ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ ಉಪಯೋಗಕ್ಕೆ ಬರಬಹುದು ಎಂದು ಯೋಚಿಸಿದವರು ಕೆಲವರಷ್ಟೇ.
ಇಂತಹ ಒಂದು ಉಪಯೋಗವನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಇತ್ತೀಚೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆದ ತನ್ನ ೧೦ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುಸ್ತಕ ಬಿಡುಗಡೆಗೆ ಬಳಸಿಕೊಂಡಿತು. ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡ ಮುತ್ತಿನ ರೀತಿಯಲ್ಲಿ, ಕೆಸುವಿನ ಎರಡು ಎಲೆಯ ಮಧ್ಯೆ ಪುಸ್ತಕವನ್ನು ಬಿಡುಗಡೆಗೂ ಮೊದಲು ಇಡಲಾಗಿತ್ತು. ವೇದಿಕೆಯ ಮೇಲಿದ್ದ ಗಣ್ಯರು ಎಲೆಯೊಳಗೆ ಹುದುಗಿದ್ದ ಪುಸ್ತಕವನ್ನು ಹೊರತೆಗೆಯುವುದರ ಮೂಲಕ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಹೊಸಪಾಳ್ಯರ '
ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' ಹಾಗೂ ಅನುಸೂಯ ಶರ್ಮಾರ '
ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ'ಬಿಡುಗಡೆಗೊಂಡ ಕೃತಿಗಳು.
ಪುಕ್ಕಟೆಯಾಗಿ ಮನೆಯ ಹಿತ್ತಲಿನಲ್ಲಿ ಸಿಗುವ, ಉಪಯೋಗದ ನಂತರ ಪರಿಸರದಲ್ಲಿ ಸುಲಭವಾಗಿ ಬೆರೆಯುವ ಕೆಸುವಿನೆಲೆಯ ಉಪಯೋಗದ ಈ ಹೊಸ ಕಲ್ಪನೆ ಮುಂದಿನ ಪ್ರಯತ್ನಗಳಿಗೆ ಸ್ಫೂರ್ತಿಯಾಗಬಲ್ಲದು.