Wednesday, December 14, 2011

ಮಳೆನೀರು ಸಂಗ್ರಹಿಸಿದರೆ ವರ್ಷಪೂರ್ತಿ ನೀರು

ಮಳೆಗಾಲ ಕಳೆದಂತೆ ಆಸುಪಾಸಿನ ರೈತರು ಬೋಳುಗುಡ್ಡದ ಮೇಲಿನ ತೋಟಕ್ಕೆ ನೀರುಣಿಸಲು ಹರಸಾಹಸ ಪಟ್ಟರೆ, ಇವರು ತೋಟದ ಮಳೆ ಹೊಂಡದಲ್ಲಿ ಮೀನುಸಾಕಣೆ ಆರಂಭಿಸಿದ್ದಾರೆ. 

 ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಸುತ್ತಮುತ್ತ ಕಾಣಿಸುವುದು ಬೋಳು ಗುಡ್ಡ, ವಿಶಾಲವಾದ ಬಯಲು. ಆದರೆ ಡಾ|| ಸಂಜೀವ ಕುಲಕರ್ಣಿಯವರ ’ಸುಮನ ಸಂಗಮ’ ಹೊಕ್ಕಾಗ, ಬಯಲು ಸೀಮೆಯ ಈ ನೋಟಕ್ಕೆ ತೆರೆ. ಇವರ ತೋಟ ಸುತ್ತಾಡಿದರೆ, ಮಲೆನಾಡ ಕಾಡು ಹೊಕ್ಕ ಅನುಭವ. 1996ರಲ್ಲಿ 17 ಎಕರೆ ಜಾಗ ಕೊಂಡಾಗ ಪರಿಸ್ಥಿತಿ ಆಸುಪಾಸಿನ ನೋಟಕ್ಕಿಂತ ಭಿನ್ನವಾಗಿರಲಿಲ್ಲ. ಸಂಗಮ ಆಗಬೇಕು ಸುಮಂಗಳ, ಸು-ಮನಗಳ ಸಂಗಮ ಎಂಬ ಆಶಯದಲ್ಲಿ 15 ವರ್ಷಗಳ ಹಿಂದೆ ಕೈಗೊಂಡ ಪ್ರಯೋಗದ ಫಲ ಇದು.

 “ನಾವ್ ಇಲ್ಲಿಗ್ ಬಂದ್ ಮೊದಲ್ನಾಗ ಅಮಾಶಿ ದಿನ, ಹೆಣ್ಮಗು ಕೈಲಿ, 2 ಬೇವಿನ್ ಸಸಿ ನಡ್ಸಿದ್ವಿ. ಜನಾ ಅಮಾಶಿ ದಿನ ಬ್ಯಾಡ್ರಿ ಅಂದ್ರು. ಹೆಣ್ಮಗು ಕೈಲಿ ನಡಿಶ್ಬ್ಯಾಡ್ರಿ ಅಂದ್ರು. ಬೇವಿನ್ ಗಿಡ ಬ್ಯಾಡ, ಮಾವ್ ಹಾಕಿ ಅಂತಾನೂ ಅಂದ್ರು. ನಾ ಕೇಳಿಲ್ಲ”, ಬೇವಿನ ಸಸಿಗಳನ್ನು ತೋರಿಸಿತ್ತಾ ಅದರ ಹಿನ್ನೆಲೆಯನ್ನು ಕುಲಕರ್ಣಿಯವರು ವಿವರಿಸುತ್ತಿದ್ದರು. ಹೊಸತನ್ನು ಮಾಡಬೇಕೆಂಬ ಹಂಬಲ, ಪ್ರಯೋಗಶೀಲ ವ್ಯಕ್ತಿತ್ವ ಕುಲಕರ್ಣಿಯವರದ್ದು. ಈ ವ್ಯಕ್ತಿತ್ವವೇ ಬಯಲುಸೀಮೆಯ ಮಧ್ಯ ಮಲೆನಾಡ ಕಾಡು ತೋಟ ನಿರ್ಮಿಸುವ ಕಾರ್ಯಕ್ಕೆ ಸಹಾಯಕವಾಯ್ತು. ವೃತ್ತಿಯಲ್ಲಿ ಹೆರಿಗೆ ತಜ್ಞರಾದರೂ ಪರಿಸರವಾದಿ, ಸಮಾಜಮುಖೀ ಚಟುವಟಿಕೆಯಲ್ಲಿ ಆಸಕ್ತಿ.

  DSC00190_ ಸುಮನ ಸಂಗಮದಲ್ಲಿ ಸಂಜೀವ ಕುಲಕರ್ಣಿ

 ದಡ್ಡಿ ಕಮಲಾಪುರದಲ್ಲಿ ವಾರ್ಷಿಕ ಮಳೆ ಸುಮಾರು 30 ಇಂಚುಗಳಷ್ಟು. ಒಂದು ಇಂಚು ಮಳೆಯಿಂದ ಒಂದು ಎಕರೆ ಜಾಗದಲ್ಲಿ ಸಂಗ್ರಹವಾಗುವ ನೀರು ಸುಮಾರು 1,02,789 ಲೀಟರ್. ಅಂದರೆ 17 ಎಕರೆಯಲ್ಲಿ ವರ್ಷಕ್ಕೆ ಸುರಿವ ನೀರು ಐದುಕಾಲು ಕೋಟಿ ಲೀಟರ್! ಇಷ್ಟೊಂದು ನೀರು ಗುಡ್ಡದಂತಹ ಮೇಲ್ಮೈಯ ಇಳಿಜಾರಿನಿಂದ ಹರಿದು ಪೋಲಾಗದಂತೆ ತಪ್ಪಿಸುವ ಯೋಚನೆ ಕುಲಕರ್ಣಿಯವರದ್ದು. ಈ ಇಳಿಜಾರಿನಲ್ಲಿ ಕಾಂಟೂರ್ ಮಾದರಿಯಲ್ಲಿ 30 ಅಡಿಗಳ ಅಂತರದಲ್ಲಿ 2 ಅಡಿ ಆಳದ ಅಡ್ಡ ಸಾಲುಗಳನ್ನು ತೋಡಿಸಿದ್ದಾರೆ. ಇದೂ ಅಲ್ಲದೇ ಅಲ್ಲಲ್ಲಿ ಸುಮಾರು ಸಾವಿರದಷ್ಟು 1X1 ಅಡಿ ಅಳತೆಯ ಚಿಕ್ಕ ಚಿಕ್ಕ ಗುಂಡಿಗಳನ್ನು ತೋಡಿಸಿದ್ದಾರೆ. ಇವು ಮಳೆಯ ನೀರು ಒಂದೇ ಕಡೆ, ಒಮ್ಮೆಲೇ ಹರಿದು ಹೋಗುವುದನ್ನು ತಪ್ಪಿಸಿ ವಿವಿಧ ಹಂತಗಳಲ್ಲಿ ನೀರನ್ನು ಇಂಗಿಸುವ ಕೆಲಸ ಮಾಡುತ್ತದೆ. ಇಲ್ಲಿಂದ ಹೆಚ್ಚಾಗಿ ಹರಿಯುವ ನೀರನ್ನು ಸಂಗ್ರಹಿಸಲು ವಿವಿಧ ಹಂತಗಳಲ್ಲಿ 6 ಮಳೆ ಹೊಂಡ ರಚಿಸಿದ್ದಾರೆ. ಮಳೆ ಹೊಂಡದ ಬದುವಿನಲ್ಲಿ ಮಣ್ಣಿನ ಸವಕಳಿ ತಡೆಗಟ್ಟಲು ಲಾವಂಚದ ಸಸಿಗಳನ್ನು ಹಚ್ಚಿದ್ದಾರೆ.

DSC00192 ಮಳೆಹೊಂಡವನ್ನು ಆಸಕ್ತರು ವೀಕ್ಷಿಸುತ್ತಿರುವುದು

ಎತ್ತರದ ಪ್ರದೇಶದಲ್ಲಿ ನಾಟಿ ಮಾಡಲು ಇವರು ಆಯ್ದುಕೊಂಡಿದ್ದು ಕಾಡು ಸಸ್ಯಗಳನ್ನು. ತೇಗ, ಬಿದಿರು, ನೇರಳೆ, ಮತ್ತಿ, ಹೊನ್ನಿ, ದಾಲ್ಚಿನ್ನಿ, ರಂಗುಮಾಲ ಮೊದಲಾದ ಸ್ಥಳೀಯ ಕಾಡು ಮರಗಳಿಗೆ ನೀರಿನ ಅವಶ್ಯಕತೆ ಕಡಿಮೆ, ಆರೈಕೆಯ ಅಗತ್ಯವೂ ಇಲ್ಲ. ಆರಂಭದಲ್ಲಿ ಸುಮಾರು ಸಾವಿರದಷ್ಟು ಗಾಳಿ ಸಸಿಗಳನ್ನೂ ನಾಟಿ ಮಾಡಿಸಿದ್ದರು. ಸಸ್ಯ ಸಂಪನ್ಮೂಲ ಹೆಚ್ಚುತ್ತಾ ಹೋದಂತೆ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಕ್ಷಮತೆಯೂ ಹೆಚ್ಚುತ್ತಾ ಹೋಯಿತು. ಅಲ್ಲದೇ ಅವುಗಳ ಜೈವಿಕ ತ್ಯಾಜ್ಯದಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಿತು. “ನಮ್ ತೋಟದಾಗ 60 ರಿಂದ 70 ಜಾತೀ ಹಕ್ಕಿಗಳಿದಾವ, 20 ಜಾತಿ ಚಿಟ್ಟಿಗಳ್ನ ಗುರ್ತಿಸೀವಿ”, ಎನ್ನುವಾಗ ಕುಲಕರ್ಣಿಯವರ ಮುಖದಲ್ಲಿ ಸಹಬಾಳ್ವೆಯ ಸಂತೃಪ್ತಿ. ಒಮ್ಮೆ ಈ ಕಾಡಿನ ವಾತಾವರಣ ಸೃಷ್ಟಿಯಾದ ನಂತರ ಇನ್ನಷ್ಟು ಗಿಡಗಳು ಹುಟ್ಟಿಕೊಂಡಿದ್ದು ಹಕ್ಕಿ, ಗಾಳಿ, ನೀರಿನಿಂದಾದ ಬೀಜ ಪ್ರಸಾರದ ಮೂಲಕ. ಒಮ್ಮೆ ಬೇಸಿಗೆ ಕಾಲದಲ್ಲಿ ಪಕ್ಕದ ಬೋಳು ಗುಡ್ಡದಲ್ಲಿ ಹಬ್ಬಿದ್ದ ಕಾಳ್ಗಿಚ್ಚು ಕೆಲವು ಸಸಿಗಳನ್ನು ಬಲಿ ತೆಗೆದುಕೊಂಡಿತ್ತು. ಅಲ್ಲದೇ ಸ್ಥಳೀಯ ದನಕರುಗಳ ಹಾವಳಿ. ಆಗ ಇವರಿಗೆ ಅಗತ್ಯ ಕಾಣಿಸಿದ್ದು ರಕ್ಷಣೆಗೆ ಬೇಲಿ. 17 ಎಕರೆಯ ಸುತ್ತ ಬೇಲಿ ಹಾಕಿಸುವುದೆಂದರೆ ಖರ್ಚಿನ ವಿಷಯ, ಅಲ್ಲದೇ ಅದರ ನಿರ್ವಹಣೆಗೆ ಆಗಾಗ್ಗೆ ವೆಚ್ಚ ಮಾಡುತ್ತಿರಬೇಕು. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜೀವಂತ ಬೇಲಿಯ ನಿರ್ಮಾಣಕ್ಕೆ ಕೈಹಚ್ಚಿದರು. ದಾಸವಾಳ, ಗ್ಲಿರಿಸೀಡಿಯಾ, ನೀಲಗಿರಿ, ಹಲಸು, ಅಕೇಶಿಯಾ, ಹುಣಸೆ, ಬಿದಿರು, ಅಗಾವೆ (Agave) ಮೊದಲಾದ ಸಸಿಗಳನ್ನು ಆವರಣದ ಸುತ್ತ ನಾಟಿ ಮಾಡಿಸಿದರು. ಎರಡೇ ವರ್ಷಗಳಲ್ಲಿ ಇವು ಮನುಷ್ಯರೂ ನುಸುಳಲಾರದಷ್ಟು ದಟ್ಟವಾದ ಜೀವಂತ ಬೇಲಿಯಾಯಿತು. ಜೀವಂತ ಬೇಲಿ ಮಳೆಗಾಲದಲ್ಲಿ ನೀರಿನ ಓಟವನ್ನು ತಗ್ಗಿಸುವಲ್ಲಿಯೂ ಸಹಾಯಕವಾಯ್ತು. 

ನಂತರ ತಗ್ಗಿನ ಪ್ರದೇಶದಲ್ಲಿ ತೆಂಗು, ಮಾವು, ಚಿಕ್ಕು, ಪೇರಳೆ, ಗೇರು, ಲಿಂಬೆ, ಕೋಕಂ, ಕರಿಬೇವು, ಬಾಳೆ ಇನ್ನಿತರ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಿಸಿದರು. ತೋಟಗಾರಿಕಾ ಬೆಳೆಗಳಿಗಾಗಲೀ, ಕಾಡು ಸಸಿಗಳಿಗಾಗಲೀ ಪ್ರತ್ಯೇಕ ನೀರುಣಿಕೆ ಇಲ್ಲ, ಗೊಬ್ಬರದ ಗೊಡವೆಯೂ ಇಲ್ಲ. ಇವಲ್ಲದೇ ಭತ್ತ, ದ್ವಿದಳ ಧಾನ್ಯ, ತರಕಾರಿಗಳನ್ನೂ ಬೆಳೆಯುತ್ತಾರೆ. ಸಧ್ಯಕ್ಕೆ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಇವುಗಳನ್ನು, ಫುಕುವೋಕಾರ ಮಾದರಿಯ ’ಸಹಜ ಕೃಷಿ’ಯಲ್ಲಿ ಬೆಳೆಯುವುದು ಮುಂದಿನ ಆಲೋಚನೆ. ಇವುಗಳಿಗೆ ಕೊಳವೆ ಬಾವಿಯಿಂದ ಅಗತ್ಯವಾದಲ್ಲಿ ನೀರಿನ ಪೂರೈಕೆ. ಮಳೆಕಡಿಮೆಯಾದ ವರ್ಷವೂ ಇವುಗಳ ಆರೈಕೆಗೆ ನೀರಿನ ಕೊರತೆಯಿಲ್ಲ. ಸಾವಯವ ಉತ್ಪನ್ನವಾದ್ದರಿಂದ ಬೇಡಿಕೆಯೂ ಹೆಚ್ಚು. ಬಂದುಗಳು, ಸ್ನೇಹಿತರು ಸಾಮಾನ್ಯವಾಗಿ ನೇರವಾಗಿ ಖರೀದಿಸುವುದರಿಂದ ಮಾರುಕಟ್ಟೆಯ ಚಿಂತೆಯಿಲ್ಲ.

ಕೋಳಿ, ದನ, ಕುರಿಸಾಕಣೆಯಲ್ಲೂ ಕುಲಕರ್ಣಿಯವರು ತೊಡಗಿದ್ದಾರೆ. ಮಳೆಗಾಲದ ನಂತರ ಪಕ್ಕದ ರೈತರು ಕೊಳವೆ ಬಾವಿಗಳ ಮೂಲಕ ಒಣ ಭೂಮಿಯ ತೋಟಕ್ಕೆ ನೀರು ಹಾಯಿಸುವ ಪ್ರಯತ್ನದಲ್ಲಿದ್ದರೆ, ಇವರು ಇದರ ಗೊಡವೆಯಿಲ್ಲದೆಯೇ ಈಗ ಮೀನು ಸಾಕಣೆಗೂ ಮುಂದಾಗಿದ್ದಾರೆ. ತಾವು ನಿರ್ಮಿಸಿದ ಮಳೆ ಹೊಂಡವೊಂದನ್ನು ಇದಕ್ಕಾಗಿ ಆರಿಸಿಕೊಂಡಿದ್ದಾರೆ. ಮಳೆಯ ಹನಿಹನಿಯನ್ನೂ ಹಲವು ವರ್ಷಗಳಿಂದ ಭೂಮಿಗೆ ಕುಡಿಸಿದ್ದರೆ ಫಲ ಇದು.

No comments:

Post a Comment

ವರ್ಗ

Amomum (1) ficus krishnae (1) Gangtok (1) Nikon 40mm f/2.8 Micro (10) paris (1) Sikkim (8) snow (1) Yuksom (5) ಅನಿಮೇಟೆಡ್ (1) ಅನುಭವ ಕಥನ (7) ಅಮೂರ್ತ (1) ಆಟೋಟ (2) ಆಫಿಡ್ (1) ಇರುವೆ (6) ಉಡುಪಿ (4) ಉಯ್ಯಾಲೆ (1) ಉರಗ (3) ಏರಿ (1) ಒಂಟಿ ಚಕ್ರದ ಸೈಕಲ್ (1) ಒಯ್ಯುಗೆ (6) ಕದ (1) ಕಂದು ಏಲಕ್ಕಿ (1) ಕನ್ನಡ (2) ಕಪ್ಪು ಏಲಕ್ಕಿ (1) ಕಪ್ಪು-ಬಿಳುಪು (5) ಕಂಬಳ (1) ಕಂಬಳಿಹುಳು (2) ಕವನ (15) ಕವಿ ಶೈಲ (1) ಕಸರತ್ತು (1) ಕಳಸ (1) ಕಳ್ಳತನ (1) ಕಾವೇರಿ (1) ಕಾಳಾವಾರ ಬೆಟ್ಟ (1) ಕಾಳಿಂಗ ಸರ್ಪ (1) ಕಿಸ್ಕಾರ (1) ಕೀಟ ಪ್ರಪಂಚ (35) ಕುಂದಾಪುರ (1) ಕುವೆಂಪು (1) ಕೃಷಿ (9) ಕೃಷಿ ಮೇಳ (4) ಕೆರೆ (2) ಕೆಲಸ (2) ಕೆಸು (2) ಕೆಳದಿ (1) ಕೊಕ್ಕರೆ ಬೆಳ್ಳೂರು (1) ಕೋಟ (8) ಖಗೋಳ ಗಡಿಯಾರ (1) ಗವಿ (1) ಗುಡಿ ಕೈಗಾರಿಕೆ (1) ಗುಡ್ಡ (2) ಗುಹೆ (1) ಚಾರಣ (3) ಚಿಕ್ಕಮಗಳೂರು (1) ಚಿಟ್ಟಾಣಿ (1) ಚಿಟ್ಟೆಗಳು (3) ಚಿತ್ರ ಪುಟ (102) ಚಿತ್ರದುರ್ಗ (1) ಚಿತ್ರಪುಟ (1) ಚೌಕಾಶಿ (1) ಛಾಯಾಗ್ರಹಣ (24) ಜನ ಜೀವನ (52) ಜನಪದ (2) ಜರ್ಮನಿ (1) ಜಲಪಾತ (1) ಜೆಕ್ ಗಣರಾಜ್ಯ (4) ಜೇಡ (3) ಜೇನು ಸಾಕಣೆ (1) ಜೋಡಿ (1) ತರಕಾರಿ (2) ತುಮಕೂರು (2) ತೆಂಗಿನ ಕಾಯಿ (1) ತೆಂಗಿನ ತೋಟ (1) ದಸರ (4) ದೇವವೃಂದ (1) ದೇವಸ್ಠಾನ (1) ದೇವಸ್ಥಾನ (1) ದೊಡ್ಡ ಏಲಕ್ಕಿ (1) ಧಾರವಾಡ (1) ನಗರ (1) ನಂಬಿಕೆ (1) ನಾಟಕ (1) ನೀರ್ಹಕ್ಕಿ (6) ಪತಂಗ (1) ಪತ್ರಿಕೋದ್ಯಮ (1) ಪಶ್ಚಿಮ ಘಟ್ಟ (2) ಪಾರ್ಕ್ (1) ಪಾಳು (1) ಪುಸ್ತಕ ಬಿಡುಗಡೆ (1) ಪೋರ್ಟ್ರೈಟ್ (8) ಪ್ಯಾನಿಂಗ್ (1) ಪ್ರಬಂಧ (2) ಪ್ರವಾಸ ಕಥನ (3) ಪ್ರಾಹ (1) ಪ್ಲಾಸ್ಟಿಕ್ (1) ಬಕೇಟ್ (1) ಬಂಡಿ (1) ಬಣ್ಣ (1) ಬನವಾಸಿ (1) ಬಳ್ಳಿ (1) ಬಾಗಿಲು (1) ಬಾರ್ಕೂರು (1) ಬೀಗ (1) ಬೆಂಕಿ (1) ಬೆಂಗಳೂರಿನ ಚಿತ್ರಗಳು (5) ಬೆಂಗಳೂರು (27) ಬೆಳಕು (1) ಬೇಸಾಯ (1) ಬ್ರಹ್ಮಾವರ (1) ಭಾರತ ಬಂದ್ (1) ಭಿಕ್ಷುಕರು (1) ಮಕ್ಕಳು (10) ಮಗು (1) ಮಂಜು (2) ಮಮ್ಮಮ್ (3) ಮಲೆನಾಡು (1) ಮಳೆ (1) ಮಳೆಗಾಲ (2) ಮಾರಿಕಣಿವೆ (1) ಮುಸ್ಸಂಜೆ (1) ಮೇಲುಕೋಟೆ (2) ಮೇವು (1) ಮೈಸೂರು (7) ಮೋಡ (2) ಮ್ಯಾಕ್ರೋ (12) ಯಕ್ಷಗಾನ (2) ರಸ್ತೆ (5) ರಾತ್ರಿ ನೋಟ (3) ರೈಮ್ (1) ರೈಲು (2) ರೈಲುಹಳಿ (1) ಲಲಿತ ಪ್ರಬಂಧ (6) ಲೇಪಾಕ್ಷಿ (1) ವಂಡಾರ್ (1) ವಾಸ್ತು ಶಿಲ್ಪ (1) ವಾಹನ (2) ವಿವೇಕ (1) ವಿಸ್ತರಣೆ (1) ವ್ಯಕ್ತಿ ವಿಷಯ (3) ವ್ಯಾಪಾರ (1) ಶಾಲೆ (1) ಶಿರಸಿ (1) ಶಿರಸಿ. ಸೈಕಲ್ (1) ಶಿಲ್ಪ (1) ಶಿವನಸಮುದ್ರ (1) ಶುಭಾಶಯ (2) ಸಣ್ಣ ಕಥೆ (4) ಸಂತೆ (2) ಸಮುದ್ರ (2) ಸಮುದ್ರ ಜೀವಿ (2) ಸಸ್ಯ ಪ್ರಪಂಚ (12) ಸಾಕು ಪ್ರಾಣಿ (4) ಸಾಗಾಟ (1) ಸಾಸ್ತಾನ (1) ಸಿಕ್ಕಿಂ (3) ಸೈಕಲ್ (5) ಸೈಕಲ್ ಯಾತ್ರೆ (1) ಸ್ಕಂದಗಿರಿ (1) ಸ್ತೂಪ (1) ಸ್ಪರ್ಧೆ (1) ಹಕ್ಕಿಗಳು (21) ಹರಿಹರ (1) ಹಳ್ಳಿ (3) ಹಿಮ (1) ಹೂಗಳು (5) ಹೂವು (1) ಹೊಸ ವರ್ಷ (1) ಹೋಂ ಸ್ಟೇ (1) ಹೌರಾ (1)