ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ
ಬೆಂಗಳೂರಿನ ಸುಜಾತ ಹಂದೆಯವರ (50) ಮನೆಯ ಗೇಟ್ ತೆರೆದ ಕೂಡಲೇ ಸ್ವಾಗತಿಸುವುದು ಗಿಡಮರ ಬಳ್ಳಿಗಳು, ಚಿಟ್ಟೆ ದುಂಬಿ, ಹಕ್ಕಿಗಳು. ದಿನನಿತ್ಯದ ಪೂಜೆಗೆ, ಕೈತೋಟದ ಅಂದಕ್ಕೆ, ಔಷಧಕ್ಕೆ ೧೨ ಬಗೆಯ ದಾಸವಾಳ, ಮಲ್ಲಿಗೆ, ಚೆಂಡು ಹೂವು, ಪಾರಿಜಾತ, ಧವನ, ಪತ್ರಿ, ತುಳಸಿ, ಆಲೋವಿರ, ಕರವೀರ, ಮದರಂಗಿ, ಅಮೃತಬಳ್ಳಿ ಮೊದಲಾದ ಗಿಡಗಳು. ಅಲ್ಲದೆ ಒಂದೆಲಗ, ಕರಿಬೇವು, ಕೆಂಪು ಹರಿವೆ, ಬಿಳಿ ಹರಿವೆ, ಬಸಳೆ, ಟೊಮೇಟೊ, ಬದನೆ, ಹಾಗಲ, ಮಂಗಳೂರು ಸೌತೆ, ಬಾಳೆ, ಕರಿ ಕೆಸು, ಸುವರ್ಣ ಗಡ್ಡೆ, ನುಗ್ಗೆ, ಪೇರಳೆ, ದಾಳಿಂಬೆ, ಅರಶಿನ, ಮೊದಲಾದ ದಿನ ಬಳಕೆಗೆ ಉಪಯುಕ್ತವಾದ ತರಕಾರಿ ಹಣ್ಣುಗಳ ಗಿಡಮರಗಳು. ಮುನಿಯ, ಚೋರೆ ಹಕ್ಕಿ, ಗುಬ್ಬಿಗಳು, ಹೂವಿನ ಹಕ್ಕಿ, ಬುಲ್ ಬುಲ್ ಇವರ ಕೈತೋಟದ ಖಾಯಂ ಅತಿಥಿ.
ಬ್ಯಾಂಕ್ ನೌಕರರಾಗಿರುವ ಸುಜಾತರ ಪತಿ ವಸಂತ ಮಾಧವ ಹಂದೆ, ೭ ವರ್ಷಗಳ ಹಿಂದೆ ಬೆಂಗಳೂರಿನ ಜ್ಞಾನಭಾರತಿಯ ಸಮೀಪ ತಮ್ಮ ೬೦-೪೦ರ ನಿವೇಶನದಲ್ಲಿ ೮,೫೦೦ ಚದರ ಅಡಿಯಲ್ಲಿ ಮನೆ ಕಟ್ಟಿಸಿದ್ದರು. ಮನೆಯ ಎದುರುಗಡೆ ಉಳಿಸಿದ ಜಾಗವನ್ನೇ ಸುಜಾತರು ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ.
ಸುಜಾತ
"೧೯೭೮ ರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ತಂದೆ ೬ ಎಕರೆ ಹೊಲದಲ್ಲಿ ಹತ್ತಿ ನಾಟಿ ಮಾಡಿಸಿದ್ದರು. ಆ ವರ್ಷ ಮಳೆಯಿಲ್ಲ. ಧೃತಿಗೆಡದ ಅಮ್ಮ ನೀರನ್ನು ಹೊತ್ತು ಹೊಲಕ್ಕೆ ಉಣಿಸಿದ್ದಳು. ಮಕ್ಕಳಾದ ನಾವೂ ಅಕೆಗೆ ಸಹಾಯ ಮಾಡಿತ್ತು ", ಬೇಸಾಯದ ತಮ್ಮ ಹಿಂದಿನ ಅನುಭವ ನೆನಪಿಸಿಕೊಳ್ಳುತ್ತಾರೆ ಸುಜಾತರು. ೬೦೦೦ ರೂಪಾಯಿಗಳಷ್ಟು ಖರ್ಚು ಮಾಡಿಸಿ ಅಂದು ಬೆಳೆಸಿದ ಹತ್ತಿಗೆ ಸಿಕ್ಕ ಪ್ರತಿಫಲವು ಖರ್ಚು ಮಾಡಿದಷ್ಟೇ. ಇಂತಹ ಹಲವು ಅನುಭವಗಳ ಫಲವಾಗಿ ಅವರ ತಂದೆ ಬೇಸಾಯದ ಹಂಗಿಗೆ ಹೋಗದೆ ತಾವು ನಡೆಸುತ್ತಿದ್ದ ಹೋಟೆಲ್ನೆ ನೆಚ್ಚಿಕೊಂಡಿದ್ದರು. ಮದುವೆಯ ನಂತರ ಪತಿಯ ಬ್ಯಾಂಕ್ ಉದ್ಯೋಗದ ನಿಮಿತ್ತ ದೇಶದ ಹಲವು ಭಾಗಗಳಲ್ಲಿ ತಿರುಗಾಟ. ಮುಂದೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಯೂರಿದ ನಂತರ ಇದ್ದ ಅಲ್ಪ ಜಾಗದಲ್ಲೇ ನಿತ್ಯ ಪೂಜೆಗೆ ಬೇಕಾದ ಹೂವಿಗಾಗಿ ಆರಂಭವಾದ ಮಣ್ಣಿನ ನಂಟು ಇಂದು ತರಕಾರಿ ಬೆಳೆಸುವುದರವರೆಗೂ ಮುಂದುವರಿದಿದೆ.
"ಮೊದಲೆಲ್ಲ ಗಿಡ ಹೇಗೆ ಸಾಕಬೇಕೆಂಬ ಅರಿವಿರಲಿಲ್ಲ. ತೋಟದ ಕಸ, ಕಳೆಯನ್ನೆಲ್ಲ ಸಂಗ್ರಹಿಸಿ ಸುಡುಮಣ್ಣು ಮಾಡಿ ಗೊಬ್ಬರವಾಗಿ ಹಾಕುತ್ತಿದ್ದೆ", ಎಂದು ತಮ್ಮ ಹಿಂದಿನ ನೆನಪನ್ನು ಬಿಚ್ಚಿಡುವ ಸುಜಾತರು, ಗಿಡಗಳ ಆರೈಕೆಯ ಪ್ರಾಥಮಿಕ ಅರಿವು ಕೃಷಿ ಮೇಳವೊಂದರಲ್ಲಿ ಖರೀದಿಸಿದ, ಅನಸೂಯ ಶರ್ಮರ 'ಹಿತ್ತಿಲು'*** ಎಂಬ ಪುಸ್ತಕದಿಂದ ಲಭಿಸಿತು ಎನ್ನುತ್ತಾರೆ. ಸಂಜೆಯ ವಾಕಿಂಗ್ ಸಮಯದಲ್ಲಿ ಕೈಯಲ್ಲೊಂದು ಲಕೋಟೆ ಹಿಡಿದು ದಾರಿಯಲ್ಲಿ ಸಿಕ್ಕಿದ ದನದ ಸಗಣಿ ಅಸ್ಥೆಯಿಂದ ಸಂಗ್ರಹಿಸುತ್ತಾರೆ. ಮನೆಯಲ್ಲಿ ದಿನನಿತ್ಯ ಸಂಗ್ರಹವಾಗುವ ಜೈವಿಕ ತ್ಯಾಜ್ಯ, ತೋಟದ ಕಳೆ, ಸಂಗ್ರಹಿಸಿದ ಸಗಣಿಯನ್ನು ಒಂದು ಪ್ಲಾಸ್ಟಿಕ್ ಬಕೇಟಿನಲ್ಲಿ ಕೊಳೆಯಲು ಬಿಡುತ್ತಾರೆ. ಮಣ್ಣಿನ ಹುಳುಗಳನ್ನು ನಿಯಂತ್ರಿಸಲು ಒಮ್ಮೊಮ್ಮೆ ಬೇವಿನ ಎಲೆಗಳನ್ನು ಈ ಮಿಶ್ರಣದಲ್ಲಿ ಹಾಕುವುದುಂಟು. ಎರಡು ವಾರಗಳಲ್ಲಿ ತಯಾರಾಗುವ ಈ ಗೊಬ್ಬರವನ್ನು ಗಿಡದ ಬುಡಗಳಿಗೆ ಆಗಾಗ ಹಾಕುತ್ತಾರೆ. "ಈ ಬಸಳೆಯ ಎಲೆ ನೋಡಿ. ನನ್ನ ಅಂಗೈಯ ಎರಡರಷ್ಟಿದೆ", ತಮ್ಮ ಪ್ರಯೋಗದ ಫಲಿತಾಂಶವನ್ನು ಹೆಮ್ಮೆಯಿಂದಲೇ ತೋರಿಸುತ್ತಾರೆ.
ದೊಡ್ಡ ದೊಡ್ಡ ಎಲೆಯ ಬಸಳೆ ಸೊಪ್ಪಿನ ಗಿಡ
ಬಡಾವಣೆಗೆ ಬೆಂಗಳೂರಿನ ನಗರ ಪಾಲಿಕೆಯಿಂದ ಕೊಳವೆ ಬಾವಿಯ ನೀರಿನ ಪೂರೈಕೆ. ಇದೇ ನೀರನ್ನು ಕೈತೊಟಕ್ಕೆ ಪೈಪಿನ ಮೂಲಕ ಹಾಯಿಸುತ್ತಾರೆ. ಬೇಸಿಗೆಯಲ್ಲಿ ಒಮ್ಮೊಮ್ಮೆ ನೀರಿನ ಅಭಾವ ತೋರುವುದುಂಟು. ಆಗೆಲ್ಲ ಪಾತ್ರೆ ತೊಳೆದ ನೀರನ್ನು ಸಂಗ್ರಹಿಸಿ ಅದನ್ನೇ ಗಿಡಗಳಿಗೆ ಹಾಕುತ್ತಾರೆ.
"ಹಿಂದಿನ ವರ್ಷ ತೋಟದ ತುಂಬಾ ಕಂಬಳಿ ಹುಳುಗಳು, ಈ ವರ್ಷ ನಿಯಂತ್ರಣದಲ್ಲಿದೆ ", ಮುಂದುವರೆಸುತ್ತ ಸುಜಾತರು, ಹಿಂದೆಲ್ಲ ತೋಟದಲ್ಲಿ ಕೀಟಗಳ ಹಾವಳಿಯಿಂದ ಗಿಡ ಸೊರಗತೊಡಗಿದಾಗ, ಅನಿವಾರ್ಯತೆಯಿಲ್ಲದೆ ಅಂಗಡಿಯಿಂದ ರಾಸಾಯನಿಕ ಖರೀದಿಸಿ ಸಿಮ್ಪಡಿಸುತ್ತಿದ್ದೆ. ಹಿತ್ತಿಲು ಪುಸ್ತಕ ನನ್ನ ತೋಟ ವಿಷಮಯವಾಗುವುದನ್ನು ತಪ್ಪಿಸಿತು. ಕೈತೊಟದಲ್ಲೇ ಬೆಳೆಸಬಹುದಾದ ಚೆಂಡು ಹೂವು ಕೀಟ ವಿಕರ್ಷಕ ಅಷ್ಟೇ ಅಲ್ಲ, ಹೂವಿನ ಕಷಾಯ ಮಾಡಿ ಸಿಮ್ಪಡಿಸುವುದರಿಂದಲೂ ಕೀಟಗಳನ್ನು ಹತೋಟಿಯಲ್ಲಿಡಬಹುದು. ಬಿತ್ತನೆಯ ಸಮಯದಲ್ಲಿ ಬೀಜವನ್ನು ಇರುವೆಗಳಿಂದ ಕಾಪಾಡಲು ಮಡಿಯಲ್ಲಿ ಸುಡುಮಣ್ಣು ಹದವಾಗಿ ಹರಡುತ್ತಾರೆ.
ಸಾಮಾನ್ಯವಾಗಿ ಮನೆಗೆ ತರುವ ತರಕಾರಿಗಳಿಂದಲೇ ಗಿಡವನ್ನು ನಾಟಿ ಮಾಡುತ್ತಾರೆ. ಮೇಳಗಳಲ್ಲೂ ಸಂಗ್ರಹಿಸಿದ ಬೀಜವನ್ನು ಬಿತ್ತಿ, ಆ ಸಸಿಗಳ ಬೀಜವನ್ನು ಕಾಪಿಡುತ್ತಾರೆ. ಸಂಗ್ರಹಿಸಿದ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ಬಾಟಲಿಗಳಲ್ಲಿ ಮುಂದಿನ ಬಿತ್ತನೆಗೆ ಭದ್ರವಾಗಿರಿಸುತ್ತಾರೆ. ಆಸಕ್ತರಿಗೂ ಅಸ್ಥೆಯಿಂದ ಹಂಚುವುದುಂಟು. ಅಕ್ಕ ಪಕ್ಕದ ಮನೆಯಲ್ಲಿ, ತಾವು ಭೇಟಿ ಕೊಟ್ಟ ಊರಿನಲ್ಲಿ ಹೊಸ ಗಿಡ ಕಂಡರೆ ಅದನ್ನು ಸಂಗ್ರಹಿಸುವುದು ಇವರ ಹವ್ಯಾಸ.
ತಮ್ಮ ಕೈತೋಟದ ಕೆಲಸದಲ್ಲಿ - ಪ್ಲಾಸ್ಟಿಕ್ ಮುಚ್ಚಿದ್ದು ಸುಡುಮಣ್ಣು
ಇವರ ಈ ಹವ್ಯಾಸಕ್ಕೆ ಮನೆಯಲ್ಲಿಯೂ ಸಹಕಾರ ದೊರೆಯುತ್ತದೆ. ಭಾನುವಾರದಂದು ಅಡುಗೆ ಮನೆಯ ಕೆಲಸ ನಿರ್ವಹಿಸುವ ಪತಿಯಿಂದಾಗಿ ವಾರದಲ್ಲೊಮ್ಮೆ ತಮ್ಮ ತೋಟದ ಕಡೆ ಹೆಚ್ಚಿನ ಗಮನ ಹರಿಸಲು ಸಹಾಯಕವಾಗುತ್ತದೆ. ಮಗ ಶ್ರೀನಿವಾಸ ಕೂಡ ಬೇವಿನ ಸೊಪ್ಪು, ಸಗಣಿ ಸಂಗ್ರಹಿಸುವಲ್ಲಿ ನೆರವಿಗೆ ನಿಲ್ಲುತ್ತಾರೆ. ಮನೆಯ ಉಪಯೋಗಕ್ಕೆ ಬಳಸಿಯೂ ಉಳಿಯುವ ತರಕಾರಿಯನ್ನು ಅಕ್ಕ ಪಕ್ಕದ ಮನೆಯವರಿಗೂ, ಬಂಧುಗಳಿಗೂ ಹಂಚುತ್ತಾರೆ. "ನಾವೇ ಬೆಳೆಸಿದ ತರಕಾರಿಯ ರುಚಿ ಹೆಚ್ಚು, ವಿಷ ರಹಿತ" ಎನ್ನುವ ಸಮಾಧಾನ ಸುಜಾತರಿಗೆ. "ಮನೆಯ ಸುತ್ತ ವಿಶಾಲ ಆವರಣ, ಚೆನ್ನಾಗಿ ಸಂವಹಿಸುವ ಗಾಳಿ ಬೆಳಕು, ಬೆಳಗಾದೊಡನೆ ಮುದ ನೀಡುವ ಹಕ್ಕಿಗಳ ಚೀರಾಟ ಬೋನಸ್ ", ಎನ್ನುತ್ತಾರೆ ಪತಿ ವಸಂತರು. ಆಹಾರದ ಅಭಾವವೆಂದು ಜವಾಬ್ದಾರಿಯನ್ನೆಲ್ಲ ರೈತರ ತಲೆಗೆ ಹೊರಿಸುವುದರ ಬದಲು, ನಮ್ಮ ಕೈಲಾದಷ್ಟು ನಾವೇ ಬೆಳೆದುಕೊಳ್ಳುವುದು ಆರೋಗ್ಯದ ಹಿತದಿಂದಲೂ ಒಳ್ಳೆಯದು. ನೀರಿನ ಬವಣೆ ಎದುರಿಸುತ್ತಿರುವ ಬೆಂಗಳೂರಿನಂತಹ ನಗರದಲ್ಲಿ ಕಾಂಕ್ರೀಟಿನಿಂದ ಮುಕ್ತವಾದ ಈ ರೀತಿಯ ನೆಲ ಮಳೆ ನೀರು ಇಂಗಿಸಲೂ ದಾರಿಯಾದಂತಾಗುತ್ತದೆ.
***
ಪುಸ್ತಕ: ಹಿತ್ತಿಲು - ಕೈತೋಟಕ್ಕೊಂದು ಕೈಪಿಡಿ
ಲೇಖಕರು: ಅನುಸೂಯ ಶರ್ಮ
ಬೆಲೆ: ೧೦೦ ರೂಪಾಯಿ
ಪ್ರಕಾಶನ:
ಭೂಮಿ ಪ್ರಕಾಶನ
ನಂ.6/32, 'ಕಾಂಚನ ನಿಲಯ'2ನೇ ಡಿ ಮುಖ್ಯರಸ್ತೆ, 60 ಅಡಿ ರಸ್ತೆ
ಆರ್ಎಂವಿ 2ನೇ ಹಂತ, ಭೂಪಸಂದ್ರ
ಬೆಂಗಳೂರು 560 094
ದೂರವಾಣಿ: 080-23510533
ಕಿರು ಪರಿಚಯ:
ಹಿರಿಯ ಲೇಖಕಿ ಅನುಸೂಯ ಶರ್ಮ ತಮ್ಮ ಎರಡು ದಶಕಗಳ ಕೈತೋಟದ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕೈತೋಟದ ಕುರಿತ ಪ್ರಾಥಮಿಕ ಮಾಹಿತಿಯಿಂದ ಹಿಡಿದು ತರಕಾರಿ ಮೌಲ್ಯವರ್ಧನೆ, ರೋಗ-ಕೀಟ ಬಾಧೆ, ತರಕಾರಿ-ಹಣ್ಣು-ಸಂಬಾರ ಪದಾರ್ಥಗಳ ಮೌಲ್ಯವರ್ಧನೆ ಹೀಗೆ ಕೈತೋಟಕ್ಕೆ ಸಂಬಂಧಿಸಿದ ಹತ್ತಾರು ಮಾಹಿತಿ ಪುಸ್ತಕದಲ್ಲಿ ಅಡಕವಾಗಿದೆ.
ಒಳ್ಳೆಯ ಮಾಹಿತಿ ನೀಡಿದ್ದೀರಿ...ಸುಜಾತರನ್ನು ನೋಡಿ ಇನ್ನೂ ಅನೇಕ ಪಟ್ಟಣವಾಸಿಗಳು ಸ್ವಯಂಕೃಷಿ ಮಾಡಿದರೆ ಆರೋಗ್ಯ ಉತ್ತಮವಾದೀತು..ಜತೆಗೆ ಆಹಾರದ ಒತ್ತಡವೂ ಕೊಂಚ ಕಡಿಮೆಯಾದೀತು.
ReplyDeleteನಾನಂತೂ ಮನೆಯಲ್ಲಿ ತರಕಾರಿ ಬೆಳೆಯಲು ಮನಸು ಮಾಡಿದ್ದೇನೆ, ಇನ್ನು ಅನಸೂಯರ ಹಿತ್ತಿಲು ಪುಸ್ತಕ ಕೊಳ್ಳಲೇ ಬೇಕು..
Pala sir, informative
ReplyDelete