Thursday, December 04, 2008

ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ

ಚಿಕ್ಕಂದಿನಲ್ಲಿ ಸಾಮಾನ್ಯವಾಗಿ ಚಿತ್ರ ಬಿಡಿಸದವರ ಸಂಖ್ಯೆ ತೀರಾ ಕಡಿಮೆ. ಬಾಲಮಂಗಳದಲ್ಲಿ ಬರುತ್ತಿದ್ದ ಪಾತ್ರಗಳು ನನ್ನ ನೆಚ್ಚಿನ ವಿಷಯವಾಗಿದ್ದರೂ, ನನ್ನ ಕಲ್ಪನೆಯ ಪ್ರೇರಿತ ಚಿತ್ರ ಸಾಮಾನ್ಯವಾಗಿ ಮನೆಯದ್ದಾಗಿತ್ತು. ಖಾಲಿ ಹಾಳೆಯ ಮಧ್ಯದಲ್ಲಿ ಚೌಕಾಕಾರದ ಒಂದು ಆಕೃತಿ, ಮಧ್ಯದಲ್ಲಿ ತೆರೆದ ಬಾಗಿಲು, ಅದರ ಅಕ್ಕ ಪಕ್ಕದಲ್ಲಿ ಕಿಟಕಿ, ಅದರ ಸರಳು, ಹೆಂಚಿನದ್ದೊಂದು ಸೂರು, ಎರಡು ಮೆಟ್ಟಿಲು ನನ್ನ ಮನೆ ಇಲ್ಲಿಗೆ ಸಂಪೂರ್ಣ. ಆದರೆ ಇದೇ ಚಿತ್ರವನ್ನು ಎಷ್ಟು ಬಾರಿ ಬಿಡಿಸುವುದು, ಮನೆಯ ಪಕ್ಕದಲ್ಲಿ ನದಿಯೊಂದು ಇದ್ದರೆ ಎಷ್ಟು ಚೆನ್ನ. ಆದರೆ ಮಧ್ಯದಲ್ಲಿ ಮನೆ ಬಿಡಿಸಿದರೆ ನದಿಗೆ ಜಾಗ ಎಲ್ಲಿ? ಮನೆಯನ್ನು ಕೊಂಚ ಬಲಕ್ಕೆ ಸರಿಸಿದರೆ ಪಕ್ಕದಲ್ಲೊಂದು ನದಿ ಬಿಡಿಸಬಹುದು. ಬರೀ ನದಿ ಇದ್ದರೆ ಸಾಕೇ,ಹಿನ್ನೆಲೆಯಲ್ಲಿ ಗುಡ್ಡ ಬೆಟ್ಟ ಇದ್ದರೆ? ಮತ್ತೆ ಜಾಗದ ಅಭಾವ, ಮನೆಯನ್ನು ಸ್ವಲ್ಪ ಕೆಳಕ್ಕೆ ತಂದು, ಹಿನ್ನೆಲೆಯಲ್ಲಿ ಗುಡ್ಡ ಬರೆದು, ಪಕ್ಕದಲ್ಲಿ ಅಂಕುಡೊಂಕಾಗಿ ಹರಿಯುವ ನದಿಯ ಚಿತ್ರ ಬರೆದರೆ? ಇವನ್ನೆಲ್ಲಾ ಸೇರಿಸಿ ಚಿತ್ರ ಬರೆದಾಗ ಮಧ್ಯದಲ್ಲಿ ಒಂಟಿಯಾಗಿ ಕೂತ ಹಳೇಯ ಚಿತ್ರಕ್ಕಿಂತ, ಇದು ಚೆನ್ನಾಗಿ ಕಾಣಿಸಿತು.



ಕಾರಣ, ನನಗೆ ತಿಳಿಯದಂತೆಯೇ ನಾನಿಲ್ಲಿ ಚಿತ್ರ ಸಂಯೋಜನೆಯ ಒಂದು ನಿಯಮವನ್ನು ಪಾಲಿಸಿದ್ದಕ್ಕೆ ಮತ್ತು ಮೂಲ ವಿಷಯಕ್ಕೆ ಪೂರಕವಾದ ಇನ್ನಿತರ ವಿಷಯವನ್ನು ಬಳಸಿದ್ದರಿಂದ. ಈ ನಿಯಮದಂತೆ ಚಿತ್ರವನ್ನು ೨ ಅಡ್ಡ ಗೆರೆ, ೨ ಉದ್ದ ಗೆರೆ ಎಳೆದು ಸರಿಯಾದ ೯ ಭಾಗ ಮಾಡಿದರೆ, ಸಿಗುವ ಗೆರೆಗಳೊಂದಿಗೆ ಅಥವಾ ಅದು ಕೂಡುವ ಸ್ಥಳದಲ್ಲಿ ನಮ್ಮ ವಿಷಯವನ್ನು ಇರಿಸಬೇಕು. ಚಿತ್ರ ಪರಿಣತರ ಸಂಶೋಧನೆಯಿಂದ ಕಂಡು ಬಂದ ವಿಷಯವೇನೆಂದರೆ ಚಿತ್ರವನ್ನು ನೋಡುವವರ ದೃಷ್ಟಿ ಸ್ವಾಭಾವಿಕವಾಗಿ ಈ ೪ ಬಿಂದುವಿನ ಮೇಲೆ ಬೀಳುವುದು. ಆದ್ದರಿಂದ ನಮ್ಮ ಮೂಲ ವಿಷಯವನ್ನು ಫ್ರೇಮಿನ ಮಧ್ಯದಲ್ಲಿಡದೆ ನಾಲ್ಕು ಬಿಂದುವಿನಲ್ಲಿ ಒಂದು ಕಡೆ ಇರಿಸಬೇಕು, ಆಗ ವೀಕ್ಷಕರ ಮೇಲೆ ನಮ್ಮ ಚಿತ್ರ ಹೆಚ್ಚಿನ ಪರಿಣಾಮ ಬೀರುತ್ತದೆ.



ಈಗ ಹಿಂದೆ ಬರೆದ ಚಿತ್ರವನ್ನು ಇದೇ ನಿಯಮದಂತೆ ೯ ಪಾಲು ಮಾಡಿದರೆ, ಮನೆಯು ಕೆಳ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಸಂಧಿಸುವಲ್ಲಿದ್ದು, ನದಿ ಮೇಲಿನ ಅಡ್ಡ ರೇಖೆ ಮತ್ತು ಬಲ ಉದ್ದ ರೇಖೆ ಕೂಡುವಲ್ಲಿ ಆರಂಭವಾಗಿ ಕೆಳಗಿನ ಅಡ್ಡ ರೇಖೆ ಮತ್ತು ಎಡ ಉದ್ದ ರೇಖೆ ಕೂಡುವಲ್ಲಿ ಹಾದು ಹೋಗುತ್ತದೆ. ಗುಡ್ಡದ ಶ್ರೇಣಿ ಮೇಲಿನ ಅಡ್ಡ ರೇಖೆಯೊಂದಿಗೆ ಸಾಗುತ್ತದೆ. ಈ ಕೆಳಗಿನ ಚಿತ್ರದಂತೆ




ನಾನು ಹೆಚ್ಚಾಗಿ ಒಂಟಿಯಾಗಿ ಪ್ರಯಾಣ ಮಾಡುವುದು ಜಾಸ್ತಿ. ಪಯಣಿಸುವಾಗಲೆಲ್ಲಾ ಈ ಬಾರಿಯಾದರೂ ಒಂದು ಚೆಲುವೆ ಬಳಿ ಕೂರಬಾರದೇ ಎಂದು ಕೊಂಡೇ ಹೋಗುತ್ತೇನೆ. ಕಳೆದ ತಿಂಗಳ ಪ್ರಯಾಣದಲ್ಲಿ ನನ್ನ ಅಭಿಲಾಷೆ ನಿಜವಾಯಿತು. ಆಕೆ, ಅದರಲ್ಲೂ ಆಕೆಯ ಕಂಗಳು ಎಷ್ಟು ಸುಂದರವಾಗಿತ್ತೆಂದರೆ ಚೀಲದಲ್ಲಿ ಹುದುಗಿದ್ದ ನನ್ನ ಕ್ಯಾಮರಾ ಹೊರಗೆ ತೆಗೆದು ಆಕೆಯ ಚಿತ್ರವನ್ನು ಇದೇ ನಿಯಮವನ್ನು ಗಮನದಲ್ಲಿರಿಸಿಕೊಂಡು ತೆಗೆದಾಗ ಮೂಡಿದ್ದು ಈ ಚಿತ್ರ.ಇಲ್ಲಿ ಆಕೆಯ ಎಡ ಕಣ್ಣು ಫ್ರೇಮಿನ ಬಲ ಮೇಲ್ತುದಿಯ ಬಿಂದುವಿನಲ್ಲಿ, ಬಲಗಣ್ಣು ಎಡ ಉದ್ದ ರೇಖೆಯಲ್ಲಿ ಹಾಗೂ ಬಾಯಿ ಬಲಗಡೆಯ ಕೆಳ ಬಿಂದುವಿನಲ್ಲಿದೆ.



ಪ್ರಾಣಿಯೋ, ಹಕ್ಕಿಯೋ, ಕೀಟವೋ, ನದಿಯೋ,ಗುಡ್ಡ ಬೆಟ್ಟವೋ, ಸಾಮಾನ್ಯವಾಗಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮುಖ ಎಂಬುದೊಂದಿರುತ್ತದೆ. ಸಾಮಾನ್ಯವಾಗಿ ಅದರ ಮುಖವನ್ನು ಅವಲಂಭಿಸಿ ಈ ನಾಲ್ಕು ಬಿಂದುವಿನಲ್ಲಿ ಅದಕ್ಕೆ ಸೂಕ್ತವಾದ ಸ್ಥಳದಲ್ಲಿ ವಿಷಯವನ್ನು ಇರಿಸಬಹುದು. ಮುಖ ಯಾವ ದಿಕ್ಕಿನಲ್ಲಿ ಇರುತ್ತದೆಯೋ ಆ ದಿಕ್ಕಿನಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಬೇಕು. ಈ ಕೆಳಗಿನ ಚಿತ್ರದಲ್ಲಿ ಕೀಟದ ಮುಖ ಎಡಗಡೆಗೆ ನೋಡುತ್ತಿದ್ದು, ಕೊಂಚ ಕೆಳಗೆ ಬಾಗಿದ್ದರಿಂದ ಇದನ್ನು ಚಿತ್ರದಲ್ಲಿ ಬಲಗಡೆಯ ಮೇಲ್ತುದಿಯಲ್ಲಿ ಇರಿಸಿದ್ದೇನೆ. ಅಂತೆಯೇ ಹಾರಲು ಹೊರಟ ಹಕ್ಕಿಯ ಮುಖ ಮೇಲಕ್ಕಿರುವುದರಿಂದ ಅದರ ಮುಖದ ದಿಕ್ಕನ್ನು ಅನುಸರಿಸಿ ಅದನ್ನು ಕೆಳಗಡೆಯ ಎಡ ಅಥವಾ ಬಲ ಬಿಂದುವಿನಲ್ಲಿ ಇರಿಸಬಹುದು.




ಅಂತೆಯೇ ಲ್ಯಾಂಡ್ ಸ್ಕೇಪುಗಳಲ್ಲಿ ಆಕಾಶ ಮತ್ತು ಭೂಮಿಯ ಎಲ್ಲೆಯನ್ನು ನಿರ್ಧರಿಸಬಹುದು. ನಿಮ್ಮ ವಿಷಯ ಸುಂದರವಾದ ಮರುಭೂಮಿಯೋ, ಕಾಡೋ, ನದಿಯೋ, ಸಮುದ್ರವೋ ಆಗಿದ್ದಲ್ಲಿ ಅದನ್ನು ಫ್ರೇಮಿನ ೨/೩ ರಷ್ಟರಲ್ಲಿ ಚಿತ್ರಿಸಿ ಉಳಿದ ೧/೩ ರಷ್ಟನ್ನು ಆಕಾಶಕ್ಕೆ ಮೀಸಲಾಗಿಡಬಹುದು. ಈ ಚಿತ್ರದಲ್ಲಿ ಮರದ ರೆಂಬೆ ಮತ್ತೆ ನಡುವಿನಿಂದ ತೂರಿ ಬರುತ್ತಿರುವ ಸೂರ್ಯ ನನ್ನ ವಿಷಯವಾದ್ದರಿಂದ ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಸಮುದ್ರವನ್ನು ಬರೀ ೧/೩ರಷ್ಟು ಇರುವಂತೆ ಸಂಯೋಜಿಸಿದ್ದೇನೆ.ಇಲ್ಲಿಯೂ ಕೂಡ ಸೂರ್ಯನನ್ನು ನಿಯಮಕ್ಕೆ ಅನುಗುಣವಾಗಿ ಕೂರಿಸಿರುವುದನ್ನು ಗಮನಿಸಬಹುದು.



ಸಾಮಾನ್ಯವಾಗಿ ಮೇಲೆ ಹೇಳಿದಂತೆ ಸಂಯೋಜಿಸಿದರೆ ನಿಮ್ಮ ಚಿತ್ರ ಚೆನ್ನಾಗಿ ಕಾಣಿಸುವುದಾದರೂ ಇದನ್ನು ಪಾಲಿಸಿದರೆ ಮಾತ್ರ ನಿಮ್ಮ ಚಿತ್ರ ಚೆನ್ನಾಗಿದೆ ಇಲ್ಲವಾದಲ್ಲಿ ಇಲ್ಲ ಎಂದೇನೂ ಇಲ್ಲ. ವಿಷಯಕ್ಕೆ ತಕ್ಕಂತೆ ಈ ನಿಯಮವನ್ನು ಮುರಿದು ನಿಮ್ಮ ಪ್ರತಿಭೆಯನ್ನು ತೋರಬಹುದು.



ಸೂಚನೆ: ಆಟೋಫೋಕಸ್ ಉಪಯೋಗಿಸುವವರಾದಲ್ಲಿ, ಕ್ಯಾಮರಾ ಸಾಮಾನ್ಯವಾಗಿ ಮಧ್ಯದ ಸ್ಥಳವನ್ನು ಫೋಕಸ್ ಮಾಡುವುದರಿಂದ ಈ ನಾಲ್ಕು ಬಿಂದುವಿನಲ್ಲೊಂದರಲ್ಲಿ ಕೂರಿಸ ಹೊರಟ ನಿಮ್ಮ ವಿಷಯ ಅಸ್ಪಷ್ಟವಾಗಿ ಮೂಡಬಹುದು. ಇಂತಹ ಸಂದರ್ಭದಲ್ಲಿ ನಿಮ್ಮ ವಿಷಯವನ್ನು ಮಧ್ಯದಲ್ಲಿರಿಸಿ ಕ್ಯಾಮರಾದ ಬಟನ್ನನ್ನು ಅರ್ಧ ಅಮುಕಿ,ಹಾಗೆಯೇ ಹಿಡಿದು ಕೊಂಡು ಮರು ಸಂಯೋಜಿಸಿ ಚಿತ್ರ ತೆಗೆಯಬಹುದು.

13 comments:

  1. ಪಾಲ,
    ಎಂದಿನಂತೆ ಒಳ್ಳೇ ಮಾಹಿತಿ.

    ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ವಾರಾಂತ್ಯ ಪ್ರಯೋಗ ಮಾಡುವೆ.

    ReplyDelete
  2. ನಾನು 'ಚಿತ್ರ' ಆದರೂ ಚಿತ್ರ ಬಿಡಿಸಲು ಬರುವುದಿಲ್ಲ. ಬರಹ ಚೆನ್ನಾಗಿದೆ. ಬಾಲಮಂಗಳ ಎಂದಾಗ ನೆನಪಾಯಿತು..ಡಿಂಗ..ಲಂಭೋದರ ಪಾತ್ರಗಳು.!!
    -ಚಿತ್ರಾ

    ReplyDelete
  3. ಅನಿಲ್,
    ಧನ್ಯವಾದ, ಅಂತೆಯೇ ನಿಮ್ಮ ಪ್ರಯೋಗದ ರಿಸಲ್ಟ್ ತಿಳಿಸಿ.

    ಚಿತ್ರ,
    :) ತಾಣಕ್ಕೆ ಸ್ವಾಗತ, ಹೀಗೆ ಬರುತ್ತಿರಿ.

    ReplyDelete
  4. ಪಾಲ ಚಂದ್ರ,
    ನಿಮ್ಮ ಬ್ಲಾಗಿಗೆ ಬರಲು ನನಗೆ ಖುಷಿಯಾಗುತ್ತದೆ. ನೀವು ಒಂದು ಮಿತ ಅವಕಾಶದಲ್ಲಿ ನಮ್ಮೆಲ್ಲಾ ಬ್ಲಾಗಿಗರಿಗೂ ನಿಮ್ಮದೇ ಶೈಲಿಯಲ್ಲಿ ಫೋಟೋಗ್ರಫಿಯ ತಾಂತ್ರಿಕ ಅಂಶಗಳನ್ನು ಕಲಿಸುತ್ತಿದ್ದೀರಿ. ನೀವು ಹೇಳುತ್ತಿರುವುದು ೧/೩ ಅಂದರೆ ಗೋಲ್ಡನ್ ಪಾಯಿಂಟ್. ನನಗೆ ಫೋಟೋಗ್ರಫಿ ಗೊತ್ತಾದರೂ ತಾಂತ್ರಿಕ ವಿಚಾರಗಳ ಬಗ್ಗೆ ಬರೆಯಲು ಸಮಯ ಮತ್ತು ತಾಳ್ಮೆ ಎರಡು ಇಲ್ಲ. ನೀವು ಈ ಕೆಲಸವನ್ನು ಮಾಡುತ್ತಿದ್ದೀರಿ. ಮುಂದುವರಿಸಿ.
    ಮಗು ಮತ್ತು ಲ್ಯಾಂಡ್‌ಸ್ಕೇಪ್ ಚಿತ್ರ ಉತ್ತಮ ಫ್ರೇಮಿಂಗಿನಲ್ಲಿದೆ. ಕೇಂದ್ರ ಬಿಂದು ಸರಿಯದ ಸ್ಥಳದಲ್ಲಿದೆ. ಅದರೆ ಮದ್ಯದ ಚಿತ್ರದಲ್ಲಿ ಕೀಟವು ಯಾವ ಕಡೆ ತಿರುಗಿದೆಯೋ ಆ ಕಡೆ ಸ್ವಲ್ಪ ಜಾಗ ಹೆಚ್ಚೇ ಇರಬೇಕು ನಿಜ. ಆದರೆ ಈ ಚಿತ್ರದಲ್ಲಿ ಕೀಟವು ಚಿತ್ರದಲ್ಲಿ ಸಣ್ಣದಾಯಿತೇನೋ ಅನ್ನಿಸುತ್ತದೆ.

    ReplyDelete
  5. ಶಿವು,

    ಗೋಲ್ಡನ್ ಪಾಯಿಂಟ್ ಹೆಸರು ತಿಳಿದಿರಲಿಲ್ಲ, ಧನ್ಯವಾದ. ನಿಮ್ಮ ಇತ್ತೀಚಿಗಿನ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರವನ್ನು ಚಿತ್ರಾರವರ ಬ್ಲಾಗಿನಲ್ಲಿ ನೋಡಿದೆ. ಅಭಿನಂದನೆಗಳು.

    ಅಂತೆಯೇ ಕೀಟದ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದ. ಚಿತ್ರದ ಕ್ವಾಲಿಟಿಯ ಉದ್ದೇಶದಿಂದ ಹೆಚ್ಚಿನ ಕ್ರಾಪ್ ಮಾಡುವ ಅವಕಾಶ ಸಿಗಲಿಲ್ಲ. ಸಾಧ್ಯವಾದರೆ ಈ ಚಿತ್ರವನ್ನು ಬದಲಾಯಿಸಿ ಬೇರೆಯ ಚಿತ್ರದ ಉದಾಹರಣೆ ಕೊಡುತ್ತೇನೆ.

    ಇನ್ನೊಮ್ಮೆ ಧನ್ಯವಾದ, ಹೀಗೆಯೇ ಭೇಟಿಕೊಡುತ್ತಿರಿ.

    --
    ಪಾಲ,

    ReplyDelete
  6. ಕೆಂಡಸಂಪಿಗೆಯಲ್ಲಿ ದಿನದ ಬ್ಲಾಗ್‌ನಲ್ಲಿ ನಿಮ್ಮ ಬ್ಲಾಗ್ ಲಿಂಕ್ ಸಿಕ್ಕಿತು. ಪೂರ್ತಿ ನೋಡಿಲ್ಲ. ಇಂಟ್ರೆಸ್ಟಿಂಗ್ ಆಗಿದೆ. ನಿಧಾನ ನೋಡ್ತೀನಿ.

    ReplyDelete
  7. ಶ್ರೀದೇವಿ,

    ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ, ಸಮಯ ಸಿಕ್ಕಾಗ ಇತರ ಬರಹಗಳನ್ನೂ ನೋಡಿ ನಿಮ್ಮ ಅಭಿಪ್ರಾಯ ಮರೆಯದೇ ತಿಳಿಸಿ.

    ಅಂತೆಯೇ ದಿನದ ಬ್ಲಾಗಿನಲ್ಲಿ ಲಿಂಕ್ ಕೊಟ್ಟ ಕೆಂಡಸಂಪಿಗೆಗೆ ಧನ್ಯವಾದ
    --
    ಪಾಲ

    ReplyDelete
  8. ಬಹಳ ಚೆನ್ನಾಗಿದೆ ಬ್ಲಾಗ್. ಮಾಸ್ಟರ್‌ಹೆಡ್‌ನಲ್ಲಿರುವುದು ಕುಮಾರ ಪರ್ವತ ಅಲ್ವಾ? ರೋಮಾಂಚನಗೊಳಿಸುತ್ತಿದೆ

    ReplyDelete
  9. ಚೆನ್ನಾಗಿದೆ ಟಿಪ್ಸ್!

    ReplyDelete
  10. ಸುಧನ್ವ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯ್ವವಾದಗಳು. ಹೆಡರ್ ಚಿತ್ರ ಕುಮಾರ ಪರ್ವತಕ್ಕೆ ಹೋಗುವ ದಾರಿಯಲ್ಲಿನ ಕಲ್ಲು ಮಂಟಪದ್ದು.

    ಸಂದೀಪ್,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  11. ವಾವ್.. ಒಂದೊಂದೇ ಲೇಖನ ನೋಡುತ್ತಾ ಬರುತ್ತಿದ್ದಂತೆ ಛಾಯಾಚಿತ್ರಗ್ರಹಣದ ಬಗ್ಗೆ ಎಷ್ಟೊಂದು ಮಾಹಿತಿ ತಿಳಿಯುತ್ತಾ ಹೋಯಿತು! ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ನಿಮ್ಮ ಶೈಲಿ ಚೆನ್ನಾಗಿದೆ ಮುಂದುವರೆಸಿ..

    ReplyDelete
  12. ಬಹಳ ಉಪಯುಕ್ತವಾದ ಮಾಹಿತಿ ದೊರಕಿಸಿದ್ದೀರ! ಧನ್ಯವಾದಗಳು.

    ReplyDelete
  13. ಹರೀಶ್,
    ಪ್ರತಿಕ್ರಿಯೆಗೆ ನನ್ನಿ..
    ಗುರು,
    ಅಂತೆಯೇ ಛಾಯಾಗ್ರಹಣದ ಬಗ್ಗೆ ಇನ್ನು ಕೆಲವು ಲೇಖನ ಇದೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

    --
    ಪಾಲ

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)