ಕಳೆದ ಭಾನುವಾರ ಕೋಲಾರದ ಶಿವಗಂಗೆಯ "ಆದಿಮ" ಸಂಸ್ಥೆಯಲ್ಲಿ ಭೇಟಿಯಾದ, ನಾಡಿನ ಖ್ಯಾತ ಜಾನಪದ ಕಲಾವಿದರಾದ "ಪಿಚ್ಚಳ್ಳಿ ಶ್ರೀನಿವಾಸ್" ನನ್ನ ಕ್ಯಾಮರಾಗೆ ಸೆರೆ ಸಿಕ್ಕಿದ್ದು ಹೀಗೆ.
ಶುಕ್ರವಾರ, ಜನವರಿ 14, 2005ರ "ಪ್ರಜಾವಾಣಿ"ಯಲ್ಲಿ ಇವರ ಪರಿಚಯ ಇಂತಿದೆ:
ಕಾಲಿಗೆ ಗೆಜ್ಜೆ ಇಲ್ಲ, ತಮಟೆ, ಡೋಲು ವಾದನ ಬೇಕಿಲ್ಲ. ಬರಿಯ ಕಂಠ ಸಿರಿಯಿಂದಲೇ ಕೇಳುವವರು ಬಾಯಿ ಬಿಟ್ಟುಕೊಂಡು ‘ಅರೇ! ಈ ಹಾಡು ಇಷ್ಟು ಬೇಗ ಮುಗಿಯಿತೆ’ ಎನ್ನುವಂತೆ ಮಾಡುತ್ತಾರೆ, ಪಿಚ್ಚಳ್ಳಿ ಶ್ರೀನಿವಾಸ್. ಅವರು ಹಾಡಲು ನಿಂತರೆ ಜಾನಪದ ಹಾಗೂ ಕ್ರಾಂತಿ ಗೀತೆಗಳು ಪುಂಖಾನುಪುಂಖವಾಗಿ ಹರಿದು ಬರುತ್ತವೆ. ಕರ್ನಾಟಕದ ‘ಗದ್ದರ್’ ಎಂದೇ ಖ್ಯಾತರು ಅವರು.
‘ಅಮಾಸ’ ಚಲನಚಿತ್ರದ ಅವರ ಗಾಯನಕ್ಕೆ ರಾಜ್ಯ ಸರ್ಕಾರ ಈ ಸಾಲಿನ ‘ಅತ್ಯುತ್ತಮ ಗಾಯಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇವನೂರು ಮಹಾದೇವ ಅವರ ‘ಅಮಾಸ’ ಕತೆ ಆಧಾರಿತ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ದುಡಿದು, ಗಾಯಕರಾಗಿಯೂ ಅವರು ತಮ್ಮ ಕಂಠಸಿರಿಯನ್ನು ಹರಿಸಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಪಿಚ್ಚಳ್ಳಿಯ ಬಡ ಕೃಷಿ ಕುಟುಂಬದಲ್ಲಿ ಜನಿಸಿ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದು ರಾಜ್ಯ ಮಟ್ಟದ ಗೌರವಕ್ಕೆ ಭಾಜನರಾಗಿದ್ದಾರೆ. ದಲಿತ ಸಂಘರ್ಷ ಸಮಿತಿಯ ಒಂದು ಭಾಗವಾದ ದಲಿತ ಕಲಾ ಮಂಡಳಿಯ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿ ಹಾಡಿನ ಜತೆಗೆ ಸಂಗೀತ ನೀಡಿದ್ದಾರೆ. ನಾಟಕ, ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಯಾವುದೇ ತಾಳ, ಮೇಳಗಳಿಲ್ಲದೆ ಧ್ವನಿಯ ಮೂಲಕವೇ ಕೇಳುಗರನ್ನು ಸೆಳೆಯುವ ಶಕ್ತಿ ಅವರದು.
‘ಈ ನಾಡ ಮಣ್ಣಿನಲ್ಲಿ’ ಸೇರಿದಂತೆ 16 ಮೂಲ ಜಾನಪದ ಗೀತೆಗಳ ಧ್ವನಿಸುರುಳಿ ಹೊರ ತಂದಿದ್ದಾರೆ. ವಿವಿಧ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಒಂಬತ್ತು ಧ್ವನಿಸುರುಳಿಗಳಿಗೆ ಹಾಡಿರುವ ಶ್ರೀನಿವಾಸ್, ಮಹಿಳೆಯರ ಹಕ್ಕುಗಳ ಕುರಿತ ಒಂಬತ್ತು ಸಾಕ್ಷ್ಯ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ‘ಸಿಂದ್‌ಆಟ’, ‘ಗಂಗಾಭಾರತ’ ನಾಟಕಗಳಿಗೆ ಸಂಗೀತ ನೀಡಿ ನಿರ್ದೇಶನವನ್ನೂ ಮಾಡಿದ್ದಾರೆ. ಸಿಜಿಕೆ, ಸಿ. ಬಸಲಿಂಗಯ್ಯ ಮೊದಲಾದ ಖ್ಯಾತ ರಂಗ ನಿರ್ದೇಶಕರ ಎಂಟು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಾಕ್ಷರತಾ ಆಂದೋಲನಕ್ಕಾಗಿ ಎಂಟು ಬೀದಿ ನಾಟಕಗಳನ್ನು ಬರೆದು ನಿರ್ದೇಶಿಸಿರುವ ಅವರು ‘ರಂಗಾಯಣ’ದ 14 ನಾಟಕಗಳಲ್ಲಿ ನಟರಾಗಿ, ಗಾಯಕರಾಗಿ, ಸಂಗೀತ ಸಹಾಯಕರಾಗಿ ದುಡಿದಿದ್ದಾರೆ. ಸಾಕ್ಷರತೆ, ಆದಿವಾಸಿ ಬುಡಕಟ್ಟು, ಗ್ರಾಮ ಪಂಚಾಯಿತಿ ಚುನಾಯಿತ ಮಹಿಳೆಯರಿಗೆ ಜಾಗೃತಿ ಮೂಡಿಸುವ ಹತ್ತು ಹಲವು ಬೀದಿ ನಾಟಕ ಬರೆದಿದ್ದಾರೆ. ಸಾಂಸ್ಕೃತಿಕ ಶಿಬಿರಗಳನ್ನು ನಡೆಸಿದ್ದಾರೆ. ಈಚೆಗೆ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ‘ರಂಗ ಭಾರತಿ’ ತಂಡದ ಜತೆಗೆ ಸೇರಿಕೊಂಡು ಕುವೆಂಪು ಅವರ ‘ಜಲಗಾರ’ ನಾಟಕವನ್ನು ಸರಳೀಕರಿಸಿ ಪ್ರದರ್ಶಿಸಿದ್ದಾರೆ.
ಶ್ರೀನಿವಾಸ್ ಅವರಿಗೆ 1999ರಲ್ಲಿ ರಾಜ್ಯ ಸರ್ಕಾರ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. 2000ದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅದೇ ವರ್ಷದಲ್ಲಿ ಕೋಲಾರ ಜಿಲ್ಲಾಡಳಿತವು ‘ನಂದಿ’ ಪ್ರಶಸ್ತಿಯನ್ನು ನೀಡಿದೆ. ಈಗ ಪಿಚ್ಚಳ್ಳಿ ಅವರ ಕಿರೀಟದಲ್ಲಿ ರಾಜ್ಯ ಪ್ರಶಸ್ತಿಯ ಗರಿ ಶೋಭಿಸುತ್ತಿದೆ.
ಪಾಲ ಅವರೆ, `ಪಿಚ್ನಳ್ಳಿ ಶ್ರೀನಿವಾಸ'ರ ಬಗೆಗಿನ ಕಿರು ಪರಿಚಯವನ್ನು ಬ್ಲಾಗಿಗರಿಗೆಲ್ಲ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅವರ ಕಲಾಸೇವೆ ನಾಡು, ಹೊರನಾಡು-ದೇಶಗಳಲ್ಲಿ ಪಸರಿಸಲಿ ಎಂದು ಆಶಿಸುತ್ತೇನೆ. ಫೋಟೋ ಸಹ ಸುಂದರವಾಗಿ ಮೂಡಿ ಬಂದಿದೆ.
ReplyDeleteಧನ್ಯವಾದಗಳು,
ಪಾಲಚಂದ್ರ,
ReplyDeleteಪಿಚ್ನಳ್ಳಿ ಶ್ರೀನಿವಾಸ' ಬಗೆಗಿನ ಪರಿಚಯ ಚೆನ್ನಾಗಿದೆ. ಅವರು ಪಡೆದ ಪ್ರಶಸ್ತಿಗಳು, ಅವರ ಕಲೆ ಸೇವೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...ಅವರ ಫೋಟೊ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಶಿವು,
ReplyDelete’ಶ್ರೀನಿವಾಸ’ರ ಬಗ್ಗೆ ಬರೆದದ್ದು ನಾನಲ್ಲ, ಪ್ರಜಾವಾಣಿಯಲ್ಲಿ ಪರಿಚಯಿಸಿದ್ದನ್ನ ಇಲ್ಲಿ ಹಾಕಿರುವೆ. ಚಿತ್ರ ಮಾತ್ರ ನಂದು..
ಪಾಲಚಂದ್ರ,
ReplyDeleteನಮ್ಮ ಜಿಲ್ಲೆಯ ಕಲಾವಿದ ಪಿಚ್ಚಳ್ಳಿಯವರ ಬಗ್ಗೆ ನಿಮ್ಮ ಬ್ಲಾಗಲ್ಲಿ ಓದಿ ಖುಷಿಯಾಯ್ತು. ಅವರ ಗಾಯನ ಕೇಳಿರುವೆ. ಅದ್ಭುತ ಕಂಠಸಿರಿ. ಆದಿಮಗೆ ಯಾವಾಗ ಹೋಗಿದ್ರಿ? ಅಲ್ಲಿ ನಾಟಕ ನೋಡಿದ್ರಾ? ರಾಮಯ್ಯ ಸಿಕ್ಕಿದ್ರಾ? ಹಾಗೇ ನಮ್ಮೂರಿಗೂ ಬರಬಹುದಿತ್ತಲ್ಲ?
ಮಲ್ಲಿಕಾರ್ಜುನ್,
ReplyDeleteಅವರ ಗಾಯನ ಪ್ರತ್ಯಕ್ಷವಾಗಿ ಕೇಳುವ ಅವಕಾಶ ನಮಗೆ ಸಿಗಲಿಲ್ಲ :(
ಆದಿಮಗೆ ಕಳೆದ ಭಾನುವಾರ ಹೋಗಿದ್ವಿ. ಅಲ್ಲಿ ಬೆಳಿಗ್ಗೆ "ಮಂತ್ರ ಮಾಂಗಲ್ಯ" ಕಾರ್ಯಕ್ರಮ ಇತ್ತು. ಹೋಗುವ ಹಂಬಲವಿದ್ದರೂ, ಸಮಯದ ಅಭಾವದಿಂದ ಹೋಗಲಾಗಲಿಲ್ಲ. ಸಂಜೆ ಅಲ್ಲಿ ಭೇಟಿ ಕೊಟ್ಟು "ಕೋಟಗಾನಹಳ್ಳಿ ರಾಮಯ್ಯ", "ಶ್ರೀನಿವಾಸ"ರನ್ನು ಭೇಟಿ ಮಾಡಿ ಹೊರಟು ಬಂದೆವು. ತುಂಬಾ ಸುಂದರವಾದ ಜಾಗ, ಜಾನಪದ ಕಲಾಕೃತಿಗಳಂತೂ ಕಣ್ಮನ ಸೆಳೆಯುವಂತಿದೆ. ಈ ತಿಂಗಳ ೭ರ ಬೆಳದಿಂಗಳಿನಲ್ಲಿ ನಾಟಕ ಇದೆಯಂತೆ, ಈ ವಾರಾಂತ್ಯ ಬೇರೆ ಕಡೆ ತಿರುಗಾಟವಿರುವುದರಿಂದ ಹೋಗಲು ಸಾಧ್ಯವಾಗೋದಿಲ್ಲ. ಇನ್ನೊಂದು ತಿಂಗಳು ನೋಡಬೇಕು.
ನಿಮ್ಮೂರಿಗೆ ಕರೆದದ್ದಕ್ಕೆ ತುಂಬಾ ಧನ್ಯವಾದ, ಖಂಡಿತಾ ಬರ್ತೀನಿ ಮುಂದಿನ ಬಾರಿ.
ಪಿಚ್ಚಳ್ಳಿಯವರು ನಿಜಕ್ಕೂ ಕರ್ನಾಟಕದ ಗದ್ದರ್ ಅವರೇ ಸರಿ. ಅವರ ಹಾಡುಗಳು ಎಂಥವರಲ್ಲೂ ರೋಮಾಂಚನ ಹುಟ್ಟಿಸುತ್ತದೆ. ಅವರ ಪರಿಚಯವನ್ನು ನೀವೇ ತೆಗೆದ ಚಿತ್ರದೊಂದಿಗೆ ಹಾಕಿರುವುದು ಬಹಳ ಸುಂದರವಾಗಿದೆ.
ReplyDeleteಪಾಲರವರೆ
ReplyDeleteಪಿಚ್ಚಳ್ಳಿ ಶ್ರೀನಿವಾಸ್ ಇವರ ಬಗ್ಗೆ ಅಸ್ತು ಗೊತ್ತಿರಲಿಲ್ಲ... ಇವರ ಬಗೆಗಿನ ಸಮಗ್ರ ಮಾಹಿತಿಗಾಗಿ,, ಧನ್ಯವಾದಗಳು....
ಗುರು
ಪಿಚ್ಚಳ್ಳಿಯವರ ಅದ್ಭುತ ಕ೦ಠಸಿರಿಯನ್ನು ದೂರದರ್ಶನದ ಕಾರ್ಯಕ್ರಮವೊ೦ದರಲ್ಲಿ ಕೇಳಿದ್ದೆ. ಜಾನಪದ ಸೊಗಡಿನ ಹಾಡುಗಳಿಗೆ,ಕ್ರಾ೦ತಿಗೀತೆಗಳಿಗೆ ಹೇಳಿ ಮಾಡಿಸಿದ ದನಿ ಅವರದು. ಅವರನ್ನು ನಿಮ್ಮ ಬ್ಲಾಗ್ ಮೂಲಕ ಪರಿಚಯಿಸಿದ್ದಿರಿ. ಖುಷಿಯಾಯಿತು.
ReplyDeleteಕ್ಷಣಚಿಂತನೆ, ಚಂದ್ರಕಾಂತ ಮೇಡಂ, ಗುರು, ಪರಂಜಪೆ,
ReplyDeleteಪ್ರತಿಕ್ರಿಯೆಗೆ ವಂದನೆಗಳು
ಪಾಲಚಂದ್ರರವರೆ...
ReplyDeleteಪಿಚ್ಚಳ್ಳಿಯವರ ಹಾಡು ಕೇಳಿದ್ದೆ....
ಅವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು..