Friday, November 07, 2008

ದೀಪಾವಳಿ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಇಂದು ದೀಪಾವಳಿಯಾದ್ದರಿಂದ, ಹಿಂದಿನ ರಾತ್ರಿಯಿಂದ ಮುಂಜಾನೆ ೪ ಗಂಟೆಯವರೆಗೂ ತಮ್ಮ ಆಪ್ತರ ಮನೆಯಾದ ಸೋಲಂಕಿಯವರ ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತಾ ನಿಂತಿದ್ದಳು. ಸುಕ್ಕು ಮುಖ, ನೆರೆತ ಉದ್ದನೆಯ ಕೂದಲು,ಇತಿಹಾಸದ ಕುರುಹೋ ಎಂಬಂತೆ ನಕ್ಕರೆ ಮಾತ್ರ ಕಾಣಿಸುವ ಮುಂದಿನ ಎರಡು ಹಲ್ಲುಗಳು, ಮಂದವಾದ ದೃಷ್ಟಿ, ಸುಮಾರು ೭೫ರ ಆಸುಪಾಸಿನ ಆಕೆಯನ್ನು ೪ ಗಂಟೆಯ ಜಾವಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಮನಸ್ಸು ಬಾರದಿದ್ದರೂ ಆಕೆಯ ಹಟಕ್ಕೆ ಸೋಲಂಕಿಯವರ ಮನೆಯಾಕೆ ಸೋಲಬೇಕಾಗಿತ್ತು.ವೃತ್ತಿಯಿಂದ ಹೂವಾಡಿಗಳಾದ ಆಕೆಗೆ,ದಿನ ನಿತ್ಯ ಒದಗಿಸುವ ಹೂವಲ್ಲದೆ, ಹಬ್ಬದ ದಿನವಾದ ಇಂದು ಇನ್ನೂ ಹೆಚ್ಚಿನ ಬೇಡಿಕೆ ಇದ್ದುದರಿಂದ ಸೋಲಂಕಿಯವರ ಮನೆಯಲ್ಲಿ ಉಳಿಯದೆ, ಬೆಳಿಗ್ಗೆ ಬೇಗ ಏಳುವ ಉದ್ದೇಶದಿಂದ ಮನೆಗೆ ಬಂದಿದ್ದಳು. ಜನರ ಚಟುವಟಿಕೆಯಿಲ್ಲದ ಬೀದಿಯಲ್ಲಿ ಒಬ್ಬಳೇ, ದಾರಿಯಲ್ಲಿ ಬಿದ್ದಿದ್ದ ಮಾಟ ಮಾಡಿಸಿದ ನಿಂಬೆ ಹಣ್ಣನ್ನು ತುಳಿಯದೆ ಎಚ್ಚರಿಕೆಯಿಂದ ಕಾಲಿಡುತ್ತಾ ತನ್ನ ಇಷ್ಟ ದೇವತೆಯಾದ ಹನುಮನ ಜಪ ಮಾಡುತ್ತಾ ಮನೆಗೆ ತೆರಳಿ ಆಗ ತಾನೆ ನಿದ್ರಿಸಿದ್ದಳು.ನಿದ್ರಾ ಹೀನತೆಯಿಂದ ಕೆಂಪಾದ ಕಣ್ಣುಗಳು ಬಳಲಿ ಉಬ್ಬಿದ್ದವು.ಬಿಳಿಯ ಮಾಸಲು ಬಣ್ಣದ ರವಿಕೆಯ ಮೇಲೆ ಅದೇ ಬಣ್ಣದ ಸೀರೆಯನ್ನು ಗುಜರಾತಿ ಹೆಂಗಸರು ಸೀರೆ ಉಡುವ ಮಾದರಿಯಲ್ಲಿ, ಸೆರಗನ್ನು ಬಲಗಡೆಯಿಂದ ಹೊದ್ದು, ಮನೆಯ ಕದವಿಕ್ಕಿ ಮಾರುಕಟ್ಟೆಯ ಕಡೆಗೆ ಸಾಗಿದಳು.



ದಿಯು ಗುಜರಾತಿನ ಸಮೀಪದ ಒಂದು ಪುಟ್ಟ ದ್ವೀಪ. ಭಾರತದ ಕೇಂದ್ರಾಡಳಿತಕ್ಕೆ ಒಳ ಪಡುವ ಮುಂಚೆ ಅಂದರೆ ೧೯೬೧ರ ವರೆಗೂ ಪೋರ್ಚುಗೀಸರ ವಸಾಹತಾಗಿದ್ದ ಇಲ್ಲಿನ ಜನ ಜೀವನದ ಮೇಲೆ ಅವರ ಪ್ರಭಾವ ಅಧಿಕ.ಮೇಲ್ನೋಟಕ್ಕೆ ಗುಜರಾತಿಗಳಂತೆ ಕಂಡು ಬಂದರೂ ಇವರ ಆಚರಣೆ, ಸಂಪ್ರದಾಯ, ಆಹಾರ ಪದ್ಧತಿ ಗುಜರಾತಿಗಳಿಗಿಂತ ಕೊಂಚ ಭಿನ್ನ. ಸುಮಾರು ೪೦,೦೦೦ದಷ್ಟು ಜನ ಸಂಖ್ಯೆಯಿರುವ ಈ ದ್ವೀಪದ ಜನರ ಉದ್ಯೋಗ ಅಲ್ಲಿನ ಜನರ ಜೀವನಾವಶ್ಯಕತೆಯಾದ ಶಿಕ್ಷಣ, ಚಿಲ್ಲರೆ ವ್ಯಾಪಾರದ ಮೇಲೆ ಅವಲಂಭಿಸಿದೆ. ಮೀನುಗಾರಿಕೆ, ವ್ಯವಸಾಯದಿಂದೊದಗುವ ನೆಲಗಡಲೆ, ಕಬ್ಬು, ಹತ್ತಿ, ಅಲ್ಲದೆ ಪ್ರವಾಸೋದ್ಯಮದಿಂದ ಬರುವ ಹಣ ಮಾತ್ರ ಇಲ್ಲಿಯ ಆದಾಯ. ನೆರೆಯ ಗುಜರಾತಿನಲ್ಲಿ ಮದ್ಯಪಾನ ನಿಷಿದ್ಧವಾದ್ದರಿಂದ ಜನರು ಮೋಜಿಗಾಗಿ ಬಿಡುವಿನ ವೇಳೆಯಲ್ಲಿ ಇಲ್ಲಿ ಸಮಯ ಕಳೆಯುವುದುಂಟು. ಅಲ್ಲದೆ ಐತಿಹಾಸಿಕ ಪ್ರಾಮುಖ್ಯತೆ ಪಡೆದ ಇಲ್ಲಿಯ ಕೋಟೆಗಳನ್ನು, ಚರ್ಚ್, ಮ್ಯೂಸಿಯಂ, ನಿಸರ್ಗ ನಿರ್ಮಿತ ಗುಹೆಗಳನ್ನು, ಬಂಡೆಗಳಿಂದ ಅಲಂಕೃತವಾದ ಸಮುದ್ರ ತೀರವನ್ನು ನೋಡಲು ಜನರು ದೇಶದ ವಿವಿಧೆಡೆಗಳಿಂದಲೂ ಬರುವುದುಂಟು. ಕೇವಲ ಪದವಿ ಪೂರ್ವ ಶಿಕ್ಷಣಕ್ಕೆ ಇಲ್ಲಿಯ ವಿದ್ಯಾಭ್ಯಾಸ ಸೀಮಿತವಾದ್ದರಿಂದ ಅನುಕೂಲವಂತರು ತಮ್ಮ ಮಕ್ಕಳನ್ನು ಮುಂದಿನ ವ್ಯಾಸಂಗಕ್ಕಾಗಿ ನೆರೆ ರಾಜ್ಯವಾದ ಗುಜರಾತಿಗೋ,ಮಹಾರಾಷ್ಟ್ರಕ್ಕೋ, ಗೋವೆಗೋ ಕಳುಹಿಸುವುದು ರೂಢಿ. ಅಲ್ಲಿ ಕಲಿತು ತಮ್ಮ ಸೇವೆಯನ್ನು ದೇಶದ ಇತರ ರಾಜ್ಯಗಳಲ್ಲಿ , ವಿದೇಶಗಳಲ್ಲಿ ಸಲ್ಲಿಸುತ್ತಿರುವ ಇವರು ಊರಿನ ಮುಖ ನೋಡುವುದು ಮದುವೆಗೋ ಇಲ್ಲವೇ ಇತರ ಹಬ್ಬ ಹರಿದಿನಗಳಂದು. ಹಿರಿಯ ತಲೆಮಾರಿನವರು ಪೋರ್ಚುಗೀಸರ ಪ್ರಜೆಗಳಾದ್ದರಿಂದ ಇವರಿಗೆ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದ್ದರಿಂದ ಕಲಿಯದ ಜನರೂ ಕೂಡ ಪೋರ್ಚುಗೀಸ್ ಪಾಸ್ ಪೋರ್ಟ್ ದೊರಕಿಸಿಕೊಂಡು, ವಿದೇಶದಲ್ಲಿ ಅದರಲ್ಲಿಯೂ ಮುಖ್ಯವಾಗಿ ಇಂಗ್ಲೆಂಡಿನಲ್ಲಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿರುವುದು ಸಾಮಾನ್ಯ.



ಪೋರ್ಚುಗೀಸರ ರಾಜ್ಯಾಡಳಿತದಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಕಾಂತಾ ಮದುವೆಯಾದದ್ದು ಹೂವು ಮಾರಿ ಜೀವನ ಸಾಗಿಸುವುದು ಕುಲಕಸುಬಾದ ತನ್ನ ಅಂತಸ್ತಿನ ಯುವಕನೊಬ್ಬನನ್ನು. ಮದುವೆಯಾಗಿ ಚೊಚ್ಚಲ ಗಂಡುಮಗುವನ್ನು ಹೆತ್ತು, ತಮ್ಮ ಬಾಳ ಬೆಳಗಿಸಿದ ಮಗುವಿಗೆ ರೋಶನ್ ಎಂದು ನಾಮಕರಣ ಮಾಡಿ, ತೃಪ್ತ ಜೀವನ ನಡೆಸುತ್ತಿರಬೇಕಾದರೆ ಆಕೆಯ ಗಂಡ ಅದ್ಯಾವುದೋ ಕಾಯಿಲೆಗೆ ತುತ್ತಾಗಿ ತೀರಿಕೊಂಡ. ಗಂಡನ ಮನೆ, ತವರಿನ ಮನೆ ಎರಡು ಕಡೆಯಿಂದಲೂ ತಕ್ಕಷ್ಟು ಅನುಕೂಲವಿಲ್ಲವಾದ್ದರಿಂದ ಆಕೆ ತನ್ನ ಹಾಗು ೩ ವರ್ಷದ ತನ್ನ ಮಗುವಿನ ಜವಾಬ್ದಾರಿಯನ್ನು ತಾನೇ ಹೊರಬೇಕಾಯಿತು. ಚಿಕ್ಕಂದಿನಿಂದಲೂ ತಮ್ಮ ಮಕ್ಕಳೊಂದಿಗೆ ಆಡಿ ಬೆಳೆದಿದ್ದ ಹುಡುಗಿಯ ಪರಿಸ್ಥಿತಿಗೆ ನೊಂದು, ಸೋಲಂಕಿ ಮನೆತನದ ಹಿರಿಯರೊಬ್ಬರು ಇವಳ ಕಷ್ಟಕ್ಕೆ ನೆರವಾಗಿ ನಿಂತು, ಆಕೆಗೆ ಉಳಿದುಕೊಳ್ಳಲು ತಮ್ಮದೊಂದು ಹಳೇಯ ಮನೆಯನ್ನು ಒದಗಿಸಿಕೊಟ್ಟು,ಹೊಸ ಜೀವನದ ಆರಂಭಕ್ಕೆ ಅನುಕೂಲವಾಗಲೆಂದು ಸ್ವಲ್ಪ ಹಣವನ್ನೂ ಕೈಯಲ್ಲಿರಿಸಿ ಹರಸಿದರು. ತಮ್ಮ ಹಳೇಯ ಗಿರಾಕಿಗಳನ್ನೊಪ್ಪಿಸಿ ಗಂಡನ ಕುಲ ಕಸುಬಾದ ಹೂವಿನ ವ್ಯಾಪರವನ್ನು ಮತ್ತೆ ಕೈಗೆತ್ತಿಕೊಂಡಳು. ಬೆಳಿಗ್ಗೆ ಎದ್ದು, ಮಾರುಕಟ್ಟೆಗೆ ತೆರಳಿ ಹೂವು ಕೊಂಡು, ಅದನ್ನು ಪೋಣಿಸಿ, ಮೊದಲು ತನ್ನ ಇಷ್ಟದೇವರಾದ ಹನುಮನ ಗುಡಿಗೆ ಒಂದಿಷ್ಟು ಅರ್ಪಿಸಿ, ಉಳಿದದ್ದನ್ನು ತನ್ನ ಮಗುವನ್ನು ಹೊತ್ತು ಗಿರಾಕಿಗಳ ಮನೆಗೆ ತೆರಳಿ ಅವರ ಮನೆಗೆ ಒಪ್ಪಿಸುವುದು ಆಕೆಯ ನಿತ್ಯದ ಕಸುಬಾಯಿತು. ಮನೆಗೆ ಮರಳಿ ಉಪಹಾರ, ಭೋಜನ ಮುಗಿಸಿ ಸೋಲಂಕಿಯವರ ಋಣ ತೀರಿಸುವ ಸಲುವಾಗಿ ಅವರ ಮನೆಗೆ ಭೇಟಿ ಕೊಟ್ಟು, ಮನೆಯವರ ಚಿಲ್ಲರೆ ಕೆಲಸವನ್ನು ಮಾಡುತ್ತಿದ್ದಳು. ಮಗ ಬೆಳೆದು ಶಾಲೆಗೆ ಹೋಗುವ ಹಂತ ತಲುಪಿದ ಮೇಲೆ ಆತನನ್ನು ಊರಿನ ಸರ್ಕಾರಿ ಶಾಲೆಯಲ್ಲಿ ದಾಖಲಿಸಿದಳು. ದಿನ ಕಳೆದಂತೆ ಮಗನ ಅವಶ್ಯಕತೆ ಬೆಳೆದದ್ದರಿಂದ ಆಕೆ ಊರಿನ ಕೆಲವು ಇನ್ನಿತರ ಮನೆಯಲ್ಲಿಯೂ ಕೆಲಸ ಮಾಡಬೇಕಾಗಿ ಬಂತು.



ಬೆಳೆದಂತೆ ಮಗನಿಗೆ ತನ್ನ ಹಾಗೂ ತನ್ನ ಸುತ್ತಮುತ್ತಲಿನ ಜನರ ಅಂತಸ್ತಿನ ಅರಿವಾಗತೊಡಗಿತು. ಉತ್ತಮ ಪೋಷಾಕು, ಆಭರಣ ತೊಟ್ಟು ಅನುಕೂಲವಂತರ ಮಕ್ಕಳು, ಕ್ರಿಶ್ಚಿಯನ್ ಮಿಷನರಿ ನಡೆಸುತ್ತಿದ್ದ ಆಂಗ್ಲ ಮಾಧ್ಯಮದ ಶಾಲೆಗೆ ಹೋಗುತ್ತಿದ್ದರೆ ಈತ ಕಡಿಮೆ ಬೆಲೆಯ ಸರ್ಕಾರಿ ಶಾಲೆಗೆ ತೃಪ್ತಿ ಪಡಬೇಕಾಗಿತ್ತು. ಬಿಡುವಿನ ವೇಳೆಯಲ್ಲಿ ಅವನ ಒತ್ತಿನ ಹುಡುಗರು ತಮ್ಮ ಗೆಳತಿಯರೊಂದಿಗೆ ಕೋಟೆಯಲ್ಲಿ ಕುಳಿತು ಸರಸ ಸಲ್ಲಾಪ ಮಾಡುತ್ತಿದ್ದರೆ ಇವನು ಅಮ್ಮನೊಂದಿಗೆ ಹೂ ಮಾರುತ್ತಾ ಇತರರ ಮನೆಗಳಿಗೆ ಸಂಚರಿಸುತ್ತಿದ್ದನು. ಅವನ ಮನದಲ್ಲೂ ಕೂಡ ಇತರರಂತೆ ಗೆಳತಿಯರೊಂದಿಗೆ ಕುಳಿತು ಸಲ್ಲಾಪಿಸಬೇಕೆಂಬ ಆಸೆಯಿದ್ದರೂ ಕೂಡ ಅದಕ್ಕೆ ತಕ್ಕ ಅನುಕೂಲತೆಯಾಗಲಿ, ರೂಪವಾಗಲೀ ಆತನಲ್ಲಿ ಇರಲಿಲ್ಲ. ಓದಿನಲ್ಲಿ ಅಷ್ಟೇನೂ ಚುರುಕಿಲ್ಲದ ಹುಡುಗನಿಗೆ ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ ಓದಿನ ಮೇಲೆ ಬೇಸರ ಬಂದು ಶಾಲೆಗೆ ಇತಿಶ್ರೀ ಹಾಡಿದ. ಮುಂದೆ ಏನು ಎಂಬ ಚಿಂತೆಯಿಲ್ಲದೆ ಹೂ ಮಾರುವ ಕೆಲಸವದ ಜವಾಬ್ದಾರಿಯನ್ನು ಸಂಪೂರ್ಣವಹಿಸಿಕೊಂಡ. ಇತ್ತ ತಾಯಿಗೂ ಕೂಡ ಇದರಿಂದ ಅನುಕೂಲವಾದ್ದರಿಂದ ಆಕೆ ಮಗನ ನಡವಳಿಕೆಗೆ ಆಕ್ಷೇಪವೇನೂ ಎತ್ತಲಿಲ್ಲ. ಹೀಗೆ ಸುಮಾರು ಒಂದೆರಡು ವರ್ಷ ಅವರ ಬಾಳು ಅನುಕೂಲವಾಗಿರದಿದ್ದರೂ, ಒಬ್ಬರಿಗೊಬ್ಬರು ಆಸರೆಯಂತೆ ತಮ್ಮ ಕಷ್ಟ ಮರೆತು ತೃಪ್ತಿಯಿಂದಲೇ ಬಾಳ್ವೆ ನಡೆಸುತ್ತಿದ್ದರು.



ದಿಯು ಭಾರತದ ಪಾಲಾದ ಮೇಲೆ ಅಲ್ಲಿ ನೆಲೆಸಿದ್ದ ಪೋರ್ಚುಗೀಸರು ಒಬ್ಬೊಬ್ಬರಾಗಿ ತಮ್ಮ ದೇಶಕ್ಕೆ ಮರಳಲಾರಂಭಿಸಿದರು. ಅದುವರೆಗೂ ಅವರ ಜೊತೆಯಲ್ಲಿ ಕೆಲಸಕ್ಕಿದ್ದ ಸ್ಥಳೀಯ ಜನರು ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಯೋಚಿಸಲಾರಂಭಿಸಿದ್ದರು. ಪೋರ್ಚುಗೀಸರು ಮರಳುವಾಗ ನಿಷ್ಟರೆನಿಸಿದ ತಮ್ಮಕೆಲವು ಸೇವಕರನ್ನು ತಮ್ಮ ಖರ್ಚಿನಲ್ಲೇ ತಮ್ಮ ದೇಶಕ್ಕೆ ಕೊಂಡೊಯ್ದದ್ದರಿಂದ ಇತರರಲ್ಲಿಯೂ ವಿದೇಶದಲ್ಲಿ ದುಡಿಯುವ ಆಸೆ ಮೊಳೆಯತೊಡಗಿತು. ಹೀಗೆ ಒಬ್ಬೊಬ್ಬರಾಗಿ ಪೋರ್ಚುಗೀಸ್ ಪಾಸ್ ಪೋರ್ಟಿನ ಸಹಾಯದಿಂದ ಪೋರ್ಚುಗಲ್ಗೋ, ಇಂಗ್ಲೆಂಡೋ, ಆಫ್ರಿಕಾಕ್ಕೋ ತೆರಳಿ, ದಿಯುವಿನಲ್ಲಿ ಕೇವಲ ವೃದ್ಧರು ಬಿಟ್ಟರೆ ಮಕ್ಕಳು ಉಳಿಯುವಂತಾಯಿತು. ಊರಿನಲ್ಲಿ ಇಷ್ಟೆಲ್ಲಾ ಕಾರುಬಾರು ನಡೆಯುತ್ತಿರಬೇಕಾದರೆ ರೋಶನ್ ಕೂಡ ವಿದೇಶಕ್ಕೆ ಹೋಗುವ ಕನಸು ಕಾಣತೊಡಗಿದ್ದ. ಪೋರ್ಚುಗಲ್ ಬಾರದಿದ್ದರೂ, ತರಗತಿಯಲ್ಲಿ ಕಲಿತ ಅಲ್ಪ ಸ್ವಲ್ಪ ಇಂಗ್ಲೀಷಿನ ಸಹಾಯದಿಂದ ಇಂಗ್ಲೆಂಡಿಗೆ ಹೋಗಬಹುದೆಂಬ ಆಸೆ ಪ್ರಭಲವಾಗುತ್ತಾ ಬಂದಿತು. ತನ್ನ ಹಂಬಲವನ್ನು ತಾಯಿಯ ಮುಂದಿಟ್ಟರೆ ಆಕೆಯಿಂದ ಪ್ರೋತ್ಸಾಹವಾಗಲೀ, ನಿರಾಕರಣೆಯಾಗಲೀ ಕಂಡು ಬರಲಿಲ್ಲ. ಆಕೆಯ ಮೌನವನ್ನು ಸಮ್ಮತಿಯೆಂದು ಬಗೆದು ರೋಶನ್ ಸೋಲಂಕಿಯವರ ಮನೆಯವರಿಗೆ ತಿಳಿಸುವ ಸಲುವಾಗಿ ಅವರ ಮನೆಯತ್ತ ಪಾದ ಬೆಳೆಸಿದ. ತಮ್ಮ ಹಿತೈಷಿಯೂ ಅಲ್ಲದೆ ಅವನ ಈ ಪ್ರಯಾಣಕ್ಕೆ ಅವರ ನೆರವಿನ ಅಗತ್ಯವಿದ್ದುದರಿಂದ ಅವರ ಸಲಹೆ ಅವನಿಗೆ ಅಗತ್ಯವಿತ್ತು. ಮನೆಯ ಯಜಮಾನರಲ್ಲಿ ತನ್ನ ಹಂಬಲ ತಿಳಿಸಿದಾಗ, ಅವರು ಅವನ ವಿಚಾರವನ್ನು ಪ್ರೋತ್ಸಾಹಿಸಿದ್ದೂ ಅಲ್ಲದೆ, ಅವನಿಗೆ ಹಣವನ್ನು ಸಾಲವಾಗಿ ಕೊಡುವ ಭರವಸೆಯನ್ನೂ ಇತ್ತರು. ಸೋಲಂಕಿಯವರು ಇಂಗ್ಲೆಂಡಿನಲ್ಲಿ ತಮಗೆ ಪರಿಚಯವಿರುವವರನ್ನು ಸಂಪರ್ಕಿಸಿ, ಅಲ್ಲಿನ ಪ್ರಮುಖ ಹೋಟೆಲ್ ಒಂದರ ಪಾರಿಚಾರಕ ಕೆಲಸವನ್ನು ಇವನಿಗಾಗಿ ಕಾಯ್ದಿರಿಸಿದರು. ಮುಂಬೈನಲ್ಲಿ ಪಾಸ್ ಪೋರ್ಟ್ ಅರ್ಜಿ ಹಾಕಿ, ಒಂದು ತಿಂಗಳಲ್ಲೆಲ್ಲಾ ಅದು ಮಂಜೂರಾಗಿ, ಮುಂದಿನ ತಿಂಗಳಲ್ಲಿ ಇಂಗ್ಲೆಂಡಿಗೆ ತೆರಳುವ ನಿರ್ಧಾರ ಕೈಗೊಂಡ.



ಕಾಂತಾಳಿಗೆ ಮಗನ ನಿರ್ಗಮನ ಸಂತೋಷ ತರುವಂತದ್ದಲ್ಲವಾದರೂ, ಅವನ ಭವಿಷ್ಯಕ್ಕೆ ತಣ್ಣೀರೆರಚಬಾರದೆಂದು ಮೌನವಹಿಸಿದ್ದಳು. ತಮ್ಮ ಹಿತೈಷಿಗಳ ಅಭಿಪ್ರಾಯದಿಂದ ಮನಸ್ಸು ನಿರಮ್ಮಳವಾದರೂ ಮುಂದೊದಗಬಹುದಾದ ಒಂಟಿತನವನ್ನು ನೆನೆದು ದುಃಖದಿಂದಲೇ ಮಗನನ್ನು ಬೀಳ್ಕೊಟ್ಟಿದ್ದಳು. ಮಗನ ನಿರ್ಗಮನದಿಂದ ಆಕೆಯ ದೈನಂದಿನ ಆವಶ್ಯಕತೆ ಕಡಿಮೆಯಾದ್ದರಿಂದ, ದೈಹಿಕ ಅನಾನುಕೂಲತೆಯಿಂದ ಮಾಡುವ ಕೆಲಸ ಕಡಿಮೆ ಮಾಡಿಕೊಂಡಿದ್ದರೂ, ಹೂವು ಮಾರುವ ಕೆಲಸ ಹಾಗೂ ಸೋಲಂಕಿಯವರ ಮನೆಯಲ್ಲಿ ದುಡಿಯುವುದನ್ನು ಬಿಡಲಿಲ್ಲ. ಯಜಮಾನರ ಮನೆಯಲ್ಲಿ ದೊರೆಯುವ ಹೆಂಗಸರ ಸಹವಾಸ,ಅಲ್ಲಿಯ ಮಕ್ಕಳ ಚಾಕರಿ ಆಕೆಯ ಒಂಟಿ ಜೀವನಕ್ಕೆ ಆವಶ್ಯವಾಗಿದ್ದಿತು.



ರೋಶನ್ ದಿಯುವನ್ನು ಬಿಟ್ಟು ಸುಮಾರು ಎರಡು ವರ್ಷಗಳಾಗಿತ್ತು. ಮೊದಲೆರಡು ವರ್ಷಗಳಲ್ಲಿ ಕಷ್ಟಪಟ್ಟು ಸಾಲ ತೀರಿಸಿ, ತಾಯಿಗಾಗಿ ಪ್ರತೀ ತಿಂಗಳೂ ಒಂದಿಷ್ಟು ಹಣ ಹಾಗೂ ಯೋಗಕ್ಷೇಮದ ಬಗ್ಗೆ ನಾಲ್ಕು ಸಾಲಿನ ಪತ್ರವನ್ನು ಕಳುಹಿಸುತ್ತಿದ್ದ. ಕಾಂತಾಳಿಗೆ ಹಣದ ಆವಶ್ಯಕತೆ ಇರದಿದ್ದುದರಿಂದ ಮಗನ ಹಣವನ್ನು ಮುಂದೆ ಬೇಕಾಗಬಹುದೆಂಬ ಉದ್ದೇಶದಿಂದ ಕೂಡಿಡುತ್ತಿದ್ದಳು. ಸ್ವೇಚ್ಛೆಯ ಪರಿಸರ, ಕೈಯಲ್ಲಿ ಕಾಸು ರೋಶನ್ ಮನದಲ್ಲಿದ್ದ ಅಭಾವ ವೈರಾಗ್ಯವನ್ನು ತೊಲಗಿಸಿತು. ಹಿಂದೆ ತನಗೆ ಅಲಭ್ಯವಾಗಿದ್ದ ಕುಡಿತ, ಹುಡುಗಿಯರ ಸಹವಾಸ ಆತನಿಗೆ ಇಲ್ಲಿ ಅನಾಯಾಸವಾಗಿ ಲಭಿಸುತ್ತಿತ್ತು. ದಿನ ಕಳೆದಂತೆ ಅವನ ಆವಶ್ಯಕತೆ, ಸ್ವೇಚ್ಛೆ ಹೆಚ್ಚಿ, ಕೊಟಡಿ ಶುಚಿಗೊಳಿಸುವಾಗ ಪುಡಿಗಾಸನ್ನೂ, ಹೋಟೆಲಿನಲ್ಲಿ ಮದ್ಯವನ್ನೂ ಕದಿಯುವ ಹವ್ಯಾಸ ಬೆಳೆಸಿಕೊಂಡ. ಇವನ ನಡವಳಿಕೆಗೆ ಬೇಸತ್ತು ಅಲ್ಲಿನ ಮೇಲಧಿಕಾರಿಗಳು ಆತನನ್ನು ಕೆಲಸದಿಂದ ಬಿಡಿಸಿದರು. ಮುಂದೆ ತನ್ನ ಒಬ್ಬ ಮಿತ್ರರ ಸಹಾಯದಿಂದ ವಿಮಾನ ನಿಲ್ದಾಣವನ್ನು ಶುಚಿಗೊಳಿಸುವ ಕೆಲಸಕ್ಕೆ ಸೇರಿಕೊಂಡ. ಭಾರತದ ಕೆಲಸಗಾರರು ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದುದರಿಂದ, ಕೆಲಸ ದೊರಕಿಸಿಕೊಳ್ಳುವುದು ಈತನಿಗೆ ಕಷ್ಟವಾಗಲಿಲ್ಲ. ಮಗನ ನಡವಳಿಕೆಯನ್ನು ಊರಿನ ಜನರ ಬಂಧು ಮಿತ್ರರ ನೆರವಿನಿಂದ ಅರಿತ ಕಾಂತಾ ಬೆನ್, ಮನನೊಂದು ಮಗನನ್ನು ಸರಿಯಾದ ದಾರಿಗೆ ತರಲು ಆತನಿಗೆ ಮದುವೆಯ ಆವಶ್ಯಕತೆಯನ್ನು ನೆನೆದು, ಅವರಿವರನ್ನು ಕಾಡಿ ತನ್ನ ಮಗನಿಗೆ ವಧುವನ್ನು ನಿಷ್ಚಯ ಮಾಡಿದಳು. ಮಗನಿಗೆ ಕಾಗದವನ್ನು ಬರೆಯಿಸಿ, ಮುಂದಿನ ದೀಪಾವಳಿಗೆ ಊರಿಗೆ ಬರಬೇಕೆಂದೂ, ತಾನು ಆತನಿಗಾಗಿ ಹುಡುಗಿಯನ್ನು ಗೊತ್ತುಮಾಡಿರುವುದಾಗಿಯೂ ಪತ್ರ ಬರೆಸಿದಳು. ಆತನಿಗೂ ತನ್ನವರು ಒಬ್ಬರು ಬೇಕೆನಿಸಿದ್ದರಿಂದ, ತಾಯಿಯ ಮಾತಿಗೆ ಸಮ್ಮತಿಯಿತ್ತು ಮರುಪತ್ರ ಬರೆದು ಮುಂದಿನ ದೀಪಾವಳಿಗೆ ಊರಿಗೆ ಬರುವುದಾಗಿ ತಿಳಿಸಿದ.



ಮಗನ ಆಗಮನದಿಂದ ಕಾಂತಾಳ ಜೀವನದಲ್ಲಿ ಹೊಸ ಹುರುಪು ಹುಟ್ಟಿತ್ತು. ಮದುವೆ ದೀಪಾವಳಿಗೆ ೧೫ದಿನ ಮುಂಚಿತವಾಗಿ ಗೊತ್ತುಮಾಡಿದ್ದರು. ಸೋಲಂಕಿಯವರ ಅಪ್ಪಣೆ ಪಡೆದು ಮನೆಗೆ ಸುಣ್ಣ, ಬಣ್ಣ ಬಳಿದು ಅಂದಗೊಳಿಸಿದರು. ಆಭರಣಗಳು ಕಾಂತಾಳದ್ದೇ ಇದ್ದುವಾದ್ದರಿಂದ ಬಟ್ಟೆ ಬರೆ, ಉಡುಗೊರೆಗಳನ್ನು ಕೊಂಡು ಮದುವೆಯನ್ನು ಅದ್ಧೂರಿಯಲ್ಲದಿದ್ದರೂ ಸಾಂಗವಾಗಿ ನೆರವೇರಿಸಿದರು. ಮುಂದಿನ ಕೆಲವು ದಿನಗಳಲ್ಲಿ ನವ ದಂಪತಿಗಳು ತಮ್ಮ ಪರಿಚಿತರ ಮನೆಗೆ ತೆರಳಿ, ಉಡುಗೊರೆ, ಹಿರಿಯರ ಆಶೀರ್ವಾದ ಪಡೆಯುವುದರಲ್ಲಿ ಕಳೆದರು. ದೀಪಾವಳಿಯ ಹಿಂದಿನ ರಾತ್ರಿ ಅತ್ತೆ, ಸೊಸೆ ಸೇರಿ ವಿವಿಧ ಭಕ್ಷ್ಯಗಳನ್ನು ತಯಾರಿಸಿದರು. ಮೊದಲ ದಿನ ಆಭರಣದ ಅಂಗಡಿಗೆ ತೆರಳಿ ಶಾಸ್ತ್ರಕ್ಕೆ ಹೊಸ ಆಭರಣ ಕೊಂಡು, ಸಂಪತ್ತಿನ ಅಧಿ ದೇವತೆಯಾದ ಲಕ್ಷಿಗೆ ಪೂಜೆ ಸಲ್ಲಿಸಿದರು. ಮನೆಯ ಮುಂದೆ ರಂಗೋಲಿಯ ಚಿತ್ತಾರಗಳನ್ನು ಬಿಡಿಸಿ, ಬಣ್ಣ ತುಂಬಿ, ಮುಸ್ಸಂಜೆಯಾಗುತ್ತಿದಂತೆಯೆ ಹಣತಿಗೆಯ ದೀಪದಿಂದ ಮನೆಯನ್ನೆಲ್ಲಾ ಅಲಂಕರಿಸಿದರು. ಎರಡನೆಯ ದಿನದಂದು, ಹೆಂಗಸರು ತಲೆ ಸ್ನಾನ ಮುಗಿಸಿ ಊರ ಮುಂಬಾಗಿಲಿನಲ್ಲಿರುವ ಹನುಮಂತನ ಗುಡಿಗೆ ತೆರಳಿದರು. ಹನುಮಂತನಿಗೆ ಹಣ್ಣು, ಕಾಯಿ, ನೈವೇದ್ಯ ಅರ್ಪಿಸಿ, ಮನೆಯಿಂದ ತಂದಿದ್ದ ಚೂರಿಯನ್ನು ದೀಪಕ್ಕೆ ಹಿಡಿದು ಮಸಿ ಸಂಗ್ರಹಿಸಿ, ಕೆಟ್ಟ ದೃಷ್ಟಿಯಿಂದ ರಕ್ಷಣೆಗಾಗಿ ಅದನ್ನುಕಾಡಿಗೆಯಂತೆ ಕಣ್ಣಿಗೆ ಲೇಪಿಸಿಕೊಂಡರು. ಮೂರನೇ ದಿನದಂದು ಗಣೇಶನ ಹಾಗೂ ಲಕ್ಶ್ಮಿಯ ಪೂಜೆ ನೆರವೇರಿಸಿದರು. ನಾಲ್ಕನೆಯ ದಿನ ಗುಜರಾತಿಗಳಿಗೆ ಹೊಸವರ್ಷವಾದ್ದರಿಂದ ಹೊಸ ಉಡುಪು, ಆಭರಣಗಳನ್ನು ಧರಿಸಿ ಬಂಧು ಬಾಂಧವರೊಂಡಗೂಡಿ ಉಡುಗೊರೆಯನ್ನು ಹಂಚಿಕೊಂಡರು. ಕೊನೇಯ ದಿನ ನವ ವಧು ಪತಿಯೊಡನೆ ತವರಿಗೆ ತೆರಳಿ, ತನ್ನ ಸಹೋದರರಿಗೆ ಆರತಿ ಬೆಳಗಿ, ತಿಲಕವಿಟ್ಟು, ಅವರ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ತಿಸಿ, ಊಡುಗೊರೆಗಳೊಂದಿಗೆ ತಿರುಗಿ ಮನೆ ಸೇರಿದರು. ತನ್ನವರ ಒಡನಾಟದಲ್ಲಿ ಕಾಂತಾಳಿಗೆ ದಿನಗಳು ಉರುಳಿದ್ದರ ಪರಿವೆಯೇ ಆಗಲಿಲ್ಲ, ತನ್ನ ಮದುವೆಯ ಕಾಲದಲ್ಲೂ ಸಂಭ್ರಮಿಸದಂತಹ ದೀಪಾವಳಿ ಅವಳ ಪಾಲಿಗೆ ಇದಾಗಿತ್ತು.ತನ್ನ ಹೊಸ ಸಂಗಾತಿಯೊಡನೆ ರೋಶನ್ ಮತ್ತೆ ಇಂಗ್ಲೆಂಡಿಗೆ ಹೊರಟು ನಿಂತ. ಭಾರವಾದ ಹೃದಯದಿಂದ ಕಾಂತಾ ಬೆನ್ ತನ್ನ ಮಗ, ಸೊಸೆಯನ್ನು ಬೀಳ್ಕೊಟ್ಟು ಮತ್ತೆ ತನ್ನ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಳು.



ಅದೇ ಆಕೆಯ ಮನದಲ್ಲುಳಿದ ಕೊನೇಯ ದೀಪಾವಳಿಯಾಗಿತ್ತು. ಅತ್ತ ಹಣದ ನೆಪವೊಡ್ಡಿ ಮಗ ಮತ್ತೆ ಊರಿಗೆ ಹಿಂದಿರುಗಲಿಲ್ಲ, ಇತ್ತ ಇಳಿ ವಯಸ್ಸಿನಲ್ಲಿ ಆಕೆಗೆ ಇಂಗ್ಲೆಂಡಿಗೆ ಹೋಗಬೇಕೆಂಬ ಹಂಬಲವೂ ಇರಲಿಲ್ಲ. ಪತ್ರದಿಂದ ಮೊಮ್ಮಗನ ಸುದ್ದಿ ಕೇಳಿ ತಿಳಿದು, ಹರಸಿ, ಆತನನ್ನು ಎಂದು ನೋಡುವೆನೋ ಎಂದು ಕಾತುರಳಾಗಿದ್ದಳು. ಎಂದಿನಂತೆ ಮಾರುಕಟ್ಟೆಯಲ್ಲಿ ಹೂವಿನ ಖರೀದಿಗೆ ತೊಡಗಿದ್ದ ಕಾಂತಾ, ತನ್ನ ಮೊಮ್ಮಗನ ವಯಸ್ಸನ್ನೆಣಿಸುತ್ತಿದ್ದಳು, ಆತನ ಮದುವೆಯ ನೆಪದಿಂದ ಲಭಿಸುವ ಕೊನೇಯ ದೀಪಾವಳಿಯನ್ನು ನೋಡುವ ಹಂಬಲದಿಂದ.

12 comments:

  1. ley ley ley its awesome pala.
    its really heart touching man....

    ReplyDelete
  2. ಪಾಲ,
    ಸುಂದರವಾದ ಕತೆ.

    ReplyDelete
  3. Thumba chennagide Pala. Sogasada kathe.

    ReplyDelete
  4. ನಿಮ್ಮ ಈ ಕಥೆಯನ್ನು ಓದಬೇಕೆಂದು ಬಲು ದಿನದಿಂದ ಎಣಿಸುತ್ತಿದ್ದೆ. ಕಾಲಾವಕಾಶ ಕೂಡಿರಲಿಲ್ಲ. ಇವತ್ತು ಕೂಡಿ ಬಂತು. ತುಂಬಾ ಸುಂದರವಾದ ನಿರೂಪಣೆಯಿಂದ ಕೂಡಿದೆ. ಕಥಾ ವಸ್ತು ಹಳೆತಾದರೂ ನವೀನತೆಯಿಂದ ಚಿತ್ರಿಸಿದ್ದೀರಿ. ಎಲ್ಲೂ ಅನಾವಶ್ಯಕವೆನಿಸುವಂತಹ ಪಾತ್ರವಾಗಲೀ ಸನ್ನಿವೇಶವಾಗಲೀ ಇಲ್ಲ. ಒಂದು ಪ್ರಾಂತ್ಯ ಯಾವರೀತಿ ಹೊರಗಿನ ಪ್ರಭಾವಕ್ಕೊಳಗಾಗಿ ಕೌಟುಂಬಿಕತೆಯನ್ನೇ ಕಳೆದುಕೊಂಡಿತು ಎನ್ನುವುದು ಕಥೆಯಲ್ಲಿ ಚೆನ್ನಾಗಿ ಮೂಡಿಬಂದಿದೆ.

    ಹೀಗೇ ಬರೆಯುತ್ತಿರಿ.

    ReplyDelete
  5. ನಿಮ್ಮ ಈ ಕಥೆ ಮನ ಮುಟ್ಟುವಂತಿದೆ.

    ಇಷ್ಟ ಆಯ್ತು.

    (ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ.)

    ReplyDelete
  6. ತುಂಬಾ ಚನ್ನಾಗಿದೆ... ನಿರೂಪಣಾ ಶೈಲಿ ಇಷ್ಟವಾಯಿತು...

    ReplyDelete
  7. ಸ್ವಂತ ಕಾಲ ಮೇಲೆ ನಿಂತುಕೊಳ್ಳುವವರೆಗೂ ಬೆಳೆಸಿ, ಪೋಷಿಸಿ ಸಲಹುವ ತಂದೆ-ತಾಯಿಯರನ್ನು ಕೊನೆಯ ಕಾಲದಲ್ಲಿ ಒಂಟಿಯಾಗಿ ಬಿಟ್ಟು ಹೋಗಿ ಬಿಡುವುದು ಎಷ್ಟು ಕ್ರೂರ ಎನಿಸುತ್ತದಲ್ಲವೇ? ಕ್ರೂರ ಮಾತ್ರವಲ್ಲ, ಕೃತಘ್ನತೆಯ ಪರಮಾವಧಿ..

    ಕಥೆ ಚೆನ್ನಾಗಿ ಮೂಡಿ ಬಂದಿದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

    ReplyDelete
  8. This comment has been removed by the author.

    ReplyDelete
  9. ಹರ್ಷ, ಜಯ್, ಬಾಲ, ಅಂಶು, ಬೃಂದಾ, ತೇಜಸ್ವಿನಿ, ಅನಿಲ್, ಮನಸ್ವಿ, ಹರೀಶ್

    ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  10. ಪಾಲಚಂದ್ರ ಅವರೆ,

    ನೀವು ನನ್ನ ಬ್ಲಾಗಿನಲ್ಲಿ ಅತ್ತಿಮರಕ್ಕೆ ಗೋಳಿ ಮರವೆನ್ನುತ್ತಾರೆ ಎಂದಿರುವಿರಿ. ಆದರೆ ಅತ್ತಿ ಮರವೇ ಬೇರೆ. ಗೋಳಿ ಮರವೇ ಬೇರೆ. ಯಾರನ್ನಾದರೂ ಮತ್ತೊಮ್ಮೆ ವಿಚಾರಿಸಿ ತಂಬುಳಿ ಮಾಡಿ.

    ಧನ್ಯವಾದಗಳು.

    ReplyDelete

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)