ಬೇಸಿಗೆಯಲ್ಲಿ ನೀರು ಹನಿಸುವುದು ಬಿಟ್ಟು ಬೇರೆ ಆರೈಕೆಯಿಲ್ಲದ ತೆಂಗಿನ ತೋಟ.
“ಐದು ವರ್ಷದ ಹಿಂದೆ ೧೫ ದೇಸೀ ತಳಿಯ ನಿಂಬೆ ಗಿಡಗಳನ್ನು ನಾಟಿ ಮಾಡಿಸಿದ್ದೆ. ಕೊಟ್ಟಿಗೆ ಗೊಬ್ಬರ, ನೀರು, ಆರೈಕೆಯಲ್ಲಿ ಬೆಳೆದ ಗಿಡಗಳು ಸುಮಾರು ೨ ವರ್ಷ ಚೆನ್ನಾಗಿಯೇ ಫಸಲು ಕೊಟ್ಟಿತು. ಮುಂದಿನ ದಿನಗಳಲ್ಲಿ ಗಿಡಗಳು ಒಂದೊಂದಾಗಿ ಸೊರಗಲಾರಂಭಿಸಿದವು. ಇದೇ ಸಮಯದಲ್ಲಿ ಬೇಸಾಯ ಕಷ್ಟವೆಂದು ನನ್ನ ೬.೫ ಎಕರೆ ತೋಟವನ್ನು ಮಾರಲು ಹೊರಟಿದ್ದೆ. ಆದರೆ ಬೇಲಿಯ ಬದಿಯಲ್ಲಿದ್ದ ನಾನೇ ನಾಟಿ ಮಾಡಿ ಮರೆತಿದ್ದ ಗಿಡವೊಂದು ಕೃಷಿಯ ಬಗೆಗಿನ ನನ್ನ ನೋಟವನ್ನು ಬದಲಾಯಿಸಿದು. ಆರೈಕೆಯಲ್ಲಿ ಬೆಳೆಸಿದ್ದ ನಿಂಬೆ ಗಿಡಗಳು ಸೊರಗಿದ್ದರೆ ಬೇಲಿಯ ಬದಿ ನೆಟ್ಟು ಮರೆತಿದ್ದ ನಿಂಬೆಗಿಡ ಚೆನ್ನಾಗಿಯೇ ಬೆಳೆದಿತ್ತು ಅಲ್ಲದೇ ಫಸಲೂ ಚೆನ್ನಾಗಿಯೇ ಕೊಡಲಾರಂಭಿಸಿತ್ತು.” ರವಿಯವರು (೪೬) ಸಹಜ ಕೃಷಿಯತ್ತ ಒಲವು ತೋರಿಸಲು ಕಾರಣವಾದ ಘಟನೆಯನ್ನು ತಿಳಿಸಿದರು.
ಹೊಸ ಸದಸ್ಯನ ಸಂಭ್ರಮದಲ್ಲಿ ರವಿ
ಬೆಂಗಳೂರಿನಲ್ಲಿ ಸಿಮೆಂಟ್ ವ್ಯಾಪಾರಿಯಾಗಿದ್ದ ರವಿಯವರು ೨೫ ವರ್ಷಗಳ ಹಿಂದೆ ಎಕರೆಗೆ ೧೫,೦೦೦ ರೂಪಾಯಿಗಳಂತೆ ಈಗಿನ ಬೆಂಗಳೂರು-ಕನಕಪುರ ರಸ್ತೆಯಲ್ಲಿನ ಬೋಳಾರೆ ಎಂಬ ಹಳ್ಳಿಯಲ್ಲಿ ೬.೫ ಎಕರೆ ಜಮೀನು ಖರೀದಿಸಿದ್ದರು. ಕಲ್ಲು ಬಂಡೆಗಳಿದ್ದ ಜಾಗವನ್ನು ಹಸನುಗೊಳಿಸಿ, ಕೆಂಪು ಮಣ್ಣಿನ ಸುಮಾರು ೫ ಎಕರೆ ಜಾಗದಲ್ಲಿ ದೇಸೀ ತೆಂಗಿನ ಸಸಿಗಳನ್ನು ನಾಟಿ ಮಾಡಿಸಿದ್ದರು. ನೆರಳಿಗಾಗಿ ಅಲ್ಲಲ್ಲಿ ಮಾವು, ಹಲಸು, ತೇಗ, ಸಿಲ್ವರ್ ಓಕ್ ಮರಗಳನ್ನೂ ಹಾಕಿಸಿದ್ದಾರೆ. ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಿ, ತೋಡಿನ ಮೂಲಕ ಹಾಯಿಸುತ್ತಾರೆ. ಸುಮಾರು ೫ ವರ್ಷಗಳ ಹಿಂದಿನವರೆಗೂ ಉಳುವುದು, ಗೊಬ್ಬರ ಹಾಕಿಸುವುದು ಒಂದು ಸಮಸ್ಯೆಯಾಗಿರಲಿಲ್ಲ. ನಂತರದ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ತೋಟವನ್ನು ನಿಭಾಯಿಸುವುದು ಕಷ್ಟವಾಗುತ್ತಾ ಹೋಯಿತು.
ಒಂದು ಕಡೆಯಲ್ಲಿ ಸಿಮೆಂಟ್ ವ್ಯಾಪಾರ, ಇನ್ನೊಂದು ಕಡೆ ದೂರದ ಹಳ್ಳಿಯಲ್ಲಿನ ಕೃಷಿ ನಿಭಾಯಿಸುವುದು ಕಷ್ಟವಾಗಿ ತೋಟ ಮಾರುವ ನಿರ್ಧಾರ ಕೈಗೊಂಡರು. ಆದರೂ ಹಲವು ವರ್ಷಗಳ ತೋಟದೊಂದಿಗಿನ ಒಡನಾಟ ಹೊಸ ಪ್ರಯೋಗಕ್ಕೆ ಪ್ರೇರೇಪಿಸುತ್ತಿತ್ತು. ನಿಂಬೇ ಗಿಡದ ಘಟನೆಯಲ್ಲದೇ, “ರಸ್ತೆ ಬದಿಯ ಮರಗಳು, ಕಾಡಿನಲ್ಲಿ ಬೆಳೆವ ಮರಗಳು ಯಾವುದೇ ಪೋಷಣೆಯಿಲ್ಲದೇ ಬೆಳೆಯಬಹುದಾದರೆ ನನ್ನ ತೋಟದಲ್ಲಿ ಯಾವುದೇ ಪೋಷಣೆಯಿಲ್ಲದೇ ಮರಗಳು ಏಕೆ ಬೆಳೆಯಲಾರದು? ” ಎಂಬಂತಹ ವಿಚಾರ ಸರಣಿಯಿಂದಾಗಿ ತೋಟ ಮಾರುವ ಮೊದಲು ಸಹಜ ಕೃಷಿಯ ಪ್ರಯೋಗಕ್ಕೆ ಸಿದ್ಧರಾದರು.
ಮುಂದಿನ ವರ್ಷದಿಂದ ಉಳುವುದು ಗೊಬ್ಬರವುಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ತೋಟದಲ್ಲಿಯೇ ಸಿಗುವ ತೆಂಗಿನ ಸಿಪ್ಪೆ, ಗರಿಗಳು, ಹಸಿರು ಸೊಪ್ಪಿನಿಂದ ತೋಟದ ಮೇಲ್ಮಣ್ಣನ್ನು ಮುಚ್ಚತೊಡಗಿದರು. ತೋಟದಲ್ಲಿ ಕ್ರಮೇಣ ಗೆದ್ದಲಿನ ಚಟುವಟಿಕೆ ಹೆಚ್ಚಾಗತೊಡಗಿತು. ಒಣಗಿದ ಕಸ ಕಡ್ಡಿ ತಿಂದ ಗೆದ್ದಲು, ಮಣ್ಣಿನಲ್ಲಿ ಹುದುಗಿದ್ದ ಎರೆಹುಳು ಮಣ್ಣನ್ನು ಉತ್ತಂತೆಯೇ ಹದಗೊಳಿಸತೊಗಿತು. ಕೆಲವು ಕಡೆ ಮೀರಿ ಬೆಳೆದ ಕಳೆಗಳನ್ನು ಮಾತ್ರ ಸವರಬೇಕಾಗುತ್ತಿತ್ತು. ಮುಂದಿನ ವರ್ಷಗಳಲ್ಲಿ ಕಳೆಗಳ ನಿಯಂತ್ರಣಕ್ಕೆ ಆಡನ್ನು ಸಾಕಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ತಾವು ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ತೋಟದಲ್ಲಿ ಗುಡಿಸಲು ಕಟ್ಟಿಸಿ ಇಬ್ಬರು ಕೃಷಿ ಕಾರ್ಮಿಕರನ್ನು ಕರೆತಂದರು. ಅವರಿಗೆ ಸಾಕಷ್ಟು ಕೆಲಸ ಒದಗಿಸುವ ಸಲುವಾಗಿ ೫ ಆಡಿನ ಜೊತೆಗೆ ೨೦ ಕೋಳಿಗಳನ್ನೂ ಖರೀದಿಸಿದರು. ತೋಟದಲ್ಲಿ ಮಿತಿಮೀರಿ ಬೆಳೆಯುತ್ತಿರುವ ಗೆದ್ದಲು ಕೋಳಿಗಳಿಗೆ ಉತ್ತಮ ಆಹಾರ ಎಂಬುದು ಅವರ ಯೋಚನೆಯಾಗಿತ್ತು. ಗಿರಿರಾಜ, ಫೈಟರ್, ನಾಟಿ ಹೀಗೆ ಕೋಳಿಯ ಆಯ್ಕೆಯಲ್ಲೂ ವೈವಿಧ್ಯತೆ.
ಕೋಳಿಗಳಿಗೆ ಆಹಾರವಾಗಬಲ್ಲ ಗೆದ್ದಲು
“ಈ ಜಾತಿಯ ಆಡು ನೋಡಿ (ಜಾತಿ ಯಾವುದೆಂದು ತಿಳಿಯಲಿಲ್ಲ), ಒಂದು ವರ್ಷದಲ್ಲಿ ೪೦ ಕೆ.ಜಿ.ಯವರೆಗೆ ಬೆಳೆಯುತ್ತದೆ. ೧೦,೦೦೦ ರೂಪಾಯಿಯಂತೂ ಖಂಡಿತ. ಅಲ್ಲದೇ ಆಡು ಬಂದ ಮೇಲೆ ಕಳೆ ಕೀಳಿಸಿದ್ದೇ ಇಲ್ಲ. ತೋಟದಲ್ಲೆಲ್ಲಾ ಸುತ್ತಾಡಿ ಕಳೆ ತಿಂದು ಗೊಬ್ಬರ ಕೂಡ ಹಾಕತ್ತದೆ. ಕೋಳಿಗಳೂ ಅಷ್ಟೆ; ೨೦ ತಂದಿದ್ದು ಈಗ ೫೦ ಆಗಿದೆ. ಬೆಳೆದ ಕೋಳಿಗೆ ಇಲ್ಲಿಯೇ ೨೫೦-೩೦೦ ರೂಪಾಯಿ ಧಾರಣೆಯಿದೆ. ಅಲ್ಲದೇ ಮೊಟ್ಟೆಯೂ ಆದಾಯದ ಮೂಲ.”, ರವಿ ತಮ್ಮ ಉಪಕಸುಬಿನ ಪ್ರಯೋಜನವನ್ನು ತಿಳಿಸಿದರು. ಕಾರ್ಮಿಕರಿಗೆ, ಈ ಉಪಕಸುಬಿಗೆ (ತೋಟದ ಮೇವಿನ ಜೊತೆಗೆ ಅಲ್ಪ ಪ್ರಮಾಣದಲ್ಲಿ ಪಶು ಆಹಾರವನ್ನೂ ಕೊಡುತ್ತಾರೆ.) ತಿಂಗಳಿಗೆ ೬೦೦೦ ರೂಪಾಯಿಯವರೆಗೆ ವೆಚ್ಚ ಬರುತ್ತದೆ.ಈ ವೆಚ್ಚವನ್ನೆಲ್ಲಾ ಪಶುಸಂಗೋಪನೆಯೊಂದೇ ಭರಿಸಿ ಕುಟುಂಬದ ಆದಾಯದ ಹೆಚ್ಚಳಕ್ಕೂ ಕಾರಣವಾಗಿದೆ. ಮೊದಲಿನಿಂದಲೂ ಕೀಟನಾಶಕ ಪ್ರಯೋಗಿಸಿಲ್ಲ, ಇಲ್ಲಿಯ ಹಕ್ಕಿಗಳೇ ಕೀಟ ನಿಯಂತ್ರಣ ಮಾಡುತ್ತಿವೆ.
ಕಳೆ, ಕೀಟ ನಿಯಂತ್ರಿಸುತ್ತಿರುವ ಆಡು, ಕೋಳಿಗಳು
ಗೊಂಚಲು ಗೊಂಚಲಾಗಿ ಹಿಡಿದ ತೆಂಗಿನ ಕಾಯಿ
ತೆಂಗಿನ ಕಾಯಿ, ಹಲಸು, ನಿಂಬೆ, ಚಿಕ್ಕು, ಮಾವು ಸಿಲ್ವರ್ ಓಕ್ ಮರದ ಕಟ್ಟಿಗೆ, ಹಿಪ್ಪು ನೇರಳೆ ಋತುಮಾನಕ್ಕನುಗುಣವಾಗಿ ವರ್ಷ ಪೂರ್ತಿ ಆದಾಯ. ಉತ್ತಿಲ್ಲ, ಗೊಬ್ಬರವುಣಿಸಿಲ್ಲವಾದರೂ ಯಾವುದರಲ್ಲೂ ಫಸಲು ಕಡಿಮೆಯಾಗಿಲ್ಲ. ಇನ್ನೊಂದು ೧೦ ವರ್ಷ ಕಳೆದರೆ ದೀರ್ಘಾವಧಿ ಬೆಳೆಗಳಾದ ತೇಗದ ಮರಗಳೂ ಆದಾಯ ಕೊಡಬಹುದು. ೨ ವರ್ಷಗಳ ಹಿಂದೆ ಸಿಮೆಂಟ್ ವ್ಯಾಪರವನ್ನು ಬಿಟ್ಟ ರವಿಯವರ ೪ ಜನರ ಕುಟುಂಬಕ್ಕೆ ಈಗ ಕೃಷಿಯೇ ಆದಾಯದ ಮೂಲ. ಈ ವರ್ಷದಲ್ಲಿ ತೆಂಗಿನ ಮರಗಳ ನಡುವೆ ಬಾಳೆ, ಶುಂಠಿ, ನುಗ್ಗೆ ಬೆಳೆಸುವ ಪ್ರಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. “ಈ ಜಾಗ ಮಾರಿಬಂದ ಹಣವನ್ನು ಬ್ಯಾಂಕ್ನಲ್ಲಿರಿಸಿ ಅದರ ಬಡ್ಡಿಯಿಂದ ಬದುಕಬಹುದಾದರೂ, ಕೃಷಿ ಆದಾಯ, ಉದ್ಯೋಗ, ಬಿಡುವು, ನೆಮ್ಮದಿ ಎಲ್ಲವನ್ನೂ ನೀಡುತ್ತಿದೆ” ಎನ್ನುತ್ತಾರೆ ರವಿ.
Good, Hats off to Mr Ravi.
ReplyDeleteRavi avrige abhinandanegalu...
ReplyDeleteಭೂಮಿತಾಯಿಯನ್ನು ಮರೆತು ಪಟ್ಟಣದಲ್ಲಿ ಬೀಡುಬಿಟ್ಟಿರುವ ನಮ್ಮಂತವರಿಗೆ ಒಂದು ರೀತಿಯ ಗುಣಪಾಠವಿದ್ದಂತಿದೆ ರವಿಯವರ ಈ ಸಾಹಸ. ಇದನ್ನು ಲೇಖನ ರೂಪದಲ್ಲಿ ಒದಗಿಸಿರುವ ಪಾಲ ಅವರಿಗೆ ಧನ್ಯವಾದಗಳು.
ReplyDelete