೦೦ ಮೊಟ್ಟೆಗಳು ಹಿಡಿಯುತ್ತದೆ. ಮೊಟ್ಟೆಯಿಂದ ಹೊರಬಂದ ಪುಟ್ಟ ಜೇಡಗಳು ಒಂದಿನ್ನೊಂದನ್ನು ತಿಂದುಕೊಂಡಿದ್ದು, ಉಳಿದವು ಆ ಚೀಲ ಹರಿದು ಹೊರಬರುವ ಸಾಮರ್ಥ್ಯ ಹೊಂದಿದ ಮೇಲೆ ಸ್ವತಂತ್ರವಾಗಿ ಜೀವಿಸುತ್ತದೆ.
ಆಕರ:
The Signature Spider | Scienceray