ನಾನೇನೂ ಸಂಗೀತದ ಹಿನ್ನೆಲೆ ಇದ್ದ ಮನೆಯಿಂದ ಬಂದವನಲ್ಲ. ನನ್ನ ಅಮ್ಮ ಊರ ಗಣೇಶೋತ್ಸವದಂದು ಭಕ್ತಿ ಗೀತೆ, ಭಾವ ಗೀತೆ, ಚಿತ್ರ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆಯುತ್ತಿದ್ದಳಾದರೂ, ಆಕೆಯೇನೂ ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡಿದವಳಲ್ಲ. ಆದ್ದರಿಂದ ಸಂಗೀತದ ಗಂಧ ಗಾಳಿ ಇಲ್ಲದೇ ಇದ್ದರೂ, ಮನೆಯಲ್ಲಿ ಅಪ್ಪ ಹಾಕುತ್ತಿದ್ದ ಕಾಳಿಂಗರಾಯರದ್ದೊ, ಅಶ್ವಥ್ಥರದ್ದೋ, ರಫಿಯದ್ದೋ ಗಾನ ಸುಧೆಯಲ್ಲಿ ತೇಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಬ್ಬನೇ ಹಾಡಿಕೊಂಡು ಚಪಲ ತೀರಿಸಿಕೊಂಡದ್ದು ಇದೆ. ಅಲ್ಲದೆ ಚಿಕ್ಕಂದಿನಲ್ಲಿ ಊರಲ್ಲಾಗುತ್ತಿದ್ದ ಬಯಲಾಟದ ಚಂಡೆ, ಮದ್ದಳೆ, ಭಾಗವತಿಗೆ ಕೇಳಿ ಮನೆಯಲ್ಲಿರುವ ಪಾತ್ರೆ, ಡಬ್ಬಿ ಸೌಟು ಹಿಡಿದುಕೊಂಡು ಅವರನ್ನು ಅನುಸರಿಸ ಹೋಗಿ ಅಮ್ಮನಿಂದ ಬೈಸಿಕೊಂಡದ್ದಿದೆ.
ಇಂಜಿನಿಯರ್ಗೆಂದು ಊರನ್ನು ಬಿಟ್ಟು, ಸ್ವತಂತ್ರವಾದ ನನ್ನ ಮನಸ್ಸಿಗೆ ಸಂಗೀತ ಕಲಿಯಬೇಕೆಂಬ ಹಂಬಲ ಒಂದು ಮೂಲೆಯಲ್ಲಿ ಮೊಳೆತಿತ್ತು.ಹುಟ್ಟಿನಿಂದಲೇ ಆಲಸಿಯಾದ ನಾನು ಯಾವ ಬಗೆಯ ಸಂಗೀತ, ಯಾವ ಗುರುಗಳಲ್ಲಿ ಕಲಿಯಬೇಕು ಎಂಬ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೇ ಸುಖವಾಗಿದ್ದೆ. ಹಂಬಲ ಜಾಸ್ತಿಯಾದಾಗ ಗುರುಗಳು ತಾನಾಗಿಯೇ ಒಲಿಯುತ್ತಾರೆ ಎಂಬ ಮಾತು ನನ್ನ ಜೀವನದಲ್ಲಿ ದಿಟವಾಯ್ತು. ನನ್ನ ವಿದ್ಯಾರ್ಥಿ ನಿಲಯದವನೇ ಆದ ರಾಮಮೂರ್ತಿ ತಬಲಾ ಕಲಿಯುವ ತನ್ನ ಹಂಬಲವನ್ನು ವ್ಯಕ್ತಪಡಿಸಿ, ಗುರುಗಳನ್ನೂ ಹುಡುಕಿರುವುದಾಗಿ ತಿಳಿಸಿದ. ತಬಲಾ ಆದರೆ ತಬಲಾ, ಎನೋ ಒಂದು ಕಲಿತರಾಯಿತು ಎಂದು ನಿರ್ಧರಿಸಿ ನಾನೂ ಅವನ ಜೊತೆ ಸೇರಿದೆ.
ನಮ್ಮ ಗುರುಗಳು ಎಂದರೆ ಸಂಗೀತದ ಮಹಾ ವಿದ್ವಾಂಸರು ಎಂದು ಭಾವಿಸಬೇಡಿ, ಅವರು ನಾವು ಕಲಿಯುತ್ತಿದ್ದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಬಿಡುವಿನ ವೇಳೆಯಲ್ಲಿ ಊರಲ್ಲಿ ಕೆಲವೊಮ್ಮೆ ನಡೆಯುವ ಭಾವಗೀತೆ, ಸುಗಮ ಸಂಗೀತಗಳಂತಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುತ್ತಿದ್ದರು. ಒಳ್ಳೆಯ ದಿನವೊಂದನ್ನು ಗೊತ್ತು ಮಾಡಿ, ಶಾರದಾ ಮಂದಿರಕ್ಕೆ ತೆರಳಿ, ಆಕೆಯ ಆಶೀರ್ವಾದ ಪಡೆದು, ಬರಿಗೈಯಲ್ಲಿ ಗುರುಗಳ ಮನೆಗೆ ಹೋದೆವು. ನಮ್ಮನ್ನು ಕಂಡು ಮೊದಲು ಹೇಳಿಕೊಡಲು ಒಲ್ಲೆ ಎಂದರೂ, ರಾಮಮೂರ್ತಿ ಪರಿಪರಿಯಾಗಿ ಕಾಡಿದ್ದರಿಂದ ಕೊನೆಗೆ ಒಪ್ಪಿಕೊಂಡರು. ವಾರಕ್ಕೆ ೨ ತರಗತಿ ಮಂಗಳವಾರ ಹಾಗೂ ಗುರುವಾರದಂದು, ತಿಂಗಳಿಗೆ ೭೫ರೂ ಶಿಕ್ಷಣಶುಲ್ಕ.ಶುಲ್ಕವನ್ನು ಕಲಿಕೆಯಲ್ಲಿ ನಮಗೆ ಶ್ರದ್ಧೆ ಇರಲಿ ಎಂದು ತೆಗೆದುಕೊಳ್ಳುತ್ತಿದ್ದರಲ್ಲದೇ ಅದರಿಂದ ತಮ್ಮ ಜೀವನ ಸಾಗಿಸುವ ಆವಶ್ಯಕತೆ ಅವರಿಗೆ ಇರಲಿಲ್ಲ.
ಅಂದಿನಿಂದಲೇ ನಮ್ಮ ಶಿಕ್ಷಣ ಆರಂಭವಾಯಿತು; ಮೊದಲಿಗೆ ಸಂಗೀತದ ಪರಿಚಯ. ನಾವು ತಿಳಿದಂತೆ ನಮ್ಮ ಗುರುಗಳು ತಬಲಾ ವಾದಕರಾಗಿರದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದಕರಾಗಿದ್ದರು. ತಾಳಗಳ ಬಗ್ಗೆ ವಿವರಿಸುತ್ತಾ ಆದಿ ತಾಳದಿಂದ ನಮ್ಮ ಪಾಠವನ್ನು ಆರಂಭಿಸಿದರು. ನಮ್ಮ ಮೊದಲ ಪಾಠವಾದ ತ, ದಿ, ತೊಂ, ನಂ ಇವನ್ನು ಬರೆಸಿ ಕಂಠಪಾಠ ಮಾಡಿಸಿ, ಕೈಯಲ್ಲಿ ತಾಳ ಹಾಕಿ, ಅಭ್ಯಾಸ ಮಾಡಿಸಿದರು. ಕಾಲೇಜಿಗೆ ಹೋಗುವಂತೆಯೇ ಎರಡು ಹಾಳೆ ಮತ್ತೊಂದು ಪೆನ್ನು ತೆಗೆದುಕೊಂಡು ಹೋಗಿದ್ದ ನನಗೆ ಗುರುಗಳು, ತಮ್ಮ ೨೫ ವರ್ಷಗಳಿಗಿಂತಲೂ ಹಳೇಯದಾದ ಪುಸ್ತಕಗಳನ್ನು ತೋರಿಸುತ್ತಾ, ಮುಂದಿನ ಬಾರಿ ಬರುವಾಗ ಹೊಸದೊಂದು ಪುಸ್ತಕ ಕೊಂಡು ಈ ಅಭ್ಯಾಸಕ್ಕೆ ಮೀಸಲಾಗಿರಿಸಿ ಜೋಪಾನವಾಗಿ ಇರಿಸಿ ಕೊಳ್ಳಬೇಕೆಂದು ಹೇಳಿದರು . ಎದುರು ಗಡೆ ಇಟ್ಟ ಮೃದಂಗದಲ್ಲಿ ಎಂದಿಗೆ ನನ್ನ ಕೈಚಳಕ ತೋರಿಸುವೆನೋ ಎಂದು ಕಾತರನಾಗಿದ್ದೆ. ಜನಾರಣ್ಯದಲ್ಲಿ ಬಾಯಿಬಿಡದ ಸಂಕೋಚ ಸ್ವಭಾವದ ನನ್ನ್ನ ಬಾಯಿಯಿಂದ ಪಾಠವನ್ನು ಹೊರಡಿಸಲು ಗುರುಗಳು ಹರಸಾಹಸ ಪಟ್ಟರು. ನಂತರ ಮೃದಂಗ ತಮ್ಮ ಕೈಗಿತ್ತುಕೊಂಡು ತ,ದಿ,ತೊಂ, ನಂ ಎಲ್ಲಿ ಹೊಡೆಯಬೇಕು ಎಂದು ತೋರಿಸಿಕೊಟ್ಟರು. ಮೃದಂಗ ನನ್ನ ಕೈಗೆ ಬಂದ ನಂತರ ಒಂದು ಬಗೆಯ ಅಳುಕು, ಗಟ್ಟಿಯಾಗಿ ಹೊಡೆದರೆ ಎಲ್ಲಿ ಅದರ ಚರ್ಮ ಹರಿದು ಹೋಗುವುದೋ ಎಂಬ ಭೀತಿ, ಆದ್ದರಿಂದ ತುಂಟ ಮಕ್ಕಳ ಕೆನ್ನೆಯನ್ನು ಪ್ರೀತಿಯಿಂದ ನೇವರಿಸುವಂತೆ ಅದರ ಮೇಲೆ ಕೈ ಆಡಿಸಿದೆ. ಗುರುಗಳು ಕೈಯೂರಿ ನುಡಿಸಬೇಕು, ನಾದ ಹೊಮ್ಮಬೇಕು ಎಂದು ಇನ್ನೊಮ್ಮೆ ತೋರಿಸಿಕೊಟ್ಟರು. ಒಡೆದು ಹೋಗಲಾರದು ಎಂಬ ಭರವಸೆಯ ಮೇರೆಗೆ ಗಟ್ಟಿಯಾಗಿ ಎಡಗಡೆಗೆ ತ ಎಂದು ಪ್ರಹಾರ ಮಾಡಿದರೆ ನಾದದ ಜೊತೆ ಮೃದಂಗ ಬಲಕ್ಕೆ ವಾಲಿತು. ದಿ, ನಂ ಗಳನ್ನು ಬಲಗಡೆ ಹೊಡೆದು ಸ್ವಲ್ಪ ಮಟ್ಟಿಗೆ ಅದನ್ನು ಯಥಾ ಸ್ಥಾನಕ್ಕೆ ಕೂರಿಸುತ್ತಿದ್ದೆನಾದರೂ ನನ್ನ ತ, ತೊಂ ಪ್ರಹಾರ ಅದಕ್ಕಿಂತ ಬಲವಾಗಿ, ಟೈಪ್ ರೈಟರ್ನಂತೆ ಮೃದಂಗ ಬಲಗಡೆ ಸರಿಯುತ್ತಿತ್ತು. ಆಗಾಗ ಅದನ್ನು ಮೊದಲಿನ ಸ್ಥಳಕ್ಕೆ ಸರಿಸುತ್ತಾ, ತಾಳ ತಪ್ಪುತ್ತಾ ಇದ್ದ ನನ್ನ ಅವಸ್ಥೆ ನೋಡಲಾರದೆ ಮೃದಂಗ ಹಿಡಿದುಕೊಳ್ಳಬೇಕಾದರೆ ಮಡಿಸಿದ ಎಡ ಮಂಡಿಯ ಒತ್ತಡ ಅದರ ಮೇಲೆ ಹೇರಬೇಕಾಗಿ ಸೂಚಿಸಿದರು. ಮೊದಲ ದಿನ ನಾನು ತಿಳಿದ ವಿಷಯ ಬಹಳವಾಗಿತ್ತು ಭಾರತದ ಸಂಗೀತ ಪ್ರಭೇದ, ರಾಗ, ತಾಳಗಳ ಕಿರುಪರಿಚಯ, ತದಿತೊಂನಂ, ಮೃದಂಗ ಹಿಡಿದುಕೊಳ್ಳುವುದು.
ಮುಂದಿನ ತರಗತಿಯಲ್ಲಿ ಕಾಲಗಳ ಪರಿಚಯ ಮಾಡಿಕೊಟ್ಟು ಎರಡನೇ, ಮೂರನೇ ಕಾಲದಲ್ಲಿ ಹಿಂದಿನ ದಿನದ ಪಾಠವನ್ನು ನುಡಿಸುವುದು ಹೇಗೆ ಎಂದು ಕಲಿಸಿಕೊಟ್ಟರು. ಗುರುಗಳ ಪಾಠವೇನೋ ಸಾಗುತ್ತಿತ್ತು, ಆದರೆ ಆಭ್ಯಾಸ ಮಾಡಲು ಮೃದಂಗ ನಮ್ಮ ಬಳಿ ಇರಲಿಲ್ಲ. ಸುಮಾರು ೧,೫೦೦ಕ್ಕೆ ಹೊಸದು ಸಿಗುತ್ತಿತ್ತಾದರೂ ನಮ್ಮಿಬ್ಬರ ಬಳಿ ಅಷ್ಟು ಹಣವಿರಲಿಲ್ಲ, ಮನೆಯವರಿಂದ ಕೇಳಿ ತರಿಸಿಕೊಳ್ಳೋಣ ಎಂದರೆ, ನಾವು ಕಲಿಯುತ್ತಿರುವುದನ್ನು ಅವರಿಗೆ ತಿಳಿಸದೆ, ಕಲಿತ ಮೇಲೆ ನಮ್ಮ ಕೈಚಳಕ ಒಮ್ಮೆಲೇ ತೋರಿಸಿ ಅವರನ್ನು ಚಕಿತಗೊಳಿಸಬೇಕೆಂಬ ಹಂಬಲ. ಕೊನೇಗೆ ನಮ್ಮ ವಿದ್ಯಾರ್ಥಿನಿಲಯದ ಮೇಜಿನಲ್ಲೇ ಮೃದಂಗದಲ್ಲಿರುವಂತೆ ವೃತ್ತ ಬರೆದು ನಮ್ಮ ಅಭ್ಯಾಸ ಆರಂಭಿಸಿದೆವು. ಮೊದಲು ಒಬ್ಬ ತಾಳ ಹಾಕುವುದು, ಇನ್ನೊಬ್ಬ ಮೇಜಿನ ಮೇಲೆ ಬಡಿಯುವುದು, ಪುಣ್ಯಕ್ಕೆ ನಮ್ಮ ಮಿತ್ರರಾರೂ ಇದಕ್ಕೆ ಆಕ್ಷೇಪ ಎತ್ತಲಿಲ್ಲ. ಹೀಗೆ ನಮ್ಮ ಅಭ್ಯಾಸ ಸಾಗುತ್ತಿರಬೇಕಾದರೆ ನಮ್ಮ ಗುರುಗಳ ಮಿತ್ರರೊಬ್ಬರು ತಮ್ಮ ಮಗ ಕಲಿತು ಬಿಟ್ಟ ಮೃದಂಗವನ್ನು ಅಭ್ಯಾಸ ಮಾಡಲು ತೆಗೆದುಕೊಂಡು ಹೋಗಬಹುದಾಗಿ ತಿಳಿಸಿದರು.
ವಿದ್ಯಾರ್ಥಿನಿಲಯದ ಉಪ್ಪರಿಗೆಯ ಖಾಲಿ ಕೋಣೆಯಲ್ಲಿ ನಮ್ಮ ಅಭ್ಯಾಸ ತರಗತಿಯನ್ನು ಆರಂಭಿಸಿದೆವು. ಮೃದಂಗ ಸಿಕ್ಕಿದ ಮಾರನೆಯ ದಿನದಿಂದ ಕೆಲವು ತಿಂಗಳುಗಳವರೆಗೆ ಎಡಬಿಡದೆ ನಮ್ಮ ಅಭ್ಯಾಸದಲ್ಲಿ ತೊಡಗಿಕೊಂಡೆವು. ನಾವು ಮೂರನೇ ಕಾಲದವರೆಗೂ ನುಡಿಸುವುದನ್ನು ಕಲಿಯುವುದು ಪದ್ಧತಿಯಾದರೂ, ನಮಗೆ ಬೇಸರ ಬರಬಾರದೆಂದು ಗುರುಗಳು ನಾವು ಮೂರನೇ ಕಾಲದಲ್ಲಿ ನುಡಿಸಿ ತೋರಿಸುವುದರೊಳಗಾಗಿ ಮುಂದಿನ ಪಾಠವನ್ನು ಹೇಳಿ ಕೊಡುತ್ತಿದ್ದರು. ಮುಂದೆ ಕಲಿತ ತಕಿಟಕಿಟತಕ, ತಕಿಟಕಿಟತಕ ಕಿಟತಕತಾಕಿಟತಕ ತರಿಕಿಟತಕ ಮೊದಲಾದ ಪಾಠಗಳು ತುಂಬಾ ಸಂತೋಷ ಕೊಟ್ಟವು. ಅದಾಗಲೇ ಸಂಗೀತಾಭ್ಯಾಸದ ಗುಂಪಿಗೆ ಸೇರಿದ್ದ ನಾವು ಅಲ್ಲಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೂ ಹೋಗತೊಡಗಿದೆವು. ನಮಗೀಗಾಗಲೇ ತಿಳಿದಿದ್ದ ಆದಿತಾಳದ ಹಾಡು ಹಾಡತೊಡಗಿದರಂತೂ ಮೈಯೆಲ್ಲಾ ಕಿವಿಯಾಗಿಸಿ ಮನದಲ್ಲೇ ತಾಳ ಹಾಕ ತೊಡಗಿದ್ದೆವು.
ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಬೇಕಾದರೆ ಸೆಮಿಸ್ಟರ್ನ ಕೊನೆ ಬಂದು ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡಿವು ದೊರಕಿತ್ತು. ಪರೀಕ್ಷೆ ಮುಗಿಸಿ, ಊರಿಗೆ ತೆರಳಿ ರಜಾ ದಿನಗಳಲ್ಲಿ ಮೃದಂಗವನ್ನು ಸಂಪೂರ್ಣವಾಗಿ ಮರೆತು, ಮತ್ತೆ ಕಾಲೇಜಿಗೆ ಬಂದು ಹಳೇಯ ಪಾಠಗಳನ್ನು ಅಭ್ಯಸಿಸಿ ಒಂದು ತಿಂಗಳ ನಂತರ ಗುರುಗಳ ಬಳಿಗೆ ಮರಳಿದೆವು. ೪ ತಿಂಗಳ ಒಡನಾಟದಿಂದ ಗುರುಗಳು ನಮಗೆ ಆಪ್ತರಾಗಿದ್ದರು, ಮನೆಗೆ ಹೋದೊಡನೆ ಕಾಫಿ, ಅವಲಕ್ಕಿ ಅಥವಾ ಏನಾದರೂ ಕುರುಕುಲು ತಿಂಡಿ ಲಭಿಸುತ್ತಿತ್ತು. ಕಾಫಿ ಹೀರುತ್ತಾ ಸುಮಾರು ಅರ್ಧಗಂಟೆ ಕಳೆದ ನಂತರವಷ್ಟೆ ನಮ್ಮ ಪಾಠ ಆರಂಭವಾಗುತ್ತಿತ್ತು. ಅವರು ಹೇಳಿ ಕೊಡುತ್ತಿದ್ದ ಅ, ಆ, ಇ, ಈ ಕಲಿಯುತ್ತಿದ್ದೆನಾದರೂ ಇವನ್ನೆಲ್ಲಾ ಸೇರಿಸಿ ನನ್ನದೇ ವಾಕ್ಯ ರಚನೆಯ ಕಲೆ ನನಗೆ ಸಿದ್ಧಿಸುತ್ತಲೇ ಇರಲಿಲ್ಲ.ಹೀಗೆ ವರ್ಷದಲ್ಲಿ ಸುಮಾರು ೭ ತಿಂಗಳು ಪಾಠ ಹೇಳಿಸಿಕೊಳ್ಳುವ ಅವಕಾಶ ಸಿಗುತ್ತಿತ್ತಾದರೂ ನನಗೆ ಕಲಿಕೆಯಲ್ಲಿ ಕ್ರಮೇಣ ಆಸಕ್ತಿ ಕುಂದ ತೊಡಗಿತು. ಅದೇ ನೀರಸ ಅಭ್ಯಾಸ, ಒಂದು ಸ್ವಂತಿಕೆಯಿಲ್ಲ, ಒಂದು ಭಾವನೆಯಿಲ್ಲ, ಶಾಲೆಯಲ್ಲಿನ ಡ್ರಿಲ್ನಂತೆ. ಆದರೂ ರಾಮಮೂರ್ತಿಗಾಗಿ ಅವನೊಡನೆ ಪಾಠ ಹೇಳಿಸಿಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ನಮ್ಮ ಅಭ್ಯಾಸ ಹೀಗೆ ಸಾಗುತ್ತಿರಲು ನಮ್ಮ ಕಾಲೇಜಿನ ಕೊನೇಯ ವಾರ್ಷಿಕೋತ್ಸವ ಕಾಲಿಟ್ಟಿತು. ಪ್ರತೀ ವರ್ಷ ವಿಧ್ಯಾರ್ಥಿನಿಲಯದ ಹುಡುಗರು ನಮ್ಮಿಬ್ಬರಿಂದ ಒಂದು ಕಾರ್ಯಕ್ರಮವನ್ನು ನಿರೀಕ್ಷಿಸುತ್ತಿದ್ದರು. ನಾವು ಮುಂದಿನವರ್ಷ ಎಂದು ತಳ್ಳಿ ಹಾಕಿ, ಕೊನೇಯ ವರ್ಷದಲ್ಲೂ ಏನು ಮಾಡಬೇಕೆಂದು ತೋಚದೆ ನಮ್ಮ ಹುಡುಗರ ಉತ್ಸಾಹಕ್ಕೆ ತಣ್ಣೀರೆರೆಚಿದೆವು.
ಕೊನೇಯ ಪರೀಕ್ಷೆಯನ್ನು ಮುಗಿಸಿ ಗುರುಗಳಿಗೆ ಕಾಣಿಕೆಯೊಪ್ಪಿಸಿ, ಮೃದಂಗವನ್ನು ಅವರ ಮಿತ್ರರಿಗೆ ಮರಳಿಸಿ ನಮ್ಮ ಅಭ್ಯಾಸಕ್ಕೆ ತಾತ್ಕಾಲಿಕ ಬಿಡುವು ಕೊಟ್ಟೆವು. ಮರಳುವಾಗ ಬಿಡುವಿನ ಸಮಯವನ್ನು ಮೃದಂಗ ಕಲಿಕೆಗೆ ಮೀಸಲಾಗಿಡಿ, ನೀವು ಚೆನ್ನಾಗಿಯೇ ಕಲಿಯುತ್ತಿದ್ದೀರಿ ಎಂದು ಗುರುಗಳು ಹರಸಿದರು. ಬೆಂಗಳೂರಿಗೆ ಬಂದು ಹೊಟ್ಟೇಪಾಡಿನ ಚಿಂತೆಯಲ್ಲಿ ಮೃದಂಗ ಕಲಿಕೆಯ ಯೋಚನೆ ನನ್ನಿಂದ ದೂರ ಉಳಿದು ಬಿಟ್ಟಿತು. ರಾಮಮೂರ್ತಿ ಮಾತ್ರ ಹೊಸ ಗುರುಗಳನ್ನು ಕಂಡು, ಹೊಸ ಮೃದಂಗ ಕೊಂಡು ಮತ್ತೆ ಅಭ್ಯಾಸ ಆರಂಭಿಸಿರುವುದಾಗಿ ಹಿಂದೊಮ್ಮೆ ಸಿಕ್ಕಾಗ ಹೇಳಿದ್ದ. ಆದಿ ತಾಳದಿಂದ ಆರಂಭವಾದ ನನ್ನ ಕಲಿಕೆ ಮಾತ್ರ ಆದಿಯಲ್ಲೇ ಕೊನೆಗೊಂಡಿತು.
nice experience!
ReplyDelete